ವಿಜಯನಗರ: ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ), ರಾಜ್ಯ ನಿಯೋಗವು ಕನ್ನಡ ವಿಶ್ವವಿದ್ಯಾಲಯ – ಹಂಪಿಗೆ ಭೇಟಿ ನೀಡಿ ಸಂಶೋಧನ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಾಕಿ ಇರುವ ವಿದ್ಯಾರ್ಥಿ ವೇತನ, ವಿಶ್ವವಿದ್ಯಾಲಯದಲ್ಲಿನ ಭ್ರಷ್ಟಾಚಾರ ಸೇರಿದಂತೆ ಪ್ರಸಕ್ತ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಹಲವು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಎಸ್ಎಫ್ಐ ರಾಜ್ಯ ಸಮಿತಿಯು ಕುಲಪತಿ ಸ.ಚಿ.ರಮೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿ ಸಂಘಟನೆಯ ನಿಯೋಗವು ಅನೇಕ ವಿಭಾಗಗಳಿಗೆ ಭೇಟಿ ನೀಡಿದಾಗ ಹಾಗೂ ವಿದ್ಯಾರ್ಥಿಗಳನ್ನು ಸಂಪರ್ಕಿಸಿದಾಗ ಅವರ ಅಭಿಪ್ರಾಯ ತೀವ್ರತರದ ನೋವನ್ನು ಉಂಟು ಮಾಡಿತು. ವಿಶ್ವವಿದ್ಯಾಲಯವು ಹಲವು ರೀತಿಯ ಸಮಸ್ಯೆಗಳ ಗೂಡಗಿದ್ದು ಹೇಳಿಕೊಳ್ಳುವ ಯಾವುದೇ ರೀತಿಯ ಕಾರ್ಯಚಟುವಟಿಕೆಗಳು ನಡೆಯದೆ ಎಲ್ಲವೂ ಶವಾಸನದ ರೀತಿಯಲ್ಲಿ ಮೌನವಾಗಿವೆ ಎನ್ನುವುದು ಕಂಡುಬರುತ್ತದೆ ಎಂದಿದ್ದಾರೆ.
ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಬಹುಮುಖ್ಯವಾಗಿ ಭಾಷೆಯನ್ನು ಕಟ್ಟುವುದು, ಅಂತರ್ ಶಿಸ್ತಿಯ ಅಧ್ಯಯನಗಳನ್ನು ಮಾಡುವುದು ಹಾಗೂ ಭಾಷೆಯ ಜ್ಞಾನವನ್ನು ತರಬೇತಿಗೊಳಿಸಿ ನಾಡಿಗೆ ವಿಸ್ತರಿಸಬೇಕಾದ ಸಂದರ್ಭದಲ್ಲಿ ವೈಯಕ್ತಿಕ ನಿಂದನೆ, ಭ್ರಷ್ಟಾಚಾರ, ಪ್ರಾಧ್ಯಾಪಕರ ಮೇಲಿನ ಪೊಲೀಸ್ ಮೊಕದ್ದಮೆಗಳು, ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಪ್ರತಿಭಟನೆಗಳು ಎಲ್ಲವೂ ಕನ್ನಡ ವಿವಿ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ.
ಕಮೀಷನ್ ರೂಪದಲ್ಲಿ ಪಡೆದ ಭ್ರಷ್ಟಾಚಾರದ ಬಗ್ಗೆ ಸಿಂಡಿಕೇಟ್ ನ ವಿಸ್ತೃತ ಸಭೆಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ನಿರ್ಣಯ ಕೈಗೊಂಡಿರುವಾಗ ಅದನ್ನು ಹೊರತುಪಡಿಸಿ ಇಬ್ಬರು ಸಿಂಡಿಕೇಟ್ ಸದಸ್ಯರನ್ನು ಒಳಗೊಂಡ ಮತ್ತೊಂದು ಸಮಿತಿಯನ್ನು ರಚಿಸಿ ಆಂತರಿಕ ತನಿಖೆ ಆರಂಭ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಸ್ಎಫ್ಐ ನಿಯೋಗ ಭೇಟಿ ನೀಡಿದ ಸಂದರ್ಭದಲ್ಲಿ ತನಿಖೆ ನಡೆಯುವ ಸಮಯದಲ್ಲಿ ಸಿಂಡಿಕೇಟ್ ಸದಸ್ಯರು ಸಮಸ್ಯೆಗಳನ್ನು ಹೇಳಿಕೊಂಡ ವಿದ್ಯಾರ್ಥಿಗಳೊಂದಿಗೆ ವಾಗ್ವಾದಕ್ಕೆ ಇಳಿದು ವ್ಯೆಯಕ್ತಿಕವಾಗಿ ನಿಂದನೆಗೆ ಗುರಿ ಮಾಡಿ, ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಉಂಟು ಮಾಡಿ ಅವರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಇಂದು ಸಮಿತಿಯ ತನಿಖೆ ಮುಂದುವರೆದು ಹಲವು ವಿಭಾಗಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಯಾವೊಂದು ಸಮಸ್ಯೆಗಳನ್ನು ಕೇಳುವ ತಾಳ್ಮೆಯೂ ಅವರಲ್ಲಿ ಹೆಚ್ಚು ಇರಲಿಲ್ಲ. ವಿದ್ಯಾರ್ಥಿಗಳ ಹಕ್ಕುಗಳನ್ನು ಹತ್ತಿಕುವ ಛಾಪಾ ಕಾಗದ ಹಾಗೂ ಗ್ರಂಥಾಲಯ ಮತ್ತು ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿ ಸೇರಿದಂತೆ ಇತರೆ ಸಮಸ್ಯೆಗಳನ್ನು ವಿದ್ಯಾರ್ಥಿಗಳು ತನಿಖಾ ಸಮಿತಿಯ ಮುಂದಿಟ್ಟಾಗ ನೇರವಾಗಿ ಸಮಸ್ಯೆಗಳು ನಮಗೆ ಸಂಬಂಧಿಸಿಲ್ಲ ಎಂದು ನಿರ್ಲಕ್ಷ್ಯ ತೋರಿ ಜಾರಿಕೊಳ್ಳುವ ಪ್ರಯತ್ನ ನಡೆಯಿತು ಎಂದು ನಿಯೋಗವು ತನ್ನ ಮನವಿಯಲ್ಲಿ ತಿಳಿಸಿದೆ.
ಅಷ್ಟೇ ಅಲ್ಲದೆ ವಿಭಾಗದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಸಮಿತಿಗೆ ಬಿಚ್ಚಿಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜೋರು ಧ್ವನಿಯಲ್ಲಿ ಹೆದರಿಸುವ, ವಿದ್ಯಾರ್ಥಿಗಳ ಒಗ್ಗಟ್ಟನ್ನು ಪ್ರತ್ಯೇಕಿಸುವ ಕೆಲಸವನ್ನು ಸಮಿತಿಯು ಮಾಡಿತು ಎನ್ನಲಾಗಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸತ್ಯ ಶೋಧನ ಸಮಿತಿ ರಚನೆಯಾಗಿ ನಿಷ್ಪಕ್ಷಪಾತ ತನಿಖೆಗೆ ಮುಂದಾಗಿ ಕನ್ನಡ ವಿಶ್ವವಿದ್ಯಾಲಯದ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕಾಗಿದೆ ಎಂದು ಎಸ್ಎಫ್ಐ ನಿಯೋಗವು ವಿವರಿಸಿದೆ.