ವಿಶೇಷ ಸ್ಥಾನಮಾನ ಇದ್ದರೂ ಸಿಗದ ಉದ್ಯೋಗ – ಕನ್ನಡಿಯೊಳಗಿನ ಗಂಟಾಯ್ತೆ 371 ಜೆ ಕಲಂ

ಅದು, ತೀರಾ ಹಿಂದುಳಿದಿರುವ ಪ್ರದೇಶ, ಆರ್ಥಿಕ, ಶೈಕ್ಷಣಿಕ ಅಸಮಾನತೆಯಲ್ಲಿ ನರಳುತ್ತಿದೆ ಆ ಪ್ರದೇಶ. ಆ ಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡಿದರೆ ಅಭಿವೃದ್ಧಿಯಾಗುತ್ತದೆ ಎಂಬ ಕಾರಣಕ್ಕೆ ವಿಶೇಷ ಸ್ಥಾನ ಮಾನ ನೀಡಲಾಯಿತು. ಆದರೆ ಅದು ಕನ್ನಡಿಯೊಳಗಿನ ಗಂಟಾಗಿದೆ. ಈ ಪ್ರದೇಶ ಇಂತಹ ಸ್ಥಿತಿಗೆ ಬರಲು ಕಾರಣಯಾರು? ಅಲ್ಲಿರುವ ಅಭಿವೃದ್ಧಿ ಮಂಡಳಿ ಏನು ಮಾಡುತ್ತಿದೆ?  ವಿಶೇಷ ಸ್ಥಾನಮಾನದ ಅನುಷ್ಟಾನಕ್ಕೆ ತೊಡಕಾಗಿವೆ ಅನೇಕ ಅಂಶಗಳು.

ನಾನು ಹೇಳಲು ಹೊರಟಿರುವ ಪ್ರದೇಶವೇ ಹೈದ್ರಾಬಾದ್‌ ಕರ್ನಾಟಕ ಪ್ರದೇಶ, ಈಗ ಅದನ್ನು ಕಲ್ಯಾಣ ಕರ್ನಾಟಕ ಎಂದು ಸರಕಾರ ಬದಲಾಯಿಸಿದೆ. ಕಲ್ಯಾಣ ಕರ್ನಾಟಕ ಭಾಗದವರಿಗೆ ನೀಡಲಾಗಿರುವ 371 ಜೆ ಸ್ಥಾನಮಾನ ಕನ್ನಡಿಯೊಳಗಿನ ಗಂಟಾಗಿದೆ. ಅದರಲ್ಲೂ ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಇದು ಪದೇ ಪದೇ ಸಾಬೀತಾಗುತ್ತಿದೆ. ಹೀಗಾಗಿ, ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಕೂಗು ಕೇಳಿ ಬರುತ್ತಿದೆ.

2013ರಲ್ಲೆ 371 ಜೆ ಸ್ಥಾನಮಾನ  ಜಾರಿಯಾದ ಕೆಲವೇ ವರ್ಷಗಳಲ್ಲಿ ಶಾಲಾ ಶಿಕ್ಷಕರ ನೇಮಕಾತಿಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಲಾಯಿತು. ಇದರಿಂದ 371 ಜೆ ಸ್ಥಾನಮಾನ ಇದ್ದರೂ ನೇಮಕಾತಿಗೆ ಅಡ್ಡಿಯಾಯಿತು.  ಈ ಕಾರಣದಿಂದಾಗಿಯೇ ಇನ್ನಷ್ಟೂ ನಿರುದ್ಯೋಗ ಸೃಷ್ಟಿಯಾಗುತ್ತಿದೆ.  ಸಿಇಟಿ ಬರೆದು ಬಿಇಡಿ ಪಾಸಾಗಿರುತ್ತೇವೆ, ಇದಾದ ಮೇಲೆ ನೇಮಕಾತಿ ಸಿಇಟಿ ನಡೆಯುತ್ತದೆ. ಇದರ ಮಧ್ಯೆ ಈಗ ಟಿಇಟಿ ಪರೀಕ್ಷೆಯನ್ನು ಮಾಡಲಾಗಿದೆ. ಇದಕ್ಕೆ ನೂರೆಂಟು ಷರತ್ತುಗಳನ್ನು ಮಾಡಿದ್ದರಿಂದ ಪದವಿ ಅರ್ಹತೆ ಇದ್ದರೂ ನಾವು ನೇಮಕಾತಿಗೆ ಅರ್ಹತೆ ಹೊಂದುತ್ತಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಆರೋಪಿಸಿದ್ದಾರೆ.

ಮೀಸಲಾತಿ ಏಕೆ: ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಗೆ ಪ್ರತಿ ವರ್ಷ 1 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಬೇಕು. ಅದರಲ್ಲಿ ಕೇಂದ್ರ ಶೇ.30ರಷ್ಟು ಮತ್ತು ಶೇ.70ರಷ್ಟು ರಾಜ್ಯ ಸರಕಾರ ಅನುದಾನ ಒದಗಿಸಬೇಕು. ಈ ಮೂಲಕ ಕೈಗಾರಿಕೆ, ರಸ್ತೆ, ಶಿಕ್ಷ ಣ, ಆರೋಗ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕು. 371(ಜೆ) ಅಡಿಯಲ್ಲಿ ನೇಮಕ ಹಾಗೂ ಮುಂಬಡ್ತಿಗಾಗಿ ಏಕಗವಾಕ್ಷಿ ಮೂಲಕ ಪ್ರಮಾಣಪತ್ರದ ಬದಲಾಗಿ ಕಾಯಂ ಸ್ಮಾರ್ಟ್‌ ಕಾರ್ಡ್‌ ಒದಗಿಸಬೇಕು.

ಪದವಿ ಅರ್ಹತೆ ಇದ್ದರೂ ನೇಮಕವಾಗದೆ ನಿರುದ್ಯೋಗ ಸಮಸ್ಯೇ ಸೃಷ್ಟಿಯಾಗುತ್ತಿದೆ.  ಕಳೆದೈದು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದರೂ ಹುದ್ದೆಗಳು ಖಾಲಿ ಬೀಳುವಂತಾಗಿವೆ ಎಂಬುದು ಉದ್ಯೋಕಾಂಕ್ಷಿಗಳ ಅಭಿಪ್ರಾಯವಾಗಿತ್ತು. ಇಷ್ಟೆಲ್ಲ ಸಮಸ್ಯೆಗಳನ್ನು ಸೃಷ್ಟಿಸಿರುವ ಆ ನಿಯಮಗಳು ಏನು ಹೇಳುತ್ತವೇ ಅನ್ನುವುದನ್ನು ನೋಡೋಣ ಬನ್ನಿ.

ನಿಯಮದಲ್ಲಿ ಏನಿದೆ? ಅನ್ನುವುದನ್ನು ನೋಡುವುದಾದರೆ,

ನಿಯಮ 1. ಪದವೀಧರರು ಕನಿಷ್ಠ ಶೇ. 50ರಷ್ಟು ಅಂಕಗಳನ್ನು ಪ್ರತಿ ವಿಷಯದಲ್ಲಿ ಪಡೆದಿರಬೇಕು.
ನಿಯಮ 2. 2021ರ ವರೆಗೆ ಬಿಇಡಿ ಮಾಡಿದ ಅಭ್ಯರ್ಥಿಗಳಿಗೆ ಪದವಿಯಲ್ಲಿ ಸರಾಸರಿ ಕನಿಷ್ಠ ಶೇ. 50ರಷ್ಟುಅಂಕಗಳನ್ನು ಪಡೆದಿರಬೇಕು ಎಂದಿದೆ.
ನಿಯಮ 3. ಪದವಿಯಲ್ಲಿ ಸರಾಸರಿ ಶೇ. 50 ಅಂಕಗಳನ್ನು ಪಡೆದ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಬೇಕೆಂದಿದೆ.

ಈ  ಪ್ರಕ್ರಿಯೇ ನೇಮಕಾತಿಗೆ ಅಡ್ಡಿಯಾಗುತ್ತಿದೆ. ಪದವೀಧರ ಪ್ರಾಥಮಿಕ ಶಾಲೆಗಳ ಶಿಕ್ಷಕರ  ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪತ್ರಿಕೆ-2 ಹಾಗೂ ಪತ್ರಿಕೆ-3ರಲ್ಲಿ ಕ್ರಮವಾಗಿ ಶೇ. 50 ಹಾಗೂ ಶೇ. 60 ಅಂಕಗಳನ್ನು ಪಡೆಯಲೇಬೇಕು.  ನೇಮಕಾತಿಯ ಸಂದರ್ಭದಲ್ಲಿ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವಾಗ  ಅಭ್ಯರ್ಥಿಯ ಪದವಿ, ಶಿಕ್ಷಕರ ಅರ್ಹತಾ ಪರೀಕ್ಷೆ, ಬಿಇಡಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳಲ್ಲಿ ಶೇಕಡಾವಾರು ಪ್ರಮಾಣದ ಅಂಕಗಳನ್ನು ಪರಿಗಣಿಸಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಅಂದರೆ ಒಟ್ಟು ನೂರು ಅಂಕಕ್ಕೆ   ಸ್ಪರ್ಧಾತ್ಮಕ ಪರೀಕ್ಷೆಯಿಂದ 35 ಅಂಕ ,  ಟಿಇಟಿ ಪರೀಕ್ಷೆಯಿಂದ 15 ಅಂಕ , ಪದವಿ ಪರೀಕ್ಷೆಗಳಿಂದ 25 ಅಂಕ,  ಬಿಇಡಿ ಪದವಿಯಲ್ಲಿನ 25 ಅಂಕ,  ಹೀಗೆ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಯ ಪ್ರತಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳಿಗೂ ಮಹತ್ವ ನೀಡಲಾಗುತ್ತಿದೆ.

ನೇಮಕಾತಿ ಪ್ರಕ್ರಿಯೆಗೆ ಈ ರೀತಿಯ ಮಾನದಂಡವನ್ನು ಬಳಸುತ್ತಿರುವುದು ಸರಿಯಾದ ವಿಧಾನ ಅಲ್ಲ. ಸಿಇಟಿ ಬರದೆ ಅವರು ಬಿಎಡ್‌ ಮುಗಿಸಿರುತ್ತಾರೆ, ಮತ್ತೆ ಟಿಇಟಿ ಬರೆಯುವುದು, ಸಿಇಟಿ ಬರೆಯುವುದು ಬರೀ ಪರೀಕ್ಷೆಗಳನ್ನು ಬರೆಯುವುದರಲ್ಲಿಯೇ ವಯಸ್ಸು ಕಳೆದುಹೋಗುತ್ತದೆ. ಸಾಲದ್ದಕ್ಕೆ ಪ್ರತಿ ಪರೀಕ್ಷೆಗಳಿಗೆ ಹಣ ತುಂಬಿ ಸರಕಾರದ ಬೊಕ್ಕಸ ಮಾತ್ರ ತುಂಬಿಸುತ್ತಿದ್ದೇವೆ ಹೊರತು ನಮ್ಮ ನೇಮಕಾತಿಯಾಗುತ್ತಿಲ್ಲ ಆಂತ ಕಲ್ಯಾಣ ಕರ್ನಾಟಕದ ಯುವಜನತೆ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಷ್ಟೆ ಸಮಸ್ಯೆ ಅಲ್ಲ. ಬಹುತೇಕ ಹುದ್ದೆಗಳ ನೇಮಕಾತಿಯಲ್ಲೂ ಈ ಸಮಸ್ಯೆ ಎದ್ದು ಕಾಣುತ್ತಿದೆ. 371 ಜೆ ಕಲಂ ಅನುಷ್ಠಾನ ಸರಿಯಾಗಿ ಆಗದ ಕಾರಣ ಈ ರೀತಿ ಗೊಂದಲ ಉಂಟಾಗಿದೆ ಎಂದು ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ರಜಾಕ್‌ ಉಸ್ತಾದ್‌ ಆರೋಪಿಸಿದ್ದಾರೆ.

ಹಿರಿಯ ಪತ್ರಕರ್ತ ಸೋಮರೆಡ್ಡಿ ಅಳವಂಡಿಯವರು ಸರಕಾರದ ಈ ನಡೆಗೆ ಪ್ರತಿಕ್ರಿಯಿಸಿದ್ದು,  2017ರಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ 371 ಜೆ ಅಡಿ 5,000 ಶಿಕ್ಷಕರ ನೇಮಕಾತಿಗೆ ಆದೇಶ ಮಾಡಲಾಯಿತು. ಈ ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಹರಿದ್ದರೂ ಬದಲಾದ ನಿಯಮಗಳನ್ವಯ ಕೇವಲ 2,500 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರು. ಇದರಲ್ಲಿ ನೇಮಕವಾಗಿದ್ದು 748 ಮಾತ್ರ. ಇನ್ನು 4,252 ಹುದ್ದೆಗಳು ಖಾಲಿ ಉಳಿದವು. ಇದಾದ ಮೇಲೆ 2019ರಲ್ಲಿ ಪುನಃ ಇದೇ ರೀತಿ ಹತ್ತು ಸಾವಿರ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ ಮಾಡಿತು. ಈ ವೇಳೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಪುನಃ 5,000 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾದರು. ಆದರ ಅರ್ಜಿ ಬಂದಿದ್ದು ಮಾತ್ರ ಕೇವಲ 3000! ಇದರಲ್ಲಿ ನೇಮಕವಾಗಿದ್ದು 900 ಹುದ್ದೆಗಳು ಮಾತ್ರ. ಹೀಗಾಗಿ, ಪುನಃ 4,100 ಹುದ್ದೆಗಳು ಖಾಲಿ ಉಳಿದವು. ಈಗ ಕಲ್ಯಾಣ ಕರ್ನಾಟಕದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರ  4,800 ಹುದ್ದೆಗಳು ಖಾಲಿ ಇವೆ. ಪುನಃ ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಮತ್ತೆ ಇದೆ ನಿಯಮಗಳನ್ನ ಜಾರಿ ಮಾಡಿದರೂ ಈ ಬಾರಿಯೂ ಹುದ್ದೆಗಳು ಖಾಲಿ ಉಳಿಯಲಿವೆ ಎಂಬುದು ಹಿರಿಯ ಪತ್ರಕರ್ತ ಸೋಮರೆಡ್ಡಿ ಅಳವಂಡಿಯವರ ಆತಂಕವಾಗಿದೆ.

ಕೆಎಎಸ್‌, ಐಎಎಸ್‌ಗೆ ಇಲ್ಲದ ಷರತ್ತುಗಳನ್ನು ಶಿಕ್ಷಕರ ನೇಮಕಾತಿಗಳಿಗೆ ಮಾಡಲಾಗಿದೆ. ಇದು ಈ ಭಾಗದ ವಿದ್ಯಾರ್ತಿಗಳಿಗೆ ಉದ್ಯೋಗ ಆಸೆಯನ್ನೆ ಕಿತ್ತೆಸೆಯುತ್ತಿದೆ. 371 ಜೆ ವಿಶೇಷ ಸ್ಥಾನ ಬಂದ ತಕ್ಷಣವೇ ಈ ಭಾಗದಲ್ಲಿ ಶೆ80 ರಷ್ಟು ಶಿಕ್ಷಣ ಮತ್ತು ಉದ್ಯೋಗ ಸುಧಾರಣೆಯಅಗಲಿದೆ ಎಂದು ಭಾಷಣ ಬಿಗಿದಿದ್ದ ರಾಜಕಾರಣಿಗಳು ಈಗ ಇದರಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ಆಸಕ್ತಿ ತೋರುತ್ತಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಶಿಕ್ಷಕ ಹುದ್ದೆಗಳು ಖಾಲಿ ಉಳಿದರೆ ಮಕ್ಕಳಿಗೆ ಪಾಠಗಳು ನಡೆಯುವುದು ಹೇಗೆ? ಶೈಕ್ಷಣಿಕ ಅಸಮಾನತೆಯನ್ನು ನಿವಾರಿಸಬೇಕೆಂಬ ಕಾರಣಕ್ಕೆ ವಿಶೇಷ ಸ್ಥಾನಮಾನ ನೀಡಿಯೂ ನಿರ್ಲಕ್ಯದ ಕಾರಣಕ್ಕೆ ಮತ್ತೆ ಶೈಕ್ಷಣಿಕ ಅಸಮಾನತೆ ಹೆಚ್ಚಾಗುತ್ತಿರುವುದು ಆತಂಕದ ವಿಚಾರವಾಗಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯೂ, ತನ್ನ ಜವಬ್ದಾರಿಯನ್ನು ಮರೆಯುತ್ತಿದೆ. ರಸ್ತೆಗೆ ಡಾಂಬರ್‌ ಹಾಕುವುದು, ಬಿಲ್ಡಿಂಗ್‌ ಕಟ್ಟಿಸುವುದು, ಬಸ್‌ಗಳನ್ನು ಖರೀದಿಸುವುದು ಅಷ್ಟೆ ಮಾಡಿದರೆ ಸಾಕಾಗುವುದಿಲ್ಲ, ಶಿಕ್ಷಣ ಮತ್ತು ಉದ್ಯೋಗವನ್ನು ಬಲಪಡಿಸಲು ಅಭಿವೃದ್ಧಿ ಮಂಡಳಿ ಕಾಳಜಿ ತೋರಬೇಕಿದೆ. ಇನ್ನೂ ಕಾಲ ಮಿಂಚಿಲ್ಲ,  ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎನ್ನುವ ಈ ಭಾಗದ ಜನರ ಕೂಗಿಗೆ ಸರಕಾರ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.  ಈ ಭಾಗದ ಅಸಮಾನತೆಯನ್ನೂ ಹೋಗಿಸುವುದರ ಜೊತೆಗೆ ವಿಶೇಷ ಸ್ಥಾನಮಾನಕ್ಕೆ ಅರ್ಥವನ್ನು ನೀಡಲು ಮುಂದಾಗಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *