ಕಲ್ಲಡ್ಕದ ಭಯೋತ್ಪಾದಕ ಹೇಳಿದ ಹಾಗೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ: ಬಿ ಕೆ ಹರಿಪ್ರಸಾದ್ ಆರೋಪ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸೇರಿದಂತೆ ವರ್ಗಾವಣೆಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ. ವರ್ಗಾವಣೆಯು ಲಕ್ಷ-ಕೋಟಿ ರೂಪಾಯಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಜ್ಯದ ಪತ್ರಿಕೆಗಳು ಸುದ್ದಿ ಮಾಡುತ್ತಿವೆ. ವರ್ಗಾವಣೆಯ ಹಣ ನೇರವಾಗಿ ಸಂಘಪರಿವಾರದ ಕೇಶವ ಕೃಪಕ್ಕೆ ಸಂದಾಯವಾಗುತ್ತಿದೆ. ಕಲ್ಲಡ್ಕದ ಭಯೋತ್ಪಾದಕ ಒಬ್ಬರು ಹೇಳಿದ ಹಾಗೆ ವರ್ಗಾವಣೆ ನಡೆಯುತ್ತಿರುವುದು ದುರಂತ ಎಂದು ಆರ್‌ಎಸ್‌ಎಸ್ ನ ಕಲ್ಲಡ್ಕ ಪ್ರಭಾಕರ್ ಭಟ್ಟರ ಹೆಸರು ಹೇಳದೆ ಬಿಜೆಪಿ ಸರ್ಕಾರದ ವಿರುದ್ಧ ವಿಧಾನ ಪರಿಷತ್ತಿ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಕುರಿತ ವಿಷಯದಲ್ಲಿ ನಿಯಮ 68ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿ ಕೆ ಹರಿಪ್ರಸಾದ್, ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪೊಲೀಸ್ ಇಲಾಖೆಗಳ ಲಂಚ, ಭ್ರಷ್ಟಾಚಾರದ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸುತ್ತಿದ್ದಾರೆ. ನೇಮಕಾತಿ, ವರ್ಗಾವಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನ ನಿಯಮಗಳನ್ನ ಗಾಳಿಗೆ ತೂರಿ ಸರ್ಕಾರ ವರ್ಗಾವಣೆ ನಡೆಸುತ್ತಿದೆ. ಹಣ ಕೊಟ್ಟು ವರ್ಗಾವಣೆ ಆದ ಅಧಿಕಾರಿಗಳು ಪೊಲೀಸ್ ಠಾಣೆಗಳಲ್ಲಿ ಲಂಚ ತೆಗೆದುಕೊಳ್ಳದೆ ಕೆಲಸಗಳನ್ನೇ ಮಾಡುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಇನ್ಸೆಪೆಕ್ಟರ್ ಒಬ್ಬರು ಗೂಗಲ್ ಪೇ ಮೂಲಕ, ಫೋನ್ ಪೇ ಮೂಲಕ ಹಣ ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸ್ ಕೂಡ ತಾಂತ್ರಿಕವಾಗಿ ಅಪ್ಡೇಟ್ ಆಗಿ ಲಂಚ ಸ್ವೀಕರಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುದೆ ಸರ್ಕಾರ ಕುಮ್ಮಕ್ಕು ನೀಡಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಪೊಲೀಸ್ ಅಧಿಕಾರಿಗಳನ್ನು ವರ್ಷಕ್ಕೊಮ್ಮೆ ವರ್ಗಾವಣೆ ನಡೆಸುತ್ತಿರುವುದರ ಹಿಂದೆ ಲಕ್ಷ-ಕೋಟಿ ಲಂಚದ ಹಣ ಅಕ್ರಮ ನಡೆಯುತ್ತಿದೆ. ಸರ್ಕಾರ ಎಲ್ಲದಕ್ಕೂ ಸಾಕ್ಷಿ ಕೇಳುತ್ತಿದೆ, ಹಾಗಾದ್ರೆ ಸರ್ಕಾರ ನಿಮ್ಮದೇ ಇರುವಾಗ ತನಿಖಾ ಏಜೆನ್ಸಿಗಳಿಂದ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಇತ್ತೀಚೆಗೆ ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ʻಕಾಣದ ಕೈಗಳು ಇಂತಹ ಘಟನೆಗಳನ್ನು ನಡೆಸುತ್ತಿದೆʼ ಎಂಬ ಹೇಳಿಕೆ ನೀಡಿದೆ. ಅಂತಹ ಶಕ್ತಿಗಳು ಯಾವುದು ಎಂದು ಪತ್ತೆ ಹಚ್ಚಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ, ದೇಶದಲ್ಲಿ ನಿಮಿಷಕ್ಕೊಮ್ಮೆ, ಗಂಟೆಗೊಮ್ಮೆ, ದಿನವೂ ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಲೇ ಇದೆ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆಗೂ ಬರವುದಿಲ್ಲ, ಬರುವ ಪ್ರಕರಣಗಳು ಠಾಣೆಗಳಲ್ಲಿಯೇ ರಾಜೀ ಪಂಚಾಯಿತಿ ಮಾಡುವ ಕೆಲಸಗಳು ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಕಾರಣ ಪೊಲೀಸ್ ಇಲಾಖೆಗಳಲ್ಲಿ ಜಾತಿಯ ಆಧಾರದ ಮೇಲೆ, ಲಂಚದ ಮೇಲೆ, ಧರ್ಮದ ಆಧಾರದ ಮೇಲೆ ನಡೆಯುತ್ತಿರುವ ವರ್ಗಾವಣೆಯೇ ಕಾರಣ ಎಂದು ಬಿ ಕೆ ಹರಿಪ್ರಸಾದ್‌ ಆರೋಪಿಸಿದರು.

ನೇಮಕಾತಿಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪಿಎಸ್‌ಐ ಅಭ್ಯರ್ಥಿಗಳು ನೊಂದು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಪತ್ರಿಕೆಯಲ್ಲಿ ಅದರ ಬಗ್ಗೆ ಸುದೀರ್ಘವಾಗಿ ದಾಖಲೆ ಸಮೇತ ಪ್ರಕಟ ಮಾಡಿದೆ. ಅಭ್ಯರ್ಥಿಗಳು ಉತ್ತರ ಪತ್ರಿಕೆ ಕೊಡಿ ಎಂದು ಅರ್ಜಿ ಸಲ್ಲಿಸಿ ಎಂದು ಗೃಹ ಸಚಿವರು ಹೇಳಿಕೆ ಕೊಡುತ್ತಾರೆ, ಆದ್ರೆ ಪೊಲೀಸ್ ಮಹಾ ನಿರ್ದೇಶಕರು ಉತ್ತರ ಪತ್ರಿಕೆ ಕೊಡಲು ಆಗಲ್ಲ ಅಂತಾರೆ. ಅಭ್ಯರ್ಥಿಗಳನ್ನು ಯಾಕೆ ಪೊಲೀಸ್ ಇಲಾಖೆ ದಿಕ್ಕು ತಪ್ಪಿಸುತ್ತಿದೆ.

ಒಂದು ತಾಲೂಕಿನಲ್ಲೇ ಐವತ್ತಕ್ಕೂ ಹೆಚ್ಚು ‌ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂಬ ಆರೋಪವಿದೆ, ಇದರ ಸತ್ಯಾಸತ್ಯೆಗಳನ್ನ ರಾಜ್ಯದ ಜನರಿಗೆ ಅರ್ಥ ಮಾಡಲು ಇಲಾಖೆ ಸೋತಿದೆ. ನೇಮಕಾತಿಯಿಂದಲೇ ಅಕ್ರಮ, ಅನ್ಯಾಯ, ಭ್ರಷ್ಟಾಚಾರಗಳು ನಡೆಯುವಾಗ ರಾಜ್ಯದಲ್ಲಿ ಹೇಗೆ ಕಾನೂನು, ಸುವ್ಯವಸ್ಥೆ ಕಾಪಾಡುವುದಕ್ಕೆ ಸಾಧ್ಯ ಎಂದು ಆರೋಪಿಸಿದರು.

ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುವುದಕ್ಕೆ ಪೊಲೀಸರ ಸಂಬಳ ಕಡಿಮೆಯಾಗುವುದು ಕೂಡ ಕಾರಣ ಇರಬಹುದು. ಸರ್ಕಾರದ ಪ್ರಮುಖ ಇಲಾಖೆಯಲ್ಲಿಯೇ ಸುವ್ಯವಸ್ಥೆ ತರುವಲ್ಲಿ ಸರ್ಕಾರ ಸೋತಿದೆ ಎಂದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Donate Janashakthi Media

Leave a Reply

Your email address will not be published. Required fields are marked *