ಕರಾವಳಿಗೆ ಚಲನೆಯನ್ನು ಕೊಟ್ಟವರು ಮಿಷನರಿಗಳು – ಪುರುಷೋತ್ತಮ ಬಿಳಿಮಲೆ

ಮಂಗಳೂರು : ಕರಾವಳಿಯಲ್ಲಿ ಇತಿಹಾಸ ಬರೆದವರಲ್ಲಿ ಪ್ರಮುಖ ಪಾತ್ರವನ್ನು ಬಿಎ ಸಾಲೆತ್ತೂರು, ಗೋವಿಂದ ಪೈ ಮೊದಲಾದವರುಗಳು ಹೊಂದಿದ್ದಾರೆ. ಆದರೆ ನಮ್ಮ ಕರಾವಳಿಯ ಇತಿಹಾಸವನ್ನು ಕಟ್ಟಿದವರು ಯಾರು ಎಂಬ ಪ್ರಶ್ನೆ ಬಂದಾಗ ಅದರಲ್ಲಿ ಮೊದಲ ಸ್ಥಾನವನ್ನು ಪಡೆಯುವುದು ಬಾಸೆಲ್ ಮಿಷನರಿಗಳು. ಕರಾವಳಿಗೆ ಒಂದು ಚಲನೆಯನ್ನು ಕೊಟ್ಟವರು ಮಿಷನರಿಗಳು ಎಂದು ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆ ಹೇಳಿದರು.

ಡಿವೈಎಫ್‌ಐನ 12 ನೇ ರಾಜ್ಯ ಸಮ್ಮೇಳನದ ಎರಡನೆಯ ದಿನ ನಡೆದ “ ಕರಾವಳಿ ಕಟ್ಟಿದ ಬಗೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪಾರಂಪರಿಕತೆಯನ್ನು ಸಾರ್ವತ್ರಿಕಗೊಳಿಸಿದ ಕ್ರಾಂತಿ ಕರಾವಳಿಯಲ್ಲಿ ಮಿಷನರಿಗಳು ಮಾಡಿದೆ. ಈ ಮಿಷನರಿಗಳಿಗೆ ನಾವೆಲ್ಲರೂ ಅಬಾರಿಯಾಗಿರಬೇಕು. ನಮ್ಮಲ್ಲಿರುವ ಮಠಗಳು ಸಾವಿರಾರು ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತದೆ. ಆದರೆ ನಮ್ಮ ಕರಾವಳಿಯಲ್ಲಿ ಮೊದಲ ಬಾರಿಗೆ ಮುದ್ರಣಾಲಯವನ್ನು ಈ ಮಠದವರು ಹಾಕಿದ್ದಾರಾ?. ಅದಕ್ಕಾಗಿ ಮಿಷನರಿಗಳು ಬರಬೇಕಾಯಿತು. ಈ ನಿಟ್ಟಿನಲ್ಲಿ ನಾವು ಮಿಷನರಿಗಳ ಕೊಡುಗೆಯನ್ನು ನಾವು ಸ್ಮರಿಸಬೇಕು ಎಂದು ಶ್ಲಾಘಿಸಿದರು.

‘ ನಾನು ಕೋಮುವಾದ ಮಾಡುತ್ತೇನೆ. ಅದರಲ್ಲಿ ತಪ್ಪೇನಿಲ್ಲ, ಅದುವೇ ಸರಿ ಎನ್ನುವವರ ನಡುವೆ ಕೋಮುವಾದ ಮಾಡುವುದು ತಪ್ಪು ಎನ್ನುವ ಒಬ್ಬರು ಇದ್ದರೆ ಸಾಕು ಎಂದ ಬಿಳಿಮಲೆ, ಈ ಹಿಂದೆ ಬ್ರಾಹ್ಮಣರೇನು ಮತಾಂತರ ಆಗುತ್ತಿರಲಿಲ್ಲ. ಮತಾಂತರ ಆದವರು ಎಂಜಲು ತಿನ್ನುತ್ತಿದ್ದವರು, ಭಿಕ್ಷೆ ಬೇಡುತ್ತಿದ್ದವರು. ಆದರೆ ಈಗ ಅವರು ಕೂಡಾ ತಮ್ಮ ಸ್ವ ಇಚ್ಛೆಯಿಂದ ಮತಾಂತರವಾಗಲು ಸಾಧ್ಯವಾಗದಂತಾಗಿದೆ ಎಂದರು.

ಈ ಹಿಂದೆ ಸಮಾಜಕ್ಕೆ ಕೊಡುಗೆ ನೀಡಿದವರು ಎಂದರೆ ಮಂಗಳೂರಿಗರು ಆಗಿದ್ದರು. ಆದರೆ ಈಗ ಯಾವುದೇ ಜಿಲ್ಲೆ, ಪ್ರದೇಶದಲ್ಲಿ ಗಲಾಟೆ, ಗಲಭೆ ನಡೆದರೂ ಆ ಜಿಲ್ಲೆಯನ್ನು “ಮಂಗಳೂರಿನಂತೆ” ಎಂದು ಹೋಲಿಕೆ ಮಾಡಲಾಗುತ್ತದೆ. ಆ ಮಟ್ಟಿಗೆ ನಮ್ಮ ನಗರ ತಲುಪಿದೆ ಎಂದು ವಿಷಾಧ ವ್ಯಕ್ತಪಡಿಸಿದರು. ಒಂದು ಮೇಲ್ಸೆತುವೆ ನಿರ್ಮಾಣ ಮಾಡಲು ಎರಡು ಬಾರಿ ಗೆದ್ದು ಬಂದ ಎಂಎಲ್‌ಎಗಳ ನಡುವೆ ನಾವು ಶ್ರೀನಿವಾಸ ಮಲ್ಯರ ಕೊಡುಗೆಯನ್ನು ನೆನೆಯಬೇಕು ಎಂದರು. ಜಾತಕವನ್ನು ಬರೆಯುವಾಗ ಎಂದಿಗೂ ಕೂಡಾ ಬ್ರಾಹ್ಮಣರೇತರಿಗೆ ವಿದ್ಯೆ ಇಲ್ಲ ಎಂದು ಬರೆಯಲಾಗುತ್ತದೆ. ನನಗೂ ಹಾಗೆಯೇ ಬರೆಯಲಾಗಿತ್ತು. ಆದರೆ ಆ ಜ್ಯೋತಿಷಿ ಬರೆದ ಜಾತಕಕ್ಕೆ ಸಡ್ಡು ಹೊಡೆದವರು ನಮ್ಮ ತಾಯಿ. ನನಗೆ ತನ್ನ ಕಿವಿಯೋಲೆ ಅಡವಿಟ್ಟು ವಿದ್ಯೆ ನೀಡಿದರು. ಇಂದು ನಾನು ಪ್ರೊಫೆಸರ್ ಆಗಿ ಬೆಳೆದಿದ್ದೇನೆ ಎಂದು ತಿಳಿಸಿದರು.

ಕನ್ನಡ ಪರ ಹೋರಾಟಗಾರ ರಮೇಶ್ ಬೆಲ್ಲದಕೊಂಡ ಪ್ರತಿಕ್ರಿಯೆ ನೀಡಿದರು. ವೇದಿಕೆಯಲ್ಲಿ ಡಿವೈಎಫ್‌ಐ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.

Donate Janashakthi Media

Leave a Reply

Your email address will not be published. Required fields are marked *