ಕನ್ನಡದ ಪರವಾಗಿ ಧ್ವನಿ ಎತ್ತಿ- ನಾಯಕತ್ವ ನೀಡುವ ಅರ್ಹತೆಯನ್ನು ಕಸಾಪ ಕಳೆದುಕೊಂಡಿದೆ

ಪ್ರೊ. ಪುರುಷೋತ್ತಮ ಬಿಳಿಮಲೆ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶಿಶುನಾಳ ಷರೀಫರೇ ನಮಗೆ ಸಿಗುವ ಮೊದಲ ಮಹತ್ವದ ಕವಿ. ಆನಂತರ ಕೆ ಎಸ್‌ ನಿಸಾರ್‌ ಅಹಮದ್‌, ಬೊಳುವಾರು ಮಹಮ್ಮದ್‌ ಕುಞಿ, ಸಾರಾ ಅಬೂಬಕರ್,‌ ಹಸನ್ ನಯೀಂ ಸುರಕೋಡ, ರಹಮತ್‌ ತರೀಕರೆ ಮೊದಲಾದವರು ಕನ್ನಡದ ಸುಪ್ರಸಿದ್ಧ ಲೇಖಕರು.

ನನ್ನ ನಿಜವಾದ ಆತಂಕವಿರುವುದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದು ನಡೆಸುವ ಸಮ್ಮೇಳನಗಳು ಸಂಪೂರ್ಣ ಅನುಪಯುಕ್ತವಾಗಿರುವುದರ ಬಗ್ಗೆ. ತೆರಿಗೆದಾರರ ಹಣ ಪೋಲಾಗುತ್ತಿರುವುದರ ಬಗ್ಗೆ. ಕರ್ನಾಟಕ ಏಕೀಕರಣ ಚಳುವಳಿಯೂ ಸೇರಿದಂತೆ ಪರಿಷತ್ತು ಹಿಂದೆ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದೆ. ಆದರೆ ಇವತ್ತು ಅದಕ್ಕೆ ಏನೂ ಮಾಡಲಾಗುತ್ತಿಲ್ಲ.

21ನೇ ಶತಮಾನದ ಕನ್ನಡ – ಕರ್ನಾಟಕ ಇದಿರಿಸುತ್ತಿರುವ ಕೋಮುವಾದ ಮತ್ತು ಜಾಗತೀಕರಣದ ಪ್ರಶ್ನೆಗಳಿಗೆ ಪರಿಷತ್ತಿನಲ್ಲಿ ಯಾವುದೇ ಉತ್ತರಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ, ಹಿಂದಿ ಹೇರಿಕೆ, ಗಡಿ ಸಮಸ್ಯೆ, ತ್ರಿಭಾಷಾ ಸೂತ್ರ, ಇತ್ಯಾದಿಗಳಿಂದಾಗಿ ಕನ್ನಡ ಇವತ್ತು ಹಿಂದೆ ಬಿದ್ದಿದೆ. ಇಂಥ ವಿಷಯಗಳಲ್ಲಿ ಕನ್ನಡದ ಪರವಾಗಿ ಧ್ವನಿ ಎತ್ತಿ, ನಾಯಕತ್ವ ನೀಡುವ ಅರ್ಹತೆಯನ್ನು ಪರಿಷತ್ತು ಕಳೆದುಕೊಂಡಿದೆ. ಪರಿಷತ್ತೇ ಸಮ್ಮೇಳನಗಳಲ್ಲಿ ಅಂಗೀಕರಿಸಿದ ನಿರ್ಣಯಗಳೆಷ್ಟು? ಅವುಗಳ ಗತಿ ಏನಾಗಿದೆ? ಸರಕಾರೀ ಅಂಗ ಸಂಸ್ಥೆಯಾಗಿ ಬೆಳೆದಿರುವ ಅದು ಸಾಹಿತ್ಯದ ಮೂಲ ಭೂತ ಗುಣಗಳಿಗೆ ವ್ಯತಿರಿಕ್ತವಾದ ಕೆಲಸಗಳನ್ನು ಮಾಡುತ್ತಿದೆ.

ಲಕ್ಷಾಂತರ ಸದಸ್ಯರಿರುವ ಪರಿಷತ್ತಿಗೆ ಇವತ್ತು ಸಂವೇದನಾಶೀಲ ಲೇಖಕರು ಅಧ್ಯಕ್ಷರಾಗುವುದೂ ಸಾಧ್ಯವಿಲ್ಲ ಎಂಬುದೂ ಸಾಬೀತಾಗಿದೆ. ಈ ಎಲ್ಲಾ ಕಾರಣದಿಂದಾಗಿ ಜನರು ಉಪಯುಕ್ತವಾದ ಒಂದು ಸಾಹಿತ್ಯಿಕ ಸಂಘಟನೆಯನ್ನು ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ. ಅದು ಒಂದು ಬಗೆಯ ಪ್ರತಿಭಟನೆಯಿಂದ ಆರಂಭವಾಗುವುದೂ ಅನಿವಾರ್ಯ. ಆದರೆ ಪ್ರತಿಭಟನೆಯೇ ಅದರ ಕೆಲಸವಲ್ಲ, ಕೆಲಸವಾಗಬಾರದು.

ಇದನ್ನು ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ, ಕ್ಷಮೆ ಕೋರಿದ ದೊಡ್ಡರಂಗೇಗೌಡ

ನಾನು ಹೇಳುತ್ತಿರುವುದು ಹೊಸ ಮಾತುಗಳೇನೂ ಅಲ್ಲ. ೧೯೭೫ರಲ್ಲಿ ಕುವೆಂಪು ಅವರು ಮೈಸೂರಿನಲ್ಲಿ ಉದ್ಘಾಟಿಸಿದ ಬರಹಗಾರ ಕಲಾವಿದರ ಸಮ್ಮೇಳನದಲ್ಲಿ ಆಡಿದ ಮಾತುಗಳು ಇಂದಿಗೂ ನಮಗೆ ಪ್ರೇರಣೆ ನೀಡುತ್ತಿವೆ. ಇಂಥ ಕೆಲಸಗಳು ನಿರಂತರವಾಗಿ ನಡೆಯಬೇಕಾಗುತ್ತದೆ. ಪಿ. ಲಂಕೇಶ್‌, ಸುಬ್ಬಣ್ಣ, ಪೂರ್ಣ ಚಂದ್ರ ತೇಜಸ್ವಿ, ರಾಮದಾಸ್‌ ಮೊದಲಾದವರ ಮಾರ್ಗ ನಮ್ಮ ಮುಂದಿದೆ.

ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಮರನ್ನು ಹೊರಗಟ್ಟಿರುವುದು ತಕ್ಷಣಕ್ಕೆ ಎದ್ದು ಕಾಣುವ ಸಂಗತಿಯಾಗಿದೆ. 83 ಜನ ಸನ್ಮಾನಿತರಲ್ಲಿ ಮುಸ್ಲಿಮನೊಬ್ಬನೂ ಇರದಿರುವುದು ಆಕಸ್ಮಿಕ ಏನೂ ಅಲ್ಲ. ಇದೊಂದು ಕೋಮುವಾದೀ ಪ್ರಕ್ರಿಯೆ. ಹಾಗಂತ ನಾವಿದನ್ನು ಹೇಳಿದರೆ – ʻನೋಡಿ ಇವರು ಜನರನ್ನು ಒಡೆಯುತ್ತಿದ್ದಾರೆʼ ಎಂದು ಅವರೇ ಹೇಳಬಹುದು.

ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಲೇಖಕರನ್ನು ಹೊರಗಿಟ್ಟಿರುವುದು ಆಕಸ್ಮಿಕ ಏನೂ ಅಲ್ಲ. ನೆಹರೂ ಅಂಥ ಲೇಖಕರನ್ನೇ ಹೊರಗಿಟ್ಟವರಿವರು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತನ್ನ ನಿಲುವನ್ನು ನೇರವಾಗಿಯೇ ಪ್ರಕಟಿಸಬೇಕು (ಕೆಲವರನ್ನು ಕರೆದಿದ್ದು ಅವರು ಬರುವುದಿಲ್ಲ ಎಂದೂ ಹೇಳಿರಬಹುದು!) ಈ ಸಂದರ್ಭದಲ್ಲಿ ನಾವು ಕೆಲವು ಮುಸ್ಲಿಂ ಲೇಖಕರ ಹೆಸರನ್ನಾದರೂ ನೆನಪು ಮಾಡಿಕೊಳ್ಳೋಣ…..

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶಿಶುನಾಳ ಷರೀಫರೇ ನಮಗೆ ಸಿಗುವ ಮೊದಲ ಮಹತ್ವದ ಕವಿ. ಆನಂತರ ಕೆ ಎಸ್‌ ನಿಸಾರ್‌ ಅಹಮದ್‌, ಬೊಳುವಾರು ಮಹಮ್ಮದ್‌ ಕುಞಿ, ಸಾರಾ ಅಬೂಬಕರ್,‌ ಹಸನ್ ನಯೀಂ ಸುರಕೋಡ, ರಹಮತ್‌ ತರೀಕರೆ ಮೊದಲಾದವರು ಕನ್ನಡದ ಸುಪ್ರಸಿದ್ಧ ಲೇಖಕರು.

ಬೊಳುವಾರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಬರಬೇಕು. ದಾದಾಪೀರ್‌ ಜೈನ್ ಅವರಿಗೆ ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಸಬೀಹಾ ಭೂಮಿ ಗೌಡರು ಲೇಖಕಿಯಾಗಿ ಪ್ರಸಿದ್ಧರು.

ಮುಸ್ಲಿಂ ಲೇಖಕರು ಬಹಳ ಜನ ಇದ್ದಾರೆ. ಬಹುಶ: ಮುಂದಿನ 10 ವರ್ಷದಲ್ಲಿ ಕನ್ನಡದ ಲೇಖಕರೆಂದರೆ ಮುಸ್ಲಿಮರೇ ಆಗಿರುತ್ತಾರೆ. ಅವರಲ್ಲಿ ನನಗೆ ಕೂಡಲೇ ನೆನಪಿಗೆ ಬರುವವರೆಂದರೆ, ಆರಿಫ್‌ ರಾಜಾ, ಎ ಕೆ ಕುಕ್ಕಿಲ, ಬಿ ಎಂ ಬಷೀರ್, ಇಸ್ಮಾಯಿಲ್, ಮಹಮ್ಮದ್‌ ಕುಳಾಯಿ, ಗಂಗಾವತಿ ಸಲೀಮಾ, ಅಬ್ಬುಸ್ಸಲಾಮ್ ಪುತ್ತಿಗೆ, ಇಬ್ರಾಹಿಂ ಸಯೀದ್ ಸಾಬ್, ಸಲಾಂ ಸಮ್ಮಿ, ಬಾನು ಮುಷ್ತಾಕ್, ಫಾತಿಮಾ ರಲಿಯಾ, ಕೆ ಷರೀಫಾ, ಡಿ ಬಿ ರಜಿಯಾ, ಜಹಾನ್ ಆರಾ, ಎ ಎಸ್ ಮಕಾನದಾರ, ಬಿ ಪೀರ್ ಭಾಷಾ, ಅಜಮೀರ ನಂದಾಪುರ, ದಸ್ತಗೀರ್ ದಿನ್ನಿ, ಇಮಾಮ್ ಹಡಗಲಿ, ಮುಸ್ತಾಫಾ, ಡಾ. ಮಕ್ತೂಂಬಿ ಮುಲ್ಲಾ, ಶಿ ಜು ಪಾಶಾ, ಮೆಹಬೂಬ್ಬಿ ಶೇಖ್, ಸಿರಾಜ್ ಬಿಸರಳ್ಳಿ, ನಜ್ಮಾ ನಜೀರ್ ಚಿಕ್ಕನೇರಳೆ, ಮುನವ್ವರ್ ಜೋಗಿಬೆಟ್ಟು, ಬಿ ಎಂ ಹನೀಫ್‌, ಮೆಹಬೂಬಭಾಷಾ ಮಕಾನದಾರ, ಬಾಬು ಮನಸೇ, ಹಕೀಂ ಪದಡ್ಕ, ಹಸನ್ಮುಖಿ ಬಡಗನ್ನೂರು, ಆಸೀಫಾ, ನೂರಜಾನ್, ಸಕೀನಾ ಬೇಗಂ, ಸುನೈಫ್ ವಿಟ್ಲ, ಇಮಾಮ್ ಹಡಗಲಿ, ಅಮೀರಸಾಬ ವಂಟಿ, ಉಮರ್ ದೇವರಮನಿ, ಅಮೀನ್ ಅತ್ತಾರ್, ಸಯ್ಯದ್ ಸಿಕಂದರ್ ಮೀರ್ ಅಲಿ, ಚಾಂದ್ ಕವಿಚಂದ್ರ, ಕಾ ಹು ಚಾನಪಾಶಾ, ಸೈಫ್ ಜಾನ್ಸೆ, ರಾಜೇಸಾಬ ಬಾಗವಾನ್, ಶರೀಫ್ ಹಸಮಕಲ್, ಆಶಿಖ್ ಮುಲ್ಕಿ, ಇಮಾಮ್ ಗೋಡೆಕಾರ, ಸಿಹಾನಾ ಎಂ ಬಿ ಮೊದಲಾದವರು. (ಈ ಪಟ್ಟಿ ಸಮಗ್ರ ಅಲ್ಲ ಅಂತ ನನಗೆ ತಿಳಿದಿದೆ, ನಿಮಗೆ ತಿಳಿದಿರುವ ಬೇರೆ ಹೆಸರುಗಳು ದಯವಿಟ್ಟು ಸೇರಿಸಿ). ಕನಿಷ್ಠ ಒಂದಾದರೂ ಪುಸ್ತಕ ಪ್ರಕಟಿಸಿದ ಮುಸ್ಲಿಂ ಲೇಖಕ-ಲೇಖಕಿಯರ ಸಂಖ್ಯೆ ಆಗಲೇ ೬೦೦ನ್ನು ಮೀರಿದೆ. ಹೊಸ ಹೆಸರುಗಳು ಇನ್ನೂ ಬರುತ್ತಲೇ ಇವೆ. ಹೆಸರುಗಳನ್ನು ಕಳಿಸಿಕೊಟ್ಟ ಎಲ್ಲರಿಗೂ ಧನ್ಯವಾದಗಳು.

ಇದನ್ನು ಓದಿ: 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು ಅಗತ್ಯ

ಕನ್ನಡ ಸಾಹಿತ್ಯ ಪರಿಷತ್ತು ಬಹುತೇಕವಾಗಿ ಅನುಪಯುಕ್ತವಾಗಿರುವ ಹಿನ್ನೆಲೆಯಲ್ಲಿ ಉಪಯುಕ್ತ ಸಮ್ಮೇಳನ ಹೇಗೆ ನಡೆಸಬೇಕೆಂಬುದರ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಮಧ್ಯಮ ವರ್ಗಕ್ಕೆ ಸಹಜವಾದ ವ್ಯಂಗ್ಯ, ಹತಾಶೆ, ಸಿನಿಕತನಗಳೂ ಸಹಜವಾಗಿ ಕಾಣಿಸಿಕೊಳ್ಳುತ್ತಿವೆ. ಅತ್ಯಂತ ಹೆಚ್ಚು ಪ್ರತಿಕ್ರಿಯೆಗಳು ಉತ್ತರ ಕರ್ನಾಟಕದ ಭಾಗದಿಂದ ಬರುತ್ತಿರುವುದು ಕುತೂಹಲದ ವಿಷಯವಾಗಿದೆ.

ಪರ್ಯಾಯ ಸಮ್ಮೇಳನವನ್ನು ನಡೆಸಲು ದಾವಣಗೆರೆ ಅಥವಾ ಬೆಂಗಳೂರು ಅನುಕೂಲ. ಕೋಲಾರ, ಮೈಸೂರು, ಶಿವಮೊಗ್ಗವೂ ಆದೀತು. ದೇವನೂರು ಮಹಾದೇವ ಬರಬೇಕು. ಬರಗೂರು ರಾಮಚಂದ್ರಪ್ಪ ಇರಬೇಕು. ಡಾ. ರಾಜೇಂದ್ರ ಚೆನ್ನಿ, ಅರುಣ್‌ ಜೋಳದಕೂಡ್ಲಿಗಿ, ಬಿ ಎಂ ಹನೀಫ್‌ ಮೊದಲಾದವರು ಬರುತ್ತಾರೆ. ಅವರವರದೇ ಖರ್ಚು ಕೂಡ. ಸಭಾಂಗಣ, ಮಧ್ಯಾಹ್ಯ ಊಟ, ಧ್ವನಿವರ್ಧಕ, ಚಹಾ ಇತ್ಯಾದಿಗಳಿಗೆ ಕ್ರೌಡ್‌ ಫಂಡಿಂಗ್‌ ಮಾಡೋಣ.

ನಾನು ನನ್ನ ಖರ್ಚಲ್ಲಿ ಬರುತ್ತೇನೆ. ಸತ್ಯನಾರಾಯಣ ಪೂಜೆಗೆ ಸುದ್ದಿ ಕೇಳಿಯೇ ಹೋಗಬೇಕಂತೆ. ಇದೂ ಹಾಗೆಯೇ ಆಗಲಿ. ಸಮ್ಮೇಳನದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯಃಕಶ್ಚಿತವೂ ಅಲ್ಲ. ಯಾರಾದರೂ ಸಮರ್ಥ ನಾಯಕತ್ವ ಕೊಡಿ!

ಇದನ್ನು ನೆವ ಮಾಡಿಕೊಂಡು ನಾವೆಲ್ಲ ಮತ್ತೊಂದು ವೇದಿಕೆಯನ್ನು ಕಟ್ಟಿಕೊಂಡು ಕ್ರಿಯಾಶೀಲರಾಗಬೇಕಾದ್ದು ಅತ್ಯಗತ್ಯ. ಅಂದರೆ ಮುಸ್ಲಿಂ ಲೇಖಕರ ಸಮ್ಮೇಳನ ಮಾಡುವುದು ಎಂಬ ಅರ್ಥವಲ್ಲ. ನಾಡು ನುಡಿಗೆ ಉಪಯುಕ್ತವಾದ ಒಂದು ಸಮಾವೇಶವನ್ನು ಎಲ್ಲರೂ ಒಳಗೊಂಡಂತೆ ನಡೆಸುವುದು ಎಂದರ್ಥ. ಇದಕ್ಕೆ ದೂರಗಾಮೀ ಪರಿಣಾಮ ಬೀರುವ ಶಕ್ತಿ ಇರುವುದರಿಂದ ಸಾಕಷ್ಟು ಯೋಚಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಯೋಚನೆಗಳಿಗೆ ಇದುವರೆಗೆ ದೊರೆತ ಬೆಂಬಲ ಮಾತ್ರ ಅಸಾಧಾರಣ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಹಿಂದೊಮ್ಮೆ ಪರ್ಯಾಯ ಸಮ್ಮೇಳನ ನಡೆಸಿದ್ದೆವು. ನಾವೆಲ್ಲ ಮನಸು ಮಾಡಿದರೆ ಅದನ್ನು ಶುರು ಮಾಡುವುದು ಕಷ್ಟ ಅಲ್ಲ. ಎಲ್ಲವನ್ನೂ ಅಳೆದು ತೂಗಿ, ಗಡಿಬಿಡಿ ಮಾಡದೆ, ಉಪಯೋಗವಾಗುವಂಥ ಏನಾದರೂ ಮಾಡೋಣ. ಅದು ಈ ಹೊತ್ತಿನ ನಮ್ಮ ಜವಾಬ್ದಾರಿಯೂ ಹೌದು.

Donate Janashakthi Media

Leave a Reply

Your email address will not be published. Required fields are marked *