ಸಿ. ಸಿದ್ದಯ್ಯ
ಹುಬ್ಬಳ್ಳಿಯ ಶ್ರೀ ಮಹದೇವಪ್ಪ ಮುರಗೋಡರ ಸಿದ್ಧಾಶ್ರಮದಲ್ಲಿ ಅಳವಂಡಿ ಶಿವಮೂರ್ತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಹೋರಾಟಕ್ಕೆ ಒಂದು ಸಂಘಟಿತ ರೂಪ ಕೊಡಲು ತೀರ್ಮಾನಿಸಿದರು. ದಾವಣಗೆರೆಯಲ್ಲಿ 1953 ಮೇ 28 ರಂದು ನಡೆದ ಸರ್ವಪಕ್ಷ ಸಮ್ಮೇಳನದಲ್ಲಿ ಕಾಂಗ್ರೆಸ್ ಭಾಗವಹಿಸಲಿಲ್ಲ. ಕಮ್ಯೂನಿಸ್ಟ್ ಪಾರ್ಟಿ, ಪಿ.ಎಸ್.ಪಿ. ಮತ್ತು ಅನೇಕ ಸ್ವತಂತ್ರರು ಇದರಲ್ಲಿ ಭಾಗವಹಿಸಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ (ಅಕರಾನಿ) ಪರಿಷತ್ತನ್ನು ಸ್ಥಾಪಿಸಿದರು.
ಸ್ವಾತಂತ್ರ‍್ಯ ಗಳಿಸಿದ ಬಳಿಕ ಪ್ರಮುಖವಾಗಿ ಎದುರಿಸಿದ ಒಂದು ಬಹು ಮುಖ್ಯ ಪ್ರಶ್ನೆ ಎಂದರೆ:
ಒಂದು ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯನ್ನು ರೂಪಿಸಬೇಕಿದ್ದರೆ ಭಾಷೆ ಯಾವುದಿರಬೇಕು? ಅಂತಹ ವ್ಯವಸ್ಥೆಯನ್ನು ರೂಪಿಸಲು ಅದು ಜನರಿಗೆ ಪರಕೀಯವಾದ ಭಾಷೆಯ ಮೂಲಕ ಸಾಧ್ಯವಿರಲಿಲ್ಲ. ಭಾಷಾವಾರು ಪ್ರಾಂತ ರಚನೆ ಸಮಾಜದ ಪ್ರಜಾಪ್ರಭುತ್ವೀಕರಣಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿತ್ತು. ಬ್ರಿಟೀಷರ ಆಡಳಿತದಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರಾಂತಗಳ ರಚನೆಗಳಾಗಿದ್ದವು. ಈ ರೀತಿಯ ಬಹುಭಾಷಾ ಜನರನ್ನು ಹೊಂದಿರುವ ಪ್ರಾಂತಗಳನ್ನು ಪುನರ್ ಸಂಘಟಿಸಿ ಭಾಷಾವಾರು ಪ್ರಾಂತಗಳನ್ನು ರಚಿಸಬೇಕೆಂದು ಕಮ್ಯೂನಿಸ್ಟರು ಹೋರಾಡಿದರು. ಶಿಕ್ಷಣ, ಆಡಳಿತ ಇತ್ಯಾದಿಗಳು ಜನರ ಭಾಷೆಯಲ್ಲಿರುವ ಭಾಷಾವಾರು ಪ್ರಾಂತ ರಚನೆಯೇನೂ ಸಮಾಜವಾದಿ ಬೇಡಿಕೆಯಾಗಿರಲಿಲ್ಲ. ಮೂಲಭೂತವಾಗಿ ಅದು ಒಂದು ಪ್ರಜಾಪ್ರಭುತ್ವ ಬೇಡಿಕೆಯಾಗಿತ್ತು. ಸ್ವಾತಂತ್ರ‍್ಯವನ್ನು ಕ್ರೋಡೀಕರಿಸಿ, ಭಾರತದ ಸ್ವರೂಪವನ್ನು ಪುನರ್ ರಚಿಸಲು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಅದು ಅಗತ್ಯವಾಗಿತ್ತು.
ಕಾಂಗ್ರೆಸ್ ಪಕ್ಷವು ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಭಾಷಾವಾರು ಪ್ರಾಂತಗಳ ರಚನೆಯ ಪರವಾಗಿತ್ತು. ಆದರೆ, ಸ್ವಾತಂತ್ರ‍್ಯಾ ನಂತರ ಅದು ತನ್ನ ನಿಲುವು ಬದಲಿಸಿತು. ನೆಹರೂರವರು ‘ಭಾಷಾವಾರು ಪ್ರಾಂತಗಳ ರಚನೆ ಭಾರತದ ವಿಘಟನೆಯ ಕ್ರಮ’ ಎಂದು ಹೇಳುತ್ತಾ ಅದನ್ನು ‘ಬಾಲ್ಕನೈಷನ್’ ಎಂದು ಕರೆದರು. (ಯೂರೋಪ್ ಖಂಡದಲ್ಲಿನ ಬಾಲ್ಕನೈಷನ್ ಪ್ರದೇಶದಲ್ಲಿ ಭಾಷೆಗಳ ಆಧಾರದಲ್ಲಿ ಸಣ್ಣ ಸಣ್ಣ ದೇಶಗಳಿವೆ). ಕಮ್ಯೂನಿಸ್ಟರು ನೆಹರೂರವರ ವಾದವನ್ನು ಒಪ್ಪಲಿಲ್ಲ. ‘ಭಾಷಾವಾರು ಪ್ರಾಂತಗಳ ರಚನೆಯು ಸ್ವಾತಂತ್ರ‍್ಯ ಚಳುವಳಿಯ ಪ್ರತಿಜ್ಞೆಯ ಜಾರಿ. ಪ್ರಜಾಪ್ರಭುತ್ವ, ಗಣತಂತ್ರದ ರಚನೆಯ ಪ್ರಕ್ರಿಯೆ ಇದು. ಇದನ್ನು ಜಾರಿ ಮಾಡಲೇಬೇಕು’ ಎಂದು ಕಮ್ಯೂನಿಸ್ಟರು ವಾದಿಸಿದರು. ಸ್ವಾತಂತ್ರ‍್ಯಾ ನಂತರ ಶಿಕ್ಷಣ, ಆಡಳಿತ, ಸಂವಹನ ಇತ್ಯಾದಿಗಳಲ್ಲಿ ಜನರು ಅವರವರ ಭಾಷೆಯನ್ನು ಬಳಸುವಂತಿರುವುದರ ಅಗತ್ಯತೆಯನ್ನು ಎತ್ತಿ ತೋರಿಸಿದರು.
ಸ್ವತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿಯೇ ವಿಶಾಲಾಂಧ್ರದ ಪ್ರಶ್ನೆಯು ಎದ್ದು ಬಂದಿತು. ಈ ಚಳುವಳಿಯಲ್ಲಿ ಕಮ್ಯೂನಿಸ್ಟರು ನೇತೃತ್ವದ ಪಾತ್ರ ವಹಿಸಿದ್ದರು. ವಿಶಾಲಾಂಧ್ರದ ಚಳುವಳಿಯು ಭಾಷಾವಾರು ಪ್ರಾಂತ ರಚನೆಯ ಪ್ರಶ್ನೆಯನ್ನು ಮುಂಚೋಣಿಗೆ ತಂದಿತು. ಕೇಂದ್ರ ಸರ್ಕಾರ ಆರಂಭದಲ್ಲಿ ವಿಶಾಲಾಂಧ್ರದ ರಚನೆಗೆ ವಿರೋಧವಾಗಿತ್ತು. ಜನ ಸಮೂಹದ ಸಾಮೂಹಿಕ ಹೋರಾಟಗಳು ಮೂಡಿಬಂದವು. ಆಂದ್ರ ರಚನೆಗಾಗಿ ಕಾಂಗ್ರೆಸ್ ಮುಖಂಡರಾಗಿದ್ದ ಪೊಟ್ಟಿ ಶ್ರೀರಾಮುಲು ಅವರು ಈ ಉದ್ದೇಶಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಿ ಈ ಹೋರಾಟದಿಂದಲೇ ಮರಣ ಹೊಂದಿದರು. ಇದು ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ತಂದಿತು. ಕಾಂಗ್ರೆಸ್ ಪಕ್ಷದ ಮುಖಂಡರೂ, ಕಾರ್ಯಕರ್ತರೂ ವಿಶಲಾಂಧ್ರ ಚಳುವಳಿಗೆ ಸೇರಿದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಪುನರ್ ರಚನಾ ಆಯೋಗವನ್ನು ರಚಿಸಿತು. ಈ ಸಮಿತಿಯು ಸ್ಥೂಲವಾಗಿ ಭಾಷಾವಾರು ಪ್ರಾಂತ ರಚನೆಗೆ ಶಿಫಾರಸ್ಸು ಮಾಡಿತು. ಇಡಿಯಾಗಿ ಆಂಧ್ರದ ಎಲ್ಲಾ ಪ್ರದೇಶಗಳನ್ನು ಅದರಲ್ಲಿ ಸೇರಿಸುವ ಶಿಫಾರಸ್ಸು ಇರಲಿಲ್ಲ. ವಿಶಾಲಾಂಧ್ರದಲ್ಲಿ ಆದಂತೆ ಕೇರಳದಲ್ಲಿಯೂ ಕಾಂಗ್ರೆಸ್ ಅದೇ ನಿಲುವು ತಳೆಯಿತು. ಆಂಧ್ರದಲ್ಲಿ ಪಿ. ಸುಂದರಯ್ಯ ಅವರು ತೆಲುಗು ಭಾಷಿಕ ಪ್ರದೇಶಗಳೆಲ್ಲಾ ಒಂದುಗೂಡಿ ವಿಶಾಲಾಂಧ್ರ ಏಕಾಗಬೇಕು ಎಂದು ವಿವರಿಸಿ ಅತ್ಯುತ್ಯಮವಾದ ಪುಸ್ತಕವೊಂದನ್ನು ಬರೆದರು. ಐಕ್ಯ ಕೇರಳದ ಅಗತ್ಯದ ಬಗೆಗೆ ಇ.ಎಂ.ಎಸ್ ನಂಬೂದರಿ ಪಾದ್ ಅವರು ಒಂದು ಕಿರುಹೊತ್ತಿಗೆ ಬರೆದರು. ವಿಶಾಲಾಂಧ್ರದ ಚಳುವಳಿ ಗೆಲುವು ಸಾಧಿಸಿದಂತೆ ಕರ್ನಾಟಕದ ಏಕೀಕರಣ ಸೇರಿದಂತೆ ದೇಶಾದ್ಯಂತ ಭಾಷಾವಾರು ಪ್ರಾಂತಗಳ ರಚನೆಗಾಗಿ ಸಾಮೂಹಿಕ ಚಳುವಳಿಗಳು ಎದ್ದು ಬಂದವು. ಈ ಎಲ್ಲಾ ಚಳುವಳಿಗಳಲ್ಲಿಯೂ ಇತರ ಪ್ರಜಾಪ್ರಭುತ್ವ ಶಕ್ತಿಗಳೊಂದಿಗೆ ಅವಿಭಜಿತ ಕಮ್ಯೂನಿಸ್ಟ್ ಪಕ್ಷ ಪಾತ್ರ ವಹಿಸಿದೆ.
ಭಾಷಾ ಜನಾಂಗಗಳನ್ನು ಪ್ರತಿನಿಧಿಸುವ ಹತ್ತು ಪ್ರಮುಖ ಭಾಷಾವಾರು ರಾಜ್ಯಗಳಿವೆ. ಇದಲ್ಲದೆ ಈಶಾನ್ಯ ಪ್ರದೇಶದ ಸಣ್ಣ ಸಣ್ಣ ರಾಜ್ಯಗಳಿವೆ. ಈ ರೀತಿಯ ಭಾಷಾವಾರು ರಾಜ್ಯ ರಚನೆಯಿಂದಾಗಿ ಅವು ಸಣ್ಣದಿರಲಿ ಅಥವಾ ದೊಡ್ಡದಿರಲಿ ಅವುಗಳ ಬೆಳವಣಿಗೆಗೆ ಸಮಾನ ಅವಕಾಶಗಳನ್ನು ಒದಗಿಸುತ್ತದೆ. ಹೆಚ್ಚು ಜನರು ಮಾತನಾಡುವ ಭಾಷೆಯೇ ಇರಲಿ, ಕಡಿಮೆ ಜನರು ಮಾತನಾಡುವ ಭಾಷೆಯೇ ಇರಲಿ ಅವನ್ನು ಸಮಾನವಾಗಿ ಪರಿಗಣಿಸುವಂತಾಗಿದೆ. ಭಾರತದ ಎಲ್ಲಾ ಭಾಷೆಗಳೂ ಸಮಾನ ಎನ್ನುವ ನೀತಿಯ ಕಡೆಗೆ ಸಾಗಿದಂತಾಗುತ್ತದೆ. ಭಾಷಾವಾರು ಪ್ರಾಂತ್ಯಗಳಲ್ಲಿ ಸಹಜವಾಗಿ ಭಾಷಾ ಅಲ್ಪಸಂಖ್ಯಾತರು ಇದ್ದೇ ಇರುತ್ತಾರೆ. ಇಂತಹ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು.
ಕರ್ನಾಟಕದ ಏಕೀಕರಣ ಚಳುವಳಿಯಲ್ಲಿ ಕಮ್ಯೂನಿಸ್ಟರು:
1905 ರಲ್ಲಿ ಬಂಗಾಳದ ವಿಭಜನೆಯ ವಿರುದ್ಧ ನಡೆದ ಹೋರಾಟ ಭಾಷಾವಾರು ಪ್ರಾಂತ ರಚನೆಯ ಬೇಡಿಕೆಗೆ ನಾಂದಿಯಾಯಿತು. ಬಂಗಾಳದ ಚಳುವಳಿಯ ಪರಿಣಾಮ ಕರ್ನಾಟಕದ ಜನತೆಯ ಮೇಲೂ ಆಯಿತು. ಆಲೂರು ವೆಂಕಟರಾಯರು ಏಕೀಕರಣ ಚಳುವಳಿಯ ಪ್ರಮುಖ ರುವಾರಿ.
1905 ರಿಂದ 1915 ರವರಗೆ ಕನ್ನಡಿಗರೆಲ್ಲರ ಐಕ್ಯತೆಯನ್ನು ಸಾಧಿಸುವುದರ ಸಲುವಾಗಿ ಇಲ್ಲಿನ ಕಮ್ಯೂನಿಸ್ಟರು ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿದರು. ಐಕ್ಯ ಕರ್ನಾಟಕದ ಸಾಧನೆಯ ಕನಸನ್ನು ನನಸು ಮಾಡಲು ಕಮ್ಯೂನಿಸ್ಟರು 1917 ರಲ್ಲಿ ಮಾಂಟೇಗೋ ಕ್ಲೆಂಫೋರ್ಡ್ ಸುಧಾರಣಾ ಸಮಿತಿಗೆ ಕರ್ನಾಟಕ ಏಕೀಕರಣವಾಗಬೇಕು ಎಂದು ಮನವಿ ಸಲ್ಲಿಸಿದರು. 1915 ರಲ್ಲಿ ಕನ್ನಡ ಪರಿಷತ್ತು ಸ್ಥಾಪನೆಯಾದಾಗಿನಿಂದ ಈ ಚಳವಳಿ ಮತ್ತಷ್ಟು ಹೆಚ್ಚಾಗಿ ಬೆಳೆಯಿತು. ಭಾರತದ ರಾಷ್ಟ್ರೀಯ ಹೋರಾಟದ ಅಂಗವಾಗಿಯೇ ಭಾಷಾವಾರು ಪ್ರಾಂತ ರಚನೆಯ ಹೋರಾಟವೂ ಬೆಳೆಯಿತು. 1920-21 ರಲ್ಲಿ ಅಸಹಕಾರ ಚಳುವಳಿ ನಡೆದಾಗ ಇದು ಇನ್ನಷ್ಟು ಬಲಗೊಂಡಿತು. ಪರಿಣಾಮವಾಗಿ ಭಾಷಾವಾರು ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಪ್ರಾಂತ ಸಮಿತಿಗಳನ್ನು ರಚಿಸಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಂಸ್ಥೆಯೂ ಆಗ ಸ್ಥಾಪನೆಯಾಯಿತು. 1928 ರಲ್ಲಿ ನೆಹರೂ ಸಮಿತಿಯು ಕರ್ನಾಟಕ ಪ್ರಾಂತವಾಗಬೇಕೆಂದು ಸ್ಪಷ್ಟವಾಗಿ ತಿಳಿಸಿತು. 1937 ರಲ್ಲಿ ಬೊಂಬಾಯಿ ಮತ್ತು ಮದ್ರಾಸ್ ಅಸೆಂಬ್ಲಿಗಳಲ್ಲಿ ಈ ಪ್ರಾಂತಗಳ ರಚನೆಯಾಗಬೇಕೆಂಬ ನಿರ್ಣಯಗಳಾದವು.
1948 ರಲ್ಲಿ ಧರ್ ಸಮಿತಿಯ ನೇಮಕವಾಯಿತು. ‘ಮೈಸೂರು ತನ್ನೊಡನೆ ಇತರ ಪ್ರದೇಶಗಳನ್ನು ಸೇರಿಸಿಕೊಳ್ಳಲು ಸಿದ್ದವಾಗಿದ್ದರೆ ಎಲ್ಲ ಪ್ರದೇಶಗಳನ್ನು ಒಟ್ಟು ಸೇರಿಸಿ ಪ್ರತ್ಯೇಕ ಪ್ರಾಂತ ರಚನೆ ಮಾಡಲು ಸಾಧ್ಯವಿತ್ತು. ಮೈಸೂರು ಸಂಸ್ಥಾನವು ಕರ್ನಾಟಕದಲ್ಲಿ ವಿಲೀನಗೊಳ್ಳಲು ತಯಾರಿಲ್ಲವೆಂದು ತೋರುವುರಿಂದ ಕೇಂದ್ರದ ಭಾಗಗಳನ್ನು ಭಾರತೀಯ ಸಂಸ್ಥಾನದಲ್ಲಿ ಸೇರಿಸಲು ಕೇಂದ್ರ ಸರಕಾರ ಸಿದ್ದವಾಗಿದೆಯೇ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ’ ಎಂದು 1980 ರ ಡಿಸೆಂಬರ್ 10 ರಂದು ಈ ಸಮತಿ ವರದಿ ಮಾಡಿತು. ಇದನ್ನು ಕನ್ನಡ ಜನತೆ ತೀವ್ರವಾಗಿ ವಿರೋಧಿಸಿ ಪ್ರತಿಭಟಿಸಿದರು.
ನಂತರ ಕಾಂಗ್ರೆಸ್ ಜವಹರಲಾಲ್ ನೆಹರೂ, ವಲ್ಲಭಾಯ್ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ (ಜೆವಿಪಿ) ಸಮಿತಿಯೂ ಕರ್ನಾಟಕದ ಬೇಡಿಕೆಯನ್ನು ನಿರಾಕರಿಸಿತು. ಭಾಷಾವಾರು ಪ್ರಾಂತವು ರಚನೆಯಾಗಬೇಕೆಂದು ಒತ್ತಾಯಪಡಿಸುವುದಾದರೆ ಸಂಬಂಧಪಟ್ಟ ಪಕ್ಷಗಳು ಒಮ್ಮತಾಭಿಪ್ರಾಯಕ್ಕೆ ಬಂದರೆ ಮಾನ್ಯ ಮಾಡಬಹುದು ಎಂದು ಅದು ಅಭಿಪ್ರಾಯಪಟ್ಟಿತು. ಕೇಂದ್ರ ಸರಕಾರದ ಇಂತಹ ಧೋರಣೆಯಿಂದಲೂ, ಕರ್ನಾಟಕ ಕಾಂಗ್ರೆಸ್ನವರ ವರ್ತನೆಯಿಂದಲೂ ಕರ್ನಾಟಕದ ಹಲವಾರು ಕಾರ್ಯಕರ್ತರು ಬೇಸತ್ತು ಕಾಂಗ್ರೆಸ್ಸಿಗೇ ರಾಜೀನಾಮೆ ಕೊಟ್ಟು ಹೊರಬಂದು ಏಕೀಕರಣ ಪಕ್ಷವೆಂಬ ಹೊಸ ಪಕ್ಷವನ್ನು ಸ್ಥಾಪಿಸಿದರು.
1951 ರಲ್ಲಿ ಉಳ್ಳಾಲದಲ್ಲಿ ಸೇರಿದ್ದ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಚಳುವಳಿಯನ್ನು ನಡೆಸುವ ನಿರ್ಣಯವನ್ನು ಕೈಗೊಂಡಿತು. ಎಸ್.ಆರ್. ಭಟ್ ಬರೆದ ‘ಒಂದೇ ಕರ್ನಾಟಕ ಇಂದೇ ರಚನೆಯಾಗಲಿ’ ಎಂಬ ಕಿರುಹೊತ್ತಿಗೆಯನ್ನು ಕಮ್ಯೂನಿಸ್ಟ್ ಪಕ್ಷವು ಪ್ರಕಟಿಸಿತು. ಕರ್ನಾಟಕಕ್ಕೆ ಸೇರಬೇಕಾದ ಕೆಲವು ಪ್ರದೇಶಗಳಿಗೆ ಸಂಬಂಧಿಸಿ ಕಮ್ಯೂನಿಸ್ಟ್ ಪಕ್ಷದ ರಾಜ್ಯಸಭಾ ಸದಸ್ಯ ಬಿ.ವಿ. ಕಕ್ಕಿಲ್ಲಾಯ ಅವರು, ಪಿ. ಸುಂದರಯ್ಯನವರ ಮೂಲಕ ಬಳ್ಳಾರಿ ಜಿಲ್ಲೆಯ ಕನ್ನಡ ಭಾಗಗಳಾದ ಕೊಳ್ಳೇಗಾಲ, ಕೋಲಾರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ಪೂರ್ಣವಾಗಿ ಕರ್ನಾಟಕಕ್ಕೆ ಸೇರುವಂತೆ ಆಂಧ್ರದ ಸಂಸದರನ್ನು ಮನವೊಲಿಸಲು ಪ್ರಭಾವ ಬೀರಿದ್ದರು. ರಾಜ್ಯದ ಎಲ್ಲಾ ಭಾಗಗಳಲ್ಲೂ ಕಮ್ಯೂನಿಸ್ಟರು ಏಕೀಕರಣದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಹುಬ್ಬಳ್ಳಿ ಪ್ರತಿಭಟನೆ : ಬಂಧಿತರಲ್ಲಿ ಕಮ್ಯೂನಿಸ್ಟ್ ನಾಯಕರು:
ಜನವರಿ 1953 ರಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಭಾಷಾವಾರು ಪ್ರಾಂತಗಳ ರಚನೆಯ ವಿರುದ್ಧ ತೀರ್ಮಾನ ಮಾಡಿತು. ಇದರ ವಿರುದ್ಧವಾಗಿ 1953 ರ ಮಾರ್ಚ್ ತಿಂಗಳಲ್ಲಿ ಅದರಗುಂಚಿ ಶಂಕರಗೌಡರು ಆಮರಣಾಂತ ಉಪವಾಸ ಆರಂಭಿಸಿದರು. 1953 ರ ಏಪ್ರಿಲ್ 19 ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆ ಸೇರಿದ್ದಾಗ, ಕಾಂಗ್ರೆಸ್ ನಾಯಕರು ರಾಜೀನಾಮೆ ಕೊಡಬೇಕೆಂದು 25 ಸಾವಿರದಷ್ಟು ಜನರು ಅಲ್ಲಿ ಪ್ರತಿಭಟನೆ ಮಾಡಿದರು. ಜನರನ್ನು ಎದುರಿಸಲಾಗದ ಕಾಂಗ್ರೆಸ್ ನಾಯಕರು ಪೊಲೀಸರನ್ನು ಬಳಸಿ ಗೋಲೀಬಾರು ನಡೆಸಿದರು. ಜನತೆಯ ಒತ್ತಡಕ್ಕೆ ಮಣಿದು 1954 ರೊಳಗೆ ರಾಜ್ಯ ರಚನೆ ಆಗದಿದ್ದರೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವುದೆಂದು ಕೆ.ಪಿ.ಸಿ.ಸಿ. ತೀರ್ಮಾನಿಸಿತು. ‘ಹುಬ್ಬಳ್ಳಿ ಗಲಭೆ’ ಎಂದು ಪ್ರಸಿದ್ದವಾದ ಪ್ರಕರಣದಲ್ಲಿ ಸ್ಥಾನಬದ್ಧತೆಯಡಿಯಲ್ಲಿ ಬಂಧಿತರಾದವರ ಪೈಕಿ ಎನ್.ಕೆ. ಉಪಾಧ್ಯಾಯ, ಎ.ಜೆ. ಮುಧೋಳ, ಬಿ.ಎನ್. ಧಾರವಾಡಕರ್, ಸಿದ್ದಪ್ಪ ಕಮ್ಮಾರ್ ಮತ್ತು ಮುಲ್ಲಾ ಮುಂತಾದ 13 ಜನ ಕಮ್ಯೂನಿಸ್ಟ್ ನಾಯಕರಿದ್ದರು.
ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ (ಅಕರಾನಿ) ಪರಿಷತ್ ಸ್ಥಾಪನೆ:
ಹುಬ್ಬಳ್ಳಿಯ ಶ್ರೀ ಮಹದೇವಪ್ಪ ಮುರಗೋಡರ ಸಿದ್ಧಾಶ್ರಮದಲ್ಲಿ ಅಳವಂಡಿ ಶಿವಮೂರ್ತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಹೋರಾಟಕ್ಕೆ ಒಂದು ಸಂಘಟಿತ ರೂಪ ಕೊಡಲು ತೀರ್ಮಾನಿಸಿದರು. ದಾವಣಗೆರೆಯಲ್ಲಿ 1953 ಮೇ 28 ರಂದು ನಡೆದ ಸರ್ವಪಕ್ಷ ಸಮ್ಮೇಳನದಲ್ಲಿ ಕಾಂಗ್ರೆಸ್ ಭಾಗವಹಿಸಲಿಲ್ಲ. ಕಮ್ಯೂನಿಸ್ಟ್ ಪಾರ್ಟಿ, ಪಿ.ಎಸ್.ಪಿ. ಮತ್ತು ಅನೇಕ ಸ್ವತಂತ್ರರು ಇದರಲ್ಲಿ ಭಾಗವಹಿಸಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ (ಅಕರಾನಿ) ಪರಿಷತ್ತನ್ನು ಸ್ಥಾಪಿಸಿದರು. ಈ ಸಮ್ಮೇಳನದಲ್ಲಿ ಎನ್.ಎಲ್. ಉಪಾಧ್ಯಾಯರ ನೇತೃತ್ವದಲ್ಲಿ ಕಮ್ಯೂನಿಸ್ಟ್ ಪಕ್ಷದ ಒಂದು ದೊಡ್ಡ ತಂಡ ಬಿ.ವಿ. ಕಕ್ಕಿಲ್ಲಾಯ, ಎಂ.ಎಸ್. ರಾಮರಾವ್, ಸಿ.ಬಿ. ಮೊಣ್ಣಯ್ಯ, ಎನ್.ಕೆ. ಉಪಾಧ್ಯಾಯ, ಎಂ.ಎಸ್. ಕೃಷ್ಣನ್, ಎಂ.ಸಿ. ನರಸಿಂಹನ್, ಐ. ಮರಿದಾಸ್ ಮುಂತಾದವರು ಭಾಗವಹಿಸಿದ್ದರು. ಅಕರಾನಿ ಪರಿಷತ್ತಿಗೆ ಕಮ್ಯೂನಿಸ್ಟ್ ಪಕ್ಷದ ಬಿ.ವಿ. ಕಕ್ಕಿಲ್ಲಾಯ ಅವರು ಕಾರ್ಯದರ್ಶಿಯಾದರು. 1953 ಸೆಪ್ಟೆಂಬರ್ ನಲ್ಲಿ ‘ಕರ್ನಾಟಕ ವಾರ’ಆಚರಿಸಲು ಅಕರಾನಿ ಪರಿಷತ್ತು ಕರೆ ನೀಡಿತು. ಬಿ.ವಿ. ಕಕ್ಕಿಲ್ಲಾಯರು ಮತ್ತು ಶಿವಮೂರ್ತಿ ಸ್ವಾಮಿಗಳೂ ಕೂಡಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದರು. ಹೊಸಮನಿ ಸಿದ್ಧಪ್ಪ, ಚೆನ್ನಪ್ಪ ವಾಲಿ, ಬೆಂಕಿ ಸ್ವಾಮಿ, ಶಾಂತಿನಾಥ ಇಂಗಳೆ, ಡಿ.ಜಿ.ಮುಲ್ಲಾ, ಮಹದೇವಪ್ಪ ಮುರಗೋಡು, ಮುಂತಾದವರು ಬಿಜಾಪುರದಲ್ಲಿ ಎನ್.ಕೆ.ಉಪಾಧ್ಯಾಯ ಮುಂತಾದ ಕಮ್ಯೂನಿಸ್ಟರು ಭಾಗವಹಿಸಿದರು. ಮುಂಜಾಗ್ರತಾ ಕ್ರಮವಾಗಿ ಬಾಂಬೆ ಸರ್ಕಾರ ಐದು ಸಾವಿರಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ಹಿಂಡಲಗಾ, ಅಹಮದಾಬಾದ್, ನಾಸಿಕ್, ಯರವಾಡ ಮುಂತಾದ ಜೈಲುಗಳಲ್ಲಿಟ್ಟಿತು. ಬಂಧನಕ್ಕೆ ಒಳಗಾದವರಲ್ಲಿ ಹೆಚ್ಚಿನವರು ಕಮ್ಯೂನಿಸ್ಟರಾಗಿದ್ದರು.
1953 ಡಿಸೆಂಬರ್ 3ರಂದು ಹಂಪಿಯಲ್ಲಿ ಕೆ.ಆರ್. ಕಾರಂತರ ಅಧ್ಯಕ್ಷತೆಯಲ್ಲಿ ಅಕರಾನಿ ಪರಿಷತ್ತಿನ ಎರಡನೆ ಸಮ್ಮೇಳನವು ಜರುಗಿತು. ಇಲ್ಲಿ ಬಿ.ವಿ. ಕಕ್ಕಿಲ್ಲಾಯರು ಕಮ್ಯೂನಿಸ್ಟ್ ಪಕ್ಷದ ನಿಲುವುಗಳನ್ನು ಮಂಡಿಸಿದರು. ಅದರಲ್ಲಿ ಕಾಸರಗೋಡು ತಾಲೂಕಿನ ಕನ್ನಡ ಬಹುಸಂಖ್ಯಾತ ಗ್ರಾಮಗಳು ಬಹುತೇಕ ಚಂದ್ರಗಿರಿ ನದಿಯ ಉತ್ತರ ಭಾಗಗಳು ಕರ್ನಾಟಕದಲ್ಲಿ ವಿಲೀನವಾಗಬೇಕು, ಕೇಂದ್ರಾಡಳಿತ ಪ್ರದೇಶ ಕೊಡಗು ಪೂರ್ತಿಯಾಗಿ ಕರ್ನಾಟಕಕ್ಕೆ ಸೇರಬೇಕು, ಬಳ್ಳಾರಿ ಜಿಲ್ಲೆಯ ಕನ್ನಡ ಮತ್ತು ತೆಲುಗು ಗಡಿಗಳ ನಿರ್ಧಾರವನ್ನು ಆಯೋಗಕ್ಕೆ ಬಿಡಬೇಕೆಂದು, ಗ್ರಾಮಗಳನ್ನು ಘಟಕಗಳನ್ನಾಗಿ ಪರಿಗಣಿಸಿ ಭಾಷಾ ಬಾಂಧವ್ಯ ಮತ್ತು ಪ್ರಾದೇಶಿಕ ಹೊಂದಾಣಿಕೆಗಳ ದೃಷ್ಟಿಯಿಂದ ಗಡಿ ನಿರ್ಣಯವಾಗಬೇಕೆಂದು ಕಕ್ಕಿಲ್ಲಾಯರು ಹೇಳಿದರು. ಅದೇ ರೀತಿ ಮಹಾರಾಷ್ಟ್ರ-ಕರ್ನಾಟಕ ಮತ್ತು ಆಂಧ್ರ-ಕರ್ನಾಟಕ ಗಡಿಗಳನ್ನು ನಿರ್ಧರಿಸಬೇಕೆಂದು ತಿಳಿಸಿದರು. ಮುಂದೆ ರಚನೆಯಾಗಲಿದ್ದ ಆಯೋಗದ ಮುಂದೆ ಅಕರಾನಿ ನಿಲುವನ್ನು ಮಂಡಿಸಲು ಮನವಿಯನ್ನು ತಯಾರಿಸಲು ಶಿವಮೂರ್ತಿ ಸ್ವಾಮಿಗಳು, ಬಿ.ವಿ. ಕಕ್ಕಿಲ್ಲಾಯ ಮತ್ತು ಬಳ್ಳಾರಿ ವಕೀಲರಾದ ಸತ್ಯವಂತರಾವ್ ಇವರಿರುವ ಸಮಿತಿಯನ್ನು ರಚಿಸಲಾಯಿತು.
ಸಂಸತ್ತಿನಲ್ಲಿ ಕಮ್ಯೂನಿಸ್ಟರಿಂದ ನಿರ್ಣಯಗಳ ಮಂಡನೆ:
ಸ್ವಾತಂತ್ರ‍್ಯ ನಂತರ ಭಾಷಾವಾರು ರಾಜ್ಯ ರಚನೆಗೆ ಸಂಸತ್ತಿನಲ್ಲಿ ಕಮ್ಯೂನಿಸ್ಟರು ಪದೇ ಪದೇ ನಿರ್ಣಯಗಳನ್ನು ಮಂಡಿಸಿದರು. ಆಂಧ್ರ, ಕೇರಳ ಮತ್ತು ಕರ್ನಾಟಕ ಪ್ರಾಂತಗಳಲ್ಲಿ ಕಮ್ಯೂನಿಸ್ಟರು ಚಳುವಳಿಗಳ ಮೂಲಕ ಕೇಂದ್ರದ ಮೇಲೆ ಒತ್ತಡ ತಂದರು. ಕರ್ನಾಟಕದಲ್ಲಿ ಎಸ್.ವಿ.ಘಾಟೆ ಮತ್ತು ಎನ್. ಎಲ್. ಉಪಾಧ್ಯಾಯ ಇವರ ನೇತೃತ್ವದಲ್ಲಿ ‘ಕರ್ನಾಟಕ ಸಂಘಟನಾ ಸಮಿತಿ’ ಯನ್ನು ರಚಿಸಿ ಚಳುವಳಿಯನ್ನು ಸಂಘಟಿಸಲು ತೀರ್ಮಾನಿಸಿದರು. ಎಲ್ಲಾ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾವಾರು ಪ್ರತಿನಿಧಿಗಳನ್ನು ನೇಮಿಸಿ ಸಂಘಟನಾ ಕಾರ್ಯವನ್ನು ವಹಿಸಲಾಯಿತು. ಕನ್ನಡ ಪ್ರದೇಶಗಳನ್ನೆಲ್ಲಾ ಸಂಚರಿಸಿ ಏಕೀಕರಣ ಪರ ಪ್ರಚಾರ ಕೈಗೊಂಡರು.
ಹುಬ್ಬಳ್ಳಿ ಘಟನೆ, ಉಪ-ಚುನಾವಣೆಗಳ ಫಲಿತಾಂಶ ಮತ್ತು ಕಮ್ಯೂನಿಸ್ಟರ ಹೆಚ್ಚಿದ ಚಟುವಟಿಕೆಗಳು ಸೇರಿದಂತೆ ಭಾಷಾವಾರು ರಾಜ್ಯಗಳ ರಚನೆಗೆ ಜನತೆಯ ಚಳುವಳಿಗಳು ತೀವ್ರವಾಗುತ್ತಿರುವುದನ್ನು ಕಂಡು ಕೇಂದ್ರದ ನೆಹರೂ ಸರ್ಕಾರ 1953 ಡಿಸೆಂಬರ್ 29 ರಂದು ಫಜಲ್ ಅಲಿ ಆಯೋಗವನ್ನು ನೇಮಿಸಿತು. ಅಕರಾನಿ ಪರಿಷತ್ತು ಮತ್ತು ಕಮ್ಯೂನಿಸ್ಟ್ ಪಕ್ಷ ಪ್ರತ್ಯೇಕವಾಗಿ ಮನವಿಗಳನ್ನು ಅರ್ಪಿಸಿದವು.
ಕೊಡಗು ಕರ್ನಾಟಕ ಪ್ರಾಂತದಲ್ಲಿರಬೇಕು ಎಂಬುದು ಕಮ್ಯೂನಿಸ್ಟರ ವಾದ:
1955 ಮೇ 12 ರಂದು ಮಡಿಕೇರಿಯಲ್ಲಿ ನಡೆದ ಕಮ್ಯೂನಿಸ್ಟ್ ಪಕ್ಷದ ಕರ್ನಾಟಕ ಪ್ರಾಂತ ಸಮಿತಿ ಸಭೆಯು ಅಖಂಡ ಕರ್ನಾಟಕ ಪ್ರಾಂತ ರಚನೆಗೆ ಒತ್ತಾಯಿಸಿ ನಿರ್ಣಯ ತೆಗೆದುಕೊಂಡಿತು. ಏಕೀಕರಣದ ಚಳುವಳಿಯು ಬಲ ಹೊಂದುತ್ತಿರುವುದನ್ನು, ಆರು ಆಡಳಿತಗಳಲ್ಲಿ ಹರಿದು ಹಂಚಲ್ಪಟ್ಟಿರುವ ಕರ್ನಾಟಕವನ್ನು ಒಂದುಗೂಡಿಸಿ ಒಂದೇ ಪ್ರಾಂತೀಯ ಆಡಳಿತದೊಳಗೆ ತರಬೇಕೆಂಬ ಕನ್ನಡಿಗರ ಬಯಕೆಗೆ ಹೆಚ್ಚಿನ ಬೆಂಬಲ ದೊರಕುತ್ತಿರುವುದನ್ನು ಗುರಿತಿಸಿ, ಕೊಡಗು ಸೇರಿದಂತೆ ಕನ್ನಡಿಗರ ಭಾಗಗಳನ್ನೆಲ್ಲಾ ಒಳಗೊಂಡಿರುವ ಅಖಂಡ ಕರ್ನಾಟಕ ಪ್ರಾಂತವನ್ನು ಕೂಡಲೇ ರಚಿಸಬೇಕೆಂಬ ಬೇಡಿಕೆಯನ್ನು ಮತ್ತೊಮ್ಮೆ ಘೋಷಿಸಿತು. ಕರ್ನಾಟಕ ಪ್ರಾಂತ ರಚನೆಯ ಬೇಡಿಕೆಯನ್ನು ಸಾಧಿಸಲು ಚಳವಳಿಯನ್ನು ಬಲಪಡಿಸಬೇಕೆಂದು ಅದು ಕರ್ನಾಟಕದ ಜನರನ್ನೂ, ಸಂಘಟನೆಗಳನ್ನೂ ಕೇಳಿಕೊಂಡಿತು.
ಜನತೆಯ ಹೋರಾಟದ ಪರಿಣಾಮವಾಗಿ ರಾಜ್ಯ ಪುನರ್ವಿಂಗಡಣಾ ಆಯೋಗ ನವೆಂಬರ್ 1955 ರಲ್ಲಿ ವರದಿ ಪ್ರಕಟಿಸಿತು. ಅದರಲ್ಲಿ ಕರ್ನಾಟಕ ಪ್ರಾಂತ ರಚನೆಗೆ ಪುರಸ್ಕಾರ ಸಿಕ್ಕಿತ್ತು. ಆದರೆ ಅದರಲ್ಲಿ ಬಳ್ಳಾರಿ ಜಿಲ್ಲೆಯ ಕೆಲವು ಪ್ರದೇಶಗಳನ್ನು ಆಂಧ್ರಕ್ಕೆ ಸೇರಿಸಬೇಕೆಂದೂ ಕಾಸರಗೋಡು ತಾಲೂಕನ್ನು ಕೇರಳಕ್ಕೆ ಸೇರಿಸಬೇಕೆಂದೂ ಶಿಫಾರಸ್ಸು ಮಾಡಲಾಗಿತ್ತು. ಅದನ್ನು ಪ್ರತಿಭಟಿಸಿ ಜನತೆ ಹೋರಾಡಬೇಕಾಯಿತು. ಸಾವಿರಾರು ಜನ ಬಳ್ಳಾರಿ ಮತ್ತು ಕಾಸರಗೋಡಿನಲ್ಲಿ ಜೈಲಿಗೆ ಹೋದರು. ಹರತಾಳಗಳಾದವು. ಪರಿಣಾಮವಾಗಿ ಬಳ್ಳಾರಿ ಕರ್ನಾಟಕದಲ್ಲೇ ಉಳಿಯಿತು. ಕಾಸರಗೋಡು ಕೇರಳಕ್ಕೆ ಸೇರಿಸಲ್ಪಟ್ಟಿತು.
ಬುಹುಭಾಷಾ ಪ್ರಾಂತಗಳ ರಚನೆಗೆ ಯತ್ನ: ಶಾಸನಸಭೆಯಲ್ಲಿ ಕೆ.ಎಸ್. ವಾಸನ್ ರಿಂದ ವಿರೋಧ:
ಈ ನಡುವೆ ಪಾರ್ಲಿಮೆಂಟಿನಲ್ಲಿ ಪ್ರಾಂತ ಪುನರ್ವಿಂಗಡಣೆಯ ಚರ್ಚೆ ಮುಗಿಯುವ ಮುಂಚೆಯೇ ಬಹು ಭಾಷಾ ಪ್ರಾಂತ ರಚನೆಯನ್ನು ಜನತೆಯ ಮೇಲೆ ಹೊರಿಸುವ ಪ್ರಯತ್ನವನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಮತ್ತು ಕಾಂಗ್ರೆಸ್ ಸರ್ಕಾರ ಮಾಡುತ್ತಿತ್ತು. ಕೇರಳ-ಕರ್ನಾಟಕಗಳ ಅಥವಾ ಕರ್ನಾಟಕ-ಆಂಧ್ರಗಳನ್ನೊಳಗೊಂಡ ‘ದಕ್ಷಿಣ ಪ್ರದೇಶ’ ಮತ್ತು ‘ಪಶ್ಚಿಮ ಪ್ರದೇಶ’ಗಳ ರಚನೆಗೆ ಪ್ರಯತ್ನ ನಡೆಯಿತು. ಮೈಸೂರು ವಿಧಾನಸಭೆಯಲ್ಲಿ ಹನುಮಂತಯ್ಯನವರು ಇದರ ಪರವಾಗಿ ಠರಾವನ್ನು ಅಂಗೀಕರಿಸಿ ಬಹುಭಾಷಾ ಪ್ರಾಂತ್ಯಕ್ಕೆ ಬೆಂಬಲಕೊಟ್ಟರು. ಒಂದೇ ಕರ್ನಾಟಕವಾದರೆ ಮೈಸೂರಿನ ‘ವೈಶಿಷ್ಟತೆ’ ಹೋಗುವುದು ಎಂದ ಅವರು ದಕ್ಷಿಣ ಪ್ರಾಂತವಾದರೆ ಮೈಸೂರಿನ ವೈಶಿಷ್ಟತೆಯನ್ನು ಹೇಗೆ ಉಳಿಸಿಕೊಳ್ಳತ್ತಾರೆಂಬುದನ್ನು ವಿವರಿಸಲು ವಿಫಲವಾದರು. ಶಾಸನಸಭೆಯಲ್ಲಿ ಕಮ್ಯೂನಿಸ್ಟ್ ಶಾಸಕರಾಗಿದ್ದ ಕೆ.ಎಸ್. ವಾಸನ್ ಇದನ್ನು ವಿರೋಧಿಸಿದರು. ಈ ಗಂಡಾಂತರವನ್ನು ವಿರೋಧಿಸಿ ಕಮ್ಯೂನಿಸ್ಟ್ ಪಕ್ಷ 1956 ರ ಮಾರ್ಚ್ 18 ರಂದು ಪ್ರಾಂತ್ಯದಾದ್ಯಂತ ‘ದಕ್ಷಿಣ ಪ್ರಾಂತ ಪ್ರತಿಭಟನಾ ದಿನಾಚರಣೆ’ಯನ್ನು ಆಚರಿಸಿತು. ಹೀಗೆ ಪ್ರತಿ ಹೆಜ್ಜೆಗೂ ಜನತೆ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಬೇಕಾಯಿತು. ಕಮ್ಯೂನಿಸ್ಟ್ ಪಾರ್ಟಿ ತತ್ವಬದ್ಧವಾದ ಹೋರಾಟವನ್ನು ನಡೆಸಿತು. ಅಂತೂ ಕೊನೆಗೆ ಜನತೆಯ ಆಶೋತ್ತರಗಳು ಕೈಗೂಡಿ 1956 ರ ನವೆಂಬರ್ ಒಂದರಂದು ಕರ್ನಾಟಕದ ಏಕೀಕರಣವಾಯಿತು.
ಕಮ್ಯೂನಿಸ್ಟರ ಪಾತ್ರ
ಭಾಷಾವಾರು ಪ್ರಾಂತ ರಚನೆಗಾಗಿ ನಡೆದ ಚಳುವಳಿಯಲ್ಲಿ ಕಮ್ಯೂನಿಸ್ಟರ ಪಾತ್ರವೂ ಇದೆ. ರಾಜಕೀಯ ಪಕ್ಷಗಳಲ್ಲಿ ಭಾಷಾವಾರು ಪ್ರಾಂತಗಳ ರಚನೆಯ ಸರಿಯಾದ ದೃಷ್ಟಿಕೋನ ಹೊಂದಿದ್ದು, ಅದಕ್ಕಾಗಿ ಚಳುವಳಿ ನಡೆಸಿದ್ದು ಅಂದಿನ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ಮಾತ್ರ.
ಮಹಾರಾಷ್ಟ್ರದಲ್ಲಿ ಕೆಲವು ರಾಜ್ಯ ಮಟ್ಟದ ಪ್ರಾದೇಶಿಕ ರಾಜಕೀಯ ಪಕ್ಷಗಳು, ಶಕ್ತಿಗಳು ಇದರಲ್ಲಿ ಸೇರಿದ್ದರೂ ಸಹ ಅಖಿಲ ಭಾರತ ಮಟ್ಟದಲ್ಲಿ ಈ ಬಗ್ಗೆ ಸ್ವಷ್ಟ ತಿಳುವಳಿಕೆ, ದೃಷ್ಟಿಕೋನ ಹೊಂದಿದ್ದದ್ದು ಅವಿಭಜಿತ ಸಿಪಿಐ ಪಕ್ಷ ಮಾತ್ರ.
ಭಾಷಾವಾರು ರಾಜ್ಯ ರಚನೆಗೆ ಮೊದಲಿನಿಂದಲೂ ಸ್ಪಷ್ಟವಾದ ತಾತ್ವಿಕ ನಿಲುವನ್ನು ಹೊಂದಿದ್ದ ಕಮ್ಯೂನಿಸ್ಟ್ ಪಕ್ಷವು ಭಾರತದ ಎಲ್ಲ ಭಾಗಗಳಲ್ಲೂ ಇದಕ್ಕಾಗಿ ತನ್ನನ್ನು ತೊಡಗಿಸಿಕೊಂಡಿದೆ. ಮೊದಲ ಭಾಷಾವಾರು ರಾಜ್ಯ ಆಂಧ್ರಪ್ರದೇಶದ ರೂಪುಗೊಂಡ ಪ್ರಕ್ರಿಯೆಯಲ್ಲಿದ್ದ ಆಂಧ್ರ ಮಹಾಸಭಾದ ನಾಯಕತ್ವದಲ್ಲಿ ಕಮ್ಯೂನಿಸ್ಟರೇ ಇದ್ದರೆಂಬುದನ್ನು ಗಮನಿಸಬಹುದು. ಮಹಾರಾಷ್ಟ್ರ, ಗುಜರಾತ್, ಕೇರಳ ಹೀಗೆ ಎಲ್ಲ ಕಡೆಗಳಲ್ಲಿ ಕಮ್ಯೂನಿಸ್ಟ್ ಪಕ್ಷ ಅಲ್ಲಿನ ಏಕೀಕರಣ ಹೋರಾಟ ಸಮಿತಿಗಳಲ್ಲಿ ಮುಂಚೂಣಿ ಪಾತ್ರ ವಹಿಸಿದೆ. ಹಾಗೆಯೇ ಕರ್ನಾಟಕದಲ್ಲೂ ಈ ಪಾತ್ರ ವಹಿಸಿದೆ.