ಚೇತನಾ ತೀರ್ಥಹಳ್ಳಿ
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಅನ್ನುವ ಸುದ್ದಿ ದಟ್ಟವಾಗುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಇದು ಅತ್ಯಂತ ಕೆಟ್ಟ ಸುದ್ದಿಯಾಗಲಿದೆ.
ಪಕ್ಷ ಅಧಿಕಾರ ಹಿಡಿಯಲೆಂದು ಕಾದು ಹೈರಾಣಾದ ಹಿರಿಯರು ಕೆಲವರು ಈ ಸುದ್ದಿ ಕೇಳಿ “ಆಗಲಿ ಏನಿವಾಗ” ಅನ್ನುವ, “ಒಳ್ಳೇದಾಯ್ತು” ಅನ್ನುವ ಥರದಲ್ಲಿ ಪ್ರತಿಕ್ರಿಯಿಸಿದ್ದನ್ನೂ ಅಲ್ಲಲ್ಲಿ ನೋಡಿದೆ. ಅದು ಅಷ್ಟೇನೂ ಆಶ್ಚರ್ಯ ತರಲಿಲ್ಲ. ಅವರ ದಣಿವು ಅರ್ಥವಾಗದ್ದೇನಲ್ಲ. ಆದರೆ ಪ್ರಗತಿಪರ ವಿಚಾರಗಳನ್ನು ಒಗ್ಗಿಸಿಕೊಂಡ ನಮ್ಮ ಯುವಜನರು ಕೆಲವರೂ ಕನ್ಹಯ್ಯ ಕುರಿತಾದ ಸುದ್ದಿಗೆ ಸಕಾರಾತ್ಮಕವಾಗೇ ಪ್ರತಿಕ್ರಿಯಿಸುತ್ತಿದ್ದಾರೆ. (ಕನ್ನಡದ ಹುಡುಗರು ಮಾತ್ರ ಅಲ್ಲ, ಫೇಸ್ ಬುಕ್ ಮತ್ತು ನೆಟ್ ವರದಿಗಳಿಗೆ ಬಂದ ಕಮೆಂಟ್`ಗಳ ಆಧಾರದ ಮೇಲೆ ಈ ಮಾತು). ಇದು ನಿಜಕ್ಕೂ ಆಘಾತ ತರುವ ವಿಷಯ.
ದೇಶಕ್ಕೆ ಕಾಂಗ್ರೆಸ್ ಬಿಟ್ಟರೆ ಬೇರೆ ಪರ್ಯಾಯವೇ ಇಲ್ಲ ಅನ್ನುವ ನಂಬಿಕೆ, ಇಸ್ಲಮೋಫೋಬಿಯಾ ಉಳ್ಳ ಮತ್ತು ಹಿಂದುತ್ವವಾದಿ ಜನರ ಪಾಲಿಗೆ ಮೋದಿ ಬಿಟ್ಟರೆ ಬೇರೆ ಪರ್ಯಾಯವೇ ಇಲ್ಲ ಅನ್ನುವಷ್ಟೇ ಟೊಳ್ಳು ಮತ್ತು ಅಪಾಯಕಾರಿ. ಕಾಂಗ್ರೆಸ್‌ನಲ್ಲೂ ಆರಂಭದಿಂದಲೂ ಜಾತಿವಾದಿಗಳಿದ್ದರು, ಅತಿಧಾರ್ಮಿಕರಿದ್ದರು, ಕೋಮುವಾದಿಗಳೂ ಇದ್ದರು. ಅಷ್ಟಾದರೂ ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಮತ ರಾಜಕಾರಣ ಅಲ್ಪಸಂಖ್ಯಾತರ ಪರವಾಗಿ ತೋರುತ್ತಿದ್ದುದರಿಂದ, ಅದನ್ನೆ ಬಂಡವಾಳ ಮಾಡಿಕೊಂಡ ಬಿಜೆಪಿ (ಅಂದಿನ ಜನಸಂಘ) ಸುಖಾಸುಮ್ಮನೆ ಕಾಂಗ್ರೆಸ್ಸನ್ನು ಹಿಂದೂವಿರೋಧಿಯೆಂದು ಬಿಂಬಿಸುತ್ತಾ ತನ್ನ ಬೇಳೆಗೆ ನೀರು ಸುರಿದು ಒಲೆ ಮೇಲೆ ಇಟ್ಟಿತ್ತು. ಅದು ಬೇಯತೊಡಗಿ ಈಗ ಎಂಟು ವರ್ಷಗಳೇ ಆಗಿಹೋಗಿವೆ!
ವಾಸ್ತವದಲ್ಲಿ ಅತ್ತ ಮುಸ್ಲಿಮರಿಗೂ ನ್ಯಾಯ ಒದಗಿಸದೆ, ಇತ್ತ ರಾಮಜನ್ಮಭೂಮಿಯನ್ನೂ ಸಂಭ್ರಮಿಸುತ್ತಾ, ನೆಹರೂ ಮನೆತನ ಬಿಟ್ಟರೆ ತನ್ನನ್ನು ಮುನ್ನಡೆಸಲು ನಾಯಕ ನಾಯಕಿಯರೇ ಇಲ್ಲ ಅನ್ನುವಂತೆ ವರ್ತಿಸುತ್ತಿದ್ದ ಕಾಂಗ್ರೆಸ್ಸಿನ ದೌರ್ಬಲ್ಯವೇ ಜನರಲ್ಲಿ ರೇಜಿಗೆ ಹುಟ್ಟಿಸಿ ಬದಲಾವಣೆಗೆ ಹಾತೊರೆಯುವಂತೆ ಮಾಡಿದ್ದು. ವಾಸ್ತವದಲ್ಲಿ ಮೊದಲ ಸಲ ಮೋದಿಗೆ ಓಟು ಹಾಕಿದ ಬಹುತೇಕರು ಅಭಿವೃದ್ಧಿ ಮಂತ್ರಕ್ಕೆ ಮನಸೋತವರೇ ಆಗಿದ್ದರು. ಆದರೆ ಅನಂತರದಲ್ಲಿ ಅವರಿಗೂ ಕೋಮುವಾದದ ಮಂಕುಬೂದಿ ಎರಚಿ, ಅಭಿವೃದ್ಧಿ ಮರೆಸಿ ಧರ್ಮಕ್ಕಾಗಿ ಮೋದಿ ಅನ್ನುವ ಪರಿಕಲ್ಪನೆ ಹರಿಬಿಟ್ಟು ಮತ್ತೊಮ್ಮೆ ದೇಶವನ್ನು ಕತ್ತಲೆಗೆ ತಳ್ಳುವ ಅವಘಡ ನಡೆದೇಹೋಯಿತು.
ರಾಹುಲ್ ಗಾಂಧಿ ಒಬ್ಬ ವ್ಯಕ್ತಿಯಾಗಿ ಒಳ್ಳೆಯ ಮನುಷ್ಯರಂತೆ ತೋರುತ್ತಾರೆ. ಅವರಿಗೊಂದು ಘನತೆ ಇದೆ. ತಮ್ಮ ಗುರುತೇ ತಮಗೆ ಹೊರೆಯಾಗಿ ಅವರ ಕುಟುಂಬ ಪಡುತ್ತಿರುವ ಪಾಡು ಊಹಿಸಲಾಗದ್ದೇನಲ್ಲ. ಕಾಂಗ್ರೆಸ್ಸಿನ ನೆಹರೂ ಕುಟುಂಬದ ಮೇಲಿನ ವ್ಯಾಮೋಹವನ್ನು ಬೈದುಕೊಳ್ಳುವಾಗ ರಾಹುಲ್ ಅಥವಾ ಸೋನಿಯಾರನ್ನು ಬೈಯುವುದು ಮೂರ್ಖತನ. ನಾವು ಬೈದುಕೊಳ್ಳಬೇಕಿರೋದು ಅವರನ್ನ ಬಿಟ್ಟರೆ ಕೆಟ್ಟೆವು ಅಂತಾಡುವ ಹೈಫೈ ಕಾಂಗ್ರಿಸಿಗರನ್ನ ಮತ್ತು ಈ ವ್ಯಾಮೋಹದ ಕಾರಣದಿಂದಲೆ ಎರಡನೆ ಸಾಲಿನ ನಾಯಕತ್ವ ಬೆಳೆಯಗೊಡದೆ ಪಕ್ಷವನ್ನೇ ತಿಂದುಹಾಕಿದವರನ್ನ.
ಇಂಥಾ ಕಾಂಗ್ರೆಸ್ ಪಕ್ಷಕ್ಕೆ ಕಮ್ಯುನಿಸಮ್ ಹಿನ್ನೆಲೆಯ ವ್ಯಕ್ತಿಯೊಬ್ಬ ಹೋಗುವುದು ಆತ ತನ್ನ ಸಿದ್ಧಾಂತಕ್ಕಿಂತ ಅದರ ಸಿದ್ದಾಂತ ಉತ್ತಮ ಅನ್ನುವ ಕಾರಣಕ್ಕೆ ಖಂಡಿತಾ ಅಲ್ಲ. ಅದು ಕೇವಲ ಅಧಿಕಾರಕ್ಕಾಗಿ. ಆದರೆ, ರಾಜಿಗಳ ಮೇಲೇ ನಿಂತಿರುವ ಪಕ್ಷ ಸೇರಿಕೊಂಡು ನಾನು ನನ್ನ ಮೂಲ ಸಿದ್ಧಾಂತದಂತೆಯೇ ನಡೆದುಕೊಳ್ಳುತ್ತೇನೆ ಕೆಲಸ ಮಾಡಲಿಕ್ಕಷ್ಟೆ ಅದರ ಆಸರೆ ಅಂತ ಯಾರಾದರೂ ಅನ್ನುವುದಾದರೆ, ಅದು ನೂರಕ್ಕೆ ನೂರು ಸಾಧ್ಯವಾಗದ ಮಾತು. ಹಾಗೇನಾದರೂ ಮಾಡಲು ಹೋದರೆ ಅವರು ಅಲ್ಲೂ ಮೂಲೆಗುಂಪಾಗುತ್ತಾರೆ ಹೊರತು ಸಾಧನೆ ಕಷ್ಟಸಾಧ್ಯ.
ಹಾಗೆಂದ ಮಾತ್ರಕ್ಕೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸಿಗೆ ಸೇರಿದರೆ ಕಮ್ಯುನಿಸಮ್ಮಿಂದ ಕಾಂಗ್ರೆಸ್ಸಿಗೆ ನೆಗೆದವರು ಅವರೊಬ್ಬರೇ ಅಂದುಕೊಳ್ಳಬೇಕಿಲ್ಲ. ಈಗಾಗಲೇ ಸಾಕಷ್ಟು ಜನ ಆ ಕೆಲಸ ಮಾಡಿದ್ದಾರೆ, ಮುಂದೂ ಮಾಡುವವರಿದ್ದಾರೆ. ಆದರೆ ಇದನ್ನು ಕನ್ಹಯ್ಯರ ನಡೆಗೆ ಸಮರ್ಥನೆ ಮಾಡಿಕೊಳ್ಳಬೇಕಿಲ್ಲ. ಯಾಕೆಂದರೆ ಈಗಿನ ಸಂದರ್ಭ ಹಿಂದೆಂದಿಗಿಂತಲೂ ಕೆಟ್ಟದಾಗಿದೆ.
ಈ ಸಂದರ್ಭದಲ್ಲಿ ಚಾಣಕ್ಯ ನೀತಿಯ ಒಂದು ಮಾತು ನೆನಪಾಗುತ್ತದೆ. ಅದರಲ್ಲಿ ಆತ ಶತ್ರುವನ್ನು ಕಡೆಗಣಿಸಬೇಡ, ಅವನಿಂದ ಅವನ ಗೆಲುವಿನ ಪಟ್ಟುಗಳನ್ನ ಕಲಿತುಕೋ ಅಂದಿದ್ದಾನೆ.
ಈ ಮಾತು ನೆನಪಿಸಿಕೊಳ್ತಾ ಯೋಚಿಸುವುದಾದರೆ, ಸ್ವಯಂಸೇವಕ ಸಂಘ ಶುರುವಿಟ್ಟು. ಜನಸಂಘ ಕಟ್ಟಿ, ಅದನ್ನ ಭಾರತೀಯ ಜನತಾಪಕ್ಷ ಮಾಡಿ, 50 ವರ್ಷಗಳ ಕಾಲ ಸತತ ಸೋಲನ್ನೇ ಕಂಡುಂಡು ಅನಂತರ ಚಿಗುರತೊಡಗಿದ ಅಸಲಿ ಬಿಜೆಪಿಗರಿಂದ (ಇತ್ತೀಚೆಗೆ ಅಲ್ಲಿ ನಕಲಿ ಕುದುರೆಗಳ ಸಂಖ್ಯೆ ಹೆಚ್ಚಾಗಿದೆ) ಕಲಿಯಬೇಕಾದ ಅಂಶವೊಂದಿದೆ. ಅಷ್ಟು ವರ್ಷ ಸಂಘರ್ಷ ನಡೆಸಿದರೂ ತನ್ನ ಸಿದ್ಧಾಂತವನ್ನೇ ಮಾತಾಡುತ್ತಿದ್ದ ಅದಕ್ಕೆ ಬದ್ಧನಾಗಿದ್ದ ಒಬ್ಬ ಸ್ವಯಂಸೇವಕನೂ “ಅಧಿಕಾರ ಸಿಕ್ಕರೆ ನನ್ನ ರೀತಿಯಲ್ಲಿ ಜನಸೇವೆ ಮಾಡಲು ಅವಕಾಶ ಸಿಗುತ್ತದೆ” ಅಂತ ಯೋಚಿಸಿ ಕಾಂಗ್ರೆಸ್ಸಿಗೆ ಸೇರಿಕೊಳ್ಳಲಿಲ್ಲ.
ಆಗ ಕಾಂಗ್ರೆಸ್ಸಿಗಿದ್ದ ವ್ಯಾಪ್ತಿ ಮತ್ತು ಹಿಡಿತ ಇವತ್ತಿನ ಬಿಜೆಪಿಯ ದುಪ್ಪಟ್ಟು. ಬ್ರಾಹ್ಮಣ್ಯವೇ ಹೆಚ್ಚಾಗಿದ್ದ ಕಾಂಗ್ರೆಸ್, ಹಾಗೆ ಯಾರಾದರೂ ಬಿಜೆಪಿಗರು ಹೋಗಿದ್ದರೆ ಅವರನ್ನು ನಿರಾಕರಿಸುತ್ತಲೂ ಇರಲಿಲ್ಲ. ಆದರೂ ಸಿದ್ಧಾಂತವಾದಿ ಬಿಜೆಪಿಗರು ಹೋಗಲಿಲ್ಲ. ಬದಲಿಗೆ, ತಮ್ಮ ಜಾಗದಲ್ಲಿದ್ದುಕೊಂಡೇ ಕಾಂಗ್ರೆಸ್ಸಿಗರನ್ನು ಪ್ರಭಾವಿಸುತ್ತಿದ್ದರು. ಜನರ ನಡುವೆ ನಿರಂತರ ಒಡನಾಡುತ್ತ ತಮ್ಮ ವರ್ಚಸ್ಸು ಬೆಳೆಸಿಕೊಂಡರು.
ಉದಾಹರಣೆಗೆ ವಾಜಪೇಯಿಯಂಥವರು ಆ ಕಾಲದಲ್ಲಿ ಕಾಂಗ್ರೆಸ್ಸಿಗೆ ಹೋಗಿದ್ದರೆ ಬಹುಶ ನೆಹರೂ ಮನೆತನದ ನಿರಂತರ ಅಧಿಕಾರಕ್ಕೂ ಕತ್ತರಿ ಬೀಳುತ್ತಿತ್ತೇನೋ!
ಆದರೂ ಒಡೆಯುವವರಿಗೆ ಇರುವ ಬದ್ಧತೆ ಕಟ್ಟುವ ಮಾತುಗಾರರಿಗೆ ಇರುವುದಿಲ್ಲವಲ್ಲ!
ನಮ್ಮ ಈ ತಲೆಮಾರಿನ ಕಮ್ಯುನಿಸಮ್ ಒಲವಿನ ಯುವಜನರಿಗೂ ಈ ತಂತ್ರ ಅನುಸರಿಸಲು ಸಾಕಷ್ಟು ಅವಕಾಶವಿದೆ. ತಮ್ಮ ಪಕ್ಷಕ್ಕೆ/ಸಿದ್ಧಾಂತಕ್ಕೆ ಅಂಟಿಕೊಂಡೇ ಅಧಿಕಾರಸ್ಥರ ಮೇಲೆ ಪ್ರಭಾವ ಬೀರುವ ಚಾಕಚಕ್ಯತೆ ಮತ್ತು ಜನಪ್ರೀತಿ ಬೆಳೆಸಿಕೊಂಡರೆ, ಕೊನೆಪಕ್ಷ ಇನ್ನು ಇಪ್ಪತ್ತು ವರ್ಷ ಕಳೆಯುವ ವೇಳೆಗೆ ಭಾರತದ ಕೇಂದ್ರಸ್ಥಾನದಿಂದ ಕೋಮುವಾದಿ ಪಕ್ಷವನ್ನು ತೆಗೆದು ಹಾಕುವ ಬಲ ಒಗ್ಗೂಡುವ ಸಾಧ್ಯತೆಯೂ ಇದೆ. ಆದ್ದರಿಂದ ‘ಜನಸೇವೆ’ಯ ಹೆಸರೇಳಿಕೊಂಡು ಪಕ್ಷಾಂತರ ಮಾಡುವ ಅಗತ್ಯ ಖಂಡಿತವಾಗಿಯೂ ಇಲ್ಲ.
ತಾವು ಪ್ರತಿಪಾದಿಸುವ ಸಿದ್ಧಾಂತದ ಮೇಲೆ ನಂಬಿಕೆ ಮತ್ತು ಬದ್ಧತೆ ಇರುವ ಯಾರೂ ಇಂಥ ಜಿಗಿತಕ್ಕೆ ಪ್ರಯತ್ನಿಸುವುದಿಲ್ಲ. ಅಕಸ್ಮಾತ್ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸಿಗೆ ಸೇರುವುದೇ ಆದರೆ, ಅವರಿಗೆ ತಾವು ಪ್ರತಿಪಾದಿಸುತ್ತಿದ್ದ ಸಿದ್ಧಾಂತದ ಮೇಲೆ ನಂಬಿಕೆ ಇರಲಿಲ್ಲ ಅಂತಲೇ ಅಂದುಕೊಳ್ಳಬೇಕಾಗುತ್ತದೆ.
ಹೌದು, ಕಮ್ಯುನಿಸ್ಟ್ ಪಾರ್ಟಿ ಭಾರತದಲ್ಲಿ ಅಧಿಕಾರ ಹಿಡಿಯುವುದು ಕಷ್ಟ. ಮುಂದಿನ ಚುನಾವಣೆ ವೇಳೆಗೆ ಕೇರಳದಲ್ಲಿ ಅದು ಉಳಿದುಕೊಂಡರೆ ಅದೇ ಒಂದು ಸಾಧನೆ ಅನ್ನುವಂಥ ಸ್ಥಿತಿಯಲ್ಲಿದೆ. ಯಾವುದೇ ಒಂದು ಸಿದ್ಧಾಂತದ ರಾಜಕೀಯ ಮುಖಕ್ಕೆ ಒಂದಷ್ಟು ಮಿತಿಗಳೂ ಇರುತ್ತವೆ. ಆದ್ದರಿಂದ ಅದರ ಚರ್ಚೆ ನನ್ನ ಉದ್ದೇಶವಲ್ಲ. ಆದರೆ ಕಮ್ಯುನಿಸಮ್ ಭಾರತದಿಂದ ಹೊರಗೆ ಹೋದರೆ ಅಥವಾ ಅಧಿಕಾರ ಸಿಗುವುದಿಲ್ಲ ಅನ್ನುವ ನಿರಾಶೆಯಲ್ಲಿ ಜಿಗಿದಾಡುತ್ತಾ ಸತ್ವ ಕಳೆದುಕೊಂಡರೆ ಭಾರತ ಮುಂದೆ ಭಾರತವಾಗೇ ಉಳಿಯುವುದು ಕಷ್ಟ. ರೈತ, ಕಾರ್ಮಿಕ, ಶಿಕ್ಷಣ, ಕೋಮುವಾದ ಇತ್ತೀಚೆಗೆ ಜಾತಿವಾದದ ವಿರುದ್ಧ ದೇಶದಲ್ಲಿ ಎಲ್ಲೇ ಕೂಗು ಎದ್ದರೂ ಅದರ ಹಿಂದೆ ಕಮ್ಯುನಿಸ್ಟ್ ಸಿದ್ಧಾಂತ ಇರುತ್ತದೆ. ಈ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲಿ ಅಧಿಕಾರ ಪಡೆದು ರಸ್ತೆ ಅಥವಾ ಚರಂಡಿ ಕಟ್ಟಿಸುವಷ್ಟೇ/ ಅಥವಾ ಅದಕ್ಕಿಂತ ಮುಖ್ಯವಾಗಿ ಮನುಷ್ಯರನ್ನು ಮನುಷ್ಯರನ್ನಾಗಿ ಉಳಿಸುವ ಸಿದ್ಧಾಂತ ನಮ್ಮ ದೇಶಕ್ಕೆ ಮುಖ್ಯವಾಗಿ ಬೇಕಾಗಿದೆ. ಇಂಥ ನೂರಾರು ಮನುಷ್ಯರು ನಿರಂತರವಾಗಿ ಶ್ರಮಿಸುತ್ತಿದ್ದರೆ ಖುದ್ದು ತಮನೆ ಅಧಿಕಾರವಿಲ್ಲದೆ ಇದ್ದರೂ ಆಳುವವರನ್ನು ಮಣಿಸಬಲ್ಲ ಸಾಮರ್ಥ್ಯ ಒದಗುತ್ತದೆ ಮತ್ತು ಅದು ಖುದ್ದು ಅಧಿಕಾರ ಹೊಂದಿರುವವನ ಮಿತಿಗಿಂತಲೂ ಹೆಚ್ಚು ಪಟ್ಟು ವಿಸ್ತಾರವಾಗಿರುತ್ತದೆ, ಬಲಶಾಲಿಯಾಗಿರುತ್ತದೆ.
ಇದನ್ನು ಕನ್ಹಯ್ಯ (ಪಕ್ಷಾಂತರ ನಿಜವಾಗಿದ್ದರೆ), ಮತ್ತು ಅವರ ಪಕ್ಷಾಂತರವನ್ನು ಸಂಭ್ರಮಿಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕು.
ರಾಜಕೀಯ ನೀತಿಗಳಿಂದ ಮಾತ್ರ ದೇಶದ ದಿಕ್ಕು ದೆಸೆ ಬದಲಿಸಲು ಸಾಧ್ಯ ಅನ್ನುವುದು ನಿಜ. ಅಂಥ ನೀತಿಗಳನ್ನು ರೂಪಿಸುವವರನ್ನು ಆಯ್ದು ಕೂರಿಸುವುದು ಜನರು. ಆದ್ದರಿಂದ ಅಧಿಕಾರ ಪಡೆಯುವ ಮೊದಲು ತಮ್ಮನ್ನು ತಮ್ಮ ನಿಲುವುಗಳಿಗಾಗಿ ಆರಿಸಬಲ್ಲ ಜನರನ್ನೂ ಮನಸ್ಥಿತಿಯನ್ನೂ ನಿರ್ಮಾಣ ಮಾಡಬೇಕಿರುವುದು ಒಬ್ಬ ನೈಜ ಸಿದ್ಧಾಂತವಾದಿಯ ಜವಾಬ್ದಾರಿ. ಸದ್ಯಕ್ಕೆ ಆ ಜವಾಬ್ದಾರಿ ಕಮ್ಯುನಿಸ್ಟರ ಮೇಲಿದೆ. ಅಧಿಕಾರವಿಲ್ಲದೆ ಇದ್ದರೂ ಕಂಗೆಡದೆ ಒಂದಿಡೀ… ಅಗತ್ಯ ಬಿದ್ದರೆ ಎರಡು ತಲೆಮಾರುಗಳ ಕಮ್ಯುನಿಸ್ಟ್ ಸಿದ್ಧಾಂತವಾದಿಗಳು (ಅಂದರೆ, ಕಮ್ಯುನಿಸ್ಟ್ ಪಕ್ಷಕ್ಕೆ ಸಂಬಂಧವಿಲ್ಲದೆ ಇದ್ದರೂ ಸಮಾನತಾ ಸಿದ್ಧಾಂತವನ್ನು ಮೈಗೂಡಿಸಿಕೊಂಡವರು) ಚೂರು ಚೌಕಟ್ಟು ಅಗಲಿಸಿಕೊಂಡು ಕೆಲಸ ಮಾಡಿದರೆ, ಅವರ ಪ್ರಯತ್ನ ವ್ಯರ್ಥವಾಗುವುದಿಲ್ಲ. ಅದರ ಬದಲು ಕೆಲಸ ಮಾಡಲು ಅಧಿಕಾರ ಬೇಕೆಂದು ತಪ್ಪು ಪಕ್ಷವನ್ನು ಆಯ್ದುಕೊಂಡರೆ, ಈ ಪ್ರಕ್ರಿಯೆಗೆ ಕೊಂಚ ಹಿನ್ನಡೆಯಾಗುವ ಅಥವಾ ಇನ್ನೂ ಚೂರು ನಿಧಾನವಾಗುವ ಸಾಧ್ಯತೆ ಇರುತ್ತದೆ.
ಈ ಸನ್ನಿವೇಶದಲ್ಲಿ ಇಂಥಾ ಪಕ್ಷಾಂತರ ನಿರ್ಧಾರಗಳ/ ಸಮರ್ಥನೆಯ ಅಗತ್ಯ ನಿಜವಾಗಿಯೂ ಇದೆಯೇ?