ಹಸಿದ ಹೊಟ್ಟೆಗೆ ಒಂದೊತ್ತಿನ ಊಟ ನೀಡುವ ಪಿಟೀಲು

ಜ್ಯೋತಿ ಶಾಂತರಾಜು

ಪಿಟೀಲನ್ನು ನಾನೆ ಕೂತು ಮನೆಯಲ್ಲಿ ತಯಾರು ಮಾಡುತ್ತೇನೆ. ಅದಕ್ಕೆ ಬೇಕಾಗುವ ಸಾಮಗ್ರಿಗಳಾದ ಮರ, ಕಡ್ಡಿಗಳನ್ನು, ಹಾಸನಕ್ಕೆ ಮಗನನ್ನು ಕಳಿಸಿ ತರಿಸುತ್ತೇನೆ. ಉಳಿದಂತೆ ಸ್ಕೂಟರ್ ಕೇಬಲ್ ಇಲ್ಲೇ ಗ್ಯಾರೇಜುಗಳಲ್ಲಿ ಕೊಂಡುಕೊಳ್ಳುತ್ತೇನೆ. ಇವುಗಳನ್ನು ಸಿದ್ಧ ಮಾಡುವುದು ಒಂಥರಾ ಸವಾಲಾದರೆ, ಸಿದ್ಧವಾದ ಪಿಟೀಲನ್ನು ಮಾರುವುದು ಕೂಡ ಸಾಹಸವೇ. ತುಂಬ ಜನರು ಸುಮ್ಮನೆ ನೋಡಿಕೊಂಡು ಹೋಗಿಬಿಡುತ್ತಾರೆಯಾರಾದರೂ ಮಕ್ಕಳು ಹಠ ಮಾಡಿದರೆ ಮಾತ್ರ ಕೊಡಿಸುತ್ತಾರೆ. ನುಡಿಸೋಕೆ ಬರಲ್ಲ ಹಾಗೆ, ಹೀಗೆ ಹೇಳುತ್ತಾರೆ. ಮನಸ್ಸಿಟ್ಟು ಮಾಡಿದರೆ ಯಾವುದೂ ಅಸಾಧ್ಯ ಅಲ್ಲ ಒಂದೇ ಸಲ ಯಾವುದೂ ಬರುವುದಿಲ್ಲ. ನುಡಿಸುತ್ತ ಬೆರಳುಗಳನ್ನು ಬದಲಾವಣೆ ಮಾಡಿದರೆ ಯಾವುದೊ ಒಂದು ಸ್ವರವಂತೂ ಬರುತ್ತದೆ. ಹಾಗೆ ಸತತವಾಗಿ ಅಭ್ಯಾಸ ಮಾಡಿದರೆ ಯಾವುದೂ ಅಸಾಧ್ಯವಲ್ಲ

 

ನಾಗರಬಾವಿ ಸಮೀಪ ಬ್ಲಡ್ ಡೊನೇಟ್ ಕ್ಯಾಂಪಿಗೆ ಹೋಗುವಾಗ ಮಾರ್ಗಮಧ್ಯೆ ಕಂಠೀರವ ಸ್ಟುಡಿಯೋ ಎದುರು ಕೂತು ಅಷ್ಟು ಗಾಡಿಗಳ ಆಸಾಧಾರಣ ಶಬ್ಧದಲ್ಲೂ ಮನಸೂರೆಗೊಂಡದ್ದು ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ’ ಎನ್ನುವ ಅಪ್ಪು ಅಭಿನಯದ ಗೀತೆಯನ್ನು ಪಿಟೀಲಿನಲ್ಲಿ ನುಡಿಸುತ್ತಿದ್ದ ಅಬ್ದುಲ್ ರವರ ಗಾನ. ಆ ಉರಿವ ಬಿಸಿಲಲ್ಲಿ ಅವರು ನುಡಿಸುತ್ತಿದ್ದ ಪಿಟೀಲಿನ ರಾಗ ನಮ್ಮೆದೆಗೆ ತಂಪೆರೆದ ರೀತಿ ಅದ್ಭುತವಾಗಿತ್ತು. ಆ ಪಿಟೀಲು ಸಹ ಸರಳವಾಗಿ ಆಕರ್ಷಣೀಯವಾಗಿತ್ತು. ಈ ಕುರಿತು ಅಬ್ದುಲ್ ಅವರು ನಮ್ಮೊಂದಿಗೆ ಮಾತಿಗಿಳಿದಾಗ ತೆರೆದಿಟ್ಟ ಅವರ ಬದುಕಿನ ಏಳುಬೀಳು.

ಲಕ್ಷ್ಮಿದೇವಿ ನಗರ, ಹವಾಡಿಗರ ಕಾಲೋನಿ, ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಾಗಿರುವ ಸೈಯ್ಯದ್ ಅಬ್ದುಲ್ ರಜಾಕ್ ಅವರಿಗೆ ಐವತ್ತೈದು ವರ್ಷಗಳು. ‘ನನ್ನ ಸ್ವಂತ ಊರು ದಾವಣಗೆರೆಯ ಹತ್ತಿರ ಬಂಬು ಬಜಾರ್ ಸಿಟಿ. ನಾನು ಶಾಲೆಗೆ ಹೋದವನಲ್ಲ. ಬಡತನದಿಂದಾಗಿ ಏನೂ ಓದಲಾಗಲಿಲ್ಲ. ಸಣ್ಣವನಿದ್ದಾಗಿನಿಂದ ತಾಯಿ ತಂದೆ ಕೆಲಸಕ್ಕೆ ಹೋಗುವಾಗ ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಸಂತೆ, ಜಾತ್ರೆಗಳಲೆಲ್ಲ ಹಾವಾಡಿಸುವುದು, ಜಾದು(ಮ್ಯಾಜಿಕ್ ಶೋ) ಎಲ್ಲ ಜೀವನೋಪಾಯಕ್ಕಾಗಿ ಮಾಡುತ್ತಿದ್ದರು. ನನ್ನ ತಂದೆ ಡೋಲು ಬಾರಿಸುವುದನ್ನು ಪಿಟೀಲು ನುಡಿಸುವುದನ್ನು ನೋಡ್ತಾ ನೋಡ್ತಾ ನಾನು ಚಿಕ್ಕ ವಯಸ್ಸಿನಿಂದಲೇ  ಕಲಿತೆ. ಆಗೆಲ್ಲ ಹಾವಾಟ ಆಡಿಸಿ, ಮ್ಯಾಜಿಕ್ ಶೋ ಮಾಡಿ ಉದಾ : ಮಕ್ಕಳನ್ನು ಬುಟ್ಟಿಯಲ್ಲಿ ಹಾಕಿ ಪಾರಿವಾಳ ಮಾಡುವುದು, ತಗಡು ಡಬ್ಬಿ ತುಂಬ ಹಣ ಬರಿಸುವುದು, ಹೀಗೆಲ್ಲ ಮನರಂಜನಾತ್ಮಕ ಜಾದೂಗಳನ್ನು ಮಾಡಿ ಜನರನ್ನು ಸಂತೋಷ ಪಡಿಸುತ್ತಿದ್ದೆವು. ಆಗ ಜನರು ಖುಷಿಯಿಂದ ಕೊಡುತ್ತಿದ್ದ ಐದು ಹತ್ತು ರೂಪಾಯಿಗಳನ್ನು ಕೊಡುತ್ತಿದ್ದರು. ಬಂದ ಹಣದಿಂದ ಮಕ್ಕಳಿಗೆ ಹಾಲು, ತಿಂಡಿ ಊಟ ಕೊಡಿಸಿ ಜೀವನ ನಡೆಸಿಕೊಂಡು ಹೋಗುತ್ತಿದ್ದೆವು.’

‘ನಮ್ಮ ತಂದೆ ಸೈಯದ್ ಮಲ್ಲಿಕ್ ಅವರು ಗಂಧದಗುಡಿ, ಬೇಡರ ಕಣ್ಣಪ್ಪ, ಜನನಾಯಕ, ಶಿವ ಮೆಚ್ಚಿದ ಕಣ್ಣಪ್ಪ, ಅಣ್ಣ ತಂಗಿ, ಇತ್ಯಾದಿ ಸಿನೆಮಾಗಳಿಗೆ ಹಾವುಗಳನ್ನು ಕೊಟ್ಟಿದ್ದರು. ಈಗ ಸುಮಾರು 14-15 ವರ್ಷಗಳ ಹಿಂದೆ ಕಾನೂನು ಬಂದಿದೆ. ಆಗಿನಿಂದ ಹಾವಾಡಿಗ ವೃತ್ತಿಯನ್ನು ಮಾಡುತ್ತಿಲ್ಲ. ಹಾವಾಡಿಗ ವೃತ್ತಿಯನ್ನೇ ಜೀವನೋಪಾಯವಾಗಿಸಿಕೊಂಡು ಹೊಟ್ಟೆ ಹೊರೆಯುತ್ತಿದ್ದ ನಮ್ಮ ಸಮುದಾಯದ ನೂರಾರು ಕುಟುಂಬಗಳಿಗೆ ಬೇರೆ ಯಾವ ಬದುಕುವ ದಾರಿ ಗೊತ್ತಿಲ್ಲದೆ ಬೀದಿಗೆ ಬರುವಂತಾಯಿತು.’

‘ಬೇರೆ ಯಾವ ವೃತ್ತಿಯನ್ನು ನಮ್ಮ ತಂದೆ ತಾಯಿ ನಮಗೆ ಕಲಿಸಲಿಲ್ಲ. ಹಾಗಾಗಿ ಬೇರೆ ಕೆಲಸ ಅರಿಯದ ನಾವು ಪಿಟೀಲು, ಕೊಳಲು, ಚೋಟಾ ಭೀಮ್ ಈ ತರಹದ ಸಲಕರಣೆಗಳನ್ನು ಮಾರಾಟ ಮಾಡುತ್ತ ಕಾಲ ಸಾಗಿಸುತ್ತಿದ್ದೇವೆ. ಧರ್ಮಸ್ಥಳದ ಲಕ್ಷ ದೀಪೋತ್ಸವ, ಶಿವರಾತ್ರಿ ಸಮಯದಲ್ಲಿ ಕುಕ್ಕೆ ಸುಬ್ರಮಣ್ಯ, ಶಿರಸಿ ಮಾರಮ್ಮ ಜಾತ್ರೆ, ಮೈಲಾರಲಿಂಗ, ಶಿರಸಿ, ಬಾದಾಮಿ, ಮಾರಿಕಾಂಬಾ, ಕೊಟ್ಟೂರು ಜಾತ್ರೆ, ಉಕ್ಕಡ ಜಾತ್ರೆ ಇತ್ಯಾದಿ ಕರ್ನಾಟಕದ ಯಾವುದೇ ಸ್ಥಳಗಳಲ್ಲಿ ಜಾತ್ರೆ, ಹಬ್ಬಗಳು ನಡೆದರೂ ಒಂದೆರಡು ದಿನ ಕುಟುಂಬ ಸಮೇತ ದಿನಸಿ ಎಲ್ಲ ತೆಗೆದುಕೊಂಡು ಮುಂಚಿತವಾಗಿಯೇ ಹೋಗಿ ಟೆಂಟ್ ಹಾಕಿಕೊಂಡು ಅದರಲ್ಲಿ ವಾಸವಿರುತ್ತೇವೆ. ಹೆಣ್ಣುಮಕ್ಕಳು ಯಾವುದಾದರು ಹಣ್ಣಿನ ಅಂಗಡಿಗಳಿಗೆ ಹೋಗಿ ಖಾಲಿಯಾದ ಕಟ್ಟಿಗೆಯ ಡಬ್ಬಿಗಳನ್ನು 5, 10 ರೂಪಾಯಿ ಕೊಟ್ಟು ತಂದು ಅಡುಗೆ ಮಾಡುತ್ತಾರೆ. ಅವು ಸಿಗಲಿಲ್ಲವೆಂದರೆ ಅಲ್ಲೇ ಅಕ್ಕ ಪಕ್ಕ ಮರದ ಕೆಳಗೆ ಬಿದ್ದಿರುವ ಪುಡಿ ಸೌದೆಯನ್ನು ಆಯ್ದು ತರುತ್ತಾರೆ.’

‘ನಾವು ಮಾತನಾಡುವ ಭಾಷೆಗಿಂತಲೂ ಹೆಚ್ಚು ಕನ್ನಡವನ್ನು ಪ್ರೀತಿಸುತ್ತೇವೆ. ನಾವು ಕನ್ನಡ ಅಭಿಮಾನಿಗಳು. ರಾಜ್ ಕುಮಾರ್ ಕುಟುಂಬವೆಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ನಾವು ಅವರ ಅಭಿನಯದ ಸಿನೆಮಾಗಳನ್ನು ಹೆಚ್ಚು ನೋಡುತ್ತೇವೆ. ಲಾಕ್ ಡೌನ್ ಸಮಯದಲ್ಲಂತೂ ಬದುಕು ತುಂಬ ಶೋಚನೀಯವಾಗಿತ್ತು. ಅವರಿವರು ಕೊಟ್ಟ ದಿನಸಿ, ಊಟ, ತರಕಾರಿಗಳಿಂದ ಜೀವನ ಸಾಗಿಸಿ ಬದುಕಿದೆವು. ಪ್ರತಿ ತಿಂಗಳು ಆಸ್ಪತ್ರೆಯ ಖರ್ಚು ಸಹ ಹೆಚ್ಚಾಗುತ್ತಿದೆ. ಇನ್ನು ಪಿಟೀಲನ್ನು ನಾನೆ ಕೂತು ಮನೆಯಲ್ಲಿ ತಯಾರು ಮಾಡುತ್ತೇನೆ. ಅದಕ್ಕೆ ಬೇಕಾಗುವ ಸಾಮಗ್ರಿಗಳಾದ ಮರ, ಕಡ್ಡಿಗಳನ್ನು, ಹಾಸನಕ್ಕೆ ಮಗನನ್ನು ಕಳಿಸಿ ತರಿಸುತ್ತೇನೆ. ಉಳಿದಂತೆ ಸ್ಕೂಟರ್ ಕೇಬಲ್ ಇಲ್ಲೇ ಗ್ಯಾರೇಜುಗಳಲ್ಲಿ ಕೊಂಡುಕೊಳ್ಳುತ್ತೇನೆ. ಇವುಗಳನ್ನು ಸಿದ್ಧ ಮಾಡುವುದು ಒಂಥರಾ ಸವಾಲಾದರೆ, ಸಿದ್ಧವಾದ ಪಿಟೀಲನ್ನು ಮಾರುವುದು ಕೂಡ ಸಾಹಸವೇ. ತುಂಬ ಜನರು ಸುಮ್ಮನೆ ನೋಡಿಕೊಂಡು ಹೋಗಿಬಿಡುತ್ತಾರೆ… ಯಾರಾದರೂ ಮಕ್ಕಳು ಹಠ ಮಾಡಿದರೆ ಮಾತ್ರ ಕೊಡಿಸುತ್ತಾರೆ. ನುಡಿಸೋಕೆ ಬರಲ್ಲ ಹಾಗೆ, ಹೀಗೆ ಹೇಳುತ್ತಾರೆ. ಮನಸ್ಸಿಟ್ಟು ಮಾಡಿದರೆ ಯಾವುದೂ ಅಸಾಧ್ಯ ಅಲ್ಲ ಒಂದೇ ಸಲ ಯಾವುದೂ ಬರುವುದಿಲ್ಲ. ನುಡಿಸುತ್ತ ಬೆರಳುಗಳನ್ನು ಬದಲಾವಣೆ ಮಾಡಿದರೆ ಯಾವುದೊ ಒಂದು ಸ್ವರವಂತೂ ಬರುತ್ತದೆ. ಹಾಗೆ ಸತತವಾಗಿ ಅಭ್ಯಾಸ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎನ್ನುತ್ತಾರೆ. ಇತ್ತೀಚೆಗೆ ನಮ್ಮ ಸಮುದಾಯದ ಎಷ್ಟೋ ಮಂದಿ ವಿದೇಶಗಳಿಗೆ ಹೋಗಿ ಅಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಾವು ಕಲಿತಿರುವ ವಿದ್ಯೆಯನ್ನು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದೆ.

ನೂರಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ’. ಒಂದೊಂದು ದಿನ ಬಿಸಿಲು, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೆ ಬೆಳಗಿನಿಂದ ಸಂಜೆವರೆಗೂ ನೂರಾರು ಹಾಡುಗಳನ್ನು ನುಡಿಸುತ್ತ ಕೂತರು ಒಂದು ರೂಪಾಯಿ ಕೂಡ ವ್ಯಾಪಾರ ಆಗುವುದಿಲ್ಲ. ಎಲ್ಲಾ ಸಿನೆಮಾ ಹಾಡುಗಳು, ಅಯ್ಯಪ್ಪ ಸ್ವಾಮಿ ಭಕ್ತಿಗೀತೆಗಳು, ಹಳೇ ಹಾಡುಗಳನ್ನು ನುಡಿಸುತ್ತೇನೆ. ಅದರಲ್ಲಿ ಹೆಚ್ಚು ಇಷ್ಟ ಡಾ. ರಾಜ್ ಕುಮಾರ್, ಅಪ್ಪು ನಟಿಸಿದ ಸಿನೆಮಾಗಳು. ಇತ್ತೀಚೆಗೆ ಬಿಪಿ ಶುಗರ್ ಬಂದಿದೆ. ತಿಂಗಳಿಗೆ ಮಾತ್ರೆಗೆ ಅಂತಲೇ 1500/- ರೂಪಾಯಿ ಎತ್ತಿಡಬೇಕು ಎಂದು ತಮ್ಮ ಮನದಾಳದ ನೋವನ್ನು ಹೇಳಿಕೊಂಡರು.

ಪುರಾತನ ಕಾಲದಿಂದಲೂ ಬಂದಿರುವ ಈ ಮನರಂಜನಾತ್ಮಕ ಕಲೆಗಳು ಕಣ್ಮರೆಯಾಗುತ್ತಿರುವುದು ಒಂದೆಡೆಯಾದರೆ ಅದನ್ನೇ ನಂಬಿಕೊಂಡು ಹೊಟ್ಟೆ ಹೊರೆಯುತ್ತಾ ಬದುಕುತ್ತಿದ್ದವರ ಪಾಡು ಕೇಳುವವರಾರು…? ಇವರಲ್ಲಿ ಕಲೆಯಿದೆ ಪ್ರತಿಭೆಯಿದೆ ಆದರೆ ಅದನ್ನು ಆಸ್ವಾದಿಸುವವರಿಲ್ಲ. ಕೊನೇಪಕ್ಷ ಸಿನಿಮಾ ಧಾರಾವಾಹಿಗಳಲ್ಲಿ ಇವರ ಕಲೆಗೆ ಸಂಬಂಧಿಸಿದಂತಹ ಸಣ್ಣಪುಟ್ಟ ಪಾತ್ರಗಳು ಸಿಕ್ಕರೆ ಇಂಥವರ ಜೀವನಕ್ಕೆ ಒಂದಿಷ್ಟು ನೆಮ್ಮದಿ ಸಿಕ್ಕೀತು. ಹಾಗೂ ನಾವುನೀವು ಮಕ್ಕಳಿಗೆ ವಿದೇಶಿ ಆಟಿಕೆಗಳ ಬದಲು ಇಂಥವರು ತಯಾರಿಸಿದ ಕೊಳಲು ಪಿಟೀಲಿನಂತಹ ದೇಶೀ ಆಟಿಕೆಗಳನ್ನು ಕೊಳ್ಳಬೇಕು. ಈ ಮೂಲಕ ಇವರ ಕಲೆಯನ್ನು ಪ್ರೋತ್ಸಾಹಿಸಬಹುದು. ಅದರಿಂದ ಇವರ ಜೀವನಕ್ಕೂ ಒಂದಿಷ್ಟು ಆಸರೆಯಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *