ಖ್ಯಾತ ಸಾಹಿತಿ ಪ್ರೊ. ಕಮಲ ಹಂಪನಾ ನಿಧನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಕಮಲಾ ಹಂಪನಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸಾಹಿತಿ, ಸಂಶೋಧಕರಾಗಿರುವ ಪತಿ ಹಂ.ಪ. ನಾಗರಾಜಯ್ಯ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅನೇಕ ಬಂದು ಮಿತ್ರರು, ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10 ರಿಂದ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಕಮಲಾ ಹಂಪನಾ ಅವರು ಕನ್ನಡದ ಲೇಖಕರು. ಅವರು ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಪ್ರಾಚೀನ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲ ಪ್ರಕಾರಗಳಲ್ಲೂ ಕೊಡುಗೆಗಳನ್ನು ನೀಡಿದ್ದಾರೆ.

ಕಮಲಾ ಹಂಪನಾ ಅವರು, ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್-ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ 28-10-1935ರಲ್ಲಿ ಜನಿಸಿದರು. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, 1953ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು 1955-58ರಲ್ಲಿ ಬಿ.ಎ. ಆನರ್ಸ್ ಮಾಡಿದರು. 1959 ರಲ್ಲಿ ಕನ್ನಡ ಅಧ್ಯಾಪಕಿಯಾಗಿ ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.

ಸಾಹಿತ್ಯ ಕೃತಿಗಳು ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ ಸೇರಿದಂತೆ ಹಲವು ಸಾಹಿತ್ಯಗಳನ್ನು ರಚಿಸಿದ್ದಾರೆ. 2003 ಡಿಸೆಂಬರ್ ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಜರುಗಿದ 71 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *