ಚಾರಿತ್ರಿಕ ಜನಾಂದೋಲನದ ಮತ್ತೊಂದು ಅಕ್ಷರ ಕಾವ್ಯ- ಚಾರಿತ್ರಿಕ ರೈತ ಮುಷ್ಕರದ  ಸಾಹಿತ್ಯಕ ಚಿತ್ರಣ- ” ಕದನ ಕಣ,,,,,”

 

 – ನಾ ದಿವಾಕರ

(ಎಚ್ ಆರ್ ನವೀನ್ ಕುಮಾರ್ ಅವರ “ ಕದನ ಕಣ ದೆಹಲಿ ಗಡಿಗಳಲ್ಲಿ ರೈತರೊಂದಿಗೆ ” ಪುಸ್ತಕದ ಬಗ್ಗೆ ಮನದ ಮಾತುಗಳು )

ಭಾರತದಲ್ಲಿ ಪ್ರತಿರೋಧದ ಪರಂಪರೆಗೆ ಸುದೀರ್ಘ ಇತಿಹಾಸವೇ ಇದೆ. ಸ್ಥಾಪಿತ ವ್ಯವಸ್ಥೆಯ ವಿರುದ್ಧ, ಯಥಾಸ್ಥಿತಿ ಬಯಸುವ ಆಳುವ ವ್ಯವಸ್ಥೆಯ ವಿರುದ್ಧ ಮತ್ತು ಇತಿಹಾಸದ ದಿಕ್ಕನ್ನು ಸದಾ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಹವಣಿಸುವ ಅಧಿಕಾರ ಕೇಂದ್ರಗಳ ಆಧಿಪತ್ಯದ ನೆಲೆಗಳ ವಿರುದ್ಧ ಭಾರತದ ಜನಸಾಮಾನ್ಯರು ಶತಮಾನಗಳಿಂದಲೂ ಹೋರಾಡುತ್ತಲೇ ಬಂದಿದ್ದಾರೆ.  ಚಾರ್ವಾಕನಿಂದ ಅಂಬೇಡ್ಕರ್‍ವರೆಗೆ ಈ ಪ್ರತಿರೋಧಧ ನೆಲೆಗಳು ತನ್ನ ಬಾಹುಗಳನ್ನು ವಿಸ್ತರಿಸುತ್ತಲೇ ಬಂದಿದೆ. ಚರಿತ್ರೆಯ ವಿಭಿನ್ನ ಕಾಲಘಟ್ಟಗಳಲ್ಲಿ ಸಾಮಾಜಿಕಾರ್ಥಿಕ ಸಂದರ್ಭಗಳು ಬದಲಾದಂತೆಲ್ಲಾ, ಸಾಂಸ್ಕೃತಿಕ ನೆಲೆಗಳು ವಿಘಟನೆಯಾದಂತೆಲ್ಲಾ ಈ ದೇಶದ ಪ್ರಬಲ ವರ್ಗಗಳು ತಮ್ಮದೇ ಆದ ರೀತಿಯಲ್ಲಿ ಸಮಾಜದ ಮೇಲೆ ತಮ್ಮ ಹಿಡಿತವನ್ನು ಸಾಧಿಸುತ್ತಾ ಬಂದಿವೆ. ಈ ಹಿಡಿತವನ್ನು ಸಡಿಲಗೊಳಿಸುವ ಪ್ರಯತ್ನಗಳು ಸಂಪೂರ್ಣ ಯಶಸ್ಸು ಸಾಧಿಸಲಾಗದಿದ್ದರೂ, ತಳಮಟ್ಟದ ಸಾಮಾಜಿಕ ಮತ್ತು ಸಾಂಸ್ಕøತಿಕ ದನಿಗಳು ಮೇಲಿರುವವರ ಅಸ್ತಿತ್ವವನ್ನು ಪ್ರಶ್ನಿಸುತ್ತಾ, ಬುನಾದಿಯನ್ನು ಅಲುಗಾಡಿಸುತ್ತಾ ಬಂದಿರುವುದು ವಾಸ್ತವ.

ಶ್ರೇಣೀಕೃತ ವ್ಯವಸ್ಥೆಯ ಜಾತಿ ಶ್ರೇಷ್ಠತೆ, ತತ್ಪೂರಕ ಮೇಲರಿಮೆಯ ಅಹಮಿಕೆ ಮತ್ತು ಊಳಿಗಮಾನ್ಯ ಧೋರಣೆಯ ಯಜಮಾನಿಕೆಯನ್ನು ಇಂದಿಗೂ ತನ್ನ ಸುಭದ್ರ ಗುರಾಣಿಯಂತೆ ಬಳಸುತ್ತಿರುವ ಭಾರತದ ಪ್ರಬಲ ವರ್ಗಗಳು ಜಾತಿ, ಮತ, ಭಾಷೆ, ಸಂಸ್ಕೃತಿ ಮತ್ತು ಧರ್ಮಗಳ ನೆಲೆಯಲ್ಲಿ ಜನಸಾಮಾನ್ಯರ ಪ್ರಾಮಾಣಿಕ ದನಿಯನ್ನು ಅಡಗಿಸುತ್ತಲೇ ಬಂದಿವೆ. 200 ವರ್ಷಗಳ ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದ ನಂತರ ಭಾರತ ತನ್ನದೇ ಆದ ಸಂವಿಧಾನವನ್ನು ರೂಪಿಸಿಕೊಂಡು ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿ ರೂಪುಗೊಂಡರೂ ಸಹ, ಭಾರತದ ಆಡಳಿತ ವ್ಯವಸ್ಥೆ ಈ ಜಾತಿ ಪಾರಮ್ಯ ಮತ್ತು ಊಳಿಗಮಾನ್ಯ ಶ್ರೇಷ್ಠತೆಯ ಧೋರಣೆಯಿಂದ ಮುಕ್ತವಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಎನ್ನುವುದು ಸಮಸ್ತ ಜನಕೋಟಿಯನ್ನು ಪ್ರತಿನಿಧಿಸುವ ಸಾಂವಿಧಾನಿಕ ಸಾಂಸ್ಥಿಕ ರೂಪದ ವ್ಯಕ್ತಿ ಎಂದೇ ಪರಿಗಣಿಸಲ್ಪಡುತ್ತದೆ.

ಹಾಗಾಗಿ ಸಂಸದೀಯ ಪ್ರಜಾತಂತ್ರದಲ್ಲಿ ಜನರಿಂದಲೇ ಆಯ್ಕೆಯಾದ ಸರ್ಕಾರವೊಂದು ಆಯ್ಕೆ ಮಾಡಿದ ಜನತೆಯ ಆಶಯಗಳಿಗನುಗುಣವಾಗಿ ತನ್ನ ಆಡಳಿತ ನೀತಿಗಳನ್ನು ರೂಪಿಸಬೇಕಾಗುತ್ತದೆ. ಸಾಮಾಜಿಕಾರ್ಥಿಕ ಸಮಾನತೆ, ಸಾಂಸ್ಕೃತಿಕ ಸ್ವಾಯತ್ತತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ಸಾಕಾರಗೊಳಿಸುವ ರೀತಿಯಲ್ಲೇ ಸರ್ಕಾರಗಳು ಸಂವಿಧಾನದಡಿ ರೂಪಿಸಲಾಗಿರುವ ನಿಯಮಗಳನುಸಾರ ತಮ್ಮ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಮತ್ತು ರಾಜಕೀಯ ಆಡಳಿತ ನೀತಿಗಳನ್ನು ರೂಪಿಸಬೇಕಾಗುತ್ತದೆ. ಸಾಮಾಜಿಕ ಸಮಾನತೆಯನ್ನು ಭಂಗಗೊಳಿಸುವ, ಸಾಂಸ್ಕೃತಿಕ ಸ್ವಾಯತ್ತತೆಗೆ ಧಕ್ಕೆ ಉಂಟುಮಾಡುವ, ಆರ್ಥಿಕ ಅಸಮಾನತೆಗಳನ್ನು ಪೋಷಿಸುವ ಯಾವುದೇ ಆಡಳಿತ ನೀತಿಗಳು ಸಹಜವಾಗಿಯೇ ಜನಸಾಮಾನ್ಯರ ಪ್ರತಿರೋಧ ಎದುರಿಸಬೇಕಾಗುತ್ತದೆ. ಈ ಪ್ರತಿರೋಧದ ನೆಲೆಗಳೇ ಕಳೆದ 74 ವರ್ಷಗಳ ಕಾಲ ಭಾರತದ ಆಳುವ ವರ್ಗಗಳನ್ನು ಸದಾ ಎಚ್ಚರದಿಂದಿರಿಸಿರುವುದು ಸ್ಪಷ್ಟ.

ಇಂತಹುದೇ ಒಂದು ಎಚ್ಚರಿಸುವ ಕೆಲಸವನ್ನು ಈ ದೇಶದ ರೈತರು ಸಾಧಿಸಿ ತೋರಿಸಿರುವುದು ದೆಹಲಿಯಲ್ಲಿ ಒಂದು ವರ್ಷದ ಕಾಲ ನಡೆದ ರೈತಮುಷ್ಕರದ ಮೂಲಕ. ದೇಶದ ಶೇ 60ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡುವ ಕೃಷಿ ಕ್ಷೇತ್ರದಲ್ಲಿ, ವ್ಯವಸಾಯ ಮತ್ತು ಪೂರಕ ಚಟುವಟಿಕೆಗಳ ಮೂಲಕವೇ ತಮ್ಮ ಬದುಕು ಕಂಡುಕೊಳ್ಳುತ್ತಿರುವ ಶೇ 86ರಷ್ಟು ಕೃಷಿಕ ಸಮುದಾಯಗಳ ಜೀವನೋಪಾಯಕ್ಕೇ ಸಂಚಕಾರ ತರುವಂತಹ ಕೃಷಿ-ಆರ್ಥಿಕ ನೀತಿಗಳನ್ನು ಜಾರಿಗೊಳಿಸಲು ಮುಂದಾದ ನರೇಂದ್ರ ಮೋದಿ ಸರ್ಕಾರದ ನಿರಂಕುಶಾಧಿಕಾರದ ಧೋರಣೆಯನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಒಂದು ವರ್ಷದ ಕಾಲ ನಿರಂತರ ಮುಷ್ಕರ ಹೂಡಿದ ಈ ದೇಶದ ರೈತ ಸಮುದಾಯ ಭಾರತದ ಜನಾಂದೋಲನದ ಪರಂಪರೆಗೆ ಒಂದು ಹೊಸ ಆಯಾಮವನ್ನು ನೀಡಿರುವುದು ನಿಸ್ಸಂದೇಹ ಸತ್ಯ.  ಸಾಂವಿಧಾನಿಕ ನೈತಿಕತೆಯನ್ನೂ ಮರೆತು, ಸಂಸದೀಯ ಪ್ರಜಾತಂತ್ರದ ನಿಯಮಗಳನ್ನೂ ಉಲ್ಲಂಘಿಸಿ, ರೈತ ಸಮುದಾಯದ ಮೇಲೆ ಹೇರಲಾದ ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಲಕ್ಷಾಂತರ ರೈತರು ನಡೆಸಿದ ಸುದೀರ್ಘ ಮುಷ್ಕರ ಆಳುವ ವರ್ಗಗಳಿಗೆ ಜನಾಭಿಪ್ರಾಯದ ಮಹತ್ವವನ್ನೂ ಮನದಟ್ಟುಮಾಡಿರುವುದು ಸತ್ಯ.

ತೀವ್ರವಾದ ಚಳಿ, ಎಡಬಿಡದ ಮಳೆ, ನೆತ್ತಿ ಸುಡುವ ಬಿಸಿಲು ಮತ್ತು ಶೀತ ಗಾಳಿ ಮುಂತಾದ ನೈಸರ್ಗಿಕ ವೈಪರೀತ್ಯಗಳು ರೈತ ಸಮುದಾಯಕ್ಕೆ ನಿತ್ಯ ಬದುಕಿನ ಸವಾಲುಗಳು. ಈ ಸವಾಲುಗಳನ್ನು ದಿನನಿತ್ಯ ಎದುರಿಸುತ್ತಲೇ ರೈತರು ತಮ್ಮ ಬದುಕಿನ ಅರ್ಧಭಾಗವನ್ನು ಮಣ್ಣಿನ ನಡುವೆಯೇ ಕಳೆಯುತ್ತಾರೆ. ಮಣ್ಣಿನೊಡನೆ ಒಡನಾಟದಲ್ಲೇ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ದೈನಂದಿನ ಜೀವನದ ಲೌಕಿಕ ಸುಖಲೋಲುಪತೆಯನ್ನು ಕೊಂಚಮಟ್ಟಿಗಾದರೂ ತ್ಯಾಗ ಮಾಡುತ್ತಾ ದೇಶದ ಕೋಟ್ಯಂತರ ಜನರಿಗೆ ಅಗತ್ಯವಾದ ಅನ್ನಾಹಾರವನ್ನು ಬೆಳೆಯುವುದರಲ್ಲಿ ತೊಡಗಿರುತ್ತಾರೆ. ಈ ದೈಹಿಕ ಶ್ರಮದ ನಡುವೆಯೇ ತಮ್ಮ ಐಹಿಕ ಹಿತವಲಯವನ್ನೂ ಸೃಷ್ಟಿಸಿಕೊಂಡು ನಿಸರ್ಗದೊಡನೆ ಗುದ್ದಾಡುತ್ತಾ ತಮ್ಮ ಬದುಕು ಸವೆಸುತ್ತಾರೆ.

ಇಂತಹ ಒಂದು ರೈತ ಸಮುದಾಯ ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಆಡಳಿತ ವ್ಯವಸ್ಥೆಯ ಮತ್ತು ಆಳುವ ವರ್ಗಗಳ ಬೌದ್ಧಿಕ ವೈಪರೀತ್ಯಗಳನ್ನು ಎದುರಿಸಬೇಕಾಗಿ ಬಂದಿದ್ದು ದುರಂತವಾದರೂ ವಾಸ್ತವ. ಕೇಂದ್ರ ಸರ್ಕಾರ ಸಂಸದೀಯ ಮೌಲ್ಯಗಳನ್ನೂ ಗಾಳಿಗೆ ತೂರಿ, ಇಡೀ ದೇಶ ಕೋವಿದ್ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಸಂಸತ್ತಿನಲ್ಲಿ ಚರ್ಚೆಯನ್ನೂ ನಡೆಸದೆ, ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿದ ಮೂರು ಕರಾಳ ಕೃಷಿ ಕಾಯ್ದೆಗಳು ಈ ಮುಖಾಮುಖಿಗೆ ಕಾರಣವಾಗಿದ್ದವು. ತಮ್ಮ ಹಕ್ಕೊತ್ತಾಯಗಳಿಗಾಗಿ ರಸ್ತೆಗಿಳಿದಿದ್ದ ರೈತಾಪಿಯೊಡನೆ ಸಂಧಾನ ನಡೆಸಬೇಕಿದ್ದ ಒಕ್ಕೂಟ ಸರ್ಕಾರ ಅನುಸಂಧಾನಕ್ಕೂ ಮುಂದಾಗದೆ ಹೋರಾಟವನ್ನು ಹತ್ತಿಕ್ಕಲು ಬಲಪ್ರದರ್ಶನಕ್ಕೆ ಮುಂದಾಗಿದ್ದು ಇತಿಹಾಸದ ಕ್ರೌರ್ಯಗಳಲ್ಲೊಂದು.

ಒಂದು ವರ್ಷದ ಕಾಲ ನಡೆದ ರೈತ ಮುಷ್ಕರದ ಈ ಮೇಲಿನ ಚಿತ್ರಣವನ್ನು ಜನಸಾಮಾನ್ಯರ ಮುಂದೆ ಕಣ್ಣಿಗೆ ಕಟ್ಟುವಂತೆ, ಆಳುವವವರ ಮುಖಕ್ಕೆ ರಾಚುವಂತೆ ಪ್ರಸ್ತುತಪಡಿಸುವ ದಿಟ್ಟ ಪ್ರಯತ್ನಗಳು ನಡೆದಿದ್ದೇ ಈ ಅವಧಿಯ ಒಂದು ಮಹತ್ವದ ಸಾಧನೆ. ಕೇಸರಿ ಹರವೂ ಅವರ  “ ಕಿಸಾನ್ ಸತ್ಯಾಗ್ರಹ ” ಸಾಕ್ಷ್ಯ ಚಿತ್ರ ದೃಶ್ಯ ಮಾಧ್ಯಮದ ಮೂಲಕ ಈ ಚಾರಿತ್ರಿಕ ಗಳಿಗೆಗಳನ್ನು ಸೆರೆಹಿಡಿದಿದ್ದರೆ, ಎಚ್ ಅರ್ ನವೀನ್ ಕುಮಾರ್ ಅವರ “ ಕದನ ಕಣ- ದೆಹಲಿ ಗಡಿಗಳಲ್ಲಿ ರೈತರೊಂದಿಗೆ ” ಎಂಬ ಪುಟ್ಟ ಕೃತಿ ರೈತ ಮುಷ್ಕರದ ವಿಭಿನ್ನ ಆಯಾಮಗಳನ್ನು, ಸವಾಲುಗಳನ್ನು ಅಕ್ಷರಗಳಲ್ಲಿ, ಭಾವಚಿತ್ರಗಳ ಮೂಲಕ ಸೆರೆಹಿಡಿದು ಜನರ ಮುಂದಿರಿಸಿದೆ. ಹೋರಾಟಗಳನ್ನು ಆಳುವವರಿಗೆ ತಲುಪಿಸುವುದಷ್ಟೇ ಮುಖ್ಯವಾದುದು ಈ ಹೋರಾಟಗಳ ಹಿನ್ನೆಲೆಯನ್ನು ಮತ್ತು ಮುಖ್ಯ ಭೂಮಿಕೆಯನ್ನು ಬಾಧಿತ ಜನತೆಗೆ ತಲುಪಿಸುವುದು.

ಸರ್ಕಾರಗಳನ್ನು, ಸರ್ಕಾರಗಳ ಆಡಳಿತ ನೀತಿಗಳನ್ನು ಪ್ರಶ್ನಿಸಿ, ವಿರೋಧಿಸುವುದೇ ದೇಶದ್ರೋಹ ಎಂದು ಭಾವಿಸುವ ಕಾಲಘಟ್ಟದಲ್ಲೂ “ಕಿಸಾನ್ ಸತ್ಯಾಗ್ರಹ”ದಂತಹ ಚಿತ್ರಗಳು,             “ಕದನಕಣ”ದಂತಹ ಪುಸ್ತಕಗಳು ಹೊರಬರುತ್ತಿರುವುದು ಪ್ರತಿರೋಧದ ದನಿಗಳಿಗೆ ಪ್ರೋತ್ಸಾಹದಾಯಕವಾಗಿಯೇ ಕಾಣುತ್ತದೆ. ಪುರುಷೋತ್ತಮ ಬಿಳಿಮಲೆ ಅವರ ಉತ್ತೇಜಕ ಮುನ್ನುಡಿಯೊಂದಿಗೆ ಆರಂಭವಾಗುವ “ಕದನ ಕಣ”ದ ಪಯಣ ಓದುಗರನ್ನು ಒಂಬತ್ತು ದಿನಗಳ ಕಾಲ ರೈತಮುಷ್ಕರದ ನಡುವೆ ಕರೆದೊಯ್ದು ನಿಲ್ಲಿಸುತ್ತದೆ.  ಕರ್ನಾಟಕ ಪ್ರಾಂತ ರೈತ ಸಂಘದ ಪ್ರತಿನಿಧಿಯಾಗಿ ಮುಷ್ಕರನಿರತ ರೈತರ ಹೆಜ್ಜೆ ಗುರುತುಗಳನ್ನು ಸೆರೆಹಿಡಿಯಲು ಹೊರಟಿದ್ದ ನವೀನ್ ಕುಮಾರ್ ಮತ್ತು ಸಂಗಾತಿ ಜಗದೀಶ್ ಸೂರ್ಯ, ಹತ್ತು ಅಧ್ಯಾಯಗಳಲ್ಲಿ ಇಡೀ ಮುಷ್ಕರದ ಒಳಸ್ವರೂಪವನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಜನತೆ ದೆಹಲಿಯಿಂದಲೇ ನೇರವಾಗಿ ರೈತರೊಡನೆ ಸಂವಾದ ನಡೆಸುವ ಪ್ರಯತ್ನವನ್ನೂ ಲೇಖಕರು ಮಾಡಿದ್ದು, ಜನಶಕ್ತಿ ಮೀಡಿಯಾ ಮೂಲಕ ಹೋರಾಟದ ಮಜಲುಗಳನ್ನು ಜನರಿಗೆ ತಲುಪಿಸಿದ್ದರು. ಹೋರಾಟಗಳನ್ನು ರೋಚಕತೆಯೊಂದಿಗೆ, ವೈಭವೀಕರಿಸಿ ಚಿತ್ರಿಸುವ ಅಥವಾ ದಾಖಲಿಸುವ ವಾಣಿಜ್ಯ ಮಾಧ್ಯಮಗಳ ಜಾಡಿನಿಂದ ಹೊರಬಂದು, ಒಂದು ತಾತ್ವಿಕ ನೆಲೆಯಲ್ಲಿ ಹೋರಾಟದ ಹಿಂದಿನ ಮೂಲ ಆಶಯಗಳು ಮತ್ತು ಸಮಸ್ಯೆಗಳ ಆಳವನ್ನು ಹಿಡಿದಿಡುವ ಪ್ರಯತ್ನ ಮಾಡಿರುವುದು    “ ಕದನ ಕಣ ” ಪುಸ್ತಕದ ಹಿರಿಮೆ.

ತಮ್ಮ ದೆಹಲಿ ಪಯಣದ ಹಾದಿಯಲ್ಲಿ ತಾವು ಗಮನಿಸಿದ ಶ್ರಮಿಕರ ಕೆಲವು ಹಿತಕರ ಕ್ಷಣಗಳನ್ನೂ ಲೇಖಕರು ರೈಲ್ವೆ ನಿಲ್ದಾಣದ ಸ್ವಚ್ಚತಾ ಕಾರ್ಮಿಕರ ಕೆಲಸದ ನಡುವೆ ಗುರುತಿಸುತ್ತಾರೆ. ಇದು ಕೃತಿ ಲೇಖಕರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ತೋರುತ್ತದೆ. ಇದರೊಟ್ಟಿಗೇ ರೈತರ ಮಕ್ಕಳು ಮತ್ತು ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಒಂದು ಸ್ಥೂಲ ಚಿತ್ರಣವನ್ನೂ ರೈಲಿನಲ್ಲೇ ಪಯಣಿಸುತ್ತಿದ್ದ ಒಂದು ಕುಟುಂಬದ ಮೂಲಕ ಲೇಖಕರು ವಿವರಿಸುತ್ತಾರೆ. ಕೋವಿದ್ ಲಾಕ್‍ಡೌನ್ ಸಂದರ್ಭದಲ್ಲಿ ಈ ದೇಶದ ಕೋಟ್ಯಂತರ ವಲಸೆ ಕಾರ್ಮಿಕರು ಎದುರಿಸಿದ ಸವಾಲಿನ ಕ್ಷಣಗಳ ಒಂದು ಝಲಕ್ “ ಕದನ ಕಣ ” ಪುಸ್ತಕದ ಪುಟಗಳಲ್ಲಿ ಕಾಣುವುದು ಸ್ತುತ್ಯಾರ್ಹ.

ದೆಹಲಿಯ ರೈತಮುಷ್ಕರವನ್ನು ಸೆರೆಹಿಡಿಯುವುದೆಂದರೆ ಒಕ್ಕೂಟ ಸರ್ಕಾರದ ಆಡಳಿತ ಕ್ರೌರ್ಯ ಮತ್ತು ನಿರ್ದಯತೆಯನ್ನು ಸೆರೆಹಿಡಿಯುವುದೇ ಆಗಿರುತ್ತದೆ. “ಕಿಸಾನ್ ಸತ್ಯಾಗ್ರಹ” ಚಿತ್ರದಲ್ಲಿ ಇದರ ದೃಶ್ಯಗಳನ್ನು ನೋಡಬಹುದಾದರೆ, “ಕದನ ಕಣ” ಈ ಕ್ರೌರ್ಯವನ್ನು ಅಕ್ಷರಗಳಲ್ಲಿ ಹಿಡಿದಿಡುತ್ತದೆ. ಹೊರದೇಶದ ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಗಡಿಗಳನ್ನು ನಿರ್ಮಿಸುವಂತೆ ಆಂತರಿಕ ವಿರೋಧವನ್ನು ತಡೆಗಟ್ಟಲೂ ಗಡಿಗಳನ್ನು ನಿರ್ಮಿಸುವ ಒಂದು ಹೊಸ ವಿಧಾನವನ್ನು ನರೇಂದ್ರ ಮೋದಿ ಸರ್ಕಾರ ದೆಹಲಿಯಲ್ಲಿ ರೂಪಿಸಿತ್ತು. ಮುಳ್ಳುಬೇಲಿಗಳು, ಸಿಮೆಂಟ್ ಗೋಡೆಗಳು, ಜೆಸಿಬಿ ಮತ್ತು ಬೃಹತ್ ವಾಹನಗಳು, ರಸ್ತೆ ಕಂದಕಗಳು ಮತ್ತು ಈ ಅಡ್ಡಿಗಳನ್ನು ನಿರ್ವಹಿಸಲು ನಿಯೋಜಿಸಲಾದ ಸೇನೆ ಹಾಗೂ ಪೊಲೀಸ್ ಸಿಬ್ಬಂದಿ.

ಬಹುಶಃ ಅಂತರಿಕ ಯುದ್ಧದ ಸಂದರ್ಭದಲ್ಲೂ ಈ ರೀತಿಯ ರಕ್ಷಣಾ ವಿಧಾನಗಳನ್ನು ಕಾಣುವುದು ಕಷ್ಟ. ಆದರೆ ದೆಹಲಿಯಲ್ಲಿ ರೈತರು ಇಂತಹ ಕ್ರೂರ ಬೇಲಿಗಳನ್ನು ಎದುರಿಸಬೇಕಾಗಿತ್ತು.  ಈ ಪರಿಸ್ಥಿತಿಯನ್ನು ರೈತರ ಬಾಯಿಂದಲೇ  ಕೇಳಿ ತಿಳಿದುಕೊಂಡು ದಾಖಲಿಸುವ ಮೂಲಕ ನವೀನ್ ಕುಮಾರ್, “ ದೆಹಲಿಯಲ್ಲಿ ನೆರೆದಿದ್ದು ರೈತರೇ ಅಲ್ಲ ” ಎಂದು ವಾದಿಸುವವರಿಗೆ ದಾಖಲೆ ಸಮೇತ ಉತ್ತರ ನೀಡಿದ್ದಾರೆ.

ಶಹಜಹಾಂಪುರದಲ್ಲಿ ಕಂಡ ಮಿನಿ ಇಂಡಿಯಾದ ದೃಶ್ಯಗಳನ್ನು ಭಾವಚಿತ್ರಗಳ ಮೂಲಕ ಸೆರೆಹಿಡಿದು ಅಲ್ಲಿ ನೆರೆದಿದ್ದ ರೈತರೊಂದಿಗೆ ಮಾತುಕತೆ ನಡೆಸುವ ಮೂಲಕ ನವೀನ್ ಕುಮಾರ್ ಮತ್ತು ಸಂಗಡಿಗರು ಸುದೀರ್ಘ ಹೋರಾಟದ ಯಶಸ್ಸಿನ ಕಾರಣಗಳನ್ನೇ ತೆರೆದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಸುದೀರ್ಘ ಜನಾಂದೋಲನವನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಾತ್ಯಕ್ಷಿಕೆಯನ್ನು  ಶಹಜಹಾಂಪುರದ ಬಗ್ಗೆ ಇರುವ ಎರಡು ಅಧ್ಯಾಯಗಳಲ್ಲಿ ಹಿಡಿದಿಡಲಾಗಿದೆ. ದೇಶದ ಗಡಿ ಕಾಯುವ ಯೋಧರು ಮತ್ತು ಯೋಧರ ಕುಟುಂಬದವರು ರೈತ ಮುಷ್ಕರದ ಒಂದು ಭಾಗವಾಗಿದ್ದುದನ್ನೂ ಈ ಅಧ್ಯಾಯಗಳಲ್ಲಿ ಸೆರೆಹಿಡಿಯಲಾಗಿದೆ. ಇತಿಹಾಸ ಪ್ರಸಿದ್ಧ ಪಲ್ವಲ್ ಗಡಿ ಪ್ರದೇಶದಲ್ಲಿ ನೆರೆದಿದ್ದ ಜನಸ್ತೋಮ ಮತ್ತು ಹೋರಾಟದ ಮುನ್ನಡೆಗೆ ಅಲ್ಲಿ ವ್ಯಕ್ತವಾಗಿದ್ದ ಜನಸ್ತೋಮದ ಐಕಮತ್ಯವನ್ನು ಲೇಖಕರು “ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ” ಎಂಬ ಕವಿವಾಣಿಯೊಂದಿಗೆ ದಾಖಲಿಸಿದ್ದಾರೆ.

ದೆಹಲಿ ರೈತ ಮುಷ್ಕರದಲ್ಲಿ ಕ್ರಾಂತಿ ಸಂಭವಿಸಲಿಲ್ಲ ಆದರೆ ಒಂದು ಜನಕ್ರಾಂತಿಯ ಮುನ್ನಡೆಗೆ ಅವಶ್ಯವಾದ ಹೆಜ್ಜೆ ಗುರುತುಗಳನ್ನು ಇಲ್ಲಿ ಗುರುತಿಸಬಹುದಿತ್ತು.  ಈ ಹೆಜ್ಜೆ ಗುರುತುಗಳನ್ನು ದಾಖಲಿಸುವಲ್ಲಿ “ ಕದನ ಕಣ ” ಯಶಸ್ವಿಯಾಗಿದೆ. ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಸಂದರ್ಶನದಲ್ಲಿ ಹೇಳಿರುವಂತೆ ದೆಹಲಿ ರೈತ ಮುಷ್ಕರ ಒಂದು ಬಯಲು ವಿಶ್ವವಿದ್ಯಾಲಯವೇ ಎನ್ನುವುದು ಅತಿಶಯೋಕ್ತಿಯಾಗಲಾರದು. ಏಕೆಂದರೆ ಈ ಹೋರಾಟದಲ್ಲಿ ಕಲಿತದ್ದು ಎಷ್ಟಿದೆಯೋ ಇದರಿಂದ ಕಲಿಯುವುದೂ ಇನ್ನೂ ಹೆಚ್ಚು. ಸರ್ಕಾರಗಳ, ಆಡಳಿತ ವ್ಯವಸ್ಥೆಯ ಮತ್ತು ಕಾನೂನು ಪಾಲಕರ ನಿರ್ದಯತೆ, ಕ್ರೌರ್ಯ ಮತ್ತು ದಬ್ಬಾಳಿಕೆಯನ್ನು ಜನಸಾಮಾನ್ಯರು ಹೇಗೆ ಎದುರಿಸಬಹುದು ಎನ್ನುವುದನ್ನು ಇಡೀ ಹೋರಾಟ ಬಿಂಬಿಸುತ್ತದೆ.

ಈ ಹೋರಾಟದ ಹೆಜ್ಜೆಗಳನ್ನು 150 ಪುಟಗಳ ಪುಟ್ಟ ಹೊತ್ತಿಗೆಯಲ್ಲಿ, ಸಜೀವ ಭಾವಚಿತ್ರಗಳೊಡನೆ ದಾಖಲಿಸುವ ಮಹತ್ವದ ಕೆಲಸವನ್ನು ಎಚ್ ಆರ್ ನವೀನ್‍ಕುಮಾರ್ ಮತ್ತು ಸಂಗಡಿಗರು “ಕದನ ಕಣ”ದ ಮೂಲಕ ಮಾಡಿದ್ದಾರೆ. ದೆಹಲಿ ರೈತ ಮುಷ್ಕರ ರೈತರ ಪಾಲಿಗೆ ಕೇಸರಿ ಹರವೂ ಹೇಳಿರುವಂತೆ ಸತ್ಯಾಗ್ರಹವೂ ಹೌದು, ನವೀನ್ ಕುಮಾರ್ ಹೇಳಿರುವಂತೆ ಈ ಮುಷ್ಕರದ ಭೂಮಿಕೆ ಕದನ ಕಣವೂ ಹೌದು. ಆಳುವವರೊಡನೆ ಕದನ ಮತ್ತು ಹಕ್ಕು ಸಾಧನೆಗಾಗಿ ಸತ್ಯಾಗ್ರಹ ಇವೆರಡರ ಸಮ್ಮಿಲನವನ್ನು ಇಡೀ ಹೋರಾಟದಲ್ಲಿ ಕಾಣಬಹುದಿತ್ತು. ಈ ಎರಡೂ ಆಯಾಮಗಳನ್ನು ನವೀನ್ ಕುಮಾರ್ ತಮ್ಮಮ “ಕದನ ಕಣ ” ಪುಸ್ತಕದ ಮೂಲಕ ಹಿಡಿದಿಟ್ಟು, ಈ ಚಾರಿತ್ರಿಕ ಸಂದರ್ಭವನ್ನು ಅಕ್ಷರಗಳಲ್ಲಿ ದಾಖಲಿಸಿಟ್ಟಿದ್ದಾರೆ.

ಬ್ರಿಟೀಷರ ಆಡಳಿತ ಕ್ರೌರ್ಯವನ್ನು ದಾಖಲಿಸಿ ಇತಿಹಾಸದ ಹೆಜ್ಜೆಗುರುತುಗಳನ್ನು ಇಂದಿನ ಪೀಳಿಗೆ ಪರಿಚಯಿಸಿದಂತೆಯೇ, ಇವತ್ತಿನ ಆಳುವ ವರ್ಗಗಳ ಕ್ರೌರ್ಯವನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಸಾಗಿಸುವುದು ಮಹತ್ತರವಾದ ಕಾರ್ಯ. ಈ ಕಾರ್ಯ ನಿರ್ವಹಿಸುವಲ್ಲಿ “ ಕದನ ಕಣ- ದೆಹಲಿ ಗಡಿಗಳಲ್ಲಿ ರೈತರೊಂದಿಗೆ ” ಪುಸ್ತಕ ಯಶಸ್ವಿಯಾಗಿದೆ. ಸಂಗಾತಿ ನವೀನ್ ಕುಮಾರ್ ಮತ್ತು ಸಂಗಡಿಗರು ಅಭಿನಂದನಾರ್ಹರು.

Donate Janashakthi Media

Leave a Reply

Your email address will not be published. Required fields are marked *