ಕಾರ್ಮಿಕ ಹೋರಾಟಗಳಿಗೆ ಐಕ್ಯತೆಯ ಸ್ಪರ್ಶ ಬೇಕಿದೆ

2020 ಜ್ಞಾನೋದಯದ ವರ್ಷ ಎಂದರೂ ಅಡ್ಡಿಯಿಲ್ಲ.. ಪೌರತ್ವ ತಿದ್ದುಪಡಿ ಕಾಯ್ದೆ, ಕೋವಿಡ್ ಸಂದರ್ಭದ ವಲಸೆ ಕಾರ್ಮಿಕರ ಬವಣೆ, ಕೋಟ್ಯಂತರ ರೈತರ ಸುದೀರ್ಘ ಮುಷ್ಕರ ಮತ್ತು ವಿವಿಧ ನೆಲೆಗಳಲ್ಲಿ ಸ್ಫೋಟಿಸುತ್ತಿರುವ ಕಾರ್ಮಿಕರ ಆಕ್ರೋಶ ಇವೆಲ್ಲವೂ ಶ್ರಮಜೀವಿಗಳಿಗೆ ಸಂಬಂಧಪಟ್ಟಿರುವುದನ್ನುಗಮನಿಸಲು ವರ್ಷದ ಬೆಳವಣಿಗೆಗಳು ಅವಕಾಶ ನೀಡಿವೆ. ಸಂಘಟಿತ ಕಾರ್ಮಿಕ ವಲಯ ಸೂಕ್ಷ್ಮವನ್ನು ಅರ್ಥಮಾಡಿಕೊಂಡರೆ ಭಾರತದ ಶ್ರಮಿಕರ ಭವಿಷ್ಯದಲ್ಲಿ ಬೆಳಕು ಕಾಣಲು ಸಾಧ್ಯ. ಇದು ಚಾರಿತ್ರಿಕ ಸತ್ಯವೂ ಹೌದು, ಸವಾಲೂ ಹೌದು.

-ನಾ. ದಿವಾಕರ

ನವೆಂಬರ್ 26 2020 ನವ ಶತಮಾನದ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ದಿನ. ಮೂರು ದಶಕಗಳ ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಖಾಸಗೀಕರಣದ ಪ್ರಕ್ರಿಯೆ ಭಾರತೀಯ ಸಮಾಜದಲ್ಲಿ ಸೃಷ್ಟಿಸಿರುವ ತರತಮಗಳು ಸಾಮಾಜಿಕ ಸಮತೋಲನವನ್ನೇ ಭಂಗಗೊಳಿಸಿದ್ದು, ಬಡವ ಶ್ರೀಮಂತರ ನಡುವಿನ ಕಂದರ ಹೆಚ್ಚಾಗುತ್ತಿರುವಂತೆಲ್ಲಾ, ಸುರಕ್ಷಿತ ವಲಯದಲ್ಲಿರುವ ಮತ್ತು ಹಿತವಲಯದಲ್ಲಿರುವ ಮಧ್ಯಮ ವರ್ಗದ ಜನತೆಯೂ ಈಗ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. 1990ರ ದಶಕದಲ್ಲಿ ಭಾರತ ಮಾರುಕಟ್ಟೆ ಆರ್ಥಿಕತೆಯನ್ನು ಅಪ್ಪಿಕೊಂಡಾಗ ಉಂಟಾಗಿದ್ದ ಆತಂಕಗಳು ಇಂದು ಆಕ್ರೋಶದ ನೆಲೆಗಳಾಗಿ ಪರಿವರ್ತನೆಯಾಗಿವೆ.

2020 ಆರೋಗ್ಯದ ದೃಷ್ಟಿಯಿಂದ ಒಂದು ಕರಾಳ ವರ್ಷ. ಕೋವಿಡ್ 19 ಸೃಷ್ಟಿಸಿದ ಆತಂಕಗಳು ಮತ್ತು ಕೋವಿಡ್ ನಿರ್ವಹಣೆಯಲ್ಲಿನ ದೋಷಗಳಿಂದ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ, ಲಕ್ಷಾಂತರ ಮಂದಿ ಬದುಕು ಕಳೆದುಕೊಂಡಿದ್ದಾರೆ, ಕೋಟ್ಯಂತರ ಮಂದಿ ತಮ್ಮ ಜೀವನೋಪಾಯದಿಂದ ವಂಚಿತರಾಗಿದ್ದಾರೆ. ಈ ಸಮಸ್ಯೆ ಮತ್ತು ಬಿಕ್ಕಟ್ಟುಗಳಿಗೆ ಕೊರೋನಾ ವೈರಾಣುವೊಂದೇ ಕಾರಣವಲ್ಲ. ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಕಾಳಜಿಯ ಪರಿಕಲ್ಪನೆ ಜೀವಂತವಾಗಿದ್ದಿದ್ದಲ್ಲಿ ಇಷ್ಟೊಂದು ಸಾವು ನೋವು ಸಂಭವಿಸುತ್ತಿರಲಿಲ್ಲ. ಕೋವಿಡ್ ನಿರ್ವಹಣೆಗೆ ಪ್ರತ್ಯೇಕ ಕಾನೂನು ರಚಿಸದೆ ಇರುವ ಕೆಲವೇ ರಾಷ್ಟ್ರಗಳ ಪೈಕಿ ಭಾರತ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ಇಷ್ಟಾದರೂ ಒಂದು ಕೋಟಿ ಸೋಂಕಿತರು, ಒಂದೂವರೆ ಲಕ್ಷ ಮೃತರು ಮತ್ತು ಲಕ್ಷಾಂತರ ಸಂಖ್ಯೆಯ ಬದುಕು ಕಳೆದುಕೊಂಡವರ ನಡುವೆ ನಿಂತು “ ಇಡೀ ದೇಶವೇ ಒಗ್ಗಟ್ಟಿನಿಂದ ಕೋವಿಡ್ ವಿರುದ್ಧ ಹೋರಾಡುತ್ತಿದೆ ” ಎಂದು ಹೇಳುವುದು ಆತ್ಮವಂಚನೆಯೇ ಸರಿ. ಹೋರಾಡಿರುವುದು ನಿಜ, ವಾರಿಯರ್ಸ್ ಎಂದು ಕರೆಯಲಾಗುವ ಮುಂಚೂಣಿ ಕಾರ್ಯಕರ್ತರು, ಸರ್ಕಾರದ ತಿಕ್ಕಲು ನಿಯಮಗಳ ಪಾಲನೆಯನ್ನು ಗಮನಿಸುವ ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಈ ಹೋರಾಟದ ನೈಜ ಸೇನಾನಿಗಳು. ಆದರೆ ಇಡೀ ದೇಶವೇ ಸಾವುಗಳ ನಡುವೆ ಪರದಾಡುತ್ತಿದ್ದಾಗ ತಮಗೆ ಸಂಬಂಧವೇ ಇಲ್ಲದಂತಿದ್ದ ಖಾಸಗಿ ವೈದ್ಯಲೋಕದ ಒಂದು ವರ್ಗ, ಜನಸಾಮಾನ್ಯರ ಅಸಹಾಯಕತೆ ಮತ್ತು ಜೀವ ಭಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡ ಖಾಸಗಿ ಆಸ್ಪತ್ರೆಗಳೂ ನಮ್ಮ ನಡುವೆ ಇರುವುದನ್ನು ಗಮನಿಸಬೇಕಿದೆ. ಈ ವರ್ಗಗಳನ್ನು ಸಮೀಪಿಸುವ ಧೈರ್ಯವನ್ನೂ ಭಾರತದ ಆಡಳಿತ ವ್ಯವಸ್ಥೆ ತೋರದೆ ಇರುವುದು ಈ ದೇಶದ ಮತ್ತೊಂದು ಅಮಾನುಷ ಮುಖವನ್ನು ಪರಿಚಯಿಸುತ್ತದೆ.

ಕಾರ್ಮಿಕ ಸಂಹಿತೆಯ ಪ್ರತಿಯನ್ನು ಸುಡುತ್ತಿರುವ ಕಾರ್ಮಿಕರು

ಈ ವಿಕೃತಿಗಳ ನಡುವೆಯೇ ಭಾರತದ ದುಡಿಯುವ ವರ್ಗಗಳು ಕೊರೋನಾಗಿಂತಲೂ ಮಾರಕವಾದಂತಹ ಒಂದು ಆಡಳಿತ ವ್ಯವಸ್ಥೆಯನ್ನು ಎದುರಿಸಬೇಕಾಗಿದ್ದು  2020ರ ದುರಂತಗಳಲ್ಲೊಂದು. ಕೋವಿಡ್ 19 ಹಿನ್ನೆಲೆಯಲ್ಲಿ ಇಡೀ ದೇಶದ ಜನಜೀವನ ಸ್ತಬ್ಧವಾಗಿದ್ದಾಗ, ಮಾರುಕಟ್ಟೆ ಬಂದ್ ಆಗಿದ್ದಾಗ, ಜನಸಾಮಾನ್ಯರು ಮನೆಯಿಂದ ಹೊರಬರುವುದೂ ನಿರ್ಬಂಧಕ್ಕೊಳಪಟ್ಟಿದ್ದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದೇಶದ ಕೋಟ್ಯಂತರ ಕಾರ್ಮಿಕರ ಬದುಕಿಗೆ ಮಾರಕವಾಗುವಂತಹ ಮಸೂದೆಗಳನ್ನು ಜಾರಿಗೊಳಿಸಿ, ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ನಾಲ್ಕು ಸಂಹಿತೆಗಳನ್ನು ರೂಪಿಸಿವೆ. ಈ ನೂತನ ಕಾಯ್ದೆಗಳು ಕಾರ್ಪೋರೇಟ್ ಉದ್ದಿಮೆಗಳ ಮತ್ತು ಮಾರುಕಟ್ಟೆಯ ಪರ ಇರುವುದರಿಂದ ಸಹಜವಾಗಿಯೇ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತದೆ.

ಭಾರತದ ಕಾರ್ಮಿಕ ಚಳುವಳಿಗೆ ನೂರು ವರ್ಷಗಳ ಇತಿಹಾಸವಿದೆ. ಒಂದು ಸುದೀರ್ಘ ಪರಂಪರೆಯೂ ಇದೆ. ಗ್ರಾಮೀಣ ಕೃಷಿ ಕಾರ್ಮಿಕರಿಂದ ಅತ್ಯುನ್ನತ ಹಂತದ ಹಿತವಲಯದ ಕಾರ್ಮಿಕರವರೆಗೂ ಈ ದೇಶದ ದುಡಿಯುವ ವರ್ಗಗಳು ಪಡೆಯುತ್ತಿರುವ ಸೌಲಭ್ಯ, ಸವಲತ್ತು ಮತ್ತು ವೇತನ ಇತ್ಯಾದಿ ಹಣಕಾಸು ಸೌಲಭ್ಯಗಳ ಹಿಂದೆ ಕಾರ್ಮಿಕ ಚಳುವಳಿಯ ಪರಿಶ್ರಮ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಪ್ರಭುತ್ವದ ಕುಟಿಲ ನೀತಿಗಳು, ಅಧಿಕಾರ ರಾಜಕಾರಣದ ಆಮಿಷ, ಔದ್ಯಮಿಕ ಜಗತ್ತಿನ ಹುನ್ನಾರಗಳು, ಜಾತಿ, ಧರ್ಮ ಮತ್ತು ಪ್ರಾದೇಶಿಕ ಅಸ್ಮಿತೆಗಳ ಆತಂಕಗಳು ಭಾರತದ ಕಾರ್ಮಿಕ ಚಳುವಳಿಯ ವಿಘಟನೆಗೆ ಕಾರಣವಾಗಿದ್ದರೂ ಈ ದೇಶದ ಕಾರ್ಮಿಕರು ತಮ್ಮ ಹೋರಾಟಗಳ ಮೂಲಕ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ, ಉಳಿಸಿಕೊಂಡು ಬಂದಿದ್ದಾರೆ.

ಇಂದು ಈ ಹಕ್ಕುಗಳಿಗೆ ಚ್ಯುತಿ ಬರುವ ಸಾದ್ಯತೆಗಳು ಹೆಚ್ಚಾಗಿದ್ದು, ಕಾರ್ಮಿಕರು ಅಭದ್ರತೆಯ ನೆರಳಲ್ಲೇ ಬದುಕುವಂತಹ ವಾತಾವರಣವನ್ನು ಸೃಷ್ಟಿಸಲಾಗಿದೆ. ಕಾರ್ಮಿಕ ಕಾನೂನುಗಳಿಗೆ ಮಾಡಿರುವ ತಿದ್ದುಪಡಿಗಳು ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಪುಷ್ಟೀಕರಿಸುವ ಮತ್ತು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳನ್ನು ಸಂರಕ್ಷಿಸುವ ಸಾಧನಗಳಾಗಿದ್ದು, ಕಾರ್ಮಿಕರು ಅನಿಶ್ಚಿತತೆಯ ನೆರಳಲ್ಲೇ ತಮ್ಮ ದುಡಿಮೆಯಲ್ಲಿ ತೊಡಗುವ ಸಂದರ್ಭ ಎದುರಾಗಲಿದೆ. ನವ ಉದಾರವಾದ ಕೇವಲ ಒಂದು ಆರ್ಥಿಕ ವಿದ್ಯಮಾನವಲ್ಲ ಎನ್ನುವುದನ್ನು ಆತ್ಮನಿರ್ಭರ ಭಾರತ ಪದೇ ಪದೇ ನಿರೂಪಿಸುತ್ತಿದೆ. ಮಾರುಕಟ್ಟೆಯ ಹಿತಾಸಕ್ತಿಗಳನ್ನು ಕಾಪಾಡಲು ಚುನಾಯಿತ ಸರ್ಕಾರ, ನ್ಯಾಯಾಂಗ ಮತ್ತು ಕಾರ್ಯಾಂಗ ವ್ಯವಸ್ಥೆ ಮತ್ತು ಕಾನೂನು ಪಾಲಕರು ತುದಿಗಾಲಲ್ಲಿ ನಿಂತಿರುವುದನ್ನೂ ಇತ್ತೀಚಿನ ಬೆಳವಣಿಗೆಗಳಲ್ಲಿ ಗಮನಿಸಿದ್ದೇವೆ.

ಹಾಗೆಯೇ ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸೂಕ್ಷ್ಮ ಕೊಂಡಿಯಾಗಿ, ಪ್ರಭುತ್ವದ ಮತ್ತು ಆಡಳಿತ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸುತ್ತಾ ಸಾರ್ವಭೌಮ ಪ್ರಜೆಗಳ ಹಿತಾಸಕ್ತಿಗಳನ್ನು ಕಾಪಾಡುವ ಒಂದು ಸಾಧನವಾಗಿ ಕಾರ್ಯ ನಿರ್ವಹಿಸಬೇಕಾದ ಮಾಧ್ಯಮ ವಲಯವೂ ನವ ಉದಾರವಾದದಲ್ಲಿ ತನ್ನ ಮೂಲ ನೆಲೆಯನ್ನು ಕಳೆದುಕೊಂಡು ಮಾರುಕಟ್ಟೆಯ ಒಂದು ಭಾಗವಾಗಿದೆ. ಕರ್ನಾಟಕದ ಗ್ರಾಮಪಂಚಾಯತ್ ಚುನಾವಣೆಗಳಲ್ಲಿ ಪಂಚಾಯತ್ ಸದಸ್ಯ ಸ್ಥಾನಗಳನ್ನು ಹರಾಜು ಹಾಕಿರುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಶಾಸಕರ ಖರೀದಿ, ರೆಸಾರ್ಟ್ ರಾಜಕಾರಣ ಮತ್ತು ಮಾಧ್ಯಮಗಳ ವಂದಿಮಾಗಧ ಧೋರಣೆಗಳನ್ನು ನೋಡಿದರೆ ಈ ಬೆಳವಣಿಗೆಯಿಂದ ಅಚ್ಚರಿಯೇನೂ ಆಗಬೇಕಿಲ್ಲ. ಆಡಳಿತ ವ್ಯವಸ್ಥೆಯ ಎಲ್ಲ ಅಂಗಗಳೂ ಮಾರುಕಟ್ಟೆಯ ಸರಕುಗಳಾಗಿರುವ ಸಂದರ್ಭದಲ್ಲಿ ನಾವಿದ್ದೇವೆ. ಈ ಎಲ್ಲ ವಿದ್ಯಮಾನಗಳು ಸಂವಿಧಾನದ ಚೌಕಟ್ಟಿನಲ್ಲೇ ನಡೆಯುತ್ತಿವೆ, ಸಾಂವಿಧಾನಿಕ ಸಂಸ್ಥೆಗಳು ಕೈಕಟ್ಟಿ ಕುಳಿತಿವೆ. ಇದು ಏನನ್ನು ಸೂಚಿಸುತ್ತದೆ ?

ಕರ್ನಾಟಕವನ್ನೂ ಸೇರಿದಂತೆ ದೇಶದ ಇತರೆಡೆಗಳಲ್ಲಿ ಹೆಚ್ಚುತ್ತಿರುವ ಕಾರ್ಮಿಕ ಮುಷ್ಕರಗಳನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಎರಡು ಮುಷ್ಕರಗಳು ಗಮನ ಸೆಳೆಯುತ್ತವೆ. ಯಾವುದೇ ಕಾರ್ಮಿಕ ಸಂಘಟನೆಯೇ ಇಲ್ಲದೆ ಮಾಲಿಕ ವರ್ಗದ ವಿರುದ್ಧ ಹೋರಾಡಿದ ಕೋಲಾರದ ಬಳಿಯ ನರಸಾಪುರದ ವಿಸ್ಟ್ರಾನ್ ಐಫೋನ್ ಕಂಪನಿಯ ಮುಷ್ಕರ ಮತ್ತು ಅಧಿಕೃತ ಕಾರ್ಮಿಕ ಸಂಘಟನೆಯ ಆದೇಶವನ್ನೂ ಮೀರಿ ಬೆಂಗಳೂರು ಮತ್ತು ರಾಜ್ಯಾದ್ಯಂತ ನಡೆದ ಸಾರಿಗೆ ನೌಕರರ ಮುಷ್ಕರ. ಈ ಎರಡೂ ಕಾರ್ಮಿಕ ಮುಷ್ಕರಗಳಲ್ಲಿ ಲೋಪಗಳನ್ನು ಗುರುತಿಸುವ ಮುನ್ನ, ಈ ಕಾರ್ಮಿಕರು ಹಠಾತ್ತನೆ , ಏಕಾಏಕಿ ಬೀದಿಗೆ ಬಂದಿದ್ದಾದರೂ ಏಕೆ ಎಂದು ಯೋಚಿಸಿದಾಗ, ದುಡಿಯುವ ವರ್ಗಗಳ ಆತಂಕ, ಹತಾಶೆ ಮತ್ತು ಅನಿಶ್ಚಿತತೆ ಅರ್ಥವಾಗಲು ಸಾಧ್ಯ.

ವಿಸ್ಟ್ರಾನ್ ನಲ್ಲಿ ನಡೆದ ಘಟನೆ

ವಿಸ್ಟ್ರಾನ್ ಕಾರ್ಮಿಕರು ದಾಂಧಲೆ ನಡೆಸಿ, ಕಂಪನಿಯ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿರುವುದನ್ನೇ ಮುಂದಿಟ್ಟುಕೊಂಡು ಅಲ್ಲಿನ ಗುತ್ತಿಗೆ ಕಾರ್ಮಿಕರನ್ನು ಗೂಂಡಾಗಳಂತೆ ಬಣ್ಣಿಸಲಾಗುತ್ತಿದೆ. ಈ ದಾಂಧಲೆಗೆ ಕಮ್ಯುನಿಸ್ಟರೇ ಕಾರಣ ಎನ್ನುವ ಕ್ಷುಲ್ಲಕ ಆರೋಪಗಳೂ ಸಹ ಕೇಳಿಬರುತ್ತಿದೆ. ಕಾರ್ಮಿಕರ ಈ ರೀತಿಯ ಪ್ರವೃತ್ತಿಯನ್ನು ತಡೆಗಟ್ಟದೆ ಹೋದರೆ, ಕಾರ್ಮಿಕರ ಮೇಲೆ ನಿಯಂತ್ರಣ ಸಾಧಿಸದೆ ಹೋದರೆ ಆತ್ಮನಿರ್ಭರ ಭಾರತ ಸಾಧ್ಯವಾಗುವುದಿಲ್ಲ ಎಂಬ ವಿಶ್ಲೇಷಣೆಗಳು ದೇಶದ ಪ್ರಮುಖ ಪತ್ರಿಕೆಗಳಲ್ಲಿ ಹರಿದಾಡುತ್ತಿವೆ. ವಿಸ್ಟ್ರಾನ್ ಘಟನೆಯಲ್ಲಿ ಪ್ರಭುತ್ವಕ್ಕೆ ವಿಧ್ವಂಸಕರು ಕಾಣುತ್ತಿದ್ದಾರೆ. ಈ ಪ್ರವೃತ್ತಿಯನ್ನು ಹತ್ತಿಕ್ಕಲು ಬಹುಶಃ ಮುಂಬರುವ ದಿನಗಳಲ್ಲಿ ಅಲಿಖಿತ ನಿಯಮಗಳನ್ನು ರೂಪಿಸಲಾಗುತ್ತದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, “ ನಮ್ಮಲ್ಲಿ ಬಂದು ಉತ್ಪಾದನೆ ಮಾಡಿ, ನಾವು ನಿಮಗೆ ಸುಗಮ ಔದ್ಯಮಿಕ ಹಾದಿಯನ್ನು ನಿರ್ಮಿಸುತ್ತೇವೆ, ಯಾವುದೇ ಅಡೆತಡೆ ಇಲ್ಲದೆ ಉತ್ಪಾದನೆ ಮಾಡಿ ಲಾಭ ಗಳಿಸಿ ದೇಶದ ಆರ್ಥಿಕತೆಗೆ ಪುಷ್ಟಿ ನೀಡಲು ಮುಕ್ತ ಅವಕಾಶ ನೀಡುತ್ತೇವೆ ” ಎನ್ನುವ ಆಶ್ವಾಸನೆಯೊಂದಿಗೆ ವಿದೇಶಿ ಕಂಪನಿಗಳನ್ನು ಆಹ್ವಾನಿಸುತ್ತಿರುವ ಆತ್ಮನಿರ್ಭರ ಭಾರತದಲ್ಲಿ ಕಾರ್ಮಿಕರ ಹಕ್ಕೊತ್ತಾಯಗಳೇ ಅಡ್ಡಗೋಡೆಗಳಾಗಿಬಿಡುತ್ತವೆ. ವಿದೇಶದಲ್ಲಿರುವ ಒಂದು ಬೃಹತ್ ಉದ್ಯಮ ತನ್ನ ಉತ್ಪನ್ನಗಳ ತಯಾರಿಕೆಯನ್ನು ಭಾರತದಲ್ಲಿ ಬಂಡವಾಳ ಹೂಡುವ ಮತ್ತೊಂದು ಬಹುರಾಷ್ಟ್ರೀಯ ಅಥವಾ ಸ್ಥಳೀಯ ಉದ್ದಿಮೆಗೆ ಒಪ್ಪಿಸುತ್ತದೆ. ಈ ಉದ್ದಿಮೆಯ ಕಾರ್ಮಿಕರನ್ನು ನೇಮಿಸಲು ಪ್ರತ್ಯೇಕ ಗುತ್ತಿಗೆ ಕಂಪನಿಗಳಿಗೆ ಅವಕಾಶ ನೀಡಲಾಗುತ್ತದೆ. ಈ ಗುತ್ತಿಗೆ ಕಾರ್ಮಿಕರ ವೇತನ, ಭತ್ಯೆ, ಭವಿಷ್ಯ ನಿಧಿ ಎಲ್ಲವೂ ಗುತ್ತಿಗೆ ಕಂಪನಿಗಳ ಹೊಣೆಯಾಗಿರುತ್ತದೆ.

ತಾವು ಕೆಲಸ ಮಾಡುವ ಕಾರ್ಖಾನೆ ಅಥವಾ ಉತ್ಪಾದನೆಯ ಘಟಕದ ಆಡಳಿತ ಮಂಡಲಿಗೂ ಈ ಗುತ್ತಿಗೆ ಕಾರ್ಮಿಕರಿಗೂ ನೇರ ಸಂಬಂಧ ಇರುವುದಿಲ್ಲ. ನೌಕರಿಗೆ ಅವಶ್ಯವಾದ ದೈನಂದಿನ ಸೌಲಭ್ಯಗಳನ್ನು ಒದಗಿಸುವುದು ಮಾತ್ರ ಉತ್ಪಾದನಾ ಘಟಕದ ಹೊಣೆಯಾಗಿರುತ್ತದೆ. ಹಾಗಾಗಿ ಈ ಗುತ್ತಿಗೆ ನೌಕರರನ್ನು ಯಾವುದೇ ಸಂದರ್ಭದಲ್ಲಾದರೂ ಉಚ್ಚಾಟಿಸುವ ಆಯ್ಕೆ ಉತ್ಪಾದನಾ ಘಟಕಕ್ಕೆ ಇರುತ್ತದೆ. ಗುತ್ತಿಗೆ ಕಂಪನಿಗಳು ಈ ಕಾರ್ಮಿಕರನ್ನು ಒಮ್ಮಿಂದೊಮ್ಮೆಲೆ ಮತ್ತಾವುದೋ ಘಟಕದಲ್ಲಿ ಕಾರ್ಯ ನಿರ್ವಹಿಸಲು ನಿಯೋಜಿಸುವ ಅವಕಾಶವೂ ಇರುತ್ತದೆ. ಈ ಅನಿಶ್ಚಿತತೆ ಕಾರ್ಮಿಕರನ್ನು ಸದಾ ಕಾಡುತ್ತಲೇ ಇರುತ್ತದೆ. ಇದರಿಂದ ಉಂಟಾಗುವ ತಾತ್ಕಾಲಿಕ ಸಮಸ್ಯೆಗಳನ್ನು ನಿವಾರಿಸಲು ಗುತ್ತಿಗೆ ಕಂಪನಿ ಮತ್ತು ಉತ್ಪಾದಕ ಘಟಕದ ನಡುವೆ ಒಡಂಬಡಿಕೆ ಏರ್ಪಟ್ಟಿರುತ್ತದೆ. ಇದನ್ನು ಮೀರಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ಇರುವುದಿಲ್ಲ. ಇಂದು ವಿಶ್ವದಾದ್ಯಂತ ಗಾರ್ಮೆಂಟ್ ಉದ್ದಿಮೆ ಈ ರೀತಿಯ ಹೊರಗುತ್ತಿಗೆ ಒಪ್ಪಂದಗಳ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.

ಈ ಉದ್ದಿಮೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರಿಗೆ ಉದ್ಯೋಗ ಭದ್ರತೆ ಇರುವುದಿಲ್ಲ ಎನ್ನುವುದು ಗಂಭೀರ ವಿಚಾರ. ವಿಸ್ಟ್ರಾನ್ ಕಂಪನಿಯಲ್ಲಿ 8490 ಗುತ್ತಿಗೆ ಕಾರ್ಮಿಕರು ಯಾವುದೇ ಸಂಘಟನೆಯನ್ನು ಹೊಂದಿಲ್ಲ. ಗುತ್ತಿಗೆ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಈ ಗುತ್ತಿಗೆ ಕಾರ್ಮಿಕರು ಸಂಘಟಿತರಾಗುವ ಹಕ್ಕುಗಳನ್ನೂ ಕಳೆದುಕೊಂಡಿರುತ್ತಾರೆ. ಇದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುವ ಸಾಮಾನ್ಯ ಲಕ್ಷಣ ಎನ್ನಬಹುದು. ತಮಗೆ ನೌಕರಿ ಒದಗಿಸುವ ಗುತ್ತಿಗೆ ಕಂಪನಿಯ ಮೂಲವನ್ನೂ ಅರಿಯದೆ ಈ ಕಾರ್ಮಿಕರು ಅನಿಶ್ಚಿತತೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ತಮ್ಮ ನ್ಯಾಯಯುತ ವೇತನದಿಂದ ವಂಚಿತರಾದಾಗ ಕಾರ್ಮಿಕರು ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಾರೆ. ವಿಸ್ಟ್ರಾನ್ ಕಂಪನಿಯ ಘಟನೆಗಳ ಹಿಂದೆ ಈ ಸೂಕ್ಷ್ಮವನ್ನು ಗಮನಿಸುವುದು ಅಗತ್ಯ.

ಈ ಹಿನ್ನೆಲೆಯಲ್ಲಿ ಸಾರಿಗೆ ಕಾರ್ಮಿಕರ ಮುಷ್ಕರ ಮತ್ತು ಅದರ ಹಿಂದಿನ ಕೆಲವು ಹಿತಾಸಕ್ತಿಗಳ ಮೂಲ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಸಾರಿಗೆ ನಿಗಮಗಳ ನೌಕರರು ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ನಡೆಸಿದ ನಾಲ್ಕು ದಿನಗಳ ಮುಷ್ಕರದಲ್ಲಿ , ಸಂಘಟನಾತ್ಮಕ ಅಂಶಗಳಿಗಿಂತಲೂ ಕಾರ್ಮಿಕರಲ್ಲಿನ ದುಗುಡ ಮತ್ತು ಆತಂಕಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಸರ್ಕಾರಿ ನೌಕರರೆಂದು ಪರಿಗಣಿಸಲ್ಪಟ್ಟರೆ ತಮ್ಮ ನೌಕರಿ ಸುಭದ್ರವಾಗುತ್ತದೆ ಎನ್ನುವ ಸಹಜ ಕಲ್ಪನೆ ಈ ಮುಷ್ಕರದ ಹಿಂದಿದೆ. 50 ವರ್ಷಗಳ ಕಾಲ ಸಂಘಟನೆಯನ್ನು ಕಟ್ಟಿ ಬೆಳೆಸಿದ ಅಧಿಕೃತ ನೌಕರ ಸಂಘಟನೆಯ ಆದೇಶವನ್ನೂ ಲೆಕ್ಕಿಸದೆ ಹಠಾತ್ತನೆ ಉದ್ಭವಿಸಿದ ರೈತ ಚಳುವಳಿಯ ನಾಯಕರೊಬ್ಬರ ನೇತೃತ್ವವನ್ನು ಒಪ್ಪಿಕೊಳ್ಳುವ ಸಾರಿಗೆ ಕಾರ್ಮಿಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದರ ಬದಲು, ಅವರ ಈ ಆತಂಕಗಳನ್ನು ನಿವಾರಿಸುವಲ್ಲಿ ನಾವೆಲ್ಲಿ ಎಡವಿದ್ದೇವೆ ಎಂದು ಸಂಘಟಿತ ಕಾರ್ಮಿಕ ನಾಯಕರು ಯೋಚಿಸಬೇಕಿದೆ.

ಸಾರಿಗೆ ನೌಕರರ ಹಠಾತ್ ಮುಷ್ಕರದ ಮೂಲಕ ಭಾರತದ ಆಳುವ ವರ್ಗಗಳು ಕಾರ್ಮಿಕ ಐಕ್ಯತೆಯನ್ನು ಭಂಗಗೊಳಿಸುವ ಒಂದು ಹೊಸ ಮಾರ್ಗವನ್ನು ಶೋಧಿಸಿರುವುದು ಸ್ಪಷ್ಟ. ಹತಾಶೆಯ ಅಂಚಿಗೆ ದೂಡಲ್ಪಟ್ಟಿರುವ, ತಮ್ಮ ನಾಳಿನ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿರುವ ಮತ್ತು ಖಾಸಗೀಕರಣದ ಭೀತಿಯನ್ನು ಸದಾ ಎದುರಿಸುತ್ತಿರುವ ಬೃಹತ್ ಕಾರ್ಮಿಕ ವರ್ಗ ಸುಲಭವಾಗಿ ಆಳುವ ವರ್ಗಗಳ ಕುತಂತ್ರಗಳಿಗೆ ಬಲಿಯಾಗಿಬಿಡುತ್ತದೆ. ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಿಂತಲೂ, ಶ್ರಮಿಕ ವರ್ಗಗಳ ಐಕಮತ್ಯವನ್ನು ಭಂಗಗೊಳಿಸುವ ಮೂಲಕ ಪ್ರಭುತ್ವ ತನ್ನ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಲು ಬಯಸುತ್ತದೆ. ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಮುನ್ನಡೆಗೆ ಇದು ಅತ್ಯವಶ್ಯವಾದ ವಿದ್ಯಮಾನದಂತೆ ಕಂಡುಬರುತ್ತದೆ.

100 ವರ್ಷದ ಇತಿಹಾಸ ಇರುವ ಭಾರತದ ಕಾರ್ಮಿಕ ಚಳುವಳಿಗೆ ಇದು ಬೃಹತ್ ಸವಾಲಾಗಿ ಪರಿಣಮಿಸಿದೆ. ಆತ್ಮನಿರ್ಭರ ಭಾರತ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳನ್ನು ಸಂರಕ್ಷಿಸುವ ದೇಶ. ಇಲ್ಲಿ ಶ್ರಮಿಕರಿಗೆ ದಾಸ್ಯದ ಸಂಕೋಲೆಗಳನ್ನು ಸಿದ್ಧಪಡಿಸಿಯೇ ಅಭಿವೃದ್ಧಿಯ ನೀಲನಕ್ಷೆಗಳನ್ನು ಸಿದ್ಧಪಡಿಸಲಾಗುತ್ತದೆ. ಆತ್ಮನಿರ್ಭರ ಭಾರತಕ್ಕಾಗಿ ಬಂಡವಾಳ ಹೂಡುವ ಪ್ರತಿಯೊಂದು ಉದ್ದಿಮೆಗೂ , ಕಾರ್ಮಿಕರ ಪ್ರತಿಭಟನೆಯ ಹಕ್ಕು ಮತ್ತು ಸಂಘಟನೆಯ ಅವಕಾಶಗಳನ್ನು ಕಸಿದುಕೊಳ್ಳುವ ಭರವಸೆಯನ್ನು ನೀಡಲಾಗುತ್ತಿದೆ. ಈ ಆಶ್ವಾಸನೆಯನ್ನು ಈಡೇರಿಸಲೆಂದೇ ಗುತ್ತಿಗೆ ಕಾರ್ಮಿಕರನ್ನು ನೇಮಿಸುವ ಅಸಂಖ್ಯಾತ ಕಾರ್ಪೋರೇಟ್ ಉದ್ದಿಮೆಗಳು ಸೃಷ್ಟಿಯಾಗಿವೆ. ಕಾರ್ಮಿಕ ಮತ್ತು ಮಾಲಿಕನ ನಡುವಿನ ಸಂಬಂಧಗಳು ಇನ್ನೂ ಸಂಕುಚಿತವಾಗುತ್ತಿದ್ದು, ಶ್ರಮಿಕನು ತಾನು ಉತ್ಪಾದಿಸುವ ಸರಕುಗಳಿಂದ ಮತ್ತಷ್ಟು ದೂರವಾಗುತ್ತಿದ್ದಾನೆ.

ರೈಲ್ವೆ ಖಾಸಗೀಕರಣ ಪ್ರಕ್ರಿಯೆ ಚುರುಕಾಗುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನದ ನಂತರ ಈ ಕ್ಷೇತ್ರದಲ್ಲೂ ಹೊರಗುತ್ತಿಗೆಯ ನೀತಿಗೆ ಅಧಿಕೃತ ಸ್ವರೂಪವನ್ನು ನೀಡಲಾಗುತ್ತದೆ. ರಸ್ತೆ ಸಾರಿಗೆ ನಿಗಮಗಳು ಯಾವುದೇ ಸಂದರ್ಭದಲ್ಲಿ ಖಾಸಗಿ ಕ್ಷೇತ್ರದ ಪಾಲಾಗುವ ಸಾಧ್ಯತೆಗಳನ್ನೂ ತಳ್ಳಿಹಾಕಲಾಗುವುದಿಲ್ಲ. 12 ಗಂಟೆಯ ದುಡಿಮೆ ಈಗ ಬಹುಪಾಲು ಅಧಿಕೃತವಾಗಿದ್ದು ಕಾರ್ಮಿಕರು ತಮ್ಮ ಬದುಕಿನ ಅವಧಿಯನ್ನು ಹೆಚ್ಚುವರಿಯಾಗಿ ದುಡಿಮೆಯಲ್ಲೇ ಕಳೆಯಬೇಕಿದೆ. ಈ ಸಂದರ್ಭದಲ್ಲಿ ಭಾರತದ ಕಾರ್ಮಿಕ ಚಳುವಳಿ ತನ್ನ ಸ್ವರೂಪ ಮತ್ತು ಧ್ಯೇಯಗಳನ್ನು ಕುರಿತು ಮರುಚಿಂತನೆ ಮಾಡಬೇಕಿದೆ. ಒಂದು ವೇದಿಕೆಯಡಿ, ಸಂಯುಕ್ತ ರಂಗದ ಮೂಲಕ, ಐಕಮತ್ಯ ಪ್ರದರ್ಶಿಸುವ ಪ್ರಯತ್ನಗಳು ಫಲಗೂಡುತ್ತಿವೆ. ಆದರೆ ಇದರೊಟ್ಟಿಗೆ ಐಕಮತ್ಯವನ್ನು ಭಂಗಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಭಾರತದ ಕಾರ್ಮಿಕರ ಮುಂದೆ ಕೇವಲ ಆರ್ಥಿಕ ಸುಸ್ಥಿರತೆ ಮತ್ತು ಸುಭದ್ರ ಬದುಕಿನ ಪ್ರಶ್ನೆ ಮಾತ್ರವೇ ಇಲ್ಲ. ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮತ್ತು ರಾಜಕೀಯ ಅಧಿಕಾರದ ಸವಾಲುಗಳನ್ನೂ ಎದುರಿಸಬೇಕಿದೆ. ತಮ್ಮ ವ್ಯಕ್ತಿಗತ ಬದುಕನ್ನೂ ಮೀರಿದ ಒಂದು ಜಗತ್ತು ನಾಲ್ಕು ಗೋಡೆಗಳಿಂದಾಚೆ ಇರುವುದನ್ನು ಸಂಘಟಿತ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳು ಗುರುತಿಸಬೇಕಿದೆ. ಈ ಜಗತ್ತಿನಲ್ಲಿ ಅಸ್ಪೃಶ್ಯತೆ, ಅಸಮಾನತೆ, ಮತಾಂಧತೆ, ಜಾತಿ ದ್ವೇಷ ಎಲ್ಲವೂ ಜೀವಂತವಾಗಿವೆ. ಇವೆಲ್ಲವನ್ನೂ ಪೋಷಿಸುವ ಮೂಲಕವೇ ಪ್ರಭುತ್ವ ಕಾರ್ಮಿಕರ ಐಕ್ಯತೆ ಮತ್ತು ಐಕಮತ್ಯವನ್ನು ಭಂಗಗೊಳಿಸುತ್ತಾ, ವಿಭಜಿಸುತ್ತಾ ಮುನ್ನಡೆಯುತ್ತದೆ.

ವಿಸ್ಟ್ರಾನ್ ಮತ್ತು ಸಾರಿಗೆ ಕಾರ್ಮಿಕರ ಮುಷ್ಕರದಲ್ಲಿ ಈ ಸೂಕ್ಷ್ಮಗಳನ್ನು ಗ್ರಹಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಶತಮಾನದ ಇತಿಹಾಸ ಇರುವ ಕಾರ್ಮಿಕ ಸಂಘಟನೆಗಳು ತಮ್ಮ ಹೊಣೆಗಾರಿಕೆಯನ್ನು ಅರಿತು, ಅಸ್ಮಿತೆಗಳ ಲೋಕದಿಂದ ಹೊರಬಂದು, ಹೊಸ ವಂಚಿತ ಅಸ್ಮಿತೆಗಳನ್ನು ಗುರುತಿಸಬೇಕಿದೆ. ಶ್ರಮಿಕರ ನಡುವೆಯೇ ಇರುವ ಈ ವಂಚಿತ ಅಸ್ಮಿತೆಗಳು ಅಸಮಧಾನದಿಂದ ಹತಾಶವಾಗುತ್ತಿರುವುದನ್ನು ಗಮನಿಸಬೇಕಿದೆ. ಈ ಅಸಮಧಾನವೇ ಐಕ್ಯತೆಗೆ ಮಾರಕವಾಗುವ ಸಾಧ್ಯತೆಗಳನ್ನು ಗ್ರಹಿಸಬೇಕಿದೆ. ಈ ಹೊತ್ತಿನಲ್ಲಿ ದೇಶದ ಕಾರ್ಮಿಕ ಚಳುವಳಿಗೆ ಹೊಸ ನೂತನ ಸ್ಪರ್ಶ ನೀಡುವುದೇ ಆದರೆ ನಮ್ಮ ಸುತ್ತಲಿನ ಪೊರೆಗಳನ್ನು ಕಳಚಿಹಾಕಿ ಹೊರಬರಬೇಕಿದೆ.

2020 ಈ ನಿಟ್ಟಿನಲ್ಲಿ ಜ್ಞಾನೋದಯದ ವರ್ಷ ಎಂದರೂ ಅಡ್ಡಿಯಿಲ್ಲ.. ಪೌರತ್ವ ತಿದ್ದುಪಡಿ ಕಾಯ್ದೆ, ಕೋವಿದ್ ಸಂದರ್ಭದ ವಲಸೆ ಕಾರ್ಮಿಕರ ಬವಣೆ, ಕೋಟ್ಯಂತರ ರೈತರ ಸುದೀರ್ಘ ಮುಷ್ಕರ ಮತ್ತು ವಿವಿಧ ನೆಲೆಗಳಲ್ಲಿ ಸ್ಫೋಟಿಸುತ್ತಿರುವ ಕಾರ್ಮಿಕರ ಆಕ್ರೋಶ ಇವೆಲ್ಲವೂ ಶ್ರಮಜೀವಿಗಳಿಗೆ ಸಂಬಂಧಪಟ್ಟಿರುವುದನ್ನು ಗಮನಿಸಲು ಈ ವರ್ಷದ ಬೆಳವಣಿಗೆಗಳು ಅವಕಾಶ ನೀಡಿವೆ. ಸಂಘಟಿತ ಕಾರ್ಮಿಕ ವಲಯ ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡರೆ ಭಾರತದ ಶ್ರಮಿಕರ ಭವಿಷ್ಯದಲ್ಲಿ ಬೆಳಕು ಕಾಣಲು ಸಾಧ್ಯ. ಇದು ಚಾರಿತ್ರಿಕ ಸತ್ಯವೂ ಹೌದು, ಸವಾಲೂ ಹೌದು.

Donate Janashakthi Media

Leave a Reply

Your email address will not be published. Required fields are marked *