ಕಾರ್ಮಿಕರ ಬೃಹತ್‌ ವಿಧಾನಸೌಧ ಚಲೋ: ರಾಜಧಾನಿಗೆ ಸಾಗಿಬಂದ ಸಾವಿರಾರು ಮಂದಿ

ಬೆಂಗಳೂರು: ಕಾರ್ಮಿಕರ ರಕ್ಷಣೆಗಾಗಿ ಜಾರಿಯಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಕೇವಲ 4 ಸಂಹಿತೆಗಳನ್ನಾಗಿ ಮಾಡುವ ಮುಖಾಂತರ ಕಾರ್ಮಿಕ ವಿರೋಧಿ-ದೇಶ ವಿರೋಧಿ ಕ್ರಮಗಳನ್ನು ಸರ್ಕಾರವು ಅನುಸರಿಸುತ್ತಿದೆ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರಶ್ನಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ವತಿಯಿಂದ ರಾಜ್ಯ ರಾಜಧಾನಿಯಲ್ಲಿ ಇಂದು ಕಾರ್ಮಿಕರ ಬೃಹತ್‌ ಮತಪ್ರದರ್ಶನ ನಡೆಯಿತು.

ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದಲೂ ಸಾವಿರ ಸಾವಿರ ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಿದ್ದರು. ಬೆಂಗಳೂರು ನಗರದ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಸಾಗಿದ ಮೆರವಣಿಗೆಯಲ್ಲಿ ಸಾಗಿದ ಕಾರ್ಮಿಕರು ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಘೋಷಣೆಗಳನ್ನು ಮೊಳಗಿಸಿದರು.

ಇಂತಹ ಬೃಹತ್‌ ಮತ ಪ್ರದರ್ಶನದಲ್ಲಿ ಅಂಗನವಾಡಿ, ಬಿಸಿಯೂಟ, ಅಕ್ಷರ ದಾಸೋಹ, ಕಟ್ಟಡ ಕಾರ್ಮಿಕರು, ಮುನಿಸಿಪಾಲಿಟಿ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಹೊರ ಗುತ್ತಿಗೆ ನೌಕರರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಬೃಹತ್‌ ಪ್ರಮಾಣದ ಕಾರ್ಮಿಕರು ಸಿಐಟಿಯು ಕೆಂಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಿದರು.

ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಅಂಗನವಾಡಿ, ಬಿಸಿಯೂಟ, ಆಶಾ, ಐಸಿಪಿಎಸ್‌, ಎನ್‌ಆರ್‌ಹೆಚ್‌ಎಂ, ಎನ್‌ಹೆಚ್‌ಎಂಗಳಲ್ಲಿ ದುಡಿಯುವವರಿಗೆ ಶಾಸನಬದ್ಧ ಸೌಲಭ್ಯಗಳನ್ನು ಕೊಡುವ ಬದಲಿಗೆ ಅನ್ಯಾಯ ಎಸಗಲಾಗುತ್ತಿದೆ. ಅಂಗನವಾಡಿ ಮತ್ತು ಬಿಸಿಯೂಟ ಯೋಜನೆಗಳನ್ನು ನೂತನ ಶಿಕ್ಷಣ ನೀತಿಯಿಂದ ರಕ್ಷಿಸಬೇಕಾಗಿದೆ ಕಾರ್ಮಿಕರು ಆಗ್ರಹಿಸಿದರು.

ಆರ್ಥಿಕ ಹೊಡೆತದಿಂದ ಕಂಗಾಲಾದ ಜನತೆಗೆ ಮತ್ತೆ ಕೋವಿಡ್‌ ಬಿಕ್ಕಟ್ಟಿನಿಂದಾಗಿ ದುಡಿಯುವ ವರ್ಗಕ್ಕೆ ಪೆಟ್ಟು ಬಿದ್ದಿದೆ. ಉತ್ಪಾದನೆ, ವ್ಯಾಪಾರ ವಹಿವಾಟು ನಡೆಯದೇ ತೀವ್ರವಾದ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ 18 ರಿಂದ 50 ವರ್ಷದೊಳಗಿನ ಸುಮಾರು 11 ಲಕ್ಷ ಉದ್ಯೋಗ ಆಕಾಂಕ್ಷಿಗಳಿದ್ದಾರೆ, ಈಗಿರುವ ಉದ್ಯೋಗಗಳಲ್ಲಿಯೂ ಕೂಡಾ 46% ಸ್ವಯಂ, 27% ಕೂಲಿ ವೇತನ ಮತ್ತು 27% ಸಾಮಾನ್ಯ ಉದ್ಯೋಗಿಗಳಿದ್ದಾರೆ. ಈ ಉದ್ಯೋಗಗಳಲ್ಲಿಯೂ ಕೆಲಸ ಕಳೆದುಕೊಂಡವರು ಸೇರಿ ಈಗ ಒಟ್ಟು 20% ನಿರುದ್ಯೋಗಿಗಳಾಗಿದ್ದಾರೆ. ಕೆಲಸದಲ್ಲಿರುವವರು ಕೂಡಾ ಗುತ್ತಿಗೆ, ಹೊರಗುತ್ತಿಗೆ, ಗೌರವಧನ, ಅತಿಥಿಗಳು ಎನ್ನುವ ಹೆಸರಿನ ದುಡಿಮೆ ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರಿಗೆ ಬರುವ ಆದಾಯವೂ ಅತ್ಯಲ್ಪವಾಗಿದ್ದು, ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಕೊರೊನಾ ಸಂದರ್ಭದಲ್ಲಿ ಇರುವ ಉದ್ಯೋಗ, ಆದಾಯಗಳನ್ನು ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಸಹಾಯ ಹಸ್ತವನ್ನು ಚಾಚುವ ಬದಲಿಗೆ ಅಗತ್ಯ ವಸ್ತುಗಳ ಬೆಲೆಯೇರಿಕೆ, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್‌ಗಳ ಮೇಲಿನ ಸಬ್ಸಿಡಿ ಕಡಿತದಿಂದಾಗಿ ಅಬಕಾರಿ ಸುಂಕದ ಹೆಚ್ಚಳದಿಂದಾಗಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದೆ.  ಇದರಿಂದ ರಾಜ್ಯದಲ್ಲಿ ಹಸಿವು, ಅಪೌಷ್ಠಿಕತೆ ಹೆಚ್ಚಳವಾಗಿ 13.2% ರಷ್ಟು ತೀವ್ರವಾದ ಬಡತನ ಹೆಚ್ಚಾಗಿದೆ ಎಂದು ಸಿಐಟಿಯು ಮುಖಂಡರು ಆರೋಪಿಸಿದರು.

ಸರ್ಕಾರಿ ಮತ್ತು ಖಾಸಗಿ ವಲಯದ ಗುತ್ತಿಗೆ ಕಾರ್ಮಿಕರ ಖಾಯಮಾತಿಗೆ ಕಾನೂನು ರಚಿಸಬೇಕು. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೆ ಶಾಸನ ರೂಪಿಸಿ, ಕನಿಷ್ಠ 500 ಕೋಟಿ ಅನುದಾನಕ್ಕಾಗಿ ಒತ್ತಾಯಿಸಲಾಗುತ್ತಿದೆ. ಸೇವೆಯನ್ನೊಳಗೊಂಡು ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ವಿರೋಧಿಸಿ, ರಾಜ್ಯದಲ್ಲಿ ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಾಗೂ ಎಪಿಎಂಸಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ ರದ್ಧತಿಗೆ ವಿರೋಧಿಸಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ಹೆಚ್ಚಿನ ಅನುದಾನ ನೀಡುವ ಬದಲಿಗೆ ಇ-ಶ್ರಮ ವನ್ನು ರೂಪಿಸಿರುವ ಕೇಂದ್ರ ಸರ್ಕಾರವು ಯಾವುದೇ ಸೌಲಭ್ಯ ನೀಡಿಲ್ಲವಾದ್ದರಿಂದ ಅದು ಕೇವಲ ಅಸಂಘಟಿತ ಕಾರ್ಮಿಕನೆಂದು ಗುರುತಿಸಲು ಕಾರ್ಡ್‌ ಮಾತ್ರ ಎನ್ನುವಂತಾಗಿದೆ. ಅಲ್ಲದೆ, ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ನೊಂದಾವಣೆಯಾಗಿರುವ ಲಕ್ಷಾಂತರ ಕಟ್ಟಡ ಕಾರ್ಮಿಕರಿಗೆ ಘೋಷಿಸಲಾದ 19 ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಬದಲಿಗೆ ಖರೀದಿಗಳ ಹೆಸರಿನಲ್ಲಿ ನೂರಾರು ಕೋಟಿ ದುರುಪಯೋಗವಾಗುತ್ತಿದೆ.

ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರನ್ನು ಕೊರೊನಾ ನೆಪದ ಕಾರಣಗಳವೊಡ್ಡಿ, ಹಲವರನ್ನು ಸಣ್ಣ-ಪುಟ್ಟ ಕೆಲಸದಿಂದ ತೆಗೆದಿರುವುದಲ್ಲದೆ, ಉತ್ಪಾದಕತೆಯಿದ್ದರೂ ಕೂಡಾ ವೇತನ ಹೆಚ್ಚಳದ ನಿರಾಕರಣೆ ಮಾಡುವುದರೊಂದಿಗೆ, ಸಂಘ ರಚನೆ ಮೂಲಭೂತ ಹಕ್ಕಿನ ಮೇಲೆ ದಾಳಿ ಮಾಡಲಾಗುತ್ತಿದೆ.

ಕರ್ನಾಟಕ ಮಾಹಿತಿ ತಂತ್ರಜ್ಞಾನ, ವಿಶೇಷ ಆರ್ಥಿಕ ವಲಯಗಳು ವಿದೇಶಿ ಬಂಡವಾಳದ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ರಫ್ತಿನಲ್ಲಿಯೂ ಕೂಡಾ ಮುಂದಿದೆ. ಆದರೂ ಕೂಡ ಕಾರ್ಮಿಕರ ವೇತನದ ಪಾಲು 15.7% ಕ್ಕೆ ಇಳಿದು ಮಾಲೀಕರ ಲಾಭ 46.86ಕ್ಕೆ ಹೆಚ್ಚಳವಾಗಿದೆ.

ಕೃಷಿಯಲ್ಲಿ ಬೆಂಬಲ ಬೆಲೆಯಿಲ್ಲದೆ ತಮ್ಮ ಶ್ರಮಕ್ಕೆ ಫಲವಾಗಿ ಹಲವು ಜನ ವಲಸಿಗರಾಗಿ ದುಡಿಯಲು ಬರುತ್ತಿದ್ದಾರೆ. ಆದರೆ, ಸರ್ಕಾರಗಳು ಮಾತ್ರ ಬಳಸಿ ಬಿಸಾಡುವ ನೀತಿಗಳನ್ನು ಅನುಸರಿಸುತ್ತಿರುವುದು ಖಂಡನೀಯವೆಂದು ಸಿಐಟಿಯು ಮುಖಂಡರು ತಿಳಿಸಿದರು.

ದೇಶದಲ್ಲಿ ಸಿಐಟಿಯು ಒಂದು ಬಲಿಷ್ಠ ಸಂಘಟನೆಯಾಗಿ ರೂಪುಗೊಂಡಿದೆ. ಆದರೂ ಸಹ ಕೇಂದ್ರ ಕಾರ್ಮಿಕ ಸಂಘಟನೆಯೆಂಬುದನ್ನು ಮರೆತು ಕನಿಷ್ಠ ವೇತನ ಸಲಹಾ ಮಂಡಳಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಲಿ ಮತ್ತು ಕಾರ್ಮಿಕರ ಕಲ್ಯಾಣ ಮಂಡಳಿಗಳಿಂದ ಸಂಘಟನೆಯ ಮಾನ್ಯತೆಗೆ ಅವಕಾಶ ಮಾಡಿಕೊಡದಿರುವ ಕಾರ್ಮಿಕ ವಿರೋಧಿ ನಡೆಯ ಮೂಲಕ ಕಾರ್ಮಿಕ ಇಲಾಖೆ ತ್ರಿಪಕ್ಷೀಯ ಸಮಿತಿಗಳಿಂದ ಸಿಐಟಿಯುವನ್ನು ಹೊರಗಿಟ್ಟಿರುವುದನ್ನು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಲು ಮುಂದಾಗಿದ್ದೇವೆ ಎಂದರು.

ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರಶ್ನಿಸಿ ಹಣದುಬ್ಬರದ ಆಧಾರದಲ್ಲಿ ರೂ.24 ಸಾವಿರ ಕನಿಷ್ಠ ವೇತನವನ್ನು ಜಾರಿ ಮಾಡಬೇಕು, ಎಲ್ಲ ವಿಭಾಗಗಳಿಗೂ 2 ವರ್ಷಕ್ಕೊಮ್ಮೆ ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕೆಂದು ವಿಧಾನಸೌಧ ಚಲೋ ಮಾಡುವ ಮೂಲಕ ಒತ್ತಾಯಿಸಲಾಗಿದೆ.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *