ಕನ್ನಡ ಪ್ರಜ್ಞೆಯ ಸುತ್ತಮುತ್ತ : ನಾಡು-ನುಡಿ-ಚಿಂತನೆ

“ಕನ್ನಡ ಪ್ರಜ್ಙೆಯ ಸುತ್ತಮುತ್ತ : ನಾಡು-ನುಡಿ-ಚಿಂತನ” ಎಂಬ ಪುಸ್ತಕವನ್ನುಆನ್ ಲೈನ್ ಸಭೆಯೊಂದರಲ್ಲಿ ನವೆಂಬರ್ 1ರಂದು ಡಾ.ವಿನಯಾ ಒಕ್ಕುಂದ ಅವರು ಬಿಡುಗಡೆ ಮಾಡಿದರು. ಡಾ.ಗೀತಾ ಡಿ.ಸಿ ಮತ್ತು ನಾಗರೇಖಾ ಗಾಂವಕರ್ ಸಂಪಾದಿಸಿರುವ ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಇಲ್ಲಿ ಪುಸ್ತಕದ ಕಿರುಪರಿಚಯ, ಪುಸ್ತಕದ ಕೆಲವು ಆಯ್ದ ಭಾಗಗಳು ಮತ್ತು ಪುಸ್ತಕ ಬಿಡುಗಡೆಯ ಸಂದರ್ಭದ ಡಾ. ವಿನಯಾ ಅವರ ಕೆಲವು ಗಮನಾರ್ಹ ಮಾತುಗಳನ್ನು ಕೊಡಲಾಗಿದೆ.

ಕನ್ನಡ ಭಾಷೆ ಬಹಳ ಸಮಯದಿಂದ ಬರಿಯ ಆಡುಭಾಷೆಯಾಗುವ ಮತ್ತು ಕ್ರಮೇಣ ಅಳಿದು ಹೋಗುವ ಅಪಾಯದ ಅಂಚಿನಲ್ಲಿದೆ. ಭಾಷಾವಾರು ರಾಜ್ಯಗಳ ಘಟನೆಯ ನಂತರ ಜ್ಞಾನದ, ವ್ಯವಹಾರದ ಭಾಷೆಯಾಗಿ ಭಾರತೀಯ ಭಾಷೆಗಳ ಸಮಗ್ರ ಬೆಳವಣಿಗೆಯಾಗಬೇಕು. ಭಾರತೀಯ ಭಾಷಾ ಮಾಧ್ಯಮದಲ್ಲಿ ಹಂತ ಹಂತವಾಗಿ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣವಿರಬೇಕು ಎಂಬ ಕನಸು ಕಮರಿ ಹೋಗಿ ಬಹಳ ದಿನವಾಗಿದೆ. ಈಗ ಕನ್ನಡವನ್ನು ಪ್ರಾಥಮಿಕ ಹಂತದಲ್ಲಾದರೂ ಮತ್ತು ಒಂದು ಅಧ್ಯಯನ ವಿಷಯವಾಗಿಯಾದರೂ ಉಳಿಸಿಕೊಳ್ಳಲು ಹೋರಾಡುವ ದುಸ್ಥಿತಿಯಿದೆ. ಆಗಾಗ ಹೊಸದಾಗಿ ಬರುವ ಶಿಕ್ಷಣ ನೀತಿಗಳು, 1990ರ ದಶಕದಿಂದ ಬಂದಿರುವ ನವ-ಉದಾರವಾದಿ ನೀತಿಗಳು ಮತ್ತುಇತರ ಬೆಳವಣಿಗೆಗಳು ಕನ್ನಡದ ಸ್ಥಿತಿಯನ್ನು ಇನ್ನಷ್ಟು ದುರ್ಭರಗೊಳಿಸುತ್ತಾ ಬಂದಿವೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತುಅದರ ಜಾರಿಗೆ ಕರ್ನಾಟಕ ಸರಕಾರ ತೋರುತ್ತಿರುವ ತರಾತುರಿ ಕನ್ನಡಕ್ಕೆ ಬಂದಿರುವ ಹೊಸ ಕುತ್ತು.

ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಶಿಕ್ಷಣ ಕ್ಷೇತ್ರದ ಖಾಸಗೀಕರಣ, ವ್ಯಾಪಾರೀಕರಣ, ಕೇಂದ್ರೀಕರಣ, ನಾಲ್ಕು ವರ್ಷದ ಪದವಿ ಶಿಕ್ಷಣ ಪದ್ಧತಿ – ಇತ್ಯಾದಿಗಳಿಗೆ ಕೊಟ್ಟಿರುವ ಒತ್ತು, ಕನ್ನಡಕ್ಕೆ ಹೊಸ ತೊಡಕುಗಳನ್ನು ಒಡ್ಡಿದೆ. ಹಿಂದಿನ ಮೂರು ವರ್ಷದ ಪದವಿ ಪದ್ಧತಿಯಲ್ಲಿ ಎರಡು ವರ್ಷಗಳ ಕಾಲವಿದ್ದ ಭಾಷಾ ಕಲಿಕೆಯನ್ನು, ಹೊಸ ನಾಲ್ಕು ವರ್ಷದ ಪದವಿ ಶಿಕ್ಷಣ ಪದ್ಧತಿಯಲ್ಲಿ ಒಂದು ವರ್ಷಕ್ಕೆ ಇಳಿಸಿರುವುದು (ಎರಡು ವರ್ಷಕ್ಕೆ ಏರಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರೂ ಖಚಿತವಿಲ್ಲ), ಶಾಲಾ ಶಿಕ್ಷಣದಲ್ಲಿ ಮಾಧ್ಯಮವಾಗಿ ಈಗಾಗಲೇ ಕನ್ನಡ ತನ್ನ ಸ್ಥಾನ ಕಳೆದುಕೊಂಡಿರುವುದು (ಈ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ ಬಣ್ಣದ ಮಾತುಗಳನ್ನು ಮಾತ್ರ ಆಡುತ್ತದೆ, ಯಾವುದೇ ನಿರ್ದಿಷ್ಟ ಕ್ರಿಯೆಯಿಲ್ಲ) ಕನ್ನಡದ ಸ್ಥಾನಮಾನದ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ. ನಾಡು-ನುಡಿಗಳ ಅಸ್ಮಿತೆ, ಸಂಸ್ಕೃತಿಗಳ ರಕ್ಷಣೆಯಲ್ಲಿ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದ ಮಹತ್ವ, ಯಾವುದೇ ವಿಷಯದ ಕಲಿಕೆಯಲ್ಲಿ, ವ್ಯಕ್ತಿಯ ಅಭಿವ್ಯಕ್ತಿ ಮತ್ತು ಸಮಗ್ರ ಬೆಳವಣಿಗೆಯಲ್ಲಿ ಭಾಷಾ ಕಲಿಕೆಯ ಸ್ಥಾನ ಇತ್ಯಾದಿಗಳ ಕುರಿತು ನಾಡಿನಾದ್ಯಂತ ತೀವ್ರ ಚರ್ಚೆ ನಡೆಯುತ್ತಿದೆ.

“ಕನ್ನಡ ಪ್ರಜ್ಙೆಯ ಸುತ್ತಮುತ್ತ : ನಾಡು-ನುಡಿ-ಚಿಂತನ”, ಈ ಚರ್ಚೆಯ ಹಲವು ಮಗ್ಗಲುಗಳನ್ನು ಶೋಧಿಸುವ ಬರಹಗಳನ್ನು ಸಂಗ್ರಹಿಸಿ ಸಮಗ್ರವಾಗಿ ಪ್ರಸ್ತುತಪಡಿಸುವ ಪ್ರಯತ್ನ. ನಾಡಿನ 72 (ಹೌದು 72!) ಹಿರಿಯ ಕಿರಿಯ ಬರಹಗಾರರು, ಚಿಂತಕರು ಕನ್ನಡ ಪ್ರಜ್ಞೆಯ ಸುತ್ತಮುತ್ತಲಿನ ಎಲ್ಲ ಆಯಾಮಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಪುಸ್ತಕದ ವಿಶೇಷವೇನೆಂದರೆ, ಸುಬ್ರಾಯ ಚೊಕ್ಕಾಡಿ, ಜಿ. ರಾಮಕೃಷ್ಣ,ಕೆ.ವಿ.ತಿರುಮಲೇಶ್, ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ವೈದೇಹಿ, ಎಚ್. ಎಸ್. ರಾಘವೇಂದ್ರರಾವ್, ಎಸ್.ಜಿ.ಸಿದ್ಧರಾಮಯ್ಯ, ಓ.ಎಲ್. ನಾಗಭೂಷಣಸ್ವಾಮಿ, ಕೆ.ವಿ.ನಾರಾಯಣ, ಪುರುಷೋತ್ತಮ ಬಿಳಿಮಲೆ ಅವರಂಥ ಹಿರಿಯ ಬರಹಗಾರರಿಂದ, ಖಾಸಗಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳೂ ಸೇರಿದಂತೆ, ಶಿಕ್ಷಕರು, ಅಧ್ಯಾಪಕರು, ವೈದ್ಯರು, ಉದ್ಯೋಗಿಗಳು, ಪತ್ರಕರ್ತರು, ಪರಿಸರವಾದಿಗಳು, ವಿಜ್ಞಾನಿಗಳು, ಗೃಹಿಣಿಯರು, ತಂತ್ರಜ್ಞರು, ಸಾಫ್ಟವೇರ್ ಇಂಜಿನಿಯರುಗಳು, ಚಿತ್ರಕಲಾವಿದರು, ರಂಗಭೂಮಿ ಕಲಾವಿದರು, ಕಥೆಗಾರರು, ಕವಿಗಳು, ಅನುವಾದಕರು,ಬ್ಯಾಂಕ್ ಉದ್ಯೋಗಿಗಳಾಗಿದ್ದವರು, ಪದವಿ ಓದುತ್ತಿರುವ ವಿದ್ಯಾರ್ಥಿ, ಸಂಶೋಧನಾ ವಿದ್ಯಾರ್ಥಿನಿ… ಹೀಗೆ ವಿವಿಧ ವೃತ್ತಿಗಳಲ್ಲಿದ್ದೂ ಕನ್ನಡದ ಬಗೆಗೆ ಪ್ರೀತಿ ಇಟ್ಟುಕೊಂಡವರೆಲ್ಲರ ಬರಹಗಳೂ ಇಲ್ಲಿರುವುದು. ಸಹಜವಾಗಿಯೇ ಇವರು ಕನ್ನಡ ಪ್ರಜ್ಞೆಯ ವಿವಿಧ ಮಗ್ಗುಲುಗಳನ್ನು ಅನ್ವೇಷಿಸಿದ್ದಾರೆ. ‘ಕನ್ನಡ, ಸಂಸ್ಕೃತಿ ಮತ್ತು ಸ್ವಾಯತ್ತತೆ’, “ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡವೆಂಬ ಕೂಗು”, “ಕನ್ನಡ ಮತ್ತು ಐಟಿ ಕನ್ನಡಿಗರು”, “ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅಧ್ಯಾಪಕರ ತಿರಸ್ಕಾರ” “ನಾಟೀ ಭಾಷೆಗಳ ನಿಟ್ಟುಸಿರು, ಕೊನೆಯುಸಿರು”, “ಕನ್ನಡ ಉಳಿಸಿ ಬೆಳೆಸಲು ರಂಗಭೂಮಿ ಎಷ್ಟರ ಮಟ್ಟಿಗೆ ಸಹಕಾರಿ?”, “ಭಾಷೆ ಹಾಗೂ ಅರಿವಿನ ವಿಕಾಸ”, “ತಾಂತ್ರಿಕ ಬೋಧನೆಯಲ್ಲಿ ಕನ್ನಡ”, “ಕನ್ನಡ : ಭಾಷೆ-ಉಪಭಾಷೆ-ತಂತ್ರಜ್ಞಾನ”, ʻʻಮಾಧ್ಯಮಗಳಲ್ಲಿ ಭಾಷೆಯ ಉಳಿವು” –ಇಲ್ಲಿರುವ ಬರಹಗಳ ತಲೆಬರಹಗಳು ಇಲ್ಲಿನ ವೈವಿಧ್ಯತೆಯನ್ನು ಬಿಂಬಿಸುತ್ತವೆ.

‘ಕನ್ನಡ ಪ್ರಜ್ಞೆ…’ಯ ಆಯ್ದ ಭಾಗಗಳು

ರಾಜಕೀಯ ಪಕ್ಷಗಳು ಭಾಷೆಯ ಪ್ರಶ್ನೆಯನ್ನು ಸಾಹಿತಿಗಳ ಸಮಸ್ಯೆ ಅಥವಾ ಹಿಡಿಯಷ್ಟು ಜನರ ಚಳವಳಿಯ ಆಸಕ್ತಿ ಮಾತ್ರ ಎಂದು ತಪ್ಪಾಗಿ ತಿಳಿದು ತಂತಮ್ಮ ಪ್ರಣಾಳಿಕೆಗಳಲ್ಲಿ ನಿರ್ಲಕ್ಷ್ಯ ಮಾಡುತ್ತಾ ಬಂದವು. ಸಾಮಾನ್ಯ ಜನರ ಭಾಷೆ ಮತ್ತು ಸಾಮಾನ್ಯ ಜನರ ಬದುಕು ಎರಡನ್ನೂ ಒಟ್ಟಿಗೇ ನೋಡುವ ಚಳವಳಿಗಳು ಮತ್ತು ರಾಜಕೀಯ ಪಕ್ಷಗಳು ನಮಗೆಬೇಕು. ಈ ದೃಷ್ಟಿಯಿಂದ ನೋಡಿದಾಗ ಕನ್ನಡದ ಕೆಲಸಕ್ಕೆ ಇರುವ ಬಹುಮುಖತೆ ಅರ್ಥವಾಗುತ್ತದೆ. ಜನಭಾಷೆ, ಜನಸಂಸ್ಕೃತಿ, ಜನಪರ ಯೋಜನೆ ಈ ಎಲ್ಲ ಮುಖಗಳ ಮೂಲ ಒಂದೇ, ಅದೇ ಸಮಾನತೆಯ ಆಶಯ. ಆದ್ದರಿಂದ ಭಾಷೆಯ ಪ್ರಶ್ನೆ ರಾಜಕೀಯ ಪ್ರಶ್ನೆಯೂ ಆಗುತ್ತದೆ. ಹೀಗೆ ಭಾಷಾ ಚಳವಳಿಗಳು ಪಡೆಯಬೇಕಾದ ಸೈದ್ಧಾಂತಿಕ ಸ್ವರೂಪವನ್ನು ನಿರ್ಲಕ್ಷಿಸಿ ಬಿಡಿಬಿಡಿಯಾದ ನೆಲೆಯಲ್ಲಿ ಯೋಚಿಸಿದರೆ ಭಾವೋದ್ರೇಕವೇ ಮುಖ್ಯವಾಗಬಹುದು. ಸಾಂಸ್ಕೃತಿಕ ಸ್ವಾಯತ್ತತೆಯ ಬದಲು ಪ್ರಾಂತೀಯ ವೈಪರೀತ್ಯ ಮಾತ್ರ ಮೆರೆಯಬಹುದು. ಭಾಷೆ ಮತ್ತು ಬದುಕು ಬೇರ್ಪಟ್ಟು ಹೋರಾಟ ವಿಜೃಂಭಿಸಬಹುದು. ಈ ಅಪಾಯಗಳ ಎದುರಿನಲ್ಲಿ ಸರ್ಕಾರವು ಕೇವಲ ತಾತ್ಕಾಲಿಕ ಪರಿಹಾರ ರೂಪದ ಕೆಲಸಗಳನ್ನು ಮಾಡುತ್ತ ಕಾಲ ತಳ್ಳಬಹುದು. ಯಾವುದೇ ಸರ್ಕಾರ, ಜನಮುಖೀ ಕೆಲಸದ ಭಾಗವಾಗಿಯೇ ಭಾಷೆಯ ಕೆಲಸವನ್ನು ಕೈಗೊಳ್ಳಬೇಕು. ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ಕೆಲಸ ಮತ್ತು ಜನಭಾಷೆಗೆ ಮನ್ನಣೆ ಕೊಡುವ ಕೆಲಸಗಳು ಪರಸ್ಪರ ಪೂರಕವೆಂದೇ ಭಾವಿಸಬೇಕು. ಈ ಆಲೋಚನೆಯ ನೆಲೆಯಲ್ಲಿ….. ಪ್ರಾಥಮಿಕ ಶಿಕ್ಷಣದಲ್ಲಿ ಸಮಾನತೆ ಮತ್ತು ಏಕರೂಪತೆಯನ್ನು ಸಾಧಿಸದೆ ಜನರನ್ನು ಕನ್ನಡ ಮಾಧ್ಯಮಕ್ಕಾಗಿ ಒತ್ತಾಯಿಸುವುದು ಮತ್ತು ದೂರುವುದು ಅರ್ಥಹೀನ ಎನ್ನುವುದು ನನ್ನ ಅಭಿಪ್ರಾಯ….. ಆಡಳಿತ ಭಾಷೆಯ ವಿಷಯವೂ ಅಷ್ಟೆ. ನನಗಿದು ಕೇವಲ ಅಭಿಮಾನದ, ಆದರ್ಶದ ಪ್ರಶ್ನೆಯಲ್ಲ. ನಮ್ಮ ಸಂವಿಧಾನ ಒಪ್ಪಿಕೊಂಡಿರುವ ಫೆಡರಲ್ ಪದ್ಧತಿಯ ಪ್ರಜಾಪ್ರಭುತ್ವದ ಪ್ರಶ್ನೆ. ಪ್ರಾದೇಶಿಕ ಭಾಷಾ ಸಂಸ್ಕೃತಿಗಳ ಬೆಳವಣಿಗೆ ಆಗಬೇಕಾದ ಅಗತ್ಯ ಒಂದು ಕಡೆ; ತಂತಮ್ಮ ಭಾಷೆಯ ಮೂಲಕ ಒಟ್ಟು ಬದುಕಿನಲ್ಲಿ, ಆಡಳಿತ ಕ್ರಿಯೆಯಲ್ಲಿ ಜನರ ತೊಡಗುವಿಕೆ ಇನ್ನೊಂದು ಕಡೆ,

ಬರಗೂರುರಾಮಚಂದ್ರಪ್ಪ

ಭಾಷೆಯೆಂಬುದು ಕೇವಲ ಅಕ್ಷರಗಳ ಗುಂಪಲ್ಲವಷ್ಟೆ? ಅದು ಸಮಾಜ ವಿಜ್ಞಾನದ, ಭಾವಕೋಶದ, ಸಂಸ್ಕೃತಿ ಪರಂಪರೆಯ ಸಮ್ಯಕ್ ಬೀಗದ ಕೈ. ಒಂದು ಹಂತದವರೆಗೆ ಮಕ್ಕಳು ಅವರವರ ಪ್ರದೇಶ ಭಾಷೆಯಲ್ಲೇ ಕಲಿಯುತ್ತ ಮುಂದಿನದನ್ನು ಬೇಕಾದರೆ ಅವರಿಗೆ ಬಿಡೋಣ. ಹೆತ್ತವರೆಂದ ಮಾತ್ರಕ್ಕೆ ಮಕ್ಕಳ ಕುರಿತ ಎಲ್ಲ ಹಕ್ಕೂ ನಮಗಿದೆ ಅಂತ ತಿಳಿಯುವುದೇ ಅಸಂಬದ್ಧವಷ್ಟೆ.

ವೈದೇಹಿ

ರಾಷ್ಟ್ರೀಯ ಶಿಕ್ಷಣ ನೀತಿಯ ಮುನ್ನೋಟ ಹೇಳುತ್ತದೆ: “ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ಸಮಾಜವನ್ನುಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುತ್ತದೆ.”- ಈ ಉದ್ದೇಶ ಅದ್ಭುತವಾದುದು…… ಶಿಕ್ಷಣ ನೀತಿಯ ಅವಲೋಕನದ ಮುಖ್ಯ ಅಂಶಗಳ ಭಾಗದಲ್ಲಿ ಒಟ್ಟು 11 ವಿಭಾಗಗಳಿವೆ….. ಇದು ಮೇಲ್ನೋಟಕ್ಕೆ ಹೆಚ್ಚು ವೈಜ್ಞಾನಿಕ ಹಾಗೂ ವೈಚಾರಿಕ ಮುನ್ನೋಟದಿಂದ ರೂಪಿಸಲಾಗಿದೆ ಎನಿಸುತ್ತದೆ. ಆದರೆ ಒಂದೊಂದನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಿ ಗಮನಿಸಿದಾಗ, ಪ್ರಾಯೋಗಿಕವಾಗಿ ಒಕ್ಕೂಟ ನೀತಿಗೆ ವಿರುದ್ಧವಾದ ನಡೆಗಳಿರುವುದು ಗೋಚರವಾಗುತ್ತದೆ; ಖಾಸಗೀಕರಣಕ್ಕೆ ಹೆಚ್ಚು ಒತ್ತುಕೊಡುವ ಒಳ ಆಶಯದಿಂದ ಕೂಡಿವೆ. ನಮ್ಮ ಸಂವಿಧಾನದಲ್ಲಿ ಶಿಕ್ಷಣವನ್ನು ಕುರಿತು ಇರುವ ರಾಜ್ಯ ಮತ್ತು ಕೇಂದ್ರಗಳ ಸಹಭಾಗಿತ್ವದ ಉದ್ದೇಶವನ್ನೇ ವಿಫಲಗೊಳಿಸುವ ಸಾಧ್ಯತೆಗಳು ಇಲ್ಲಿ ಢಾಳಾಗಿ ಕಾಣುತ್ತಿವೆ. ವಿಕೇಂದ್ರೀಕರಣ ನೀತಿಗಿಂತ ಕೇಂದ್ರೀಕೃತ ಅಧಿಪತ್ಯದ ನೀತಿಯ ಒತ್ತಡ ಇಲ್ಲಿದ್ದಂತಿದೆ.

ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವ ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಅಗತ್ಯವಿದೆ. ಅದು ಬಿಟ್ಟು ದಿನದಿಂದ ದಿನಕ್ಕೆ ಖಾಸಗೀಕರಣವನ್ನು ಹೆಚ್ಚು ಬೆಂಬಲಿಸುತ್ತಿರುವ ಆಡಳಿತ ನೀತಿ, ಅಸಮಾನತೆಯನ್ನು ಹೆಚ್ಚುಗೊಳಿಸುತ್ತದೆ. ಶಿಕ್ಷಣವನ್ನು ವ್ಯಾಪರೀಕರಣಗೊಳಿಸುತ್ತದೆ. ಇದರಿಂದ ಈ ‘ಎಲ್ಲರನ್ನೂ ಒಳಗೊಂಡ ಸಮಾನ ಶಿಕ್ಷಣ’ ಎಂಬ ಮಾತು ಕೇವಲ ಬಡವರ ತುಟಿಗೆ ತುಪ್ಪ ಸವರಿದ ಮಾತಾಗುತ್ತದೆ.

ಎಸ್.ಜಿ.ಸಿದ್ಧರಾಮಯ್ಯ

ಹೊಸ ಶಿಕ್ಷಣ ನೀತಿಯ ವರದಿ ಸಲ್ಲಿಸಿದ ಕರ್ನಾಟಕದ ಸಮಿತಿಗೆ ಭಾಷೆ ಕುರಿತು ಹೊಸ ಚಿಂತನೆಗಳೇನೂ ಇದ್ದಂತೆ ಕಾಣುವುದಿಲ್ಲ. ಹೀಗಾಗಿ ಕನ್ನಡ ಕಲಿಕೆಯ ಕುರಿತಾದ ತನ್ನ ಎಂದಿನ ತಪ್ಪುಗ್ರಹಿಕೆಯನ್ನು ಇಲ್ಲೂ ಮುಂದುವರಿಸಿದೆ. ಭಾಷಾ ಕಲಿಕೆಯೆಂದರೆ ಕಾಗಕ್ಕ ಗುಬ್ಬಕ್ಕರ ಕತೆ ಕಲಿಸುತ್ತಿದ್ದಾರೆ ಎಂಬ ಭಾವನೆ ಸರಿಯಲ್ಲ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಭಾಷೆ ಎನ್ನುವುದು ಬಾಹ್ಯವಾದದ್ದಲ್ಲ. ಅದುಆಂತರಿಕ ಅರಿವಿಗೆ ಸಂಬಂಧಿಸಿದ ಅಂಗ – ಕಾಗ್ನಿಟಿವ್. ನೋಮ್‌ಚಾಮ್ಸ್ಕಿ ಲಾಂಗ್ವೇಜ್‌ ಅಕ್ವೈರ್ಡ್‌ ಡಿವೈಸ್‌ ಎಂಬುದು ನಮ್ಮ ಮಿದುಳಿನಲ್ಲಿ ಇದೆ ಎನ್ನುತ್ತಾರೆ. ಭಾಷೆ ಎಂಬುದು ಸ್ಕೂಲ್‌ ಆಫ್‌ ಥಾಟ್ – ಅಧ್ಯಯನ ಕ್ರಮ, ಜ್ಞಾನ ಮೂಲ. ಅದನ್ನು ಬಿಟ್ಟು ಭಾಷೆಯನ್ನು ಕೇವಲ ಸ್ಕಿಲ್‌ಗೆ ಸೀಮಿತಗೊಳಿಸುವುದು ಸರಿಯಲ್ಲ. ಹೀಗಾಗಿ ಭಾಷಾ ಕಲಿಕೆಯನ್ನು ಹೇಗೆ ಮಾಡಿಸಬೇಕು ಎಂಬುದನ್ನು ಪದವಿ ಅಧ್ಯಾಪಕರ ವಿವೇಚನೆಗೇ ಬಿಡಬೇಕೇ ಹೊರತು ಹೊರಗಿನಿಂದ ಅದನ್ನು ಹೇರಿಕೆ ಮಾಡಬಾರದು.

ಡಾ. ಸಬಿತಾ ಬನ್ನಾಡಿ

ಕನ್ನಡ ಪ್ರಜ್ಞೆ ತಲ್ಲಣಕ್ಕೆ ಒಳಗಾಗಿದೆ

“ಕನ್ನಡ ಪ್ರಜ್ಞೆಇಂದು ಬಹುದೊಡ್ಡ ತಲ್ಲಣಕ್ಕೆ ಒಳಗಾಗಿದೆ. ಕನ್ನಡ ಜ್ಞಾನದ ಮೂಲ ಎನ್ನುವ ಮುಖ್ಯ ನೆಲೆಯಿಂದ ನಾವು ದೂರ ಬಂದಿದ್ದೇವೆ. ಕನ್ನಡ ಎಂಬ ಕಾಡನ್ನುಅದರ ಪಾಡಿಗೆ ಬೆಳೆಯಲು ಬಿಡಬೇಕೇ ಹೊರತು, ಅದನ್ನು ಬಂಧಿಸುವ ಅಥವಾ ನಾಶಪಡಿಸುವ ಕೆಲಸ ಮಾಡಬಾರದು….. ಕನ್ನಡ ಎನ್ನುವುದು ಬದುಕಿಗೆ ಬೇಕಿರುವ ವಿವೇಕದ ಸಂಕಥನ ಎಂಬುದನ್ನು ನಾವೆಲ್ಲ ಮರೆಯುತ್ತಿದ್ದೇವೆ. ಇದು, ಕನ್ನಡಕ್ಕೆ ಆಗುತ್ತಿರುವ ಬಹಳ ದೊಡ್ಡ ಧಕ್ಕೆ….. ಕನ್ನಡವನ್ನು ವೈಭವೀಕೃತ, ಆದರ್ಶ ಹಾಗೂ ತಾಯಿ ಭುವನೇಶ್ವರಿಯ ನೆಲೆಗಳಲ್ಲಿ ಮಾತ್ರ ನೋಡುತ್ತಿದ್ದು, ಭುವನೇಶ್ವರಿಯ ಚಿತ್ರದಲ್ಲಿ ಆಗಬೇಕಿರುವ ಸರ್ವಧರ್ಮ ಸಹಿಷ್ಣುತೆಯ ಮರುರೂಪಣದ ಬಗ್ಗೆ ಯೋಚಿಸುವ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಿದ್ದೇವೆ. ಇದು ನಮ್ಮೆದುರು ಇರುವ ದೊಡ್ಡ ಸವಾಲು….. ರಾಜ್ಯೋತ್ಸವ ಬಂದಾಗ ಕಾರ್ಯಕ್ರಮಗಳು, ಹಾಡುಗಳು ಹಾಗೂ ಮನರಂಜನೆಗೆ ಮಾತ್ರ ಭಾಷೆಯನ್ನು ಉಳಿಸುತ್ತಿದ್ದೇವೆ. ಕನ್ನಡವನ್ನು ಜ್ಞಾನದ, ಅಧಿಕಾರದ ಹಾಗೂ ಅನ್ನದ ಭಾಷೆಯಾಗಿ ಸರ್ಕಾರದ ಪ್ರತಿನಿಧಿಗಳು ಏಕೆ ಬಿಂಬಿಸುತ್ತಿಲ್ಲ?….. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ(ಎನ್‌ಇಪಿ) ಕನ್ನಡದ ಆದ್ಯತೆ ಹಾಗೂ ಗೊಂದಲಗಳ ಬಗ್ಗೆ ಈ ಪುಸ್ತಕ ಪ್ರಶ್ನೆ ಎತ್ತುವಂತಿದೆ. ಕನ್ನಡ ಪ್ರಸ್ತುತದಲ್ಲಿ ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆಯೂ ಪುಸ್ತಕದಲ್ಲಿನ ಬರಹಗಳು ಬೆಳಕು ಚೆಲ್ಲಿವೆ.”

ಡಾ.ವಿನಯಾಒಕ್ಕುಂದ (ಪುಸ್ತಕ ಬಿಡುಗಡೆ ಮಾಡುತ್ತಾ)

Donate Janashakthi Media

4 thoughts on “ಕನ್ನಡ ಪ್ರಜ್ಞೆಯ ಸುತ್ತಮುತ್ತ : ನಾಡು-ನುಡಿ-ಚಿಂತನೆ

Leave a Reply

Your email address will not be published. Required fields are marked *