ನವದೆಹಲಿ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಚುನಾವಣಾ ಆಯೋಗದ ನಡುವಿನ ಜಟಾಪಟಿಯಿಂದ ಬೇಸರಗೊಂಡಿರುವ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ನೆರವಾಗಲು ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರನ್ನು ನಿಯೋಜಿಸುವಂತೆ ಅಪರೂಪದ ತೀರ್ಪು ನೀಡಿದೆ.
ಆಯೋಗ ಮತ್ತು ಜನರಿಂದ ಆಯ್ಕೆಯಾದ ಸರ್ಕಾರದ ನಡುವಿನ ವಿಶ್ವಾಸದ ಕೊರತೆಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಂಚೋಲಿ ಅವರ ಪೀಠವು ಎಸ್‌ಐಆರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೊಸ ನಿರ್ದೇಶನಗಳನ್ನು ನೀಡಿತು. ಆಯೋಗ ಹಾಗೂ ಸರ್ಕಾರದ ನಡುವಿನ ಆರೋಪ–ಪ್ರತ್ಯಾರೋಪದ ಆಟವು ದುರದೃಷ್ಟಕರ.
ಇದನ್ನೂ ಓದಿ : ನಮ್ಮ ಮೆಟ್ರೋ | ಬಿ.ಎಂ.ಆರ್.ಸಿ.ಎಲ್. ಚಿಂತನೆ ಹಾಸ್ಯಾಸ್ಪದ – ಸಿ.ಪಿ.ಐ.(ಎಂ)
ಎಸ್‌ಐಆರ್ ಭಾಗವಾಗಿ ಪ್ರಕಟಿಸಿದ ಮತದಾರರ ಪಟ್ಟಿಗೆ (ಮತದಾರರ ಪಟ್ಟಿಯಲ್ಲಿರುವ ಮಾಹಿತಿಯಲ್ಲಿ ವ್ಯತ್ಯಾಸ) ಸೇರಿಸಿದ ವ್ಯಕ್ತಿಗಳ ಹಕ್ಕುಗಳು ಹಾಗೂ ಆಕ್ಷೇಪಣೆಗಳನ್ನು ಆಲಿಸಿ ತೀರ್ಮಾನ ನೀಡಲು ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ ಎಂದು ಪೀಠವು ತಿಳಿಸಿದೆ.
ಗ್ರೂಪ್ ‘ಎ’ ದರ್ಜೆಯ ನೌಕರರನ್ನು ಎಸ್‌ಐಆರ್ ಪರಿಷ್ಕರಣೆಯ ಕೆಲಸಕ್ಕಾಗಿ ನಿಯೋಜಿಸದ ರಾಜ್ಯ ಸರ್ಕಾರದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು, ಈ ಕೆಲಸಕ್ಕೆ ನೆರವಾಗಲು ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸುವಂತೆ ಕಲ್ಕತ್ತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಅವರಿಗೆ ಸೂಚನೆ ನೀಡಿದೆ. ಪೂರಕ ಪಟ್ಟಿ ಬಿಡುಗಡೆ ಮಾಡಬಹುದು. ನಾಮಪತ್ರ ಸಲ್ಲಿಕೆಯ ಕೊನೇ ದಿನಾಂಕದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ತಿಳಿಸಿತು. ರಾಜ್ಯ ಸರ್ಕಾರದ ತೀವ್ರ ಆಕ್ಷೇಪಣೆಯ ಹೊರತಾಗಿಯೂ ಈ ಹಿಂದೆ ನಿಗದಿಪಡಿಸಿದ ಗಡುವಿನಂತೆ ಫೆಬ್ರುವರಿ 28ರಂದು ಮತದಾರರ ಕರಡು ಪಟ್ಟಿಯನ್ನು ಸಲ್ಲಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮೈಕ್ರೋ ಅಬ್ಸರ್ವರ್ಸ್ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರಿಗಳು ಸಹಾಯ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರನ್ನು ನಿಯೋಜಿಸುವ ವಿಧಾನಗಳನ್ನು ಅಂತಿಮಗೊಳಿಸುವ ಕುರಿತಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ. ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದಂತೆ, ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಅಡ್ವೊಕೇಟ್ ಜನರಲ್ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆಗೆ ಶನಿವಾರ ಸಭೆ ನಡೆಸುವಂತೆ ಕಲ್ಕತ್ತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂ ಕೋರ್ಟ್ ಪೀಠವು ಸೂಚನೆ ನೀಡಿದೆ.
2002ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಮಾಡುವ ವೇಳೆ ಕೆಲವು ಮತದಾರರು ಹಾಗೂ ಅವರ ಹೆತ್ತವರ ವಯಸ್ಸಿನ ಅಂತರವು 15 ವರ್ಷಗಳಿಗಿಂತಲೂ ಕಡಿಮೆ ಹಾಗೂ 50 ವರ್ಷಗಳಿಗಿಂತಲೂ ಹೆಚ್ಚಾಗಿತ್ತು.
