ಅಗಾಧ ಪಾಂಡಿತ್ಯ – ವಿದ್ವತ್ತನ್ನು ಎದೆಯಲ್ಲಿರಿಸಿಕೊಂಡಿದ್ದ ಮಿತಭಾಷಿ ಅಸ್ಸಾದಿ ನಿರ್ಗಮನ
-ನಾ ದಿವಾಕರ
ಹುಟ್ಟು ಮತ್ತು ಸಾವು ಈ ಎರಡೂ ವಿದ್ಯಮಾನಗಳು ಮನುಷ್ಯನ ಬದುಕಿನಲ್ಲಿ ಶಾಶ್ವತವಾಗಿ ಜಿಜ್ಞಾಸೆಯಾಗಿಯೇ ಉಳಿದುಬಿಡುತ್ತವೆ. ಹುಟ್ಟು ಒಂದು ಹಂತದಲ್ಲಿ ನಿರೀಕ್ಷಿತವಾಗಿರುತ್ತದೆ. ಆದರೆ ಸಾವು ಹಾಗಲ್ಲ. ಅನಾರೋಗ್ಯದಿಂದ ಮರಣ ಶಯ್ಯೆಯಲ್ಲಿರುವ ಆಪ್ತರನ್ನೂ ಸಾವು ತಟ್ಟಕೂಡದು ಎಂದು ಬಯಸುವುದು ಮಾನವ ಸಹಜ ಗುಣ. ಆದರೆ ನಮ್ಮದೇ ಆದ ಒಂದು ಭೌತಿಕ-ಬೌದ್ಧಿಕ ಪ್ರಪಂಚವನ್ನು ಕಟ್ಟಿಕೊಂಡು ಬದುಕುತ್ತಿರುವಾಗ, ನಿನ್ನೆ ಕಂಡವರು ಇಂದು, ಇಂದು ಮಾತನಾಡಿದವರು ನಾಳೆ ಇಲ್ಲವಾಗುವ ಒಂದು ಪ್ರಕ್ರಿಯೆ ಮನಸ್ಸನ್ನು ತಲ್ಲಣಗೊಳಿಸಿಬಿಡುತ್ತದೆ. ನಿಜ, ಸಾವು ಯಾರನ್ನೂ ಬಿಡುವುದಿಲ್ಲ , ಆದರೆ ಕೆಲವರು ಹಠಾತ್ತನೆ ನಮ್ಮ ನಡುವಿನಿಂದ ಕಣ್ಮರೆಯಾಗಿ ಹೋದಾಗ, ಈ ದಾರ್ಶನಿಕ ಆಲೋಚನೆಗೆ ಮಾನ್ಯತೆಯೇ ಇರುವುದಿಲ್ಲ. ಏಕೆಂದರೆ ಅಲ್ಲೊಂದು ಪ್ರೀತಿಯ ಸೆಳೆತ, ಆಪ್ತತೆಯ ಸ್ಪರ್ಶ ಕಳೆದುಹೋದಂತೆ ಭಾಸವಾಗುತ್ತದೆ. ಹೋದವರ
ಪ್ರತಿಯೊಬ್ಬ ಆಪ್ತನ ಸಾವಿನ ಸಮಯದಲ್ಲೂ ಕಾಡುವ ಪ್ರಶ್ನೆ , ಏಕೆ ಈ ಹಠಾತ್ ನಿರ್ಗಮನ ? ಬಹುಶಃ ಬದುಕು ಕೊನೆಗಾಣುವವರೆಗೂ ಈ ಪ್ರಶ್ನೆ ಪದೇಪದೇ ಎದುರಾಗುತ್ತಲೇ ಇರುತ್ತದೆ, ಉತ್ತರ ದೊರೆಯದೆ. ಆದರೂ ಕೆಲವೊಮ್ಮೆ ಇನ್ನೆಷ್ಟು ಗೆಳೆಯರನ್ನು ಕಳೆದುಕೊಳ್ಳುವುದು ಅನ್ನಿಸುವುದುಂಟು. ಅಗಲಿ ಹೋದವರ ಸಾಲಿಗೆ ಬೇಗನೆ ಸೇರುವ ತವಕವಾದರೂ ಏಕೆ ಎಂಬ ಪ್ರಶ್ನೆ ಭಾವುಕ ಎನಿಸಿದರೂ ಸಹಜವಾಗಿ ಮೂಡುವಂತಹುದು. ಆತ್ಮೀಯ ವಲಯದಲ್ಲಿರುವ ಒಬ್ಬರ ಹಿಂದೊಬ್ಬರು ಪರಸ್ಪರ ಮಾತನಾಡಿಕೊಂಡಂತೆ ಮರೆಯಾಗುತ್ತಲೇ ಇರುವಾಗ ಈ ಪ್ರಶ್ನೆ ಮತ್ತಷ್ಟು ಕಾಡುತ್ತದೆ. ಇಂತಹುದೇ ಒಂದು ಪ್ರಶ್ನೆಯನ್ನು ಆತ್ಮೀಯ ಗೆಳೆಯ, ಆಪ್ತ ಸಂಗಾತಿ ಮುಝಫರ್ ಅಸ್ಸಾದಿ ಬಿಟ್ಟು ಹೋಗಿದ್ದಾರೆ. ತನ್ನ 63ನೇ ವಯಸ್ಸಿನಲ್ಲೇ ನಿರ್ಗಮಿಸಿರುವ ಈ ಗೆಳೆಯನನ್ನು ಇನ್ನು ಹೇಗೆ ಪ್ರಶ್ನಿಸಲು ಸಾಧ್ಯ ?
ಕಳೆದ ಏಪ್ರಿಲ್ ತಿಂಗಳ ಒಂದು ದಿನ ಮತ್ತೋರ್ವ ಸಂಗಾತಿ ಲಕ್ಷ್ಮೀನಾರಾಯಣ್ ನಿರ್ಗಮಿಸಿದಾಗ ವೈಯುಕ್ತಿಕ ಬದುಕಿನಲ್ಲಿ, ಸಾರ್ವಜನಿಕ ಜೀವನದಲ್ಲಿ ಒಂದು ದೊಡ್ಡ ಶೂನ್ಯ ಸೃಷ್ಟಿಯಾದಂತೆ ಭಾಸವಾಗಿತ್ತು. ಈ ಶೂನ್ಯದ ಬಯಲು ಕಿರಿದಾಗುವ ಬದಲು ಹಿಗ್ಗುತ್ತಲೇ ಇರುವುದು ನಮ್ಮ ದುರದೃಷ್ಟವಲ್ಲವೇ ? ಅವರನ್ನೇ ಹಿಂಬಾಲಿಸಿದ ಹಲವು ಆಪ್ತರ ಸಾಲಿಗೆ ಈಗ ಸಂಗಾತಿ ಅಸ್ಸಾದಿ ಸೇರಿಕೊಂಡಿದ್ದಾರೆ. ನನ್ನ ಮಟ್ಟಿಗೆ ಅಸ್ಸಾದಿ ಬಾಲ್ಯದ ಪರಿಚಯವಲ್ಲ. ಅಕಾಡೆಮಿಕ್ ಸಹೋದ್ಯೋಗಿಯೂ ಅಲ್ಲ. ಆದರೆ ಈ ಎರಡೂ ನೆಲೆಗಳನ್ನು ಮೀರಿದ ಒಂದು ಆತ್ಮೀಯತೆ ಕಳೆದ ಎರಡು ದಶಕಗಳಲ್ಲಿ ಅವರೊಡನೆ ಮೂಡಿದ್ದುದು ವಾಸ್ತವ. ತತ್ವ, ಸಿದ್ದಾಂತ ಮತ್ತು ಹೊಸ ಚಿಂತನೆಗಳನ್ನು ಅರಸುತ್ತಾ, ಸಂವಾದಕ್ಕೆ ತೆರೆದ ಕಿಟಕಿಗಳ ಮೂಲಕ ಸ್ಪಂದನೆಯ ಹೃದಯಗಳನ್ನು ನೋಡುವ ತವಕದ ನಡುವೆ ಸಿಕ್ಕ ಒಬ್ಬ ಸಂಗಾತಿ ಮುಝಫರ್ ಅಸ್ಸಾದಿ. ಹೋದವರ
ಇದನ್ನೂ ಓದಿ: ಇಂದು ಕೊಪ್ಪಳ ಬಂದ್; ಅಮಿತ್ ಶಾ ರಾಜೀನಾಮೆಗೆ ದಲಿತ ಸಂಘಟನೆಗಳ ಆಗ್ರಹ
ಅರಿವಿನ ಕಣಜ ಎನ್ನಬಹುದೇ ?
ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅಸ್ಸಾದಿ ಮಾನಸ ಗಂಗೋತ್ರಿಯ ಕ್ಯಾಂಪಸ್‌ನಿಂದಾಚೆಗೆ ಕಂಡಿದ್ದು ಒಬ್ಬ ಸಹೃದಯಿ ಸಮಾಜಮುಖಿಯಾಗಿ. ಅಧ್ಯಯನ, ಸಂಶೋಧನೆ, ಬೋಧನೆ ಈ ಚೌಕಟ್ಟುಗಳಿಂದಾಚೆ, ಹೊರಗಿನ ಸಮಾಜವನ್ನೇ ಅರಿವಿನ ಅವಶ್ಯಕತೆ ಇರುವ ಒಂದು ಪಾಠಶಾಲೆಯಂತೆ ಕಾಣುವ ಮನುಜ ಸೂಕ್ಷ್ಮತೆಯನ್ನು ಬದುಕಿನುದ್ದಕ್ಕೂ ಅಳವಡಿಕೊಂಡ ಒಬ್ಬ ವಿದ್ವತ್‌ಪೂರ್ಣ ಚಿಂತಕರಾಗಿ ಅಸ್ಸಾದಿ ನನಗೆ ಕಂಡಿದ್ದಾರೆ. ತಾನು ತನ್ನ ಬೋಧನೆ ತನ್ನ ಬಡ್ತಿ ಮತ್ತು ಔನ್ನತ್ಯ ಇವುಗಳನ್ನೇ ಬದುಕಿನ ಧ್ಯೇಯ ಮಾಡಿಕೊಂಡ ಅಸಂಖ್ಯಾತ ಬೋಧಕರ ಒಂದು ಜಗತ್ತಿನಲ್ಲಿ, ಈ ಸಹಜ ವಾಂಛೆಗಳನ್ನಿರಿಸಿಕೊಂಡೇ, ತನ್ನ ಸಾಮಾಜಿಕ ಜವಾಬ್ದಾರಿಯತ್ತ ಗಮನ ನೀಡುವ ಒಬ್ಬ ಸೃಜನಶೀಲ ವ್ಯಕ್ತಿಯಾಗಿ ಅಸ್ಸಾದಿ ನನಗೆ ಕಂಡಿದ್ದರು. ಹೋದವರ
ಗಂಗೋತ್ರಿಯ ನಾಲ್ಕು ಗೋಡೆಗಳ ನಡುವೆ ಅಥವಾ ವಿಶಾಲ ಅಂಗಳದಲ್ಲಿ ಈ ಸಂಗಾತಿ ಸೃಷ್ಟಿಸಿರುವ ಒಂದು ಬೌದ್ಧಿಕ ಜಗತ್ತು ಅವರ ಬಹುಮುಖೀ ಚಿಂತನೆ ಮತ್ತು ಬಹುಆಯಾಮದ ಅಧ್ಯಯನ ಶಿಸ್ತಿಗೆ ಕನ್ನಡಿಯಾಗಿದೆ. ರಾಜ್ಯಶಾಸ್ತ್ರ ಎನ್ನುವ ಒಂದು ಅಧ್ಯಯನ ಶಿಸ್ತು ಅತ್ಯಂತ ವಿಶಾಲವಾದದ್ದು. ಅದರಲ್ಲಿ ಸಮಾಜದ ಎಲ್ಲ ಸ್ತರಗಳ, ಎಲ್ಲ ಮಜಲುಗಳ, ಎಲ್ಲ ಆಯಾಮಗಳ ವಸ್ತುವಿಷಯಗಳೂ ಸಹ ಅಡಕವಾಗಿರುತ್ತದೆ. ಆದರೆ ಇದು ಕಾಣಬೇಕಾದರೆ ಗ್ರಾಂಥಿಕ ಚೌಕಟ್ಟಿನಿಂದ ಹೊರಗೆ ಇಣುಕಿನೋಡುವ ಒಳಗಣ್ಣು, ಒಳನೋಟ ಇರಬೇಕು. ನಾ ಕಂಡಂತೆ ಮುಝಫರ್ ಅಸ್ಸಾದಿ ಇಂತಹ ಸೂಕ್ಷ್ಮ ಒಳನೋಟ ಹೊಂದಿದ್ದ ವಿದ್ವಾಂಸರು. ಹಾಗಾಗಿಯೇ ನನಗೆ ಅಸ್ಸಾದಿ ಸಾಮಾಜಿಕ ಕಳಕಳಿ, ಕಾಳಜಿ ಮತ್ತು ಸೂಕ್ಷ್ಮ ಸಂವೇದನೆಯುಳ್ಳ ಒಬ್ಬ ವ್ಯಕ್ತಿಯಾಗಿ ಕಂಡಿದ್ದರು.
ಬೌದ್ಧಿಕವಾಗಿ ಅಸ್ಸಾದಿ ಅವರ ಪರಿಶ್ರಮ ಮತ್ತು ಅಧ್ಯಯನದ ವಿಸ್ತಾರ ಅಪಾರ. ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಲಾ ನಿಕಾಯದ ಡೀನ್ ಆಗಿ, ಹಂಗಾಮಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಅಸ್ಸಾದಿ ಪ್ರತಿಷ್ಠಿತ ಜೆಎನ್‌ಯು ಸಂಸ್ಥೆಯಲ್ಲಿ ಎಂಫಿಲ್ ಮತ್ತು ಪಿಎಚ್‌ಡಿ ಪಡೆದಿದ್ದೇ ಅಲ್ಲದೆ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಪದವಿ ಪಡೆದಿದ್ದರು. ತಮ್ಮ ಅಕಾಡೆಮಿಕ್ ವೃತ್ತಿಯಿಂದಾಚೆಗೂ ಅಧ್ಯಯನ ಶಿಸ್ತನ್ನು ರೂಢಿಸಿಕೊಂಡಿದ್ದ ಅಸ್ಸಾದಿ ಕೃಷಿ ಅಧ್ಯಯನ, ಜಾಗತೀಕರಣ ಮತ್ತು ನವ ಉದಾರವಾದಿ ಆರ್ಥಿಕತೆ, ಗಾಂಧೀವಾದ, ರಾಜಕೀಯ ಸಮಾಜಶಾಸ್ತ್ರ ಹೀಗೆ ಹಲವು ಶಿಸ್ತುಗಳಲ್ಲಿ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದ್ದರು. ಅವರ ಈ ಬಹುಮುಖಿ ಚಿಂತನಾಧಾರೆಯೇ ಅವರನ್ನು ಆದಿವಾಸಿಗಳ ಬಗ್ಗೆ ಸಂಶೋಧನೆಗೂ ಸೆಳೆದೊಯ್ದಿತ್ತು.
ಕರ್ನಾಟಕದ ಅಭಿವೃದ್ಧಿ ಮಾದರಿ ಎಂಬ ವಿಷಯದಲ್ಲಿ ಅಸ್ಸಾದಿ ಕೈಗೊಂಡ ಸಂಶೋಧನೆ ಮತ್ತು ಆಳವಾದ ಅಧ್ಯಯನದ ಹಿನ್ನೆಲೆಯಲ್ಲಿ ಕರ್ನಾಟಕದ ಬುಡಕಟ್ಟು ಸಮುದಾಯಗಳ ಸ್ಥಿತಿಗತಿಗಳ ಅಧ್ಯಯನದ ಮಹತ್ತರ ದಾಖಲೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರಾಜ್ಯ ನ್ಯಾಯಾಲಯ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ಬದ್ಧತೆಯಿಂದ ಪೂರೈಸಿರುವುದೇ ಅಲ್ಲದೆ ಬುಡಕಟ್ಟು ಸಮುದಾಯಗಳನ್ನು ಒಳಗೊಳ್ಳುವ ಅಭಿವೃದ್ಧಿ ಮಾದರಿಗೆ ಅಗತ್ಯವಾದ ನಿರ್ದೇಶನ ಸೂತ್ರಗಳನ್ನೂ ಅಸ್ಸಾದಿ ತಮ್ಮ ಸಂಶೋಧನೆಯ ಮೂಲಕ ಒದಗಿಸಿದ್ದಾರೆ. ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳನ್ನು ಕುರಿತ ಅವರ ಸಂಶೋಧನೆ ರಾಜ್ಯದ ಕೃಷಿ ಬಿಕ್ಕಟ್ಟು ಮತ್ತು ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಒಂದು ಮಹತ್ತರ ಗ್ರಂಥವಾಗಿದೆ. ಭಾರತೀಯ ಸಮಾಜವನ್ನು ಗಾಢವಾಗಿ ಕಾಡುತ್ತಿರುವ ಜಾತಿ ವ್ಯವಸ್ಥೆ, ಮುಸ್ಲಿಮರೊಳಗಿನ ಜಾತಿ ಪದ್ಧತಿಗಳು, ಪಿತೃಪ್ರಧಾನತೆ ಮತ್ತು ಕೋಮುವಾದದ ವಿರುದ್ಧ ಅಸ್ಸಾದಿ ಅವರ ಲೇಖನಗಳು ಸಾರ್ವಕಾಲಿಕ ಪ್ರಸ್ತುತತೆ ಪಡೆದುಕೊಳ್ಳುತ್ತವೆ. ಹೋದವರ
ಸ್ನೇಹ ಬಾಂಧವ್ಯದ ನೆಲೆಯಲ್ಲಿ
ವೈಯುಕ್ತಿಕವಾಗಿ ನನಗೆ ಅಸ್ಸಾದಿ ಒಬ್ಬ ಗಂಭೀರ, ಮಿತಭಾಷಿ ಚಿಂತಕರಾಗಿ ಕಾಣುತ್ತಿದ್ದರು. ಮೈಸೂರಿಗೆ ಬಂದ ಮೇಲೆ ಸಂಗಾತಿ ಡಾ. ಲಕ್ಷ್ಮೀನಾರಾಯಣ್ ಅವರ ಒಡನಾಟದಲ್ಲಿದ್ದಾಗ ಪರಿಚಯವಾದ ಅಸ್ಸಾದಿ ಮೂಲತಃ ಪಿಯುಸಿಎಲ್ ಚಟುವಟಿಕೆಗಳ ಮೂಲಕವೇ ಆಪ್ತರಾದವರು. ಕೇಂದ್ರ ಸರ್ಕಾರ ಎರಡು ದಶಕಗಳ ಹಿಂದೆ ವಿಶೇಷ ಆರ್ಥಿಕ ವಲಯ (Special Economic Zone) ನೀತಿಯನ್ನು ಜಾರಿಗೊಳಿಸಿದಾಗ ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನ ಆಶ್ರಯದಲ್ಲಿ ಈ ಬಂಡವಾಳಶಾಹಿ ಆಕ್ರಮಣದ ವಿರುದ್ಧ ಒಂದು ವಿಚಾರ ಸಂಕಿರಣ-ಸಂವಾದದಲ್ಲಿ ಅಸ್ಸಾದಿ ಅವರೊಡನೆ ವೇದಿಕೆ ಹಂಚಿಕೊಂಡಿದ್ದೆ. ಪಿಯುಸಿಎಲ್ ಕರ್ನಾಟಕ ಆಯೋಜಿಸಿದ್ದ ಈ ವಿಚಾರಗೋಷ್ಠಿಯಲ್ಲಿ ಅವರೊಡನೆ ಭಾಗವಹಿಸಿದ ಕ್ಷಣಗಳು ಇನ್ನೂ ಕಣ್ಣಮುಂದೆ ಸಾಗಿ ಹೋಗುತ್ತವೆ. ಅಲ್ಲಿ ಅವರ ವಿಷಯ ಮಂಡನೆಯ ಶಿಸ್ತು ಮತ್ತು ಅರಿವಿನ ಆಳ-ಅಗಲ ಕಂಡಿದ್ದೆ. ಬಹುಶಃ ನನ್ನ ಮುಂದಿನ ಬರವಣಿಗೆಗಳಿಗೆ ಅದೊಂದು ಸ್ಫೂರ್ತಿದಾಯಕ ನಾಂದಿಯೂ ಆಗಿತ್ತು. ಹೋದವರ
Anything under the sky ಎಂಬ ಆಂಗ್ಲ ನಾಣ್ಣುಡಿ ಇದೆ. ಅದರಂತೆ ಯಾವುದೇ ಪ್ರಚಲಿತ ಸಮಸ್ಯೆ, ವಿಷಯವನ್ನು ಕುರಿತು ಚರ್ಚೆ ಮಾಡಬೇಕಾದರೂ ಅಸ್ಸಾದಿ ತೆರೆದ ಮನಸ್ಸಿನಿಂದ ಮಾತನಾಡುತ್ತಿದ್ದರು. ಅವರೊಡನೆ ಅವರ ಮನೆಯಲ್ಲೇ ಕುಳಿತು ಹರಟಿದ ಸಂದರ್ಭಗಳು ಹಲವು. ದೇಶವನ್ನು ಕಾಡುತ್ತಿರುವ ಜಟಿಲ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಅಪಾರ ಕಾಳಜಿ ಮತ್ತು ಆತಂಕ ಹೊಂದಿದ್ದ ಅಸ್ಸಾದಿ ತಮ್ಮ ಬರವಣಿಗೆಯ ಮೂಲಕ ಅದನ್ನು ಹೊರಹಾಕುತ್ತಿದ್ದರು. ವ್ಯಕ್ತಿಗತ ಸಂವಾದದಲ್ಲಿ ಇಂತಹ ಹಲವು ವಿಚಾರಗಳನ್ನು ಅವರೊಡನೆ ಹಂಚಿಕೊಂಡಿದ್ದಿದೆ. “ ನೀವು ತುಂಬ ಚೆಂದ ಬರೆಯುತ್ತೀರಿ, ಹೀಗೇ ಬರೆಯುತ್ತಿರಿ ” ಎಂಬ ಅವರ ಉತ್ತೇಜನಕಾರಿ ಮಾತುಗಳು ನನ್ನ ಬರವಣಿಗೆಯನ್ನು ಹುರಿದುಂಬಿಸಿದ್ದಂತೂ ಹೌದು. ಹೋದವರ
ಅವರ ಓದಿಗೆ ಸಿಕ್ಕಿದ ನನ್ನ ಬರಹಗಳನ್ನು ಓದಿ ಸುಮ್ಮನಾಗದೆ ಅದರ ಬಗ್ಗೆ ನನ್ನೊಡನೆ ಅಭಿಪ್ರಾಯ ಹಂಚಿಕೊಂಡ ಸಂದರ್ಭಗಳು ಅನೇಕ. ಮೂರು ವರ್ಷಗಳ ಹಿಂದೆ ನನ್ನ ಅಂಕಣ ಬರಹಗಳ ಸಂಕಲನ “ ಸಂವೇದನೆ ” ಹೊರತಂದಾಗ ಅದರ ಮುನ್ನುಡಿಯಲ್ಲಿ ಅಸ್ಸಾದಿ ಹೀಗೆ ಹೇಳಿದ್ದರು “ ನಾ ದಿವಾಕರ್ ಒಬ್ಬ ಗಂಭೀರ ಬರಹಗಾರ, ಚಿಂತಕ, ವಿಶ್ಲೇಷಕ, ಸಂಶೋಧಕ. ಅವರ ಚಿಂತನೆಗಳು ಎಡಪಂಥೀಯ ಆದರೂ ಉದಾರವಾದಿ ನೆಲೆಯ ಆಲೋಚನೆಗಳೂ ಇವೆ. ಇದೊಂದು ಜ್ಞಾನದ ಹೈಬ್ರಿಡಿಟಿ ( ಸಂಕುರ)”. ಹೋದವರ
ಈ ಆತ್ಮೀಯ ನುಡಿಗಳು ನನ್ನ ಮುಂದಿನ ಬರವಣಿಗೆಗಳಿಗೆ ಸ್ಫೂರ್ತಿ ನೀಡುವಂತಿದ್ದವು. ಗಾಂಧಿಯ ಹಿಂದ್ ಸ್ವರಾಜ್ ಕೃತಿಯನ್ನು ಕುರಿತ ವಿಮರ್ಶಾತ್ಮಕ ಸಂಕಲನವೊಂದನ್ನು ಅಸ್ಸಾದಿ ಅವರ ಸಂಪಾದಕತ್ವದಲ್ಲೇ ಹೊರತಂದಿದ್ದರು. ಆ ಕೃತಿಗೆ ಹಿಂದ್ ಸ್ವರಾಜ್ ಕುರಿತ ವಿಮರ್ಶೆ-ವಿಶ್ಲೇಷಣೆಯನ್ನು ಬರೆಯುವ ಅವಕಾಶವನ್ನು ನನಗೂ ಕಲ್ಪಿಸಿದ್ದರು. ಸಮಕಾಲೀನ ಭಾರತಕ್ಕೆ ಹಿಂದ್ ಸ್ವರಾಜ್ ಪ್ರಸ್ತುತವಾಗಲಾರದು ಎಂಬ ನನ್ನ ನಿಲುವನ್ನು ಅದರಲ್ಲಿ ಬಿಂಬಿಸಿದ್ದೆ. “ ದಿವಾಕರ್, ಎಲ್ಲ ಲೇಖಕರ ಪೈಕಿ ನೀವೊಬ್ಬರೇ ನೇರವಾಗಿ ಹಾಗೆ ಹೇಳಿರುವುದು” ಎಂದು ಹೇಳುವ ಮೂಲಕ ಭಿನ್ನಮತವನ್ನು ಸಹಿಸಿಕೊಳ್ಳುವ ಅವರ ಸಜ್ಜನಿಕೆಯನ್ನು ಅಸ್ಸಾದಿ ಪರಿಚಯಿಸಿದ್ದರು. ಈ ರೀತಿ ಅವರೊಡನೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹಲವು ಸಂದರ್ಭಗಳಲ್ಲಿ ಚರ್ಚೆ ಮಾಡಿದ್ದಿದೆ.
ಬೌದ್ಧಿಕ ಸಾಂಗತ್ಯದ ನೆಲೆಯಲ್ಲಿ
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ʼ ಸಿದ್ಧು ಸಮಾಜವಾದ ʼ ಎಂದು ಬಣ್ಣಿಸುವ ಅಸ್ಸಾದಿ ಪ್ರತಿಪಾದನೆಯ ಬಗ್ಗೆ ನನ್ನ ಆಕ್ಷೇಪವನ್ನು ವ್ಯಕ್ತಪಡಿಸಿದಾಗ, ಈಗ್ಗೆ ಕೆಲವು ತಿಂಗಳುಗಳ ಹಿಂದೆ ಅವರ ಮನೆಯಲ್ಲೇ ಸಾಕಷ್ಟು ಚರ್ಚೆ ಮಾಡಿದ್ದೆವು. ಹಾಗೆಯೇ ಅವರ ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ ಕೃತಿಯ ಬಗ್ಗೆಯೂ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಅವರೊಡನೆ ಚರ್ಚಿಸಿದ್ದಿದೆ. ಈ ಪುಸ್ತಕದ ಬಗ್ಗೆ ಮುಕ್ತ ಸಂವಾದ ನಡೆಸಬೇಕೆಂಬ ನನ್ನ ಆಕಾಂಕ್ಷೆ ಕೊನೆಗೂ ಕೈಗೂಡಲಿಲ್ಲ. ಅದೇಕೋ ಆನ್ ಲೈನ್ ಚರ್ಚಾಗೋಷ್ಠಿಯ ಬಗ್ಗೆ ಅಸ್ಸಾದಿ ಹೆಚ್ಚು ಆಸಕ್ತಿ ತೋರಲಿಲ್ಲ. ಆದರೂ ವೈಯುಕ್ತಿಕ ನೆಲೆಯಲ್ಲಿ ಅವರ ಮನೆ ಸದಾ ತೆರೆದ ಅರಿವಿನ ದ್ವಾರವಾಗಿತ್ತು. ನನಗೆ ಓದಲು ಹಲವು ಪುಸ್ತಕಗಳನ್ನು ಪರಿಚಯಿಸುತ್ತಿದ್ದರು. ಒಮ್ಮೆ ಹೀಗೇ ಮಾತನಾಡುತ್ತಿದ್ದಾಗ, ಕೆಲವು ವರ್ಷಗಳ ಹಿಂದೆ, “ನೀವೇಕೆ ಪಿಎಚ್‌ಡಿ ಮಾಡಬಾರದು, ನಾನೇ ಗೈಡ್ ಆಗುತ್ತೇನೆ ಮಾಡಿ”ಎಂದೂ ಸೂಚಿಸಿದ್ದರು. ಅದು ನಡೆಯಲಿಲ್ಲ ಬಿಡಿ. ಹೋದವರ
ಇಂತಹ ಒಬ್ಬ ಆತ್ಮೀಯ ಸಂಗಾತಿ ಇಂದು ಹಠಾತ್ತನೆ ಅಗಲಿರುವುದನ್ನು ಹೇಗೆ ಅಭಿವ್ಯಕ್ತಿಸುವುದು. ತುಂಬಲಾರದ ನಷ್ಟ, ನಂಬಲಾಗದ ವಾಸ್ತವ ಎಂಬ ಕ್ಲೀಷೆಗಳಿಂದಾಚೆ ಯೋಚಿಸಿದಾಗ, ಅಸ್ಸಾದಿ ಒಬ್ಬ ವ್ಯಕ್ತಿಯಾಗಿ ಮಾತ್ರ ಕಾಣುವುದಿಲ್ಲ. ಸಾರ್ವಜನಿಕ ಬೌದ್ಧಿಕ ಆಸ್ತಿಯಾಗಿ ಕಾಣುತ್ತಾರೆ. ಸಾಮಾಜಿಕ ಹೋರಾಟ ಮತ್ತು ಪ್ರತಿಭಟನೆಗಳಲ್ಲಿ ಅವರ ಭಾಗವಹಿಸುವಿಕೆಯೇ ಇದಕ್ಕೆ ಸಾಕ್ಷಿ. ಅಸ್ಸಾದಿ ಅವರನ್ನು ಮಾರ್ಕ್ಸ್‌ವಾದಿ, ಗಾಂಧಿವಾದಿ ಎಂಬ ಆವರಣಗಳಲ್ಲಿ ಬಂಧಿಸಲಾಗುವುದಿಲ್ಲ. ಏಕೆಂದರೆ ಅವರ ಆಲೋಚನಾ ಕ್ರಮ ಮಾರ್ಕ್ಸ್‌ವಾದದ ನೆಲೆಯಲ್ಲೇ ಇದ್ದಾಗಲೂ ಗಾಂಧಿಯನ್ನು ಅಪ್ಪಿಕೊಳ್ಳುತ್ತಿದ್ದರು. ತಮ್ಮದೇ ಆದ ರೀತಿಯಲ್ಲಿ ಸಮಾಜವಾದವನ್ನು ವ್ಯಾಖ್ಯಾನಿಸುತ್ತಿದ್ದರು. ಅವರ ಕೆಲವು ಉಪನ್ಯಾಸಗಳನ್ನು ಕೇಳಿದಾಗ ʼ ಈ ಅಸ್ಸಾದಿ ಹೀಗೇಕೆ ಹೇಳಿದರುʼ ಅನ್ನಿಸಿದ್ದೂ ಉಂಟು. ಹೋದವರ
ಮೈಸೂರಿನಲ್ಲಿ ವೈಯುಕ್ತಿಕವಾಗಿ ನನಗೆ ಎರಡು ಬೌದ್ಧಿಕ ಅರಿವಿನ ಕೇಂದ್ರಗಳಿದ್ದವು. ಒಂದು ಸಂಗಾತಿ ಲಕ್ಷ್ಮೀನಾರಾಯಣ್ ಮತ್ತೊಂದು ಮುಝಫರ್ ಅಸ್ಸಾದಿ. ಈಗ ಇಬ್ಬರೂ ನಿರ್ಗಮಿಸಿಬಿಟ್ಟಿದ್ದಾರೆ. ನನಗಿಂತಲೂ ಕಿರಿಯರಾದ ಅಸ್ಸಾದಿ, ಹಿರಿಯರಾದ ಲಕ್ಷ್ಮೀನಾರಾಯಣ್ ಇಬ್ಬರೂ ನನ್ನ ಮಟ್ಟಿಗೆ ಮೌಖಿಕ ಆಕರಗಳಾಗಿದ್ದರು. ಭಿನ್ನ ನೆಲೆಗಳಲ್ಲಿ ನಿಂತು ಸಂವಾದಿಸಲು ಅಲ್ಲಿ ಅವಕಾಶವಿತ್ತು. ಅಥವಾ ಕೆಲವು ಸೈದ್ಧಾಂತಿಕ ನಿಲುವುಗಳನ್ನು ಪ್ರಶ್ನಿಸುವ ಅಥವಾ ಆಕ್ಷೇಪಿಸುವ ಬೌದ್ಧಿಕ ಸ್ವಾತಂತ್ರ್ಯ ಅಲ್ಲಿತ್ತು. ಚಿಂತಕ ಅಥವಾ ವಿದ್ವಾಂಸ ಎಂದು ಬಣ್ಣಿಸುವಾಗ ಯಾವುದೇ ವ್ಯಕ್ತಿಯಲ್ಲಾದರೂ ಈ ʼ ಭಿನ್ನಮತದೊಡನೆ ಮುಖಾಮುಖಿಯಾಗುವ ʼ ಸಜ್ಜನಿಕೆ ಇದ್ದರೆ ಅಂಥವರು ಸಮಾಜಮುಖಿಯಾಗಿ ಕಾಣತೊಡಗುತ್ತಾರೆ. ಮುಝಫರ್ ಅಸ್ಸಾದಿ ಅಂತಹ ಒಬ್ಬ ಆತ್ಮೀಯ ಸಂಗಾತಿ ಮತ್ತು ಬೌದ್ಧಿಕ ಒಡನಾಡಿ. ಗಂಗೋತ್ರಿಯ ಕ್ಯಾಂಪಸ್ ಒಳಗೆ ಮತ್ತು ಹೊರಗೆ ಇಂತಹ ವ್ಯಕ್ತಿಗಳು ಇರುವುದೇ ಅಪರೂಪ. ಅಸ್ಸಾದಿ ಅವರ ಈ ಸೆಕ್ಯುಲರ್ ಆದ, ಸಜ್ಜನಿಕೆಯೇ ಅವರನ್ನು ವಿದ್ಯಾರ್ಥಿಗಳ ನಡುವೆ ಜನಪ್ರಿಯವಾಗಿಸಿದೆ. ಹೋದವರ
ಅಂತಿಮ ನಮನಗಳೊಂದಿಗೆ
ಇಂತಹ ಒಬ್ಬ ಸಂಗಾತಿ ಏಕಾಏಕಿ ಸದ್ದಿಲ್ಲದೆ ಮರೆಯಾಗಿ ಹೋದಾಗ ಏನೆಂದು ಹೇಳಲು ಸಾಧ್ಯ ? ಹೋಗಿ ಬನ್ನಿ ಎನ್ನುವುದಕ್ಕೆ ಅವರು ಮರಳಿ ಬರುವುದಿಲ್ಲ. ಹೋಗಿ ಎನ್ನಲು ಮನಸ್ಸು ಬಾರದು. ನಮ್ಮೊಡನೆ ಇರಿ ಎನ್ನುವುದು ಅಭಾಸ ಎನಿಸುತ್ತದೆ ಏಕೆಂದರೆ ಅವರ ಅಂತಿಮ ಪಯಣಕ್ಕೆ ಸಾಕ್ಷಿಯಾಗಿದ್ದೇನೆ. ಆದರೆ ಒಂದು ಮಾತಂತೂ ಸತ್ಯ, ಮುಝಫರ್ ಅಸ್ಸಾದಿ ಬೌದ್ಧಿಕವಾಗಿ ನಮ್ಮೊಳಗೆ, ನಮ್ಮ ನಡುವೆ ಸದಾ ಜೀವಂತವಾಗಿರುತ್ತಾರೆ. ಅವರ ಚಿಂತನಾ ಕ್ರಮ , ಆಲೋಚನಾ ವಿಧಾನ ಮತ್ತು ಬೌದ್ಧಿಕ ಸರಕುಗಳು ನನ್ನಂತಹ ಸಾವಿರಾರು ಆಪ್ತರ ಅರಿವಿನ ಗ್ರಂಥಾಲಯದಲ್ಲಿ ಉಪಯುಕ್ತವಾಗಿ ಮುಂದುವರೆಯುತ್ತವೆ. ರಹಮತ್ ತರೀಕೆರೆ ಅವರು ಹೇಳಿದಂತೆ ಅಸ್ಸಾದಿ “ ವಿದ್ವತ್ತಿನ ಬಹುತ್ವದ ಪ್ರತೀಕ ”. ಹೋದವರ
ಅವರನ್ನು ಮುಸ್ಲಿಂ ಚಿಂತಕ ಎಂದು ಬಣ್ಣಿಸುವುದೂ ಅಪವಾದವಾಗುತ್ತದೆ. ಹುಟ್ಟಿನಿಂದ ಇರುವ ಅಸ್ಮಿತೆಯನ್ನು ತಮ್ಮ ಬೌದ್ಧಿಕತೆಯ ಮೂಲಕ ಕಳಚಿಹಾಕಿದ ವಿದ್ವಾಂಸರಾಗಿ ಅಸ್ಸಾದಿ ನಮಗೆ ಕಾಣುತ್ತಾರೆ. ವ್ಯಕ್ತಿಗತ ನೆಲೆಯಲ್ಲಿ ಇರಬೇಕಾದ ಸೆಕ್ಯುಲರ್ ಆಲೋಚನಾ ಕ್ರಮಗಳಿಗೆ ಸಾಕ್ಷಿ ಪ್ರಜ್ಞೆಯಾಗಿ ಮುಝಫರ್ ಅಸ್ಸಾದಿ ಬದುಕಿದ್ದಾರೆ. ಅಂತಹುದೇ ಹಾದಿಯನ್ನು ತಮ್ಮ ಅಪಾರ ಸಂಖ್ಯೆಯ ವಿದ್ಯಾರ್ಥಿ ಸಮೂಹಕ್ಕೂ, ವಿಶಾಲ ಸಮಾಜಕ್ಕೂ ಬಿಟ್ಟುಹೋಗಿದ್ದಾರೆ. ಹಾಗಾಗಿಯೇ ಸದಾ ನಮ್ಮನ್ನು ಎಚ್ಚರಿಸುತ್ತಲೇ ಇರುವ ಬೌದ್ಧಿಕ ಜಾಗೃತಿಗಂಟೆಯಾಗಿ ಅಸ್ಸಾದಿ ನಮ್ಮೊಳಗೆ ಇರುತ್ತಾರೆ. ಅವರ ಸಾಹಿತ್ಯ ಮತ್ತು ಸಂಶೋಧನೆ ಈ ಅರಿವಿನ ಗಂಟೆಯ ಸದ್ದನ್ನು ನಿರಂತರವಾಗಿ ಕಾಪಾಡಲಿದೆ. ಹೋದವರ
ಅಂತಿಮವಾಗಿ, ಇಷ್ಟೇಕೆ ಅವಸರ ಮಾಡಿದಿರಿ ಅಸ್ಸಾದಿ ? ಎಂಬ ಪ್ರಶ್ನೆ. ಉತ್ತರ ಎಲ್ಲಿಂದ ನಿರೀಕ್ಷಿಸಲು ಸಾಧ್ಯ. ನಿಟ್ಟುಸಿರು ಬಿಡುತ್ತಾ ನೀವೂ ಹೊರಟುಬಿಟ್ಟಿರಾ,,,,,, ಎಂಬ ಉದ್ಗಾರ ಹೊರಟಾಗ ಕಣ್ಣಂಚಿನಲ್ಲಿ ಸಣ್ಣ ಹನಿ ತೊಟ್ಟಿಕುತ್ತದೆ. ಅದೇ ಸಂಗಾತಿ ಮುಝಫರ್ ಅಸ್ಸಾದಿಗೆ ಸಲ್ಲಿಸಬಹುದಾದ ಬಾಷ್ಪಾಂಜಲಿ.
ಲಾಲ್ ಸಲಾಂ ಅಸ್ಸಾದಿ. ನಿಮ್ಮ ನೆನಪು ಚಿರಸ್ಮರಣೀಯ.
ಇದನ್ನೂ ನೋಡಿ: 1000 ದಿನಗಳನ್ನು ಪೂರೈಸಿ ಇಂದಿಗೂ ಮುಂದುವರಿದ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟದ ಆಳ ಅಗಲ…