ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲವಾಗುವಂತಹ ಕಾರ್ಯಗಳನ್ನು ಕೈಗೊಳ್ಳಲು ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೈಗಾರಿಕೆಗೆ ಅಗತ್ಯ ಭೂಮಿ ನೀಡಲು 22 ಸಾವಿರ ಎಕರೆಯನ್ನು ಸ್ವಾದೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ಸಚಿವ ಕೋಟಾ ಶ್ರೀನಿವಾಸಪೂಜಾರಿ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಪ್ರಕಾಶ್ ರಾಥೋಡ್ ಮಾತನಾಡಿ, ಕೈಗಾರಿಕೆಗಳಿಗೆ ತಮಿಳುನಾಡಿನಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚಿನ ಭತ್ಯೆ ನೀಡಲಾಗುತ್ತಿದೆ. ನಮ್ಮಲ್ಲಿ ಕೈಗಾರಿಕೆಗಳಿಗೆ ಅನುಮೋದನೆ ನೀಡಲು ಏಕಗವಾಕ್ಷಿ ಪದ್ಧತಿಯಡಿ ವಿಳಂಬವಾಗುತ್ತಿದೆ. ಅದಕ್ಕಾಗಿ ನಮ್ಮಲ್ಲಿ ಬಂಡವಾಳ ಹೂಡಿಕೆ ಮಾಡಲು ಬಂದ ಬಹಳಷ್ಟು ಕೈಗಾರಿಕೆಗಳು ತಮಿಳನಾಡಿಗೆ ವಲಸೆ ಹೋಗುತ್ತಿವೆ ಎಂದು ಆಕ್ಷೇಪಿಸಿದರು.
ಇದನ್ನು ಓದಿ: ಆಂದ್ರ ಮೂಲದ ಗುತ್ತಿಗೆದಾರರು ದೋಚಿದ್ದೆಷ್ಟು? ವಿಧಾನ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಮೂರು ವರ್ಷಗಳವರೆಗೂ ಯಾವ ರಹದಾರಿ ಇಲ್ಲದೆ ಕೈಗಾರಿಕೆ ಆರಂಭಿಸಬಹುದು, ಉತ್ಪಾದನೆ ಆರಂಭವಾದ ಬಳಿಕ ಮೂರು ಅಥವಾ ಕೈಗಾರಿಕೆ ಆರಂಭವಾದ ಮೂರು ವರ್ಷದಲ್ಲಿ ಅನುಮತಿ ಪಡೆದುಕೊಳ್ಳಬಹುದು. ಪರಿಸರ ಮಾಲಿನ್ಯ ಮಂಡಳಿ ಹೊರತುಪಡಿಸಿ ಉಳಿದ ಯಾವ ಅನುಮತಿಯೂ ಇಲ್ಲದೆ ಉದ್ಯಮ ಆರಂಭಿಸಬಹುದಾಗಿದೆ ಎಂದು ತಿಳಿಸಿದರು.
100 ಎಕರೆವರೆಗೂ ಯಾವುದೇ ದಾಖಲೆ ಇಲ್ಲದೆ ಕೈಗಾರಿಕೆಗಳನ್ನು ಪ್ರಾರಂಭ ಮಾಡಬಹುದಾಗಿದೆ. ನಮ್ಮಲ್ಲಿ ವಲಯವಾರು ಆದ್ಯತೆ ನೀಡಿದ್ದೇವೆ, ತಮಿಳುನಾಡು ಮೊದಲಿನಿಂದಲೂ ಉತ್ಪಾದನಾ ವಲಯಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಬಹಳಷ್ಟು ಉತ್ಪಾದನಾ ಕೈಗಾರಿಕೆಗಳು ಅಲ್ಲಿಗೆ ಹೋಗುತ್ತವೆ. ಅದರಲ್ಲಿ ವಿಶೇಷವಿಲ್ಲ. ನಮ್ಮ ಸರ್ಕಾರದ ಕೈಗಾರಿಕಾ ಸ್ನೇಹಿ ನೀತಿಗಳು ಎಲ್ಲಾ ರಾಜ್ಯಗಳಿಂತಲೂ ಉತ್ತಮವಾಗಿದೆ. ಸದಸ್ಯರು ಹೇಳುತ್ತಿರುವುದು ತಪ್ಪು ಮಾಹಿತಿಯಾಗಿದೆ ಸಚಿವ ಮಾಧುಸ್ವಾಮಿ ಆರೋಪಿಸಿದರು.
ಇದಕ್ಕೆ ಬೃಹತ್ ಮತ್ತು ಕೈಗಾರಿಕಾ ಸಚಿವರ ಪರವಾಗಿ ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಹಾಗೂ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, 2021-22ರಲ್ಲಿ 1,9564.53 ಸಾವಿರ ಕೋಟಿ ಬಂಡವಾಳ ಹರಿದು ಬರಲಿದ್ದು, 8,792 ಉದ್ಯೋಗಗಳು ಸೃಷ್ಟಿಯಾಗಲಿದೆ. ಏಕಗವಾಕ್ಷಿ ಯೋಜನೆಯಡಿ ಒಟ್ಟು 561 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 42,714 ಬಂಡವಾಳ ಹೂಡಿಕೆಯಾಗಲಿದೆ, 12,7203 ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಮುಂದಿನ ದಿನಗಳಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾಗಿ ಹೊಸದಾಗಿ 22 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದರು.