ಕಾಡಾಳೊಳಗಿನ ಅಗಾಧ ವಿಚಾರ ತಿಳಿಸುವ ಸಿದ್ದಿ ಸಮುದಾಯದ ಸುರೇಶ್ ಕಾವೇರಿ

ಜ್ಯೋತಿ ಶಾಂತರಾಜು

ಹೊರ ಜಗತ್ತಿಗೆ ಏನೂ ಗೊತ್ತಿಲ್ಲದೆ,  ಅಡವಿಯೊಳಗೆ ನಿಗೂಢವಾಗಿ ಒಂದು ವಿಶ್ವವಿದ್ಯಾನಿಲಯವೂ ಕಲಿಸದಂತಹ ಅದೆಷ್ಟೋ ವಿಚಾರಗಳನ್ನು ತಿಳಿದುಕೊಂಡಿರುವ ಸಿದ್ದಿ ಸಮುದಾಯದ ಸುರೇಶ್ ಕಾವೇರಿ ಸಿದ್ದಿ ಎಂಬ ವ್ಯಕ್ತಿಯೊಬ್ಬರನ್ನು ಮಾತನಾಡಿಸುವ ಅವಕಾಶ ಸಿಕ್ಕಿದ್ದರಿಂದ ಬೆಂಗಳೂರಿನ ಗಾಂಧಿನಗರದಿಂದ ರಾತ್ರಿ 9:30ಕ್ಕೆ ಶ್ರೀ ಕುಮಾರ್ ಬಸ್ ಬೆಂಗಳೂರು to ಯಲ್ಲಾಪುರ ಬಸ್ ಹತ್ತಿ ಅರಬೈಲ್ ನಲ್ಲಿ ಬೆಳಗ್ಗೆ 7:30ಕ್ಕೆ ಇಳಿದು ಸುಮಾರು 8 ಕಿ. ಮೀ ಅರಣ್ಯದೊಳಗೆ ಕೃಷ್ಣ ಸಿದ್ಧಿ ಎಂಬುವವರ ಸಹಾಯದಿಂದ ಸ್ಕೂಟರ್ ಏರಿ ಅರಣ್ಯದ ಹಾದಿಯೊಳಗೆ ಸುರೇಶ್ ಅವರಿರುವ ಸ್ಥಳವನ್ನು ತಲುಪಿದೆ.  ಸಿದ್ದಿ ಸಮುದಾಯದವರ ಮೂಲ  ಆಫ್ರಿಕಾ ಎಂಬ ಮಾತು ಅಲ್ಲಿನ ಹಿರಿಯರಿಂದ ಕೇಳಿ ಬಂತು. ಅಲ್ಲಿನಿಂದ ಬಂದು ಇವರು ಕಾಡುಗಳಲ್ಲಿ ನೆಲೆಸಿ ಕಾಡುಗಳನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡರು ಎನ್ನುವ ಪ್ರತೀತಿಯೂ ಇದೆ. ಕರ್ನಾಟಕದಲ್ಲಿಯೇ ಹೆಚ್ಚು ಸಿದ್ಧಿಗಳಿದ್ದಾರೆ. ಅರಬೈಲ್ ನಗರದಿಂದ ಸುಮಾರು ಎಂಟು ಕಿ. ಮೀ. ದೂರಕ್ಕೆ ಅಡವಿಯೊಳಗಿನ ಕೆಳಾಸೆ ಗ್ರಾಮದ ಇಡಗುಂದಿ ವಲಯದಲ್ಲಿ ಸುರೇಶ್ ಕಾವೇರಿ ಸಿದ್ಧಿಯವರ ವಾಸ ಸ್ಥಾನವಿದೆ. ಸುರೇಶ್ ಅವರ ಅಡವಿಯ ಜ್ಞಾನ ಅಗಣಿತ ಎನ್ನುವಷ್ಟು ಕಾಡು- ಮೇಡು ಸುತ್ತಾಡಿದ್ದಾರೆ.

ಇವರು ಯಾರ ಹಂಗಿಲ್ಲದೇ ಏಕಾಂಗಿಯಾಗಿದ್ದಾರೆ. ಹೆಂಡತಿ, ಮಕ್ಕಳಿಲ್ಲ, ಸಂಸಾರವಿಲ್ಲ. ಅವರ ಮನೆಗೆ ಬಾಗಿಲೇ ಇಲ್ಲದಿದ್ದರೂ ಅವರ ಪಾಡಿಗೆ ಅವರು ಎಷ್ಟು ಸುಖಿ ಎಂದರೆ, ಗುಳ್ಳಾಪುರಕ್ಕೆ, ಅರಬೈಲಿಗೆ ಬಂದು ಅವರಿಗೆ ಏನಾದರೂ ಬೇಕಾಗಿರುವುದನ್ನು ಕೊಂಡು ತಿಂದು ನಾಳೆಯ ಚಿಂತೆಯೇ ಇಲ್ಲದೆ… ಹಣ ಮಾಡಬೇಕು, ಮನೆ ಕಟ್ಟಿಸಬೇಕು, ಕಳ್ಳ ಬರುತ್ತಾನೆ ಎಂಬ ಯಾವ ಗೊಡವೆಯೂ ಇಲ್ಲದ ಪರಮಸುಖಿ. ಇದು ನಗರ ಪ್ರದೇಶದ ಇಂದಿನ ಕೋಟ್ಯಾಧಿಪತಿಗೂ ಸಿಗದ ಖುಷಿ.

ಇದನ್ನು ಓದಿ: ನಾಡಿಗೆ ಬೆಳಕು ನೀಡುವ ಕಾಯಕ ಮಾಡುವ ಚೇತನ್ ಕುಮಾರ್

ನಾಲ್ಕೈದು ಕಿಲೋಮೀಟರ್ ಬೆಟ್ಟ ಹತ್ತಿಕೊಂಡು ಕೆಲಸಕ್ಕೆ ಹೋಗುವ ಸುರೇಶ್ ಅವರಿಗೆ ಕಾಡಿನ ಬಗ್ಗೆ ತುಂಬಾ ಚೆನ್ನಾಗಿ ಗೊತ್ತು. ಕಾಡಿನೊಳಗಿದ್ದು ತಮ್ಮ ಬದುಕನ್ನೇ ಸಂಪೂರ್ಣ ಕಾಡಿನೊಳಗೆ ಕಟ್ಟಿಕೊಂಡಿದ್ದಾರೆ. ಅರಣ್ಯದ ಜ್ಞಾನ ಅವರಿಗೆ ಪುಸ್ತಕಗಳ ಓದಿನ ಪಾಂಡಿತ್ಯದಿಂದ ಬಂದಿರುವುದಲ್ಲ. ಕಾಡು ಅವರ ಅನಿವಾರ್ಯದ ಬದುಕು. ‘ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ’ ಎಂದು ತೇಜಸ್ವಿಯವರು ಹೇಳುವಂತೆ ಇವರಿಗೆ ಕಾಡು ಬದುಕಿನ ಒಂದು ಭಾಗವಲ್ಲ. ಇವರ ಸಂಪೂರ್ಣ ಬದುಕೇ ಕಾಡು. ಹಾಗಾಗಿ ಸಕಲ ಪ್ರಾಣಿ, ಪಕ್ಷಿ, ಗಿಡ, ಮರ, ಸಸ್ಯ ಹೀಗೆ ಕಾಡಿನ ಎಲ್ಲ ಜೀವಸಂಕುಲ ಪ್ರತೀದಿನ ಅವರಿಗೆ ಒಂದೊಂದು ಪಾಠ ಕಲಿಸುವ ಗುರುಗಳು.

ಇದನ್ನು ಓದಿ: ಮಕ್ಕಳ ಶಿಕ್ಷಣಕ್ಕಾಗಿ ಪ್ರತಿದಿನ 130 ಕಿ.ಮೀ. ಪ್ರಯಾಣ ಮಾಡುವ ಶಿಕ್ಷಕ ಮಂಜುನಾಥ್

ಸುರೇಶ್ ಸಿದ್ಧಿಯವರು ನನ್ನೆದುರು ಅವರ ಬದುಕನ್ನು ಹರವಿದ್ದು ಹೀಗೆ. ‘ನಾನು ಒಂದು ವರ್ಷದ ಕೂಸು ಇರುವಾಗಲೇ ನನ್ನ ತಾಯಿ ಕಾವೇರಿ ಖಾಯಿಲೆಯಿಂದ ತೀರಿಕೊಂಡರು. ಅಮ್ಮನ ಪ್ರೀತಿಯನ್ನೇ ಕಾಣದ ನಾನು ಬೆಳೆದದ್ದು ನನ್ನ ಅಜ್ಜಿ ಲಕ್ಷ್ಮಿಯ ಆಶ್ರಯದಲ್ಲಿ. ಈಗ ಅವರೂ ತೀರಿ ಹೋಗಿದ್ದಾರೆ. ನಾನು ನಾಲ್ಕನೇ ತರಗತಿಯವರೆಗೆ ಕನ್ನಡ ಶಾಲೆಯಲ್ಲಿ ಓದಿದ್ದೇನೆ. ಹೊಳೆ, ಹೊಂಡಗಳಲ್ಲಿ ಸ್ನಾನ ಮಾಡುತ್ತೇನೆ. ಹಸಿವಾದಾಗ ಮೀನು, ಮರದಲ್ಲಿ ಗೂಡು ಕಟ್ಟಿಕೊಂಡಿರುವ ಕೆಂಜಿರುವೆಗಳನ್ನು ಹಿಡಿದು ಹುರಿದು ಚಟ್ನಿ ಮಾಡಿ ತಿನ್ನುತ್ತೇನೆ. ಬೆತ್ತದ ಬುಟ್ಟಿ ಚೆನ್ನಾಗಿ ಮಾಡುತ್ತೇನೆ. ಬೆಟ್ಟ ಹತ್ತಿ ಹೋಗಿ ಬೆತ್ತ ಕಿತ್ತುಕೊಂಡು ಬರಬೇಕಿತ್ತು. ಈಗ ಅದನ್ನು ಕೀಳುವ ಹಾಗಿಲ್ಲ, ಹಾಗಾಗಿ ಆ ಕೆಲಸವನ್ನು ಬಿಟ್ಟಿದ್ದೇನೆ. ಅಡಿಕೆ ಕೊಯ್ಯುವುದು, ಗೊಬ್ಬರ ಹಾಕುವುದು, ಅಗಟೆ ಹೊಡೆಯುವುದು, ಬಾಳೆಗಿಡ, ಅಡಿಕೆ ಗಿಡ ನೆಡುವುದು, ಸೊಪ್ಪು ಹಾಕುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತೇನೆ. ಒಂದು ದಿನಕ್ಕೆ 300 ರೂಪಾಯಿ ಕೂಲಿ ಮಧ್ಯಾಹ್ನದ ಊಟ ಕೊಡುತ್ತಾರೆ. ಹೀಗೆ ಕೆಲಸಕ್ಕೆ ಹೋದರೆ ಊಟವಾದರೂ ಸಿಗುತ್ತದೆ, ಹೊಟ್ಟೆ ತುಂಬುತ್ತದೆ. ಮನೆಯಲ್ಲಿದ್ದರೆ ಊಟವೂ ಸಿಗುವುದಿಲ್ಲ ಕೂಲಿ ಸಿಗಲಿಲ್ಲವೆಂದರೂ ಊಟ ಸಿಗುತ್ತದೆ ಎಂದು ಕೆಲಸಕ್ಕೆ ಹೋಗುತ್ತೇನೆ. ಎಷ್ಟೋ ಸಲ ಕೇವಲ ಒಂದು ಲೋಟ ಮಜ್ಜಿಗೆಗಾಗಿಯೂ ಕೆಲಸ ಮಾಡಿದ್ದುಂಟು. ಮನೆಗೆ ಬಾಗಿಲು ಇರಲಿಲ್ಲ. ಒಮ್ಮೆ ತೋಟದ ಕೆಲಸಕ್ಕೆ ಅಂತ ಹೋದಾಗ ಮನೆಯಲ್ಲಿದ್ದ ಪಾತ್ರೆ, ಪಗಡೆ ಎಲ್ಲವನ್ನು ಯಾರೋ ಕದ್ದು ಒಯ್ದಿದ್ದರು. ನಂತರ ಮಂಗಳೂರಿನವರಾದ ದಿನೇಶ್ ಹೊಳ್ಳ (ಪರಿಸರವಾದಿ, ಗ್ರಾಫಿಕ್ ಡಿಸೈನರ್) ಎಂಬುವವರು ಬಾಗಿಲು ಮತ್ತು ಬೀಗವನ್ನು ಕೊಡಿಸಿದರು. ಮನೆಯಲ್ಲಿ ಕರೆಂಟ್ ಇಲ್ಲವಾದ್ದರಿಂದ ರಾತ್ರಿ ಹೊತ್ತು ಕತ್ತಲೆಯಲ್ಲಿ ಇರುವುದನ್ನು ನೋಡಿ ಸೋಲಾರ್ ಲ್ಯಾಂಪ್ ಒಂದನ್ನು ಕೊಡಿಸಿದರು’ ಎನ್ನುತ್ತಾರೆ ಸುರೇಶ್.

ತಾನೇ ಕಟ್ಟಿಕೊಂಡಿರುವ ಮನೆಗೆ ಸಗಣಿಯಿಂದ ಸಾರಿಸಿಕೊಂಡು ಅಚ್ಚು ಕಟ್ಟಾಗಿ ಇಟ್ಟುಕೊಂಡು ಮಣ್ಣುಗುಡ್ಡೆಯ ಮೇಲೆ ಮರದ ಬುಡವೊಂದರಲ್ಲಿ ಹೊಲದ ಬದಿಯ ಮಣ್ಣಿನಿಂದ ತಾವೇ ಮಾಡಿದ ದೇವರ ಮೂರ್ತಿಗೆ ಬಣ್ಣ ಬಳಿದು ಶುದ್ಧ ಮನಸ್ಸಿನಿಂದ ಬೆಟ್ಟದ ಹೂವುಗಳನ್ನು ಇಟ್ಟು ಪೂಜಿಸುವ ಇವರ ಮುಗ್ಧತೆ ಅತ್ಯಂತ ಇಷ್ಟವಾಯಿತು. ಸುರೇಶ್ ಅವರಿಗೀಗ ನಲವತ್ತು ವರ್ಷ. ಇವರು ಸುಮಾರು ಹನ್ನೆರಡು ವರುಷಗಳಿಂದಲೂ ತಲೆ ಕೂದಲನ್ನು ಕತ್ತರಿಸಿಲ್ಲ. ಈಗದು ಜಡೆ ಕಟ್ಟಿದೆ. ನೋಡಲು ಜಮೈಕಾದ ಹಾಡುಗಾರ ಬರಹಗಾರ ‘Bob Marley’ ತರಹವೇ ತದ್ರೂಪು ವ್ಯಕ್ತಿಯಂತೆ ಕಾಣುತ್ತಾರೆ. ಹಾಗಾಗಿ ಇವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಗೋವಾ, ಬಾಂಬೆಯಿಂದೆಲ್ಲ ಬರುತ್ತಾರೆ. ಆದರೆ ಈಗ ಇವರ ತಲೆಗೂದಲು ಕತ್ತರಿಸಲು ಕಷ್ಟ. ಅದರೊಳಗೆ ಮಾಂಸ ಬೆಳೆದಿದೆ. ಸರ್ಜರಿ ಮಾಡಿ ತೆಗೆಯಬೇಕು. ಸರ್ಜರಿ ಮಾಡಲು ಸಾಕಷ್ಟು ಹಣಬೇಕು. ಒಂದು ಹೊತ್ತಿನ ಊಟಕ್ಕಾಗಿಯೇ ಕಷ್ಟ ಪಡುತ್ತಿರುವ ಇವರು ಅಷ್ಟೊಂದು ಹಣ ಎಲ್ಲಿಂದ ತಂದಾರು. ಬೇರೆ ಊರುಗಳಿಗೆ ಹೋದಾಗ ಇವರನ್ನು ಆಫ್ರಿಕಾದವರ ಹಾಗೆ, ನೀಗ್ರೋಗಳ ಹಾಗೆ ಇದ್ದಾರೆ ಅಂತ ಕೇವಲವಾಗಿ, ಕೀಳಾಗಿ ಅಸ್ಪೃಶ್ಯರು ಎಂಬಂತೆ ನೋಡುತ್ತಾರಂತೆ. ಇದರಿಂದ ಬೇಸತ್ತು ‘ನಮ್ಮ ಊರಿನಲ್ಲಿ ಕೂಲಿ ಕೆಲಸ ಮಾಡಿದ್ರೂ ಬೇರೆ ಊರುಗಳಿಗೆ ಹೋಗುವುದು ಬೇಡವೆಂದುಕೊಂಡಿದ್ದೇನೆ’ ಎನ್ನುತ್ತಾರೆ ಸುರೇಶ್.

ಸುರೇಶನಿಗೆ ಹೊರ ಜಗತ್ತಿಗೆ ಗೊತ್ತಿಲ್ಲದ ಒಂದು ವಿಶ್ವವಿದ್ಯಾನಿಲಯವೂ ಕಲಿಸದಂತಹ ಕಾಡಿನ ಅದೆಷ್ಟೋ ನಿಗೂಢ ವಿಚಾರಗಳು ಗೊತ್ತಿವೆ. ಕಾಡಿನ ಅಂಚಂಚು ಇಂಚಿಂಚು ಗೊತ್ತಿರುವ ಕಾರಣ ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರೆ ಉತ್ತಮ ಅರಣ್ಯ ಸಂರಕ್ಷಕನಾಗಬಹುದು ಎನ್ನುತ್ತಾರೆ – – ದಿನೇಶ್ ಹೊಳ್ಳ. ಏಕೆಂದರೆ ಅರಣ್ಯ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳು ಹೋಗದ ಕಾಡಿಗೆ ಸುರೇಶ್ ಹೋಗುತ್ತಾರೆ. ಅಲ್ಲಿನ ಪ್ರತಿಯೊಂದು ಸೂಕ್ಷ್ಮಾಣುಗಳಿಂದ ಹಿಡಿದು ಅಲ್ಲಿನ ಆನೆ, ಹುಲಿ, ಜಿಂಕೆ, ಹಂದಿ, ಹಾರುವ ಬೆಕ್ಕಿನವರೆಗೂ ಎಲ್ಲವೂ ಗೊತ್ತಿದೆ. ಮಳೆನೀರು ಭೂಮಿಯೊಳಗೆ ಹೇಗೆ ಇಂಗಿತವಾಗುತ್ತದೆ. ಬೆಂಕಿ ಹೇಗೆ ಉಂಟಾಗುತ್ತದೆ. ಈ ಮರ ಯಾವುದು? ಈ ಹಣ್ಣು ಎಂತದ್ದು? ಈ ಮರದ ಬೇರಿನಿಂದ ಏನೆಲ್ಲಾ ಉಪಯೋಗಗಳಿವೆ ಹೀಗೆ ಸಾಕಷ್ಟು ಉತ್ತಮ ವಿಚಾರಗಳು ಕೇಳುತ್ತಾ ಹೋದಂತೆಲ್ಲ ಇವರು ವಿವರಿಸುತ್ತ ಹೋಗುತ್ತಾರೆ.

ಇಂತಹವರನ್ನು ಅರಣ್ಯ ಸಂರಕ್ಷಣೆಯ ಪಾತ್ರಧಾರಿಯಾಗಿ, ಅರಣ್ಯ ಇಲಾಖೆಯಲ್ಲಿ ಕೇವಲ ಒಂದು ಫಾರೆಸ್ಟ್ ಗಾರ್ಡ್ ಆಗಿ ಕೆಲಸಕ್ಕೆ ತೆಗೆದುಕೊಂಡರೂ ಕೂಡ ಕಾಡಿನ ಸಂರಕ್ಷಣೆಯಾಗುತ್ತದೆ. ಈ ಸಮುದಾಯದ ಕೆಲವರು ಮಾತ್ರ ಸಮಾಜಮುಖಿಯಾಗಿದ್ದಾರೆ. ಸಾಕಷ್ಟು ಜನ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರನ್ನೂ ಸಮಾಜಮುಖಿಯಾಗಿಸುವ ಕೆಲಸವಾಗಬೇಕು. ಇದಕ್ಕಾಗಿ ಆಯಾ ಪ್ರದೇಶಗಳ ಜನಪ್ರತಿನಿಧಿಗಳು ಮತ್ತು ನಾವು ಮುಂದಾಗಬೇಕು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *