ಕಾರ್ಮಿಕ ದಿನದ ಉಡುಗೊರೆ: ನಿರುದ್ಯೋಗ ಭತ್ಯೆ ಕಟ್

ಸೆಪ್ಟೆಂಬರ್ ನಲ್ಲಿ ಯಾವ ಕಾರ್ಮಿಕ ದಿನ ಎಂದಿರಾ? ಹೌದು. ಇಡೀ ಜಗತ್ತಿನಲ್ಲಿ ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸಿದರೆ, ಮೇ ದಿನದ ಹುತಾತ್ಮರ ನಾಡಾದ ಯು.ಎಸ್.ನಲ್ಲಿ (ಬಹುಶಃ ಸಮರಶೀಲ ಕಾರ್ಮಿಕರ ಹೋರಾಟ ಮರೆಸಲೆಂದೇ ಮೇ 1 ರ ಬದಲು) ಸೆಪ್ಟೆಂಬರ್ ಮೊದಲ ಸೋಮವಾರವನ್ನು ‘ಕಾರ್ಮಿಕ ದಿನ’ವಾಗಿ ಆಚರಿಸಲಾಗುತ್ತದೆ. ಈ ಕಾರ್ಮಿಕ ದಿನದಂದು (ಸೆ.6) ಯು.ಎಸ್ ಸರಕಾರ ಕೋವಿಡ್‌ ಮಹಾಸೋಂಕಿನಿಂದ ನಿರುದ್ಯೋಗಿಯಾದ ಕಾರ್ಮಿಕರಿಗೆ ಒಂದು “ವಿಶೇಷ ಕೊಡುಗೆ” ನೀಡಿತು. ಅವರಿಗೆ ಕಳೆದ 18 ತಿಂಗಳಿಂದ ಕೇಂದ್ರ ಸರಕಾರ ಕೊಡುತ್ತಿದ್ದ ನಿರುದ್ಯೋಗ ಭತ್ಯೆಯನ್ನು ನಿಲ್ಲಿಸಿದೆ. ಇದು ಸುಮಾರು 93 ಲಕ್ಷ ನಿರುದ್ಯೋಗಿ ಕಾರ್ಮಿಕರನ್ನು ಮತ್ತು ಅವರ ಕುಟುಂಬದ 2.6 ಕೋಟಿ ಜನರನ್ನು ಬಾಧಿಸಲಿದೆ. ಇದರ ಜತೆಗೆ ಬಾಡಿಗೆ ಪಾವತಿ ಮಾಡಿದ್ದಕ್ಕೆ ಮತ್ತು ಸಾಲದ ಕಂತು ಕಟ್ಟದ್ದಕ್ಕೆ ಮನೆ ಬಿಡಿಸುವುದರ ಮೇಲಿದ್ದ ನಿಷೇಧವನ್ನೂ ಹಿಂತೆಗೆದುಕೊಳ್ಳಲಾಗಿದೆ. ಕೋವಿಡ್‌ ನ ಡೆಲ್ಟಾ ರೂಪಾಂತರದಿಂದಾಗಿ ಕೋವಿಡ್ ಮಹಾಸೋಂಕು ಸರಾಸರಿ ವಾರಕ್ಕೆ 1.32 ಲಕ್ಷ ಹೊಸ ಸೋಂಕಿತರು ಪತ್ತೆಯಾಗುತ್ತಿರುವಾಗ ಈ ಕಡಿತ ಮಾಡಲಾಗುತ್ತಿದೆ, ಕೊವಿದ್ ಮಹಾಸೋಂಕಿನಿಂದ ನಿರುದ್ಯೋಗಿಯಾದ ಕಾರ್ಮಿಕರಿಗೆ ವಾರಕ್ಕೆ 600 ಡಾಲರು ಮತ್ತು ಅವರು ಉದ್ಯೋಗ ಕಳೆದುಕೊಂಡಾಗ ಒಂದು ಬಾರಿಗೆ 1200 ಡಾಲರು ನೆರವು ನೀಡುತ್ತಿತ್ತು.

ಈ ಕಡಿತಕ್ಕೆ ನಿರುದ್ಯೋಗ ಭತ್ಯೆಗೆ ಅರ್ಜಿಗಳು ಕಡಿಮೆಯಾಗುತ್ತಿರುವುದು (ಮಾರ್ಚ್ 2020 ನಂತರದ ಅತಿ ಕಡಿಮೆ ಸಂಖ್ಯೆ 3.4 ಲಕ್ಷ) ಮತ್ತು ನಿರುದ್ಯೋಗ ದರ (ಎಪ್ರಿಲ್ 2020ರಲ್ಲಿ ಶೇ. 14.8 ರಿಂದ ಈಗಿನ ಶೇ.5.2ಕ್ಕೆ ಇಳಿಕೆ) ಕಡಿಮೆಯಾಗುತ್ತಿರುವುದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂಬುದು ಸರಕಾರದ ಸಮಜಾಯಿಷಿ. ಆದರೆ ನಿರುದ್ಯೋಗದ ದರ ಇನ್ನೂ ಕೊವಿದ್-ಪೂರ್ವ ಮಟ್ಟಕ್ಕಿಂತ ಹೆಚ್ಚಿದೆ. ನಿರುದ್ಯೋಗ ಭತ್ಯೆಗೆ ಕಡಿತ ಒಮ್ಮೆಗೆ ಬಂದಿದ್ದಲ್ಲ. ಡಿಸೆಂಬರ್ 2020ರಲ್ಲಿ ಈ ಯೋಜನೆಯನ್ನು ಮುಂದುವರಿಸಿದಾಗಲೇ ವಾರಕ್ಕೆ 600 ಡಾಲರಿನಿಂದ 300 ಡಾಲರಿಗೆ ಮತ್ತು ಒಂದು ಬಾರಿಗೆ ಕೊಡುವ ನೆರವಾದ 1200 ಡಾಲರನ್ನು 600 ಡಾಲರಿಗೆ ಕಡಿತ ಮಾಡಿತ್ತು. ಅಲ್ಲದೆ 50ರಲ್ಲಿ 25 ಪ್ರಾಂತಗಳು (ಹೆಚ್ಚಾಗಿ ರಿಪಬ್ಲಿಕನ್ ಆಡಳಿತವಿರುವ ರಾಜ್ಯಗಳು) ನಿರುದ್ಯೋಗ ಭತ್ಯೆಯನ್ನು ಜುಲೈ 2021ರಲ್ಲೇ ನಿಲ್ಲಿಸಿದ್ದವು.

Donate Janashakthi Media

Leave a Reply

Your email address will not be published. Required fields are marked *