ನ್ಯಾಯ ಕೊಡುವವರಿಗೆ ಸಂವೇದನೆ ಮೂಡಿಸುವವರಾರು?

ಕೆ.ಎಸ್‌.ವಿಮಲಾ
ಕಾನೂನಿನ ಕುಣಿಕೆ ಅನ್ಯಾಯದೆದುರು ಸಡಿಲಗೊಳ್ಳುತ್ತಲೇ ಇರುವುದಾದರೆ ನ್ಯಾಯ ಎಂಬ ಪದಕ್ಕೆ ಅರ್ಥ ಕೊಡುವವರು ಯಾರು? ಆರೋಪಿ ಹೊತ್ತವರ ಸ್ಥಾನ ಮಾನ, ʼಘನತೆʼಗಳ ಗುಣಗಾನ ಮಾಡುತ್ತ ಜನ ಸಾಮಾನ್ಯರನ್ನು ವೆಂಕ ನಾಣಿ ಶೀನ, ಟಾಮ್‌ ಡಿಕ್‌ ಹ್ಯಾರಿ ಎಂಬ ಹಗುರ ಮಾತುಗಳು ನ್ಯಾಯಪೀಠದಿಂದಲೇ ಬರುವುದಾದರೆ ನ್ಯಾಯದ ದಾರಿ ಸುಗಮವಾದೀತೆ? ನ್ಯಾಯ

ನ್ಯಾಯ ಕೇಳಿದವರ ಪ್ರಕರಣದ ಚರ್ಚೆಯ ಬದಲು ದೂರುದಾರರ ಚರಿತ್ರೆ ಮತ್ತು ಚಾರಿತ್ರ್ಯ, ನಡತೆ, ಉದ್ಯೋಗ/ಕೆಲಸಗಳನ್ನು ಮುಖ್ಯವಾಗಿರಿಸಿಕೊಂಡು ನ್ಯಾಯಾಲಯದಲ್ಲಿ ಚರ್ಚೆ ನಡೆಸುವುದು ಎಷ್ಟು ಸೂಕ್ತ?

ಇದನ್ನೂ ನೋಡಿ: ಶಿಗ್ಗಾವಿ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ

ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಕಾನೂನಿನಲ್ಲಿ ನಂಬಿಕೆ ಇಟ್ಟು ಪ್ರತಿ ನಿತ್ಯ ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತವೆ. ಕೊಟ್ಟ ದೂರು ಸ್ವೀಕಾರಗೊಳ್ಳದ, ಸ್ವೀಕರಿಸಿದ ನಂತರವೂ ಮೌನಪೆಟ್ಟಿಗೆಯಲ್ಲ ಭದ್ರವಾಗಿ ಕುಳಿತುಕೊಳ್ಳುವುದು ಹೊಸತಲ್ಲ. ಬೇಸತ್ತು ಸುಮ್ಮನಿರುವುದೂ ಹೊಸತಲ್ಲ. ಆದರೆ ಕೆಲವರು ತಾವು ನ್ಯಾಯ ಪಡೆಯಲೇ ಬೇಕು, ತಮಗಾದದ ಅನ್ಯಾಯಕ್ಕೆ ತಲೆಬಾಗಲಾರೆ ಎಂದು ಸೆಣಸಿದರೆ ಅವರನ್ನು ಗೌರವಿಸುವ ಸಮಾಜವೂ ಇಲ್ಲ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ನ್ಯಾಯಸ್ಥಾನವೂ ಇಲ್ಲ ಎಂಬುದು ಈ ಜಗದ ವಿಪರ್ಯಾಸ.

ದಿನಾಂಕ ೧೪ ಜೂನ್‌ ೨-೨೪ ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಮೇಲಿರುವ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ,ಆಪಾದಿತರ ನಡೆ ನುಡಿಗಳ ಬಗ್ಗೆ ಚರ್ಚೆಯಾಗುವ ಬದಲು ದೂರುದಾರಳ ವಿವರಗಳ ಕೂಲಂಕುಷ ಚರ್ಚೆ ನಡೆಯಿತು.

ದೂರುದಾರಳ ಅಸಹಜ ಸಾವು, ಅವಳು ತಮ್ಮ ದೀರ್ಘ ಹೋರಾಟದಲ್ಲಿ ಎದುರಿಸಿರಬಹುದಾದ ಮಾನಸಿಕ ಯಾತನೆ, ಸಮಾಜದಲ್ಲಿ ʼಪ್ರತಿಷ್ಟಿತರುʼ ಎಂದು ಕರೆಯಿಸಿಕೊಂಡೂ ಇಂತಹ ಆರೋಪಕ್ಕೆ ಒಳಗಾಗುವ, ಮತ್ತು ಅದು ಸಾರ್ವಜನಿಕಗೊಳ್ಳದಂತೆ ತಪ್ಪಿಸಿಕೊಳ್ಳಲು ನ್ಯಾಯಾಲಯಗಳಿಂದ ಪ್ರಸಾರ ನಿರ್ಬಂಧವೂ ಸೇರಿದಂತೆ ತಮಗಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುವವರಿಂದ ಎಂತೆಂತಹ ಬೆದರಿಕೆಗಳನ್ನು ಎದುರಿಸಿರಬಹುದು ಎಂಬುದು ಯಾಕೆ ಈ ಸಮಾಜಕ್ಕೆ ಪ್ರಶ್ನೆಯಾಗುವುದೇ ಇಲ್ಲ? ಅದೂ ನ್ಯಾಯಪೀಠದಲ್ಲಿ ಕುಳಿತು ನ್ಯಾಯದ ಪರವಾಗಿ, ಸಂವಿಧಾನವನ್ನು ಪಾಲಿಸುವ ಪ್ರಮಾಣ ಮಾಡಿದವರೂ ಯಾಕೆ ಇಷ್ಟು ಪಕ್ಷಪಾತಿಗಳಾಗುತ್ತಾರೆ?

ನ್ಯಾಯಪೀಠದಿಂದ ಮಹಿಳೆಯರ ಘನತೆಗೆ ಕುಂದುಂಟು ಮಾಡುವ ಮಾತುಗಳು, ತೀರ್ಪುಗಳು ಈ ಹಿಂದೆಯೂ ಬಂದಿವೆ. ಅತ್ಯಾಚಾರ, ಕಸ್ಟೋಡಿಯಲ್‌ ರೇಪ್‌, ಸಾಮೂಹಿಕ ಅತ್ಯಾಚಾರಗಳಂತಹ ಪ್ರಕರಣಗಳನ್ನು ಬಹಳ ಹಗುರವಾಗಿ ಪರಿಗಣಿಸಿದ, ಆರೋಪಿಗಳ ಬದಲು ದೂರುದಾರರನ್ನೇ ದೂಷಿಸಿದ ಎಷ್ಟೋಂದು ಪ್ರಕರಣಗಳು ಈ ನೆಲದ ಸತ್ಯಗಳಾಗಿ ಸದಾ ಅಣಕಿಸುತ್ತಲೇ ಇವೆ. ೭೦ ರ ದಶಕದ ಮಥುರಾ, ೮೦-೯೦ ರ ಭಾಂವ್ರಿ, ಇನ್ನೂ ಅನೇಕಾನೇಕ ಪ್ರಕರಣಗಳಿವೆ.

ಅವೆಲ್ಲವುಗಳನ್ನೂ ಈಗಲೂ ಮತ್ತೆ ಮತ್ತೆ ಪ್ರಸ್ತಾಪಿಸುತ್ತೇವೆ, ನ್ಯಾಯಕ್ಕಾಗಿ ನಮ್ಮ ಕೂಗು ನಡೆಯುತ್ತಲೇ ಇದೆ ಆದರೆ ಸಂವೇದನೆ ಇನ್ನಷ್ಟು ಮಂದವಾಗುತ್ತಿದೆ. ೨೦೨೦ ರಲ್ಲಿ ಸಂಬಂಧಿಸಿ  ರಾಖೇಶ್.ಬಿ./ಸ್ಟೇಟ್‌ ಆಫ್‌ ಕರ್ನಾಟಕ ಪ್ರಕರಣದಲ್ಲಿ ದೂರುದಾರಳ ನಡತೆಯ ಮೇಲೆ ಮಾಡಿದ ಹಗುರ ಹೇಳಿಕೆ ( ನಂತರ ಅದನ್ನು ಎಕ್ಸಪಂಜ್‌ ಮಾಡಲಾದ ವಿಶೇಷ ಪ್ರಸಂಗದ ಪ್ರಕರಣವದು) ನಮ್ಮ ಸ್ಮ್ರತಿಪಟಲದಿಂದ ಮಾಸಿಲ್ಲವಷ್ಟೆ.

ಈಗ ಮತ್ತೆ ತನ್ನ ತಾಯಿ ನಡೆಸುತ್ತಿದ್ದ ಹೋರಾಟವನ್ನು, ತನ್ನ ತಂಗಿಯ ಘನತೆಯ ಬದುಕಿಗೆ ಕೊಳ್ಳಿ ಇಟ್ಟ ಘಟನೆಗಳಿಗೆ ನ್ಯಾಯ ಕೇಳುತ್ತಿರುವ ಮಗ, ಸ್ವತಃ ನೋವಿನಿಂದ ನರಳುತ್ತಿರುವ ಆ ಯುವತಿ ಇವರೆಲ್ಲ ಘನತೆಗೆ ತಕ್ಕುದಾದವರಲ್ಲವೇ? ಟಾಮ್‌ ಡಿಕ್‌ ಆಂಡ್‌ ಹ್ಯಾರಿಗಳು ಮಾಡಿದರೆ ಮಾತ್ರ ಆರೋಪದಿಂಧ ಅಪರಾಧವಾಗುತ್ತದೆ. ʼಘನತೆವೆತ್ತʼ ಮಾಜಿ ಮಂತ್ರಿಗಳು, ಶಾಸಕರು, ಸಂಸದರು ಇತ್ಯಾದಿ ಬಲಾಢ್ಯರಿಗೆ ವಿಶೇಷ ಅವಕಾಶ ನೀಡಲು ಕಾನೂನು ಮಾನ್ಯತೆ ನೀಡುವುದೇ ಲಿಂಗ ಸಂವೇದನೆಯ, ಸಂವಿಧಾನ ಖಾತ್ರಿಪಡಿಸುವ ಘನತೆಯ ಬದುಕು ಎಲ್ಲರಿಗೂ ಸಿಗುವಂತೆ ಮಾಡುವುದು ನ್ಯಾಯಪೀಠದ ಕೆಲಸ ಎಂಬುದನ್ನು ನ್ಯಾಯಸ್ಥಾನದಲ್ಲಿ ಇರುವವರಿಗೂ ತಿಳಿಸಿಕೊಡುವವರಾರು?

ಇದನ್ನೂ ನೋಡಿ: ಮೋದಿ 3.O ಸರ್ಕಾರ ತನ್ನ ಹಿಂದಿನ ಸರ್ವಾಧಿಕಾರಿ ನೀತಿ ಮುಂದುವರೆಸುತ್ತದೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *