ಕಲಬುರಗಿ: ಕಲಬುರಗಿ ನಗರವನ್ನು ರೂ. 1,685 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ, ಸ್ಟಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸುವುದರಿಂದ ಇಲ್ಲಿನ ಜನರ ಜೀವನ ಗುಣಮಟ್ಟ ಸುಧಾರಿಸಲಿದ್ದು ,ಹಿಂದುಳಿದ ಜಿಲ್ಲೆಗಳಿಗೆ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದರು.
ಮುಖ್ಯಮಂತ್ರಿಗಳ ಭಾಷಣದ ಸಂಪೂರ್ಣ ವಿವರ ಇಲ್ಲಿದೆ
1. ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿಯ ದಶಮಾನೋತ್ಸವದ ಈ ಮಹತ್ವದ ಸಂದರ್ಭದಲ್ಲಿ ಸಮಸ್ತ ಜನತೆಗೆ ಹೃತ್ಪೂರ್ವಕ ಶುಭಾಶಯಗಳು.
2. ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಈ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಅವಕಾಶ ಲಭಿಸಿದ್ದು ಧನ್ಯತೆಯ ಭಾವ ಮೂಡಿಸಿದೆ. ಹಾಗೂ ಈ ಭಾಗದ ಅಭಿವೃದ್ಧಿಯ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿದೆ.
3. ಈ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲೂ ಸಂತಸದ ಭಾವನೆ ನೆಲೆಸಿದೆ. ಪ್ರಕೃತಿ ಕೂಡ ನಮ್ಮನ್ನು ಆಶೀರ್ವದಿಸಿದೆ.
ಇದನ್ನೂ ಓದಿ: ನಾಗಮಂಗಲ ಘಟನೆ: ತನಿಖಾ ವರದಿ ನಂತರ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು – ಗೃಹ ಸಚಿವ ಡಾ. ಜಿ. ಪರಮೇಶ್ವರ
4. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಬೆಳಕು ಬಂದಿದ್ದು ಒಂದು ವರ್ಷದ ನಂತರ.
5. ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಸಂಕಲ್ಪಶಕ್ತಿ, ಜವಾಹರ್ ಲಾಲ್ ನೆಹರು ಅವರ ದೂರದೃಷ್ಟಿಯ ಫಲವಾಗಿ ಕಲ್ಯಾಣ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಹಾಗಾಗಿ ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ಎಲ್ಲ ಮಹನೀಯರನ್ನು ನಾನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.
6. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಈ ಪ್ರದೇಶ ವಿಶ್ವವೇ ನಿಬ್ಬೆರಗಾಗುವಂತಹ ಸಾಮಾಜಿಕ ಕ್ರಾಂತಿಗೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ ಪವಿತ್ರ ಭೂಮಿಯಾಗಿದೆ. ಶರಣರ ಚಳುವಳಿಗೆ ಬಸವಣ್ಣನವರು ಮುಂದಾಳತ್ವ ವಹಿಸಿದ್ದರು. ಬಸವ ತತ್ವದಲ್ಲಿ ನಂಬಿಕೆ ಇಟ್ಟು ಮನ್ನಡೆಯುತ್ತಿರುವ ನಮ್ಮ ಸರ್ಕಾರ “ವಿಶ್ವಗುರು ಬಸವಣ್ಣ – ಸಾಂಸ್ಕøತಿ ನಾಯಕರು” ಎಂದು ಘೋಷಿಸಿದೆ. ಕಲ್ಯಾಣ ಚಾಲುಕ್ಯರು, ಬಹಮನಿ ಸುಲ್ತಾನರು, ರಾಷ್ಟ್ರಕೂಟರ ಆಳ್ವಿಕೆಯ ಭವ್ಯ ಪರಂಪರೆ ಹೊಂದಿದ ಪ್ರದೇಶ ಇದಾಗಿದೆ.
7. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ “ಕವಿರಾಜ ಮಾರ್ಗ” ನೀಡಿದ ಅಮೋಘವರ್ಷ ನೃಪತುಂಗನ ನಾಡು ಇದಾಗಿದೆ. ಸೂಫಿ-ಸಂತರ ಈ ಬೀಡು, ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ.
8. ದೇಶದ ವಿವಿಧ ಪ್ರಾಂತ್ಯಗಳು ಜಾತಿ-ಲಿಂಗ ಅಸಮಾನತೆ, ಊಳಿಗಮಾನ್ಯತೆ ಮುಂತಾದ ಸಮಸ್ಯೆಗಳಲ್ಲಿ ಮುಳುಗಿದ್ದಾಗ ಕಲ್ಯಾಣ ಕರ್ನಾಟಕವು ದೀಪ ಹಚ್ಚಿ ದಾರಿ ತೋರುವ ಕೈಮರದಂತೆ ಕೆಲಸ ಮಾಡಿದೆ. ಒಂದು ಕಾಲಕ್ಕೆ ಬೌದ್ಧ ಧರ್ಮವನ್ನು ಪೋಷಿಸಿದ್ದ ಈ ನೆಲ 12 ನೇ ಶತಮಾನದ ಹೊತ್ತಿಗೆ ಇಡೀ ಜಗತ್ತಿನಲ್ಲಿಯೆ ಅಭೂತ ಪೂರ್ವವಾದ ಪ್ರಜಾಪ್ರಭುತ್ವದ ಆಶಯಗಳನ್ನು ಹುಟ್ಟು ಹಾಕಿತು. ಈ ಭಾಗವು ಹಲವು ಧರ್ಮಗಳ ನೆಲೆವೀಡಾಗಿದೆ. ಎಲ್ಲ ಧರ್ಮಗಳು ಸಾಮರಸ್ಯದಿಂದ ಒಟ್ಟುಗೂಡಿ ಬದುಕುವ ಮೂಲಕ ಇಡೀ ದೇಶಕ್ಕೆ ನಾವು ಮಾದರಿ ಎಂದು ಕಲ್ಯಾಣ ಕರ್ನಾಟಕದ ಜನ ಸಾರಿ ಹೇಳುತ್ತಿದ್ದಾರೆ. ಹಾಗಾಗಿ ಈ ಭಾಗದ ಜನ ನಮಗೆ ಸದಾ ಮಾದರಿ.
9. ಬಸವ ಕಲ್ಯಾಣದಲ್ಲಿ ಹೊತ್ತಿಕೊಂಡ ಶರಣರ ಚಳುವಳಿಯು ಇಡೀ ಉಪಖಂಡದ ಬೇರೆ ಬೇರೆ ಭಾಗಗಳಿಂದ ಸಮಾನತಾವಾದಿ ಆಶಯಗಳನ್ನು ಹೊಂದಿದ್ದ ಜನರನ್ನು ಒಟ್ಟುಗೂಡಿಸಿತು. ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯವಿಲ್ಲದ ಸಮ-ಸಮಾಜ ನಿರ್ಮಾಣದ ಆಶಯವನ್ನು ತಾತ್ಕಾಲಿಕವಾಗಿಯಾದರೂ ಈಡೇರಿಸಿತ್ತು. ಶರಣರ ವಚನ ಚಳುವಳಿಯು ಇವತ್ತಿಗೂ ಕೂಡ ಸಮಾನತಾವಾದಿ ಆಶಯಗಳನ್ನು ಹೊತ್ತ ಜನರಿಗೆ ಪ್ರೇರಣೆಯಾಗಿದೆ.
10. ಆ ನಂತರ ಬ್ರಿಟೀಷರ ವಿರುದ್ಧ ಸೆಟೆದೆದ್ದು ನಿಂತ ಸುರಪುರದ ರಾಜಾ ವೆಂಕಟಪ್ಪ ನಾಯಕ ಮುಂತಾದವರು ಇತಿಹಾಸದಲ್ಲಿ ಶಾಶ್ವತವಾಗಿ ನಿಲ್ಲುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಲ್ಯಾಣ ಕರ್ನಾಟಕವು ರಾಜ್ಯದ ಬೇರೆ ಬೇರೆ ಭಾಗಗಳ ಜನರಿಗಿಂತ ಒಂದು ಕೈ ಹೆಚ್ಚೆ ಎಂಬಂತೆ ಹೋರಾಟ ಮಾಡಿದೆ.
11. ಭಾರತದಲ್ಲಿ ವಿಲೀನಗೊಳ್ಳಲು ನಿರಾಕರಿಸಿದ ಎರಡು ಪ್ರಾಂತ್ಯಗಳೆಂದರೆ ಮೈಸೂರು ಮತ್ತು ಹೈದ್ರಾಬಾದ್. ಮೈಸೂರು ಚಲೋ, ಹೈದರಾಬಾದ್ ವಿಮೋಚನಾ ಚಳುವಳಿ, ಎರಡೂ ಆಯಾ ಭಾಗದ ಜನರು ನಮಗೆ ರಾಜರ ಆಳ್ವಿಕೆ ಸಾಕು, ಪ್ರಜಾಪ್ರಭುತ್ವ ಬೇಕು ಎಂದು ಪ್ರಕಟಿಸಿದ ಆಶೋತ್ತರಗಳು. ಜನರ ಆಶೋತ್ತರಗಳಿಗೆ ಮಣಿದ ಮೈಸೂರು ರಾಜಪ್ರಭುತ್ವವು ಬಹುಬೇಗ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿತು. ಆದರೆ ಈ ಭಾಗಕ್ಕೆ ದೊಡ್ಡ ಪ್ರಮಾಣದ ತ್ಯಾಗ ಬಲಿದಾನಗಳ ಮೂಲಕವೆ ಸ್ವಾತಂತ್ರ್ಯ ದೊರಕಿತು.
12. ಕಲ್ಯಾಣ ಕರ್ನಾಟಕವು ನಾಲ್ಕು ಮಹತ್ವದ ಹೋರಾಟಗಳನ್ನು ಮಾಡಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ, ಕನ್ನಡ ಭಾಷಿಕರು ಒಗ್ಗೂಡುವ ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟ ಮತ್ತು ಆರ್ಟಿಕಲ್ 371 ಜೆ ರಚನೆಗಾಗಿ ನಡೆದ ಚಳುವಳಿ. ಇವುಗಳನ್ನು ಹೊಸ ತಲೆಮಾರು ಎಂದಿಗೂ ಮರೆಯಬಾರದು.
13. ಬ್ರಿಟೀಷರು ಮತ್ತು ನಿಜಾಮರ ಆಳ್ವಿಕೆಯಲ್ಲಿ ಹೈದರಾಬಾದ್-ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಮರಾಠಿ, ತೆಲುಗು, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳ ಅಬ್ಬರದಲ್ಲಿ ಕನ್ನಡ ಭಾಷೆಯನ್ನು ತೀವ್ರವಾಗಿ ಕಡೆಗಣಿಸಲಾಗಿತ್ತಲ್ಲದೆ ಅಭಿವೃದ್ಧಿ ಮರೀಚಿಕೆಯಾಗಿತ್ತು.
14. ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ನಿಜಾಮನ ಆಳ್ವಿಕೆಯಲ್ಲಿದ್ದ ಕಲಬುರಗಿ, ಬೀದರ್ ಹಾಗೂ ರಾಯಚೂರು, ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿದ ಬಳ್ಳಾರಿ ಜಿಲ್ಲೆ ಒಳಗೊಂಡಂತೆ ಧರ್ಮಸಿಂಗ್ ವರದಿಯನ್ವಯ 1990 ರಲ್ಲಿ ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿತ್ತು. ಆ ಮೂಲಕ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ನಿಧಿ ನೀಡಲಾಗಿತ್ತು, ಈ ಭಾಗದ ಜನರ ಆಶೋತ್ತರದಂತೆ ಅಭಿವೃದ್ಧಿಯ ವೇಗ ಹೆಚ್ಚಿಸಲು ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಂವಿಧಾನ ಕಲಂ 371ಕ್ಕೆ ತಿದ್ದುಪಡಿ ತರಬೇಕು ಎನ್ನುವ ಹೋರಾಟವು ದಶಕಗಳ ಕಾಲ ನಡೆಯಿತು.
15. ಹಲವು ದಶಕಗಳ ತೀವ್ರ ಹೋರಾಟ ಹಾಗೂ ಈ ಭಾಗದ ಹಿರಿಯ ರಾಜಕಾರಣಿಗಳಾದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಶ್ರೀಯುತ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎನ್.ಧರಂಸಿಂಗ್ ಅವರ ಅವಿರತ ಪ್ರಯತ್ನ ಹಾಗೂ ಅವರ ಜೊತೆಗೂಡಿದ ಅನೇಕ ಹೋರಾಟಗಾರರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು.
16. ಎಷ್ಟೆಲ್ಲಾ ಪ್ರಯತ್ನ ಮಾಡಿದರೂ ಆಗಿನ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸರ್ಕಾರ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಆದರೆ, ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ಅವರ ನಿರಂತರ ಪ್ರಯತ್ನದಿಂದ ಮುಂದೆ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯು.ಪಿ.ಎ. ಸರ್ಕಾರ ಡಿಸೆಂಬರ್ 2012 ರಲ್ಲಿ ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತಂದು 371 (ಜೆ) ಪರಿಚ್ಛೇದ ಸೇರ್ಪಡೆ ಮಾಡಲಾಯಿತು. ರಾಷ್ಟ್ರಪತಿಗಳ ಅಂಕಿತದೊಂದಿಗೆ ಇದು ದಿ:01-01-2013 ರಿಂದ ಜಾರಿಗೆ ಬಂದಿತು.
17. ಸಂವಿಧಾನದಲ್ಲಿ ಆರ್ಟಿಕಲ್ 371 (ಜೆ) ಪರಿಚ್ಛೇದ ಸೇರ್ಪಡೆಯೊಂದಿಗೆ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರೆತಂತಾಯಿತು. ಹೈದ್ರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಯಿತು. ಮುಂದೆ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಪುನರ್ ನಾಮಕರಣ ಮಾಡಲಾಯಿತು. ಅಲ್ಲಿಂದ ಈಚೆಗೆ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಯಿತು.
18. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ನಮ್ಮ ಸರ್ಕಾರ ಚುನಾವಣೆಗೆ ಪೂರ್ವದಲ್ಲಿ ನೀಡಿದ ಭರವಸೆಗಳಂತೆ “ಪಂಚ ಗ್ಯಾರಂಟಿ” ಯೋಜನೆಗಳನ್ನು ಜಾರಿಗೆ ತರುವ ಮೂಲಕ “ನುಡಿದಂತೆ ನಡೆಯುವ ಸರ್ಕಾರ” ಎಂಬುದನ್ನು ಸಾಬೀತುಪಡಿಸಿತು.
19. “ಶಕ್ತಿ” ಯೋಜನೆಯಡಿ ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದು, ವಾರ್ಷಿಕವಾಗಿ ಸರ್ಕಾರವು ಇದಕ್ಕಾಗಿ 4,000 ಕೋಟಿ ರೂ. ವೆಚ್ಚ ಮಾಡಲಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಆಗಸ್ಟ್-2024ರ ಅಂತ್ಯಕ್ಕೆ ದಿನನಿತ್ಯ 17.11 ಲಕ್ಷದಂತೆ 41.45 ಕೋಟಿ ಟ್ರಿಪ್ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಇದರ ವೆಚ್ಚ 1,387 ಕೋಟಿ ರೂ. ಗಳನ್ನು ನಮ್ಮ ಸರ್ಕಾರ ಭರಿಸುತ್ತಿದೆ.
20. “ಅನ್ನ ಭಾಗ್ಯ” ಯೋಜನೆಯಡಿ 10 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತಿದೆ. ಇದರಲ್ಲಿ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆ.ಜಿ.ಗೆ 34 ರೂ. ಗಳಂತೆ ತಲಾ ಸದಸ್ಯರಿಗೆ 170 ರೂ. ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗುತ್ತಿದೆ. ಪ್ರದೇಶದ 7 ಜಿಲ್ಲೆಗಳಲ್ಲಿ ಕಳೆದ ಜೂನ್-2024 ಮಾಹೆಗೆ ಒಟ್ಟು 22.59 ಲಕ್ಷ ಪಡಿತರ ಚೀಟಿಯ ಕುಟುಂಬದ ಸದಸ್ಯರಿಗೆ 1,551 ಕೋಟಿ ರೂ. ಹಣ ಪಾವತಿಸಿದೆ.
21. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ “ಗೃಹ ಜ್ಯೋತಿ” ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ 21.88 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡು ಯೋಜನೆಯ ಲಾಭ ಪಡೆದಿದ್ದಾರೆ. ಇದಕ್ಕಾಗಿ ಸರ್ಕಾರ 1,104 ಕೋಟಿ ರೂ. ಜೆಸ್ಕಾಂಗೆ ಸಬ್ಸಿಡಿ ಪಾವತಿಸಿದೆ.
22. ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮಿ” ಯೋಜನೆಯಡಿ ಕಲಬುರಗಿ ವಿಭಾಗದ 7 ಜಿಲ್ಲೆಗಳಲ್ಲಿ ಇದುವರೆಗೆ 24.53 ಲಕ್ಷ ಮಹಿಳೆಯರಿಗೆ ತಲಾ 2,000 ರೂ. ಗಳಂತೆ 5000 ಕೋಟಿ ರೂ. ಗಳನ್ನು ಡಿ.ಬಿ.ಟಿ. ಮೂಲಕ ಪಾವತಿಸಿದೆ. ಇದರಿಂದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದಂತಾಗಿದೆ.
23. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಮತ್ತು ಪದವಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಕ್ರಮವಾಗಿ ಮಾಸಿಕ 1,500 ಮತ್ತು 3,000 ಭತ್ಯೆ ನೀಡುವ “ಯುವ ನಿಧಿ” ಯೋಜನೆಯಡಿ ಇದೂವರೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 49,691 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹ 22,272 ನಿರುದ್ಯೋಗಿಗಳಿಗೆ 28.39 ಕೋಟಿ ರೂ.ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗಿದೆ.
24. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ ಲಭಿಸಲಿದೆ. ಜಾತಿ-ಧರ್ಮ ಇಲ್ಲದೆ ಪ್ರತಿಯೊಬ್ಬರನ್ನು ಆರ್ಥಿಕವಾಗಿ ಸುಸ್ಥಿರವಾಗಿರಿಸಲು ಹಾಕಿಕೊಂಡಿರುವ ಈ ಯೋಜನೆಗಳು ಬಡವರ ಬದುಕನ್ನೆ ಬದಲಿಸುವ ಕರ್ನಾಟಕ ಮಾದರಿ ಆಡಳಿತದ ಗ್ಯಾರಂಟಿ ಯೋಜನೆಗಳಾಗಿ ಪರಿವರ್ತನೆಗೊಂಡಿರುವುದಕ್ಕೆ ಸಂತೃಪ್ತಿ ಭಾವ ನನ್ನಲ್ಲಿ ಮೂಡಿದೆ.
25. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ದಾಖಲೆ ಪ್ರಮಾಣದಲ್ಲಿ 5,000 ಕೋಟಿ ರೂ. ಘೋಷಿಸಿ ಅನುದಾನ ಹಂಚಿಕೆ ಮಾಡಲಾಗಿದೆ.
26. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು 5,000 ಕೋಟಿ ರೂ. ಮೊತ್ತಕ್ಕೆ ಸಲ್ಲಿಸಿದ ಕ್ರಿಯಾ ಯೋಜನೆಗೆ ನಮ್ಮ ಸರ್ಕಾರ ಈಗಾಗಲೆ ಅನುಮೋದನೆ ನೀಡಿದ್ದು, ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಕ್ರಾಂತಿ ನಿರೀಕ್ಷಿಸಲಾಗಿದೆ.
27. ಡಾ.ಡಿ.ಎಂ. ನಂಜುಂಡಪ್ಪ ವರದಿಯನ್ನು 2002ರಲ್ಲಿ ಸಲ್ಲಿಸಲಾಗಿದ್ದು, ಆ ನಂತರದಲ್ಲಿ ತಾಲ್ಲೂಕುಗಳ ಸಾಮಾಜಿಕ ಆರ್ಥಿಕ ಹಾಗೂ ಇನ್ನಿತರೆ ಆಯಾಮಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಆಗಿರುವ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಮೂಲಕ ಪ್ರಸ್ತುತ ರಾಜ್ಯದಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲಾಗುವುದು.
28. ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಉಪ ಸಮಿತಿಯನ್ನು ರಚಿಸಲಾಗಿದ್ದು, ಈ ಭಾಗದ ಯುವಕರ ಆಶೋತ್ತರಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ.
29. ತಳ ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಶ್ರೇಯೋಭಿವೃದ್ಧಿಗೆ ಒಟ್ಟು 39,121 ಕೋಟಿ ರೂ. ಹಣ ಮೀಸಲಿಡಲಾಗಿದೆ. ಇದರ ಲಾಭವನ್ನು ಈ ಭಾಗದ ಜನರೂ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ.
30. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮಂಡಳಿಯು ಈ ವರ್ಷ ಸಹ 1250 ಕೋಟಿ ರೂ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟು “ಅಕ್ಷರ ಆವಿಷ್ಕಾರ” ಕಾರ್ಯಕ್ರಮವು ಇನ್ನಷ್ಟು ಶಕ್ತಿ ತಂದಿದೆ. ಕೆ.ಕೆ.ಆರ್.ಡಿ.ಬಿ.ಯು 2023-24 ಮತ್ತು 2024-25 ಎರಡೂ ವರ್ಷಗಳನ್ನು ಶೈಕ್ಷಣಿಕ ವರ್ಷಗಳೆಂದು ಘೋಷಣೆ ಮಾಡಿದೆ. ಈ ವರ್ಷ 1008 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಎಂಬ ಹೊಸ ಮಾದರಿಯನ್ನು ಪ್ರಾರಂಭಿಸಲಾಗಿದೆ. ನಮ್ಮ ನಿರೀಕ್ಷೆ ಮೀರಿ 36,445 ಮಕ್ಕಳು ಪ್ರವೇಶ ಪಡೆದು ದಾಖಲೆ ಬರೆದಿದ್ದಾರೆ. ಇದಕ್ಕಾಗಿ ಹೊಸದಾಗಿ 1353 ಅತಿಥಿ ಶಿಕ್ಷಕರನ್ನು ಹಾಗೂ 892 ಸಹಾಯಕಿಯರನ್ನು ನೇಮಕ ಮಾಡಿಕೊಂಡಿದ್ದೇವೆ.
31. ಈ ಭಾಗದ 872 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷಾ ಕಲಿಕೆಯನ್ನೂ ಪ್ರಾರಂಭಿಸಿದ್ದೇವೆ. 306 ಪ್ರೌಢಶಾಲೆಗಳಲ್ಲಿ ಈ ವರ್ಷ 9 ನೇ ತರಗತಿಯ ಮಕ್ಕಳ ಕೌಶಲ್ಯ ವೃದ್ಧಿಗಾಗಿ ಕಂಪ್ಯೂಟರ್ ಕಲಿಕೆಯನ್ನು ಪ್ರಾರಂಭಿಸಿದ್ದೇವೆ. ಶಿಕ್ಷಣದ ಗುಣಮಟ್ಟ ಸುಧಾರಿಸಿ ಇಲ್ಲಿನ ಮಕ್ಕಳೂ ಕೂಡ ತಾವು ಇತರರಂತೆಯೇ ತಲೆ ಎತ್ತಿ ನಿಲ್ಲಲು ಅನುಕೂಲವಾಗುವಂತೆ ಮಾಡಲು ಈ ವರ್ಷ “ಕಲಿಕಾಸರೆ” ಎಂಬ ಹೆಸರಿನಲ್ಲಿ ವಿಶೇಷ ಅಭ್ಯಾಸ ಪುಸ್ತಕವನ್ನು ಒದಗಿಸಲಾಗುತ್ತಿದೆ.
32.ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಕಾಮಗಾರಿಗಳು ಹಾಗೂ ಅವಶ್ಯವಿರುವ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಘಟಕ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆಗೆ 250 ಕೋಟಿ ರೂ. ಅನುದಾನವನ್ನು ಮಂಡಳಿಯು ಕಾಯ್ದಿರಿಸುವ ಮೂಲಕ ಉನ್ನತ ಶಿಕ್ಷಣಕ್ಕೆ ನೀರೆರೆದು ಪೋಷಿಸುತ್ತಿದೆ.
33. ಕೆ.ಕೆ.ಆರ್.ಡಿ.ಬಿ. ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ 2024-25ನೇ ಸಾಲಿನಲ್ಲಿ 180 ಕೋಟಿ ರೂಗಳನ್ನು ಒದಗಿಸಿ ಮೆಟ್ರಿಕ್ ಪೂರ್ವ- ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
34. ಕೆ.ಕೆ.ಆರ್.ಡಿ.ಬಿ. ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಸುಮಾರು 180 ಕೋಟಿ ರೂಗಳ ವೆಚ್ಚದಲ್ಲಿ ಮೌಲಾನ ಆಜಾದ್ ಮಾದರಿ ಶಾಲೆಗಳು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ- ಮೆಟ್ರಿಕ್ ನಂತರದ ವಸತಿ ನಿಲಯಗಳ ನಿರ್ಮಾಣ ಮಾಡಲಾಗುತ್ತಿದೆ.
35. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕೆ.ಕೆ.ಆರ್.ಡಿ.ಬಿ. ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಸೇರಿ ಸುಮಾರು 200 ಕೋಟಿ ರೂಗಳ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ- ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
36. ಸಮಾಜ ಕಲ್ಯಾಣ ಇಲಾಖೆಯಿಂದ ಕಲಬುರಗಿಯಲ್ಲಿ ನೈಸ್ ಅಕಾಡೆಮಿ (ನಾಗಾವಿ ಇನ್ಸ್ಟಿಟ್ಯೂಟ್ ಆಫ್ ಕಾಂಪಿಟಿಟಿವ್ ಎಕ್ಸಾಮ್ಸ್) ಸಂಸ್ಥೆ ಈಗಾಗಲೆ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಈ ಪ್ರದೇಶದ ಮಕ್ಕಳಿಗೆ ಪರೀಕ್ಷಾ ಪೂರ್ವ ತರಬೇತಿ ಆರಂಭಿಸಲಾಗುವುದು. ಪ್ರತಿ ವರ್ಷ ಸುಮಾರು 2,000 ಅಭ್ಯರ್ಥಿಗಳಿಗೆ ಐ.ಎ.ಎಸ್., ಕೆ.ಎ.ಎಸ್., ಬ್ಯಾಂಕಿಂಗ್ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.
37. ಭಾರತೀಯ ಸೇನೆ ಮತ್ತು ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರಬಯಸುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಆಯ್ಕೆ ಪೂರ್ವ ಸಿದ್ಧತೆ, ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಕಲಬುರಗಿ ಕೇಂದ್ರ ಸ್ಥಳದಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲು ಸರ್ಕಾರ ಇತ್ತೀಚೆಗೆ ಮಂಜೂರು ಮಾಡಿದೆ.
38. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಗತಿಯಲ್ಲಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಜ್ಞಾನ ಕೇಂದ್ರಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ರಾಯಚೂರು ಮತ್ತು ಯಾದಗಿರಿಯಲ್ಲಿ ವಿಜ್ಞಾನ ಕೇಂದ್ರ/ ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು.
39.ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ ಹೆಚ್ಚು ಇದೆ. ಆರೋಗ್ಯವಂತ ಜನರು ದೇಶದ ಸಂಪತ್ತಾಗಿರುತ್ತಾರೆ. ಆದ್ದರಿಂದ ಈ ಭಾಗದ ಜನರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ-ಆವಿಷ್ಕಾರ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ವಿವಿಧ ಹಂತದ ಆಸ್ಪತ್ರೆಗಳ ಕಾಮಗಾರಿಗಳನ್ನು ಆರೋಗ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಸಮರ್ಪಕ ಅನುಷ್ಠಾನಕ್ಕಾಗಿ ಪ್ರಸಕ್ತ ಸಾಲಿನಲ್ಲಿ 220 ಕೋಟಿ ರೂ. ಗಳ ವಿಶೇಷ ಅನುದಾನವನ್ನು ಮಂಡಳಿ ಒದಗಿಸುತ್ತಿದೆ. ಕಲ್ಯಾಣ ಕರ್ನಾಟಕದ ಆಸ್ಪತ್ರೆಗಳಿಗೆ 50 ಹೊಸ ಆಂಬ್ಯುಲೆನ್ಸ್ಗಳನ್ನು ಒದಗಿಸಲಾಗುತ್ತಿದೆ.
40. ಕೆ.ಕೆ.ಆರ್.ಡಿ.ಬಿ. ಮಂಡಳಿಯ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 262 ಕೋಟಿ ರೂ. ಪರಿಷ್ಕøತ ಅಂದಾಜಿಗೆ ಈಗಾಗಲೆ ಅನುಮೋದನೆ ನೀಡಿದ್ದು, ಅಂತಿಮ ಘಟ್ಟದ ಕೆಲಸ ಭರದಿಂದ ಸಾಗಿದೆ. ಶೀಘ್ರವೇ ಇದನ್ನು ಈ ಪ್ರದೇಶಕ್ಕೆ ಲೋಕಾರ್ಪಣೆ ಮಾಡಲಾಗುವುದು.
41. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕಲಬುರಗಿಯಲ್ಲಿ 221 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ 90 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು 72 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಗಳ ಸಾಮಥ್ರ್ಯದ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳ ಕಾಮಗಾರಿಗೆ ಈ ವರ್ಷ 75 ಕೋಟಿ ರೂ. ಅನುದಾನ ನೀಡಲು ಕೆ.ಕೆ.ಆರ್.ಡಿ.ಬಿ. ಮಂಡಳಿ ನಿರ್ಧರಿಸಿದೆ.
42. ಕಲಬುರಗಿ ನಗರದಲ್ಲಿ ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿಯೆ ಜಿಮ್ಸ್ ವೈದ್ಯಕೀಯ ಕಾಲೇಜು, ಜಯದೇವ ಆಸ್ಪತ್ರೆ, ಇತ್ತೀಚೆಗೆ ಟ್ರಾಮಾ ಸೆಂಟರ್ಗಳನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುತ್ತಿದೆ. ಇದಲ್ಲದೆ ಪ್ರಗತಿಯಲ್ಲಿರುವ 163 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ಶೀಘ್ರ ಸಾರ್ವಜನಿಕರ ಬಳಕೆಗೆ ಬರಲಿದೆ. 30 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮಥ್ರ್ಯದ ತೀವ್ರ ನಿಗಾ ಘಟಕ ಮತ್ತು 15.6 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆ ಸಾಮಥ್ರ್ಯದ ಸುಟ್ಟ ಗಾಯಗಳ ಘಟಕಕ್ಕೆ ಇತ್ತೀಚೆಗೆ ಅಡಿಗಲ್ಲು ಹಾಕಲಾಗಿದೆ.
43. ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ಅವರ ಆಶಯದಂತೆ ಕಲಬುರಗಿಯನ್ನು ರಿಜನಲ್ ಹೆಲ್ತ್ ಹಬ್ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ. ದೂರದ ಬೆಂಗಳೂರು, ಮುಂಬೈ, ಹೈದರಾಬಾದಿಗೆ ಹೋಗುವುದನ್ನು ತಪ್ಪಿಸಿ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡುವುದು ಇದರ ಮೂಲ ಉದ್ದೇಶವಾಗಿದೆ.
44. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಈ ಪ್ರದೇಶದ ಜನರ ಅನುಕೂಲಕ್ಕಾಗಿ ಹೊಸದಾಗಿ 222 ಬಸ್ಸುಗಳನ್ನು ಖರೀದಿಸಲು ಮಂಡಳಿಯು ಕೆ.ಕೆ.ಆರ್.ಟಿ.ಸಿ. ಸಂಸ್ಥೆಗೆ 90 ಕೋಟಿ ರೂ. ಅನುದಾನ ಒದಗಿಸಿದೆ 2023-24 ರಿಂದ ಇಲ್ಲಿಯವರೆಗೆ ಒಟ್ಟಾರೆ 964 ಬಸ್ಸುಗಳನ್ನು ಖರೀದಿಸಿ ಜನರ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ.
45. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಟ್ಟು 44 ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಅಂದಾಜು ಮೊತ್ತ 8,290 ಕೋಟಿ ರೂಪಾಯಿಗಳಿಗೆ 2,283 ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದೆ.
46. 2024-25 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 400 ಸಮುದಾಯ ಶೌಚಾಲಯಗಳನ್ನು ನಿರ್ಮಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಪ್ರತಿ ಘಟಕಕ್ಕೆ 25 ಲಕ್ಷದಂತೆ ಒಟ್ಟು 100 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.
47. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಒಟ್ಟು 1100 ಅರಿವು ಕೇಂದ್ರಗಳಿದ್ದು, ಇವುಗಳ ಪೈಕಿ 1021 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳನ್ನಾಗಿ ಮೇಲ್ದೆರ್ಜೆಗೇರಿಸಲಾಗಿದೆ. ಸದರಿ ಅರಿವು ಕೇಂದ್ರಗಳಲ್ಲಿ ಒಟ್ಟು 12.33 ಲಕ್ಷ ಮಕ್ಕಳು ನೋಂದಣಿ ಆಗಿರುತ್ತಾರೆ. ಈ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ ಪ್ರಗತಿಗೆ ಪೂರಕವಾಗಿದೆ.
48.ಉತ್ತಮ ಶಿಕ್ಷಣ ನೀಡುವ ಜೊತೆಗೆ ಉದ್ಯೋಗಾವಾಕಾಶಗಳನ್ನು ಸೃಜಿಸುವ ಉದ್ದೇಶದಿಂದ ಉದ್ಯೋಗ ಆವಿಷ್ಕಾರ ಯೋಜನೆಯನ್ನು ರೂಪಿಸಿದ್ದೇವೆ. ಇದರ ಅಡಿಯಲ್ಲಿ ಸುಮಾರು 10 ಕೋಟಿ ರೂ ವೆಚ್ಚದಲ್ಲಿ ಸುಮಾರು 25,000 ಮಕ್ಕಳಿಗೆ ಕಲಿಕೆ ಜೊತೆ ಕೌಶಲ್ಯ, ಸಿಡಾಕ್ ಹಾಗೂ “ಇಂಡಸ್ಟ್ರಿ ಲಿಂಕೇಜ್ ಸೆಲ್” ಮುಖಾಂತರ ತರಬೇತಿ ನೀಡಲಾಗುತ್ತಿದೆ.
49. ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ಆಧಾರಿತ ಕೌಶಲ್ಯ ನೀಡಲು ಕಲಬುರಗಿ ಮತ್ತು ಕೊಪ್ಪಳದ ತಳಕಲ್ನಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮಂಡಳಿಯಿಂದ ತಲಾ 60 ಕೋಟಿ ರೂ. ಹಣ ಮೀಸಲಿಟ್ಟಿದೆ.
50. ಕಲಬುರಗಿಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ಅತ್ಯಾಧುನಿಕ ಇನ್ಕ್ಯುಬೇಶನ್ ಮತ್ತು ಕೌಶಲ್ಯ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇದು ನುರಿತ ಪ್ರತಿಭಾವಂತ ಉದ್ಯೋಗಿಗಳನ್ನು ಸೃಷ್ಟಿಸಲಿದೆ. ಕೆ-ಟೆಕ್ ಮೂಲಕ ನವೋದ್ಯಮಗಳನ್ನು ಪೋಷಿಸಲು ಮತ್ತು ಕೈಗಾರಿಕೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನುರಿತ ಉದ್ಯೋಗಿಗಳನ್ನು ಸೃಷ್ಟಿಸುವ ಗುರಿಯನ್ನು ಈ ಕೇಂದ್ರ ಹೊಂದಿರಲಿದೆ. ಈ ಪರಿವರ್ತಕ ಯೋಜನೆಯು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲಿದ್ದು ಕಲಬುರಗಿಯನ್ನು ನೈಪುಣ್ಯತೆ ಮತ್ತು ಅವಕಾಶಗಳ ಕೇಂದ್ರವಾಗಿ ಪರಿವರ್ತಿಸುತ್ತದೆ.
51. ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೊಸ ಫ್ಲಾಟ್-ಫ್ಲೋರ್ ಫ್ಯಾಕ್ಟರಿ (Flat floor factory) ರಾಜ್ಯದ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಒಂದು ಮಹತ್ತರ ಹೆಜ್ಜೆಯಾಗಿದೆ. ಇದು ಬಳಸಲು ಸಿದ್ಧವಾದ ಕಾರ್ಖಾನೆ ಸ್ಥಳಗಳನ್ನು ಸಂಪೂರ್ಣ ಸೌಲಭ್ಯಗಳೊಂದಿಗೆ ಉದ್ದಿಮೆದಾರರಿಗೆ ಒದಗಿಸುತ್ತದೆ. ಈ ಯೋಜನೆಯು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಮೊದಲ ಹೆಜ್ಜೆಯಾಗಲಿದೆ.
52. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ತಾಲೂಕಿನ ನದಿಸಿನ್ನೂರ-ಹೊನ್ನಕಿರಣಗಿ ಬಳಿ 1,000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ್ನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುತ್ತಿದ್ದು, ಇದರಿಂದ 1 ಲಕ್ಷ ಜನರಿಗೆ ನೇರ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಠಿಯಾಗಲಿದೆ.
53. ಸಮರ್ಪಿತ ಆರ್ಥಿಕ ಕಾರಿಡಾರ್ಗಳು ಆರ್ಥಿಕ ಅಭಿವೃದ್ಧಿಗೆ ಪೂರಕ ಮೂಲಸೌಕರ್ಯ ಜಾಲವನ್ನು ಒದಗಿಸುತ್ತವೆ. ಹೀಗಾಗಿ ಬೀದರ್ ಹಾಗೂ ಬೆಂಗಳೂರು ನಡುವೆ ಆರ್ಥಿಕ ಕಾರಿಡಾರ್ ಅಭಿವೃದ್ಧಿಪಡಿಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸಲು ಕ್ರಮ ವಹಿಸಲಾಗುತ್ತಿದೆ.
54.20 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ಸರ್ಕಾರಿ (ಪುರುಷರ) ಐ.ಟಿ.ಐ. ತರಬೇತಿ ಸಂಸ್ಥೆಯನ್ನು ಪುನಶ್ಚೇತನಗೊಳಿಸಲಾಗುತ್ತಿದೆ.
55. ರಾಜ್ಯ ಸರ್ಕಾರದಿಂದಲೆ ಸುಮಾರು 1,685 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ಯೋಚಿಸಲಾಗುತ್ತಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವುದಲ್ಲದೆ ಇಲ್ಲಿನ ನಗರ ವಾಸಿಗಳ ಜೀವನ ಗುಣಮಟ್ಟ ಹೆಚ್ಚಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಇದು ಸಹಕಾರಿಯಾಗಲಿದೆ.
56. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ತಲಾ 200 ಕೋಟಿ ರೂ. ಗಳನ್ನು ಒದಗಿಸಲಾಗುತ್ತಿದೆ.
57. ಕಲ್ಯಾಣ ಕರ್ನಾಟಕ ಪ್ರದೇಶದ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಹಾಗೂ ಗುಣಾತ್ಮಕವಾಗಿ ಅಭಿವೃದ್ಧಿ ಪಡಿಸಲು ಹಾಗೂ ಸಮಗ್ರ ಗ್ರಾಮೀಣಾಭಿವೃದ್ಧಿ ಮಾಡುವ ಧ್ಯೇಯದೊಂದಿಗೆ “ಕಲ್ಯಾಣ ಪಥ” ಯೋಜನೆಯನ್ನು ರೂಪಿಸಲಾಗಿದೆ. ಈ ಭಾಗದ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ 1,000 ಕೋಟಿ ರೂ. ವೆಚ್ಚದಲ್ಲಿ 1,150 ಕಿ.ಮೀ. ರಸ್ತೆಗಳನ್ನು ನಿರ್ಮಿಸಲಿದೆ.
58. ರಾಯಚೂರಿನಲ್ಲಿ ಏಮ್ಸ್ ಸಂಸ್ಥೆಯನ್ನು ಸ್ಥಾಪಿಸಲು ನಮ್ಮ ಸರ್ಕಾರವು ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲು ಸಿದ್ಧವಿದೆ. ಕೇಂದ್ರ ಸರ್ಕಾರವು ಕೂಡಲೆ ಏಮ್ಸ್ ಸಂಸ್ಥೆ ಪ್ರಾರಂಭಿಸಲು ಕ್ರಮವಹಿಸಬೇಕೆಂದು ಒತ್ತಾಯಿಸುತ್ತೇವೆ.
59.ಶಹಾಪುರದಲ್ಲಿ 292 ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ಇದರ ಜೊತೆಗೆ 23 ಕೋಟಿ ರೂ. ಮೊತ್ತದಲ್ಲಿ ಸಿಂಧನೂರಿನಲ್ಲಿ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಮಾಡುತ್ತೇವೆ.
60. ಪ್ರಸಕ್ತ 2024-25 ನೇ ಸಾಲಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರದೇಶದ 7 ಜಿಲ್ಲೆಗಳಲ್ಲಿ 4.85 ಕೋಟಿ ಮಾನವ ದಿನ ಸೃಜನೆಗೆ ಗುರಿ ಹೊಂದಿ ಈವರೆಗೆ 3.43 ಕೋಟಿ ಮಾನದ ದಿನ ಸೃಜಿಸಿ 13.69 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ.
61. 61.ಗ್ರಾಮೀಣ ಭಾಗದಲ್ಲಿ ನರೇಗಾ ಕೆಲಸಕ್ಕೆ ಹೋಗುವ ಮಹಿಳಾ ಕಾರ್ಮಿಕರ ಮಕ್ಕಳ ಲಾಲನೆ ಪಾಲನೆಗೆ “ಕೂಸಿನ ಮನೆ” ಶಿಶುಪಾಲನಾ ಕೇಂದ್ರಗಳು ಆರಂಭಿಸಲು ಕಳೆದ ವರ್ಷ ಇದೇ ದಿನದಂದು ಇಲ್ಲಿಯೇ ಚಾಲನೆ ನೀಡಿದ್ದೇವೆ. ಇದರ ಪರಿಣಾಮ ಇಂದು ಪ್ರದೇಶದ 976 ಗ್ರಾಮಗಳಲ್ಲಿ ಕೂಸಿನ ಮನೆ ತೆರೆದ ಕಾರಣ ಮಹಿಳಾ ಕಾರ್ಮಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
62. ರಾಜ್ಯದಲ್ಲಿ ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ Human Milk Bank ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಲಾಗುವುದು.
63. ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ. ಗಳನ್ನು ಒದಗಿಸಲಾಗುವುದು.
64. ಬಳ್ಳಾರಿಯಲ್ಲಿ ಅಸಂಘಟಿತವಾಗಿರುವ ಜೀನ್ಸ್ ಉದ್ದಿಮೆಗಳನ್ನು ಸಂಘಟಿಸಿ, ವಿಶ್ವದರ್ಜೆಗೆ ಉನ್ನತೀಕರಿಸಲು ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಜೀನ್ಸ್ ಅಪರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು.
65. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ವ್ಯಾಪ್ತಿಯ 18 ಹೊಸ ತಾಲೂಕುಗಳಲ್ಲಿ ಕಂದಾಯ ಇಲಾಖೆ ಮತ್ತು ಮಂಡಳಿಯ ಸಹಭಾಗಿತ್ವದಲ್ಲಿ “ತಾಲ್ಲೂಕು ಆಡಳಿತ ಭವನ”ಗಳನ್ನು [ಮಿನಿ ವಿಧಾನ ಸೌಧ] ನಿರ್ಮಾಣ ಮಾಡಲು ಮಂಡಳಿಯು 130 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
66. ಬೀದರ್ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಕ್ಕೆ ಕೆ.ಕೆ.ಆರ್.ಡಿ.ಬಿ. ವತಿಯಿಂದ 15 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಶಾಂತಿ ಸುವ್ಯವಸ್ಥೆಗೂ ಅಭಿವೃದ್ಧಿಗೂ ನೇರ ಸಂಬಂಧವಿರುವಂತೆಯೇ ಹಸಿರಿಗೂ ಅಭಿವೃದ್ಧಿಗೂ ಸಂಬಂಧವಿದೆ. ನಗರ-ಪಟ್ಟಣ- ಗ್ರಾಮಗಳಲ್ಲಿ ಗಿಡ, ಮರಗಳು ಬೆಳೆದು ವಾತಾವರಣ ತಂಪಾದರೆ ಅಭಿವೃದ್ಧಿ ಪ್ರಕ್ರಿಯೆ ಕೂಡ ವೇಗಗೊಳ್ಳುತ್ತದೆ ಎಂಬುದನ್ನು ಮನಗಂಡು ಅಂತರ್ಜಲ ವೃದ್ಧಿ, ಅರಣ್ಯೀಕರಣ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ.
67. ಗೋದಾವರಿ ಹಾಗೂ ಇನ್ನಿತರ ಜಲಾನಯನ ಪ್ರದೇಶಗಳ ನೀರಾವರಿ ಯೋಜನೆಗಳನ್ನು ಅನುಷ್ಟಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
68.ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕ್ಕಲಪರ್ವಿ ಹತ್ತಿರ ತುಂಗಭದ್ರಾ ನದಿಗೆ ಅಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ 397 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
69. 140 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯ ಜಿಲ್ಲೆಯ ಸೇಡಂ ತಾಲೂಕಿನ ಯಡ್ಡಳ್ಳಿ-ಕಾಚೂರು ಏತ ನೀರಾವರಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲಿಯೆ ಇದಕ್ಕೆ ಅಡಿಗಲ್ಲು ಹಾಕಿ ಕೆಲಸ ಪ್ರಾರಂಭಿಸಲಾಗುವುದು.
70.ಕಲಬುರಗಿಯ ಕೆ.ಜಿ.ಟಿ.ಟಿ.ಐ.ನಲ್ಲಿ ಸಿ.ಎನ್.ಸಿ. (Computer numerical control) ಯಂತ್ರವನ್ನು ಕೇಂದ್ರೀಕರಿಸುವ ಮೊದಲ ಶ್ರೇಷ್ಠತಾ ಕೇಂದ್ರವನ್ನು 16 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
71. ರಾಯಚೂರಿನಲ್ಲಿ ನೂತನ ಜವಳಿ ಪಾರ್ಕನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು.
72. ಕಲ್ಯಾಣ ಕರ್ನಾಟಕವು ಶರಣರ ದಾಸರ ಸೂಫಿಗಳ ಮತ್ತು ತತ್ವಪದಕಾರರ ನಾಡು. ಇವರು ಕೂಡಿಬಾಳುವ ಆಶಯಗಳನ್ನು ಪ್ರತಿಪಾದಿಸಿದರು. ತಿಂತಿಣಿ ಮೋನಪ್ಪ, ಕೊಡೇಕಲ್ ಬಸವಣ್ಣ, ಬಂದೇನವಾಜ್ ಹಾಗೂ ಶರಣ ಬಸವೇಶ್ವರ ಮುಂತಾದವರು ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯಲ್ಲಿರುವ ಸರ್ವ ಜನಾಂಗದ ಶಾಂತಿಯ ತೋಟದ ಸುಂದರ ಕಲ್ಪನೆಯನ್ನು ರೂಪಿಸಿದ ಸಂತರು. ಈ ಸಂತರ ಆಶಯಗಳೇ ನಮ್ಮ ಸಂವಿಧಾನದ ಆಶಯಗಳು. ಈ ಆಶಯಗಳನ್ನು ನಮ್ಮ ಜೀವದಂತೆ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ.
73. ಬಸವಣ್ಣ ಹಾಗೂ ಇತರ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ/ವಚನ ಮಂಟಪವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುತ್ತಿದ್ದು, ಜಮೀನು ಗುರುತಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು.
74. ಬಸವ ಕಲ್ಯಾಣದಲ್ಲಿ ಹಿಂದೆ ನಮ್ಮ ಸರ್ಕಾರವೆ ಅನುಭವ ಮಂಟಪವನ್ನು ವಿನ್ಯಾಸಗೊಳಿಸಿ ಶಂಕುಸ್ಥಾಪನೆ ಮಾಡಿದ್ದೆವು. ಈಗ ಮತ್ತೆ ಅಗತ್ಯವಿರುವ ಅನುದಾನಗಳನ್ನು ಒದಗಿಸಿದ್ದೇವೆ. ಮುಂದಿನ ವರ್ಷದ ಅಂತ್ಯದೊಳಗೆ ನಾವೇ ಅದನ್ನು ಉದ್ಘಾಟನೆ ಮಾಡಿ ಜನರ ಉಪಯೋಗಕ್ಕೆ ಅರ್ಪಿಸುತ್ತೇವೆ.
75. ಕೇಂದ್ರ ಸರ್ಕಾರದ “ಪ್ರಸಾದ” ಯೋಜನೆಯಡಿ ಕಲಬುರಗಿ ಜಿಲ್ಲೆಯ ಸುಪ್ರಸಿದ್ದ ದೇವಲಗಾಣಗಾಪೂರ ಕ್ಷೇತ್ರವನ್ನು ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಪಡಿಸಲು ಈಗಾಗಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರ ಇದಕ್ಕೆ ಸಮ್ಮತಿ ಸೂಚಿಸಿದಲ್ಲಿ ರಾಜ್ಯ ಸರ್ಕಾರವು ಪ್ರವಾಸೋದ್ಯಮ ಸೇರಿ ಇತರೆ ಇಲಾಖೆಯ ಅನುದಾನದಿಂದ ಭಕ್ತರ ಅಭಿಲಾಷೆಯಂತೆ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು.
76. ಬೀದರ್ನಲ್ಲಿರುವ ಶ್ರೀ ಗುರು ನಾನಕ್ ಝರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗಾಗಿ 1 ಕೋಟಿ ರೂ. ಅನುದಾನ ನೀಡಲಾಗುವುದು. ಕರೇಜ್ ಎಂದು ಪ್ರಸಿದ್ಧವಾಗಿರುವ ಬೀದರನಲ್ಲಿ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನೊಂದಿಗೆ ಪುನಶ್ವೇತನಗೊಳಿಸಲಾಗುವುದು.
77. ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆ ಸಂಪರ್ಕ ಮತ್ತು ಮೌಲ್ಯವರ್ಧನೆಯಲ್ಲಿಯೂ ಸಹಕಾರ ವಲಯವು ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಬಳ್ಳಾರಿ ಸೇರಿ ರಾಜ್ಯದ ಐದು ಕಡೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಒಟ್ಟು 50 ಕೋಟಿ ರೂ. ವೆಚ್ಚದಲ್ಲಿ ಹಾಗೂ ರಾಯಚೂರಿನಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಶೀತಲಗೃಹಗಳನ್ನು ನಿರ್ಮಿಸಲಾಗುವುದು.
78. ರಾಯಚೂರಿನಲ್ಲಿ ಸುಸಜ್ಜಿತ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
79. ಬಳ್ಳಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ** ಃio ಅಓಉ Pಟಚಿಟಿಣ** ಸ್ಥಾಪಿಸುವ ಮೂಲಕ ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲಾಗುವುದು.
80. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ 2013ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ ಕಾಯ್ದೆ ರೂಪದಲ್ಲಿ ಜಾರಿಗೊಳಿಸಿ ಇದೀಗ 10 ವರ್ಷ ತುಂಬಿದೆ.
81. ಈ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2013-14 ರಿಂದ 2024-25ನೇ ಸಾಲಿನ ವರೆಗೆ ಮಂಡಳಿಗೆ ಸರ್ಕಾರವು 19,778 ಕೋಟಿ ರೂ. ಹಂಚಿಕೆ ಮಾಡಿ 13,229 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ ಇದುವರೆಗೆ 11,174 ಕೋಟಿ ರೂ. ಖರ್ಚು ಮಾಡಲಾಗಿದೆ. ಬಿಡುಗಡೆಯಾದ ಅನುದಾನಕ್ಕೆ ಶೇ.85ರಷ್ಟು ಮಂಡಳಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಒಟ್ಟಾರೆ 35,885 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ. ಈ ಅಂಕಿಸಂಖ್ಯೆಗಳೇ ಈ ಪ್ರದೇಶದ ಅಭಿವೃದ್ಧಿಯ ಸಾರಿ ಹೇಳುತ್ತಿವೆ.
82. ಕಾಯ್ದೆ ಆರಂಭದಿಂದ ಇದುವರೆಗೆ ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ 1,09,416 ಹುದ್ದೆಗಳನ್ನು ನೇರ ನೇಮಕಾತಿಗೆ ಗುರುತಿಸಿದ್ದು, 79,985 ಹುದ್ದೆ ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 38,705 ಹುದ್ದೆಗಳ ಪೈಕಿ 29,793 ಜನರಿಗೆ ಮುಂಬಡ್ತಿ ಭಾಗ್ಯ ನೀಡಲಾಗಿದೆ. ಇನ್ನು ಖಾಲಿ ಉಳಿದ ನೇರ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ.
83. ಕಲ್ಯಾಣ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಇತರೆ ಭಾಗದಲ್ಲಿ ಶೇ.8 ರಷ್ಟು ಸ್ಥಾನಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014-15 ರಿಂದ 2023-24ನೇ ಶೈಕ್ಷಣಿಕ ಸಾಲಿನ ವರೆಗೆ ಪ್ರಮುಖವಾಗಿ 7,757 ಅಭ್ಯರ್ಥಿಗಳು ವೈದ್ಯಕೀಯ, 25,683 ಅಭ್ಯರ್ಥಿಗಳು ಇಂಜಿನಿಯರಿಂಗ್ ಪ್ರವೇಶಾತಿ ಪಡೆದಿದ್ದಾರೆ. ಇದಲ್ಲದೆ ದಂತ ವೈದ್ಯಕೀಯ, ಹೋಮಿಯೋಪತಿ, ಕೃಷಿ ಸಂಬಂಧಿತ, ಬಿ.ಫಾರ್ಮಸಿ/ ಡಿ.ಫಾರ್ಮಸಿ ಕೋರ್ಸುಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.
84. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಅನಕ್ಷರತೆಯನ್ನು ಹೋಗಲಾಡಿಸಿ ಸಾಕ್ಷರತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದ ವರೆಗೆ ಶಿಕ್ಷಣ ಗುಣಮಟ್ಟ ಕಾಪಾಡಲು, ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಹೆಚ್ಚಳ ಹಾಗೂ ವಸತಿ ನಿಲಯ ಕಟ್ಟಡ ನಿರ್ಮಾಣ ಹೀಗೆ ಅನೇಕ ಶೈಕ್ಷಣಿಕ ಚಟುವಟಿಕೆಗಳಿಗೆ ಒಟ್ಟಾರೆ 2013-14 ರಿಂದ 2023-24ರ ವರೆಗೆ ಒಟ್ಟಾರೆ 4,352 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ.
85. 2023-24ನೇ ವರ್ಷವನ್ನು **“ಙeಚಿಡಿ oಜಿ ಇಜuಛಿಚಿಣioಟಿ”** ಎಂದು ಘೋಷಿಸಿ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಡಿ ಶೇ.25 ಅಂದರೆ 653 ಕೋಟಿ ರೂ. ಅನುದಾನ ಅಕ್ಷರ ಆವಿಷ್ಕಾರ ಕಾರ್ಯಕ್ರಮದ ಮೂಲಕ ಖರ್ಚು ಮಾಡಲಾಗಿದೆ. ಈ ಅನುದಾನದಲ್ಲಿ ಶಾಲೆಗಳ ದುರಸ್ಥಿ ಮತ್ತು ನಿರ್ಮಾಣ, ಹೆಚ್ಚುವರಿ ಕೋಣೆ ನಿರ್ಮಾಣ, ಪೀಠೋಪಕರಣ, ವಿದ್ಯುತೀಕರಣ, ಶೌಚಾಲಯ ನಿರ್ಮಾಣ, ಗ್ರಂಥಾಲಯ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
86. ಪ್ರದೇಶದಲ್ಲಿ ಆರೋಗ್ಯ ಸಂಸ್ಥೆಗಳನ್ನು ಬಲವರ್ಧನೆ ಮಾಡಿ ಸ್ಥಳೀಯರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತಾಗಲು ಆರೋಗ್ಯ ಕೇಂದ್ರ ನಿರ್ಮಾಣ, ತಾಲೂಕು-ಜಿಲ್ಲಾ ಆಸ್ಪತ್ರೆ ನಿರ್ಮಾಣ, ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಸಲಕರಣೆ ಪೂರೈಕೆಗೆ 2013-14 ರಿಂದ 2023-24ರ ವರೆಗೆ ಸುಮಾರು 916 ಕೋಟಿ ರೂ. ಅನುದಾನ ಒದಗಿಸಿದೆ.
87. ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಏಕ ಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು 8,290 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮನೆಗಳ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಈಗಾಗಲೇ ಶೇ. 81.3 ರಷ್ಟು ಪ್ರಗತಿ ಸಾಧಿಸಲಾಗಿದೆ. ಇದರ ಜೊತೆಗೆ ಈ ಜಿಲ್ಲೆಗಳಲ್ಲಿ 1.5 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು 17.36 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ. ವಿದ್ಯುತ್ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 618 ಕೋಟಿ ರೂ. ಅನುದಾನ ಒದಗಿಸಿದ್ದೇವೆ. ಕೆ.ಪಿ.ಟಿ.ಸಿ.ಎಲ್. ವತಿಯಿಂದ 945 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಕಾಮಗಾರಿ ಆರಂಭಗೊಂಡಿದೆ.
88. ಈ ಹಿಂದೆ ಆಡಳಿತ ನಡೆಸಿದ್ದ ಸರ್ಕಾರ ಅಶಿಸ್ತು, ಭ್ರಷ್ಟಾಚಾರ, ಮುಂತಾದವುಗಳ ಮೂಲಕ ರಾಜ್ಯವನ್ನು ಅಧಃಪತನದತ್ತ ಕೊಂಡೊಯ್ದಿತ್ತು. ಬಜೆಟ್ನಲ್ಲಿ ಅನುದಾನ ಘೋಷಿಸದೆ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳನ್ನು ತೆಗೆದುಕೊಂಡಿತ್ತು. ಇದು ಸಾಲದೆಂಬಂತೆ ಕೇಂದ್ರ ಸರ್ಕಾರವು ನಮಗೆ ನ್ಯಾಯಯುತವಾಗಿ ಕೊಡಬೇಕಾದುದನ್ನು ಕೊಡದೆ ವಂಚನೆ ಮಾಡಿದೆ. ಇಷ್ಟೆಲ್ಲದರ ನಡುವೆಯೂ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದೆ. ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ ಒದಗಿಸುತ್ತಿದೆ. ರಸ್ತೆ, ನೀರಾವರಿ, ಆರೋಗ್ಯ, ಶಿಕ್ಷಣ ಮುಂತಾದವುಗಳನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಿದೆ. ಇಷ್ಟರ ನಡುವೆಯೂ ನಮ್ಮ ಸರ್ಕಾರವು ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ತನ್ನ ಬದ್ಧತೆಯನ್ನು ಮೆರೆದಿದೆ.
89. ದಿನಾಂಕ: 28.11.2014 ರಂದು 10 ವರ್ಷಗಳ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಯ ನಂತರ ಇಂದು ಸಂಜೆ ಕಲಬುರಗಿಯಲ್ಲಿ ಅತ್ಯಂತ ಮಹಾತ್ವಾಕಾಂಕ್ಷೆಯ ಸಚಿವ ಸಂಪುಟ ಸಭೆಯನ್ನು ನಡೆಸುತ್ತಿದ್ದೇವೆ. ಸದರಿ ಸಭೆಯಲ್ಲಿ ಈ ಭಾಗದ ಶಿಕ್ಷಣ, ಆರೋಗ್ಯ, ಸಾರಿಗೆ, ನೀರಾವರಿ, ಪ್ರವಾಸೋದ್ಯಮ ಅಭಿವೃದ್ಧಿ, ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಮಗೆ ತಿಳಿಸಲು ಹರ್ಷಿಸುತ್ತೇನೆ.
90. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಮತ್ತು 371ಜೆ ಕಾಯ್ದೆಯ ದಶಮಾನೋತ್ಸವದ ಈ ಸಂದರ್ಭದಲ್ಲಿ ಮತ್ತೊಮ್ಮೆ ತಮ್ಮೆಲ್ಲರಿಗೂ ಶುಭ ಕೋರುತ್ತಾ, ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗದ ಹೊರತು ರಾಜ್ಯದ ಅಭಿವೃಧ್ಧಿ ಅಸಾಧ್ಯ. ಇಲ್ಲಿನ ಜನರ ತಲಾದಾಯ ವೃದ್ಧಿ ಜೊತೆಗೆ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ನಮ್ಮ ಗುರಿಯಾಗಿದೆ. ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಬದ್ಧರಾಗಿ ದೃಢಸಂಕಲ್ಪ ಮಾಡುವುದರ ಮೂಲಕ ನವ ಭಾರತ ಮತ್ತು ನವ ಕರ್ನಾಟಕ ನಿರ್ಮಿಸೋಣ.
ಇದನ್ನೂ ನೋಡಿ: ವಿಚ್ಛಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದು ನಿಲ್ಲಬೇಕು – ಸಿದ್ದರಾಮಯ್ಯ