ಈ ವಾರ ಕರ್ನಾಟಕದಲ್ಲಿ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದವು. ಅದರಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಕೂಡ ಒಂದು. ಸಿನಿಮಾದ ಬಗ್ಗೆ ಬಹುತೇಕ ಪಾಸಿಟಿವ್ ರಿವ್ಯು ಬಂದಿರುವ ಕಾರಣದಿಂದಾಗಿ ಶುಕ್ರವಾರ ಬಿಡುಗಡೆ ಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನೂರಾರು ಚಿತ್ರಮಂದಿರಗಳಲ್ಲಿ ಕಾಂತಾರ ಬಿಡುಗಡೆ ಆಗಿದ್ದು, ಕೋಟಿ ಕೋಟಿ ಹಣವನ್ನು ಬಾಚಿದೆ ಎಂದು ಅಂದಾಜಿಸಲಾಗಿದೆ. ಈ ಸಿನಿಮಾ ಕುರಿತು ಎಚ್.ಆರ್.ನವೀನ್ ಕುಮಾರ್, ಹಾಸನ ಮುನೀರ್ ಕಾಟಿಪಳ್ಳ ಅನಿಸಿಕೆ ಹಂಚಿಕೊಂಡಿದ್ದಾರೆ.
ಒಂದು ವಿಷಯವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಜನರಿಗೆ ಮನಮುಟ್ಟಿಸುವ ಪರಿಣಾಮಕಾರಿ ಮಾಧ್ಯಮ ಸಿನಿಮಾ. ಈ ಸಿನಿಮಾ ಮಾಧ್ಯಮವನ್ನ ಪರಿಣಾಮಕಾರಿಯಾಗಿ ಬಳಸಿಕೊಂಡು ಯಶಸ್ವಿಯಾದ ನಿರ್ಧೇಶಕರ ಸಾಲಿಗೆ ಈಗ ರಿಷಭ್ ಶೆಟ್ಟಿ ನಿಲ್ಲುತ್ತಾರೆ.
ಕರಾವಳಿಯ ಕಾಡಿನ ಜನರ ಬದುಕು, ಅವರ ಭೂಮಿ ಪ್ರಶ್ನೆ, ವಡೆಯರುಗಳು ಅವರನ್ನ ನಡೆಸಿಕೊಂಡ ಮತ್ತು ಬಳಸಿಕೊಂಡ ರೀತಿ, ಸರ್ಕಾರ, ಅರಣ್ಯ ಇಲಾಖೆ, ಜಾತಿಯ ಪ್ರಶ್ನೆ ಇವೆಲ್ಲವುಗಳ ಸುತ್ತ ಜನರ ನೈಜ ಬದುಕು ಮತ್ತು ಅದಕ್ಕಾಗಿ ಅವರು ನಂಬಿರುವ ಆಚರಣೆಗಳು, ದೈವಾರಾಧನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಕತೆಯಲ್ಲಿ ಮತ್ತು ನಿರ್ಧೇಶನದಲ್ಲಿ ರಿಷಭ್ ಶೆಟ್ಟಿ ದುಡಿಸಿಕೊಂಡಿದ್ದಾರೆ.
ಇಡೀ ಸಿನಿಮಾ ಒಂದು ರೀತಿಯಲ್ಲಿ ಕತ್ತಲೆಯ ಕಾಡಿನ ಕತೆಯಾಗಿದ್ದು ಕೊನೆಯಲ್ಲಿ ಸೀಟಿನಿಂದ ಮೇಲೆದ್ದು ಥಿಯೇಟರ್ ನಿಂದ ಹೊರಬರುವಾಗ ಕಾಡುವುದಂತೂ ಸತ್ಯ. ತಮ್ಮ ಭೂಮಿಗಾಗಿ ಹೋರಾಟ ಮಾಡುವ ಜನ ತಮ್ಮನ್ನು ಒಕ್ಕಲೆಬ್ಬಿಸುವವರೆಲ್ಲರ ವಿರುದ್ಧ ತಿರುಗಿ ಬೀಳುತ್ತಾರೆ. ನಮ್ಮ ಪ್ರಾಣ ಹೋದರೂ ತಲತಲಾಂತರದಿಂದ ವಾಸವಿರುವ ಭೂಮಿಯ ಹಕ್ಕನ್ನ ಬಿಡಲು ತಯಾರಾಗುವುದಿಲ್ಲ. ಅವರ ಈ ಹೋರಾಟಕ್ಕೆ ಅವರದ್ದೇ ನಂಬಿಕೆಯ ದೈವಾರಾದನೆಯ ಕೋಲ ಜೊತೆಯಾಗುತ್ತದೆ.
ಕತೆಯನ್ನ ನಿರೂಪಿಸಿರುವ ಶೈಲಿ ವಿಶೇಷವಾಗಿದೆ. ಅಲ್ಲಲ್ಲಿ ಕುತೂಹಲ ಹುಟ್ಟಿಸುವ (ಭಯ, ಗಾಬರಿ) ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕೊನೆಯ 20 ನಿಮಿಷದಲ್ಲಿ ನಡೆಯುವ ಕ್ಲೈಮ್ಯಾಕ್ಸ್ ನಿಜವಾಗಲೂ ಒಬ್ಬ ನಿರ್ದೇಶಕನಾಗಿ ಮತ್ತು ಒಬ್ಬ ಕಲಾವಿದನಾಗಿ ರಿಷಬ್ ಶೆಟ್ಟಿಯನ್ನ ಗೆಲ್ಲಿಸಿದೆ. ಇಡೀ ಸಿನಿಮಾದಲ್ಲಿ ಎಲ್ಲರ ನಟನೆಯೂ ಅತ್ಯುತ್ತಮವಾಗಿ ಮೂಡಿಬಂದಿದೆ.
ಚಿತ್ರದ ವಸ್ತು ಜನರ ಬದುಕು ಮತ್ತು ಜಂಜಾಟ. ಭೂಮಿ ಮತ್ತು ಬದುಕಿನ ರಕ್ಷಣೆಗಾಗಿನ ಹೋರಾಟ:
ಕನ್ನಡ ಚಿತ್ರರಂಗಗಳಲ್ಲೂ ಉತ್ತಮ ಕಥಾವಸ್ತು, ಹೊಸ ರೀತಿಯ ಪ್ರಯೋಗಗಳು ನಡೆಯುತ್ತಿವೆ, ಇಲ್ಲಿಯವರೂ ಹೊಸ ರೀತಿಯಲ್ಲಿ ಆಲೋಷಿಸಯಲು ಪ್ರಾರಂಭಿಸಿದ್ದಾರೆ ಎನ್ನುವುದಕ್ಕೆ ಈ ಸಿನೆಮಾ ಒಂದು ಸಾಕ್ಷಿ. ಅಲ್ಲಲ್ಲಿ ಬಾಹುಬಲಿ ಮತ್ತು RRR ಸಿನಿಮಾಗಳ ಕೆಲವು ದೃಶ್ಯಗಳನ್ನು ಅನುಕರಿಸಿದಂತೆ ಕಂಡರೂ ಸಂಪೂರ್ಣ ದೇಸೀ ಸೊಗಡು ಎದ್ದು ಕಾಣುತ್ತದೆ. ಮೊದಲಾರ್ಧದಲ್ಲಿ ಹಿನ್ನೆಲೆ ಸಂಗೀತ ಮಾತುಗಳನ್ನು ನುಂಗಿದಂತೆ ಕಂಡರೂ ಕೊನೆಯಲ್ಲಿ ಈ ಹಿನ್ನೆಲೆ ಸಂಗೀತವೇ ನಿರೂಪಣೆಗೆ ಶಕ್ತಿಯನ್ನು ತುಂಬಿದೆ.
ಎಲ್ಲರೂ ಸಿನಿಮಾ ಮಂದಿರಕ್ಕೆ ಬಂದು ಒಮ್ಮೆ ಸಿನಿಮಾ ನೋಡಿ. ಒಂದು ಅತ್ಯುತ್ತಮ ಮನೋರಂಜನೆ ಮತ್ತು ಯೋಚನೆಯ ವಸ್ತುವನ್ನಂತೂ ಖಂಡಿತಾ ಕೊಡುತ್ತದೆ. ಕೊಟ್ಟ ಕಾಸಿಗೆ ಮೋಸವಿಲ್ಲ.
– ಎಚ್.ಆರ್.ನವೀನ್ ಕುಮಾರ್, ಹಾಸನ.
ರಿಷಭ್ ಶೆಟ್ಟಿಯ ಸೈದ್ದಾಂತಿಕ ನಿಲುವುಗಳು ನನಗೆ ತಿಳಿದಿಲ್ಲ. ಅಲ್ಲಿ ಇಲ್ಲಿ ಕಿವಿಗೆ ಬಿದ್ದ ಪ್ರಕಾರ ಬಲಪಂಥದಿಂದ ಒಂದಿಷ್ಟು ಪ್ರಭಾವಿತರಾಗಿದ್ದಾರೆ ಎಂಬುದು. ಮುಂದಕ್ಕೆ ಅವರ ಸಿನೆಮಾ ಕತೆಗಳು ಹೇಗಿರುತ್ತವೋ ಗೊತ್ತಿಲ್ಲ. ಆದರೆ, ಕಾಂತಾರ ಮಾತ್ರ ಇಷ್ಟ ಆಯ್ತು. ಹೌದು. ಸಿನೆಮಾದಲ್ಲಿ ತುಂಬಾ ಮಿತಿಗಳಿವೆ. ಅದು ರಿಷಭ್ ಮಿತಿಯೂ ಆಗಿರಬಹುದು. ಅಥವಾ ಸದ್ಯದ ಸಾಮಾಜಿಕ ವಾತಾವರಣದ ಪರಿಣಾಮವೂ ಇರಬಹುದು. ಲಾಜಿಕ್ಗಳ ಜೊತೆ ಸಿನೆಮಾ ನೋಡಿದರೆ ಕಾಂತಾರ ಹತ್ತಾರು ಪ್ರಶ್ನೆಗಳನ್ನು ಮೂಡಿಸುತ್ತದೆ. (ಲಾಜಿಕ್ ಕುರಿತು ಸಿನೆಮಾ ವೀಕ್ಷಿಸುವಾಗ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ). ನಾನು ವಿಮರ್ಶೆ ಬರೆಯಲು ಹೋಗಲಿಲ್ಲ. ವಿಮರ್ಶೆಗಳ ಕುರಿತು ಕುತೂಹಲಿ ಆಗಿದ್ದೇನೆ. ಕಾಂತಾರ ತುಳುನಾಡಿನ ಪರಂಪರೆ, ಇತಿಹಾಸದ ಕುರಿತು ಚರ್ಚೆಗೆ ಒಂದು ಒಳ್ಳೆಯ ಅವಕಾಶ ಕಲ್ಪಿಸಿದೆ. ಅದು ನಡೆಯಲಿ.ಅದಕ್ಕಾಗಿ ರಿಷಭ್ ಶೆಟ್ಟಿಗೆ ಧನ್ಯವಾದ.
ಅಸ್ಪೃಶ್ಯ ಸಮುದಾಯದ ದಲಿತ ಪಾತ್ರವೊಂದು ಹೀರೋ ಆಗಿ ಕನ್ನಡ ಸಿನೆಮಾದಲ್ಲಿ ವಿಜೃಂಭಿಸಿರುವುದು, ಭೂ ಒಡೆಯನ ಬಂಗಲೆಗೆ ಆ ಪಾತ್ರ ನಿರ್ಭಿಡೆಯಿಂದ ಪ್ರವೇಶ ಮಾಡಿ ಧಣಿಯ ಸರಿಸಮಾನ ಕೂತು ಸ್ವತಹ ತಾನೆ ಬಡಿಸಿ ಉಣ್ಣುವುದು, ಊರ ಕೋಲದಲ್ಲಿ ಬ್ಯಾರಿ(ಮುಸ್ಲಿಂ) ಪಾತ್ರ ಗರ್ನಾಳ್ ಸಿಡಿಸುವುದು, ದಲಿತ ಪಾತ್ರವೊಂದನ್ನು ಮುಟ್ಟಿದ ಧಣಿ ತಕ್ಷಣವೇ ಕೈ ತೊಳೆದು ಕೊಳ್ಳುವುದು… ಮುಂತಾದ ಸೀನ್ ಗಳು ನೀಡುವ ಸಂದೇಶಗಳು ಸಣ್ಣದಲ್ಲ. ಇನ್ನು ತುಳುನಾಡಿನ ದಲಿತ ಜಾತಿಗಳು ನಾನು ಕಂಡಂತೆ ತೀರಾ ಸೌಮ್ಯ ಸ್ವಭಾವದವು. ಘಟ್ಟದ ಮೇಲಿನಂತೆ ಇಲ್ಲಿ ರೆಬೆಲ್ (ತಿರುಗಿ ಬೀಳುವ) ಆಗಿ, ಆಕ್ರಮಣಕಾರಿಗಳಾಗಿ ಅವರು ನಡೆದು ಕೊಂಡದ್ದು ತೀರಾ ಅಪರೂಪ. ಅದು ದಲಿತ ಚಳವಳಿಗಳ ಕಾಲಘಟ್ಟದಲ್ಲಾದರೂ ಸರಿಯೆ. ಸಿನೆಮಾದಲ್ಲಿ ನಾಯಕ (ದಲಿತ ಸಮುದಾಯಕ್ಕೆ ಸೇರಿದ) ಮತ್ತವನ ಗೆಳೆಯರು ತೋರಿಸುವ “ಕಾರುಬಾರು” ಗಳು ಸಾಮಾನ್ಯವಾಗಿ ಆ ಸಮುದಾಯದಲ್ಲಿ ಇಲ್ಲಿ ಕಂಡುಬಂದದ್ದು ತೀರಾ ಅಪರೂಪ. (ನನ್ನ ತಿಳುವಳಿಕೆ ತಪ್ಪಿರಲೂ ಬಹುದು) ಈ ಎಲ್ಲಾ ಹಿನ್ನಲೆಯಲ್ಲಿ ತುಳುನಾಡಿನ ಹಿರಿಯ ದಲಿತ ಮುಂದಾಳು ಎಂ ದೇವದಾಸ್ ಸಹಿತ ಹಲವು ದಲಿತ ಗೆಳೆಯರಲ್ಲಿ ಸಿನೆಮಾ ನೋಡಿ ಅಭಿಪ್ರಾಯ ದಾಖಲಿಸುವಂತೆ ವಿನಂತಿಸಿದ್ದೇನೆ.
ಅದೇನೆ ಕೊರತೆಗಳು ಇದ್ದರೂ ಭೂ ಸಂಬಂಧಗಳನ್ನು ಸಿನೆಮಾದಲ್ಲಿ ವಸ್ತು ಆಗಿ ಆಯ್ಕೆ ಮಾಡಲಾಗಿದೆ. ತುಳು ಜನಪದವೂ ಸಿನೆಮಾವನ್ನು ಆವರಿಸಿಕೊಂಡಿದೆ. ಸಿನೆಮಾ ಒದಗಿಸಿರುವ ಭರಪೂರ ಮನೋರಂಜನೆ, ಸಿನೆಮಾದಲ್ಲಷ್ಟೆ ಹೀರೊ ಪಾತ್ರಕ್ಕೆ ಶಿಳ್ಳೆ ಅನ್ನುವಷ್ಟಕ್ಕೆ ಚರ್ಚೆಯನ್ನು ಸೀಮಿತಗೊಳಿಸಲು ಬಿಡದೆ ತುಳುನಾಡಿನ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿರುವ ಉಳ್ಳವರ, ಇಲ್ಲದವರ ನಡುವಿನ ಸಂಘರ್ಷದ ಕಥನವನ್ನು ಈ ಸಿನೆಮಾದ ಹಿನ್ನಲೆಯಲ್ಲಿ ಚರ್ಚೆಗೆ ಎತ್ತಿಕೊಳ್ಳುವುದು ಬಹಳ ಮುಖ್ಯ. ತುಳುನಾಡು ಆರಾಧಿಸುವ ಬಬ್ಬರ್ಯ, ಕಲ್ಲುರ್ಟಿ, ಕಲ್ಕುಡ, ಕೋಟಿ ಚೆನ್ನಯ, ಕೋಡ್ದಬ್ಬು, ಕೊರಗ ತನಿಯ, ಕಾನದ ಕಟದರು, ಸಿರಿ… ಮೊದಲಾದವು ತಮ್ಮೊಳಗೆ ಹುದುಗಿಸಿ ಕೊಂಡಿರುವ ಇತಿಹಾಸದ ಕತೆಗಳೇನು ಸಣ್ಣವೇ !. ವರ್ತಮಾನವನ್ನೇ ತಿರುಗಿಸಿ ನಿಲ್ಲಿಸಬಲ್ಲಷ್ಟು ಶಕ್ತಿ ಹೊಂದಿಲ್ಲವೇ ಅವು ?
ಮುನೀರ್ ಕಾಟಿಪಳ್ಳ