ಪ್ರಧಾನಿಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ, ‘ಆನ್‍ ಲೈನ್‍ ಕಿರುಕುಳ’- ಶ್ವೇತಭವನದ ಪತ್ರಕರ್ತರ ಖಂಡನೆ

ಭಾರತದ ಪ್ರಧಾನಿಗಳ ಅಧಿಕೃತ ಯುಎಸ್ ಭೇಟಿಯ ಕೊನೆಯಲ್ಲಿ ವಾಶಿಂಗ್ಟನ್‍ ನ ಶ್ವೇತಭವನದಲ್ಲಿ  ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳಿದ ಅಮೆರಿಕಾದ ಪತ್ರಕರ್ತೆ ಸಬ್ರೀನಾ ಸಿದ್ದಿಕಿಗೆ ಭಾರತದಿಂದ  ಆನ್‌ಲೈನ್ ಕಿರಕುಕುಳ ಕೊಡಲಾಗುತ್ತಿದೆ, ಇದು ಒಪ್ಪತಕ್ಕಂತದ್ದಲ್ಲ ಎಂದು ಸ್ವತಃ ಶ್ವೇತಭವನದ ವಕ್ತಾರರು  ಮತ್ತು ಶ್ವೇತಭವನದ ಬಾತ್ಮೀದಾರರ ಸಂಘ(ಡಬ್ಲ್ಯುಹೆಚ್‌ಸಿಎ) ಬಲವಾಗಿ ಖಂಡಿಸಿದ್ದಾರೆ.

“ಸಬಿನಾ ಸಿದ್ದಿಕಿಯವರು ಶ್ವೇತಭವನದ ಪತ್ರಕರ್ತರ ಪಡೆಯನ್ನು ಚೆನ್ನಾಗಿಯೇ ಪ್ರತಿನಿಧಿಸಿದ್ದಾರೆ. ನಮ್ಮೆಲ್ಲರ ಪ್ರಶ್ನೆಗಳ ಪಟ್ಟಿಯಲ್ಲಿ ಪ್ರಧಾನವಾಗಿದ್ದ ಪ್ರಶ್ನೆಗಳನ್ನೇ ಆಕೆ ಕೇಳಿದ್ದಾರೆ. ದುರದೃಷ್ಟವಶಾತ್ ನಂತರ ಆಕೆಯನ್ನು, ಪ್ರಧಾನ ಮಂತ್ರಿಗಳ ರಾಜಕೀಯ ಪಕ್ಷದಿಂದ ಸಂಬಂಧವಿರುವವರೂ ಸೇರಿದಂತೆ ಹಲವರು ತೀವ್ರ ಆನ್‌ಲೈನ್ ಕಿರುಕುಳಗಳಿಗೆ ಗುರಿಪಡಿಸುತ್ತಿದ್ದಾರೆ. ಆಕೆಯ ಉದ್ದೇಶ, ಧರ್ಮ ಮತ್ತು ಪರಂಪರೆಯನ್ನು ಪ್ರಶ್ನಿಸುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಸಂಘ  ಸಬ್ರೀನಾ ಮತ್ತು ಆಕೆ ಕೇಳಲು ಆರಿಸಿದ ಪ್ರಶ್ನೆಗಳ ಪರವಾಗಿ ನಿಲ್ಲುತ್ತದೆ. ಒಂದು ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರ ಮೇಲೆ ಅವರು ತಮ್ಮ ಕೆಲಸ ಮಾಡಿದ್ದಕ್ಕಾಗಿ ಮತ್ತು ಕೇಳಬೇಕಾಗಿರುವ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಗುರಿಯಿಡಬಾರದು” ಎಂದು ಡಬ್ಲ್ಯುಹೆಚ್‌ಸಿಎ ಅಧ್ಯಕ್ಷರಾದ ತಮಾರಾ ಕೀಥ್ ಸಂಘದ ಪರವಾಗಿ ನೀಡಿರುವ ಹೇಳಿಕೆಯಲ್ಲಿ  ಜೂನ್  27ರಂದು  ತಿಳಿಸಿದ್ದಾರೆ.

ಇದಕ್ಕೆ ಮೊದಲು ಸ್ವತಃ ಶ್ವೇತಭವನದ ವಕಾರರು ಕೂಡ ಇಂತಹ ಕಿರುಕುಳ ಒಪ್ಪತಕ್ಕಂಥದ್ದಲ್ಲ ಎಂದು ಖಂಡಿಸುತ್ತ ಹೇಳಿದರು. “ಆ ಕಿರುಕುಳದ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಅದು ಒಪ್ಪತಕ್ಕಂಥದ್ದಲ್ಲ. ಎಲ್ಲೇ ಆಗಲಿ, ಯಾವುದೇ ಸಂದರ್ಭದಲ್ಲೇ ಆಗಲಿ ಪತ್ರಕರ್ತರಿಗೆ ಯಾವುದೇ ಕಿರುಕುಳವನ್ನು ನಾವು ಖಂಡಿಸುತ್ತೇವೆ.ಇದು ಕಳೆದ ವಾರದ ಅಧಿಕೃತ ಭೇಟಿಯ ಕಾಲದಲ್ಲಿ ಪ್ರದರ್ಶನಗೊಂಡ ಪ್ರಜಾಪ್ರಭುತ್ವದ ತತ್ವಗಳಿಗೆ ತದ್ವಿರುದ್ಧವಾದವುಗಳು” ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳನ್ನು ಕುರಿತ ವಕ್ತಾರ ಜಾನ್ ಕಿರ್ಬಿ ಎನ್‌ಬಿಸಿ ನ್ಯೂಸ್ ವರದಿಗಾರ ಮತ್ತು ಡಬ್ಲ್ಯುಹೆಚ್‌ಸಿಎ ಉಪಾಧ್ಯಕ್ಷರಾಗಿರುವ ಕೆಲ್ಲಿ ಒಡೊನ್ನಲ್ಲ್ ಪ್ರಶ್ನೆಗೆ ಉತ್ತರಿಸುತ್ತ ಹೇಳಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ ಪರವಾಗಿ ಬ್ಯಾಟ್ ಬೀಸಿ, ಚರ್ಚೆಗೆ ನಾಂದಿ ಹಾಡಿದ ಪ್ರಧಾನಿ!

ಪ್ರಧಾನಿಗಳು ಈ ಅಮೆರಿಕಾ ಭೇಟಿಯ ಕಾಲದಲ್ಲಿ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ, ಅದೂ ಅಮೆರಿಕಾದಲ್ಲಿ, ಬೈಡನ್ ಆಡಳಿತದ ಒತ್ತಾಯದಿಂದಾಗಿ. ಅಮೆರಿಕಾಕ್ಕೆ ಯಾವುದೇ ದೇಶದ ಮುಖ್ಯಸ್ಥರು ಭೇಟಿಯಾದರೆ ಅಲ್ಲಿಯ ಶ್ವೇತಭವನದಲ್ಲಿ ಎರಡೂ ದೇಶಗಳ ಮುಖ್ಯಸ್ಥರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವುದು ವಾಢಿಕೆ. ಆದರೆ ಜೂನ್21ರಿಂದ 23 ರವರೆಗೆ ಭಾರತದ ಪ್ರಧಾನ ಮಂತ್ರಿಗಳ ಅಧಿಕೃತ ಭೇಟಿಯ ಕೊನೆಯಲ್ಲಿ ಇಂತಹ ಪತ್ರಿಕಾಗೋಷ್ಠಿಯನ್ನು ನಡೆಸದಂತೆ ಭಾರತದ ಅಧಿಕಾರಿಗಳು ಬಲವಾದ ಪ್ರತಿರೋಧ ಒಡ್ಡಿದರೂ ಅದು ಸಫಲವಾಗದೆ, ಕೊನೆಗೆ ಇಬ್ಬರೂ ಮುಖಂಡರು ಒಬ್ಬ ಅಮೆರಿಕನ್ ಮತ್ತು ಒಬ್ಬ ಭಾರತೀಯ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ನಿರ್ಧರಿಸಲಾಯಿತಂತೆ.

ಇದರಂತೆ, ಅಮೆರಿಕಾದ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಭಾರತದ ಪ್ರಧಾನಿಗಳಿಗೆ ಕೇಳಿದ ಪ್ರಶ್ನೆ ಹೀಗಿತ್ತು: “ಭಾರತವು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ದೀರ್ಘಕಾಲದಿಂದ ಹೆಮ್ಮೆಪಡುತ್ತಿದೆ, ಆದರೆ ನಿಮ್ಮ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಿದೆ ಮತ್ತು ತನ್ನ ಟೀಕಾಕಾರರನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳುವ ಅನೇಕ ಮಾನವ ಹಕ್ಕುಗಳ ಗುಂಪುಗಳಿವೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಅನೇಕ ವಿಶ್ವ ನಾಯಕರು ಬದ್ಧರಾಗಿರುವುದಾಗಿ ಹೇಳಿರುವ ಶ್ವೇತಭವನದ ಪೂರ್ವ ಕೋಣೆಯಲ್ಲಿ ನೀವು ಇಲ್ಲಿ ನಿಂತಿರುವಾಗ, ನಿಮ್ಮ ದೇಶದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಉತ್ತಮಪಡಿಸಲು ಮತ್ತು ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನೀವು ಮತ್ತು ನಿಮ್ಮ ಸರ್ಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಿ?”

ಭಾರತದಲ್ಲಿ ಇಂತಹ ಪ್ರಶ್ನೆಗಳು ಎದ್ದಾಗ ಸದಾ ಮೌನವಾಗಿರುವ ಪ್ರಧಾನಿಗಳು, ನಿರೀಕ್ಷಿಸಿದಂತೆ, ಆ ಪತ್ರಕರ್ತರ ನೇರವಾದ ಪ್ರಶ್ನೆಗೆ ಉತ್ತರ ಕೊಡಲಿಲ್ಲ, ಬದಲಿಗೆ, ತಮ್ಮ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರು ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಕೆಲವು ಜನರು ಯೋಚಿಸುತ್ತಿರುವ ಬಗ್ಗೆ ತನಗೆ ಆಶ್ಚರ್ಯವಾಗಿದೆ ಎನ್ನುತ್ತ ‘ಪ್ರಜಾಪ್ರಭುತ್ವ’ದ  ಬಗ್ಗೆ ಸಣ್ಣ ಪಾಠ ಕೊಟ್ಟರಷ್ಟೇ
ಎಂದು ವರದಿಯಾಗಿದೆ.

ಬಹುಶಃ ಪ್ರಧಾನಿಗಳ ‘ಆಶ್ಚರ್ಯ’ವನ್ನೇ ಕೈಗೆತ್ತಿಕೊಂಡು ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಲವಿಯ ಸಬಿನಾರವರ ಪ್ರಶ್ನೆ ‘ದುರುದ್ದೇಪೂರಿತ’ವಾದದ್ದು ಎನ್ನುತ್ತ ಅದಕ್ಕೆ ಆಕೆ ‘ತಕ್ಕ ಉತ್ತರ’ ಪಡೆದರು ಎಂದು ಟ್ವೀಟ್‍ ಮಾಡಿದರು. ಪತ್ರಕರ್ತರ ನೇರವಾದ ಪ್ರಶ್ನೆಗೆ ಉತ್ತರವನ್ನೇ ನೀಡದಿದ್ದ ಪ್ರಧಾನಿಗಳ ಆ ‘ತಕ್ಕ ಉತ್ತರ’ ‘ಟೂಲ್‌ಕಿಟ್ ಗ್ಯಾಂಗ್’ಗೆ  ಒಂದು ದೊಡ್ಡ ‘ಹೊಡೆತ’ ಎಂದೂ ಅವರು ವರ್ಣಿಸಿದರು. ಇದು ಬಿಜೆಪಿ ಐಟಿ ಟ್ರೋಲ್ ಪಡೆ ಈಗ ಸಾಮಾನ್ಯವಾಗಿ ಮೋದಿ ಸರಕಾರದ ಕ್ರಮಗಳನ್ನು ಪ್ರಶ್ನಿಸುವ ಎಲ್ಲರಿಗೂ ಬಳಸುವ ಪದ ಎಂಬುದೀಗ ಎಲ್ಲರಿಗೂ ತಿಳಿದಿದೆ.

ಉಳಿದ ಟ್ರೋಲ್ ಪಡೆ, ‘ಒಪ್‌ಇಂಡಿಯಾ’ದಂತಹ ಆಳುವ ಪಕ್ಷ-ಪರವಾದ , ಹಿಂದುತ್ವ-ಪರವಾದ ವೆಬ್‌ಸೈಟುಗಳು, ಟ್ವಿಟರ್ ಹ್ಯಾಂಡಲ್‌ಗಳು ಇನ್ನೂ ಮುಂದೆ ಹೋಗಿ ಸಬೀನಾರವರ ಪೂರ್ವಾಪರಗಳನ್ನು ಕೆದಕಿ, ಆಕೆ ಭಾರತ-ದ್ವೇಷಿ, ಪಾಕಿಸ್ತಾನ-ಪರ, ಪಾಕಿಸ್ತಾನಿ ಪೋಷಕರ ಮಗಳು, ಇಸ್ಲಾಮ್‌ವಾದಿಗಳು ಮತ್ತು ಎಡ-ಉದಾರವಾದಿಗಳ ದಾವೆಗಳನ್ನು ಜಾಣತನದಿಂದ ಈ ಪ್ರಶ್ನೆಯಲ್ಲಿ ಧ್ವನಿಸಿದ್ದಾಳೆ ಎಂದೆಲ್ಲ ಟೀಕಿಸಿದವು. ಇದನ್ನು ಅಮೆರಿಕಾದ ಪತ್ರಕರ್ತರು ಮಾತ್ರವಲ್ಲ, ಶ್ವೇತಭವನದ ವಕ್ತಾರರೂ  ಪ್ರಜಾಪ್ರಭುತ್ವದಲ್ಲಿ ಒಪ್ಪಲಾಗದ ಆನ್‍ಲೈನ್‍ ಕಿರುಕುಳ ಎಂದು ಖಂಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *