ನಜ್ಮಾ ನಜೀರ್
”ನನ್ನ ಮಾವ ಹಾಶಿಮ್ ಅಬ್ದುಲ್ ಹಲೀಮ್ ಪ್ರಪಂಚದ ಇತಿಹಾಸದಲ್ಲೇ ದೀರ್ಘಕಾಲ ಅಂದರೆ ಇಪ್ಪತೈದು ವರ್ಷಗಳ ಕಾಲ (1984-2011ರವರೆಗೆ) ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ಆಗಿದ್ದರು ಅಂತಲೋ, ನನ್ನ ತಂದೆ ಜಮೀರುದ್ದೀನ್ ಶಾಹ್ ಲೆಫ್ಟಿನೆಂಟ್ ಜನರಲ್ ಆಗಿದ್ದರು ಅಂತಲೋ, ನಾಸಿರುದ್ದೀನ್ ಶಾ ನನ್ನ ಚಿಕ್ಕಪ್ಪ ಅಂತಲೋ ಅಥವಾ ನನ್ನ ಗಂಡ ರಾಜಕಾರಣಿ ಅಂತಲೋ ನನಗೆ ನನ್ನ ಪಕ್ಷ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ನೀಡಿಲ್ಲ, ನಾನು ಕಳೆದ ಹತ್ತು ವರ್ಷಗಳಿಂದ ಚಳುವಳಿ ಕಟ್ಟಿದ್ದೇನೆ, ಧರಣಿಗಳಲ್ಲಿ ಭಾಗವಹಿಸಿದ್ದೇನೆ, ನನ್ನ ಕಾರ್ಯಕರ್ತರೊಂದಿಗೆ ಕೆಲಸ ಮಾಡಿದ್ದೇನೆ, ಮಾಧ್ಯಮಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕೂತು ನನ್ನ ಪಕ್ಷವನ್ನು ಸಮರ್ಥಿಸಿಕೊಂಡಿದ್ದೇನೆ, ಅನ್ಯಾಯದ ವಿರುದ್ಧ ಯಾವುದೇ ಮುಲಾಜಿಲ್ಲದೆ ಮಾತಾಡಿದ್ದೇನೆ, ಹೋರಾಡಿದ್ದೇನೆ ಅದಕ್ಕಾಗಿ ನನ್ನ ಪಕ್ಷ ಸಿಪಿಐ(ಎಂ) ನನ್ನನ್ನು ಗುರುತಿಸಿ ಟಿಕೆಟ್ ನೀಡಿತು, ಸೋತೆನೋ ಗೆದ್ದೆನೋ ನಾನು ಪ್ರಾಮಾಣಿಕವಾಗಿದ್ದೇನೆ ಎನ್ನುವುದಷ್ಟೆ ನನಗೆ ಸಂತೃಪ್ತಿ.
ಸಕ್ರೀಯ ರಾಜಕಾರಣಕ್ಕೆ ದುಮುಕಿದ ನಂತರ ಸುತ್ತಲಿರುವ ಕಾರ್ಯಕರ್ತರ ವಾವಾಗಿರಿಯಲ್ಲಿ ನಮ್ಮೊಳಗಿನ ನೈತಿಕ ಬದ್ಧತೆ, ಸೈದ್ಧಾಂತಿಕ ತುಡಿತಗಳು, ಹೊಸ ರೀತಿಯ ಜನಸ್ನೇಹಿ ಚಿಂತನೆಗಳು ಸಂಪೂರ್ಣವಾಗಿ ಅಲ್ಲದಿದ್ದರೂ ಭಾಗಶಃವಾದರೂ ಕುಗ್ಗಿ ಹೋಗುವುದಂದಂತೂ ಅಕ್ಷರಶಃ ಸತ್ಯ.
ರಾಜಕೀಯ ವ್ಯವಸ್ಥೆಯ ಹೊರಗೆ ನಿಂತು ಆಲೋಚನೆಗಳನ್ನು ಮಾಡುವುದು ಸುಲಭ, ಒಳನುಸುಳಿದ ಮೇಲೆ ಆಲೋಚನೆಗಳೆಲ್ಲ ಖಾಲಿಯಾಗಿ ಬೋಳು ಬೋಳು ಅನಿಸಿದಾಗಲೇ ಅರ್ಥವಾಗುವುದು ಅಯ್ಯೋ ನಾನು ಕೂಡ ಎಲ್ಲಾ ರಾಜಕಾರಣಿಗಳಂತೆ ಆಗಿಬಿಟ್ಟೆನೇ ಎಂದು.
ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ನನ್ನೊಳಗು ಇವೆಲ್ಲಾ ಸಂಭವಿಸುತ್ತಿದ್ದವು, ಅಷ್ಟರಲ್ಲೇ ನನಗೆ ಸಿಕ್ಕಿದ್ದು ಇಂಡಿಯನ್ ಸ್ಕೂಲ್ ಆಫ್ ಡೆಮಾಕ್ರಸಿಯಲ್ಲಿ ರಾಜಕೀಯ ಪಟುತ್ವ, ಚುನಾವಣಾ ತಂತ್ರಗಾರಿಕೆ, ವ್ಯಕ್ತಿತ್ವ ಬೆಳವಣಿಗೆ ಸೇರಿದಂತೆ ಸಾಕಷ್ಟು ವಿಚಾರಗಳನ್ನೊಳಗೊಂಡು ಸಧೃಢ ರಾಜಕಾರಣಿಯಾಗುವುದು ಹೇಗೆ ಎಂದು ಹೇಳಿಕೊಡುವ 9 ದಿನಗಳ ಕಾರ್ಯಾಗಾರ.
ಇಂಡಿಯನ್ ಸ್ಕೂಲ್ ಆಫ್ ಡೆಮಾಕ್ರಸಿಯ 4ನೇ ದಿನ (ನವೆಂಬರ್ 08) ಬೆಳಿಗ್ಗೆಯಿಂದ ಸಾಕಷ್ಟು ಚರ್ಚೆಗಳಾಗಿದ್ದವು ಒಂದರ್ಥದಲ್ಲಿ ಬಹಳ ದಣಿದಿದ್ದೆವು ಕೂಡ. ಆ ಸಂಜೆಗೆ ನಮ್ಮೆಲ್ಲರ ದಣಿವೆಲ್ಲವನ್ನು ಹೊಡೆದೋಡಿಸಿದ್ದು ‘ಕ್ಯಾ ಮೈ ಆನೆಸ್ಟ್ ಲಿ ಬೋಲುನ್’ ಎನ್ನುತ್ತಾ ಮಾತು ಶುರು ಮಾಡಿದ ಕೆಂಪು ಸೀರೆಯ, ಹೊಳಪು ಕಂಗಳ, ಭರವಸೆಯ ನಾಯಕಿ ಸಾಯೆರಾ ಶಾ ಹಲೀಮ್.
ಸಾಯೆರಾ ಶಾ ಹಲೀಮ್ ಹೆಸರು ನ್ಯಾಷನಲ್ ಚ್ಯಾನಲುಗಳ ಡಿಬೇಟುಗಳನ್ನು ನೋಡುವವರಿಗೆ ಪರಿಚಯವಿದ್ದೇ ಇರುತ್ತದೆ. ತಮ್ಮ ತೀಕ್ಷ್ಣ ಮತ್ತು ಚಾಣಾಕ್ಷ ಮಾತುಗಳ ಮೂಲಕವೇ ಅವರು ಚಿರಪರಿಚಿತರು.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಹೃದಯ ಭಾಗವಾದ ಬ್ಯಾಲಿಗುಂಜ್ ಕ್ಷೇತ್ರದ ಶಾಸಕರಾಗಿದ್ದ ಸುಬ್ರತಾ ಮುಖರ್ಜಿರವರ ಮರಣದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಕಳೆದ ಏಪ್ರಿಲಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ನಲವತ್ತರ ಆಸುಪಾಸಿನ ಸಾಯೆರಾ ಸಿಪಿಐ(ಎಂ) ಪಕ್ಷದಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದು ಪರಾಭವಗೊಂಡಿದ್ದರು. ಆಡಳಿತ ಪಕ್ಷ ಟಿಎಂಸಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಗೆಲುವು ಕಂಡರೂ ಕೂಡ ದೀದಿ(ಮಮತಾ ಬ್ಯಾನರ್ಜಿ)ಯ ಎದೆಯಲ್ಲಿಯೂ ನಡುಕ ಹುಟ್ಟುಹಾಕಿದ್ದು ಸಾಯೆರಾ.
ಸಾಯೆರಾರವರು ಚುನಾವಣೆ ಮತ್ತು ಟಿಕೇಟು ಸಿಕ್ಕ ಸಂದರ್ಭದ ಬಗ್ಗೆ ಮಾತಾನಾಡುತ್ತಾ ”ನನ್ನ ಮಾವ ಹಾಶಿಮ್ ಅಬ್ದುಲ್ ಹಲೀಮ್ ಪ್ರಪಂಚದ ಇತಿಹಾಸದಲ್ಲೇ ದೀರ್ಘಕಾಲ ಅಂದರೆ ಇಪ್ಪತೈದು ವರ್ಷಗಳ ಕಾಲ (1984-2011ರವರೆಗೆ) ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ಆಗಿದ್ದರು ಅಂತಲೋ, ನನ್ನ ತಂದೆ ಜಮೀರುದ್ದೀನ್ ಶಾಹ್ ಲೆಫ್ಟಿನೆಂಟ್ ಜನರಲ್ ಆಗಿದ್ದರು ಅಂತಲೋ, ನಾಸಿರುದ್ದೀನ್ ಶಾ ನನ್ನ ಚಿಕ್ಕಪ್ಪ ಅಂತಲೋ ಅಥವಾ ನನ್ನ ಗಂಡ ರಾಜಕಾರಣಿ ಅಂತಲೋ ನನಗೆ ನನ್ನ ಪಕ್ಷ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ನೀಡಿಲ್ಲ, ನಾನು ಕಳೆದ ಹತ್ತು ವರ್ಷಗಳಿಂದ ಚಳುವಳಿ ಕಟ್ಟಿದ್ದೇನೆ, ಧರಣಿಗಳಲ್ಲಿ ಭಾಗವಹಿಸಿದ್ದೇನೆ, ನನ್ನ ಕಾರ್ಯಕರ್ತರೊಂದಿಗೆ ಕೆಲಸ ಮಾಡಿದ್ದೇನೆ, ಮಾಧ್ಯಮಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕೂತು ನನ್ನ ಪಕ್ಷವನ್ನು ಸಮರ್ಥಿಸಿಕೊಂಡಿದ್ದೇನೆ, ಅನ್ಯಾಯದ ವಿರುದ್ಧ ಯಾವುದೇ ಮುಲಾಜಿಲ್ಲದೆ ಮಾತಾಡಿದ್ದೇನೆ, ಹೋರಾಡಿದ್ದೇನೆ ಅದಕ್ಕಾಗಿ ನನ್ನ ಪಕ್ಷ ಸಿಪಿಐ(ಎಂ) ನನ್ನನ್ನು ಗುರುತಿಸಿ ಟಿಕೆಟ್ ನೀಡಿತು, ಸೋತೆನೋ ಗೆದ್ದೆನೋ ನಾನು ಪ್ರಾಮಾಣಿಕವಾಗಿದ್ದೇನೆ ಎನ್ನುವುದಷ್ಟೆ ನನಗೆ ಸಂತೃಪ್ತಿ.
ಇದೆಲ್ಲ ಸುಮ್ಮನೆ ಹೇಳುತ್ತಿದ್ದಾಳೆ ಎಂದುಕೊಳ್ಳಬೇಡಿ ಕಮ್ಯೂನಿಸ್ಟ್ ಪಕ್ಷದ ಇತಿಹಾಸ ತೆಗೆದು ನೋಡಿ ಜ್ಯೋತಿಬಸುರವರ ಮಗನಿಗೆ ಟಿಕೆಟ್ ಕೊಟ್ಟಿಲ್ಲ, ನೀವು ಯಾವುದೇ ಪಕ್ಷದಲ್ಲಿರಿ ಮೊದಲು ಪಕ್ಷಕ್ಕಾಗಿ ದುಡಿಯಿರಿ ಮತ್ತು ನಂತರ ಟಿಕೆಟ್ ಪಡೆಯಿರಿ”ಎಂದು ಹೇಳುತ್ತಲೇ ಹೋದ ಆ ಅದ್ಭುತ ವಾಗ್ಜರಿ, ಕಣ್ಣಿನ ಹೊಳಪು, ಅಗಾಧವಾದ ಅಧ್ಯಯನ ಆಕೆ ಎಷ್ಟು ತಯಾರಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು ಎನ್ನುವುದು ಅರಿವಿಗೆ ಬರುತ್ತಿತ್ತು.
ಮಹಿಳೆಯಾಗಿ ಚುನಾವಣೆ ಎದುರಿಸುವ ಬಗ್ಗೆ ಮಾತನಾಡುತ್ತ, ತಾನು ಎದುರಿಸಿದ ಕಷ್ಟಗಳು, ಆಕೆಯ ಉಡುಗೆ ತೊಡುಗೆಯ ಬಗ್ಗೆ ಸಮುದಾಯದೊಳಗೆ ವಿರೋಧಿಗಳು ಹುಟ್ಟುಹಾಕಿದ ಕಥೆಗಳು, ಪಿತೂರಿಗಳು ಮತ್ತದನ್ನು ಎದುರಿಸಲು ಆಕೆ ಮಾಡಿಕೊಂಡ ಮಾನಸಿಕ ತಯಾರಿಗಳು ಇವೆಲ್ಲವನ್ನೂ ತೆರೆದ ಪುಸ್ತಕದಂತೆ ಹೇಳಿದ ಸಾಯೆರಾ ಮಹಿಳಾ ರಾಜಕಾರಣಿಗಳಿಗೆ ನಿಜವಾಗಿಯೂ ಸ್ಫೂರ್ತಿ.
ಮಾಧ್ಯಮದವರೊಂದಿಗೆ ರಾಜಕಾರಣಿಗಳಾದ ನಮ್ಮ ಸಂಬಂಧ ಹೇಗಿರಬೇಕೆಂದು ಹೇಳುತ್ತಾ, ಅವರು ಖುದ್ದು ಪತ್ರಕರ್ತರನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ತಿಳಿಸಿಕೊಟ್ಟರು.
ಸಾಯೆರಾ ಹಲೀಮ್ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತೆ ಅಷ್ಟೇ ಅಲ್ಲ ಆಕೆ ಪ್ರಬುದ್ಧ ಬರಹಗಾರ್ತಿಯೂ ಹೌದು, ಒಳ್ಳೆಯ ಓದುಗಾರ್ತಿಯೂ ಹೌದು. ಅದಕ್ಕೆ ನೇರವಾಗಿ ಅವರು ಹೇಳಿಯೇಬಿಟ್ಟರು ನನಗೆ ವೋಟು ಹಾಕುವವರಿಗೆ ‘ನಾನು ಸ್ಕರ್ಟ್, ಜೀನ್ಸ್, ಸೀರೆ ಇದ್ಯಾವುದನ್ನು ಧರಿಸುತ್ತೇನೆ ಎಂಬುದು ಮುಖ್ಯವಾಗಬಾರದು ನಾನು ಜನರಿಗಾಗಿ ಎಷ್ಟು ಕೆಲಸ ಮಾಡುತ್ತೇನೆ ಎಂಬುದಷ್ಟೇ ಮುಖ್ಯವಾಗಬೇಕು.’
ನಮ್ಮೆಲ್ಲರ ರಾಜಕೀಯ ಭವಿಷ್ಯ ಬೆಳಗಲೆಂದು ಹಾರೈಸಿ ತನ್ನ ವಿಚಾರ, ಚುನಾವಣಾ ಪ್ರಕ್ರಿಯೆಯಲ್ಲಿನ ಸವಾಲುಗಳು, ಸರ್ಕಾರಿ ದಾಖಲೆಗಳ ತಯಾರಿ, ಹೆಣ್ಣಾಗಿ ಎದುರಿಸಬೇಕಾದ ಕಷ್ಟಗಳು, ಹೋರಾಟ, ಬಂಗಾಳದ ರಾಜಕೀಯ, ಕಮ್ಯೂನಿಸ್ಟ್ ಪಕ್ಷದ ಇತಿಹಾಸ ಎಲ್ಲವನ್ನು ಎಳೆಎಳೆಯಾಗಿ ತಿಳಿಸಿ ಹೇಳಿದ ಸಾಯೆರಾ ಶಾ ಹಲೀಮ್ ರವರಿಗೂ ಮುಂದಿನ ರಾಜಕೀಯ ಪಯಣಕ್ಕೆ ಆಲ್ ದ ಬೆಸ್ಟ್.