ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರದ ತ್ರಿವಳಿ ಕೃಷಿ ಶಾಸನಗಳಿಗೆ ಪೂರಕವಾಗಿ ರಾಜ್ಯ ಬಿಜೆಪಿ ಸರ್ಕಾರವು ತ್ರಿವಳಿ ಕೃಷಿ ಶಾಸನಗಳನ್ನು ರೂಪಿಸಿದೆ ಮಾತ್ರವಲ್ಲದೆ ಕೇಂದ್ರದ 4 ಕಾರ್ಮಿಕ ಸಂಹಿತೆಗಳಿಗೆ ನಿಯಾಮಾವಳಿಗಳನ್ನು ರೂಪಿಸಿ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಲು ಮುಂದಾಗಿದೆ. ಈ ಕ್ರಮವು ಕಾರ್ಮಿಕರ ಅಭಿವೃದ್ಧಿಯೆಡೆಗೆ ಬಿಜೆಪಿ ಸರ್ಕಾರದ ಸಾರ್ಥಕ ನಡಿಗೆ ಎಂದು ಬಿಂಬಿಸುತ್ತಿದೆ. ಆದರೆ ಈ ಕ್ರಮಗಳು ರೈತರು ಹಾಗೂ ಕಾರ್ಮಿಕರ ಜೀವನಾಧಾರಕ್ಕೆ ಕಂಟಕವಾಗಿ ಪರಿಣಮಿಸಲಿವೆ ಎಂದು ಅವುಗಳನ್ನು ನಿರಾಕರಿಸಿ ಪ್ರತಿರೋಧಿಸಲು ಸಿಐಟಿಯು ರಾಜ್ಯಾದ್ಯಂತ ಸ್ಥಳೀಯವಾಗಿ “ಕಾರ್ಮಿಕರ ಕೋಟಿ ಹೆಜ್ಜೆ ನಡೆ ವಿಧಾನಸೌಧದೆಡೆ” ಪಾದಯಾತ್ರೆ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಿ ಮಾರ್ಚ್ 4 ರಂದು “ಬಜೆಟ್ ಅಧಿವೇಶನ ಚಲೋ” ರ್ಯಾಲಿಯನ್ನು ಹಮ್ಮಿಕೊಂಡಿದೆ.
ಕೆ.ಎನ್.ಉಮೇಶ್
ರಾಜ್ಯಾದ್ಯಂತ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಸಿಐಟಿಯು ಸೇರ್ಪಡೆ ಸಂಘಗಳ ಸದಸ್ಯರು ಕನಿಷ್ಟ 2 ಕಿ.ಮೀ ಪಾದಯಾತ್ರೆ ಮೂಲಕ 6 ಸಾವಿರ ಹೆಜ್ಜೆಗಳನ್ನು ಪ್ರತಿಯೊಬ್ಬರೂ ಹಾಕುವ ಮೂಲಕ ಸ್ಥಳೀಯ ಶಾಸಕರಿಗೆ ಮನವಿಗಳನ್ನು ಸಲ್ಲಿಸಿ ಶಾಸನ ಸಭೆಯಲ್ಲಿ ರಾಜ್ಯದ ರೈತರು, ಕಾರ್ಮಿಕರ ಪರ ನಿಲುಮೆ ತಳೆಯಲು ಒತ್ತಾಯಿಸಿವೆ. ಈ ಪಾದಯಾತ್ರೆಗಳಲ್ಲಿ ಒಟ್ಟಾರೆಯಾಗಿ ಹತ್ತಾರು ಕೋಟಿ ಹೆಜ್ಜೆಗಳನ್ನು ವಿಧಾನಸೌಧದೆಡೆ ಕಾರ್ಮಿಕರು ಹಾಕಿದ್ದಾರೆ.
ಸಂಸತ್ತಿನಲ್ಲಿ 3 ಕೃಷಿ ಶಾಸನಗಳನ್ನು ಮತ್ತು 3 ಕಾರ್ಮಿಕ ಸಂಹಿತೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಂಗೀಕರಿಸಿದ ಮರುದಿನವೇ ಸೆಪ್ಟೆಂಬರ್ 24 ರಂದು ಹತ್ತಾರು ಸಾವಿರ ಕಾರ್ಮಿಕರ ವಿಧಾನಸೌಧ ಚಲೊ ನಡೆಸಿ ಅವುಗಳಿಗೆ ಪ್ರತಿರೋಧವನ್ನು ವ್ಯಕ್ತಪಡಿಸಿ ರಾಜ್ಯ ಸರ್ಕಾರವು ಅವುಗಳನ್ನು ಜಾರಿಮಾಡಬಾರದೆಂದು ಸಿಐಟಿಯು ರಾಜ್ಯ ಸಮಿತಿಯು ಮನವಿ ಸಲ್ಲಿಸಿ ಆಗ್ರಹಿಸಿತ್ತು. ಆದರೂ ಸಹಾ ರಾಜ್ಯ ಸರ್ಕಾರವು ತಾನು ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಹೊರಡಿಸಿದ್ದ 2 ಕೃಷಿ ಸಂಬಂಧಿತ ಸುಗ್ರೀವಾಜ್ಞೆಗಳಾದ ಭೂಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಅಂಗೀಕರಿಸಿ ಜಾರಿಗೊಳಿಸಿದೆ. ಅದೇ ವೇಳೆ ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ಹೊರಡಿಸಿ ನಂತರ 2021ರ ಮೊದಲ ಅಧಿವೇಶನದಲ್ಲಿ ಅಂಗೀಕರಿಸಿದೆ.
ಸೆಪ್ಟೆಂಬರ್ 26 ರಂದು ವಿಧಾನಪರಿಷತ್‌ನಲ್ಲಿ ಸೋಲನ್ನು ಕಂಡ ಕೈಗಾರಿಕಾ ವಿವಾದಗಳು ಮತ್ತು ಇತರೆ ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆ ವಿಧೇಯಕವನ್ನು ಕಾರ್ಮಿಕ ಚಳುವಳಿಯ ತೀವ್ರತೆಯಿಂದಾಗಿ ಮತ್ತೆ ಮಂಡಿಸಿ ಅಂಗೀಕರಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಲಿಲ್ಲ. ಆದರೆ ಇದೀಗ ಅದೇ ಅಂಶಗಳನ್ನು ಒಳಗೊಂಡ ಕೇಂದ್ರದ ೪ ಕಾರ್ಮಿಕ ಸಂಹಿತೆಗಳಿಗೆ ನಿಯಾಮಾವಳಿಗಳನ್ನು ರೂಪಿಸಿ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಲು ಮುಂದಾಗಿರುವುದನ್ನು ನಿರಾಕರಿಸಿ ಸಿಐಟಿಯು “ಬಜೆಟ್ ಅಧಿವೇಶನ ಚಲೋ”ವನ್ನು ಹಮ್ಮಿಕೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾರ್ಮಿಕ ವಿರೋಧಿ ಶಾಸನಗಳನ್ನು ನಿರಾಕರಿಸಿ ಪ್ರತಿರೋಧಿಸುವಾಗಲೇ ರಾಜ್ಯದ ಕಾರ್ಮಿಕ ಚಳುವಳಿಯ ಬೇಡಿಕೆಗಳ ಮೂಲಕ ದುಡಿಯುವ ಜನಕ್ಕೆ ಪರಿಹಾರವನ್ನು ಮತ್ತು ದುಡಿಯುವ ಜನರ ಪರ್ಯಾಯದ ನೀತಿಗಳಿಗಾಗಿ 30 ಬೇಡಿಕೆಗಳ ಮೂಲಕ ಸಿಐಟಿಯು ಒತ್ತಾಯಿಸುತ್ತಿದೆ.
ತ್ರಿವಳಿ ಕೃಷಿ ಕಾಯ್ದೆಗಳಿಗೆ ವಿರೋಧವೇಕೆ?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಶಾಸನಗಳಿಂದಾಗಿ ರಾಜ್ಯದಲ್ಲಿ ಈಗಾಗಲೇ 1995-96ರಲ್ಲಿದ್ದ 1,06,000 ದೊಡ್ಡ ಹಿಡುವಾಳಿದಾರರ ಸಂಖ್ಯೆ ಹಾಗೂ 1,593 ಸಾವಿರ ಹೆಕ್ಟೇರ್‌ಗಳ ಹಿಡುವಳಿಯು 2010-11ರಲ್ಲಿ 68 ಸಾವಿರ ಹಿಡುವಳಿದಾರರಿಗೆ ಹಾಗೂ 994 ಸಾವಿರ ಹೆಕ್ಟೇರ್‌ಗಳಿಗೆ ಇಳಿಕೆಯಾಗಿದೆ. ಈಗ ರಾಜ್ಯದ ಹಾಗೂ ಕೇಂದ್ರದ, ತ್ರಿವಳಿ ಕೃಷಿ ಸಂಬಂಧಿತ ಶಾಸನಗಳು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿಯಾದರೆ ಹಿಡುವಳಿಯ ಪ್ರಮಾಣವು ಮುಂಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣಲಿದೆ. ಪರಿಣಾಮವಾಗಿ ಸದರಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಹಿಡುವಳಿದಾರರ ಜಮೀನುಗಳು ದೊಡ್ಡ ಹಿಡುವಳಿದಾರರ ಪಾಲಾಗಿ ಇದುವರೆಗಿನ ಭೂ ಸುಧಾರಣೆಯ ಸಾಧನೆ ಮತ್ತು ಪರಿಕಲ್ಪನೆಯು ಬುಡಮೇಲಾಗಲಿದೆ. ರಾಜ್ಯದ ಕೃಷಿ ಭೂಮಿಯು ಕಾರ್ಪೊರೇಟ್ ಕಂಪನಿಗಳ ಪಾಲಾಗಲಿದೆ.
ಎಪಿಎಂಸಿ ಮಾರುಕಟ್ಟೆಗಳು ನಿಧಾನವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಮೇಲಿನ ಸರ್ಕಾರದ ನಿಯಂತ್ರಣ ಕ್ಷೀಣಿಸಲಿದ್ದು ವರ್ತಕರು ಮತ್ತು ಎಪಿಎಂಸಿಗಳ ಮೇಲೆ ಉದ್ಯೋಗಕ್ಕೆ ಅವಲಂಬಿತರಾಗಿರುವ ನೌಕರರು ಮತ್ತು ಹಮಾಲಿಗಳು ತಮ್ಮ ಜೀವನಾಧಾರವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯು ಗ್ರಾಮೀಣ ಜನತೆಯು ಹೈನುಗಾರಿಕೆಯನ್ನು ಆಧರಿಸಿ ರೂಪಿಸಿಕೊಂಡಿರುವ ಬದುಕನ್ನು ನಾಶಗೊಳಿಸಲಿದೆ. ಮೊದಲೇ ಸಂಕಷ್ಟದಲ್ಲಿರುವ ರೈತಾಪಿ ಜನತೆಯ ಮೇಲೆ 13 ವರ್ಷಗಳ ಕಾಲ ಗಂಡು ಕರುಗಳನ್ನು ಸಾಕುವ ಹೊಣೆಗಾರಿಕೆಯನ್ನು ಹೊರಿಸಲಿದೆ. ಮಾತ್ರವಲ್ಲದೆ ಸ್ಥಳೀಯವಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ಗುಂಡ ಗೋರಕ್ಷಕ ಪಡೆಯ ಆಟಾಟೋಪಕ್ಕೆ ಕಾನೂನು ರಕ್ಷಣೆಯನ್ನು ನೀಡಲಿದೆ.
ತ್ರಿವಳಿ ಕಾಯ್ದೆಗಳು ರಾಷ್ಟ್ರೀದ ಕೃಷಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಹಾಗೂ ಅಗತ್ಯ ಆಹಾರ ಉತ್ಪನ್ನಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಮತ್ತು ದೇಶೀಯ ಏಕಸ್ವೌಮ್ಯ ಕಂಪನಿಗಳ ಪಾಲಾಗಿಸಲಿವೆ. ಮಾತ್ರವಲ್ಲದೆ ರೈತರನ್ನು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ವಿನಾಶದ ಅಂಚಿಗೆ ದೂಡಲಿದೆ. ರಾಷ್ಟ್ರೀದ ಆಹಾರ ಸ್ವಾವಲಂಬನೆಯನ್ನು ನಾಶಮಾಡಿ ಬಹುರಾಷ್ಟ್ರೀಯ ಕಂಪನಿಗಳ ಮೇಲೆ ರಾಷ್ಟçದ ಆಹಾರ ಮಾರುಕಟ್ಟೆಯ ಅವಲಂಬನೆಯನ್ನು ಹೆಚ್ಚಿಸಲಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವಾಗ ಅವುಗಳನ್ನು ನಿಯಂತ್ರಣ ಮಾಡಲು ವಿಫಲವಾಗಿರುವ ಕೇಂದ್ರ ಸರ್ಕಾರದ ಅಸಮರ್ಥತೆಗೆ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯು ಶಾಸನಬದ್ಧ ಮಾನ್ಯತೆಯನ್ನು ನೀಡಲಿದೆ. ಆದ ಕಾರಣ ರೈತರ ಹೋರಾಟವನ್ನು ಬೆಂಬಲಿಸಿರುವ ಸಿಐಟಿಯು ಸದರಿ ತ್ರಿವಳಿ ಕಾಯ್ದೆಗಳನ್ನು ರಾಜ್ಯ ಶಾಸನ ಸಭೆಯು ತಿರಸ್ಕರಿಸಬೇಕೆಂದು ಒತ್ತಾಯಿಸುತ್ತಿದೆ.
ಕಾರ್ಮಿಕ ಸಂಹಿತೆಗಳಿಗೆ ನಿಯಮ ರೂಪಿಸುವುದು ರಾಜ್ಯದ ಆರ್ಥಿಕತೆಯನ್ನು ದಿವಾಳಿ ಮಾಡಲಿದೆ :
ಕೇಂದ್ರ ಸರಕಾರವು 2020, ಸೆಪ್ಟೆಂಬರ್ 23ರಂದು ಸಂಸತ್ತಿನಲ್ಲಿ ಅಂಗೀಕರಿಸಿರುವ ತ್ರಿವಳಿ ಕಾರ್ಮಿಕ ಸಂಹಿತೆಗಳಾದ “ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020 ಮತ್ತು ಉದ್ಯೋಗ ಸಂರಕ್ಷತೆ, ಆರೋಗ್ಯ ಮತ್ತು ಕೆಲಸದ ಷರತ್ತುಗಳು 2020” ಗಳಿಗೆ ಮಾನ್ಯ ರಾಷ್ಟ್ರಪತಿಗಳು 28-09-2020 ರಂದು ತಮ್ಮ ಅಂಕಿತ ನೀಡಿದ್ದು 29-09-2020 ರಂದು ಭಾರತ ಸರ್ಕಾರದ ರಾಜ್ಯಪತ್ರದಲ್ಲಿ ಅಧಿಸೂಚನೆಗೊಂಡಿವೆ. ಇದರೊಂದಿಗೆ “ವೇತನ ಸಂಹಿತೆ 2019” ಸೇರಿ ರಾಷ್ಟ್ರೀದ 29 ಕಾರ್ಮಿಕ ಕಾಯ್ದೆಗಳು ರದ್ದುಗೊಂಡಿವೆ. ಕೇಂದ್ರ ಸರ್ಕಾರವು ಈ ಸಂಹಿತೆಗಳಡಿ ನಿಯಮಾವಳಿಗಳನ್ನು ರೂಪಿಸಿ ಜಾರಿಗೊಳಿಸಲು ಮುಂದಾಗಿದೆ.
ಈ ನಾಲ್ಕು ಸಂಹಿತೆಗಳು ಶತಮಾನಗಳಿಂದ ಕಾರ್ಮಿಕರಿಗೆ ಲಭ್ಯವಿರುವ ಹಕ್ಕುಗಳನ್ನು ಇಲ್ಲದಾಗಿಸಿ ಬಹುರಾಷ್ಟ್ರೀಯ ಬಂಡವಾಳಗಾರರು ಮತ್ತು ಏಕಸ್ವೌಮ್ಯ ಬಂಡವಾಳಗಾರರಿಗೆ ಕಾರ್ಮಿಕರನ್ನು ಬಳಸಿ ಬಿಸಾಕಲು ಅನುವುಗೊಳಿಸಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ನಿರುದ್ಯೋಗದ ಹೆಚ್ಚಳಕ್ಕೆ ಹಾಗೂ ಆರ್ಥಿಕತೆಯ ಹಿನ್ನಡೆಗೆ ಕಾರಣವಾಗಲಿವೆ. ಸದರಿ ಸಂಹಿತೆಗಳನ್ನು ರಾಜ್ಯ ಸರ್ಕಾರವು ರಾಜ್ಯದಲ್ಲೂ ಸಹಾ ಅಂಗೀಕರಿಸಿ ಜಾರಿಗೊಳಿಸುವ ಸಾಧ್ಯತೆಗಳಿವೆ. ಇದಕ್ಕೆ ಮುನ್ನುಡಿಯಂತೆ “ಕೈಗಾರಿಕಾ ವಿವಾದಗಳು ಮತ್ತು ಕಾರ್ಮಿಕ ಕಾನೂನುಗಳ ತಿದ್ದುಪಡೆ ಸುಗ್ರೀವಾಜ್ಞೆ 2020” ಅನ್ನು ಹೊರಡಿಸಲಾಗಿತ್ತು. ಸದರಿ ಸುಗ್ರೀವಾಜ್ಞೆಯು ಶಾಸನಸಭೆಯ ಅಂಗೀಕಾರ ಪಡೆಯದೆ ವಿಫಲವಾಗಿದೆ.
ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ಹಾಲಿ ಇರುವ ಮೌಲ್ಯವರ್ಧನೆಯ ಪ್ರತಿ 100 ರೂ ಗಳಲ್ಲಿ 15 ರೂ ರಷ್ಟಿರುವ ಕೈಗಾರಿಕಾ ಕಾರ್ಮಿಕರ ವೇತನ ಪಾಲು ಕಡಿಮೆಯಾಗಿ 47 ರೂ ರಷ್ಟಿರುವ ಮಾಲೀಕರ ಲಾಭದ ಪಾಲು ಹೆಚ್ಚಳವಾಗಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕಾ ಕಾರ್ಮಿಕರ ಕೊಳ್ಳುವ ಶಕ್ತಿಯು ಕುಂಠಿತವಾಗಿ ರಾಜ್ಯದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ರಾಜ್ಯದಲ್ಲಿ 300 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಶೇ.90.76 ರಷ್ಟು ಕೈಗಾರಿಕೆಗಳು ರಾಜ್ಯ ಸರ್ಕಾರದ ಪೂರ್ವ ಅನುಮತಿ ಇಲ್ಲದೆ ಯಾವಾಗಬೇಕಾದರೂ ಲೇ-ಆಫ್, ರಿಟ್ರೆಂಚ್ ಮಾಡಲು ಮತ್ತು ಮುಚ್ಚಲು ಮುಕ್ತ ಅವಕಾಶ ಸಿಗಲಿದೆ. ಪರಿಣಾಮವಾಗಿ ದೊಡ್ಡ ಪ್ರಮಾಣದ ನಿರುದ್ಯೋಗವು ಉಂಟಾಗಲಿದೆ.
ಮಾತ್ರವಲ್ಲದೆ ಖಾಯಂ ಕಾರ್ಮಿಕರ ಜಾಗದಲ್ಲಿ ನಿಶ್ಚಿತ ಅವಧಿಯ ಕಾರ್ಮಿಕರು (ಎಫ್‌ಟಿಇ) ಹಾಗೂ ಗುತ್ತಿಗೆ ಕಾರ್ಮಿಕರ ಸಂಖ್ಯೆಯು ಅಗಾಧ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಪರಿಣಾಮವಾಗಿ ಅಭದ್ರ ಉದ್ಯೋಗವು ವ್ಯಾಪಕವಾಗಿ ಸುಭದ್ರ ಉದ್ಯೋಗದ ಕಲ್ಪನೆಯು ಇಲ್ಲವಾಗಲಿದೆ. ಇದು ನಿರುದ್ಯೋಗ ಹೆಚ್ಚಳಕ್ಕೆ ಹಾಗೂ ಕೊಳ್ಳುವ ಶಕ್ತಿ ಮತ್ತಷ್ಟು ಕಡಿಮೆಯಾಗಲು ಅನುವುಗೊಳಿಸಲಿದೆ.
ವಿದ್ಯುತ್ ಚಾಲಿತ 20 ಕಾರ್ಮಿಕರಿಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಶೇ.41.36 ಹಾಗೂ ವಿದ್ಯುತ್ ರಹಿತ 40ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಶೇ.64.24 ರಷ್ಟು ಕೈಗಾರಿಕೆಗಳ ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣವು ಕಳಚಿ ಬೀಳಲಿದೆ. ಕಾರ್ಖಾನೆ ಮತ್ತು ಬಾಯ್ಲರ್‌ಗಳ ನಿರ್ದೇಶನಾಲಯದ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ನಿರೀಕ್ಷಕರ ಶಾಸನಬದ್ಧ ನಿರೀಕ್ಷಣೆಯ ಅಧಿಕಾರವು ಇಲ್ಲದಾಗಲಿದ್ದು ಮನಸ್ಸೋ ಇಚ್ಛೆ ಕಾರ್ಮಿಕರ ಶೋಷಣೆಗೆ ಇದು ಅನುವುಗೊಳಿಸಲಿದೆ.
ಪಾಪರಿಕೆ ಮತ್ತು ದಿವಾಳಿ ಸಂಹಿತೆ 2016 ರಲ್ಲಿ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಶರತ್ತುಗಳ ಭದ್ರತೆಗೆ ಅವಕಾಶವಿಲ್ಲದಿರುವ ಕಾರಣ ಇದುವರೆಗಿನ ಶಾಸನಬದ್ದ ಪರಿಹಾರವು ಸಿಗದೆ ಕಾರ್ಮಿಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ. ಪರಿಣಾಮವಾಗಿ ಬೆಂಗಳೂರು, ಮೈಸೂರು ಮುಂತಾದೆಡೆ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ನಿಶ್ಚಿತಾವಧಿ ಕಾರ್ಮಿಕರ ನೇಮಕಕ್ಕೆ ಅವಕಾಶವು ಶಾಸನಾತ್ಮಕವಾಗಿ ದೊರೆತಿರುವ ಕಾರಣ ಈಗಾಗಲೇ ಹಲವು ಕಾರ್ಖಾನೆಗಳು ಏಕಾಏಕಿ ಮುಚ್ಚುವ, ಕಾರ್ಮಿಕರನ್ನು ರಿಟ್ರೆಂಚ್ ಮಾಡಲು ಅನುಮತಿ ಕೋರುತ್ತಿರುವ ಹಾಗೂ ರಾಜ್ಯ ಸರ್ಕಾರವು ಕೂಡ ವಿವೇಚನಾ ರಹಿತವಾಗಿ ಅನುಮತಿ ನೀಡುತ್ತಿರುವ ಬೆಳವಣಿಗೆ ಕಾರ್ಮಿಕರ ಬದುಕಿಗೆ ಮಾರಕವಾಗಿ ಪರಿಣಮಿಸುತ್ತಿದೆ.
ಲಾಕ್ಡೌನ್ ಸಂತ್ರಸ್ತ ಅಸಂಘಟಿತರಿಗೆ ಪರಿಹಾರ ಮತ್ತು ಶಾಶ್ವತ ಸಾಮಾಜಿಕ ಭದ್ರತೆ :
ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಅಸಂಘಟಿತ ಕಾರ್ಮಿಕರ ಜೀವನಾಧಾರಕ್ಕೆ ದೊಡ್ಡ ರೀತಿಯಾದಂತಹ ಕುಂದುಂಟಾಗಿದೆ. ಪರಿಣಾಮವಾಗಿ ಅಸಂಘಟಿತ ಕಾರ್ಮಿಕ ವಿಭಾಗಗಳಾದ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ದೋಬಿಗಳು, ಕ್ಷೌರಿಕರು ಮತ್ತು ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ರಾಜ್ಯ ಸರ್ಕಾರವು ಒಟ್ಟಾರೆ ಕೇವಲ 2272 ಕೋಟಿ ರೂಗಳ ಲಾಕ್ಡೌನ್ ಪರಿಹಾರ ಘೋಷಿಸಿದೆ. ಘೋಷಿತ ಪರಿಹಾರವು ಪೂರ್ಣ ಪ್ರಮಾಣದಲ್ಲಿ ಎಲ್ಲಾ ಸಂಬಂಧಿತ ಅಸಂಘಟಿತ ಕಾರ್ಮಿಕರಿಗೆ ಪಾವತಿಯಾಗಿಲ್ಲ. ಇತರೆ ಅಸಂಘಟಿತ ಕಾರ್ಮಿಕರಾದ ಹಮಾಲಿಗಳು, ಮನೆಕೆಲಸಗಾರರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು, ಫೋಟೋಗ್ರಾಫರ್‌ಗಳು, ಮೆಕ್ಯಾನಿಕ್‌ಗಳು ಮುಂತಾದವರಿಗೆ ಯಾವುದೇ ರೀತಿಯ ಪರಿಹಾರವನ್ನು ಘೋಷಿಸಿಲ್ಲ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು 2009 ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರಡಿ ಸ್ಥಾಪಿಸಿದ್ದ ರೂ 2017 ರಲ್ಲಿ ಅಸಂಘಟಿತ ಕಾರ್ಮಿಕರಿಗೆ ‘ಭವಿಷ್ಯನಿಧಿ ಯೋಜನೆ’ಯನ್ನು ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದರೂ ಸಹಾ ಅದಕ್ಕೆ ಅಗತ್ಯ ಹಣಕಾಸು ನೆರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಲ್ಯಾಣ ಯೋಜನೆಗಳಿಗಾಗಿ ನೀಡದಿರುವ ಕಾರಣ ಕಲ್ಯಾಣ ಮಂಡಳಿಯಿಂದ ಯಾವುದೇ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಆದಕಾರಣ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಗೆ ಪ್ರಸಕ್ತ ಬಜೆಟ್‌ನಲ್ಲಿ 500 ಕೋಟಿ ರೂಗಳನ್ನು ಮೀಸಲಿಡಬೇಕು ಮತ್ತು ಅಸಂಘಟಿತರಿಗೆ ಭವಿಷ್ಯನಿಧಿ ಹಾಗೂ ಪಿಂಚಣಿಗಾಗಿ ಶಾಸನ ರೂಪಿಸಿ ಜಾರಿಗೊಳಿಸಬೇಕಿದೆ.
ಲಾಕ್‌ಡೌನ್ ಕಾಲಾವಧಿಯಲ್ಲಿ ರಾಜ್ಯದ ಒಳಗಿನ ವಲಸೆ ಕಾರ್ಮಿಕರಿಗೆ ಕೆಲವರಿಗೆ ಸಾರಿಗೆ ವ್ಯವಸ್ಥೆಗೆ ಸಂಗ್ರಹಿಸಿರುವ ಬಸ್ ಟಿಕೇಟ್ ದರ ಮತ್ತು ಅಂತರ ರಾಜ್ಯ ವಲಸೆ ಕಾರ್ಮಿಕರಿಂದ ಸಂಗ್ರಹಿಸಿರುವ ಶ್ರಮಿಕ್ ರೈಲು ಪ್ರಯಾಣ ವೆಚ್ಚವನ್ನು ಹಿಂತಿರುಗಿಸಿಲ್ಲ. ಅಂತರ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ಅನ್ನು ಜಾರಿಮಾಡಬೇಕು, ವಲಸೆ ಕಾರ್ಮಿಕರಿಗೆ ವಸತಿ, ಆರೋಗ್ಯ ಮತ್ತು ಇತರೆ ಶಾಸನಬದ್ಧ ಸೌಲಭ್ಯಗಳನ್ನು ಹಾಗೂ ಅವರ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ಅಗತ್ಯ ಕ್ರಮವಹಿಸಬೇಕು.
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಮತ್ತು ಕಲ್ಯಾಣ ಯೋಜನೆಗಳು :
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ ಲಕ್ಷಾಂತರ ಜನ ಕಾರ್ಮಿಕರಿಗೆ ಕೋವಿಡ್ ನೆರವು ಮತ್ತು ಲಾಕ್ಡೌನ್ ಕಾಲಾವಧಿಯಲ್ಲಿ ಸಿದ್ಧ ಆಹಾರ ಹಾಗೂ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ವಿತರಿಸಲು ಸಾಧ್ಯವಾಗಿದೆ. ಆದರೆ ಅದು ಪೂರ್ಣಪ್ರಮಾಣದಲ್ಲಿ ಎಲ್ಲರಿಗೂ ಲಭಿಸಿಲ್ಲ. ಈ ನಡುವೆ ಮಂಡಳಿಗೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ನೋಂದಾವಣಿ ಹೆಚ್ಚುತ್ತಿದ್ದು ರಾಜ್ಯ ಸರ್ಕಾರವು ನೋಂದಾವಣಿಗೆ ಇರುವ ಕ್ರಮಗಳನ್ನು ನಿರಂತರವಾಗಿ ಬದಲಾಯಿಸುತ್ತಿರುವ ಕಾರಣ ಹೊಸ ಕಾರ್ಡ್ ನೋಂದಣಿ, ನವೀಕರಣ ಹಾಗೂ ಸೌಲಭ್ಯಗಳ ಅರ್ಜಿ ಸಲ್ಲಿಕೆ ಇತ್ಯಾದಿಗಳಿ ಕುಂಟಿತಗೊಂಡಿವೆ ಕಲ್ಯಾಣ ಮಂಡಳಿಯಲ್ಲಿ ಹಣವಿದ್ದರೂ ಸಹಾ ನೊಂದಾವಣಿ ನಿಯಮಾವಳಿಗಳು ಬದಲಾಗುತ್ತಿರುವ ಕಾರಣ ಫಲಾನುಭವಿ ಕಾರ್ಮಿಕರು ಅದರ ಪ್ರಯೋಜನ ಪಡೆಯಲು ವಿಳಂಬವಾಗುತ್ತಿದೆ. ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಗೆ ಒರಿಸ್ಸಾ ಮಾದರಿ ಅನುದಾನವನ್ನು ನೀಡಬೇಕು.
ಕೈಗಾರಿಕಾ ಕಾರ್ಮಿಕರ ಕೋವಿಡ್ ಕ್ವಾರಂಟೈನ್ ವೇತನ : ಕೋವಿಡ್ ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನವನ್ನು ಹಲವು ಕಾರ್ಖಾನೆಯಲ್ಲಿ ನೀಡಿರುವುದಿಲ್ಲ. ಅಂತೆಯೆ ಕ್ವಾರೆಂಟೈನ್‌ಗೆ ಒಳಗಾದ ಕಾರ್ಮಿಕರಿಗೆ ಸೀಲ್‌ಡೌನ್ ಪ್ರದೇಶದ ಕಾರ್ಮಿಕರಿಗೆ ಹಾಗು ಸೊಂಕಿತರಿಗೆ ಚಿಕಿತ್ಸೆ ಕಾಲಾವಧಿಯ ವೇತನ ನೀಡಿರುವುದಿಲ್ಲ. 2020 ಜೂನ್ 12 ರಂದು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಕೋವಿಡ್ ಲಾಕ್ಡೌನ್ ಕಾಲಾವಧಿಯ ಪೂರ್ಣವೇತನ ಪಡೆಯಲು ಮಾಲೀಕರು ಮತ್ತು ಕಾರ್ಮಿಕರು ಮಾತುಕತೆ ನಡೆಸಬೇಕೆಂದು ಅದಕ್ಕೆ ಕೇಂದ್ರ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಬೇಕೆಂದು ನಿರ್ದೇಶಿಸಿದೆ. ಆದರೆ ಇದುವರೆಗೆ ನಿಯಮಗಳನ್ನು ರೂಪಿಸಿಲ್ಲ ಮಾತ್ರವಲ್ಲದೆ ರಾಜ್ಯ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನಂತೆ ಕೋವಿಡ್ ಲಾಕ್ಡೌನ್, ಕ್ವಾರಂಟೈನ್ ಮತ್ತು ಸೀಲ್‌ಡೌನ್ ವೇತನ ಖಾತ್ರಿಗೆ ಅಗತ್ಯ ಕ್ರಮವನ್ನು ವಹಿಸುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆಯನ್ನು ಮಾಲೀಕರು ಮಾನ್ಯ ಮಾಡುತ್ತಿಲ್ಲ. ಕೋವಿಡ್ ಲಾಕ್ಡೌನ್ ಅನ್ನು ನೆಪಮಾಡಿಕೊಂಡು ಮಾಲೀಕರು ಸಲ್ಲಿಸುತ್ತಿರುವ ಲೇ-ಆಫ್, ರಿಟ್ರೆಂಚ್‌ಮೆಂಟ್ ಮತ್ತು ಕಾರ್ಖಾನೆ ಮುಚ್ಚುವಿಕೆಗೆ ಅನುಮತಿ ಕೋರಿ ಅರ್ಜಿಗಳಿಗೆ ರಾಜ್ಯ ಸರ್ಕಾರವು ಕಣ್ಮುಚ್ಚಿ ಅನುಮತಿ ನೀಡುತ್ತಿದೆ. ಪರಿಣಾಮವಾಗಿ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಮಾಲೀಕರಿಗೆ ನಿಶ್ಚಿತ ಕಾಲಾವಧಿಯ ಕಾರ್ಮಿಕರ ನೇಮಕಕ್ಕೆ ಇದು ಅನುವುಗೊಳಿಸುತ್ತಿದೆ.
ಸ್ಕೀಂ ನೌಕರರು ಮತ್ತು ಪಂಚಾಯತಿ ನೌಕರರ ಪ್ರಶ್ನೆಗಳು : ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಊಟ, ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತಿ ನೌಕರರು ಹಾಗೂ ಮುನ್ಸಿಪಲ್ ಕಾರ್ಮಿಕರು ಲಾಕ್ಡೌನ್ ಕಾಲಾವಧಿಯಲ್ಲಿ ವಿಶಿಷ್ಟವಾದ ಮುಂಚೂಣಿ ಕಾರ್ಯಕರ್ತರಾಗಿ ಕೋವಿಡ್ ನಿಯಂತ್ರಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರಿಗೆ ಅವರ ವೇತನ / ಗೌರವಧನವನ್ನು ಪೂರ್ಣಪ್ರಮಾಣದಲ್ಲಿ ರಾಜ್ಯ ಸರ್ಕಾರವು ಪಾವತಿಸಿರುವುದಿಲ್ಲ. ಮಾತ್ರವಲ್ಲದೆ ಕೋವಿಡ್ ಕೆಲಸಗಳಿಗೆ ನಿಧನರಾದ 26 ಜನ ಅಂಗನವಾಡಿ ನೌಕರರಿಗೆ ವಿಮಾ ಸೌಲಭ್ಯವನ್ನು ಕೊಟ್ಟಿಲ್ಲ. 2016 ರಿಂದ ನಿವೃತ್ತಿರಾದವರಿಗೆ ನಿವೃತ್ತಿ ಸೌಲಭ್ಯವನ್ನು ಕೊಟ್ಟಿಲ್ಲ.
ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಜಾರಿ ಮಾಡಬೇಕು. ಮಾನವ ಹಕ್ಕುಗಳ ಆಯೋಗ ಹಾಗೂ ಐಎಲ್‌ಸಿ ಶಿಫಾರಸ್ಸು ಜಾರಿ ಮಾಡಬೇಕು. ಐಸಿಡಿಎಸ್ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು. 2020 ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಿ. ಎನ್‌ಪಿಎಸ್ ಅನ್ನು ರದ್ದು ಮಾಡಿ ಖಾಯಂ ಪಿಂಚಣಿಯನ್ನು ಜಾರಿ ಮಾಡಬೇಕು.
ಬಿಸಿ ಊಟ ನೌಕರರ ಬೇಡಿಕೆ :
ಬಿಸಿಯೂಟ ನೌಕರರಿಗೆ ನೂತನ ಶಿಕ್ಷಣ ನೀತಿ 2020ನ್ನು ಜಾರಿ ಮಾಡುವಾಗ ಬಿಸಿಯೂಟ ಯೋಜನೆಯನ್ನು ಸಂರಕ್ಷಿಸಿ ಮತ್ತು ಆ ನೌಕರರಿಗೆ ಕೆಲಸದ ಭದ್ರತೆ ನೀಡಬೇಕು. ಭಾರತೀಯ ಕಾರ್ಮಿಕ ಸಮ್ಮೆಳನ (ಐಎಲ್‌ಸಿ) ಶಿಫಾರಸ್ಸು ಜಾರಿ ಮಾಡಬೇಕು. ಎಲ್‌ಐಸಿ ಆಧಾರಿತ ನಿವೃತ್ತಿ ವೇತನ ಜಾರಿ ಮಾಡಬೇಕು. ದಸರಾ ಮತ್ತು ಬೇಸಿಗೆ ರಜೆಯ ಸಂಬಳ ನೀಡಬೇಕು. ನೌಕರರನ್ನು ಖಾಯಂ ಮಾಡಬೇಕು. ಆಶಾ ಕಾರ್ಯಕರ್ತೆಯರಿಗೆ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‌ಸಿ) ಶಿಫಾರಸ್ಸು ಜಾರಿ ಮಾಡಬೇಕು.
ಪಂಚಾಯಿತಿ ನೌಕರರ ವೇತನ : ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನೀಡುವುದರಲ್ಲಿ ಕೊರತೆಯಾಗಿರುವ ರೂ.380 ಕೋಟಿ ಹಣವನ್ನು ಬಿಡುಗಡೆ ಮಾಡಲು ಬಜೆಟ್‌ನಲ್ಲಿ ಸೇರಿಸಬೇಕು. 3 ದಶಕಗಳಿಗೂ ಹೆಚ್ಚು ಸೇವೆ ಕೈಗೊಂಡು ಸುಮಾರು 2 ಸಾವಿರ ನೌಕರರು ನಿವೃತ್ತಿಯಾದರೂ ಪಂಚಾಯಿತಿಗಳಲ್ಲಿನ ಹಣಕಾಸಿನ ತೊಂದರೆಯಿಂದ ಗ್ರ್ಯಾಚುಟಿ ನೀಡಿಲ್ಲ. ದಯಮಾಡಿ ಗ್ರ್ಯಾಚುಟಿ ದೊರೆಯಲು ಹಣಕಾಸು ವ್ಯವಸ್ಥೆ ಮಾಡುವುದು. ಕಾಂಟ್ರಿಬ್ಯೂಟರಿ ಪಿಂಚಣಿ ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದರಿಂದ ತುರ್ತಾಗಿ ಪಿಂಚಣಿ ವ್ಯವಸ್ಥೆ ಕಲ್ಪಿಸುವುದು. ಕೋವಿಡ್ ಕೆಲಸದಲ್ಲಿ ಮುಂಚೂಣಿಯಲ್ಲಿರುವ ಕಸಗುಡಿಸುವವರು, ನೀರುಗಂಟಿ, ಇತ್ಯಾದಿ ನೌಕರರು ಮರಣ ಹೊಂದಿದ್ದಾರೆ. ಅವರಿಗೆ ವಿಮೆ ನೀಡಿಲ್ಲದಿರುವುದರಿಂದ ವಿಮೆ ವ್ಯವಸ್ಥೆ ಮಾಡುವುದು. ಪಂಚಾಯಿತಿ ಸಿಬ್ಬಂದಿಗಳಿಗೆ ದಿನಾಂಕ 5-8-2016 ರಿಂದ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡಿದ್ದು, ಕಾನೂನು ಅನ್ವಯ 5 ವರ್ಷಕ್ಕೆ ಅನುಗುಣವಾಗಿ ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕು.
ಗುತ್ತಿಗೆ ಮುಂತಾದ ಖಾಯಂಯೇತ್ತರರ ಪ್ರಶ್ನೆ :
ಗುತ್ತಿಗೆ ಕಾರ್ಮಿಕರನ್ನು ಅವ್ಯಾಹತವಾಗಿ ನೇಮಕ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ಅಗತ್ಯ ಕ್ರಮವಹಿಸುತ್ತಿಲ್ಲ. ಗುತ್ತಿಗೆ ಮುಂತಾದವರ ಖಾಯಂಗೊಳಿಸಲು ರೂಪಿತವಾಗಿರುವ ಕರಡು ಮಸೂದೆ ಅಂಗೀಕರಿಸಿ ಜಾರಿಗೊಳಿಸುತ್ತಿಲ್ಲ.
ರಾಜ್ಯ ಕಾರ್ಮಿಕ ಸಮ್ಮೇಳನ :
ರಾಷ್ಟ್ರದಲ್ಲಿ ನಡೆಸಲಾಗುವ ತ್ರಿಪಕ್ಷಿಯ ರಾಷ್ಟ್ರ ಮಟ್ಟದ ಭಾರತೀಯ ಕಾರ್ಮಿಕ ಸಮ್ಮೇಳನ (ILO) ಮಾದರಿಯಲ್ಲಿ ಕರ್ನಾಟಕ ಕಾರ್ಮಿಕ ಸಮ್ಮೇಳನ (KLC) ನಡೆಸಬೇಕು, ರಾಜ್ಯದ ಕಾರ್ಮಿಕ ಅಧ್ಯಯನ ಸಂಸ್ಥೆ ((KSLI) ಬಲಪಡಿಸಬೇಕು.
ರಾಷ್ಟ್ರದ ಕೇಂದ್ರ ಕಾರ್ಮಿಕ ಸಂಘಟನೆಗಳು ಈ ಎಲ್ಲಾ ಅಂಶಗಳನ್ನು ವಿರೋಧಿಸಿ 2020 ನವೆಂಬರ್ 26ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಿ ಪ್ರತಿಭಟಿಸಿವೆ. ಈ ಮುಷ್ಕರದಲ್ಲಿ ರಾಷ್ಟ್ರಾದ್ಯಂತ 25 ಕೋಟಿ ರಾಜ್ಯದಲ್ಲಿ 65 ಲಕ್ಷ ಕಾರ್ಮಿಕರು ಭಾಗವಹಿಸಿ ಸದರಿ ಶಾಸನಗಳು ಮತ್ತು ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ಭಾಗವಹಿಸಿದ್ದಾರೆ. ಜಂಟಿ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿರುವ ಸಿಐಟಿಯು 2020 ಸೆಪ್ಟೆಂಬರ್ 24 ರಂದು ಸಿಐಟಿಯು ವಿಧಾನಸೌಧ ಚಲೋ ನಡೆಸಿ ಮೇಲಿನ ಅಂಶಗಳನ್ನು ರಾಜ್ಯ ಸರ್ಕಾರದ ಅವಗಹನೆಗೆ ತಂದು ಒತ್ತಾಯಿಸಿತ್ತು ಆದರೂ ಸಹಾ ರಾಜ್ಯ ಬಿಜೆಪಿ ಸರ್ಕಾರವು ಅವುಗಳ ಪರಿಹಾರಕ್ಕೆ ಕ್ರಮವಹಿಸದಿರುವ ಹಿನ್ನೆಲೆಯಲ್ಲಿ ಪರಿಹಾರ ಹಾಗೂ ಪರ್ಯಾಯದ ಈ ಕೆಳಗಿನ 30 ಅಂಶಗಳ ಬೇಡಿಕೆಗಳಿಗಾಗಿ “ಕಾರ್ಮಿಕರ ಕೋಟಿ ಹೆಜ್ಜೆ ನಡೆ ವಿಧಾನಸೌಧದೆಡೆ” ಪಾದಯಾತ್ರೆ ಮೂಲಕ ಮಾರ್ಚ್ 4ರಂದು ಸಹಸ್ರಾರು ಸಂಖ್ಯೆಯ ಕಾರ್ಮಿಕರ “ಬಜೆಟ್ ಅಧಿವೇಶನ ಚಲೋ”ಗೆ ಸಿಐಟಿಯು ರಾಜ್ಯ ಸಮಿತಿ ಮುಂದಾಗಿದೆ. ಅದರೊಂದಿಗೆ ಬಿಸಿಯೂಟ ನೌಕರರು, ಹಮಾಲಿ ನೌಕರರು ಮತ್ತು ಆಟೋ ಚಾಲಕರು ಮಾರ್ಚ್ 3 ಮತ್ತು 4 ಹಾಗೂ ಅಂಗನವಾಡಿ ನೌಕರರು ಮಾರ್ಚ್ 4 ಮತ್ತು 5 ರಂದು ವಿಧಾನಸೌಧ ಚಲೋ ಹೋರಾಟವನ್ನು ಹಮ್ಮಿಕೊಂಡಿದ್ದಾರೆ.
ಪರ್ಯಾಯ ಮತ್ತು ಪರಿಹಾರದ 30 ಅಂಶಗಳ ಬೇಡಿಕೆಗಳ :
1. 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು.
2. ರೈತವಿರೋಧಿಯಾಗಿರುವ 3 ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಕೇಂದ್ರದ ಶಾಸನಗಳನ್ನು ತಿರಸ್ಕರಿಸಬೇಕು.
3. ವಿದ್ಯುಚ್ಚಕ್ತಿ ಖಾಸಗೀಕರಣ ಕೈಬಿಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ತಿರಸ್ಕರಿಸಬೇಕು.
4. ಬೆಲೆ ಏರಿಕೆ ಆಧಾರದಲ್ಲಿನ ತುಟ್ಟಿ ಭತ್ಯೆಯೊಂದಿಗೆ ಎಲ್ಲಾ ವಿಭಾಗಗಳ ಕಾರ್ಮಿಕರಿಗು ಸಾಮಾನ ಕನಿಷ್ಠ ವೇತನ 24 ಸಾವಿರ ಜಾರಿಮಾಡಬೇಕು.
5. ರಾಜ್ಯದಲ್ಲಿ ಕಾರ್ಖಾನೆ ಕಾಯ್ದೆಗೆ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ಕೈಗಾರಿಕಾ ನಿಶ್ಚಿತ ಕಾಲಾವಧಿ ಕಾರ್ಮಿಕರ ನೇಮಕದ ಮಾದರಿ ಸ್ಥಾಯಿ ಆದೇಶಗಳಿಗೆ ಮಾಡಲಾಗಿರುವ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ಸು ಪಡೆಯಬೇಕು. ಮಾದರಿ ಸ್ಥಾಯಿ ಆದೇಶಗಳಿಗೆ ನಿವೃತ್ತಿ ವಯಸ್ಸನ್ನು 60ಕ್ಕೆ ಹೆಚ್ಚಿಸಿ ಮಾಡಿರುವ ತಿದ್ದುಪಡಿ ಆಧಾರಿಸಿ ದೃಢೀಕೃತ ಸ್ಥಾಯಿ ಆದೇಶಗಳಿಗೆ ತಿದ್ದುಪಡಿ ಅಗತ್ಯ ಕ್ರಮವಹಿಸಬೇಕು.
6. ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಮತ್ತು ಅಪಾಯಕಾರಿ ಕೆಲಸಗಳಲ್ಲೂ ದುಡಿಸಿಕೊಳ್ಳಲು ನೀಡಿರುವ ರಿಯಾಯಿತಿ ರದ್ದು ಮಾಡಬೇಕು.
7. ಸಾರ್ವಜನಿಕ ಉದ್ದಿಮೆಗಳ ಹಾಗು ಸೇವೆಗಳ ಖಾಸಗೀಕರಣದ ನೀತಿಗಳನ್ನು ಕೈಬಿಡಬೇಕು.
8. ಎಲ್ಲಾ ವಿಭಾಗದ ನೌಕರರಿಗೂ ಕೋವಿಡ್ ಲಾಕ್ಡೌನ್ ಕಾಲಾವಧಿಯ ವೇತನ ನೀಡಬೇಕು. ಕೋವಿಡ್ ಕ್ವಾರಂಟೈನ್, ಸೀಲ್ಡೌನ್, ಕಾಲಾವಧಿ ವೇತನ ನೀಡಬೇಕು.
9. ಸಂಘ ಮಾನ್ಯತೆಗೆ, ಗುತ್ತಿಗೆ ಮುಂತಾದವರ ಖಾಯಂಮಾತಿಗೆ ಶಾಸನ ರೂಪಿಸಿ ಜಾರಿಗೊಳಿಸಬೇಕು.
10. ಸರ್ಕಾರದ ನಿಗಮ ಮಂಡಳಿಗಳಲ್ಲಿ ಮತ್ತು ಇಲಾಖೆಗಳಲ್ಲಿ ದುಡಿಯುವ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಖಾಯಂ ಮಾಡಬೇಕು. ಗುತ್ತಿಗೆ ಕಾರ್ಮಿಕರ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸ ಬೇಕು.
11. ಎಲ್ಲಾ ಜಿಲ್ಲೆಗಳಲ್ಲು ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.
12. ಅಕ್ರಮ ಲೇಆಫ್, ಲಾಕೌಟ್, ರಿಟ್ರೇಚ್ಮೆಂಟ್‌ಗೆ ಅನುಮತಿಸಬಾರದು.
13. ಪಾಪರಿಕೆ & ದಿವಾಳಿ ಸಂಹಿತೆ ಅಡಿ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಶರತ್ತುಗಳು ಹಾಗು ವೇತನ ಸಂರಕ್ಷಣೆಗೆ ಕ್ರಮ ವಹಿಸ ಬೇಕು.
14. ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯನ್ನು ಬಲಪಡಿಸಿ ಅಭಿವೃದ್ಧಿ ಪಡಿಸಬೇಕು.
15. ಅಂಗನವಾಡಿ, ಬಿಸಿಯೂಟ, ಮತ್ತು ಆಶಾ ಕಾರ್ಯಕರ್ತೆಯರ ಕೆಲಸ ಖಾಯಂ ಆಗಬೇಕು. ಕನಿಷ್ಟ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಜಾರಿ ಮಾಡಿ, ಕೊರೊನಾದಿಂದ ಮೃತರಾದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಪರಿಹಾರ ನೀಡಬೇಕು. ಬಿಸಿಯೂಟ ನೌಕರರಿಗೆ ಬೇಸಿಗೆ ಮತ್ತು ದಸರಾ ರಜೆಗಳ ವೇತನ ಪಾವತಿಯಾಗಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಮಾಡ ಬೇಕು. ಬೇರೆ ಎಲ್ಲಾ ಹೆಚ್ಚುವರಿ ಕೆಲಸಗಳನ್ನು ನಿರ್ಬಂಧಿಸ ಬೇಕು.
16. ಕಾರ್ಮಿಕ ಇಲಾಖೆ ರೂಪಿಸಿರುವ ಮತ್ತು 2017ರ ಬಜೆಟ್ ನಲ್ಲಿ ಘೋಷಿಸಲಾದಂತೆ ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಜಾರಿಗೆ ಶಾಸನ ರೂಪಿಸಿ ಜಾರಿ ಮಾಡಬೇಕು. 2021 ಏಪ್ರಿಲ್ ನಿಂದಲೇ ಅನ್ವಯವಾಗುವಂತೆ ಆದ್ಯತೆ ಮೇರೆಗೆ ಹಮಾಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು, ಬೀದಿಬದಿ ವ್ಯಾಪಾರಿಗಳು, ದ್ವಿಚಕ್ರವಾಹನ, ಮೆಕಾನಿಕ್‌ಗಳು, ಟೈಲರ್ಸ್ಗಳಿ ಗೆ, ಫೋಟೋಗ್ರಾಫರ್‌ಗಳು ಮತ್ತಿತರೆ ಕಾರ್ಮಿಕರಿಗೆ ಭವಿಷ್ಯನಿಧಿ ಜಾರಿಗೊಳಿಸಬೇಕು ಮತ್ತು ಅದಕ್ಕಾಗಿ 2021 ರಾಜ್ಯ ಬಜೆಟ್‌ನಲ್ಲಿ ಕನಿಷ್ಟ 500 ಕೋಟಿ ಹಣವನ್ನು ಮೀಸಲಿಡಬೇಕು.
17. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಜಾರಿ ಮಾಡಿ ,ಮದುವೆ- ಪಿಂಚಣಿ ಮತ್ತು ಮರಣ ಪರಿಹಾರಕ್ಕೆ ಹಾಕುವ ಕಾಲಮಿತಿ ರದ್ದು ಮಾಡಬೇಕು ನಿವೃತ್ತ ಕಾರ್ಮಿಕರು ಪಿಂಚಣಿ ಪಡೆಯಲು ‘ಕಾರ್ಮಿಕ ಅಧಿಕಾರಿಗಳು’ ನೀಡಿದ ‘ಜೀವಿತ ಪ್ರಮಾಣ ಪತ್ರವನ್ನು’ ಮಾನ್ಯ ಮಾಡಿ ಪಿಂಚಣಿ ನೀಡಲು ಕ್ರಮ ವಹಿಸಬೇಕು. ಇದಕ್ಕೆ ಅಗತ್ಯ ನಿಯಮ ತಿದ್ದುಪಡಿ ಮಾಡಬೇಕು. ಮನೆಕಟ್ಟಲು 3 ಲಕ್ಷ ಸಹಾಯಧನ ನೀಡಬೇಕು.
18. ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ನೀಡವುದರಲ್ಲಿ ಕೊರತೆಯಾಗಿರುವ ರೂ. 380 ಕೋಟಿ ಹಣವನ್ನು ಬಿಡುಗಡೆಮಾಡಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸ ಬೇಕು. ಇಎಫ್‌ಎಂಎಸ್‌ಗೆ ಸೇರ್ಪಡೆಯಾಗದೆ ಉಳಿದಿರುವ ನೌಕರರನ್ನು ಸೇರಿಸಬೇಕು. ಕರವಸೂಲಿ, ಕ್ಲರ್ಕ್ ಹುದ್ದೆಗಳಿಗೆ ಬಡ್ತಿಯನ್ನು ತಡೆಹಿಡಿದಿರುವ ಆದೇಶಗಳನ್ನು ಹಿಂದಕ್ಕೆ ಪಡೆಯಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಬೇಕು. ಕಸಗುಡಿಸುವವರಿಗೆ ಅನುಮೋದನೆ ನೀಡಬೇಕು.
19. ಎಲ್ಲಾ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಸೇವೆಗಳನ್ನು ಹಂತಹಂತವಾಗಿ ಖಾಯಂಗೊಳಿಸಬೇಕು. ಈ ತಕ್ಷಣವೇ ಗುತ್ತಿಗೆ ರದ್ದುಮಾಡಿ ನೇರ ಪಾವತಿ ಅಡಿಯಲ್ಲಿ ಸಂಬಳ ಪಾವತಿ ಮಾಡಬೇಕು.
20. ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರಿಗೆ ಸರ್ಕಾರಿ ನೌಕರರಷ್ಟು ಸಮಾನ ವೇತನ ನೀಡಬೇಕು.
21. ಅಟೋ ಟ್ಯಾಕ್ಸಿ ಮುಂತಾದ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಬೇಕು.
22. ಕೇಂದ್ರ ಸರಕಾರವು ತಂಬಾಕು ನಿಷೇಧ ಕಾಯ್ದೆಯ ತಿದ್ದುಪಡಿ ಭಾಗವಾಗಿ ಸಂಕಷ್ಟಕ್ಕೆ ಸಿಲುಕಿರುವ ಬೀಡಿ ಕಾರ್ಮಿಕರಿಗೆ ಮಾಸಿಕ ರೂ 6000 ಪರಿಹಾರ ನೀಡಬೇಕು. ಬೀಡಿ ಕಾರ್ಮಿಕರಿಗೆ ರ್ಯಾಲಿಯ ಉದ್ಯೋಗ ಯೋಜನೆಗಳನ್ನು ಜಾರಿಗೆ ತರಬೇಕು. ಜಿಎಸ್‌ಟಿ ಜಾರಿಯಿಂದಾಗಿ ರದ್ಧಾಗಿರುವ ಬೀಡಿ ಕಾರ್ಮಿಕರ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು ಹಿಂದಿನಂತೆ ಮರು ಜಾರಿ ಮಾಡಬೇಕು ಹಾಗೂ ರಾಜ್ಯ ಸರಕಾರ ಕೇರಳ ಮಾದರಿಯಲ್ಲಿ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಬೇಕು.
23. ತೋಟ ಕಾರ್ಮಿಕರ ಕಾಯ್ದೆಯನ್ನು ಉಳಿಸಿ ಪ್ಲಾಂಟೇಶನ್ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಿ ಮನೆ, ಶಿಕ್ಷಣ, ಆರೋಗ್ಯ, ಸವಲತ್ತುಗಳನ್ನು ಜಾರಿ ಮಾಡಬೇಕು.
24. ಅಂತರ ರಾಜ್ಯ ವಲಸೆ ಕಾರ್ಮಿಕರ ಮತ್ತು ಶ್ರಮಿಕ್ ರೈಲು ಪ್ರಯಾಣ ವೆಚ್ಚ ಹಿಂತಿರುಗಿಸಿ, ಕಲ್ಯಾಣ ಮಂಡಳಿ ರಚಿಸಿ, ಯೋಜನೆ ರೂಪಿಸಿ ವಸತಿ ಆರೋಗ್ಯ, ಶಿಕ್ಷಣ ಒದಗಿಸ ಬೇಕು.
25. ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಮಾದರಿಯಲ್ಲಿ ರಾಜ್ಯ ಕಾರ್ಮಿಕ ಸಮ್ಮೇಳನ ನಡೆಸಬೇಕು. ಈ ಆರ್ಥಿಕತೆಯ ಕಾರ್ಮಿಕರ ಸೇವಾ ಶರತ್ತುಗಳ ಶಾಸನ ರೂಪಿಸಿ ಜಾರಿಗೊಳಿಸಬೇಕು.
26. ಸೇಲ್ಸ್ ಪ್ರಮೋಷನ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಕುರಿತು ಕಾನೂನುಗಳ ಜಾರಿಗೊಳಿಸಿ.
27. ಮೀನುಗಾರರಿಗೆ ಇಂಧನ ಸಬ್ಸಿಡಿ ಹಾಗು ಮೀನು ಮಾರಾಟ ವ್ಯವಸ್ಥೆ, ಸಾಮೂಹಿಕ ವಿಮೆ ಯೋಜನೆ ಹಾಗು ಕಲ್ಯಾಣ ಯೋಜನೆಗಳನ್ನು ಒಳಗೊಂಡು ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಿ.
28. ರಾಜ್ಯದಲ್ಲಿನ ಜೀವವಿಮಾ ಪ್ರತಿನಿಧಿಗಳನ್ನು ರಾಜ್ಯ ಸರ್ಕಾರದ ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸೇರ್ಪಡೆ ಮಾಡಬೇಕು. ಹಾಗು ಇತರೆ ವೃತಿದಾರರಿಗೆ ನೀಡುವ ಸೌಲಭ್ಯಗಳನ್ನು ವಿಸ್ತರಿಸ ಬೇಕು.
29. ಲಾಕ್‌ಡೌನ್ ನಿಂದಾಗಿ ಉಂಟಾಗಿರುವ ಆರ್ಥಿಕ ಹಿನ್ನೆಡೆ ಪುನಶ್ಚೇತನಕ್ಕೆ ಆರ್ಥಿಕ ಹಿನ್ನಡೆ ಪುನಶ್ಚೇತನಕ್ಕೆ ಆದಾಯ ತೆರಿಗೆಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೆ 6 ತಿಂಗಳು ತಲಾ 7500 ರೂ ಗಳ ನೇರ ನಗದು ವರ್ಗಾವಣೆ ಮಾಡಿ, ತಲಾ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಿ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕ 200 ದಿನಗಳ ಕೆಲಸ ಹಾಗು ದಿನಕ್ಕೆ ರೂ. 700/- ವೇತನದೊಂದಿಗೆ ನೀಡಬೇಕು. ನಗರ ಪ್ರದೇಶಗಳಿಗು ಈ ಯೋಜನೆಯನ್ನು ವಿಸ್ತರಿಸಿ ಜಾರಿ ಮಾಡಬೇಕು.
30. ಬೆಲೆ ಏರಿಕೆ ನಿಯಂತ್ರಿಸಬೇಕು. ರಾಜ್ಯದ GST ಪಾಲು ಪರಿಹಾರ ಪಡೆಯಲು ಕ್ರಮವಹಿಸಬೇಕು.