ಕನ್ನಡ ನಿರೂಪಕಿ ಅಪರ್ಣಾ ನಿಧನ

ಬೆಂಗಳೂರು : ಕನ್ನಡದ ನಿರೂಪಕಿ ಅಪರ್ಣಾ ಜುಲೈ 11ರಂದು ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಹಲವು ತಿಂಗಳುಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು, ಅವರ ಅಗಲಿಕೆಗೆ ಚಿತ್ರರಂಗದ ನಟ-ನಟಿಯರು, ರಾಜಕೀಯ ಗಣ್ಯರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ‘ಮಸಣದ ಹೂವು’ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ನಂತರ ‘ಇನ್‌ಸ್ಪೆಕ್ಟರ್ ವಿಕ್ರಮ್’ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ನಿರೂಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಮುಂದೆ ಧಾರಾವಾಹಿಗಳಲ್ಲಿ ಅಭಿನಯಿಸಿದ ಅವರು ಕಿರುತೆರೆ ಮತ್ತು ಅನೇಕ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳ ವೇದಿಕೆಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು.

2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನ ಸ್ಪರ್ಧೆಯಾಗಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ನಿರ್ವಹಿಸಿದ್ದರು. ‘ನಮ್ಮ ಮೆಟ್ರೋ’ ಅನೌನ್ಸ್ಮೆಂಟ್ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.

“ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *