ಕನ್ನಡ ವಿಶ್ವವಿದ್ಯಾಲಯ ನೈಜ ಬುದ್ಧಿಮತ್ತೆ ಶೋಧಿಸುವಲ್ಲಿ ಸದಾ ನಿರತ: ಡಾ.ಬಿ.ಎ.ವಿವೇಕ ರೈ

ಹಂಪಿ: ಕನ್ನಡ ವಿಶ್ವವಿದ್ಯಾಲಯವು ಸಂಶೋಧನೆ ಮಾಡಿರುವ ದೇಶಿ ಜ್ಞಾನದ ಮುಂದೆ ಇಂದಿನ ಕೃತಕ ಬುದ್ಧಿಮತ್ತೆಯು ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯವು ನೈಜ ಬುದ್ಧಿಮತ್ತೆಯನ್ನು ಶೋಧಿಸುವಲ್ಲಿ ಸದಾ ನಿರತವಾಗಿದೆ. ಇಂತಹ ವಿಶ್ವವಿದ್ಯಾಲಯದ ಸ್ವಾಯುತ್ತತೆಯ ಜೊತೆಗೆ ಅಸ್ಮಿತೆ ಮತ್ತು ಅನನ್ಯತೆಯನ್ನು ಉಳಿಸಿಕೊಳ್ಳಲು ಸಮಾಜ ಮತ್ತು ಸರ್ಕಾರದ ನೆರವು ತುಂಬಾ ಮುಖ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬುದ್ಧಿಮತ್ತೆ

ಮುಂದುವರೆದು ಮಾತನಾಡುತ್ತಾ ‘ಕನ್ನಡ ಭಾಷೆಗೆಂದೆ ಸ್ಥಾಪನೆಯಾದ ಕನ್ನಡ ವಿಶ್ವವಿದ್ಯಾಲಯಕ್ಕೆ ನಾಡಿನಲ್ಲಿ ವಿಶಿಷ್ಟವಾದ ಸ್ಥಾನ ಮತ್ತು ದಾರಿಯಿದೆ. ಇತರೆ ವಿಶ್ವವಿದ್ಯಾಲಯಗಳಂತೆ ಇದನ್ನು ಪರಿಗಣ ಸುವುದು ಸರಿಯಲ್ಲ. ನಾಡು-ನುಡಿ ಕುರಿತಂತೆ ದೂರದೃಷ್ಠಿಯ ಯೋಜನೆಗಳನ್ನು ರೂಪಿಸುವ ಶಕ್ತಿ ಕನ್ನಡ ವಿಶ್ವವಿದ್ಯಾಲಯಕ್ಕಿದೆ. ಬುದ್ಧಿಮತ್ತೆ

ಇದನ್ನೂ ಓದಿ: ಕೋಲ್ಕತಾ ವೈದ್ಯೆ ಹತ್ಯೆಯಂತಹ ಘಟನೆ ಸಹಿಸಲು ಸಾಧ್ಯವೇ ಇಲ್ಲ: ರಾಷ್ಟ್ರಪತಿ ದ್ರೌಪದಿ ಮರ್ಮು

ವಿಶ್ವವಿದ್ಯಾಲಯದ ವಿವಿಧ ನಿಕಾಯಗಳಲ್ಲಿ ನಡೆದಿರುವಷ್ಟು ಸಂಶೋಧನಾ ಕಾರ್ಯಗಳು, ಸಾಂಸ್ಥಿಕ ಮತ್ತು ವೈಯಕ್ತಿಕ ಯೋಜನೆಗಳು ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಕಂಡು ಬರುವುದಿಲ್ಲ. ಇಂತಹ ಕಾರ್ಯಗಳನ್ನು ವಿಶ್ವವಿದ್ಯಾಲಯ ನಿರಂತರವಾಗಿ 33 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಇದನ್ನು ಯಾವುದೇ ಪ್ರಾಧಿಕಾರಗಳು ಅಕಾಡೆಮಿಗಳು ಮಾಡಲು ಸಾಧ್ಯವಿಲ್ಲ. ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಇರುವ ತಪ್ಪು ಕಲ್ಪನೆ ಮತ್ತು ಪೂರ್ವಗ್ರಹಗಳನ್ನು ಹೋಗಲಾಡಿಸಿ ಜಾಗತಿಕ ಮಟ್ಟದಲ್ಲಿ ವಿಶ್ವವಿದ್ಯಾಲಯದ ಎಲ್ಲ ಕೆಲಸ- ಕಾರ್ಯಗಳು ಮಾಧ್ಯಮಗಳ ಮೂಲಕ ಪ್ರಸಾರವಾಗಬೇಕು. ಇಲ್ಲಿ ನಡೆಯುವ ಸಂಶೋಧನೆಯ ಫಲಿತಗಳನ್ನು ಡಿಜಿಟಲ್ ರೂಪದಲ್ಲಿ ಪ್ರಸರಣ ಮಾಡಬೇಕು. ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವಿಗಾಗಿ ಸದಾ ಶ್ರಮಿಸುತ್ತಿರುವ ವಿಶ್ವವಿದ್ಯಾಲಯವನ್ನು ಇತರ ವಿಶ್ವವಿದ್ಯಾಲಯಗಳಂತೆ ಪರಿಗಣಸದೇ ವಿಶೇಷ ಎಂದು ಪರಿಗಣಸಿ ಇದರ ಅಭಿವೃದ್ಧಿಗಾಗಿ ಸರ್ಕಾರಗಳು ಆರ್ಥಿಕ ಮತ್ತು ನೈತಿಕ ಬೆಂಬಲವನ್ನು ನೀಡಬೇಕು. ಜೊತೆಗೆ ನಾಡಿನಲ್ಲಿರುವ ಉದ್ಯಮ ಸಂಸ್ಥೆಗಳು ಕೂಡ ತಮ್ಮ ಲಾಭದ 10 ನೇ 1 ಭಾಗವನ್ನು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನೀಡಬೇಕು’ ಎಂದರು.

ಬುದ್ಧಿಮತ್ತೆ

‘ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘವು ಶೈಕ್ಷಣಿಕ, ಆರ್ಥಿಕ ಮತ್ತು ನೈತಿಕ ಸಹಕಾರವನ್ನು ನೀಡುವುದರ ಮೂಲಕ ಭಾವನಾತ್ಮಕ ಸಂಬಂಧವನ್ನು ಬೆಸೆಯಬೇಕು. ಇದರ ಜೊತೆಗೆ ಸಂಘವು ಪ್ರೀತಿ ಮತ್ತು ಒಳಗೊಳ್ಳುವಿಕೆಯನ್ನು ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿಯಾದ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವ ಡಾ.ಎ. ಚೆನ್ನಪ್ಪ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ‘ಕನ್ನಡ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘವು ಭಾವನಾತ್ಮಕ ಸಂಬಂಧವನ್ನು ಬೆಸೆಯುವುದರ ಜೊತೆಗೆ ಹಣಕಾಸು ಮತ್ತು ನೈತಿಕವಾಗಿಯೂ ಧ್ವನಿ ಎತ್ತುವುದು. ಶಿಕ್ಷಣ, ಸಂಶೋಧನೆ ಮತ್ತು ಸಂಘಟನೆಯೊಂದಿಗೆ ವಿಶ್ವವಿದ್ಯಾಲಯದ ಇನ್ನಷ್ಟು ಕೆಲಸ ಕಾರ್ಯಗಳಿಗೆ ನಾವು ಸದಾ ಸಹಕಾರವನ್ನು ನೀಡುತ್ತೇವೆ’ ಎಂದು ತಿಳಿಸಿದರು.

ಕಿರ್ಲೋಸ್ಕರ್ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಕಮಲ ಗುಮಾಸ್ತೆ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ‘ಕನ್ನಡ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು ನಶಿಸಿ ಹೋಗುತ್ತಿರುವ ಕಲೆಗಳ ರಕ್ಷಣೆ, ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು’ ಎಂದು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ.ಎಸ್.ವೈ. ಗುರುಶಾಂತ ಅವರು ಮಾತನಾಡುತ್ತ ‘ ಕನ್ನಡ ವಿಶ್ವವಿದ್ಯಾಲಯ ಭಾಷೆ ಮತ್ತು ಸಂಸ್ಕೃತಿಗೆಂದೇ ಮೀಸಲಾದ ಪ್ರಪಂಚದಲ್ಲೇ ವಿಶಿಷ್ಟವಾದ ವಿಶ್ವವಿದ್ಯಾಲಯ. ಇದು ಜ್ಞಾನ ಕಲಿಸುವ ವಿಶ್ವವಿದ್ಯಾಲಯವಲ್ಲ, ಜ್ಞಾನವನ್ನು ಉತ್ಪಾದಿಸುವ ವಿಶ್ವವಿದ್ಯಾಲಯ. ಆದರೆ ಇಂತಹ ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಭಾಷೆ ಎನ್ನುವುದು ಕೇವಲ ಅಭಿವ್ಯಕ್ತಿಯ ಮಾಧ್ಯಮವಷ್ಟೇ ಅಲ್ಲ. ಅದು ನಮ್ಮ ಜನಸಮುದಾಯಗಳ ಬದುಕು ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಅಂತಹ ಅನನ್ಯತೆಯನ್ನು ಕನ್ನಡ ವಿಶ್ವವಿದ್ಯಾಲಯ ಹೊಂದಿದ್ದು ಏಕೀಕೃತ ಮತ್ತು ಏಕ ಸ್ವಾಮ್ಯತ್ವದ ಪ್ರಕ್ರಿಯೆಗಳ ಎದುರಿನಲ್ಲಿ ಬಹುತ್ವದ ಇಂತಹ ವಿಶ್ವವಿದ್ಯಾಲಯ ಉಳಿಯಬೇಕು ಮತ್ತು ಬೆಳೆಯಬೇಕು. ವಿಶ್ವವಿದ್ಯಾಲಯದ ಬೆಳವಣಗೆಗಾಗಿ ಹಳೆಯ ವಿದ್ಯಾರ್ಥಿಗಳ ಸಂಘವು ಎಲ್ಲರನ್ನು ಒಳಗೊಳಿಸಿಕೊಂಡು ಕೆಲಸ ಮಾಡುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಶ್ರಮಿಸುತ್ತೇವೆ’ ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಡಾ. ವಿಜಯ್ ಪೂಣಚ್ಛ ತಂಬಂಡ ಅವರು ಮಾತನಾಡುತ್ತ ವಿಶ್ವವಿದ್ಯಾಲಯ ಬೌದ್ಧಿಕತೆಯ ಮೇಲೆ ನಿಂತಿರುವುದು. ಸಾಹಿತ್ಯ, ಕಲೆ, ಜನಪದ, ಕೆಳ ಸಮುದಾಯಗಳ ಬಗೆಗಿನ ಚಿಂತನೆಗಳನ್ನು ಪ್ರಸಾರ ಮಾಡುವ ಜವಾಬ್ದಾರಿಯನ್ನು ಹಳೆ ವಿದ್ಯಾರ್ಥಿಗಳ ಸಂಘ ವಹಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ‘ಹಳೆ ವಿದ್ಯಾರ್ಥಿಗಳ ಸಂಘವು ವಿಶ್ವವಿದ್ಯಾಲಯ ಮತ್ತು ಸಮಾಜವನ್ನು ಬೆಸೆಯುವ ಕೊಂಡಿಯಾಗಬೇಕು. ಸಂಘಕ್ಕೆ ಬೇಕಾದ ಸಹಕಾರವನ್ನು ನೀಡಲು ಇಲ್ಲಿನ ಆಡಳಿತ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸದಾ ಸಿದ್ದರಿರುತ್ತಾರೆ’ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಯೋಜನಾ ಘಟಕದ ಸಮನ್ವಯಾಧಿಕಾರಿಯಾದ ಡಾ. ಹೆಚ್.ಡಿ. ಪ್ರಶಾಂತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ.ನಾಗಣ್ಣ ಕಿಲಾರಿ ಅವರು ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಗಳಾದ ಡಾ. ಓ.ದೇವರಾಜ್ ನಿರೂಪಿಸಿದರು. ಅಧ್ಯಯನಾಂಗದ ನಿರ್ದೇಶಕರಾದ ಡಾ.ಅಮರೇಶ್ ಯತಗಲ್ ವಂದಿಸಿದರು. ಈ ಸಂಧರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ನೋಡಿ: ರೈತರ ಭೂಮಿ ಜಿಂದಾಲ್‌ಗೆ! ರೈತರ ಬೆನ್ನಿಗೆ ಚೂರಿ ಹಾಕಿದ ರಾಜ್ಯ ಸರ್ಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *