ಎಸ್.ವೈ. ಗುರುಶಾಂತ್
1954-55ರ ಕಾಲ. ಆಗ ಐಸೆನ್ ಹೋವರ್ ಅಮೆರಿಕದ ಅಧ್ಯಕ್ಷ. ಆತ ಅಪರಿಮಿತ ಸಂಗೀತಪ್ರೇಮಿ. ಸುಪ್ರಸಿದ್ಧ ಶಹನಾಯಿ ವಾದಕ ಬಿಸ್ಮಿಲ್ಲಾಖಾನ್ ರವರ ಶಹನಾಯಿಗೆ ಪೂರಾ ಮನ ಸೋತವ. ಹೀಗೊಮ್ಮೆ ಖಾನ್ ಸಾಹೇಬರಿಗೆ ಐಸೆನ್ ಹೋವರ್ ಕೇಳುತ್ತಾನೆ `ಖಾನ್ ಸಾಹೇಬರೇ, ನೀವು ನಮ್ಮ ದೇಶಕ್ಕೆ ಬಂದು ನೆನೆಸಬಾರದೇಕೆ? ನಿಮಗೆ ಎಲ್ಲಾ ವ್ಯವಸ್ಥೆಗಳನ್ನು ನಾನು ಮಾಡಿಕೊಡುತ್ತೇನೆ’
ಬಿಸ್ಮಿಲ್ಲಾ ಖಾನ್ ರವರಿಗೆ ಈ ಆಹ್ವಾನ ಅನಿರೀಕ್ಷಿತವಾಗಿತ್ತು ಎನ್ನುವುದು ನಿಜ. ಹಾಗೆ ಅವರು ನಸುನಕ್ಕು ಹೇಳುತ್ತಾರೆ `ಹೌದಾ ಸ್ವಾಮಿ, ಎಲ್ಲವನ್ನೂ ವ್ಯವಸ್ಥೆ ಮಾಡುವಿರಾ. ನನ್ನದು ದೊಡ್ಡ ಕುಟುಂಬ’
`ಆಗಲಿ, ನಿಮ್ಮ ಕುಟುಂಬದ ಆದಾಯದ ಎರಡರಷ್ಟು ನಾನು ವ್ಯವಸ್ಥೆ ಮಾಡುವೆ. ಅವರೂ ಸಂತಸದಲ್ಲಿ ಇರಬಹುದು. ನೀವೂ ಇರಬಹುದು’ ಹೋವರರಿಗೆ ಅವರ ಕುಟುಂಬದಲ್ಲಿ 54 ಸದಸ್ಯರು ಇರುವುದರ ಅರಿವಿದೆ. ಈ ದೊಡ್ಡ ಸಂಸಾರದ ನಿರ್ವಹಣೆಗೆ ತಗಲುವ ವೆಚ್ಚವು ಗೊತ್ತು. ಅದನ್ನು ಗಮನದಲ್ಲಿರಿಸಿ ಸಿರಿವಂತ ದೇಶದ ಅಧ್ಯಕ್ಷ ಎಲ್ಲ ವ್ಯವಸ್ಥೆ ಮಾಡುವ ಮಾತನಾಡಿದ್ದ. ಆದರೆ ಸಾಹೇಬರಿಗೆ ಈ ಮಾತು ಪ್ರೀತಿ, ಕಾಳಜಿ, ಭರವಸೆಗಳಿಂದ ಸಂತೋಷವಾಗಿಲ್ಲ. ಹೇಳಲು ಹಿಂಜರಿಕೆ, ಏನೋ ಚಡಪಡಿಕೆ. ಇದನ್ನು ಗಮನಿಸಿದ ಹೋವರ್ ‘ಮತ್ತೇನಾದರೂ ಆಗಬೇಕೇ? ಪ್ರಶ್ನೆ. ಸಾಹೇಬರನ್ನು ಬಿಡಬಾರದು, ಬಿಡಲಾಗದ ವರಾತ!
ಆಗ ಖಾನ್ ಸಾಹೇಬರು ಮ್ಲಾನ ಮುಖಭಾವದಿಂದ ಹೇಳುತ್ತಾರೆ ‘ಹೌದು ತಾವು ಎಲ್ಲವನ್ನು ವ್ಯವಸ್ಥೆ ಮಾಡಬಲ್ಲಿರಿ. ಮನೆ ಕೊಡುವಿರಿ. ಹಣ ಕೊಡುವಿರಿ. ಅವೆಲ್ಲ ಸಿಗುತ್ತವೆ ನಿಜ. ಆದರೆ ನನಗೊಂದು ಕೊರತೆ ಕಾಡುತ್ತಿದೆ ಅದನ್ನು ನೀವು ತುಂಬಿಸಿ ಕೊಡಬಲ್ಲಿರಾ?’ ಓ ಖಾನ್ ರವರದ್ದು ಅದೇನು ಕೋರಿಕೆ? ಏನಿದ್ದೀತು? ‘ಹೇಳಿ ಏನದು?’
‘ಅವೆಲ್ಲ ಸರಿ. ಆದರೆ ಪ್ರತಿ ಮುಂಜಾವಿನಲ್ಲಿ ನಾನು ಮನೆಯಿಂದ ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ ನಡೆದು ಹೋಗುವ ರಸ್ತೆಗಳ ಇಬ್ಬದಿಗಳಲ್ಲೂ ವಾರಣಾಸಿಯ ಜನ ನನ್ನನ್ನು ಮಾತನಾಡಿಸುತ್ತಾರೆ. ಹಾರೈಸುತ್ತಾರೆ. ವಿಶ್ವನಾಥನ ದೇಗುಲದಲ್ಲಿ ಶಹನಾಯಿ ನುಡಿಸಿ ನಮಿಸುತ್ತೇನೆ. ಆ ಬೀದಿಗಳು, ಈ ಜನರನ್ನು, ವಿಶ್ವನಾಥನ ದೇಗುಲ, ಈ ವಾರಣಾಸಿಯನ್ನು ನೀವು ಅಮೆರಿಕದಲ್ಲಿ ಕೊಡಬಹುದೇ?’
ಐಸೆನ್ ಹೋವರ್ ಅವರ ಬಾಯಿ ತೆರೆದೇ ಇತ್ತು! ಖಾನ್ ಸಾಹೇಬರು ಕೇಳಿದ ಎಲ್ಲವೂ ಕಣ್ಮುಂದೆ ಹಾದು ಹೋದವು. ಆದರೆ ಅಮೆರಿಕದಲ್ಲಿ ಇವನ್ನೆಲ್ಲ ಎಲ್ಲಿಂದ ತರುವುದು? ಖಾನ್ ರ ಹೃದಯ ಮಿಡಿತ ಅರ್ಥವಾಗಿತ್ತು. ಬಿಸ್ಮಿಲ್ಲಾಖಾನರ ಕಡಿದುಕೊಳ್ಳದ ಕರುಳ ಸಂಬಂಧದ ಎದುರು ಅಮೆರಿಕದ ಅಧ್ಯಕ್ಷ ಸೋತು ಹೋಗಿದ್ದ!
ಭಾರತೀಯ ಸಮಾಜ, ಸಂಸ್ಕೃತಿ ಎನ್ನುವುದು ಇಂತಹ ಸಾವಿರಾರು ದಿಗ್ಗಜರು, ಲಕ್ಷಾಂತರ ವಿಭಿನ್ನ ಸಂಗತಿಗಳಿಂದ ವೈವಿಧ್ಯತೆಗಳಿಂದ ಹುಲುಸಾಗಿ ಬೆಳೆದು, ಬೆಳಗುತ್ತಾ ನಿಂತಿದೆ. ಸಂಘಪರಿವಾರದಂತೆ ಸಂಸ್ಕೃತಿಯ ಬಗೆಗೆ ಬಹುದೊಡ್ಡ ವ್ಯಾಖ್ಯಾನ ಮಾಡಲು ನೆಲದ ಮಕ್ಕಳಿಗೆ ಬರದೇ ಇರಬಹುದು. ಆದರೆ ಬದುಕಿನ ಸಣ್ಣ ಸಂಗತಿಗಳ ಎಳೆಗಳಿಂದ ಬಹುದೊಡ್ಡ ಸಂಸ್ಕೃತಿಯ ಸಂದೇಶವನ್ನು ನೇಯ್ದಿದ್ದಾರೆ.
ನಾಡಿನ ಎಲ್ಲಾ ಮೂಲೆ ಮೂಲೆಗಳಲ್ಲಿಯೂ ಸೌಹಾರ್ದದ ಶಿಖರವನ್ನು ಕಟ್ಟಿ ನಿಲ್ಲಿಸಿದ್ದಾರೆ. ನಮ್ಮದು ಭಾಷೆ, ಧರ್ಮ-ಜಾತಿಗಳ ಗಡಿ ಮೀರಿದ ಬಹುತ್ವದ ಸಂಸ್ಕೃತಿ. ಅದರ ಬಲದ ನೆಲೆ ಇರುವ ಸಂಸ್ಕೃತಿ ಪರಿವಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಅದ್ದರಿಂದಲೇ ಅದರ ಧ್ವಂಸಕ್ಕೆ ಟೊಂಕಕಟ್ಟಿ ನಿಂತಿರುವುದು. ಬಹುರಾಷ್ಟ್ರೀಯ ಬಂಡವಾಳಕ್ಕೆ ಏಕರೂಪಿ ಮಾರುಕಟ್ಟೆ ಅಗತ್ಯ ಇರುವಂತೆ ಅಂತಹ ಮಾರುಕಟ್ಟೆಗೆ ಬಹುಸಂಸ್ಕೃತಿಯ ಆಚಾರ-ವಿಚಾರ ಅಭಿರುಚಿಯ ವೈರುಧ್ಯಗಳನ್ನು ಒಡೆದು ಏಕ ಚಿಂತನೆ ಅಭಿರುಚಿಗೆ ಅಗತ್ಯವಿರುವ ಚಿಂತನೆ ಮಾರುಕಟ್ಟೆಯ ಮನೋಭಾವ ನಿರೂಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಡವರು ದುರ್ಬಲರು ದುಡಿಯುವವರ ಜೀವ ಹಿಂಡಿ ಲಾಭಗಳಿಸುವ ಧಾವಂತದಲ್ಲಿದ್ದಾರೆ.
ಮತಧರ್ಮದ ಯಜಮಾನಿಕೆಯ ಹೇರಿಕೆಯಲ್ಲಿ ಜಾತಿ ವ್ಯವಸ್ಥೆಯ ಹಿರಿಮೆಯ ಪಾರಮ್ಯ ಅಡಗಿದೆ.
ಇಲ್ಲಿ ಮುಸ್ಲಿಮರು ಅಂಗಡಿ ಹಾಕಕೂಡದು ಎಂದು ಫರ್ಮಾನು ಹೊರಡಿಸಿರುವ ಕಾಪುವಿನ ಮಾರಿಗುಡಿಯಲ್ಲಿ ತಲೆತಲಾಂತರದಿಂದಲೂ ನಾದಸ್ವರ ನುಡಿಸುವುದು ಶೇಕ್ ಜಲೀಲ್ ಸಾಹೇಬರ ವಂಶಸ್ಥರು. ಏಳು ದಿನಗಳು ನಡೆಯುವ ಶೃಂಗೇರಿ ಕಿಗ್ಗದ ಋಷ್ಯಶೃಂಗ ಜಾತ್ರೆಯಲ್ಲಿ ಮಳೆ ದೇವರು ಎಂದು ಆರಾಧಿಸುವ ದೈವಕ್ಕೆ ನಡೆದುಕೊಳ್ಳುವವರು ಹಿಂದೂ-ಮುಸ್ಲಿಂ-ಜೈನ ಮುಂತಾದ ಧರ್ಮೀಯರು. ಶಿರಸಿಯ ಮಾರಿಕಾಂಬ ಜಾತ್ರೆಯಲ್ಲಿ ರಥ ಎಳೆಯಲು ಹಗ್ಗ ಕೊಡುವವರು ಮುಸ್ಲಿಂ ತೊನ್ಸೆ ಕುಟುಂಬ. ಇದನ್ನು ತಮ್ಮ ಪಾಲಿನ ಕರ್ತವ್ಯ ಎಂದು ಬಗೆದಿರುವ ಅವರು ಪಾರಂಪಾರಿಕವಾಗಿ ಅತ್ಯಂತ ಹೆಮ್ಮೆಯಿಂದ ನಿರ್ವಹಿಸುತ್ತಾರೆ. ಇಂತಹುದು ಒಂದೆರಡು ಕಡೆಗಳಲ್ಲಿ ಅಲ್ಲ, ನಾಡಿನ ತುಂಬಾ ತನ್ನದೇ ಆದ ವಿಶಿಷ್ಟವಾಗಿ ವ್ಯಾಪಿಸಿ ಜನಜೀವನದ ಒಳಗೆ ಹಾಸುಹೊಕ್ಕಾಗಿರುವ ಬಿಡಿಸಲಾಗದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಂಬಂಧಗಳು.
ಹಬ್ಬ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರು ಅಂಗಡಿಗಳನ್ನು ಹಾಕಬಾರದು, ವ್ಯಾಪಾರ ಮಾಡಕೂಡದು ಎಂದು ಅವರನ್ನು ದೂರವಾಗಿರಿಸುವ ಕೃತ್ಯಗಳು ಈ ವಾರದಲ್ಲಿಯೂ ಮುಂದುವರೆದಿವೆ. ಹೊಸ, ಹೊಸ ಪ್ರದೇಶಗಳಿಗೂ ವಿಸ್ತರಿಸುತ್ತಿವೆ. ಕಾಪು, ಶಿವಮೊಗ್ಗದ ಬಳಿಕ ಈಗ ಬೆಂಗಳೂರಿನ ನೆಲಮಂಗಲ, ಹಾಸನದ ಬೇಲೂರು, ಹೀಗೆ ಸಾಂಕ್ರಾಮಿಕ ರೋಗದಂತೆ ಇದು ಹಬ್ಬುತ್ತಿದೆ ಇದರಲ್ಲಿ ಆರೆಸ್ಸೆಸ್-ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಗಳು ಸಕ್ರಿಯವಾಗಿ ತೊಡಗಿವೆ. ಬೆಳಗಾವಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ರಾಜ್ಯದ ಎಲ್ಲಾ ಮುಸ್ಲಿಮರೊಂದಿಗೆ ವ್ಯಾಪಾರವನ್ನೇ ಮಾಡಕೂಡದು, ಏನನ್ನು ಖರೀದಿಸಬಾರದು ಎಂಬ ಬಹಿಷ್ಕಾರ ಆಂದೋಲನವನ್ನು ರಾಜ್ಯದಾದ್ಯಂತ ನಡೆಸುವುದಾಗಿ ಹೇಳಿದ್ದಾರೆ. ಹೀಗೆ ಹಬ್ಬ, ಜಾತ್ರೆಗಳಲ್ಲಿ ಮುಸ್ಲಿಮರನ್ನು ವ್ಯಾಪಾರದಿಂದ ದೂರವಿರಿಸಿದ ಜಾಗಗಳಲ್ಲಿ ವಿಶ್ವಹಿಂದೂ ಪರಿಷತ್-ಬಜರಂಗದಳ ಮುಂತಾದ ಸಂಘಪರಿವಾರದ ಅವರ ನಡುವೆ ವ್ಯಾಪಾರ ಹಂಚಿಕೆ ಮಾಡಿರುವುದು ತಿಳಿದುಬಂದಿದೆ. ಹೀಗಾಗಿ ಮೂಲದಲ್ಲಿ ಈ ವಿವಾದ ಈಗಿರುವ ವ್ಯಾಪಾರಿಗಳನ್ನು ಅಲ್ಲಿಂದ ಹೊರದಬ್ಬಿ ಅದನ್ನು ಕಬಳಿಸುವ ಹುನ್ನಾರವು ಆಗಿದೆ.
ಈ ಪ್ರಕರಣಗಳ ಬಗ್ಗೆ ಪ್ರಶ್ನೆಗಳನ್ನೆತ್ತಿ ಸರಕಾರ ಮಧ್ಯಪ್ರವೇಶಿಸಲು ವಿರೋಧ ಪಕ್ಷಗಳ ನಾಯಕರು ಕೋರಿದಾಗ ಸರಕಾರದ ಉತ್ತರ ಎಲ್ಲವನ್ನೂ ಬಯಲುಗೊಳಿಸಿದೆ! ಮುಜರಾಯಿ ಇಲಾಖೆಯ ಧಾರ್ಮಿಕ ದತ್ತಿ ಕಾನೂನಿಗೆ 2002ರಲ್ಲಿ ತಂದ ತಿದ್ದುಪಡಿಯನ್ವಯ ಹಿಂದೂಯೇತರರಿಗೆ ಅವಕಾಶ ಇಲ್ಲವಂತೆ. ಹಾಗಾಗಿ ಕಾನೂನಾತ್ಮಕವಾಗಿ ನಾವು ಏನು ಮಾಡಲಾಗುವುದಿಲ್ಲ ಮತ್ತು ನಿರ್ಬಂಧದ ಕುರಿತು ಎತ್ತಿರುವ ಪ್ರಶ್ನೆ ಹಾಗೂ ಕೈಗೊಂಡಿರುವ ಕ್ರಮಗಳು ಸರಿಯಾಗಿವೆ ಎಂದು ಬೇಲಿಗೆ ಓತಿಕ್ಯಾತ ಸಾಕ್ಷಿ ಎಂಬಂತೆ ಪ್ರಮಾಣ ಪತ್ರ ನೀಡಿ ಬೆಂಬಲಿಸಿದ್ದಾರೆ. ಅಂದರೆ ಕಾಪುವಿನಿಂದ ಆರಂಭಗೊಂಡಿರುವ ವಿವಾದ ರಾಜ್ಯದಾದ್ಯಂತ ಸಾಮಾಜಿಕ ಸಾಮರಸ್ಯ, ಶಾಂತಿ, ಕದಡುವ, ಪ್ರಚೋದಿಸುವ ಕೃತ್ಯಗಳಿಗೆ ಸರ್ಕಾರವೇ ಮೌನ ಬೆಂಬಲ ನೀಡಿದೆ ಎನ್ನುವುದು ಎದ್ದು ಕಾಣುತ್ತದೆ.
ದ್ವೇಷದ ಕಿಚ್ಚು ಹಚ್ಚುವುದನ್ನು ತೀವ್ರವಾಗಿ ವಿರೋಧಿಸಿರುವ ವಿವಿಧ ಮತಧರ್ಮಗಳ ಪ್ರಮುಖರ ವಿವೇಕದ ಮಾತುಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಂದರೆ ಸಮಾಜದಲ್ಲಿ ಧಾರ್ಮಿಕ ವಿಭಜನೆ ಮತ್ತು ಮತ ಕ್ರೋಡೀಕರಣಕ್ಕೆ ಅಶಾಂತಿ, ಆತಂಕಗಳು ಬೆಳೆದರೆ ಮಾತ್ರ ಸಾಧ್ಯ. ಮುಂದಿನ ಚುನಾವಣೆಯಲ್ಲಿ ನಿರಾತಂಕವಾಗಿ ಓಟುಗಳ ಬೆಳೆಯನ್ನು ಕುಯ್ದುಕೊಳ್ಳಬಹುದು ಎನ್ನುವ ದುರಾಲೋಚನೆ ಇರುವುದು ಸ್ಪಷ್ಟ.
ಎಲ್ಲಾ ದಿಕ್ಕುಗಳಿಂದಲೂ ಸಂಘ ಪರಿವಾರ ನಡೆಸುತ್ತಿರುವ ದಾಳಿ ಅದಕ್ಕೆ ಆಡಳಿತ ಯಂತ್ರದ ಬೆಂಬಲ ಗಮನಿಸಿದರೆ ದೊಡ್ಡ ಅನಾಹುತಕ್ಕೆ ಪೂರ್ವಸಿದ್ಧತೆಯ ಆರಂಭ ಎನ್ನುವಂತೆ ಕಾಣುತ್ತಿದೆ. ಜನರ ಸಮಸ್ಯೆಗಳಿಗೆ ಕಿಂಚಿತ್ತೂ ಪರಿಹಾರ ನೀಡದ ಬಿಜೆಪಿ ಸರ್ಕಾರ ಕೋಮು ವಿದ್ವೇಷದ ಹುಟ್ಟಿಸಲು ಅಲ್ಪಸಂಖ್ಯಾತರನ್ನು ನೇರ ಗುರಿಮಾಡಿ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ.
ಇಂತಹ ಅಪಾಯಕಾರಿ ಆಟಗಳನ್ನು ಬಿಜೆಪಿ ಸರಕಾರ ನಿಲ್ಲಿಸಬೇಕು. ಸಾಮರಸ್ಯ ಕದಡುವ ಶಕ್ತಿಗಳ ಮೇಲೆ ಕಠಿಣ ಕ್ರಮಕೈಗೊಂಡು ನಿಯಂತ್ರಿಸಬೇಕು. 2002ರ ಕಾಯ್ದೆಯು ಕೇವಲ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ಕಟ್ಟಡ, ಆವರಣ ವ್ಯಾಪ್ತಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಅದರಂತೆ ನೋಡಿದರೂ ಹಿಂದೂಯೇತರರು ದೇವಸ್ಥಾನದ ಬಳಿಯೂ ಇರಬಾರದು ಎನ್ನುವುದಕ್ಕೆ ಯಾವುದೇ ಅರ್ಥವಿಲ್ಲ. ಒಂದು ವೇಳೆ ಅಂತಹ ನಿರ್ಬಂಧ ಇದ್ದಲ್ಲಿ ಅದನ್ನು ಕಾನೂನಿನಿಂದ ತೆಗೆದು ಎಲ್ಲ ನಾಗರೀಕರಿಗೂ ಸಮಾನ ಅವಕಾಶ ಕಲ್ಪಿಸಿಕೊಡಬೇಕು. ಆ ಧಾರ್ಮಿಕ ಪರಿಸರದಲ್ಲಿನ ವಾತಾವರಣಕ್ಕೆ ಭಂಗ ಬರದಂತೆ ಕಾಯ್ದುಕೊಳ್ಳುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಭ್ಯಂತರ ಇರಕೂಡದು.
ಸಂಘಪರಿವಾರದ ಅತಿರೇಕದ ವರ್ತನೆಗಳು ಉದ್ವೇಗದ ವಾತಾವರಣ ಸೃಷ್ಟಿಸಲ್ಪಡುತ್ತಿವೆ. ತಾರತಮ್ಯ ಎಸಗುವುದು ನಮ್ಮ ನಾಗರೀಕರ ದೇಶದ ಪ್ರತಿ ಪ್ರಜೆಗಳ ಹಕ್ಕಿಗೆ ಸಂಚಕಾರ ತರುವ ಅಮಾನವೀಯ ಕೃತ್ಯಗಳು. ಸರಕಾರ ಈಗಲಾದರೂ ಎಚ್ಚೆತ್ತು ಅಂತಹ ಶಕ್ತಿಗಳಿಗೆ ಕಡಿವಾಣ ಹಾಕಬೇಕು. ಎಲ್ಲರಿಗೂ ಸಮಾನ ಅವಕಾಶ ಮತ್ತು ಸಾಮರಸ್ಯ ಕಾಯ್ದುಕೊಂಡು ಹೋಗುವಂತೆ ಕ್ರಮವಹಿಸಬೇಕು. ಭಾರತೀಯ ಸಮಾಜದ ವಿಶಿಷ್ಟ ಜನ ಸಂಯೋಜನೆಯಲ್ಲಿ ಈ ಸಂಬಂಧಗಳು ಕಡಿದು ಹೋಗಲಾರವು.