ಬರೀ ಗುಟುರು ಅಷ್ಟೇ -ರಮೇಶ ಗಬ್ಬೂರ್

ಬರೀ ಗುಟುರು ಅಷ್ಟೇ…

ರಮೇಶ ಗಬ್ಬೂರ್..

ನಮ್ಮಜ್ಜ ತಾತ ಮುತ್ತಾತನಿಂದ ಹಿಡಿದು
ನೀರು ನೆಲ ಸಂಪತ್ತು ನಮಗಷ್ಟೇ ಮೀಸಲಿತ್ತು..
ಭೂ ಒಡೆಯರಾದ ನಾವು ನಿಮಗೆ
ಅನ್ನ ನೀರು ಹಣ ಮುಟ್ಟಿಸಿಕೊಳ್ಳದೆ ಎತ್ತಿ ಹಾಕುತ್ತಿದ್ದೆವು…
ನಿಮ್ಮ ನೆರಳು ಉಗುಳು ನೆಲಕ್ಕೆ ಬೀಳದಂತೆ ಮಾಡಿದ್ದ ನಮಗೆ ನೀವು ಬುದ್ಧಿ ಹೇಳುವಂತಾಗಿದ್ದಕ್ಕಾಗಿ ನಾವು ಮಾನಸಿಕ ಅಸ್ವಸ್ಥರಾಗಿದ್ದೇವೆ… ಬರೀ ಗುಟುರು ಅಷ್ಟೇ

ಇದನ್ನೂ ಓದಿ : ಒಳಮೀಸಲಾತಿ ಜಾರಿ ವಿಳಂಬ: ಎಚ್‌.ಸಿ.ಮಹದೇವಪ್ಪ ರಾಜಿನಾಮೆಗೆ ಆಗ್ರಹಿಸಿ ಮನೆಗೆ ಮುತ್ತಿಗೆ

ಬೆತ್ತಲಾದ ನೀವು ನಮ್ಮ
ಮನೆಯ ಮುಂದೆ ಬಂದು
ಅಯ್ಯಾ ನೀರು ಹಾಕಿ ಎಂದು
ಕೈ ಮುಗಿದು ಬೇಡಿ ಕೊಂಡಾಗ
ಮೈಮೇಲೆ ಮುಸುರೆ ನೀರು ಚೆಲ್ಲುತ್ತಿದ್ದೆವು
ಈಗ ನಿಮ್ಮ ಮನೆಗಳಿಗೆ ನೀರು ಬೀಳುತ್ತಿದೆ..
ಕೊಳಕರಾಗಿದ್ದ ನಿಮ್ಮನ್ನು ಕೊಳಾಯಿ ನೀರು ತೊಳೆಯುತ್ತಿರುವುದ ಕಂಡು
ನಾವು ಮಾನಸಿಕ ಸ್ವಸ್ಥರಾಗಿದ್ದೇವೆ..

ನಮ್ಮ ಮನೆಯ ದನದ ಕೊಟ್ಟಿಗೆಯನ್ನು ಬಳೆಯುತ್ತಿದ್ದೀರಿ,
ರೊಟ್ಟಿಗಾಗಿ ಕೈ ಒಡ್ಡುತ್ತಿದ್ದೀರಿ,
ರಾತ್ರಿ ತಿಂದು ಉಳಿದ ಹಳಸಿದ್ದನ್ನು ನಾವು ನಿಮಗೆ ನೀಡಿ ಖುಷಿಯಾಗುತ್ತಿದ್ದೆವು…
ಕತ್ತಲಲ್ಲಿದ್ದ ನಿಮ್ಮ ಮನೆಗೆ ಕರೆಂಟ್ ಬಂದು  ಒಲೆಯಲ್ಲಿ ಅನ್ನ ಬೇಯುತ್ತಿರುವುದ ಕಂಡು..
ನಮ್ಮ ಮನೆಯ ಮುಂದೆ ಬೇಡುವವರಿಲ್ಲದೆ ನಾವು ಮಾನಸಿಕ ಅಸ್ವಸ್ಥರಾಗಿದ್ದೇವೆ..

ನಮ್ಮ ಎತ್ತುಗಳನ್ನು ಕಟ್ಟುವವರಿಲ್ಲ ಬಂಡಿಯನ್ನು ನಡೆಸುವವರಿಲ್ಲ,
ಬಾರೋಕೋಲು ತಯಾರಿಸಿ ಕೊಡುವವರಿಲ್ಲ,
ಚಪ್ಪಲಿಯ ಹೊಲಿಯುವವರಿಲ್ಲ..
ಕೆರವ ಕೊಂಕಳದಲ್ಲಿ ಇಟ್ಟುಕೊಂಡು
ಬಾಯಿಂದ ಊದಿ ಕೈಯಿಂದ ಒರೆಸಿ ಕೊಡುವವರಿಲ್ಲದೆ ನಾವು ಮಾನಸಿಕ ಸ್ವಸ್ಥರಾಗಿದ್ದೀವಿ..

ನೀವೀಗ ಟ್ರ್ಯಾಕ್ಟರ್ ಹೊಡೆಯುತ್ತಿದ್ದೀರಿ
ಕಾರು ಚಲಿಸುತ್ತಿದ್ದೀರಿ, ಕಾರು ಲಾರಿಗಳ ಮಾಲೀಕರಾಗಿದ್ದೀರಿ ಅಂತೆಯೇ ಪೈಲೆಟ್ಗಳಾಗಿದ್ದೀರಿ..
ನಮ್ಮ ಮನೆಯ ಚಕ್ಕಡಿ ಹೊಡಿಯುವ ನೀವು ಎಷ್ಟು ಬೆಳೆದಿರೆಂದರೆ ಆ ಹೊಟ್ಟೆಯ ಕಿಚ್ಚು ನಮ್ಮನ್ನು ಸುಡುವಷ್ಟು
ಮಾನಸಿಕ ಅಸ್ವಸ್ಥರಾಗಿದ್ದೇವೆ ..

ಅಂದು ನೀವು ಹರಿದ ಬಟ್ಟೆ ತೊಟ್ಟು,
ಅಕ್ಷರ ಬೇಡುವ ಆಸೆಯಿಂದ ಶಾಲೆಯ ಮೆಟ್ಟಿಲು ಹತ್ತದೇ ವಿಲವಿಲ ಒದ್ದಾಡುತ್ತಿದ್ದೀರಿ..
ಆದರೆ ಈಗ ಶಾಲೆಯ ಅಂಗಳ ತುಳಿದು ಅರಿವಿನ ಪಯಣ ಮಾಡಿ
ಆಕಾಶಕ್ಕೆ ಹಾರಿ ನೌಕರಿ ಹಿಡಿದಿದ್ದೀರಿ, ಅಧಿಕಾರಿಗಳಾಗಿದ್ದೀರಿ, ಶಾಸಕರಾಗಿದ್ದೀರಿ, ಮಂತ್ರಿಗಳಾಗಿದ್ದೀರಿ ನಮ್ಮ ಮನೆಯ ಅಂಗಳದಲ್ಲಿ ಗೇಟು ಕಾವಲುಗಾರರಿಲ್ಲದೆ ನಾವು ಮಾನಸಿಕ ಅಸ್ವಸ್ಥರಾಗಿದ್ದೇವೆ..

ಅಂದು ರೋಗ ರುಜಿನಗಳು ಬಂದು
ವಿಲವಿಲ ಒದ್ದಾಡುತ್ತ ಸಾಯುವಾಗ,
ಸಾಲ ಪಡೆಯಲು ಬಂದ ನಿಮ್ಮನ್ನು
ಹಣಕ್ಕೆ ಒತ್ತೆ ಇಟ್ಟುಕೊಂಡು ಜೀತ ಮಾಡಿಸಿಕೊಳ್ಳುತ್ತಿದ್ದೆವು..
ಆದರೆ ಈಗ ನೀವು ಆರೋಗ್ಯ ಆಹಾರ ಮೀಸಲಾತಿ ಎಲ್ಲವುಗಳನ್ನು ಪಡೆದಿದ್ದೀರಿ ನಾವೀಗ ಅನಾರೋಗ್ಯ ಪೀಡಿತರಾಗಿ ಮಾನಸಿಕ ಅಸ್ವಸ್ಥರಾಗಿದ್ದೇವೆ…

ಅಂದು ಊರಿಗೆ ಒಡೆಯರಾದ ನಮ್ಮನ್ನು ಅನ್ಯಾಯವಾಗಿದೆ ಎಂದು ನೀವು ನ್ಯಾಯ ಕೇಳಲು ಬಂದಾಗ
ನಮಗೆ ನ್ಯಾಯ ಮಾಡಿಕೊಂಡೆವೆ ಹೊರತು ನಿಮಗೆ ನ್ಯಾಯ ನೀಡಲೇ ಇಲ್ಲ..
ನೀವು ಪಾಪ ಮಾಡಿದವರು
ದೇವರು ನಿಮ್ಮನ್ನು ಪಾಪದಲಿ
ಹುಟ್ಟಿಸಿದ್ದಾನೆ ಎಂದೆವು…
ದೇವರನ್ನೇ ಸೃಷ್ಟಿಸಿದ ನಮಗೆ ನೀವು
ನ್ಯಾಯ ಹೇಳುವವರಾಗಿದ್ದೀರಿ
ಅದಕ್ಕಾಗಿ
ತುಂಬಾ ಮಾನಸಿಕ ಸ್ವಸ್ಥರಾಗಿದ್ದೇವೆ…

ಮಾಡುವುದೆಲ್ಲ ಮಾಡಿ ನಾಟಕ ಮಾಡುತ್ತಾ ಮಾನಸಿಕ ಅಸ್ವಸ್ಥರೆಂದು ತಪ್ಪಿಸಿಕೊಳ್ಳುತ್ತಿದ್ದೀರಲ್ಲವೇ…
ಮನುವಾದಿಗಳಾದ ನೀವು
ಹೀಗೆಯೆ ನಾಟಕ ಮಾಡುತ್ತಿರುವಿರೆಂದು ನಮಗೆ ಗೊತ್ತು…
——
ಮಾಡದ ತಪ್ಪಿಗೆ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಾಗ,
ಹೊಲಸು ತಿನ್ನುವ ಪ್ರಾಣಿಗಳ ಮುಟ್ಟಿಯೂ ನನ್ನನ್ನು ಮುಟ್ಟದಿದ್ದಾಗ,
ನನ್ನಕ್ಕ ತಂಗಿಯರ ಸೆರಗಿನಡಿ ಜಾತಿ ಬಿಟ್ಟು ಮಲಗಿದಾಗ,
ಮಲ ತಿನ್ನಿಸಿದಾಗ,
ಅಯ್ಯೋ….
ನಮಗಾದ ಅನ್ಯಾಯ ಅತ್ಯಾಚಾರ ಅಪಮಾನ
ನಿರಾಕರಣೆಗಾಗಿ ನಾವೆಷ್ಟು ಸಲ ಮಾನಸಿಕ ಅಸ್ವಸ್ಥರಾಗಿರಬೇಕಿತ್ತು…

ನಮಗಾದ ಅನ್ಯಾಯಕ್ಕಾಗಿ ಪ್ರತಿಸಲವೂ ದೇವರು ನಮಗೆ ಪ್ರೇರಣೆ ನೀಡುತ್ತಿದ್ದ..
ನಿಮ್ಮ ಕಪಾಳಕ್ಕೆ ಹೊಡೆಯಿರಿ,
ಚಪ್ಪಲಿ ತಗೊಂಡು ಹೊಡೆಯಿರಿ,
ಕೈಕಾಲು ಕಟ್ಟಿ ಎಳೆದುಕೊಂಡು ಹೋಗಿರಿ,
ತಲೆಬೋಳಸಿ ಊರ ತುಂಬಾ ಮೆರವಣಿಗೆ ಮಾಡಿಸಿ,
ಊರಿಂದ ಬಹಿಷ್ಕಾರ ಹಾಕಿರಿ, ಸುಟ್ಟು ಬಿಡಿರಿ ತಲೆ ಕಡಿಯಿರಿ..
ಹೀಗೆ ಅನೇಕ ಸಲ ಅನೇಕ ಅನ್ಯಾಯಕ್ಕಾಗಿ
ಪ್ರೇರಣೆ ನೀಡಿದ್ದರೂ ನಾವು ಎಷ್ಟು ಸಲ ಮಾನಸಿಕ ಅಸ್ವಸ್ಥರಾಗಿರಬೇಕಿತ್ತು…

ಯೋಚಿಸಿ..
ನೀವು ಕಾಲಕಾಲದಿಂದಲೂ
ಜಾತಿ ಗ್ರಸ್ತ ಮನಸ್ಸಿನ
ಮಾನಸಿಕ ಅಸ್ವಸ್ಥರೇ
ನಾವು
ತಾಳಿಕೊಂಡ ಗೂಳಿಗಳು
ಇನ್ನೂ ಗುದ್ದಿಲ್ಲ
ಬರೀ ಗುಟುರು ಅಷ್ಟೇ…

 

ಇದನ್ನೂ ನೋಡಿ : ನಮಗೆ 10 ಸಾವಿರ ಪಿಂಚಣಿ ನೀಡಿ – ವಿಕಲಚೇತನರ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *