ಬೆಂಗಳೂರು : ಸಂವಿಧಾನದ ಅರಿವು ಇರುವ ನ್ಯಾಯಮೂರ್ತಿಗಳು ನ್ಯಾಯದ ಪರ ನಿಲ್ಲುತ್ತಾರೆ. ಇಲ್ಲದವರು ಬಹು ಸಂಖ್ಯೆಯ ಭ್ರಮೆಗೆ ಒಳಗಾಗುತ್ತಾರೆ. ಏಕ ಸಂಸ್ಕೃತಿ, ಏಕ ವ್ಯಕ್ತಿ, ಏಕತ್ರದ ಜಪ ನಿಲ್ಲಬೇಕು. ಬಹುತ್ವದ ಬಲ ಹೆಚ್ಚಾಗಬೇಕು ಎಂದು ಜಸ್ಟೀಸ್ ಕೆ.ಚಂದ್ರು ಅಭಿಪ್ರಾಯ ಪಟ್ಟರು.
ಅವರು ನಗರದ ಯು.ವಿ.ಸಿ.ಇ. ಅಲ್ಯುಮ್ನಿ ಸಭಾಂಗಣದಲ್ಲಿ ಕ್ರಿಯಾ ಮಾಧ್ಯಮ ಆಯೋಜಿಸಿದ್ದ “ ನನ್ನ ದೂರು ಕೇಳಿ” ಪುಸ್ತಕ ಬಿಡಿಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಸ್ಟೀಸ್ ಎಚ್ ಎನ್ ನಾಗಮೋಹನ್ ದಾಸ್ ಮಾತನಾಡಿ, ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಸರಿ ಸುಮಾರು ಅರ್ಧದಷ್ಟಿರುವ ಮಹಿಳೆಯರನ್ನು ಶೋಷಣಿಗೆ ಒಳಪಡಿಸಿ ಗುಲಾಮರಂತೆ ನಡೆಸಿಕೊಳ್ಳಲಾಯಿತು. ಇದರ ವಿರುದ್ಧ ಮಹಿಳೆಯರು ನ್ಯಾಯಾಲಯದ ಕದ ತಟ್ಟಿದರು. ಈ ಪುಸ್ತಕದಲ್ಲಿ ಜಸ್ಟೀಸ್ ಕೆ. ಚಂದ್ರುರವರು ತಮ್ಮ ತೀರ್ಪಿನ ಬುತ್ತಿಯನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ ಎಂದರು.
ಹಿರಿಯ ನ್ಯಾಯವಾದಿ ಹೇಮಲತಾ ಮಹಿಷಿಯವರು “ಮಹಿಳೆಯರಿಗೆ ನ್ಯಾಯ ಮತ್ತು ನಮ್ಮ ನ್ಯಾಯ ವ್ಯವಸ್ಥೆ ಎಂಬ ವಿಷಯದ ಕುರಿತಾಗಿ ಮಾತನಾಡಿದರು. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ ಪ್ರಾಧ್ಯಾಪಕರಾದ ಡಾ. ಭಾರತಿ ದೇವಿ ಮತ್ತು ಪತ್ರಕರ್ತ ಸತೀಶ್ ಜಿ.ಟಿ ವೇದಿಕೆಯ ಮೇಲೆ ಇದ್ದರು. ಕ್ರಿಯಾ ಮಾಧ್ಯಮದ ನಿರ್ದೇಶಕರಾದ ಕೆ.ಎಸ್. ವಿಮಲಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ಗುರುರಾಜ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದಿದರೆ, ಕ್ರಿಯಾ ಮಾಧ್ಯಮದ ನಿರ್ದೇಶಕ ಎನ್,ಕೆ ವಸಂತರಾಜ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ನೂರಾರು ಪುಸ್ತಕ ಪ್ರೀಯರು ಆಗಮಿಸಿದ್ದರು.







