ಕರ್ನಾಟಕದ ಕಡಲಲ್ಲಿ ಮೀನುಗಾರಿಕೆ ಮಿತಿಮೀರಿದೆ. ಕಡಲ ಮೀನುಗಾರಿಕೆಯಲ್ಲಿ ಬಂಗಡೆ, ಭೂತಾಯ್ ಮುಂತಾದ ಮೀನುಗಳ ಲಭ್ಯತೆ ಗಣನೀಯವಾಗಿ ಕುಸಿದಿದೆ. ಒಂದು ವರದಿಯ ಪ್ರಕಾರ ಈ ಎರಡು ವಿಧಗಳ ಮೀನುಗಳ ಲಭ್ಯತೆ 2017 ಮತ್ತು 2018ರ ನಡುವೆ ಅನುಕ್ರಮವಾಗಿ ಶೇಕಡಾ 59 ರಿಂದ ಶೇಕಡ 22ಕ್ಕೆ ಕುಸಿದಿದೆ. ಇದು ಜನಜೀವನದ ಮೇಲೆ ಮಾತ್ರವಲ್ಲ ಕಡಲ ತೀರದ ಜನರ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರುತ್ತದೆ.
ಸಮಸ್ಯೆಯ ಒಂದು ಕಾರಣ ಏನೆಂದರೆ ಈ ಮೀನುಗಳು ಆಹಾರವಾಗಿಯೂ ಮೀನಿನೆಣ್ಣೆ ತಯಾರಿಸುವ ಕಾರ್ಖಾನೆಗೆ ಅವಶ್ಯ ಕಚ್ಚಾ ಪದಾರ್ಥಗಳಾಗಿ ಬಳಕೆಯಾಗುತ್ತಿರುವುದು. ಇಂತಹ ಕಾರ್ಖಾನೆಗಳು ಕರಾವಳಿ ಕರ್ನಾಟಕದಲ್ಲಿ ಕೇಂದ್ರೀಕರಿಸಿವೆ. ಕರ್ನಾಟಕದಲ್ಲಿ ಇಂತಹ 34 ಬೃಹತ್ ಕಾರ್ಖಾನೆಗಳು ಇವೆ. 15 ಅತಿ ದೊಡ್ಡ ಮೀನಿನೆಣ್ಣೆ ರಪ್ತು ಮಾಡುವ ಕಾರ್ಖಾನೆಗಳು ಸಹ ಕರ್ನಾಟಕದಲ್ಲಿವೆ.
ಈ ಕಾರ್ಖಾನೆಗಳು ಅಧಿಕ ಪೌಷ್ಠಿಕಾಂಶಗಳಿರುವ ಮೀನುಗಳನ್ನು ಮೀನು ಸಾಕಾಣಿಕೆಗೆ ಬೇಕಾಗುವ ಮೀನು ಆಹಾರವನ್ನು ತಯಾರಿಸಲು ಬಳಸುತ್ತವೆ. ಕೃಷಿ ಹಾಗೂ ಕೋಳಿ ಸಾಕಾಣಿಗೂ ಮೀನುಗಳ ಬಳಕೆಯಾಗುತ್ತದೆ.
ಮಿತಿಮೀರಿದ ಮೀನುಗಾರಿಕೆ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೊಡ್ಡ ದೊಡ್ಡ ವರ್ತಕರು ದೊಡ್ಡ ಪ್ರಮಾಣದಲ್ಲಿ ಮೀನು ಖರೀದಿ ಮಾಡಿ ಶೀತಲೀಕೃತ ಉಗ್ರಾಣಗಳಲ್ಲಿ ದಾಸ್ತಾನು ಮಾಡಿ ಇಟ್ಟು ಬೆಲೆಗಳು ಏರಿದಾಗ ಮಾರಾಟ ಮಾಡುತ್ತಾರೆ.
ಕರ್ನಾಟಕದ ಕಡಲಲ್ಲಿ ಯಾಂತ್ರೀಕೃತ ದೋಣಿಗಳ ಮೂಲಕ ಬಲೆ ಬೀಸಿ ಮೀನು ಹಿಡಿಯುವಾಗ ದೊಡ್ಡ ಪ್ರಮಾಣದ ಮರಿ ಮೀನುಗಳು ನೀರಿನಿಂದ ಹೊರಬಿದ್ದು ನಾಶವಾಗುತ್ತವೆ. ಇದು ಸಹ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಕಡಲಿನಲ್ಲಿ ಇಂತಹ ಮೀನುಗಳ ಪ್ರಮಾಣ ಗಣನೀಯವಾಗಿ ಕುಸಿಯಲು ಇದು ಒಂದು ಕಾರಣವಾಗಿದೆ. ಬಂಗಡೆ ಮೀನು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿತ್ತು. 2017 ಮತ್ತು 2018 ರಲ್ಲಿ ವಾಣಿಜ್ಯ ದೃಷ್ಟಿಯಿಂದ ಪ್ರಥಮ ಸ್ಥಾನದಲ್ಲಿದ್ದ ಈ ಮೀನು 2019ಕ್ಕೆ 5ನೇ ಸ್ಥಾನಕ್ಕೆ ಕುಸಿಯಿತು. 2018 ಭೂತಾಯ್ ಮೀನು ಕೇವಲ 40,000 ಟನ್ ಲಭ್ಯವಾಗಿತ್ತು. 2014ಕ್ಕೆ ಹೋಲಿಸಿದರೆ ಶೇಕಡ 72 ಕುಸಿತ ಉಂಟಾಯಿತು. ಈ ಪ್ರಮಾಣದ ಕುಸಿತದಿಂದಾಗಿ ಮೀನಿನೆಣ್ಣೆ ರಫ್ತು ವಾಣಿಜ್ಯವು ಅಷ್ಟೇ ಪ್ರಮಾಣದಲ್ಲಿ ಕುಸಿಯಿತು.
ತಜ್ಞರ ಅಭಿಪ್ರಾಯ ಪ್ರಕಾರ ಮರಿ ಮೀನುಗಳ ಅನಿಯಂತ್ರಿತ ಮೀನುಗಾರಿಕೆಯಿಂದಾಗಿ ಮತ್ಸ್ಯ ಸಂಪತ್ತು ಲೂಟಿಯಾಗುತ್ತದೆ. ಕಡಲ ಉದರ ಬರಿದಾಗುತ್ತಿದೆ. ಮೀನಿನ ಬೆಲೆ ಗಗನಕ್ಕೇರುತ್ತದೆ. ಕಡಿಮೆ ಆದಾಯದ ಕುಟುಂಬಗಳು ಸುಲಭವಾಗಿ ಸಿಗುತ್ತಿದ್ದ ಪೌಷ್ಠಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಮರಿ ಮೀನುಗಳು ಬಲೆಯಲ್ಲಿ ಸಿಕ್ಕಿಹಾಕಿಕೊಂಡು ನಾಶವಾಗುವುದನ್ನು ತಡೆಯಲು 35ಎಂಎಂನ ಚೌಕಾಕಾರದ ಬಲೆಗಳನ್ನೇ ಬಳಕೆ ಮಾಡಬೇಕೆಂದು ನಿರ್ದೇಶನವಿದ್ದರೂ ಬಹುತೇಕ ದೋಣಿಗಳು ಚಿಕ್ಕ ಗಾತ್ರದ ವಜ್ರ ಆಕಾರದ ಬಲೆಗಳನ್ನೇ ಉಪಯೋಗಿಸಿ ಮರಿ ಮೀನುಗಳ ಮಾರಣ ಹೋಮಕ್ಕೆ ಕಾರಣ ಆಗುತ್ತವೆ.
ಮೀನುಗಾರಿಕೆಯಲ್ಲಿ ಹಿಡಿಯಬಹುದಾದ ಮೀನುಗಳ ಕನಿಷ್ಠ ಗಾತ್ರವನ್ನು ಕಾನೂನಾತ್ಮಕವಾಗಿ ನಿಗದಿಪಡಿಸಿದ್ದು ಕೇರಳ ಸರ್ಕಾರ. ಈಗ ಅದು ಆಂತರಿಕ ಮೀನುಗಾರಿಕೆಗೂ ಸಮಾನವಾದ ನಿಯಮಗಳನ್ನು ರಚಿಸಲು ಮುಂದಾಗಿದೆ. ಈ ನಿಯಮಗಳು ವ್ಯಾಪಕ ಜನಮನ್ನಣೆಗೆ ಪಾತ್ರವಾಗಿದೆ ಮಾತ್ರವಲ್ಲ ಮತ್ಸ್ಯ ಸಂಪನ್ಮೂಲದ ಲೂಟಿಯನ್ನು ತಡೆಗಟ್ಟಲಿದೆ. 2017-18ರಲ್ಲಿ ಕೇರಳ ಸರ್ಕಾರ 58 ವಿಭಿನ್ನ ಮೀನುಗಳ ಮೀನುಗಾರಿಕೆಗೆ ನಿಯಮಗಳನ್ನು ರೂಪಿಸಿತು. ಮರಿಮೀನುಗಳು ನೀರಿನಿಂದ ಹೊರಬಿದ್ದು ನಾಶವಾಗುವುದನ್ನು ತಡೆಯಲು ಸಾಧ್ಯವಾದರೆ ಮಾತ್ರ ಕಡಲಿನಲ್ಲಿ ಮೀನುಗಳ ಸಂತತಿ ಬೆಳೆದು ಮನುಷ್ಯನಿಗೆ ಆಹಾರವಾಗಿ ಹಾಗೂ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥವಾಗಿ ಲಭ್ಯವಾಗುವುದು. ಮೀನುಗಳು ಸಂತಾನಾಭಿವೃದ್ಧಿಯನ್ನು ಕೇವಲ ಮಳೆಗಾಲದಲ್ಲಿ ಮಾಡುತ್ತವೆ ಎಂಬ ನಂಬಿಕೆ ಇದೆ. ಆದರೆ ತಜ್ಞರ ಪ್ರಕಾರ ಇದು ನಿಜವಲ್ಲ. ಆದ್ದರಿಂದ ಎಲ್ಲಾ ಕಾಲದಲ್ಲೂ ಸೂಕ್ತ ವೈಜ್ಞಾನಿಕ ಕ್ರಮಗಳ ಮೂಲಕ ಅನಿಯಂತ್ರಿತ ಮರಿ ಮೀನುಗಳ ಮೀನುಗಾರಿಕೆಯನ್ನು ತಡೆಗಟ್ಟಬೇಕು.