-ಗಿರಿಧರ ಕಾರ್ಕಳ
ಮೊದಲೆಲ್ಲ ಬ್ಯಾಂಕಿನ ಮೆನೇಜರ್, ಸಿಬ್ಬಂದಿಗಳೆಲ್ಲ ಊರಿನಲ್ಲಿ ನಡೆಯುವ ಮದುವೆ, ಜಾತ್ರೆ ಇತ್ಯಾದಿಗಳಿಗೆ ಹೋಗಿ ಜನರ ವಿಶ್ವಾಸ ಗಳಿಸುತ್ತಿದ್ದರು. ಈಗ ಅಂಥದ್ದೇನೂ ಇಲ್ಲ. ಗಿರಿಧರ್ ಗೆಳೆಯರೊಡಗೂಡಿ ಕಟ್ಟಿದ ಕನ್ನಡ ಗ್ರಂಥಾಲಯದ ಕತೆ ಒಮ್ಮೆ ಓದಿ. ಗಿರಿಧರ
ಬ್ಯಾಂಕಿನೊಳಗೆ ನಾವು ಕನ್ನಡ ಗ್ರಂಥಾಲಯ ಕಟ್ಟಿದ್ದು ಹೀಗೆ..!!
ಇದು ನಲುವತ್ತು ವರ್ಷಗಳ(1984-1994) ಹಿಂದಿನ ಕತೆ. ನಾನಾಗ ಮೈಸೂರು ಬ್ಯಾಂಕಿನ ಮೈಸೂರು ಮುಖ್ಯ ಶಾಖೆಯ ಉದ್ಯೋಗಿ. ಮೈಸೂರು ಬ್ಯಾಂಕ್ ಕನ್ನಡ ಬಳಗದ ಕಾರ್ಯದರ್ಶಿಯೂ ಆಗಿದ್ದೆ. ಬೆಂಗಳೂರು ಪ್ರಧಾನ ಕಛೇರಿಯಲ್ಲಿ ಕನ್ನಡ ಬಳಗ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ದೊಡ್ಡ ಸಂಘಟನೆಯಾಗಿದ್ದರೆ, ಮೈಸೂರಿನಲ್ಲಿ ನಮ್ಮದು ಚಿಕ್ಕದಾದ ಪ್ರತ್ಯೇಕ “ಮೈಸೂರು ಬ್ಯಾಂಕ್ ಕನ್ನಡ ಬಳಗ”. ನಮಗೆ ನಮ್ಮದೇ ಆದ ನಿಯಮಾವಳಿ ಇತ್ತು, ಪದಾಧಿಕಾರಿಗಳು ಇದ್ದರು.ಆಗ ನಮ್ಮ ಕಾರ್ಯ ವ್ಯಾಪ್ತಿ ಮೈಸೂರು ನಗರದ 28 ಶಾಖೆಗಳು, ನಾಲ್ಕು ಪ್ರಾದೇಶಿಕ ಕಛೇರಿ ಮತ್ತು ಒಂದು ವಲಯ ಕಛೇರಿ. ಆದರೆ ನಾನಿದ್ದ ಮೈಸೂರು ಮುಖ್ಯ ಶಾಖೆಯಲ್ಲಿ ಆಗ ಸುಮಾರು 130 ಉದ್ಯೋಗಿಗಳಿದ್ದ ಕಾರಣ ಬಹುತೇಕ ನಮ್ಮ ಬಳಗದ ಚಟುವಟಿಕೆಗಳಿಗೆ ಮುಖ್ಯ ಶಾಖೆಯೇ ಕೇಂದ್ರ ಸ್ಥಾನವಾಗಿತ್ತು. ಗಿರಿಧರ
ಪ್ರತಿ ದಿನವೂ ಮಧ್ಯಾಹ್ನ, ಸಂಜೆ ಬಿಡುವಿನ ವೇಳೆಯಲ್ಲಿ ನಾವೆಲ್ಲ ಕುಳಿತು ಪತ್ರಿಕೆ ಓದುವುದಕ್ಕೆ ಮತ್ತು ನಮ್ಮ ಬಳಗಕ್ಕೊಂದು ಕಛೇರಿಗಾಗಿ ಕೋಣೆ ಬೇಕೆಂದು ಮುಖ್ಯ ವ್ಯವಸ್ಥಾಪಕರನ್ನು ವಿನಂತಿಸಿದಾಗ,ಕ್ಯಾಂಟಿನಿನ ಪಕ್ಕ ಇದ್ದ,ಬೇಡದ ಪೀಠೋಪಕರಣ ತುಂಬಿದ್ದ ಕೋಣೆಯನ್ನು ಸ್ವಚ್ಛಗೊಳಿಸಿ ನಮಗಾಗಿ ಕೊಟ್ಟರು. ಬ್ಯಾಂಕಿಗೆ ತರಿಸುತ್ತಿದ್ದ 2-3ದಿನಪತ್ರಿಕೆಯ ಜೊತೆಗೆ 15ಕ್ಕೂ ಹೆಚ್ಚು ಕನ್ನಡ ಇಂಗ್ಲಿಷ್ ನ ದಿನ,ವಾರ,ಮಾಸ ಪತ್ರಿಕೆಗಳನ್ನು ಸ್ಟಾಫ್ ವೆಲ್ಫೇರ್ ನಿಧಿಯಿಂದ ತರಿಸಲು ಅನುಮತಿ ನೀಡಿದರು.ಒಂದು ಶುಭ ಮುಹೂರ್ತದಲ್ಲಿ “ಸರ್ ಎಂ.ವಿಶ್ವೇಶ್ವರಯ್ಯ ಗ್ರಂಥಾಲಯ”ದ ಉದ್ಘಾಟನೆಯನ್ನು ನಮ್ಮ ಪ್ರಧಾನ ಕಛೇರಿ ಕನ್ನಡ ಬಳಗದ ಅಧ್ಯಕ್ಷರು ಮತ್ತು ಜನರಲ್ ಮ್ಯಾನೇಜರ್ ಆಗಿದ್ದ ಹಾ.ಗು.ಬಾಲಗೋಪಾಲ್ ಕೈಲಿ ಮಾಡಿಸಿದೆವು. ಗಿರಿಧರ
ಇದನ್ನೂ ಓದಿ: ದೇವಸ್ಥಾನದ ಸ್ವಯಂ ಸೇವಕರಿಂದ ಲಾಠಿ ಪ್ರಹಾರ: ಕಾಲ್ತುಳಿತಕ್ಕೆ 7 ಮಂದಿ ಬಲಿ
ಗ್ರಂಥಾಲಯ ಅಂದ ಮೇಲೆ ಪುಸ್ತಕ ಗಳು ಬೇಕಲ್ಲ. ಕನ್ನಡ ಬಳಗದಿಂದ ಹತ್ತೈವತ್ತು ಪುಸ್ತಕ ಖರೀದಿಸಿದ್ದು ಏನೇನೂ ಸಾಲದಾಯಿತು.ಆಗ ನಾವೊಂದು ಹೊಸ ಯೋಜನೆ ಹಮ್ಮಿಕೊಂಡೆವು. ನಾವು ಒಂದಷ್ಟು ಆಸಕ್ತರು ಪ್ರತೀ ತಿಂಗಳು 50-100/- ರ ಆರ್.ಡಿ.ಖಾತೆ ತೆರೆಯುವುದು. ವರ್ಷಾಂತ್ಯದಲ್ಲಿ ಇಷ್ಟವಿದ್ದವರು ಅಸಲು,ಬಡ್ಡಿ ಸಹಿತ ಮೊತ್ತವನ್ನುಗ್ರಂಥಾಲಯಕ್ಕೆ ನೀಡುವುದು.ಉಳಿದವರು ಅಸಲು ಮೊತ್ತದಲ್ಲಿ ತಮಗಿಷ್ಟವಾದ ಪುಸ್ತಕ ಖರೀದಿಸಿ ಬಡ್ಡಿ ಮಾತ್ರ ಗ್ರಂಥಾಲಯಕ್ಕೆ ಕೊಡಬೇಕು. ಈ ಯೋಜನೆ ಮೆಚ್ಚಿಕೊಂಡು ಮೊದಲ ವರ್ಷ ಸದಸ್ಯರಾದವರು 28 ಮಂದಿ. ನಂತರದ ವರ್ಷದಲ್ಲಿ ಅದು 30-35ಆಯಿತು. ಇದರಲ್ಲಿ ನಾವೊಂದು 10-12ಮಂದಿ ಪೂರ್ತಿ ಮೊತ್ತ ಗ್ರಂಥಾಲಯಕ್ಕೆ ನೀಡುತ್ತಿದ್ದೆವು.ಈ ಮೊತ್ತ ಸುಮಾರು 10-15ಸಾವಿರ ಆಗುತ್ತಿತ್ತು.
ಇದರ ಜೊತೆಗೆ, ಪ್ರತೀ ವರ್ಷ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಬ್ಯಾಂಕಿನ ಮೂಲಕ ಅಂತರ ಪ್ರೌಢಶಾಲೆ, ಕಾಲೇಜು,ಅಂತರ ಬ್ಯಾಂಕ್ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸುತ್ತಿದ್ದೆವು. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನದ ಮೊತ್ತಕ್ಕೆ ನವಕರ್ನಾಟಕ ಪ್ರಕಾಶನದ ಕೂಪನನ್ನು ಕೊಡುತ್ತಿದ್ದೆವು. ಆ ಕೂಪನಿನ ಮೊತ್ತದಲ್ಲಿ (ಮಕ್ಕಳ ಶಾಲಾ ಪಠ್ಯ ಪುಸ್ತಕಗಳ ಹೊರತಾದ) ತಮ್ಮಿಷ್ಟದ ಕನ್ನಡ ಪುಸ್ತಕಗಳನ್ನು ಮಾತ್ರ ಕೊಳ್ಳಬೇಕು ಎಂಬ ನಿಯಮ ವಿಧಿಸುತ್ತಿದ್ದೆವು.
ಪುಸ್ತಕ ಬಹುಮಾನಗಳಿಗಾಗಿಯೇ ಸುಮಾರು 30ರಿಂದ 40ಸಾವಿರ ಮೊತ್ತ ವಿನಿಯೋಗಿಸುತ್ತಿದ್ದೆವು. ಈ ಬಹುಮಾನದ ಪುಸ್ತಕಗಳ ಖರೀದಿಗೆ ನಮಗೆ 10% ಬದಲು, ವಿಶೇಷವಾಗಿ 20% ಆದರೂ ರಿಯಾಯಿತಿ ನೀಡಬೇಕು ಮತ್ತು ಹಾಗೆ ಕೊಡುವ ರಿಯಾಯಿತಿ ಮೊತ್ತದಲ್ಲಿ ನಮ್ಮ ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನೇ ಖರೀದಿಸುತ್ತೇವೆ ಎಂದು ನವಕರ್ನಾಟಕ ಪ್ರಕಾಶನದ ಮೈಸೂರು ಶಾಖೆಯ ವ್ಯವಸ್ಥಾಪಕರಾದ ಸತ್ಯನಾರಾಯಣ ಅವರನ್ನು ವಿನಂತಿಸಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದರು.ಈ ರಿಯಾಯಿತಿ ಮೊತ್ತವೇ ಸುಮಾರು 5-6 ಸಾವಿರ ಸಿಗುತ್ತಿತ್ತು.
ಹೀಗಾಗಿ ಪ್ರತೀವರ್ಷ ಸುಮಾರು 20 ರಿಂದ 25 ಸಾವಿರ ರೂಪಾಯಿ ಮೊತ್ತದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಖರೀದಿಸುವುದು ಸಾಧ್ಯವಾಯಿತು. ಕೆಲವು ಸಹೋದ್ಯೋಗಿಗಳು ಒಂದಿಷ್ಟು ಪುಸ್ತಕಗಳನ್ನು ದಾನವಾಗಿ ನೀಡಿದ್ದರು.
ಒಟ್ಟಿನಲ್ಲಿ 6-7ವರ್ಷಗಳ ಅವಧಿಯಲ್ಲಿ ನಮ್ಮ ಗ್ರಂಥಾಲಯದ ಪುಸ್ತಕಗಳ ಸಂಖ್ಯೆ ಸುಮಾರು ಐದು ಸಾವಿರ ದಾಟಿತ್ತು. ಈ ನಡುವೆ ನಾನು ಪದೋನ್ನತಿ ಹೊಂದಿ 1994ರಲ್ಲಿ ಮೈಸೂರಿನಿಂದ ಮುಂಬಯಿಗೆ ವರ್ಗವಾಗಿ ಹೋದೆ. ನಂತರ ಬಳಗದ ಉಳಿದ ಸ್ನೇಹಿತರು ಗ್ರಂಥಾಲಯವನ್ನು ನೋಡಿಕೊಂಡರು.ಆ ಮೇಲೆ ಆಸಕ್ತ ಗೆಳೆಯರೆಲ್ಲ ಪದೋನ್ನತಿ, ವರ್ಗಾವಣೆ ಎಂದು ಒಬ್ಬೊಬ್ಬರಾಗಿ ಶಾಖೆ ಬಿಟ್ಟು ಹೋಗುತ್ತಿದ್ದಂತೇ ಗ್ರಂಥಾಲಯಕ್ಕೆ ಬೀಗ ಬಿತ್ತು. ತದನಂತರ ಶಾಖೆಯ ಕಟ್ಟಡ ಪುನರ್ ನಿರ್ಮಾಣ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ಜಾಗವಿಲ್ಲದೆ, ಶಾಶ್ವತವಾಗಿ ಮುಚ್ಚಿದ್ದರಿಂದ, ಪುಸ್ತಕಗಳಿದ್ದ ಐದಾರು ಮರದ ಕಪಾಟುಗಳನ್ನು, ನೋಡಿಕೊಳ್ಳುವವರಿಲ್ಲದೆ, ರೆಕಾರ್ಡ್ ರೂಮಿನ ಮಹಡಿಯ ಮೆಟ್ಟಿಲುಗಳ ಮೇಲೆ ಬೀಗ ಜಡಿದು ಇಟ್ಟಿದ್ದಾರೆ ಎಂದು ಅಲ್ಲಿದ್ದ ಕೆಲವು ಗೆಳೆಯರು ಹೇಳಿದಾಗ ತುಂಬ ಬೇಸರವಾಗಿತ್ತು.
2017 ರಲ್ಲಿ ಮೈಸೂರು ಬ್ಯಾಂಕ್, SBI ತೆಕ್ಕೆಗೆ ಬಿದ್ದ ಮೇಲೆ ಒಂದು ದಿನ ಮೈಸೂರು ಮುಖ್ಯ ಶಾಖೆಗೆ ಹೋಗಿದ್ದಾಗ, ಪುಸ್ತಕದ ಕಪಾಟುಗಳು ಕಾಣಿಸಬಹುದೇ ಎಂದು ಎಲ್ಲ ಕಡೆ ಹುಡುಕಿದೆ. ನಮ್ಮ ಒಂದೇ ಒಂದು ಕಪಾಟೂ ಇರಲಿಲ್ಲ, ಪುಸ್ತಕವೂ ಕಾಣಿಸಲಿಲ್ಲ. ಅವೆಲ್ಲ ಏನಾಯಿತೆಂದು ಹೇಳುವವರೂ ಇರಲಿಲ್ಲ. ನಾವೆಲ್ಲ ಗೆಳೆಯರು ಅತ್ಯಂತ ಪ್ರೀತಿ ಕಾಳಜಿಯಿಂದ ಕಟ್ಟಿ ಬೆಳೆಸಿದ ನಮ್ಮ ಮೈಸೂರು ಬ್ಯಾಂಕ್ ಕನ್ನಡ ಬಳಗದ, ಐದಾರು ಸಾವಿರ ಪುಸ್ತಕಗಳಿದ್ದ ಪುಟ್ಟ ಗ್ರಂಥಾಲಯವೊಂದು ಹೇಳ ಹೆಸರಿಲ್ಲದಂತೆ ಮಾಯವಾದ ದುರಂತ ಕಥೆ ಇದು..!!
ಇದನ್ನೂ ನೋಡಿ: Broadcasting ಸೇವೆಗಳ(ನಿಯಂತ್ರಣ) ಮಸೂದೆ 2024 ಎನ್ನುವ ಮತ್ತೊಂದು ಕರಾಳ ಮಸೂದೆಯ ವಿವರಗಳು ಗೊತ್ತೇ? Janashakthi