ಜುಲೈ 26, 1953ರಂದು ಕ್ಯೂಬನ್ ಕ್ರಾಂತಿಯ ಕಿಡಿ ಹೊತ್ತಿತ್ತು. ಅಂದು ಫಿಡೆಲ್ ಕ್ಯಾಸ್ಟ್ರೋ ನಾಯಕತ್ವದ ಗೆರಿಲ್ಲಾ ಪಡೆ ಮೊಂಕಾಡಾ ಮಿಲಿಟರಿ ನೆಲೆಯ ಮೇಲೆ ಗೆರಿಲ್ಲಾ ದಾಳಿ ನಡೆಸಲಾಗಿತು. ಈ ದಾಳಿ ವಿಫಲವಾಗಿ ಕ್ಯಾಸ್ಟ್ರೋ ಮತ್ತು ಇತರ ಗೆರಿಲ್ಲಾಗಳನ್ನು ಬಂಧಿಸಲಾಯಿತಾದರೂ, ಜುಲೈ 26 ಚಳುವಳಿ ಎನ್ನುವ ವಿಮೋಚನಾ ಸಮರಕ್ಕೆ ಇದು ನಾಂದಿಯಾಯಿತು. ದೀರ್ಘ ಗೆರಿಲ್ಲಾ ಹೋರಾಟದ ನಂತರ 1959ರ ಜನವರಿ 1ರಂದು ಅಮೆರಿಕನ್ ಸಾಮ್ರಾಜ್ಯಶಾಹಿಯ ಬಾಲಬಡುಕ ಸರ್ವಾಧಿಕಾರಿ ಬಾಟಿಸ್ಟಾ ಸರಕಾರವನ್ನು ಉರುಳಿಸಲಾಯಿತು. ಆಗಿನಿಂದ ಜುಲೈ 26ನ್ನು ಕ್ಯೂಬಾ ಕ್ರಾಂತಿಯನ್ನು ನೆನಪಿಸಿಕೊಂಡು ಅದರ ಕ್ರಾಂತಿಕಾರಿ ಸಾಧನೆಗಳನ್ನು ಉಳಿಸಿ ಬೆಳೆಸಲು ಮತ್ತು ಕ್ಯೂಬಾದ ಜತೆ ಸೌಹಾರ್ದ ಕಾರ್ಯಾಚರಣೆ ನಡೆಸಲು ‘ಕ್ಯೂಬಾ ಸೌಹಾರ್ದತಾ ದಿನ’ವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಜುಲೈ 11ರಂದು ಕ್ಯೂಬಾದಲ್ಲಿ ನಡೆದ ಪ್ರತಿಭಟನೆಗಳನ್ನು ಬಳಸಿಕೊಂಡು ಅಮೆರಿಕ ಮೂಗುತೋರಿಸಲು ಅಪಪ್ರಚಾರ ಮಾಡಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ 2021ರ ಜುಲೈ 26 ‘ಕ್ಯೂಬಾ ಸೌಹಾರ್ದತಾ ದಿನ’ವು ವಿಶೇಷ ಮಹತ್ವ ಪಡೆದಿತ್ತು. ಕ್ಯೂಬಾದ ವಿರುದ್ಧ ಆರ್ಥಿಕ ದಿಗ್ಬಂಧನವನ್ನು ಮುಂದುವರೆಸುವುದು ಮತ್ತು ಕ್ಯೂಬಾದಲ್ಲಿ ಅಮೆರಿಕನ್ ಮೂಗುತೂರಿಸುವಿಕೆ ವಿರುದ್ಧ ಖಂಡನೆ ಮಾಡುವ ಪ್ರತಿಭಟನೆಗಳು ನಡೆದವು.
ಕೋವಿಡ್ ನಿರ್ಬಂಧಗಳಿಂದಾಗಿ ‘ಕ್ಯೂಬಾ ಜತೆ ಸೌಹಾರ್ದದ ರಾಷ್ಟ್ರೀಯ ಸಮಿತಿ’ ಮತ್ತು ‘ಅಖಿಲ ಭಾರತ ಶಾಂತಿ ಮತ್ತು ಸೌಹಾರ್ದತಾ ಸಂಘಟನೆ’ ಜಂಟಿಯಾಗಿ ಕ್ಯೂಬಾದ ಜತೆ ಸೌಹಾರ್ಧತೆಗಾಗಿ ಒಂದು ಅಖಿಲ ಭಾರತ ವೆಬಿನಾರನ್ನು ಸಂಘಟಿಸಿತ್ತು. ಇದರಲ್ಲಿ 16 ವಿವಿಧ ಸಂಘಟನೆಗಳ ಕ್ಷೇತ್ರಗಳ ನಾಯಕರು ಕ್ಯೂಬಾದಲ್ಲಿ ಅಮೆರಿಕನ್ ಮೂಗುತೂರಿಸುವಿಕೆಯನ್ನು ಖಂಡಿಸಿ, ಕ್ಯೂಬಾದ ಜತೆ ಸೌಹಾರ್ಧತೆ ಘೋಷಿಸಿದರು. ‘ಅಖಿಲ ಭಾರತ ಶಾಂತಿ ಮತ್ತು ಸೌಹಾರ್ದತಾ ಸಂಘಟನೆ’ಯ ಫೇಸ್ ಬುಕ್ ಪುಟದಲ್ಲಿ ಲೈವ್ ಆಗಿ ಪ್ರಸಾರವಾದ ಈ ಕಾರ್ಯಕ್ರಮದ ವಿಡಿಯೊವನ್ನು ಹಲವು ವರ್ಗ ಮತ್ತು ಸಾಮೂಹಿಕ ಸಂಘಟನೆಗಳು ಮರುಪ್ರಸಾರ ಮಾಡಿ 10 ಸಾವಿರಕ್ಕೂ ಹೆಚ್ಚು ಜನ ಅದರಲ್ಲಿ ಭಾಗವಹಿಸಿದರು. ಅಲ್ಲಿ ಕೇಳಿ ಬಂದ ಕೆಲವು ಮಾತುಗಳು.
ವೆಬಿನಾರಿನಲ್ಲಿ ಕೇಳಿ ಬಂದ ಮಾತಗಳು
“ಕ್ಯೂಬಾದಲ್ಲಿ ಇಂದಿನ ಆಹಾರ, ಔಷಧಿ ಮುಂತಾದ ಆವಶ್ಯಕ ಸಾಮಗ್ರಿಗಳ ಕೊರತೆಯು, ಕೋವಿಡ್ ಪರಿಸ್ಥಿತಿಯನ್ನು ಲೆಕ್ಕಿಸದೆ ಇತ್ತೀಚೆಗೆ ಇನ್ನಷ್ಟು ಬಿಗಿಗೊಳಿಸಿದ ಅಮೆರಿಕದ ಆರು ದಶಕಗಳ ಕರಾಳ ಆರ್ಥಿಕ ದಿಗ್ಬಂಧನದ ನೇರ ಪರಿಣಾಮ. ಈ ಪರಿಸ್ಥಿತಿಯನ್ನು ಹಾಗೂ ತನ್ನ ಅಗಾಧ ಪ್ರಚಾರ ಯಂತ್ರ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿ, ಕ್ಯೂಬನ್ ಸರಕಾರದ ವಿರುದ್ಧ, ಪ್ರತಿಭಟನೆಗಳ ಸ್ವರೂಪದ ಬಗ್ಗೆ, ಅಲ್ಲಿನ ಪರಿಸ್ಥಿತಿಯ ಕಾರಣಗಳ ಬಗ್ಗೆ ಭಾರಿ ಅಪಪ್ರಚಾರದ ಮೂಲಕ ಆಂತರಿಕ ರಾಜಕೀಯ ಪ್ರಕ್ರಿಯೆಗಳಲ್ಲಿ ಮೂಗುತೂರಿಸಿ ಅಸ್ಥಿರಗೊಳಿಸಲು ಅಮೆರಿಕನ್ ಸರಕಾರ ಪ್ರಯತ್ನಿಸುತ್ತಿದೆ. ಇದನ್ನು ಬಯಲು ಮಾಡಿ ಕ್ಯೂಬಾಕ್ಕೆ ಸೌಹಾರ್ದ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ”
ನೀಲೋತ್ಪಲ ಬಸು, ಕ್ಯೂಬಾ ಜತೆ ಸೌಹಾರ್ದದ ರಾಷ್ಟ್ರೀಯ ಸಮಿತಿ ಸಂಚಾಲಕ
“ಕ್ಯೂಬಾದ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡಿ ಅಸ್ಥಿರಗೊಳಿಸುವ ಅಮೆರಿಕದ ಪ್ರಯತ್ನಗಳನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಖಂಡಿಸುತ್ತದೆ. 1990ರಲ್ಲಿ ಗೋಧಿ ಹಡಗುಗಳನ್ನು ಕಳಿಸುವ ಮೂಲಕ ಪ್ರಾಯೋಗಿಕವಾಗಿ ಸೌಹಾರ್ದತೆ ತೋರಿಸಿದಂತೆ ಮತ್ತೆ ಇಂದಿನ ಪರಿಸ್ಥಿತಿಯಲ್ಲಿ ಭಾರತ ಮಾಡಲಿದೆ. ಮನ್ರೋ ಧೋರಣೆಯಿಂದ ಇತ್ತೀಚಿನ ಹೆಲ್ಮ್ಸ್-ಬರ್ಟನ್ ಕಾಯಿದೆಯ ಬಳಕೆಯವರೆಗೆ ಕ್ಯೂಬಾವನ್ನು ಮಣಿಸಲು ಅಮೆರಿಕ ಶತಪ್ರಯತ್ನ ಮಾಡುತ್ತಿದೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವ್ಯಾಪಕ ಸಾವು-ನೋವುಗಳನ್ನು ತಡೆಯುವಲ್ಲಿ ಅಮೆರಿಕ ಪೂರ್ಣವಾಗಿ ಸೋತಿದೆ. ಆದರೆ ಕ್ಯೂಬಾ ಅಮೆರಿಕದ ಕಟುವಾದ ದಿಗ್ಬಂಧನದ ಪರಿಸ್ಥಿತಿಯಲ್ಲೂ ತನ್ನ ಉನ್ನತ ಮಟ್ಟದ ಆರೋಗ್ಯ ಸೇವೆಯ ಮತ್ತು ವೈದ್ಯಕೀಯ ಜ್ಞಾನದ ಮೂಲಕ ಕ್ಯೂಬಾ ಕೋವಿಡ್ ನ್ನು ಚೆನ್ನಾಗಿ ನಿಭಾಯಿಸಿದೆ. ಮಾತ್ರವಲ್ಲ ಯಾವುದೇ ಪೇಟೆಂಟ್ ನಿರ್ಬಂಧ ಇಲ್ಲದ 5 ವ್ಯಾಕ್ಸೀನುಗಳನ್ನು ಇಡೀ ಜಗತ್ತಿಗಾಗಿ ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಎರಡು ಈಗಾಗಲೇ ಪರೀಕ್ಷಣೆಯ ಹಂತಗಳನ್ನು ದಾಟಿದೆ. ಇದು ಕ್ಯೂಬಾದ ಸಮಾಜವಾದಿ ವ್ಯವಸ್ಥೆಯಿಂದಾಗಿ ಸಾಧ್ಯವಾಗಿದೆ.
ಸೀತಾರಾಮ್ ಯೆಚುರಿ, ಪ್ರಧಾನ ಕಾರ್ಯದರ್ಶಿ, ಸಿಪಿಐ(ಎಂ)
“ಕ್ಯೂಬಾ ಜಗತ್ತಿನಾದ್ಯಂತ ‘ಬಿಳಿ ಕೋಟು’ಗಳನ್ನು ಜನರ ಶುಶ್ರೂಷೆ ಮಾಡಲು ಕಳಿಸುತ್ತದೆ, ಅಮೆರಿಕ ‘ಹಸಿರು ಮಿಲಿಟರಿ ಪೋಷಾಕು’ಗಳನ್ನು ದಾಳಿ ಮಾಡಿ ವಶಪಡಿಸಿಕೊಳ್ಳಲು ಕಳಿಸುತ್ತದೆ.” ಎಂದು ಫಿಡೆಲ್ ಕ್ಯಾಸ್ಟ್ರೋ ಅಮೆರಿಕದ ಇರಾಕ್ ಅತಿಕ್ರಮಣದ ಸಂದರ್ಭದಲ್ಲಿ ಹೇಳಿದ್ದು, ಎರಡು ದೇಶಗಳ ಧೋರಣೆ ಮತ್ತು ವ್ಯವಸ್ಥೆಗಳ ವ್ಯತ್ಯಾಸಗಳನ್ನು ಗುರುತಿಸುತ್ತದೆ. ‘ಅಖಿಲ ಭಾರತ ಶಾಂತಿ ಮತ್ತು ಸೌಹಾರ್ದತಾ ಸಂಘಟನೆ’ ಅದರ ಸ್ಥಾಪನೆಯ ಸಮಯದಿಂದಲೂ ಕ್ಯೂಬಾದ ಸೌಹಾರ್ದತೆ ವ್ಯಕ್ತಪಡಿಸುತ್ತಾ ಬಂದಿದೆ. ಈಗಲೂ ಭಾರತದ ಜನರಿಗೆ ಕ್ಯೂಬಾದ ವಸ್ತುಸ್ಥಿತಿ ಕುರಿತು ಹೇಳುವ ಮೂಲಕ ಕ್ಯೂಬಾದ ಜತೆ ಸೌಹಾದತೆಗಾಗಿ ಅಣಿ ನೆರೆಸಲಿದೆ.
– ಪಲ್ಲಬ್ ಸೆನ್ ಗುಪ್ತಾ, ಪ್ರಧಾನ ಕಾರ್ಯದರ್ಶಿ, ‘ಅಖಿಲ ಭಾರತ ಶಾಂತಿ ಮತ್ತು ಸೌಹಾರ್ದತಾ ಸಂಘಟನೆ’
ಕ್ಯೂಬಾ ಜನಾಂಗೀಯ ಅಸಮಾನತೆಗಳನ್ನು ಹೋಗಲಾಡಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿ ಯಶಸ್ವಿಯಾಗಿದೆ. ಅದೇ 90 ಕಿ.ಮಿ ದೂರದಲ್ಲಿರುವ ಅಮೆರಿಕದಲ್ಲಿ ಜನಾಂಗೀಯ ಹಲ್ಲೆಗಳಿಲ್ಲದ ದಿನಗಳೇ ಇಲ್ಲ. ಬಿಳಿಯ-ಕರಿಯರ ನಡುವೆ ಇರುವ ಸಾಮಾಜಿಕ-ಆರ್ಥಿಕ ಅಗಾಧ ಅಸಮಾನತೆ, ಇತ್ತೀಚಿನ ಜಾರ್ಜ್ ಫ್ಲಾಯ್ಡ್ ಕೊಲೆ ಮತ್ತು ‘ಕರಿಯರ ಜೀವಕ್ಕೂ ಬೆಲೆಯಿದೆ’ (ಬ್ಲಾಕ್ ಲೈವ್ಸ್ ಮ್ಯಾಟರ್) ಚಳುವಳಿ ವ್ಯವಸ್ಥಿತ ಜನಾಂಗೀಯ ಅಸಮಾನತೆಯನ್ನು ಹೊರಗೆಡಹಿದೆ. ಇಂತಹ ಅಮೆರಿಕ ಇಂತಹ ಕ್ಯೂಬಾಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವುದಕ್ಕಿಂತ ದೊಡ್ಡ ವಿಡಂಬನೆ ಬೇರೊಂದಿಲ್ಲ.
– ಎಂ.ಎ.ಬೇಬಿ, ಸಿಪಿಐ(ಎಂ) ಪೊಲಿಟ್ ಬ್ಯುರೋ ಸದಸ್ಯ ಮತ್ತು ‘ಕ್ಯೂಬಾ ಜತೆ ಸೌಹಾರ್ದದ ರಾಷ್ಟ್ರೀಯ ಸಮಿತಿ’ಯ ನಿಕಟಪೂರ್ವ ಸಂಚಾಲಕ
ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ ಆರ್ಥಿಕ ದಿಗ್ಬಂಧನ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಿ ಕ್ಯೂಬಾದ ಆರ್ಥಿಕತೆಯ ಜೀವರೇಖೆಯನ್ನೇ ಹಿಸುಕುವ ಮತ್ತು ಕ್ಯೂಬನ್ನರ ಜೀವನೋಪಾಯದ ಮೇಲೆ ದಾಳಿ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಮೆರಿಕ ತನ್ನ ಅಸಮರ್ಥನೀಯ ಕ್ರೂರ ಆರ್ಥಿಕ ದಿಗ್ಬಂಧನಗಳನ್ನು ಸಮರ್ಥಿಸಿಕೊಳ್ಳಲು ಹಲವು ತಪ್ಪು ಮಾಹಿತಿಗಳನ್ನು ವಾದಗಳನ್ನು ಮಂಡಿಸುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳು ಕ್ಯೂಬಾದ ನೈಜ ಪರಿಸ್ಥಿತಿ, ಅದಕ್ಕೂ ಅಮೆರಿಕದ ಕ್ರಮಗಳಿಗೂ ಇರುವ ಸಂಬಂಧಗಳ ಕುರಿತು ವಸ್ತುನಿಷ್ಠ ವರದಿ ಮಾಡದೆ ಅಮೆರಿಕನ್ ಸರಕಾರದ ಹುಸಿ ಕಥನಗಳನ್ನು ಪ್ರಸಾರ ಮಾಡುತ್ತಿವೆ. ಕ್ಯೂಬಾದ ವಿರುದ್ಧ ಅಪಪ್ರಚಾರವನ್ನು ಬಯಲು ಮಾಡಿ ಕ್ಯೂಬಾದ ಜತೆ ಸೌಹಾರ್ದತೆ ವ್ಯಕ್ತಪಡಿಸಬೇಕಾಗಿದೆ.
– ಎನ್. ರಾಮ್, ‘ದಿ ಹಿಂದೂ’ ಗುಂಪಿನ ಅಧ್ಯಕ್ಷ
ಅಗಾಧ ತೊಡಕುಗಳು ಸವಾಲುಗಳ ನಡುವೆ ಸಹ ಕ್ಯೂಬಾ ಜನತೆಯ ಆರೋಗ್ಯ, ಶಿಕ್ಷಣಕ್ಕೆ ಗರಿಷ್ಠ ಆದ್ಯತೆ ಕೊಡುತ್ತದೆ. ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸಲು ರೋಗ ತಡೆಯ ರಣನೀತಿಯನ್ನು ಸಫಲವಾಗಿ ಜಾರಿಗೊಳಿಸಿದೆ. ಇಟಲಿಯಂತಹ ಅಭಿವೃದ್ಧಿ ದೇಶಗಳಿಗೂ ಬಡ ದೇಶಗಳಿಗೂ ಕೋವಿಡ್ ಮಹಾಸೋಂಕಿನ ಸಂದರ್ಭದಲ್ಲಿ ಮುಕ್ತ ನೆರವು ನೀಡಿದೆ. ಆದ್ದರಿಂದ ಮಾನವೀಯತೆ ಬೆಂಬಲಿಸುವ ಎಲ್ಲರೂ ಕ್ಯೂಬಾವನ್ನು ಬೆಂಬಲಿಸಬೇಕು.
– ಪ್ರೊ.ಟಿ.ಸುಂದರರಾಮನ್, ಜಾಗತಿಕ ಸಂಯೋಜಕ, ಜನಾರೋಗ್ಯ ಚಳುವಳಿ
ಕ್ಯೂಬಾದ ಮೇಲೆ ಅಮೆರಿಕ ಹಲವು ದಶಕಗಳಿಂದ ಹೊರಿಸಿರುವ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರತಿ ವರ್ಷ ವಿಶ್ವಸಂಸ್ಥೆಯಲ್ಲಿ ಅಮೆರಿಕ ಮತ್ತು ಇಸ್ರೇಲಿನ ಅಪವಾದ ಬಿಟ್ಟರೆ ಭಾರತ ಸೇರಿದಂತೆ ಎಲ್ಲ ದೇಶಗಳು ಒಕ್ಕೊರಲಿನಿಂದ ಒತ್ತಾಯಿಸಿವೆ. ಆದರೂ ಅದು ಮುಂದುವರೆಯುತ್ತದೆ. ಕ್ಯೂಬಾದ ಜತೆ ಸೌಹಾರ್ದತೆಯ ಕುರಿತು ಭಾರತ ಸರ್ಕಾರದ ಧೋರಣೆ ಏನೇ ಇರಲಿ, ಭಾರತದ ಜನತೆ ಕ್ಯೂಬಾದ ಜನತೆಯ ಜತೆ ನಿಲ್ಲಬೇಕು, ನಿಲ್ಲುತ್ತಾರೆ.
– ಡಿ.ರಾಜಾ, ಪ್ರಧಾನ ಕಾರ್ಯದರ್ಶಿ, ಸಿಪಿಐ
ಕ್ಯೂಬಾ ಮಹಿಳೆಯರ ಹಕ್ಕುಗಳನ್ನು ಖಾತ್ರಿಗೊಳಿಸುವ ವ್ಯವಸ್ಥೆ ಇರುವ ದೇಶ. ಲಿಂಗ ಸಮಾನತೆ ಸಾಧಿಸಲು ಸಾಕಷ್ಟು ಕ್ರಮ ವಹಿಸಲಾಗುತ್ತಿದೆ. ಬಂಡವಾಳಶಾಹಿ ದೇಶಗಳಲ್ಲಿ ಅದರಲ್ಲೂ ಅದರ ನಾಯಕನಾದ ಅಮೆರಿಕದಲ್ಲಿನ ಅನುಭವ ಇದಕ್ಕೆ ಪೂರ್ಣವಾಗಿ ವ್ಯತಿರಿಕ್ತವಾಗಿದೆ. ಆದ್ದರಿಂದ ಕ್ಯೂಬಾಕ್ಕೆ ಸೌಹಾರ್ದ ಬೆಂಬಲ ಕೊಡುವುದು ನಮ್ಮ ಕರ್ತವ್ಯವಾಗಿದೆ.
– ಕವಿತಾ ಕೃಷ್ಣನ್, ಸಿಪಿಐ(ಎಂ.ಎಲ್ – ಲಿಬರೇಶನ್) ಪೊಲಿಟ್ ಬ್ಯುರೊ ಸದಸ್ಯರು
ಕ್ಯೂಬಾದ ಸಿನೆಮಾ ಅಲ್ಲಿನ ವ್ಯವಸ್ಥೆಯ ನ್ಯೂನತೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುತ್ತದೆ. ಅವು ಯಾವುದೇ ಸೆನ್ಸಾರ್ ಗೆ ಒಳಗಾಗುವುದಿಲ್ಲ. ಇದು ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ತೋರಿಸುತ್ತದೆ. ಕ್ಯೂಬಾದ ಜನತೆ ಬಹುವಾಗಿ ನೇರವಾಗಿ ಭಾಗವಹಿಸುವ ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ. ಅಮೆರಿಕ ನೈಜ ಪ್ರಜಾಪ್ರಭುತ್ವವಾಗಲು ಕ್ಯೂಬಾದ ಪ್ರಜಾಪ್ರಭುತ್ವದಿಂದ ಕಲಿಯಬೇಕಾದ್ದು ಬಹಳ ಇದೆ.
-ಪ್ರೊ. ಸೋನ್ಯಾ ಗುಪ್ತಾ, ಕಾರ್ಯದರ್ಶಿ, ‘ಅಖಿಲ ಭಾರತ ಶಾಂತಿ ಮತ್ತು ಸೌಹಾರ್ದತಾ ಸಂಘಟನೆ’