ಬಸವರಾಜ ಕರುಗಲ್
ಸಾಕ್ಷ್ಯಚಿತ್ರ ಸಿನಿಮಾ: ಗಂಧದ ಗುಡಿ
ತಾರಾಗಣ: ಪುನೀತ್, ಅಮೋಘವರ್ಷ
ನಿರ್ದೇಶನ: ಅಮೋಘವರ್ಷ
ಸಂಗೀತ: ಅಜನೀಶ್
ಛಾಯಾಗ್ರಹಣ: ಪ್ರತೀಕ್ ಶೆಟ್ಟಿ
ಇದು ಅಬ್ಬರದ ಹಾಡಿರುವ, ಮೈನವಿರೇಳಿಸುವ ಸ್ಟಂಟ್ಸ್, ಫೈಟ್ಸ್ ಇರುವ ಸಿನಿಮಾ ಅಲ್ಲ, ನಮ್ಮ ಸುತ್ತಲಿನ ಪ್ರಕೃತಿಯ ಆಳ-ಅಗಲವನ್ನು ದೃಶ್ಯರೂಪದಲ್ಲಿ ತಿಳಿಸುವ ಡಾಕ್ಯೂಸಿನಿಮಾ ಗಂಧದಗುಡಿ.
ಅಕ್ಷರ ಗೊತ್ತಿಲ್ಲದ ಅಪ್ಪು ಅಭಿಮಾನಿಗಳಿಗೆ ಗಂಧದ ಗುಡಿ ಕೊಂಚ ನಿರಾಸೆ ಮೂಡಿಸಬಹುದು ಎನ್ನುವುದನ್ನ ಒಪ್ಪಿಕೊಳ್ಳುತ್ತಲೇ. ಇಡೀ ರಾಜ್ಯಕ್ಕೆ ಹಲವು ಸಂದೇಶಗಳನ್ನು ಸಾರುವ ಒಂದು ಮಹೋನ್ನತ ಕೃತಿ ಗಂಧದ ಗುಡಿ ಎಂದರೆ ತಪ್ಪಾಗಲಾರದು.
ಒಬ್ಬ ಸಿನಿಮಾ ಹಿರೋ ರಿಯಲ್ ಲೈಫಲ್ಲಿ ಹೇಗಿರುತ್ತಾನೋ ಹಾಗೆಯೇ ಪುನೀತ್ ಇಲ್ಲಿ ಕಾಣಸಿಗುತ್ತಾರೆ. ಅವರಿಗೂ ಎಲ್ಲರಂತೆ ಹಾವನ್ನ ಕಂಡರೆ ಭಯ ಆಗುತ್ತೆ. ಒಪ್ಪಿಕೊಂಡಿರುವ ಮೂರು ಸಿನಿಮಾಗಳು, ಮನೆಯಲ್ಲಿರುವ ಹೆಂಡತಿ-ಮಕ್ಕಳು ನೆನಪಾಗಿ ಸೇಫಾಗಿ ಬೆಂಗಳೂರು ತಲುಪುತ್ತೇವಲ್ಲ ಎಂದು ಎರಡು ಮೂರು ಸಲ ಕೇಳುತ್ತಾರೆ. ನಿಜವಾಗಲೂ ಹತ್ತಿರದಿಂದ ಹುಲಿಯನ್ನು ಕಂಡಾಗ ಅವರು ಅನುಭವಿಸುವ ರೋಚಕತೆಯನ್ನ ತೆರೆ ಮೇಲೆ ನೋಡಿದರೆ ಚನ್ನ.
ಕಾಡು ಹುಟ್ಟಿಕೊಂಡದ್ದು, ಸಮುದ್ರದ ಜಗತ್ತು, ಕಡಲಾಳದ ಮೊದಲ ಜೀವಿಗಳು, ಈಗ ಪ್ಲಾಸ್ಟಿಕ್ ನುಂಗುತ್ತ ಅಳಿವಿನಂಚಿಗೆ ಸಾಗುತ್ತಿರುವ ಜೀವಸಂಕುಲ, ನಾಡಿನ ಕರಾವಳಿ, ಉತ್ತರ ಕರ್ನಾಟಕ, ಚಾಮರಾಜನಗರ, ಮಲೆನಾಡ ಸಂಸ್ಕೃತಿ-ಸಂಪ್ರದಾಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತೆರೆಯ ಮೇಲೆ ತೆರೆದಿಡುವ ಪ್ರಯತ್ನವನ್ನ ಮೆಚ್ಚಲೇಬೇಕು.
ಡಾ.ರಾಜಕುಮಾರ್ ಹುಟ್ಟಿದ ಮನೆ, ಹುಟ್ಟಿದ ಊರಿನ ಪ್ರಿಯವಾದ ತಾಣ, ಕಾಡುಗಳ್ಳ ವೀರಪ್ಪನ್‍ನಿಂದ ಅಪಹರಣಕ್ಕೊಳಗಾದ ಡಾ.ರಾಜಕುಮಾರ್ ಕಳೆದ ಕಾಡಿನ ಸ್ಥಳಗಳು, ಗಂಧದ ಗುಡಿ ಶೂಟಿಂಗ್ ನಡೆದ ಸ್ಥಳ, ಗಂಧದ ಗುಡಿ ಭಾಗ-02ರಲ್ಲಿ ಅಣ್ಣ ನಟಿಸಿದ್ದನ್ನ ಸ್ಮರಿಸುವ ಕ್ಷಣ, ಆನೆಗಳ ಪಳಗಿಸುವ ಕ್ರೂರ ವಿಧಾನದ ಬಗ್ಗೆ ಮರಗುವ ಪುನೀತ್ ಮನ, ಅಪಾಯಕಾರಿ ಕರಡಿಗಳ ಬಳಿ ಹೋಗೋಣ ಎನ್ನುವ ಪುನೀತ್ ಧೈರ್ಯ, ತುಂಗಭದ್ರಾ ತಟದಲ್ಲಿ ಕಾಣಿಸಿಕೊಂಡ ಮೊದಲ ಚಿರತೆಯ ಕಥೆ… ಹೀಗೆ ಹತ್ತು-ಹಲವು ಅಪ್ಯಾಯಮಾಣ ಸಂಗತಿಗಳು ಕೇವಲ ಒಂದೂವರೆ ಗಂಟೆಯಲ್ಲಿ ಕಣ್ಮುಂದೆ ಬರುತ್ತವೆ.
ಇಲ್ಲಿ ಹಿರೋಯಿಸಂ, ಗ್ರ್ಯಾಂಡ್ ಎಂಟ್ರಿ, ಹಿರೋಯಿನ್ ಥಳುಕು-ಬಳುಕು ಏನಿಲ್ಲ. ಒಬ್ಬ ಸಾಮಾನ್ಯ ಮನುಷ್ಯನ ಪ್ರಕೃತಿಯ ಸಸ್ಯಸಂಪತ್ತು, ಪ್ರಾಣಿ-ಪಕ್ಷಿ ಸಂಪತ್ತಿನ ಕುತೂಹಲದ ಪ್ರಶ್ನೆಗಳಿಗೆ ಅಮೋಘವರ್ಷನ ಮೂಲಕ ಉತ್ತರವಾಗುತ್ತಾ ಸಾಗುತ್ತದೆ ಗಂಧದ ಗುಡಿ.
ಎಲ್ಲ ಪ್ರಾಣಿಗಳಿಗಿಂತ ಅಪಾಯಕಾರಿ ಪ್ರಾಣಿಗಳೆಂದರೆ ಕರಡಿ ಮತ್ತು ಆನೆ ಎಂಬ ಗೊತ್ತಿಲ್ಲದ ವಿಷಯವನ್ನ ಅಮೋಘವರ್ಷ ಹೇಳುತ್ತಾರೆ. ಕರಡಿ ಬಗ್ಗೆ ಗೊತ್ತಾದಾಗ ಹಾಗೂ ನರ್ತಿಸುವ ಕಪ್ಪೆಯ ಕಥೆ ಕೇಳಿದಾಗ ಈ ಡಾಕ್ಯೂ ಸಿನಿಮಾದಲ್ಲಿ ಕಾಮಿಡಿ ಇಲ್ಲ ಎನ್ನುವ ಕೊರಗು ನೀಗುತ್ತದೆ. ಇದು ಸ್ಕ್ರಿಪ್ಟೆಡ್ ಅಲ್ಲದಿದ್ದರೂ ಕೆಲ ದೃಶ್ಯಗಳಲ್ಲಿ ಹೊರಡುವ ಮಾತುಗಳಿಗೆ ಶಿಳ್ಳೆ, ಚಪ್ಪಾಳೆ ಬೀಳುತ್ತವೆ.
ಇಡೀ ಸಿನಿಮಾ ಕಳೆಗಟ್ಟಲು ಛಾಯಾಗ್ರಾಹಕ ಪ್ರತೀಕ್ ಶೆಟ್ಟಿ ಶ್ರಮ ಎದ್ದು ಕಾಣುತ್ತದೆ. ಜೋಗದ ದೃಶ್ಯಗಳು, ಕಡಲಾಳದ ಸ್ಕೂಬಾ ಡೈವಿಂಗ್ ಸೀನ್‍ಗಳು ಅತ್ಯದ್ಭುತ. ಬಹಳಷ್ಟು ಕಡೆ ಬಳಸಿದ ಡ್ರೋಣ್ ವಿಶ್ಯುವಲ್ಸ್ ಸಹ ಫೆಂಟಾಸ್ಟಿಕ್. ಗಂಧದ ಗುಡಿ ಕಂಪ್ಲಿಟ್ ಡಾಕ್ಯುಮೆಂಟರಿ ಆಗುವುದನ್ನು ತಪ್ಪಿಸಿದ್ದು ಒದಗಿಸಿದ ಹಿನ್ನೆಲೆ ಸಂಗೀತ ಮತ್ತು ಎರಡು ಬಿಟ್ ಹಾಡುಗಳು. ಈ ವಿಷಯದಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಇದಕ್ಕೊಂದು ಸಿನಿಮಾ ರೂಪ ಕೊಟ್ಟಿದ್ದಾರೆ ಎನ್ನಬಹುದು.
ನಿರ್ಮಾಪಕಿ ಅಶ್ವಿನಿ ಪುನೀತ್‍ರಾಜ್‍ಕುಮಾರ್ ತೆರೆ ಮೇಲೆ ಅಪ್ಪುವಿನ ಕನಸಿದು ಎಂದು ಹೇಳುತ್ತಾ ಚಿತ್ರವನ್ನ ಆರಂಭಿಸಿದರೆ, ಚಿತ್ರದುದ್ದಕ್ಕೂ ಪುನೀತ್ ಜೊತೆ ಸಾಗುವ ಕಾಡುಪ್ರಿಯ, ತಜ್ಞ ಅಮೋಘವರ್ಷ ಕೆಲ ದೃಶ್ಯಗಳಿಗೆ ಧ್ವನಿಯಾಗಿ, ದೇವರ ಕಾಣಲು ಹೊರಡುವ ದೃಶ್ಯದೊಂದಿಗೆ ಅಂತ್ಯ ಹೇಳುತ್ತಾರೆ.
ಶಿಕ್ಷಣ ವ್ಯವಸ್ಥೆ ಸೇರಿದಂತೆ ಸಮಾಜದ ಕೆಲ ವಿಷಯಗಳಲ್ಲಿ ಸುಧಾರಣೆ ಕಾಣಬೇಕಾಗಿರುವುದನ್ನು ನಮ್ರವಾಗಿ ಹೇಳುವ ಅಪ್ಪುವಿನ ವ್ಯಕ್ತಿತ್ವವನ್ನು ತೆರೆದಿಟ್ಟ ಗಂಧದಗುಡಿ ಸಿನಿಮಾಗೆ ಸರಕಾರ ಪ್ರೋತ್ಸಾಹ ನೀಡಿದರೆ ಪ್ರಯತ್ನಕ್ಕೊಂದು ಸಾರ್ಥಕತೆ ದಕ್ಕುತ್ತದೆ.