ಬೆಂಗಳೂರು: ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಗೋಡೆ ಕುಸಿದು ನಾಲ್ವರ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿಯ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ.
ಮನೋಜ್ ಕುಮಾರ್ ಸದಯ್ (35), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದೆಯ (22) ಮೃತಪಟ್ಟ ಕಾರ್ಮಿಕರಾಗಿದ್ದಾರೆ.
ಖಾಸಗಿ ಸಂಸ್ಥೆಯ ನಿರ್ಮಾಣ ಹಂತದ ಕಾಂಪೌಂಡ್ ಗೋಡೆ ಕಾರ್ಮಿಕರ ಶೆಡ್ ಮೇಲೆ ಕುಸಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ದುರ್ಘಟನೆ ನಡೆದ ಸಂದರ್ಭದಲ್ಲಿ ಒಟ್ಟು 8 ಜನ ಕಾರ್ಮಿಕರು ಶೆಡ್ನಲ್ಲಿದ್ದರು ಎನ್ನಲಾಗಿದ್ದು, ಮೃತರೆಲ್ಲರೂ ಉತ್ತರ ಭಾರತ ಮೂಲದವರು ಎನ್ನಲಾಗಿದೆ.
ಕಟ್ಟಡ ಕಾಮಗಾರಿ ಮಾಡಲು ಬಂದ ಕಾರ್ಮಿಕರು ಶೆಡ್ ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಶೆಡ್ ಮೇಲೆಯೇ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಘಟನೆ ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರು ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.