ಬೆಂಗಳೂರು: ಗ್ರಾಚ್ಯುಟಿ(ಉಪಧನ)ಗಾಗಿ, ಮುಷ್ಕರದ ಹಕ್ಕಿಗಾಗಿ, ಐಸಿಡಿಎಸ್ ಯೋಜನೆಗೆ ಅಗತ್ಯ ಅನುದಾನ ಮತ್ತು ಬಲಿಷ್ಠಪಡಿಸಲಿಕ್ಕಾಗಿ ಒತ್ತಾಯಿಸಿ ಅಂಗನವಾಡಿ ನೌಕರರಿಗೆ ಶಾಸನ ಬದ್ಧ ಸವಲತ್ತುಗಳಿಗಾಗಿ ಆಗ್ರಹಿಸಿ ಜುಲೈ 26ರಿಂದ ಅನಿರ್ಧಿಷ್ಟ ಅವಧಿ ಪಾರ್ಲಿಮೆಂಟ್ ಎದುರು ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ತಿಳಿಸಿದೆ.
ಇಂದು(ಜುಲೈ 06) ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರು, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಶಾಲಾ ಪೂರ್ವ ಶಿಕ್ಷಣದೊಂದಿಗೆ 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಆಹಾರ ಭದ್ರತೆ ಒದಗಿಸುವ ಪ್ರಮುಖ ಕೆಲಸಗಳನ್ನು ಅತ್ಯಲ್ಪ ಗೌರವ ಧನಕ್ಕೆ ವಹಿಸಲಾಗಿದೆ, ಮಾತ್ರವಲ್ಲದೆ ಐಸಿಡಿಎಸ್ ಯೇತರ ಹಾಗೂ ಇಲಾಖೇತರ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ಗ್ರಾಚ್ಯುಟಿ ಕಾಯ್ದೆ 1972ರ ಸಾಮೂಹಿಕ ಭದ್ರತಾ ಕಲ್ಯಾಣ ಶಾಸನವಾಗಿದೆ ಮತ್ತು ಎಲ್ಲಾ ವ್ಯಕ್ತಿಗಳಿಗೆ ರಕ್ಷಣೆಯನ್ನು ಕೊಡುವ ಅಗತ್ಯವನ್ನು ಗುರ್ತಿಸಿದೆ. ಸಿಐಟಿಯು ನೇತೃತ್ವದಲ್ಲಿ ಸಂಘಟನೆ 2012ರಲ್ಲಿ ಗುಜರಾತ್‌ನಲ್ಲಿ ಬಲವಂತದಿಂದ ಕೆಲಸದಿಂದ ತೆಗೆದು ಹಾಕಲ್ಪಟ್ಟ 10 ಜನ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮಗೆ ಗ್ರಾಚ್ಯುಟಿ ಬರಬೇಕೆಂದು ಕೋರ್ಟ್‌ಗೆ ದೂರು ದಾಖಲಿಸಿದ್ದರು ಅದರ ಫಲವಾಗಿ 25 ಏಪ್ರಿಲ್ 2022ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ, 1972ರ ಗ್ರಾಚ್ಯುಟಿ ಸೌಲಭ್ಯವನ್ನು ಅಂಗನವಾಡಿ ನೌಕರರಿಗೆ ಅನ್ವಯಿಸಲು ಕೆಳಕಂಡ ಮಾನದಂಡಗಳನ್ನು ಪರಿಗಣಿಸಿದೆ.
ಭಾರತ ಸರ್ಕಾರ ಮತ್ತು ಅಂಗನವಾಡಿ ನೌಕರರ ನಡುವೆ ಉದ್ಯೋಗ ಮಾಲೀಕರ ಸಂಬಂಧವಿದೆ ಆದರೂ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ವಾದ ಮತ್ತು ಇದುವರೆಗೂ ಕೆಳಹಂತದ ನ್ಯಾಯಾಲಯಗಳ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಅಂಗನವಾಡಿ ನೌಕಕರಿಗೆ ನೀಡಲಾಗುತ್ತಿರುವ ಗೌರವ ಧನವನ್ನು ವೇತನದ ವ್ಯಾಖ್ಯಾನಕ್ಕೆ ಒಳಪಡಿಸಲಾಗಿದೆ. ವೇತನದ ಮೇಲೆ ನೇಮಿಸಿಕೊಂಡಿರುವುದರಿಂದ 1972ರ ಕಾಯ್ದೆಯ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನೌಕರರು ಆಗಿರುತ್ತಾರೆ.
ಅಂಗನವಾಡಿ ಕೇಂದ್ರಗಳಲ್ಲಿ ನಿಯೋಜಿಸಲಾದ ಕೆಲಸವು ಅರೆಕಾಲಿಕವಲ್ಲ, ಪೂರ್ಣ ಸಮಯ ಎಂದು ಸ್ಪಷ್ಟಪಡಿಸಿದೆ. ವೇತನವನ್ನು ಮೇಲ್ದರ್ಜೆಗೇರಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನ ಜಾರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಚ್ಯುಟಿ ಕಾಯ್ದೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯವನ್ನು ಅನ್ವಯಿಸಬೇಕು ಎಂದು ಆಗ್ರಹಿಸಿ ಪಾರ್ಲಿಮೆಂಟ್ ಎದುರು ಪ್ರತಿಭಟಿಸಲಾಗುತ್ತಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಸುನಂದಾ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ನಿಗಧಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ 2022ರ ಮಾರ್ಚ್ 29ರಂದು ಹೊರಡಿಸಿ ಸುತ್ತೋಲೆಯನ್ನು ವಾಪಸ್ಸು ಪಡೆಯಬೇಕು. ಐಸಿಡಿಎಸ್ ಯೋಜನೆ ಪ್ರಾರಂಭವಾಗಿ 48 ವರ್ಷಗಳಾದರೂ ಅಂಗನವಾಡಿ ನೌಕರರ ಖಾಯಂ ಇಲ್ಲ, ಕಾನೂನುಗಳನ್ನು ಅನ್ವಯಿಸಿಲ್ಲ. ಇಂದಿಗೂ 3-4 ತಿಂಗಳಿಗೊಮ್ಮೆ ವೇತನ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ, ಹೆಚ್ಚುತ್ತಿರುವ ಶಿಸ್ತು ಕ್ರಮಗಳು, ಇಂದಿಗೂ ಮನುಷ್ಯರಂತೆ ಕಾಣದೆ ತುಚ್ಚವಾಗಿ ನಡೆಸಿಕೊಳ್ಳುವುದು, ಎಲ್ಲ ಕೆಲಸಗಳಿಗೂ ಮಹಿಳೆಯರೆಂದು ಪರಿಗಣಿಸದೇ ವಸ್ತುಗಳಂತೆ ನಡೆಸಿಕೊಳ್ಳುವ ವಿಧಾನಗಳಿವೆ. ಇಂತಹ ವಿಧಾನಗಳನ್ನು ವಿರೋಧಿಸಿ ಸಂಘಟಿತರಾಗಿ ಪ್ರತಿಭಟಿಸುವ ಹಕ್ಕನ್ನು ಕೂಡಾ ಇಂದು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಇದರಿಂದ ಅಂಗನವಾಡಿ ನೌಕರರ ಸಾಮೂಹಿಕ ಚೌಕಾಸಿಯ ಹಕ್ಕಿಗೆ ಧಕ್ಕೆ ಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಸುತ್ತೋಲೆಯನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷೆ ಟಿ. ಲೀಲಾವತಿ ಅವರು ಮಾತನಾಡಿ, 26 ಸಾವಿರ ಕನಿಷ್ಠ ವೇತನ ಮತ್ತು ರೂ. 10 ಸಾವಿರ ನಿವೃತ್ತಿ ವೇತನಕ್ಕಾಗಿ ಒತ್ತಾಯಿಸಿ ಪ್ರತಿಭಟಿಸಲಾಗುತ್ತಿದೆ. ಅತ್ಯಂತ ಶ್ರೇಷ್ಠ ಸಂಪನ್ಮೂಲಗಳಾದ ಮಾನವ ಸಂಪನ್ಮೂಲಗಳ ಪೂರಕ ಬೆಳವಣಿಗೆಗೆ, ಅಪೌಷ್ಠಿಕತೆಯ ವಿರುದ್ಧ ಸತತ ಹೋರಾಟ ನಡೆಸಿ ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಿ, ಕೊರೊನಾ ಸಂದರ್ಭದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಈ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಇಂತಹ ಅಂಗನವಾಡಿ ಮಹಿಳೆಯರು ಬೆಲೆಯೇರಿಕೆಯ ಇಂದಿನ ದಿನಗಳಲ್ಲಿ ತಮ್ಮ ಜೀವನ ಕಷ್ಟದಲ್ಲಿ ನಡೆಸಬೇಕಾಗಿದೆ. ಇಂದಿಗೂ ಕೇಂದ್ರ ಸರ್ಕಾರ ಕೇವಲ 4500 ರೂ. ಮಾತ್ರ ಕೊಡುತ್ತಿದೆ. ಉಳಿದ ವೇತನವನ್ನು ರಾಜ್ಯ ಸರ್ಕಾರದ ಬಳಿ ನಿರಂತರ ಹೋರಾಟದಿಂದ ತೆಗೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಗೆ 40% ಅನುದಾನ ಕಡಿತ ಮಾಡಿ, ಅಧಿಕಾರಿಗಳ ವೇತನಗಳಲ್ಲಿ 75% ಕಡಿತ ಮಾಡಿದೆ, ಮಾತ್ರವಲ್ಲದೆ ರಾಜ್ಯ ಸರ್ಕಾರಕ್ಕೆ ಕೊಡಬೇಕಾದ ಜಿಎಸ್‌ಟಿ ಹಣವನ್ನು ಕೊಡದೇ ಸತಾಯಿಸುತ್ತಿದೆ. ಇದರಿಂದ ಐಸಿಡಿಎಸ್ ಯೋಜನೆ ಮತ್ತು ಅಂಗನವಾಡಿ ನೌಕರರು ಸತತವಾಗಿ ಕಷ್ಟವನ್ನು ಅನುಭವಿಸಬೇಕಾಗಿದೆ. ಆದ್ದರಿಂದ ಅಗತ್ಯ ಅನುದಾನ, ರಾಜ್ಯ ಸರ್ಕಾರದ ಪಾಲಿನ ಜಿಎಸ್‌ಟಿ ಪಾವತಿ ಮತ್ತು ತನ್ನ ಪಾಲಿನ ವೇತನ ಹೆಚ್ಚಳವನ್ನು ಮಾಡಬೇಕು ಮತ್ತು ಇತರೆ ಬೇಡಿಕೆಗಳನ್ನು ಒತ್ತಾಯಿಸಿ 2022ರ ಜುಲೈ 26ರಿಂದ ಅನಿರ್ಧಿಷ್ಟ ಹೋರಾಟವನ್ನು ಪಾರ್ಲಿಮೆಂಟ್ ಎದುರು ನಡೆಸಲಾಗುತ್ತಿದೆ.
ಜುಲೈ 26ರ ಹೋರಾಟದ ಭಾಗವಾಗಿ ಜುಲೈ 11ರಂದು ರಾಜ್ಯದಲ್ಲಿಯೂ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಎಲ್ಲಾ ಪಾರ್ಲಿಮೆಂಟ್ ಸದಸ್ಯರ ಮನೆ/ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು.