ಕನ್ನಡಿಗರ ವೈಚಾರಿಕತೆಯ ಬೆಳವಣಿಗೆಗೆ ಶಿವರಾಮ ಕಾರಂತರ ಕೊಡುಗೆ ಅಪಾರ

ಶಿವರಾಮ ಕಾರಂತರ ಜನ್ಮದಿನ ಇಂದು

ಪೂರ್ಣ ಚಂದ್ರ ತೇಜಸ್ವಿಯವರು ಮಾದರಿ ಎಂದು ಪರಿಗಣಿಸಿದ‌ ಕಾರಂತರು

ಅನಕೃರವರ ರೀತಿಯ ತೆಳು ಮತ್ತು ಭಾವುಕ ಬರಹಗಳಲ್ಲಿ ಮುಳುಗಿದ್ದ ನನಗೆ ಶಿವರಾಮ ಕಾರಂತರ ಕಾದಂಬರಿಗಳು ವೈಚಾರಿಕ ಲೋಕವನ್ನು ಪರಿಚಯ ಮಾಡಿಸಿದವು. ಧರ್ಮರಾಯನ ಸಂಸಾರ ಕಾದಂಬರಿಗೆ ಮೊದಲಿನ ಸರಿಸುಮಾರು ಎಲ್ಲ ಕಾದಂಬರಿಗಳನ್ನೂ ಓದಿದ್ದೇನೆ. ಅವರ ನಂಬಿದವರ ನಾಕ ನರಕ, ಬೆಟ್ಟದ ಜೀವ, ಅಳಿದ ಮೇಲೆ , ಸರಸಮ್ಮನ ಸಮಾಧಿ, ಚಿಗುರಿದ ಕನಸು, ಮೊಗ ಪಡೆದ ಮನ, ಒಂಟಿದನಿ, ಇದ್ದರೂ ಚಿಂತೆ, ಕೇವಲ ಮನುಷ್ಯರು, ಇಂತಹ ಇಂದು ಹೆಚ್ಚು ಪ್ರಚಲಿತವಿರದ ಕಾದಂಬರಿಗಳನ್ನೂ, ಹೆಚ್ಚು ಪ್ರಸಿದ್ದವಾದ ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಮೈಮನಗಳ ಸುಳಿಯಲ್ಲಿ  ಮೊದಲಾದ ಕಾದಂಬರಿಗಳನ್ನೂ ಓದಿದೆ. ಬೆಳೆದೆ.

ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳು, ಬಾಳ್ವೆಯೇ ಬೆಳಕು, ಹಲವು ಪ್ರವಾಸ ಕಥನಗಳು, ಯಕ್ಷಗಾನ ಮತ್ತು ವರ್ಣ ಚಿತ್ರಗಳ ಬಗೆಗಿನ ಬರವಣಿಗೆ, ಮೈಲಿಕಲ್ಲಿನೊಡನೆ ಮಾತುಕತೆ ಮೊದಲಾದ ಅನೇಕ ಪ್ರಬಂಧಗಳು ಕನ್ನಡ ಪದಕೋಶ, ವಿಜ್ಞಾನ ಕೋಶ ಹೀಗೆ ಒಂದೇ ಎರಡೇ. ಜೊತೆಗೆ ಅವರ ಬಾಲವನ, ಯಕ್ಷರಂಗದ ಕೆಲಸಗಳು ನಮ್ಮೆಲ್ಲರನ್ನೂ ಸೆಳೆದಿದೆ.

ಅವರು ಒಂದು ವಿವಿ ಮಾಡುವಷ್ಟು ಕೆಲಸವನ್ನು ಒಬ್ಬರೇ ಮಾಡಿದರು.

ಅವರ ಬರಹಗಳು ನನಗೆ ಮತ್ತು ಕರ್ನಾಟಕದ ಸಾವಿರಾರು ಜನರಿಗೆ  ಕರಾವಳಿಯ ಬದುಕಿನ ಸೌಂದರ್ಯ ಮತ್ತು ವಿಶಿಷ್ಟತೆಯನ್ನು ಪರಿಚಯ ಮಾಡಿಸಿದ ಮೊದಲ ಕೃತಿಗಳೂ ಹೌದು.

ಚೋಮನ ದುಡಿಯಂತೂ ನಾನು ಹಲವು ಬಾರಿ ಓದಿದ ಕಾದಂಬರಿ. ಅಸ್ಪೃಶ್ಯತೆಯ ಭೀಕರತೆಯ ಬಗೆಗೆ ನನ್ನನ್ನು ಮೊದಲು ಎಚ್ಚರಿಸಿದ ಕಾದಂಬರಿ. ದಲಿತ-ಬಂಡಾಯ ಸಾಹಿತ್ಯ ಬರುವ 40 ವರ್ಷಗಳ ಮೊದಲೇ, ಕುವೆಂಪುರವರ ಗುತ್ತಿ ನಮಗೆ ಪರಿಚಯವಾಗುವ ಮೊದಲೇ ಚೋಮ ಮನೆ ಮಾತಾಗಿದ್ದ. ಇದು ಬಿ.ವಿ.ಕಾರಂತರ ನಿರ್ದೇಶನದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರವಾಯಿತು. ನಾನು 80 ವಾರಗಳ ಕಾಲ ಅಗ್ನಿ ಮತ್ತು ಜನಶಕ್ತಿ ವಾರ ಪತ್ರಿಕೆಗೆ ಬರೆದ ಅಂಕಣಕ್ಕೆ “ಚೋಮನ ದುಡಿ” ಎಂದೇ ಹೆಸರನ್ನಿರಿಸಿದೆ. ಈ ಕಾಲಮ್‌ನಲ್ಲಿಯೆ ಜಾತಿ ವ್ಯವಸ್ಥೆ ವೇದ, ಉಪನಿಷತ್ತುಗಳ ಅಂತರಾಳ, ನನ್ನದೇ ಸಂಶೋಧನೆಯ ನಿಜ ರಾಮಾಯಣದ ಅನ್ವೇಷಣೆ, ಮೊದಲಾದ ಅನೇಕ ವಿಷಯಗಳ ಬಗ್ಗೆ ಬರೆದಿದ್ದೇನೆ.

ಇಂತಹ ಶಿವರಾಮ ಕಾರಂತರು ಕರ್ನಾಟಕದಲ್ಲಿ ವೈಚಾರಿಕತೆಯ ಬೆಳಕು ಹಚ್ಚಲು ಒಂದು ಮುಖ್ಯ ಜ್ಞಾನದೀಪ. ಕುವೆಂಪುರವರು ತಮ್ಮ ಭಾಷಣಗಳು, ನಾಟಕಗಳು, ಕತೆ ಕಾದಂಬರಿಗಳ ಮೂಲಕ ನಮ್ಮ ವೈಚಾರಿತೆಯನ್ನು ಮತ್ತಷ್ಟು ವಿಸ್ತಾರವಾಗಿ ಬೆಳೆಸಿದ್ದಾರೆ ನಿಜ. ಆದರೆ ಶಿವರಾಮ ಕಾರಂತರ ಕೊಡುಗೆಯನ್ನು ಮರೆಯಲಾಗುವುದಿಲ್ಲ. ಅವರ ಕೃತಿಗಳು ಇಂದೂ ಮನರಂಜನೆಗಾಗಿ ಮತ್ತು ಅರಿವಿಗಾಗಿ ಅಧ್ಯಯನ ಯೋಗ್ಯ.

ಹಾಗೆಂದ ಕೂಡಲೇ ಅವರ ಎಲ್ಲ ಅಭಿಪ್ರಾಯ, ಕ್ರಿಯೆಗಳನ್ನು ಒಪ್ಪುವುದು ಎಂದೇನಲ್ಲ. ಅವರ ಕಾದಂಬರಿಗಳೂ ಕೂಡ ಕೊನೆಯ ಘಟ್ಟದಲ್ಲಿ ಅವರ ಚಿಂತನೆ ಮತ್ತು ಸೃಜನಶೀಲತೆಯ stagnation ಅನ್ನು ಪ್ರತಿಫಲಿಸಿದವು.

ಇದು ಎಲ್ಲಾ ರಂಗದ ಮನುಷ್ಯರಿಗೆ ಸಹಜವಾದದ್ದೇ. ಬಹಳ ಮೆಚ್ಚುವ ಅನೇಕ ಸಾಹಿತಿಗಳಿಗೂ ಅನ್ವಯಿಸುತ್ತದೆ.

ಅದರ ಒಂದು ವಿಷಫಲ ಅವರ ಜೀವನದ ಕೊನೆಯ ಘಟ್ಟದಲ್ಲಿ ಕೋಮುವಾದಕ್ಕೆ, ಬಾಬ್ರಿ ಮಸೀದಿ ನಾಶಕ್ಕೆ ಬೆಂಬಲಿಸಿದ್ದು.

ಜಿ.ಎನ್‌.ನಾಗರಾಜ್‌

Donate Janashakthi Media

Leave a Reply

Your email address will not be published. Required fields are marked *