ಕುಂದಾಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ ಗಳನ್ನು ರಾಜ್ಯ ಸರ್ಕಾರವು ಯಥಾವತ್ತಾಗಿ ಗಣರಾಜ್ಯೋತ್ಸವ ದಿನ ಜಾರಿ ಮಾಡಲು ಹೊರಟಿರುವುದು ರಾಜ್ಯದ ಕಾರ್ಮಿಕರಿಗೆ ಬಗೆದ ದ್ರೋಹ ಮಾತ್ರವಲ್ಲ ಕಾರ್ಮಿಕರಿಗೆ ಅನ್ಯಾಯ ಮಾಡುವ ವಿಚಾರದಲ್ಲಿ ಬಿಜೆಪಿಗೂ ಕಾಂಗ್ರೇಸ್ ನೀತಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು. ಫೆಬ್ರವರಿ
ಅವರು ತ್ರಾಸಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಕವಾಡಿ ರಾಮ ಮಂದಿರ ಹತ್ತಿರ ಜನವರಿ 25ರಂದು ನಡೆದ ಕಾರ್ಮಿಕ ಸಂಘ, ಕೂಲಿಕಾರರ ಸಂಘ, ದಲಿತ ಹಕ್ಕುಗಳ ಸಮಿತಿ, ಜನವಾದಿ ಮಹಿಳಾ ಸಂಘಟನೆಗಳ ಜಂಟಿ ಸಮಾವೇಶದಲ್ಲಿ ಮಾತನಾಡಿದರು. ಫೆಬ್ರವರಿ
ಕೈಗಾರಿಕಾ ಸಂಬಂಧಗಳ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಪಡೆಯದ ರಾಜ್ಯ ಕಾಂಗ್ರೇಸ್ ಸರ್ಕಾರ ಸಂಹಿತೆಯಲ್ಲಿ ಸೇರಿಸದೆ ಬಿಟ್ಟಿರುವ ಕೆಲವು ಕಠಿಣ ಷರತ್ತುಗಳನ್ನು ಕರಡು ನಿಯಮಗಳಲ್ಲಿ ಸೇರಿಸುವ ಮೂಲಕ ರಾಜ್ಯದಲ್ಲಿನ ಕಾರ್ಮಿಕರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದೆ.
ಇದನ್ನೂ ಓದಿ: ಕೊಟ್ಟೂರು | ಪುಸ್ತಕ ಗೂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿ
ಕಾರ್ಮಿಕ ಸಂಘಗಳು ಮುಷ್ಕರ ಮಾಡಲು ಬಹುಸಂಖ್ಯೆಯ ಕಾರ್ಮಿಕರ ಒಪ್ಪಿಗೆ, ಮುಷ್ಕರದ ನೋಟಿಸ್‌ಗೆ ಪ್ರಧಾನ ಕಾರ್ಯದರ್ಶಿ ಜೊತೆಗೆ ಎಲ್ಲಾ ಪದಾಧಿಕಾರಿಗಳ ಮತ್ತು ಆಯ್ಕೆಗೊಂಡ 5 ಮಂದಿ ಇತರೆ ಕಾರ್ಮಿಕ ಪ್ರತಿನಿಧಿಗಳ ಸಹಿ ಕಡ್ಡಾಯಗೊಳಿಸಿದೆ. ಸಂಹಿತೆಯಲ್ಲಿ ವಿವಿಧ ಸ್ವರೂಪದ ಮುಷ್ಕರವನ್ನು ನಿಷೇಧಿಸುವ ಮತ್ತು ಅಕ್ರಮ ಮುಷ್ಕರಕ್ಕೆ ಕಾರ್ಮಿಕ ಸಂಘದ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಬೆಂಬಲಿಸುವವರಿಗೆ ವಿಧಿಸಿರುವ ದಂಡ ಮತ್ತು ಶಿಕ್ಷೆಯನ್ನು ಕರಡು ನಿಯಮಾವಳಿಗಳಲ್ಲಿಯೂ ಮತ್ತಷ್ಟು ಬಿಗಿಗೊಳಿಸಲಾಗಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಮತ್ತಷ್ಟು ಕಠಿಣಗೊಳಿಸಿ, ದಮನ ಮಾಡುವ ಈ ಕ್ರಮವು ಸಂವಿಧಾನ ವಿರೋಧಿ ಕ್ರಮವಾಗಿದೆ.
ಕೈಗಾರಿಕೆ/ಸಂಸ್ಥೆಗಳು ಲೇ ಆಫ್, ರಿಟ್ರೆಂಚ್‌ಮೆಂಟ್, ಕ್ಲೋಸರ್ ಮಾಡಲು ಸರ್ಕಾರದಅನುಮತಿ ಮಿತಿ 100 ರಿಂದ 300ಕ್ಕೆ ಹೆಚ್ಚಳ ಮಾಡಿ ನಿಯಮಾವಳಿಗಳನ್ನು ರೂಪಿಸಿ ರಾಜ್ಯದಲ್ಲಿರುವ ಶೇ.90 ರಷ್ಟು ಕಾರ್ಖಾನೆಗಳ ಕಾರ್ಮಿಕರನ್ನು ಅಭದ್ರತೆಗೆ ದೂಡಿದೆ. ಕಾರ್ಮಿಕ ಮತ್ತು ಮಾಲೀಕರ ನಡುವಿನ ಇತ್ಯರ್ಥವಾಗದ ಯಾವುದೇ ವಿವಾದಗಳನ್ನು ನ್ಯಾಯ ನಿರ್ಣಯಕ್ಕೆ ಒಪ್ಪಿಸುವ ಕಾರ್ಮಿಕ ಇಲಾಖೆಯ ಸಂಧಾನಾಧಿಕಾರಿಗಳ ಅಧಿಕಾರವನ್ನು ಮೊಟಕುಗೊಳಿಸಿ ಕಾರ್ಮಿಕರಿಗೆ ನ್ಯಾಯ ಮರೀಚಿಕೆಯಾಗುವಂತೆ ಮಾಡಿದೆ. ಕಾರ್ಮಿಕ ಕಾನೂನುಗಳ ಉಲ್ಲಂಘಗಳಿಂದ ಮಾಲೀಕರಿಗೆ ವಿಧಿಸಲಾಗುವ ದಂಡ ಮತ್ತು ಶಿಕ್ಷೆಗಳಿಂದ ಪಾರು ಮಾಡಲು ಹೊಸದಾಗಿ ಕಾಂಪೌಡಿಂಗ್ ಅಧಿಕಾರಿಗಳ ನೇಮಕಕ್ಕೆ ಅವಕಾಶ ಸೇರಿದಂತೆ ಕಾರ್ಮಿಕ ವಿರೋಧಿಯಾದ ನಿಯಮಾವಳಿ ರೂಪಿಸಿದೆ ಎಂದು ಅವರು ಹೇಳಿದರು.

ಸಂವಿಧಾನದ ಅನುಚ್ಛೇದ 246ರ ಅನ್ವಯ ಕಾರ್ಮಿಕ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಕಾನೂನುಗಳನ್ನು ರಚಿಸುವ ಅಧಿಕಾರ ಹೊಂದಿದೆ. ಆದರೆ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕೇಂದ್ರದ ಬಿಜೆಪಿ ಸರ್ಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ, ಹೊಸದಾಗಿ ಪರ್ಯಾಯ ಕಾರ್ಮಿಕ ಕಾನೂನು ರೂಪಿಸುವ ಸಂವಿಧಾನಬದ್ಧ ಅಧಿಕಾರ ಬಳಸುವ ಹೊಣೆಗಾರಿಕೆ ಪ್ರದರ್ಶಿಸಿಲ್ಲ ಎಂದ ಅವರು
ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12, 2026 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದರೂ ಲೆಕ್ಕಿಸದೇ ಸಂಹಿತೆಗಳ ಜಾರಿಗೆ ಮುಂದಾಗಿರುವ ರಾಜ್ಯದ ಬಂಡ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡನೀಯ ಫೆಬ್ರವರಿ 12 ರಂದು ಕೇಂದ್ರ ಮತ್ತು ರಾಜ್ಯದ ಎರಡು ಸರ್ಕಾರಗಳ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯದಲ್ಲಿ ಲಕ್ಷಾಂತರ ದುಡಿಯುವ ಜನತೆ ಸ್ವಯಂ ಪ್ರೇರಣೆಯಿಂದ ಉತ್ಪಾದನೆ, ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಿ ಪ್ರತಿರೋಧ ನೀಡಲಿದ್ದಾರೆಂದು ಅವರು ಹೇಳಿದರು.
ಈ ವೇಳೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಸಂತೋಷ್ ಹೆಮ್ಮಾಡಿ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು, ಜನವಾದಿ ಮಹಿಳಾ ಸಂಘಟನೆಯ, ಬೀಡಿ ಕಾರ್ಮಿಕರ ಸಂಘದ ಮುಖಂಡರಾದ ಬಲ್ಕೀಸ್ ಮಾತನಾಡಿದರು.
ಗುಜ್ಜಾಡಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು.ಶ್ರೀಧರ ಗಾಣಿಗ,ಶಂಕರ ಆಚಾರ್ಯ, ಸಂತೋಷ್ ಮೊದಲಾದವರಿದ್ದರು.
ಇದನ್ನೂ ನೋಡಿ: ಗಣರಾಜ್ಯೋತ್ಸವ 2026 | ಒಕ್ಕೂಟ ವ್ಯವಸ್ಥೆ ಗಂಡಾಂತರದಲ್ಲಿದೆ – ಡಾ. ಎಂ. ಚಂದ್ರ ಪೂಜಾರಿ Janashakthi Media
