ಹಣಕಾಸು ಬಂಡವಾಳದ ಆಟವನ್ನೇ ಬದಲಾಯಿಸಬಲ್ಲ, ಆದರೆ ದೀರ್ಘಕಾಲದಿಂದಲೂ ನೆನೆಗುದಿಗೆ ಬಿದ್ದಿದ್ದ ಈ ಪ್ರಸ್ತಾಪವನ್ನು ಈಗ ಕೊರೊನಾ ಸಾಂಕ್ರಾಮಿಕದ ಪರಿಣಾಮಗಳಿಂದಾಗಿ ಶ್ರೀಮಂತ ದೇಶಗಳು ಗಮನಿಸಲೇಬೇಕಾಗಿ ಬಂದಿದೆ. ಇದು ಅಮೆರಿಕಾದ ಆಡಳಿತದಿಂದಲೇ ಬಂದಿರುವುದು ಗಮನಾರ್ಹ. ಏಕೆಂದರೆ ಜಾಗತಿಕ ಸಮನ್ವಯವಿಲ್ಲದೆ, ಕಾರ್ಪೊರೇಟ್ ತೆರಿಗೆ ದರಗಳನ್ನು ಏರಿಸುವುದು ಸಾಧ್ಯವಿಲ್ಲ. ಈ ಸಮನ್ವಯವನ್ನು ಸಾಧಿಸುವಲ್ಲಿ ಅಮೇರಿಕಾ ನಿರ್ಣಾಯಕವಾಗುತ್ತದೆ. ಅಮೇರಿಕಾದ ಸಹಕಾರ ಮತ್ತು ಒಪ್ಪಿಗೆ ಇಲ್ಲದೆ, ಇತರ ದೇಶಗಳು ತೆರಿಗೆ ದರಗಳನ್ನು ಹೆಚ್ಚಿಸುವುದು ಸಾಧ್ಯವಿಲ್ಲವಲ್ಲ! ಎಂದು ಹೇಳುತ್ತಾರೆ ಪ್ರೊ. ಅರುಣ್ ಕುಮಾರ್
(ಮೂಲ ಲೇಖನ: ‘ದಿ ಹಿಂದು’, ಎಪ್ರಿಲ್ 27)
ಕಾರ್ಪೋರೇಟ್ ತೆರಿಗೆಗಳಿಗೆ ಒಂದು ಕನಿಷ್ಠ ಜಾಗತಿಕ ದರವನ್ನು ನಿಗದಿಪಡಿಸಬೇಕೆಂದು ಅಮೇರಿಕಾದ ಖಜಾನೆ ಕಾರ್ಯದರ್ಶಿ (ಹಣಕಾಸು ಸಚಿವೆ) ಜಾನೆಟ್ ಯೆಲೆನ್ ಬಯಸುತ್ತಾರೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಒಂದು ಹೊಂದಾಣಿಕೆ ಇರಬೇಕು ಎನ್ನುತ್ತಾರೆ. ಅವರು ಪ್ರಸ್ತಾಪಿಸಿರುವ ಕಾರ್ಪೊರೇಟ್ ತೆರಿಗೆಗಳ ಜಾಗತಿಕ ಕನಿಷ್ಠ ದರವು ದೂರಗಾಮೀ ಪರಿಣಾಮಗಳಿಂದ ಕೂಡಿದೆ. ವಿಶ್ವದ ಪ್ರಮುಖ ದೇಶಗಳು ಅವರ ಈ ಕೋರಿಕೆಯನ್ನು ಒಪ್ಪಿಕೊಂಡರೆ ಮತ್ತು ಅಮೇರಿಕಾದ ಕಾಂಗ್ರೆಸ್(ಸಂಸತ್ತು) ಅವರ ಈ ಪ್ರಸ್ತಾಪವನ್ನು ಅನುಮೋದಿಸಿದರೆ, 30 ವರ್ಷಗಳ ಹಿಂದೆ ಸೋವಿಯತ್ ಬಣ ಕುಸಿತದ ನಂತರದ ತೆರಿಗೆ ನೀತಿಗಳ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಿದಂತಾಗುತ್ತದೆ. ಒ.ಇ.ಸಿ.ಡಿ.ದೇಶಗಳ ಮತ್ತು ಅಮೇರಿಕಾದ ಕಾಂಗ್ರೆಸ್‌ನ ಮನವೊಲಿಸುವಲ್ಲಿ ಶ್ರೀಮತಿ ಯೆಲೆನ್ ಯಶಸ್ವಿಯಾಗುತ್ತಾರಾ? ಜಾಗತಿಕ ಬಂಡವಾಳದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಡೇವಿಡ್ ಆರ್. ಮಾಲ್ಪಾಸ್, ಈ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಬಡ ದೇಶಗಳ ಹೆಗಲಮೇಲೆ ತಮ್ಮ ಬಂದೂಕನ್ನು ಇಟ್ಟು ಅವರು ಗುಂಡು ಹಾರಿಸುತ್ತಾರೆ: “… ಇದು ಹೂಡಿಕೆಯನ್ನು ಆಕರ್ಷಿಸುವ ಬಡ ರಾಷ್ಟ್ರಗಳ ಸಾಮರ್ಥ್ಯವನ್ನು ಕುಂದಿಸುತ್ತದೆ”.
ಇದನ್ನು ಓದಿ: ಬಿಡೆನ್ ಪ್ಯಾಕೇಜ್ ಉದ್ದೇಶ ಒಳ್ಳೆಯದೇ, ಆದರೆ…
ದೀರ್ಘಕಾಲದಿಂದಲೂ ನೆನೆಗುದಿಗೆ ಬಿದ್ದಿದ್ದ ಈ ಪ್ರಸ್ತಾಪವನ್ನು ಈಗ ಕೊರೊನಾ ಸಾಂಕ್ರಾಮಿಕದ ಪರಿಣಾಮಗಳಿಂದಾಗಿ ಶ್ರೀಮಂತ ದೇಶಗಳು ಗಮನಿಸಲೇಬೇಕಾಗಿ ಬಂದಿದೆ. ಪ್ರಸಕ್ತ ಸನ್ನಿವೇಶದಲ್ಲಿ, ಜನರಿಗೆ ತಮ್ಮ ದಿನನಿತ್ಯದ ಜೀವನ ನಿರ್ವಹಣೆಗೆ ಬೇಕಾಗುವ ಒಂದಿಷ್ಟು ಹಣದ ನೇರ ವರ್ಗಾವಣೆ, ಅವರಿಗೆ ಅವಶ್ಯವಿರುವ ಸಾರ್ವಜನಿಕ ಸೇವೆಗಳ ಒದಗಣೆ ಮತ್ತು ವ್ಯಾಪಾರ-ವಹಿವಾಟುಗಳ ವೈಫಲ್ಯಗಳನ್ನು ತಡೆಯುವ ಸಲುವಾಗಿ ಸಹಾಯ ಒದಗಿಸಲು ಸರ್ಕಾರಗಳಿಗೆ ಹಣಕಾಸು ಸಂಪನ್ಮೂಲಗಳ ಅಗತ್ಯವಿದೆ. ಆದರೆ, ಆರ್ಥಿಕ ಕುಸಿತದಿಂದಾಗಿ ಸರ್ಕಾರಗಳ ತೆರಿಗೆ ಸಂಗ್ರಹಗಳು ಇಳಿದಿವೆ. ಪರಿಣಾಮವಾಗಿ, ಸರ್ಕಾರಗಳ ವಿತ್ತೀಯ ಕೊರತೆಗಳು ದಾಖಲೆಯ ಎತ್ತರದ ಮಟ್ಟವನ್ನು ತಲುಪಿವೆ. ಸಾಂಕ್ರಾಮಿಕ ಹರಡುವ ಮುಂಚಿನ ದಿನಗಳಲ್ಲಿ ಈ ಪ್ರಮಾಣದ ವಿತ್ತೀಯ ಕೊರತೆಗಳು ಷೇರು ಮಾರುಕಟ್ಟೆಗಳ ಪತನಕ್ಕೆ ಕಾರಣವಾಗುತ್ತಿದ್ದವು. ಆದರೆ, ಈಗ ಷೇರು ಮಾರುಕಟ್ಟೆಗಳು ಉತ್ಕರ್ಷದ ಹಾದಿಯಲ್ಲಿವೆ. ಏಕೆಂದರೆ, ಸರ್ಕಾರಗಳು ಕೈಗೊಳ್ಳುತ್ತಿರುವ ಹೆಚ್ಚಿನ ಮಟ್ಟದ ಖರ್ಚುಗಳಿಂದಾಗಿ ಬೇಡಿಕೆ ಕುದುರುತ್ತದೆ ಎಂಬ ನಿರೀಕ್ಷೆಯಲ್ಲಿವೆ, ಷೇರು ಮಾರುಕಟ್ಟೆಗಳು. ಪರಿಣಾಮವಾಗಿ, ಷೇರು ಮಾರುಕಟ್ಟೆಗಳಲ್ಲಿ ಹಣ ಗಳಿಸಿದವರು ಮತ್ತು ಉದ್ಯೋಗ ಮತ್ತು ಆದಾಯವನ್ನು ಕಳೆದುಕೊಂಡವರ ನಡುವಿನ ಅಸಮಾನತೆಗಳು ಹೆಚ್ಚಿವೆ.
ಬೃಹತ್ ಬಜೆಟ್ ಕೊರತೆಗಳು
ಅಮೇರಿಕಾದ ಅರ್ಥವ್ಯವಸ್ಥೆಯನ್ನು ಉತ್ತೇಜಿಸಲು ಜೋ ಬಿಡೆನ್ ಆಡಳಿತವು 3 ಟ್ರಿಲಿಯನ್ ಮೊತ್ತದ ಬೃಹತ್ ಪ್ಯಾಕೇಜ್ ಅನ್ನು ಪ್ರಸ್ತಾಪಿಸಿದೆ. ಇದರ ಹೆಚ್ಚಿನ ಭಾಗವನ್ನು 2021 ರಲ್ಲಿ ಖರ್ಚು ಮಾಡಲಾಗುತ್ತದೆ ಮತ್ತು ಉಳಿದದ್ದನ್ನು ಬರುವ ವರ್ಷಗಳಲ್ಲಿ ಹಂತ ಹಂತವಾಗಿ ಖರ್ಚು ಮಾಡಲಾಗುವುದು. ಇದಕ್ಕೂ ಹಿಂದೆ, ಬಿಡೆನ್ ಆಡಳಿತವು ಅಧಿಕಾರ ವಹಿಸಿಕೊಂಡ ಕೂಡಲೇ $1.9 ಟ್ರಿಲಿಯನ್ ಮೊತ್ತದ ಒಂದು ಪರಿಹಾರ ಪ್ಯಾಕೇಜ್ ಅನ್ನು ಅನಾವರಣಗೊಳಿಸಿತ್ತು. ಅದಕ್ಕೂ ಹಿಂದೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೊರೊನಾ ಅಪ್ಪಳಿಸಿದ ಹಿನ್ನೆಲೆಯಲ್ಲಿ 2020 ರ ಮಧ್ಯಭಾಗದಲ್ಲಿ 2 ಟ್ರಿಲಿಯನ್ ಡಾಲರ್ ಮೊತ್ತದ ಒಂದು ಪ್ಯಾಕೇಜ್ ಬಿಡುಗಡೆ ಮಾಡಿದ್ದರು. ಮತ್ತೊಮ್ಮೆ ಡೊನಾಲ್ಡ್ ಟ್ರಂಪ್, ಡಿಸೆಂಬರ್ 2020ರ ಕೊನೆಯಲ್ಲಿ, 900 ಬಿಲಿಯನ್ ಮೊತ್ತದ ಪ್ಯಾಕೇಜ್‌ಗೆ ಸಹಿ ಹಾಕಿದ್ದರು. ಹೀಗಾಗಿ, ಅಮೇರಿಕಾದಲ್ಲಿ. ಕೊರೊನಾ ಅವಧಿಗೂ ಮೊದಲೇ ಇದ್ದ ಅಗಾಧ ಕೊರತೆಯ ಜೊತೆಗೆ 2020 ಮತ್ತು 2021 ರಲ್ಲಿ ಜಿಡಿಪಿಯ ಶೇ.15ರಷ್ಟು ಮೊತ್ತದ ಹೆಚ್ಚುವರಿ ಕೊರತೆಯನ್ನು ಸೇರಿಸಲಾಗುತ್ತಿದೆ. ಅಮೇರಿಕಾದ ಈ ಕೊರತೆಯ ಪ್ರಮಾಣವು ಅಭೂತಪೂರ್ವ ಎತ್ತರದ ಮಟ್ಟದಲ್ಲಿದೆ.
ಇದನ್ನು ಓದಿ: ನಗರಗಳಲ್ಲಿ ಉದ್ಯೋಗಕ್ಕಾಗಿ “ಡುಎಟ್” ಯೋಜನೆ
ಈ ಪ್ರಮಾಣದ ಕೊರತೆಯನ್ನು ನೀಗಿಸಿಕೊಳ್ಳಲು ತೆರಿಗೆಗಳನ್ನು ಅಧಿಕ ಮಟ್ಟದಲ್ಲಿ ಸಂಗ್ರಹಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ, ಅಮೇರಿಕಾದ ಆಡಳಿತವು ಕಾರ್ಪೊರೇಟ್ ತೆರಿಗೆಗಳ ಕನಿಷ್ಠ ದರದ ಈ ಪ್ರಸ್ತಾಪವನ್ನು ಮುಂದಿಟ್ಟಿದೆ. ಆದರೆ, ಅಮೇರಿಕಾದ ಅನೇಕ ಉದ್ದಿಮೆದಾರರು ಮತ್ತು ಸಂಪ್ರದಾಯವಾದಿ ಶಾಸಕರು ಈ ಪ್ರಸ್ತಾಪವನ್ನು ವಿರೋಧಿಸುತ್ತಾರೆ. ಆದಾಗ್ಯೂ, ಜೆಫ್ ಬೆಜೋಸ್‌ನಂತಹ ಕೆಲವು ಶ್ರೀಮಂತ ಅಮೆರಿಕನ್ನರು ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸುವ ವಿಚಾರವನ್ನು ಬೆಂಬಲಿಸಿದ್ದಾರೆ. ಇಂತಹ ವಿಚಾರಗಳು 2011 ರಿಂದಲೂ ಆಗಾಗ ಸದ್ದು ಮಾಡಿವೆ. ಅಂತಹ ಸಂದರ್ಭಗಳಲ್ಲಿ ಈ ವಿಚಾರವನ್ನು ಅಮೇರಿಕಾ ಮತ್ತು ಯುರೋಪಿನ ಅನೇಕ ಶ್ರೀಮಂತರು ಬೆಂಬಲಿಸಿದ್ದಾರೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಬಂಡವಾಳಶಾಹಿ ಆರ್ಥಿಕತೆಗಳನ್ನು ಬಲಪಡಿಸುವ ಸಲುವಾಗಿ ಈ ಪ್ರಸ್ತಾಪವನ್ನು ಮೊದಲಿಗೆ ತೇಲಿಬಿಟ್ಟವರು ಷೇರು ಹೂಡಿಕೆದಾರ, ಬಿಲಿಯನೇರ್, ವಾರೆನ್ ಬಫೆಟ್. ತದನಂತರ, ಈ ಪ್ರಸ್ತಾಪದ ಬಗ್ಗೆ ಹಲವಾರು ಬಾರಿ ಚರ್ಚೆಗಳು ನಡೆದಿವೆ. ಆದರೆ, ಕಾರ್ಪೊರೇಟ್‌ಗಳ ಮೇಲಿನ ತೆರಿಗೆ ದರವನ್ನು ಹೆಚ್ಚಿಸುವ ಬದಲು, ಟ್ರಂಪ್ ಆಡಳಿತವು ಜನವರಿ 1, 2018 ರಿಂದ ಜಾರಿಗೆ ಬಂದಂತೆ, ಪ್ರಮುಖವಾಗಿರದ ಅತಿ ಹೆಚ್ಚಿನ ಮಟ್ಟದ ತೆರಿಗೆ ದರವನ್ನು 35% ರಿಂದ 21% ಗೆ ಕಡಿತಗೊಳಿಸಿತು. ಈ ವಿದ್ಯಮಾನವು ಕಾರ್ಪೊರೇಟ್‌ಗಳ ಮೇಲಿನ ತೆರಿಗೆ ದರವನ್ನು ಹೆಚ್ಚಿಸುವುದು ಎಷ್ಟು ಕಷ್ಟ ಎಂಬುದರ ಮತ್ತು ಈ ಬಗ್ಗೆ ಜಾಗತಿಕ ಒಮ್ಮತ ಏಕೆ ಬೇಕಾಗುತ್ತದೆ ಎಂಬುದರ ಸುಳಿವನ್ನು ಶ್ರೀಮತಿ ಯೆಲೆನ್ ಅವರ ಪ್ರಸ್ತಾಪವು ಕೊಡುತ್ತದೆ.
1990ರಲ್ಲಿ ಸೋವಿಯತ್ ಒಕ್ಕೂಟದ ಬಣ ಪತನವಾದಾಗ, ಪೂರ್ವ ಯೂರೋಪಿನ ದೇಶಗಳು ಆರ್ಥಿಕವಾಗಿ ತೊಂದರೆಯಲ್ಲಿದ್ದವು. ಈ ಆರ್ಥಿಕ ಸಂಕಟಗಳಿಂದ ಹೊರಬರಲು ಅವುಗಳಿಗೆ ಬಂಡವಾಳದ ಅಗತ್ಯವಿತ್ತು. ಹಾಗಾಗಿ, ಈ ದೇಶಗಳು ತಮ್ಮ ತಮ್ಮ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಜಾಗತಿಕ ಮಟ್ಟದ ಬಂಡವಾಳದಾರರನ್ನು ಆಕರ್ಷಿಸಲು ತಮ್ಮ ತಮ್ಮ ಕಾರ್ಪೊರೇಟ್ ತೆರಿಗೆ ದರಗಳನ್ನು ತೀವ್ರವಾಗಿ ಕಡಿತಗೊಳಿಸಿದವು. ಬಂಡವಾಳವನ್ನು ಆಕರ್ಷಿಸುವ ಭರದಲ್ಲಿ ಈ ದೇಶಗಳ ತೆರಿಗೆ ಇಳಿಕೆಗಳು ‘ಪಾತಾಳಕ್ಕಿಳಿಯುವ ಸ್ಪರ್ಧೆ’ಯಾಗಿ ಪರಿಣಮಿಸಿದವು. ಬಂಡವಾಳವನ್ನು ಆಕರ್ಷಿಸುವ ಉದ್ದೇಶದಿಂದ ಮಾತ್ರವಲ್ಲ, ಆ ಬಂಡವಾಳವು ತಮ್ಮ ದೇಶವನ್ನು ತೊರೆಯದಂತೆ ನೋಡಿಕೊಳ್ಳುವ ಉದ್ದೇಶದಿಂದಲೂ, ಒಂದರ ನಂತರ ಮತ್ತೊಂದರಂತೆ ಸ್ಪರ್ಧೆಗಿಳಿದ ಯುರೋಪಿನ ದೇಶಗಳು ತಮ್ಮ ತಮ್ಮ ತೆರಿಗೆ ದರಗಳನ್ನು ಕಡಿತಗೊಳಿಸಿದವು. ತೆರಿಗೆ ದರ ಕಡಿತದ ಈ ಅಂಶವು ಜಾಗತಿಕವಾಗಿ ಪರಿಣಾಮ ಬೀರಿತ್ತು.
ಇದನ್ನು ಓದಿ: ಮೋದಿ ಸರ್ಕಾರವೇ ಒಂದು ದೊಡ್ಡ ಹಗರಣ
ತೆರಿಗೆಗಳನ್ನು ಇಳಿಸಿದ ಪರಿಣಾಮವಾಗಿ ದೇಶ ದೇಶಗಳು ಸಂಪನ್ಮೂಲಗಳ ಕೊರತೆಯನ್ನು ಅನುಭವಿಸಿದವು. ಸಂಪನ್ಮೂಲಗಳ ಕೊರತೆಯ ಕಾರಣದಿಂದ ಕಂಗಾಲಾದ ಈ ದೇಶಗಳು, ಆರೋಗ್ಯ, ಶಿಕ್ಷಣ ಮುಂತಾದ ಸಾರ್ವಜನಿಕ ಸೇವೆಗಳ ಮೇಲಿನ ವೆಚ್ಚಗಳನ್ನು ಕಡಿತಗೊಳಿಸಿದವು. ಖಾಸಗಿ ಉದ್ದಿಮೆಗಳು-ಸಂಸ್ಥೆಗಳು-ಮಾರುಕಟ್ಟೆಗಳು, ಬಡ ಜನರ ಸಮಸ್ಯೆಗಳಿಗೆ ಉತ್ತರವಲ್ಲ ಎಂಬ ಅರಿವಿದ್ದರೂ ಸಹ, ಈ ದೇಶಗಳು ತಮ್ಮ ಒಡೆತನದ ಉದ್ದಿಮೆ/ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದವು. ಅಭಿವೃದ್ಧಿಶೀಲ ದೇಶಗಳು ತೆರಿಗೆ ಇಳಿಕೆಯ ಮತ್ತು ಖಾಸಗೀಕರಣದ ಕ್ರಮಗಳನ್ನು ಅನುಸರಿಸಿದವು. ಹೀಗಾಗಿ, ದೇಶ ದೇಶಗಳ ನಡುವೆ ಮತ್ತು ದೇಶಗಳಲ್ಲಿ ಆಂತರಿಕ ಅಸಮಾನತೆಗಳು ಹೆಚ್ಚಿದವು.
ಬಿಇಪಿಎಸ್ ಮತ್ತು ಆದಾಯದ ನಷ್ಟ
ಕಾರ್ಪೊರೇಟ್ ತೆರಿಗೆಗಳ ಇಳಿಕೆಯಿಂದ ತೃಪ್ತರಾಗದ ಬಹುರಾಷ್ಟ್ರೀಯ ಕಂಪೆನಿಗಳು, ಬೆಂಕಿ ಹತ್ತಿದ ಮನೆಯಿಂದ ಹಿರಿದದ್ದೇ ಲಾಭ ಎನ್ನುವ ರೀತಿಯಲ್ಲಿ ತೆರಿಗೆ ತಪ್ಪಿಸಿಕೊಳ್ಳುವ ಹಪಾ ಹಪಿಗೆ ಬಿದ್ದವು. ಈ ವಿದ್ಯಮಾನವನ್ನು ಬಿ.ಇ.ಪಿ.ಎಸ್. (BEPS – Base Erosion Profit Shifting) ಎಂದು ಕರೆಯುತ್ತಾರೆ. ಬಿಇಪಿಎಸ್ ಅಂದರೆ, ಕಂಪನಿಗಳು ತಮ್ಮ ಲಾಭವನ್ನು ಕಡಿಮೆ ತೆರಿಗೆ ಹಾಕುವ ದೇಶಗಳಿಗೆ, ವಿಶೇಷವಾಗಿ ತೆರಿಗೆ ಧಾಮಗಳಿಗೆ ವರ್ಗಾಯಿಸುವ ಕ್ರಮ. ಉದಾಹರಣೆಗೆ, ಗೂಗಲ್ ಮತ್ತು ಫೇಸ್ ಬುಕ್‌ನಂತಹ ಅನೇಕ ಅತ್ಯಂತ ಲಾಭದಾಯಕ ಕಂಪನಿಗಳು ತಮ್ಮ ಲಾಭವನ್ನು ಐರ್ಲೆಂಡ್ ಮತ್ತು ಇತರ ತೆರಿಗೆ ಧಾಮಗಳಿಗೆ ವರ್ಗಾಯಿಸಿವೆ. ಕಡಿಮೆ ತೆರಿಗೆ ಪಾವತಿಸುತ್ತವೆ ಎಂಬ ಆರೋಪ ಹೊತ್ತಿವೆ. ಇಂತಹ ಕೃತ್ಯಗಳಲ್ಲಿ ತೊಡಗಿದ ಅಪರಾಧಕ್ಕಾಗಿ, ಗೂಗಲ್ ಮತ್ತು ಆಪಲ್ ಕಂಪೆನಿಗಳ ಮೇಲೆ ಯೂರೋಪ್ ಒಕ್ಕೂಟವು ದಂಡ ವಿಧಿಸಿದೆ. ತೆರಿಗೆ ತಪ್ಪಿಸಿಕೊಳ್ಳುವ ಕ್ರಮಗಳಿಂದಾಗಿ ಅಮೇರಿಕಾ $100 ಬಿಲಿಯನ್ ಡಾಲರ್ ತೆರಿಗೆ ಆದಾಯವನ್ನು ಕಳೆದುಕೊಳ್ಳುತ್ತಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು 2009ರಲ್ಲಿ ಹೇಳಿದ್ದರು.
ತೆರಿಗೆ ದರ ಕಡಿತಗಳು ಮತ್ತು ಬಿಇಪಿಎಸ್‌ನಿಂದಾಗಿ ಎಲ್ಲಾ ಒಇಸಿಡಿ ದೇಶಗಳೂ ತೊಂದರೆ ಅನುಭವಿಸಿರುವುದರಿಂದ, ತೆರಿಗೆ ತಪ್ಪಿಸಿಕೊಳ್ಳುವ ಕ್ರಮಗಳನ್ನು ತಡೆಗಟ್ಟುವ ಕಾರ್ಯವನ್ನು ಆರಂಭಿಸಲಾಗಿದೆ. ಆದರೆ, ಎಲ್ಲಾ ದೇಶಗಳ ನಡುವೆ ಈ ಬಗ್ಗೆ ಒಮ್ಮತವಿಲ್ಲದಿದ್ದರೆ ಅವು ಕೈಗೊಂಡ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಆರ್ಥಿಕ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿರುವ ಯಾವುದೇ ಒಂದು ದೇಶವು ಬಂಡವಾಳವನ್ನು ಆಕರ್ಷಿಸುವ ಸಲುವಾಗಿ, ತನ್ನ ತೆರಿಗೆ ದರಗಳನ್ನು ಕಡಿತಗೊಳಿಸಬಹುದು. ಈ ಕ್ರಮವನ್ನು ಅನುಸರಿಸುವ ಒತ್ತಾಯಕ್ಕೆ ಇತರ ದೇಶಗಳು ಒಳಗಾಗುತ್ತವೆ. ಹಾಗಾಗಿಯೇ, ಭಾರತವೂ ಸಹ 1990ರ ದಶಕದಿಂದಲೇ ತನ್ನ ತೆರಿಗೆ ದರಗಳನ್ನು ಕಡಿತಗೊಳಿಸಿದೆ. ತೀರಾ ಇತ್ತೀಚೆಗೆ, 2019 ರಲ್ಲಿ, ಆಗ್ನೇಯ ಏಷ್ಯಾದ ದೇಶಗಳ ಚಾಲ್ತಿ ತೆರಿಗೆ ದರಗಳಿಗೆ ಸರಿಹೊಂದುವ ರೀತಿಯಲ್ಲಿ ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿತಗೊಳಿಸಲಾಗಿದೆ. ತೆರಿಗೆಗಳನ್ನು ಈ ರೀತಿಯಲ್ಲಿ ಕಡಿತಗೊಳಿಸುವುದರಿಂದಾಗಿ ಆರ್ಥಿಕ ಅಸಮಾನತೆಗಳು ಹೆಚ್ಚುತ್ತವೆ, ಸಾರ್ವಜನಿಕ ಸೇವೆಗಳ ಗುಣಮಟ್ಟ ಕುಸಿಯುತ್ತದೆ ಮತ್ತು ಬಡವರಿಗಾಗಿ ಆಯೋಜಿಸಿದ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ.
ಹಿಂದಕ್ಕೆ ಸರಿಯುವ ತೆರಿಗೆ ಸಂರಚನೆ
ಕಳೆದ ನಾಲ್ಕೈದು ದಶಕಗಳಿಂದಲೂ ಸರ್ಕಾರಗಳ ತೆರಿಗೆ ಆದಾಯದಲ್ಲಿ ನೇರ ತೆರಿಗೆಗಳ ಪಾಲು ಇಳಿಯುತ್ತಿದೆ ಮತ್ತು ಪರೋಕ್ಷ ತೆರಿಗೆಗಳ ಪಾಲು ಏರುತ್ತಿದೆ. ನೇರ ತೆರಿಗೆ ಆದಾಯದ ಇಳಿಕೆಯನ್ನು ಸರಿದೂಗಿಸಿಕೊಳ್ಳಲು ಸರ್ಕಾರಗಳು ಪರೋಕ್ಷ ತೆರಿಗೆಗಳನ್ನೇ (ಅಂದರೆ, ಮೌಲ್ಯವರ್ಧಿತ ತೆರಿಗೆ ಮತ್ತು ಸರಕು ಮತ್ತು ಸೇವಾ ತೆರಿಗೆಗಳನ್ನು) ಹೆಚ್ಚು ಹೆಚ್ಚು ಅವಲಂಬಿಸಿವೆ. ಈ ಪರೋಕ್ಷ ತೆರಿಗೆಗಳ ಹೊರೆಯ ಹೆಚ್ಚಿನ ಭಾರವನ್ನು ಬಡ ಜನರೇ ಹೊರಬೇಕಾಗುತ್ತದೆ. ಜೊತೆಗೆ ಹಣದುಬ್ಬರವೂ ಉಂಟಾಗುತ್ತದೆ. ಪ್ರತಿಯಾಗಿ, ನೇರ ತೆರಿಗೆಗಳು, ತೆರಿಗೆ ನಂತರದ ಆದಾಯಗಳ ಅಸಮಾನತೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. ಹೆಚ್ಚುತ್ತಿರುವ ಅಸಮಾನತೆಗಳು ಬೇಡಿಕೆಯ ಕೊರತೆಗೆ ಕಾರಣವಾಗುತ್ತವೆ. ಜೊತೆಗೆ, ಅರ್ಥವ್ಯವಸ್ಥೆಯ ನಿಧಾನಗತಿಗೂ ಕಾರಣವಾಗುತ್ತವೆ. ಅರ್ಥವ್ಯವಸ್ಥೆಯಲ್ಲಿ ಹಿಂಜರಿಕೆ ಉಂಟಾದಾಗ, ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಲು ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯ ಬೀಳುತ್ತದೆ. ಆಗ, ಬಂಡವಾಳವು ಹೆಚ್ಚಿನ ರಿಯಾಯಿತಿಗಳನ್ನು ಕೋರುತ್ತದೆ. ಅಷ್ಟಾಗಿಯೂ ಅರ್ಥವ್ಯವಸ್ಥೆಯು ಪುನಶ್ಚೇತನಗೊಳ್ಳುವುದಿಲ್ಲ. ಏಕೆಂದರೆ, ತೆರಿಗೆ ಕಡಿಮೆ ಇದೆ ಎಂಬ ಕಾರಣದ ಮೇಲೆ ಮಾಡುವ ಹೂಡಿಕೆಗಳು ಬೇಡಿಕೆಯನ್ನು ಹೆಚ್ಚಿಸುವುದು ಅನಿಶ್ಚಿತವೇ. ಬದಲಾಗಿ, ಹೆಚ್ಚಿನ ಮಟ್ಟದ ಸರ್ಕಾರಿ ವೆಚ್ಚಗಳು ಬೇಡಿಕೆಯನ್ನು ಹೆಚ್ಚಿಸುವುದು ಖಚಿತವೇ.
ಬಹಳಷ್ಟು ಓಡಾಡುವ ಪ್ರವೃತ್ತಿಯ ಜಾಗತಿಕ ಹಣಕಾಸು ಬಂಡವಾಳವು ವಿಶ್ವದಾದ್ಯಂತ ಸ್ಥಳಾಂತರಗೊಳ್ಳಲು ಮತ್ತು ತನ್ನ ಲಾಭವನ್ನು ವರ್ಗಾಯಿಸಲು ಚಿಪ್ಪು(ಹುಸಿ) ಕಂಪನಿಗಳನ್ನು ಮತ್ತು ತೆರಿಗೆ ಧಾಮಗಳನ್ನು ಧಾರಾಳವಾಗಿ ಬಳಸಿಕೊಂಡಿದೆ. ಬಂಡವಾಳದ ಈ ಓಡಾಡುವ ಪ್ರವೃತ್ತಿಯು ದೇಶ ದೇಶಗಳಿಂದ ರಿಯಾಯಿತಿಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಒಂದು ದೇಶವು ಕೊಟ್ಟ ರಿಯಾಯ್ತಿಗಳನ್ನು ಮತ್ತೊಂದು ದೇಶವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಡುವ ‘ಪಾತಾಳಕ್ಕಿಳಿಸುವ ಸ್ಪರ್ಧೆ’ಯನ್ನು ಉಂಟುಮಾಡಿದೆ. ಹಾಗಾಗಿ, ಜಾಗತಿಕ ಸಮನ್ವಯವಿಲ್ಲದೆ, ಕಾರ್ಪೊರೇಟ್ ತೆರಿಗೆ ದರಗಳನ್ನು ಏರಿಸುವುದು ಸಾಧ್ಯವಿಲ್ಲ.
ಈ ಸಮನ್ವಯವನ್ನು ಸಾಧಿಸುವಲ್ಲಿ ಅಮೇರಿಕಾ ನಿರ್ಣಾಯಕವಾಗುತ್ತದೆ. ಅಮೇರಿಕಾದ ಸಹಕಾರ ಮತ್ತು ಒಪ್ಪಿಗೆ ಇಲ್ಲದೆ, ಇತರ ದೇಶಗಳು ತೆರಿಗೆ ದರಗಳನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಈ ಬಗ್ಗೆ ಅಮೇರಿಕಾ ಈಗ ಮುಂದಾಳತ್ವ ವಹಿಸುತ್ತಿರುವುದರಿಂದ, ದೇಶ ದೇಶಗಳ ಅಧಿಕಾರದ ಪಡಸಾಲೆಗಳಲ್ಲಿ ಜಾಗತಿಕ ಬಂಡವಾಳವು ಹೊಂದಿರುವ ಪ್ರಭಾವವನ್ನು ಗಮನದಲ್ಲಿ ಇಟ್ಟುಕೊಂಡು ನೋಡಿದಾಗ ಈ ಕಾರ್ಯವು ಸುಲಭವಲ್ಲ ಎನಿಸಿದರೂ ಸಹ, ಬಹುಶಃ ಇದು ಸಂಭವಿಸಬಹುದು. ಸೂಕ್ತ ಜಾಗತಿಕ ನೀತಿಗಳನ್ನು ಜಾರಿಗೆ ತರುವ ಮೂಲಕ ತೆರಿಗೆ ಧಾಮಗಳ ಆಕರ್ಷಣೆಯನ್ನು ನಿಭಾಯಿಸಲು ದೇಶ ದೇಶಗಳ ನಡುವೆ ಸಹಕಾರವೂ ಇರಬೇಕಾಗುತ್ತದೆ. ಈ ಎಲ್ಲವೂ ದೂರಗಾಮಿ ಪರಿಣಾಮಗಳನ್ನು ಹೊಂದಿವೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಂದ ಬಂಡವಾಳವು ಹೊರಹೋಗುವುದನ್ನು ನಿಲ್ಲಿಸುವ, ಬಡತನವನ್ನು ಕಡಿಮೆ ಮಾಡುವ, ಅಸಮಾನತೆಗಳನ್ನು ತಗ್ಗಿಸುವ, ಸಾರ್ವಜನಿಕ ಸೇವೆಗಳನ್ನು ಉತ್ತಮಪಡಿಸುವ ಸಾಧ್ಯತೆಗಳಿವೆ. ಆದ್ದರಿಂದ, ವಿಶ್ವಬ್ಯಾಂಕ್‌ನ ಅಧ್ಯಕ್ಷರು ಎತ್ತಿದ ಆಕ್ಷೇಪಣೆಯ ಹೊರತಾಗಿಯೂ ಜಾಗತಿಕ ಕನಿಷ್ಠ ತೆರಿಗೆ ದರ ಪ್ರಸ್ತಾಪವು ಪ್ರಯತ್ನಯೋಗ್ಯವಾಗಿದೆ.
ಅನು: ಕೆ.ಎಂ.ನಾಗರಾಜ್