ಕಲಾವಿದ ಮೋಹನ ಸೋನ : ಒಂದು ನುಡಿ ನಮನ

–   ವಾಸುದೇವ ಉಚ್ಚಿಲ

ನಾಡಿನ ಖ್ಯಾತ ಚಿತ್ರಕಲಾವಿದರೂ ರಂಗಕರ್ಮಿಗಳೂ ಆಗಿದ್ದ ಮೋಹನ ಸೋನ ಅಕ್ಟೋಬರ 12 ರಂದು ನಿಧನರಾಗಿದ್ದಾರೆ. ಸುಳ್ಯ ತಾಲೂಕಿನ ಸೋಣಂಗೇರಿ ನಡುಮನೆ ರೈತ ಕುಟುಂಬ ಅವರದು. ಮಂಗಳೂರಿನಲ್ಲಿ ಶಿಕ್ಷಕ ತರಬೇತಿ ಪಡೆಯುವಾಗಲೇ ಚಿತ್ರಕಲಾ ಶಿಕ್ಷಣವನ್ನೂ ಪಡೆದರು. ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಅಲ್ಪಕಾಲ ಸುಳ್ಯದ ದೊಡ್ಡತೋಟ ಶಾಲೆಯಲ್ಲಿ ಶಿಕ್ಷಕರಾಗಿರುವಾಗಲೇ ಅವರ ಚಿತ್ರಕಲಾ ಹಾಗೂ ರಂಗಪ್ರತಿಭೆಗಳು ಅನಾವರಣಗೊಂಡವು. ಮುಂದೆ ವಿಟ್ಲದ ಸಿಪಿಸಿಆರ್‍ಐ ಕೇಂದ್ರ ಕೃಷಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅವಧಿಯಲ್ಲಿ ಅವರು ಚಿತ್ರಕಲಾವಿದರೂ ರಂಗಕರ್ಮಿಗಳೂ ಆಗಿ ಖ್ಯಾತರಾದರು.

1984 ರಲ್ಲಿ ಖ್ಯಾತ ಚಿತ್ರಕಲಾವಿದ ಜಾನ್ ದೇವರಾಜ್ ಅವರ ಬಳಗದಲ್ಲಿ ಮಂಗಳೂರಿನಲ್ಲಿ ರಸ್ತೆಬದಿ ಚಿತ್ರಪ್ರದರ್ಶನ ನಡೆದಾಗಲೇ, ಮೋಹನ ಸೋನ ಬಣ್ಣದ ಗಾರುಡಿಗ ಎಂದು ಸಿದ್ಧವಾಯಿತು. ಜಿಲ್ಲೆಯ ಚಿತ್ರಕಲಾವಿದರ ಬಳಗದೊಂದಿಗೆ 1990ರ ಸಂಪೂರ್ಣ ಸಾಕ್ಷರತಾ ಆಂದೋಲನಕ್ಕೆ ಪೂರಕವಾಗಿ 5 ದಿನಗಳ ಚಿತ್ರಕಲಾ ಜಾಥಾ ಅವರು ಮಾಡಿಸಿದರು. 1993 ರಲ್ಲಿ ಅವರು ತಮ್ಮ ಮನೆಯಲ್ಲಿ ಏರ್ಪಡಿಸಿದ್ದ ಕಲಾಶಿಬಿರದಲ್ಲಿ ರಾಜ್ಯದ ಹಲವರು ಚಿತ್ರಕಲಾವಿದರು ಸಾಹಿತಿ ಶಿವರಾಮ ಕಾರಂತರ ಬಗ್ಗೆ ಚಿತ್ರಗಳನ್ನು ರಚಿಸಿದ್ದನ್ನು ಬಳಸಿಕೊಂಡು, ‘ಚಿತ್ರ ಕಾರಂತ’ ಎಂಬ ಚಿತ್ರಕಲಾ ಜಾಥಾವನ್ನು ದ.ಕ.ಜಿಲ್ಲಾದ್ಯಂತ ನಡೆಸಿದರು. ಪುತ್ತೂರಿನಲ್ಲಿ ನಡೆದ ಜಾಥಾದ ಉದ್ಘಾಟನಾ ಸಮಾರಂಭದಲ್ಲಿ ಶಿವರಾಮಕಾರಂತರೂ, ಖ್ಯಾತ ಚಿತ್ರಕಲಾವಿದ ಕೆ.ಕೆ.ಹೆಬ್ಬಾರರೂ ಭಾಗವಹಿಸಿದ್ದು ವಿಶೇಷ. ಈ ಜಾಥಾ ಆ ಸಂದರ್ಭ ಕೋಟಾದಲ್ಲಿ ನಡೆದ 2 ದಿನಗಳ ‘ಕಾರಂತ ಉತ್ಸವ’ದಲ್ಲೂ ಪ್ರದರ್ಶನ ನೀಡಿತು. ಜಾಥಾ ಹಿಂದಿರುಗಿ ಸೋಣಂಗೇರಿಯಲ್ಲಿ ಸಮಾಪನಗೊಂಡಾಗ ಖ್ಯಾತ ರಂಗನಿರ್ದೇಶಕರಾದ ಬಿ.ವಿ.ಕಾರಂತರೂ ಅದರಲ್ಲಿ ಭಾಗವಹಿಸಿದ್ದರು. ಈ ವೇಳೆಗೆ ಮೋಹನ ಸೋನರ ಮನೆ ‘ಬಯಲು ಚಿತ್ರಾಲಯ’ವೆಂದು ಪ್ರಚಾರ ಪಡೆಯಿತು. ಕಾರಣ ರಾಜ್ಯದ ಕಲಾವಿದರು ಅಲ್ಲಿನ 40 ಮನೆಗಳಲ್ಲಿ ಹತ್ತಾರು ದಿನ ಉಳಿದು ತಮ್ಮ ಚಿತ್ರ ರಚನೆ ಮಾಡಿದ್ದರು. ಆ ಮನೆಗಳಲ್ಲಿ ಆ ಕಲಾಕೃತಿಗಳು ಈಗಲೂ ಇವೆ.

1994 ರಲ್ಲಿ ಸೋಣಂಗೇರಿಯ ಮೋಹನ ಸೋನರ ಮನೆ ತೋಟಗಳ ಮಣ್ಣಿನ ದರೆ (ಕಂಪೌಂಡ್) ಮೇಲೆ 13 ಭಾಗಗಳಲ್ಲಿ ಶಿವರಾಮ ಕಾರಂತರ ಕೃತಿ ‘ಚೋಮನ ದುಡಿ’ ಮೂಡಿ ಬಂತು. ಮಣ್ಣಿನ ಗೋಡೆ ಮೇಲೆ ಸಿಮೆಂಟಲ್ಲಿ ಮಾಡಿದ ಉಬ್ಬುಶಿಲ್ಪ. ರಾಜ್ಯದ ಹಲವು ಕಲಾವಿದರು ಆ ಊರಲ್ಲಿ ಕೆಲ ದಿನ ಇದ್ದು ಈ ಮಹಾನ್ ಕೃತಿ ರಚಿಸಿದ್ದರು. ಮಣ್ಣಿನ ಗೋಡೆ ಮೇಲಿರುವ ಈ ಕೃತಿ ಈಗ ಶಿಥಿಲವಾಗಿದ್ದರೂ, ಐದಾರು ವರ್ಷಗಳ ವರೆಗೆ ವೀಕ್ಷಣೀಯವಾಗಿತ್ತು. ಆ ಕಲೋತ್ಸವ ಸೋನರ ಮನೆಯಲ್ಲೂ ಸಮೀಪದ ಶಾಲೆಯಲ್ಲೂ ಸಾಹಿತ್ಯ, ರಂಗಭೂಮಿ, ವಿಚಾರಸಂಕಿರಣಗಳೊಂದಿಗೆ ನಡೆದಿದ್ದು, ರಾಜ್ಯದ ಹಲವೆಡೆಗಳಿಂದ ಕಲಾಸಕ್ತರು ಸೋಣಂಗೇರಿಯ ಹಳ್ಳಿಗೆ ಆಗಮಿಸಿದ್ದರು.

ಮೋಹನ ಸೋನರ ರಂಗ ಚಟುವಟಿಕೆಗಳು 1979ರಲ್ಲಿ ದೊಡ್ಡತೋಟ ಶಾಲೆಯಲ್ಲಿದ್ದಾಗಲೇ ಆರಂಭವಾಗಿದ್ದವು. ಕುರಾಸೋವಾನ ‘ರಾಶೋಮನ್’ ಆಧರಿಸಿದ ‘ದಿಡ್ಡಿಬಾಗಿಲು’ ಆಗಲೇ ನಾಟಕವಾಡಿದ್ದರು. ಸಮುದಾಯ ಪ್ರಥಮ ಸಾಂಸ್ಕøತಿಕ ಜಾಥಾ 1979ರಲ್ಲಿ ಸುಳ್ಯಕ್ಕೆ ಬಂದಾಗ ಅದರಲ್ಲಿ ಸೇರಿಕೊಂಡರು.  1981 ರಲ್ಲಿ ಸಮುದಾಯ ರಾಜ್ಯ ತಂಡದ ಭಾಗವಾಗಿ ಭೋಪಾಲದ ಬೀದಿನಾಟಕ ಉತ್ಸವದಲ್ಲಿ ಭಾಗವಹಿಸಿದ್ದರು. ಸುಳ್ಯದ ಅಭಿನಯ ತಂಡದೊಂದಿಗೆ, ಸುಬ್ರಹ್ಮಣ್ಯ ಕಾಲೇಜಿನ ತಂಡದೊಂದಿಗೆ ಮತ್ತು ಅವರು ವೃತ್ತಿ ನಿರತರಾಗಿದ್ದ ವಿಟ್ಲದ ರಂಗತಂಡದೊಂದಿಗೆ ಹಲವಾರು ನಾಟಕಗಳಲ್ಲಿ ಪ್ರಧಾನವಾಗಿ ರಂಗವಿನ್ಯಾಸಕಾರರಾಗಿ, ಬೆಳಕು ಬಣ್ಣಗಳ ನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ. ಅವರು ರಂಗದಲ್ಲಿ ಮೂಡಿಸಿದ ಬೆಳಕು, ರಂಗವಿನ್ಯಾಸಗಳು ನೋಡುಗನಿಗೆ ವರ್ಣಚಿತ್ರದಂತೆ ಕಾಣುತ್ತಿತ್ತು. ಶಾಲಾ ರಜಾದಿನಗಳಲ್ಲಿ ವಿಟ್ಲದಲ್ಲಿ ಆರು ವರ್ಷ, ಸೋಣಂಗೇರಿಯಲ್ಲಿ 8 ವರ್ಷ, ಸುಬ್ರಹ್ಮಣ್ಯ ಕಾಲೇಜಿನಲ್ಲಿ 2 ವರ್ಷ ರಂಗ ಶಿಬಿರಗಳನ್ನು ನಡೆಸಿದ್ದಾರೆ. ಶಿಬಿರಗಳಲ್ಲಿ ನಾಟಕಗಳನ್ನೂ ರೂಪಿಸಿದ್ದಾರೆ. ಕೆಲವೇ ನಾಟಕಗಳನ್ನು ಅವರು ಸ್ವತ: ನಿರ್ದೇಶಿಸಿದ್ದರೂ, ಅವಂತೂ ಅಪೂರ್ವ ರಂಗ ಕೃತಿಗಳೆನಿಸಿವೆ. 1986 ರಲ್ಲಿ ವಿಟ್ಲದಲ್ಲಿ ಅವರು ನಿರ್ದೇಶಿಸಿದ್ದ ‘ಚೋಮ’, ಅರೆ ಭಾಷೆಯಲ್ಲಿ ಬರೆದು ನಿರ್ದೇಶಿಸಿದ ತೇಜಸ್ವಿಯವರ ‘ಕರ್ವಾಲೋ’, ಗಾರ್ಕಿಯ ಕಥೆ ಆಧರಿಸಿದ ‘ಮಕರಚುಂದ್ರ’, ಅಬ್ಬಕ್ಕ ರಾಣಿಯರ ಕಥಾನಕ ‘ಮಣ್ಣಿನಗೋಡೆ’, ‘ಕೆರೆಗೆ ಹಾರ’ ಆಧರಿಸಿದ ‘ಭಾಗೀರಥಿ’, ನಾಲ್ಕು ವರ್ಷಗಳ ಹಿಂದೆ ಪುತ್ತೂರಿನ ಬಾಲವನದಲ್ಲಿ ಪ್ರದರ್ಶಿಸಿದ ಕಾರಂತರ ‘ಮೂಕಜ್ಜಿಯ ಕನಸುಗಳು’ ಮೋಹನ ಸೋನ ಸ್ವತ: ನಿರ್ದೇಶಿಸಿದ ಅಪೂರ್ವ ರಂಗಕೃತಿಗಳಾಗಿವೆ.

ಸೋಣಂಗೇರಿಯ ಹಳ್ಳಿ ಜನರಿಗೆ ರಾಜ್ಯದ ಶ್ರೇಷ್ಠ ನಾಟಕಗಳನ್ನು ಪರಿಚಯಿಸಿದ್ದು ಮೋಹನ ಸೋನರೇ. ಬೆಂಗಳೂರು ಸಮುದಾಯದ ಸಂಕ್ರಾಂತಿ, ಮಹಾಚೈತ್ರ, ಬಿ.ಜಯಶ್ರೀ ಅವರ ‘ಲಕ್ಷಾಪತಿ ರಾಜನ ಕಥೆ’ ಕೂಡಾ ಹಳ್ಳಿ ಜನರ ಮನ ಗೆಲ್ಲುವಲ್ಲಿ ಸೋನರ ಉತ್ಸಾಹವೇ ಕಾರಣ. ನೂರಾರು ಪುಸ್ತಕಗಳಿಗೆ ಅವರು ಮುಖಚಿತ್ರ, ಒಳಚಿತ್ರ ರಚಿಸಿದ್ದಾರೆ. ಪುತ್ತೂರಿನ ಕಾರಂತರ ಬಾಲವನದ ಅನೇಕ ಕಲಾ ಶಿಬಿರಗಳಲ್ಲಿ ಅವರ ಪಾತ್ರವಿದ್ದೇ ಇರುತ್ತಿತ್ತು – ಚಿತ್ರಕಲಾವಿದನಾಗಿ ಹಾಗೂ ರಂಗಕರ್ಮಿಯಾಗಿ. ಇವತ್ತೂ ಕಾರವಾರ ನಗರದಲ್ಲಿರುವ ಪ್ರವಾಸೀ ಆಕರ್ಷಣೆಯಾಗಿರುವ ‘ರಾಕ್ ಗಾರ್ಡನ್’ ರೂಪಿಸಿದ್ದು ಮೋಹನ್ ಸೋನ ಮತ್ತು ಅವರ ಕಲಾಗುರುವಿನ ಪುತ್ರರಾದ ಸುದೇಶ್ ಮಹಾನ್.

ಸಮುದಾಯ ಕರ್ನಾಟಕ ರಾಜ್ಯಮಟ್ಟದ ಕಲಾಶಿಬಿರ ಮತ್ತು ಪ್ರದರ್ಶನವೊಂದನ್ನು ಪುತ್ತೂರಲ್ಲಿ ವ್ಯವಸ್ಥೆಗೊಳಿಸುವ ಬಗ್ಗೆ ಮೋಹನ ಸೋನರು ಒಪ್ಪಿಕೊಂಡಿದ್ದರು. ಆದರೆ ಅದು ನಿಜವಾಗುವ ಮೊದಲೇ ಅವರು ಅಕಾಲದಲ್ಲಿ ತೀರಿಕೊಂಡಿದ್ದಾರೆ. ಅಲ್ಪ ಕಾಲದ ಅನಾರೋಗ್ಯ ಅವರನ್ನು ನಮ್ಮಿಂದ ದೂರವಾಗಿಸಿದೆ. ಆಗ ಅವರಿಗೆ ವಯಸ್ಸು 66 ವರ್ಷ ಮಾತ್ರ.

ಸದಾ ಮುಗ್ಧ ಮಂದಹಾಸದ, ಸರಳ ಸಜ್ಜನಿಕೆಯ, ನಿಗರ್ವಿ ಮೋಹನ ಸೋನ ಅವರು. ಯಾವ ಕಲಾಶಿಬಿರಗಳಲ್ಲೂ ಅವರು ಯಾರೊಂದಿಗೂ ದನಿ ಎತ್ತಿ ಮಾತಾಡಿದವರಲ್ಲ. ತಮ್ಮ ದೈತ್ಯ ಪ್ರತಿಭೆಯಿಂದಷ್ಟೇ ಕಲಾಸಕ್ತರನ್ನು ತಮ್ಮ ಕಡೆಗೆ, ತಮ್ಮ ಕಲಾಕೃತಿಗಳ ಕಡೆಗೆ ಸೆಳೆದವರು ಅವರು. ಅವರ ಸಜ್ಜನಿಕೆ ಅವರನ್ನು ಎಲ್ಲರೂ ಪ್ರೀತಿಸುವಂತೆ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *