ಜೋಡೋ ಯಾತ್ರಾರ್ಥಿಗಳಿಗೆ ಜನ ಕೊಟ್ಟ ಸಂದೇಶ

ಎಸ್.ವೈ. ಗುರುಶಾಂತ್

ಕರ್ನಾಟಕದಲ್ಲಿ ಭಾರತ್ ‘ಜೋಡೋ ಯಾತ್ರೆ’ 2022 ಸೆಪ್ಟಂಬರ್ 30 ರಂದು ಚಾಮರಾಜನಗರ ಜಿಲ್ಲೆ ಪ್ರವೇಶಿಸಿ ಸುಮಾರು 22 ದಿನಗಳಲ್ಲಿ 510 ಕಿ.ಮೀ. ಕ್ರಮಿಸಿ ರಾಯಚೂರಿನ ಯರಮರಸ್ ನಿಂದ ಗಡಿ ಗ್ರಾಮ ಹಾಲಹರವಿ ಮೂಲಕ ತೆಲಂಗಾಣ ಪ್ರವೇಶಿಸಿದೆ. ರಾಜ್ಯದ ಎಂಟು ಜಿಲ್ಲೆಗಳ ಮೂಲಕ ಹಾದು ಬಂದ ಯಾತ್ರೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತ ವರದಿಗಳಿವೆ. ಬಳ್ಳಾರಿಯಲ್ಲಿ ನಡೆದ ಬೃಹತ್ ಬಹಿರಂಗ ಸಭೆಗೆ ಜನ ತೋರಿದ ಸ್ಪಂದನವೂ ಅಭೂತಪೂರ್ವ. ಇಂತಹ ಪ್ರತಿಕ್ರಿಯೆ ದೊರೆಯಲು ಕಾರಣವಾದರೂ ಏನು?

ಇದು ನಾಯಕರ ವರ್ಚಸ್ಸಿನ ಫಲ ಎಂದು ಭಾವಿಸಿದರೆ ತಪ್ಪಾದೀತು. ಅದರರ್ಥ ರಾಹುಲಗಾಂಧಿ, ಸಿದ್ಧರಾಮಯ್ಯನಂತಹವರ ವ್ಯಕ್ತಿತ್ವದ ಪ್ರಭಾವ ಇಲ್ಲವೇ ಇಲ್ಲವೆಂದೇನಲ್ಲ. ಆದರ ಪ್ರಮಾಣ ಅಲ್ಪ. ಪ್ರಚಲಿತ ರಾಜಕೀಯ ಸಂದರ್ಭದಲ್ಲಿ ಇದು ಸಕಾಲಿಕ ಮದ್ಯಪ್ರವೇಶ.

ಜನ ಸ್ಪಂದನ

ಯಾತ್ರೆಯ ಸಂಘಟಕರು ಘೋಷಿಸಿದಂತೆ ಇದು ಕೋಮುವಾದಿ, ಮೂಲಭೂತವಾದಿ ಮುಂತಾದ ವಿಭಜಕ ಶಕ್ತಿಗಳು ಜನರನ್ನು ಒಡೆಯುತ್ತಿರುವ ಹೊತ್ತಿನಲ್ಲಿ ಭಾರತವನ್ನು ಜೋಡಿಸುವ ಯಾತ್ರೆ ಎನ್ನುವುದನ್ನು ಮೀರಿ ಕಾಂಗ್ರೆಸ್ ಪಕ್ಷ ಚುನಾವಣಾ ಲಾಭದ ಲೆಕ್ಕಾಚಾರದಲ್ಲಿ ರೂಪುಗೊಂಡಿರುವ ಯೋಜನೆ ಎಂಬುದು ರಾಜ್ಯದಲ್ಲಿಯೂ ಕಂಡಿತು. ದ್ವೇಷಾಗ್ನಿಯಲ್ಲಿ ಬೇಯುತ್ತಿರುವ ಜಿಲ್ಲೆಗಳನ್ನು ಈ ಯಾತ್ರೆ ಬಹುತೇಕ ದೂರ ಇಟ್ಟಿತು. ಆದರೂ ಜನರನ್ನು ಒಗ್ಗೂಡಿಸುವ, ಸೆಕ್ಯುಲರ್ ಶಕ್ತಿಗಳನ್ನು ಚುರುಕುಗೊಳಿಸುವ ದೆಸೆಯಲ್ಲಿ ಒಂದಿಷ್ಟು ಪರಿಣಾಮ ಬೀರಿದೆ.

ಬಿಜೆಪಿಯಲ್ಲಿ ಹೆಚ್ಚಿದ ಹತಾಶೆ

ಈ ಯಾತ್ರೆಗೆ ಜನ ತೋರಿದ ಸ್ಪಂದನ ಅಧಿಕಾರಸ್ತ ಬಿಜೆಪಿ ಸರಕಾರ ಮತ್ತು ಪಕ್ಷದ ವಿರುದ್ದ ರೋಸಿ ಹೋಗಿರುವ, ಅತೃಪ್ತಿಯ ಪ್ರತಿಫಲನವಾಗಿದೆ. ಬಿಜೆಪಿಯ ಹಿಂಸಾತ್ಮಕ, ದ್ವೇಷಪೂರಿತ, ಭಾರೀ ಭ್ರಷ್ಟ, ದುರಾಡಳಿತದ ರಾಜಕಾರಣಕ್ಕೆ ತೋರಿದ ಪ್ರತಿಭಟನೆಯಾಗಿದೆ. ತನ್ನ ವಿರುದ್ಧ ಜನತೆಯಲ್ಲಿ ಅತೀವವಾಗಿ ಅತೃಪ್ತಿ ಬೆಳೆಯುತ್ತಿರುವುದಕ್ಕೆ ಭಂಡತನದಿಂದ ಪ್ರತಿಕ್ರಿಯಿಸುತ್ತಿದ್ದರೂ ಬಿಜೆಪಿ ಸರಿಯಾಗಿಯೇ ಅಂದಾಜಿಸಿದೆ. ಅದು ‘ಮೋ-ಷಾ’ ಗಳ ಹವಾದಲ್ಲೇ ತೇಲಬಹುದು ಎನ್ನುವ ನೆಚ್ಚಿಕೆಯನ್ನೂ ಕಳೆದುಕೊಂಡಿದೆ. ಹೀಗಾಗಿಯೇ  ಕಾಂಗ್ರೆಸ್ ನಾಯಕರ ಮೇಲೆ ಯದ್ವಾತದ್ವಾ ವಾಗ್ಧಾಳಿ ನಡೆಸಿದ್ದಲ್ಲದೇ, ತಡಬಡಾಯಿಸಿ ಮುಖ್ಯಮಂತ್ರಿ, ಹಿರಿಯ ನಾಯಕರಾದಿಯಾಗಿ ರಾಜ್ಯದ ತುಂಬಾ ಸಂಕಲ್ಪ ಯಾತ್ರೆಯನ್ನೂ ನಡೆಸುತ್ತಿದೆ. ಸರಕಾರದ ಹೊಸ ಯೋಜನೆಗಳ ನೆಪದಲ್ಲಿ ಹಣ, ಅಧಿಕಾರದ ಆಮಿಷಗಳನ್ನು ಒಡ್ಡುತ್ತಿದೆ. ಸಾಲದೆಂಬಂತೆ ಇನ್ನೊಂದು ಮಗ್ಗುಲಲ್ಲಿ ಸಂಘಪರಿವಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತೇ ಮತೀಯ ದ್ವೇಷ ಹೆಚ್ವಿಸುವ ದುಷ್ಟ ಆಟಕ್ಕೂ ಇಳಿದಿದೆ. ಇಂತಹ ವಿಭಜಕ, ಜನ ಪೀಡಕ ಆಡಳಿತಕ್ಕೆ ಎದುರಾಗಿ ಜನರನ್ನು ಒಗ್ಗೂಡಿಸುವ ಕಾಂಗ್ರೆಸ್ ನ ಯಾತ್ರೆಯ ಸಂದೇಶಕ್ಕೆ ಸ್ಪಂದನವೂ ದೊರೆಯಿತು. ಹೀಗಾಗಿ ಕಾಂಗ್ರೆಸ್ ನ ರಾಜಕೀಯ, ಆರ್ಥಿಕ ನೀತಿಗಳಿಗೆ ಭಿನ್ನ ಅಭಿಪ್ರಾಯ ಹೊಂದಿದ ಬುದ್ದಿಜೀವಿಗಳನ್ನೂ ಒಳಗೊಂಡು ಪ್ರಜ್ಞಾವಂತರು ರಾಹುಲರ ಯಾತ್ರೆಯನ್ನು ಬೆಂಬಲಿಸಿದರು.

ಸಂದೇಶವೇನು?

ಈ ಯಾತ್ರೆ ಜನಮಾನಸದಲ್ಲಿ ಒಂದು ಸಂದೇಶವನ್ನು ಬಿತ್ತಿತು. ಅಷ್ಟು ಮಾತ್ರವಲ್ಲ, ಯಾತ್ರೆಯಲ್ಲಿ ಪಾಲ್ಗೊಂಡ ವಿಶೇಷವಾಗಿ ರಾಹುಲ್ ಗಾಂಧಿಯನ್ನು ಒಳಗೊಂಡು ಎಲ್ಲ ನಾಯಕರಿಗೂ ಜನರೂ ಕೂಡ ಒಂದು ವಿಶೇಷ  ಸಂದೇಶವನ್ನು ನೀಡಿದ್ದಾರೆ. ಬಿಜೆಪಿಯ ವೈಫಲ್ಯಗಳ ಎದುರು ಅಪಾರ ನಿರೀಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನ ಮೇಲಿನ ಹೊಣೆಗಾರಿಕೆ ಮತ್ತಷ್ಟು ಹೆಚ್ಚಿದೆ. ಇದನ್ನು ಈ ಅರ್ಥದಲ್ಲಿಯೇ ಕಾಂಗ್ರೆಸ್ ತೆಗೆದುಕೊಳ್ಳುವುದೇ? ಮತ್ತು ಜನತೆಯ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವುದೇ ಅಥವಾ ಇನ್ನೇನು ತಮ್ಮದೇ ಅಧಿಕಾರ ಎಂಬ ಭ್ರಮೆಯಲ್ಲಿ ತೇಲುತ್ತಾ ಅಧಿಕಾರದ ಗದ್ದುಗೆ ಹಿಡಿಯುವ  ಕಿತ್ತಾಟದಲ್ಲಿ ಮುಳುಗುವುದೇ? ಹೀಗೆ ಹಳೆಯ ಅನುಭವಗಳ ಹೊಳಹಿನಲ್ಲಿ ಸಹಜ ಅನುಮಾನಗಳು, ನಿರೀಕ್ಷೆಗಳು.

ಅಂದರೆ ಕಾಂಗ್ರೆಸ್ ಹಲವು ಆಯಾಮಗಳಲ್ಲಿ ಬದಲಾಗಬೇಕು. ಇಂತಹ `ಜಾತ್ರೆ’ಗಳಿಂದಲೇ ಬಿಜೆಪಿಯಂತಹ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಸಮಾಜ ವ್ಯವಸ್ಥೆಯ ಮೈದಾನದಲ್ಲಿರಲಿ, ಚುನಾವಣಾ ರಾಜಕಾರಣದಲ್ಲಿಯೂ ಹಿಮ್ಮೆಟ್ಟಿಸುವುದು ಅಷ್ಟು ಸುಲಭವೇನಲ್ಲ ಎನ್ನುವ ವಾಸ್ತವವನ್ನೂ ಚೆನ್ನಾಗಿ ಅರಿತಿರಬೇಕು. ಪ್ರಸಕ್ತ ರಾಜಕೀಯ ವಾತಾವರಣದಲ್ಲಿ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಹೋರಾಡಬೇಕೆಂದರೂ ಬಹು ಕೌಶಲ್ಯ, ನಿಖರ ಸಿದ್ಧತೆ ಯಾವುದೇ ಪಕ್ಷಕ್ಕೂ ಬೇಕಾಗುತ್ತದೆ. ಅಲೆಯ ಮೇಲೆ ತೇಲುವ ಸ್ಥಿತಿ ಎಂದೋ ಹೊರಟು ಹೋಗಿದೆ. ಬಿಜೆಪಿಯನ್ನು ಸೋಲಿಸಬೆಕೆನ್ನುವಾಗ ಕರ್ನಾಟಕದ ಮಟ್ಟಿನಲ್ಲಿ ಬೇರೆ ವಿರೋಧ ಪಕ್ಷಗಳಿಗಿಂತ  ಕಾಂಗ್ರೆಸ್ ಮೇಲೆ ಹೊಣೆ ಹೆಚ್ಚಿದೆ. ಕರ್ನಾಟಕ ಕಾಂಗ್ರೆಸ್ ನ ಅದ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಯಾತ್ರೆಯಿಂದ ಸ್ಪೂರ್ತಿಗೊಂಡು ಮತ್ತೊಂದು ಮಹಾ ಯಾತ್ರೆಯ ಚಿಂತನೆಯನ್ನು ಹರಿಯ ಬಿಟ್ಟಿದ್ದಾರೆ. ಪರ್ಯಾಯ ನೀತಿ, ತಳಹಂತದ ಸಂಘಟನಾ ಸಿದ್ಧತೆ ಇಲ್ಲದೇ ಹೋದರೆ ಇಂತಹವು ವ್ಯರ್ಥ ಕಸರತ್ತುಗಳು ಅಷ್ಟೇ.

Donate Janashakthi Media

Leave a Reply

Your email address will not be published. Required fields are marked *