ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದನ್ನು ಮತ್ತು ಅಲ್ಲಿನ ಜನರ ಮೂಲಭೂತ ಹಕ್ಕುಗಳನ್ನು ದಮನ ಮಾಡಿದ್ದನ್ನು ತೀವ್ರವಾಗಿ ವಿರೋಧಿಸಿ ತಮ್ಮ ಪ್ರತಿಷ್ಠಿತ ಭಾರತೀಯ ಆಡಳಿತ ಸೇವೆ (ಐಎಎಸ್) ಹುದ್ದೆಗೆ 2019ರಲ್ಲಿ ರಾಜೀನಾಮೆ ನೀಡಿದ್ದ ಕಣ್ಣನ್ ಗೋಪಿನಾಥನ್ ಅಧಿಕೃತವಾಗಿ ಅಕ್ಟೋಬರ್ 13ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಸಾಮರ್ಥ್ಯವಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಈ ಸಂದರ್ಭದಲ್ಲಿ ಅವರು ಬಲವಾಗಿ ಪ್ರತಿಪಾದಿಸಿದರು.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಯುವ ನಾಯಕರಾದ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಹಾಗೂ ಈ ಹಿಂದೆ ಐಎಎಸ್ ಹುದ್ದೆ ತ್ಯಜಿಸಿ ಕಾಂಗ್ರೆಸ್ ಸೇರಿರುವ ಶಶಿಕಾಂತ್ ಸೆಂಥಿಲ್ ಅವರ ಸಮ್ಮುಖದಲ್ಲಿ ಕಣ್ಣನ್ ಗೋಪಿನಾಥನ್ ಅವರು ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಹುದ್ದೆ
ಇದನ್ನೂ ಓದಿ: ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
ಧೈರ್ಯಶಾಲಿ ಅಧಿಕಾರಿಗೆ ಸ್ವಾಗತ: ಕೆ.ಸಿ. ವೇಣುಗೋಪಾಲ್
ಕಣ್ಣನ್ ಗೋಪಿನಾಥನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೆ.ಸಿ. ವೇಣುಗೋಪಾಲ್, ‘ದೇಶದ ದೀನದಲಿತ ಮತ್ತು ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಸದಾ ದನಿ ಎತ್ತುತ್ತಿದ್ದ, ನ್ಯಾಯ ಮತ್ತು ಏಕತೆಗಾಗಿ ಹೋರಾಡಿದ ಧೈರ್ಯಶಾಲಿ ಅಧಿಕಾರಿಗಳಲ್ಲಿ ಗೋಪಿನಾಥನ್ ಒಬ್ಬರು. ಅವರು ಈಶಾನ್ಯ ಭಾರತ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಜನಪರ ಕೆಲಸ ಮಾಡಿದ್ದಾರೆ. ನ್ಯಾಯಕ್ಕಾಗಿ ಹೋರಾಡುವ ಏಕೈಕ ಪಕ್ಷ ಕಾಂಗ್ರೆಸ್ ಎಂಬುದನ್ನು ಅರಿತು ಅವರು ನಮ್ಮೊಂದಿಗೆ ಕೈಜೋಡಿಸಿರುವುದು ಸಂತಸದ ವಿಷಯ’ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಗೋಪಿನಾಥನ್ ಅವರು 2019ರಲ್ಲಿ ರಾಜೀನಾಮೆ ನೀಡಿದರೂ, ಸರ್ಕಾರ ಅದನ್ನು ಇಂದಿಗೂ ಅಂಗೀಕರಿಸಿಲ್ಲ. ನ್ಯಾಯದ ಪರ ನಿಲ್ಲುವ ಮತ್ತು ಸತ್ಯ ಮಾತನಾಡುವ ಅಧಿಕಾರಿಗಳನ್ನು ಈ ಸರ್ಕಾರ ಶಿಕ್ಷಿಸುತ್ತಿದೆ. ಹರಿಯಾಣ, ಮಧ್ಯಪ್ರದೇಶಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ. ಅಷ್ಟೇ ಏಕೆ, ಭಾರತದ ಮುಖ್ಯ ನ್ಯಾಯಾಧೀಶರು ಕೂಡ ಇಂತಹ ದಾಳಿಗಳಿಂದ ಹೊರತಾಗಿಲ್ಲ. ದೇಶವನ್ನು ವಿಭಜಿಸುವ ಕಾರ್ಯಸೂಚಿಯ ವಿರುದ್ಧ ಹೋರಾಡಲು ಇದು ಸೂಕ್ತ ಸಮಯ. ನಾವು ಪೂರ್ಣ ಹೃದಯದಿಂದ ಗೋಪಿನಾಥನ್ ಅವರನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದರು.
ದೇಶವನ್ನು ಕಾಂಗ್ರೆಸ್ ಮಾತ್ರ ಮುನ್ನಡೆಸಬಲ್ಲದು: ಕಣ್ಣನ್ ಗೋಪಿನಾಥನ್
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ 2012ರ ಬ್ಯಾಚ್‌ನ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ‘2019ರಲ್ಲಿ ಸರ್ಕಾರವು ದೇಶವನ್ನು ತಪ್ಪು ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂದು ಮನವರಿಕೆಯಾದಾಗ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿದೆ. ಈ ತಪ್ಪು ಮಾರ್ಗದ ವಿರುದ್ಧ ಹೋರಾಟ ಮಾಡಲೇಬೇಕೆಂದು ನಾನು ನಿರ್ಧರಿಸಿದೆ’ ಎಂದರು.
‘ರಾಜೀನಾಮೆ ನಂತರ ನಾನು ದೇಶದ ಸುಮಾರು 80-90 ಜಿಲ್ಲೆಗಳಿಗೆ ಪ್ರವಾಸ ಮಾಡಿದೆ. ಸಾಮಾನ್ಯ ಜನರೊಂದಿಗೆ, ಹಲವು ನಾಯಕರೊಂದಿಗೆ ಸಂವಾದ ನಡೆಸಿದೆ. ಆಳವಾದ ಅಧ್ಯಯನದ ನಂತರ, ಈ ದೇಶವನ್ನು ಸರಿಯಾದ ಪಥದಲ್ಲಿ ಕೊಂಡೊಯ್ಯಬಲ್ಲ ಏಕೈಕ ಶಕ್ತಿ ಕಾಂಗ್ರೆಸ್ ಪಕ್ಷ ಮಾತ್ರ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಈ ಸರ್ಕಾರವನ್ನು ಪ್ರಶ್ನಿಸುವ ಪ್ರತಿಯೊಬ್ಬರ ಮೇಲೂ ‘ದೇಶದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಈ ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಸೇರಿದ್ದೇನೆ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಇದನ್ನೂ ನೋಡಿ: ನಿರ್ಮಾಣ ಕಂಪನಿ ನಿರ್ಲಕ್ಷ್ಯಕ್ಕೆ ಮೂರು ವಲಸೆ ಕಾರ್ಮಿಕರ ಸಾವು: 25 ಲಕ್ಷ ಪರಿಹಾರಕ್ಕೆ CWFI ಆಗ್ರಹ Janashakthi
