ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ–2023’ ಮಂಡಿಸಿದರು. ಇದರಿಂದ ಕಾರ್ಖಾನೆಗಳಲ್ಲಿ ಕಾರ್ಮಿಕರ ಕೆಲಸದ ಅವಧಿ 9 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಮಸೂದೆ ಅಂಗೀಕಾರಗೊಂಡಿದೆ.
ರಾಜ್ಯ ಬಿಜೆಪಿ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಕೆಲಸದ ಅವಧಿ 3 ಗಂಟೆ ಹೆಚ್ಚಳ ಮಾಡಿದ್ದು, ಅವಧಿ ಮೀರಿ ಕೆಲಸ ಮಾಡುವ ಕೆಲಸಗಾರನಿಗೆ ದುಪ್ಪಟ್ಟು ದರ ಮಜೂರಿ ನೀಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಮಹಿಳೆಯರು ಕಾರ್ಖಾನೆಗಳಲ್ಲಿ ಹಗಲು-ರಾತ್ರಿ ಕೆಲಸ ಮಾಡಲು ಅನುವು ಮಾಡಿಕೊಡಲಾಗಿದೆ. ದಿನದ 24 ಗಂಟೆಯ ಅವಧಿಯಲ್ಲಿ ಯಾವ ಹೊತ್ತಿನಲ್ಲಾದರೂ ಕೆಲಸ ಮಾಡುವ ಅನುಮತಿ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಕಾನೂನು ರೂಪಿಸಲಿದೆ.
ಇದನ್ನು ಓದಿ: ಕಾರ್ಮಿಕ ಸಂಘಗಳನ್ನೇ ಹೊರಗಿಟ್ಟ ತಿರುಪತಿ ‘ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ’!
ತಿದ್ದುಪಡಿ ಮಾಡಲಾದ ಮಸೂದೆಯ ಪ್ರಕಾರ ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶ ಸೃಜಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿದೆ. ಹೊಸ ಕಾಯ್ದೆ ಜಾರಿಯ ನಂತರ ವಾರದಲ್ಲಿ ಗರಿಷ್ಠ 48 ಗಂಟೆಗಳಿಗೆ ಒಳ ಪಟ್ಟು, ವಿರಾಮ, ಮಧ್ಯಂತರಗಳನ್ನು ಒಳಗೊಂಡಂತೆ ಕೆಲಸದ ಅವಧಿ (ದೈನಂದಿನ ಗರಿಷ್ಠ) 9 ರಿಂದ 12 ಗಂಟೆಗೆ ಹೆಚ್ಚಲಿದೆ. ಇದಕ್ಕೆ ಕೆಲಸಗಾರನ ಲಿಖಿತ ಒಪ್ಪಿಗೆಯ ಅಗತ್ಯವಿದ್ದು, ಆಗ ಮಾತ್ರ ಕೆಲಸದ ಅವಧಿ 12 ಗಂಟೆಗಳಿಗೆ ವಿಸ್ತರಿಸಬಹುದು’ ಎನ್ನಲಾಗಿದೆ.
‘ಕೆಲಸಗಾರನಿಗೆ ವಾರದ ಉಳಿದ ದಿನಗಳು ಪಾವತಿ ರಜಾ ದಿನಗಳ ಪರಿಗಣನೆ. ಒಬ್ಬ ಕಾರ್ಮಿಕ ದಿನಕ್ಕೆ 12 ಗಂಟೆಗಳಂತೆ 48 ಗಂಟೆ ಕೆಲಸ ಮಾಡಿದರೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಿದಂತೆ ಆಗುತ್ತದೆ. ಉಳಿದ ದಿನಗಳನ್ನು ಪಾವತಿ ರಜಾ ದಿನಗಳನ್ನಾಗಿ ಪರಿಗಣಿಸಬೇಕಾಗುತ್ತದೆ’ ಎಂದು ವಿವರಿಸಿದರು.
ಇದನ್ನು ಓದಿ: ʻಸೇವೆ-ಸುಶಾಸನ-ಕಲ್ಯಾಣʼ – ಕಾರ್ಪೊರೇಟ್ ಕುಳಗಳಿಗೆ
‘ಕಾರ್ಖಾನೆಗಳಲ್ಲಿ ಕೆಲಸಗಾರ ಯಾವುದೇ ಮಧ್ಯಂತರವಿಲ್ಲದೇ, ಕೆಲಸದ ಅವಧಿ 6 ಗಂಟೆಗಳವರೆಗೆ ವಿಸ್ತರಣೆ ನೀಡಲಾಗಿದೆ. ಈ ಆಯ್ಕೆಯು ಕೆಲಸಗಾರನಿಂದ ಒಪ್ಪಿಗೆ ಇರಬೇಕಾಗಿದೆ. 6 ಗಂಟೆ ನಂತರ ಹೆಚ್ಚುವರಿ ಕೆಲಸ ಮಾಡಿದರೂ ದುಪ್ಪಟ್ಟು ದರದ ಮಜೂರಿ ನೀಡಬೇಕಾಗುತ್ತದೆ.
ವಾರದ ಐದು ದಿನಗಳು ಕೆಲಸ ಮಾಡುವಾಗ, ಯಾವುದೇ ದಿನದಲ್ಲಿ 10 ಗಂಟೆಗಳಿಗಿಂತ ಹೆಚ್ಚು ಅಥವಾ ಯಾವುದೇ ವಾರದಲ್ಲಿ 48 ಗಂಟೆಗಳಿಂತ ಹೆಚ್ಚು ಕೆಲಸ ಮಾಡಿದರೆ, ಯಾವುದೇ ವಾರದಲ್ಲಿ ನಾಲ್ಕು ದಿನಗಳು ಕೆಲಸ ಮಾಡುವಾಗ ಅಥವಾ ಪಾವತಿ ರಜಾ ದಿನಗಳಲ್ಲಿ ಕೆಲಸ ಮಾಡುವಾಗ ಹನ್ನೊಂದುವರೆ ಗಂಟೆಗಳಿಗಿಂತ ಹೆಚ್ಚಾದಲ್ಲಿ ಕೆಲಸಗಾರ ದುಪ್ಪಟ್ಟು ಮಜೂರಿಗೆ ಅರ್ಹನಾಗುತ್ತಾನೆ.
ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ಇದ್ದ ನಿರ್ಬಂಧ ತೆರವು
ಸದನದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಮಾತನಾಡಿ, ಮಹಿಳೆಯರು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಲಾಗಿದೆ. ಕರ್ನಾಟಕ ಈಗಾಗಲೇ ಕಾರ್ಖಾನೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡಲಾಗುತ್ತಿದೆ. ಸರ್ಕಾರ ಕೂಡ ಒಪ್ಪಿಗೆ ನೀಡಿದ್ದ ಹಿನ್ನೆಲೆಯಲ್ಲಿ ಸದನದಲ್ಲಿಯೂ ಅಂಗೀಕಾರ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಕಾರ್ಖಾನೆ ಕಾಯ್ದೆ, 1948 ರ ಅಡಿಯಲ್ಲಿ ನೋಂದಾಯಿಸಲಾದ ಕಾರ್ಖಾನೆಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ (ಸಂಜೆ 7 ರಿಂದ ಬೆಳಿಗ್ಗೆ 6 ರ ನಡುವೆ) ಕೆಲಸ ಮಾಡಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಮಹಿಳಾ ಕಾರ್ಮಿಕರಿಂದ ಲಿಖಿತ ಒಪ್ಪಿಗೆಯನ್ನು ಪಡೆದುಕೊಳ್ಳಬೇಕೆಂದು ತಿಳಿಸಲಾಗಿತ್ತು.
ಇದನ್ನು ಓದಿ: ಕಾರ್ಮಿಕ ಹಕ್ಕುಗಳಿಂದ ವಂಚಿತ ಅಂತರ-ರಾಜ್ಯ ವಲಸೆ ಕಾರ್ಮಿಕರು
ಕಾಯ್ದೆಯ ಪ್ರಕಾರ ದುಡಿಮೆ ಮತ್ತು ಗಳಿಕೆಯಲ್ಲಿ ಸಮಾನತೆ ಮತ್ತು ಸಮಾನ ಅವಕಾಶವನ್ನು ನೀಡಲು ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯವನ್ನು ಖಾತರಿಪಡಿಸುವ ಷರತ್ತಿಗೆ ಒಳಪಟ್ಟು ದಿನದ 24 ಗಂಟೆಯಲ್ಲಿ ಯಾವ ಅವಧಿಯಲ್ಲಿ ಬೇಕಾದರೂ ಕೆಲಸ ಮಾಡಬಹುದಾಗಿದೆ. ಅವಧಿ ಮೀರಿ ಕೆಲಸಕ್ಕಾಗಿ (ಓವರ್ ಟೈಮ್) ಮಹಿಳಾ ಕೆಲಸಗಾರರಿಗೆ ಅನುವು ಮಾಡಿಕೊಡುವುದಕ್ಕಾಗಿ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಕೆಲಸಗಾರರಿಂದ ಲಿಖಿತ ಒಪ್ಪಿಗೆ ಪಡೆದು ಅವಕಾಶ ನೀಡಬಹುದಾಗಿದೆ.
- ರಾತ್ರಿ ಪಾಳಿಯಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸಾಕಷ್ಟು ಮಹಿಳಾ ಭದ್ರತೆಯನ್ನು ನೀಡಬೇಕು.
- ಮಹಿಳಾ ಕಾರ್ಮಿಕರು ಮುಂಚಿತವಾಗಿ ಆಗಮಿಸಲು ಮತ್ತು ಕೆಲಸದ ಬಳಿಕ ವಿಶ್ರಮಿಸಲು ವಿಶ್ರಾಂತಿ ಕೊಠಡಿಗಳು ಇರಬೇಕು.
- ಮಹಿಳಾ ಕಾರ್ಮಿಕರು ತಮ್ಮ ಮನೆಯಿಂದ ಕೆಲಸ ಸ್ಥಳದವರೆಗೆ ಮತ್ತು ಅಲ್ಲಿಂದ ಹಿಂದಿರುಗಲು (ರಾತ್ರಿ ಪಾಳಿ ಮಾತ್ರ) ಸಾರಿಗೆ ಸೌಲಭ್ಯ ವ್ಯವಸ್ಥೆ.
- ವಾಹನಗಳಲ್ಲಿ ಭದ್ರತಾ ಸಿಬ್ಬಂದಿ (ಮಹಿಳಾ ಭದ್ರತಾ ಸಿಬ್ಬಂದಿಯೂ ಒಳಗೊಂಡು) ಒದಗಿಸಬೇಕು.
- ವಾಹನಗಳಲ್ಲಿ ಸಿಸಿಟಿವಿ ಕ್ಯಾಮರಾ ಮತ್ತು ಜಿಪಿಎಸ್ ವ್ಯವಸ್ಥೆ ಇರಬೇಕು.
- ಮಹಿಳಾ ಉದ್ಯೋಗಿಗಳ ದೂರವಾಣಿ ಸಂಖ್ಯೆ, ವಿಶೇಷವಾಗಿ ಮೊಬೈಲ್ ಸಂಖ್ಯೆಗಳು ಇ–ಮೇಲ್ ಐಡಿ ಮತ್ತು ವಿಳಾಸವನ್ನು ಅನಧಿಕೃತ ವ್ಯಕ್ತಿಗಳಿಗೆ ಬಹಿರಂಗಪಡಿಸಬಾರದು.
- ಪಾಳಿ ಬದಲಾಗುವ ವೇಳೆಯ ಮಧ್ಯದ ವಿರಾಮ ಅಥವಾ ಅಂತರವು ನಿರಂತರ 12 ಗಂಟೆಗಳಿಗಿಂತ ಕಡಿಮೆ ಇರಬಾರದು.
- ಮಹಿಳಾ ಸಿಬ್ಬಂದಿಯನ್ನು ಕರೆದೊಯ್ಯುವ ವಾಹನ ಚಾಲಕನ ವೈಯಕ್ತಿಕ ಹಾಗೂ ಸಂಪೂರ್ಣ ದಾಖಲಾತಿ ಪರಿಶೀಲನೆಗೆ ಒಳಪಟ್ಟಿರಬೇಕು.
- ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಕಡ್ಡಾಯ ಅಥವಾ ಕಟ್ಟುಪಾಡು ವಿಧಿಸುವಂತಿಲ್ಲ. ಆಸಕ್ತಿ ಇರುವ ಮಹಿಳಾ ನೌಕರರಿಂದ ಲಿಖಿತ ಸಮ್ಮತಿ ಪಡೆಯಲೇಬೇಕು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ