ನವ-ಉದಾರವಾದೀಗಾಳಿಯಲ್ಲಿ ಧೂಳೀಪಟ್ಟವಾಗುತ್ತಿವೆ ಉದ್ಯೋಗಗಳು!

ಪ್ರೊ. ಪ್ರಭಾತ್ ಪಟ್ನಾಯಕ್

ಅನು: ಕೆ.ಎಂ.ನಾಗರಾಜ್

ಮಾರ್ಚ್ 2023ರಲ್ಲಿ ಉದ್ಯೋಗ ಹೊಂದಿದ್ದ ವ್ಯಕ್ತಿಗಳ ಸಂಖ್ಯೆಯು 2019-20ರಲ್ಲಿ ಇದ್ದುದಕ್ಕಿಂತಲೂ ಕೆಳಗಿದೆ. ಅಂದರೆ, ಇದ್ದ ಉದ್ಯೋಗಗಳೂ ನಾಶವಾಗಿವೆ. ಇದು ನಿಜಕ್ಕೂ ಒಂದು ಭಯಂಕರ ಸನ್ನಿವೇಶವೇ ಸರಿ. ಭಾರತದ ನಿರುದ್ಯೋಗದ ಅಂಕಿಅಂಶಗಳು ನವ ಉದಾರವಾದಿ ಬಂಡವಾಳಶಾಹಿಯು ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವ ಸಾಮಾಜಿಕ ವ್ಯವಸ್ಥೆಯಾಗುವುದು ಸಾಧ್ಯವಿಲ್ಲ ಎಂಬ ಒಂದು ಮೂಲಭೂತ ಅಂಶವನ್ನು ಸೂಚಿಸುತ್ತವೆ. ನಿರುದ್ಯೋಗ ನಿವಾರಣೆ ಎಂದರೆ ಅದು ನವ ಉದಾರವಾದಿ ಬಂಡವಾಳಶಾಹಿ ಆಳ್ವಿಕೆಯಲ್ಲಿ ಕೆಲವುಬದಲಾವಣೆಗಳನ್ನು ಮಾಡುವ ಮೂಲಕ ಸಂಭವಿಸಬಹುದಾದ ವಿಷಯವಲ್ಲ, ಅದು ನವಉದಾರವಾದಿ ಬಂಡವಾಳಶಾಹಿಯಿಂದ ಸಂಪೂರ್ಣವಾಗಿ ಭಿನ್ನವಾದ ಒಂದು ಸಾಮಾಜಿಕಆರ್ಥಿಕ ವ್ಯವಸ್ಥೆಗೆ ಸಾಗುವ ವಿಷಯವಾಗಿದೆ. ಹೊಸ ವ್ಯವಸ್ಥೆಯು ನಿರುದ್ಯೋಗಿಗಳ ಪಡೆಯನ್ನು ನಿರ್ಮಿಸದೆ ಕಾರ್ಯನಿರ್ವಹಿಸುವ, ಮಾತ್ರವಲ್ಲದೆ, ಪ್ರಭುತ್ವವು ದುಡಿಯುವ ಜನರ ಪರವಾಗಿ ಅರ್ಥವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವ ಅವಕಾಶವನ್ನು ಪ್ರಜ್ಞಾಪೂರ್ವಕವಾಗಿ ನೀಡುವ ವ್ಯವಸ್ಥೆಯಾಗಬೇಕು.

ನಿರುದ್ಯೋಗ ಪರಿಸ್ಥಿತಿಯ ಬಗ್ಗೆ ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (ಸಿಎಂಐಇ) ಹೊರತಂದಿರುವ ದತ್ತಾಂಶವು ಒಂದು ಭೀಕರ ಚಿತ್ರವನ್ನು ಮೂಡಿಸುತ್ತದೆ. ಕೋವಿಡ್-19 ಹರಡುವ ಮೊದಲೇ ಕೆಲವು ವರ್ಷಗಳಿಂದ ಇಂದಿನವರೆಗೂ ನಿರುದ್ಯೋಗ ದರವು ತೀವ್ರವಾಗಿ ಏರುತ್ತಲೇ ಇದೆ. ಕೋವಿಡ್ ಸಮಯದಲ್ಲಿ ನಿರುದ್ಯೋಗವು ಒಂದು ಉತ್ತುಂಗವನ್ನು ತಲುಪಿತ್ತು ಮತ್ತು ಜಿಡಿಪಿಯು ಪಾತಾಳಕ್ಕೆ ಇಳಿದಿತ್ತು. ಆನಂತರದಲ್ಲಿ ಜಿಡಿಪಿಯು ಚೇತರಿಸುತ್ತಾ ಬಂದಿದೆಯಾದರೂ ಸಹ, ನಿರುದ್ಯೋಗ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ.

2017-18ರಲ್ಲಿ ಶೇ. 4.7ರಷ್ಟಿದ್ದ ನಿರುದ್ಯೋಗ ದರವು 2018-19ರ ವೇಳೆಗೆ ಶೇ.6.3ರ ಮಟ್ಟಕ್ಕೆ ಏರಿತ್ತು. ಕೋವಿಡ್ ಸಂಬಂಧವಾಗಿ ಹೇರಿದ ಲಾಕ್‌ಡೌನ್ ಅವಧಿಯಲ್ಲಿ ಅದು ಒಂದು ಉತ್ತುಂಗವನ್ನು ತಲುಪಿತು: ಉದಾಹರಣೆಗೆ, ಡಿಸೆಂಬರ್ 2020ರಲ್ಲಿ, ಶೇ. 9.1ರಷ್ಟಿತ್ತು. ಆನಂತರದಲ್ಲಿ ಸ್ವಲ್ಪ ಇಳಿಯಿತು. ಆದರೆ, ಜಿಡಿಪಿಯು ದಾಖಲಿಸಿದ ಅಲ್ಪ ಚೇತರಿಕೆಗೆ ತಕ್ಕಂತೆ ನಿರುದ್ಯೋಗ ಕಡಿಮೆಯಾಗಲಿಲ್ಲ. ಲಭ್ಯವಿರುವ ಸಿಎಂಐಇ ನ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಡಿಸೆಂಬರ್ 2022ರಲ್ಲಿ ಶೇ. 8.3ರಷ್ಟಿದ್ದ ನಿರುದ್ಯೋಗವು ಜನವರಿ 2023ರಲ್ಲಿ ಶೇ. 7.14ಕ್ಕೆ ಇಳಿದಿತ್ತು. ಮಾರ್ಚಿನಲ್ಲಿ ಮತ್ತೆ ಶೇ. 7.8ಕ್ಕೆ ಏರಿತ್ತು. ಜಿಡಿಪಿಯ ಚೇತರಿಕೆಯು ಕುಂಠಿತವಾಗಿತ್ತಾದರೂ, 2022-23ರ ವರ್ಷದ ಜಿಡಿಪಿಯ ಅಂದಾಜು ಬೆಳವಣಿಗೆಯನ್ನು 2019-20ಕ್ಕೆ ಹೋಲಿಸಿದರೆ ಶೇ. 8.4ರಷ್ಟು ವೃದ್ಧಿಸುತ್ತದೆ ಮತ್ತು 2018-19ಕ್ಕೆ ಹೋಲಿಸಿದರೆ ಶೇ. 12.95 ರಷ್ಟು ವೃದ್ಧಿಸುತ್ತದೆ ಎಂದು ಹೇಳಲಾಗಿತ್ತು. ಜಿಡಿಪಿಯು ಶೇ. 12.95ರಷ್ಟು ವೃದ್ಧಿಸಿತಾದರೂ, 2022-23ರ ಕೊನೆಯಲ್ಲಿ ನಿರುದ್ಯೋಗ ದರವು, 2018-19ರ ಶೇ. 6.3ಕ್ಕೆ ಹೋಲಿಸಿದರೆ, ಶೇ. 7.8ರ ಮಟ್ಟಕ್ಕೆ ಏರಿಕೆಯಾಗಿತ್ತು. ಈ ನಾಲ್ಕು ವರ್ಷಗಳಲ್ಲಿ ಕಾರ್ಮಿಕ ಬಲವು ಶೇ. 12.95ಕ್ಕಿಂತ ಹೆಚ್ಚು ಅಥವಾ ಶೇ. 12.95ರಷ್ಟಾದರೂ ಹೆಚ್ಚಿರುವ ಸಾಧ್ಯತೆ ಇಲ್ಲದ ಕಾರಣ, 2018-19 ಮತ್ತು 2022-23ರ ನಡುವೆ ಪ್ರತಿ ಯೂನಿಟ್ ಜಿಡಿಪಿಯ ಉದ್ಯೋಗ ಪ್ರಮಾಣವು ಇಳಿಕೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಇಳಿಕೆಯು, ಇಷ್ಟು ಸಣ್ಣ ಅವಧಿಯಲ್ಲಿ, ಉತ್ಪಾದನಾ ಚಟುವಟಿಕೆಗಳಲ್ಲಿ ಜಾರಿಗೆ ತಂದ ತಾಂತ್ರಿಕ ಬದಲಾವಣೆಗಳ ಮೂಲಕ ಸಂಭವಿಸಿದೆ ಎಂದು ಹೇಳಲಾಗದು.

ಆದ್ದರಿಂದ, ಕೋವಿಡ್ ಹರಡುವ ಮೊದಲಿನ ಪರಿಸ್ಥಿತಿಗೆ ಹೋಲಿಸಿದರೆ ಸಧ್ಯದಲ್ಲಿ ಮೇಲ್ಮಟ್ಟದಲ್ಲಿರುವ ನಿರುದ್ಯೋಗ ದರವು ಈ ಕೆಳಗಿನ ಎರಡು ಅಂಶಗಳ ಪರಿಣಾಮವೆಂದು ಹೇಳಬಹುದು: ಒಂದು, ಚೇತರಿಕೆಯು ಪ್ರಧಾನವಾಗಿ ಕಾರ್ಮಿಕರನ್ನು ಹೆಚ್ಚಾಗಿ ಬಳಸದ ಕೈಗಾರಿಕೆಗಳಲ್ಲಿ ಹಾಗೂ ಇತರ ಚಟುವಟಿಕೆಗಳಲ್ಲಿ ಸಂಭವಿಸಿದೆ. ಅಂದರೆ, ಹೆಚ್ಚು ಉದ್ಯೋಗಗಳಿಂದ ಕೂಡಿದ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ಕೈಗಾರಿಕೆಗಳ ವಲಯವನ್ನು ಚೇತರಿಕೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಎರಡನೆಯದು, ಬೇಡಿಕೆ-ಇಳಿಕೆಗೆ ಪ್ರತಿಕ್ರಿಯೆಯಾಗಿ ಅಥವಾ “ಮಿತವ್ಯಯ” ಪಾಲನೆಯ ದೃಷ್ಟಿಯಲ್ಲಿ ಇತ್ತೀಚೆಗೆ ಗಮನಾರ್ಹ ಸಂಖ್ಯೆಯ ಕೆಲಸಗಾರರನ್ನು ಕೊನೆಯ ಪಕ್ಷ ತಾತ್ಕಾಲಿಕವಾಗಿಯಾದರೂ ವಜಾ ಮಾಡಲಾಗಿದೆ.

ಈ ತಾತ್ಕಾಲಿಕ ವಜಾಗಳು ಸಂಭವಿಸಿದ್ದವು ಎಂಬುದಕ್ಕೆ ಸಿಎಂಐಇ ಒದಗಿಸಿರುವ ಅಂಕಿ-ಅಂಶಗಳು ಪುರಾವೆಗಳಾಗುತ್ತವೆ. ಈ ವರ್ಷದ ಫೆಬ್ರವರಿಯಲ್ಲಿ 409.9 ಮಿಲಿಯನ್ ಇದ್ದ ಉದ್ಯೋಗಿಗಳ ಸಂಖ್ಯೆಯು ಮಾರ್ಚ್ ತಿಂಗಳ ಅಂತ್ಯದ ವೇಳೆಗೆ 407.6 ಮಿಲಿಯನ್‌ಗಳಿಗೆ ಇಳಿದಿದೆ ಎಂಬುದು ಸಿಎಂಐಇ ನ ಅಂದಾಜು. ಪ್ರಾಸಂಗಿಕವಾಗಿ ಹೇಳುವುದಾದರೆ, 2019-20ರಲ್ಲಿ ಭಾರತದ ಒಟ್ಟು ಉದ್ಯೋಗಿಗಳ ಸಂಖ್ಯೆಯು 408.9 ಮಿಲಿಯನ್‌ ನಷ್ಟಿತ್ತು. ಅಂದರೆ, ಮಾರ್ಚ್ 2023ರಲ್ಲಿ ಉದ್ಯೋಗ ಹೊಂದಿದ್ದ ವ್ಯಕ್ತಿಗಳ ಸಂಖ್ಯೆಯು 2019-20ರಲ್ಲಿ ಇದ್ದುದಕ್ಕಿಂತಲೂ ಕೆಳಗಿದೆ. ಅಂದರೆ, ಇದ್ದ ಉದ್ಯೋಗಗಳೂ ನಾಶವಾಗಿವೆ. ಇದು ನಿಜಕ್ಕೂ ಒಂದು ಭಯಂಕರ ಸನ್ನಿವೇಶವೇ ಸರಿ.

“ಎಲ್ಲಿದೆ ನನ್ನ ಉದ್ಯೋಗ?”-ಭಾರತದ ಯುವಜನರ ಪ್ರಶ್ನೆ? ವಿಪರ್ಯಾಸ

ಈ ಸನ್ನಿವೇಶದಲ್ಲಿ ದೇಶದ ಉದ್ಯೋಗ ಪರಿಸ್ಥಿತಿ ಸುಧಾರಿಸಿದೆ ಎಂದು ಸರ್ಕಾರದ ವಕ್ತಾರರು ಹೇಳುತ್ತಿರುವುದು ಒಂದು ವಿಪರ್ಯಾಸವೇ ಸರಿ. ತಮ್ಮ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಈ ವಕ್ತಾರರು ಎರಡು ವಾದಗಳನ್ನು ಮಂಡಿಸುತ್ತಾರೆ: ಮೊದಲನೆಯದು, ಸಿಎಂಐಇ ದತ್ತಾಂಶವು ವಿಶ್ವಾಸಾರ್ಹವಲ್ಲ ಎಂಬುದು ಮತ್ತು ಅಧಿಕೃತ ‘ಆವರ್ತಕ ಕಾರ್ಮಿಕ ಬಲ ಸಮೀಕ್ಷೆಗಳು (PLFS) ಸೂಚಿಸುವದಕ್ಕಿಂತ ಭಿನ್ನವಾಗಿದೆ ಎಂಬುದು. ಅಂದರೆ, ಈ ಸಮೀಕ್ಷೆಗಳ ಪ್ರಕಾರ ಉದ್ಯೋಗ ಪರಿಸ್ಥಿತಿ ಸುಧಾರಿಸಿದೆ. ಎರಡನೆಯದು, ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದವರ ಸಂಖ್ಯೆಯೇ ಇಳಿದಿದೆ. ಆದ್ದರಿಂದ ಉದ್ಯೋಗ ಪರಿಸ್ಥಿತಿ ಸುಧಾರಿಸಿದೆ ಎಂಬುದು.

ಈ ಎರಡೂ ವಾದಗಳಲ್ಲೂ ಹುರುಳಿಲ್ಲ. ಉದ್ಯೋಗ ಪರಿಸ್ಥಿತಿಯ ಬಗ್ಗೆ PLFS ಮತ್ತು ಸಿಎಂಐಇ ದತ್ತಾಂಶಗಳ ನಡುವೆ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ, PLFS ವ್ಯಾಪ್ತಿಯು ಆಂತರಿಕ ಆರ್ಥಿಕ ಚಟುವಟಿಕೆಗಳಲ್ಲಿ ವೇತನರಹಿತ ಕೆಲಸಗಳನ್ನೂ ಒಳಗೊಳ್ಳುತ್ತದೆ ಮತ್ತು ಸಿಎಂಐಇ ದತ್ತಾಂಶಗಳು ವೇತನರಹಿತ ಕೆಲಸಗಳನ್ನು ಒಳಗೊಂಡಿಲ್ಲ. ಆದರೆ, ಆಂತರಿಕ ಆರ್ಥಿಕ ಚಟುವಟಿಕೆಗಳಲ್ಲಿ ವೇತನರಹಿತ ಕೆಲಸಗಳನ್ನು ಸೇರಿಸುವುದರಿಂದ ಉದ್ಭವಿಸುವ ಸಮಸ್ಯೆಯೆಂದರೆ, ತಾವು ತೊಡಗಿದ್ದ ಹೊರಗಿನ ಉದ್ಯೋಗದಿಂದ ಹೊರದಬ್ಬಲ್ಪಟ್ಟಾಗ, ಕುಟುಂಬದ ಸದಸ್ಯರು ಲಭ್ಯವಿರುವ ತಮ್ಮದೇ ಕುಟುಂಬ-ಸಂಬಂಧಿತ ಕೆಲಸಕಾರ್ಯಗಳನ್ನು ಹಂಚಿಕೊಳ್ಳುತ್ತಾರೆ. ಈ ವಿದ್ಯಮಾನವನ್ನು ನಿರುದ್ಯೋಗದ ಹೆಚ್ಚಳವೆಂದು PLFS ತೋರಿಸುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅದೃಷ್ಟ ಕೈಕೊಟ್ಟಾಗ ಕುಟುಂಬವು ತನ್ನ ಕುಟುಂಬ-ಸಂಬಂಧಿತ ಸಣ್ಣ ಪುಟ್ಟ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವ ಅನಿವಾರ್ಯತೆಗೆ ಒಳಗಾಗುತ್ತದೆ. PLFS ಅದನ್ನು ನಿರುದ್ಯೋಗವೆಂದು ಪರಿಗಣಿಸುವುದಿಲ್ಲ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ದೇಶದೊಳಗಿನ ಆರ್ಥಿಕ ಚಟುವಟಿಕೆಗಳಲ್ಲಿ ಲಾಭದಾಯಕವಾಗಿ ಉದ್ಯೋಗದಲ್ಲಿ ತೊಡಗಿಕೊಳ್ಳುವುದಕ್ಕೂ ಮತ್ತು ಅಂತಹ ಒಂದು ಹೊರಗಿನ ಉದ್ಯೋಗದಿಂದ ಹೊರದಬ್ಬಲ್ಪಟ್ಟಾಗ ಅನಿವಾರ್ಯವಾಗಿ ಕುಟುಂಬ-ಸಂಬಂಧಿತ ಸಣ್ಣ ಪುಟ್ಟ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಕಟ್ಟಿಹಾಲ್ಪಡುವುದಕ್ಕೂ ನಡುವೆ ಇರುವ ವ್ಯತ್ಯಾಸವನ್ನು PLFS ಗುರುತಿಸುವುದಿಲ್ಲ.

ಸಿಎಂಐಇ ದತ್ತಾಂಶಗಳು ಈ ನ್ಯೂನತೆಯಿಂದ ಮುಕ್ತವಾಗಿವೆ. ತನ್ನ ಸರ್ವೆಯಲ್ಲಿ, ದೇಶದೊಳಗಿನ ಆರ್ಥಿಕ ಚಟುವಟಿಕೆಗಳಲ್ಲಿ ವೇತನರಹಿತ ಕೆಲಸಗಳನ್ನು ಸಿಎಂಐಇ ಹೊರಗಿಟ್ಟಿದೆ, ನಿಜ. ಆದರೆ, ಅರ್ಥವ್ಯವಸ್ಥೆಯಲ್ಲಿ ವೇತನದ ಉದ್ಯೋಗಾವಕಾಶಗಳಿಗೆ ನಿಖರವಾಗಿ ಏನಾಗುತ್ತಿದೆ ಎಂಬುದನ್ನು ಸುಸಂಗತವಾಗಿ ಹಿಡಿದಿಡುವ ಹೆಚ್ಚುಗಾರಿಕೆಯನ್ನು ಅದು ಹೊಂದಿದೆ. ಹೆಚ್ಚುತ್ತಿರುವ ನಿರುದ್ಯೋಗದ ಅವಧಿಯಲ್ಲಿ ಉದ್ಯೋಗಗಳು ಇಳಿಯುತ್ತಿವೆ. ಆದ್ದರಿಂದ, ಸಿಎಂಐಇ ಅನುಸರಿಸುವ ಕ್ರಮವು ಒಟ್ಟಾರೆ ನಿರುದ್ಯೋಗ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಒಂದು ಸಮಂಜಸ ಮತ್ತು ನಿಖರ ಬದಲಿ ವಿಧಾನವನ್ನು ಒದಗಿಸುತ್ತದೆ.

ಅಂತೆಯೇ, ಹೊಟ್ಟೆಪಾಡಿಗಾಗಿ ದೂರದ ನಗರಗಳಲ್ಲಿ ಕೂಲಿ ಮಾಡುತ್ತಿದ್ದ ಜನರು ಕೋವಿಡ್ ಸಂದರ್ಭದಲ್ಲಿ ಹೇರಿದ ವಿಚಾರ-ಹೀನ ಲಾಕ್‌ಡೌನ್‌ನಿಂದಾಗಿ ಅನ್ನ ಮತ್ತು ವಸತಿ ಎರಡನ್ನೂ ಕಳೆದುಕೊಂಡರು. ಆದ್ದರಿಂದ ಅವರು ತಮ್ಮ ತಮ್ಮ ಹಳ್ಳಿಗಳಿಗೆ ಮರಳಿದರು. ಅವರ ಪೈಕಿ ಕೆಲವರು ನಗರಗಳಿಗೆ ಮರಳಿದರು. ಹಾಗಾಗಿ, ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಬಿದ್ದ ಭಾರಿ ಹೊರೆ ಕಡಿಮೆಯಾಗಿದೆ. ಅದೇನೂ ಆಶ್ಚರ್ಯದ ಸಂಗತಿಯಲ್ಲ. ಲಾಕ್‌ಡೌನ್ ಅವಧಿಗೆ ಹೋಲಿಸಿದರೆ ನಿರುದ್ಯೋಗ ದರ ಸ್ವಲ್ಪ ಇಳಿದಿದೆ ಎಂಬುದನ್ನು ಇದು ಸೂಚಿಸುತ್ತದೆಯಾದರೂ, ಸಾಂಕ್ರಾಮಿಕ ಪೂರ್ವದ ಮಟ್ಟಗಳಿಗೆ ಹೋಲಿಸಿದರೆ ನಿರುದ್ಯೋಗ ದರ ಏರುತ್ತಿರುವುದನ್ನಾಗಲಿ ಅಥವಾ ಲಾಕ್‌ಡೌನ್ ನಂತರ ನಿರುದ್ಯೋಗ ಕುಸಿದ ದರ ಕ್ಷುಲ್ಲಕವಾಗಿತ್ತು ಎಂಬ ಅಂಶವನ್ನಾಗಲಿ ಇದು ಅಲ್ಲಗಳೆಯುವುದಿಲ್ಲ.

ಅದಲ್ಲದೆ, ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆಯೇ ಕೇಂದ್ರ ಸರ್ಕಾರವು ಸ್ನೇಹ ಭಾವ ಹೊಂದಿಲ್ಲ. ಹಾಗಾಗಿ ಅದು ಈ ಯೋಜನೆಯಡಿಯಲ್ಲಿ ರಾಜ್ಯಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ವರ್ಷಗಟ್ಟಲೆ ತಡ ಮಾಡುತ್ತದೆ. ಆದ್ದರಿಂದ ರಾಜ್ಯ ಸರ್ಕಾರಗಳು ಈ ಯೋಜನೆಯಡಿಯಲ್ಲಿ ಕೆಲಸ ಮಾಡಿದವರಿಗೆ ಕೂಲಿಯನ್ನು ಸಮಯಕ್ಕೆ ಸರಿಯಾಗಿ ವಿತರಿಸಲಾಗುತ್ತಿಲ್ಲ. ಕೂಲಿಯ ಬಾಕಿಯನ್ನು ತಿಂಗಳುಗಟ್ಟಲೆ ಉಳಿಸಿಕೊಳ್ಳಲಾಗಿದೆ. ಹಾಗಾಗಿ, ನಿರುದ್ಯೋಗಿಗಳಿಗೆ ಈ ಯೋಜನೆಯಡಿ ಕೆಲಸ ಕೇಳುವ ಉತ್ಸಾಹವೇ ಕುಗ್ಗುತ್ತದೆ. ಆದ್ದರಿಂದ, ನಿರುದ್ಯೋಗದ ಅಗಾಧತೆಯನ್ನು ಅಳೆಯುವ ಉದ್ದೇಶಕ್ಕಾಗಿ ಈ ಯೋಜನೆಯಡಿಯಲ್ಲಿ ಉದ್ಯೋಗದ ಮೇಲಿನ ಬೇಡಿಕೆಯ ಅಂಶವು ಒಂದು ಕಳಪೆ ಸೂಚಕವಾಗುತ್ತದೆ. ವಾಸ್ತವವಾಗಿ ಯೋಜನೆಯಡಿಯಲ್ಲಿ ಕೆಲಸ ಮಾಡಿದವರಿಗೆ ಕೊಡಬೇಕಾದ ಕೂಲಿ ಕೊಡುವಲ್ಲಿ ಕೇಂದ್ರ ಸರ್ಕಾರವು ತಡ ಮಾಡುತ್ತಿರುವುದರಿಂದಾಗಿ ಉದ್ಯೋಗ ಕೇಳಲು ಜನರು ಮುಂದೆ ಬರುತ್ತಿಲ್ಲ. ಆದರೆ, ಅದೇ ಸರ್ಕಾರವು ನಿರುದ್ಯೋಗ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿಕೊಳ್ಳಲು ಅವರು ಕೆಲಸ ಕೇಳಲು ಮುಂದೆ ಬಾರದ ಅಂಶವನ್ನೇ ಬಳಸುತ್ತದೆ!

ನಿರುದ್ಯೋಗದ ಅಂಕಿಅಂಶಗಳು ಒಟ್ಟಾರೆಯಾಗಿ ದುಡಿಯುವ ಜನರ ಸರಾಸರಿ ನಿಜ ವರಮಾನದ ಅಂಕಿ-ಅಂಶಗಳೊಂದಿಗೆ ಮತ್ತು ಸ್ವಯಂ ಉದ್ಯೋಗಿಗಳ ಸರಾಸರಿ ನಿಜ ವರಮಾನದೊಂದಿಗೆ ಸಂಬಂಧ ಹೊಂದಿವೆ ಎಂದು ಭಾವಿಸಲಾಗಿದೆ. ಏಕೆಂದರೆ ಸ್ವಯಂ-ಉದ್ಯೋಗಿಗಳ ಗುಂಪು ಸಾಮಾನ್ಯವಾಗಿ ಕಾರ್ಮಿಕರ ಮೀಸಲು ಪಡೆ ಇರುವಲ್ಲೇ ಒಟ್ಟಿಗೆ ಒಂದೇ ಕಡೆ ನೆಲೆಸಿರುತ್ತದೆ. ಉದ್ಯೋಗಗಳ ಕುಸಿತವು ಮೀಸಲು ಪಡೆಯ ಅನುಪಾತವನ್ನು ಹೆಚ್ಚಿಸುತ್ತದೆ. ಇದು ಸ್ವಯಂ-ಉದ್ಯೋಗಿಗಳ ವಲಯದಲ್ಲಿ ಅವರ ಸರಾಸರಿ ನಿಜ ಆದಾಯವನ್ನು ಇಳಿಕೆ ಮಾಡುತ್ತದೆ. 2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಗ್ರಾಮೀಣ ಮತ್ತು ನಗರ ಭಾರತದ ಸ್ವಯಂ-ಉದ್ಯೋಗಿಗಳ ಸರಾಸರಿ ನಿಜ ಆದಾಯವು ಲಾಕ್‌ಡೌನ್ ಸಮಯದಲ್ಲಿ ತಲುಪಿದ ಕೆಳ ಮಟ್ಟಕ್ಕಿಂತ ತುಸು ಉನ್ನತವಾಗಿಯೂ ಮತ್ತು 2019ರ ಏಪ್ರಿಲ್-ಜೂನ್ ಅವಧಿಯಲ್ಲಿ ಇದ್ದುದಕ್ಕಿಂತ ತುಸು ಕೆಳಗೂ ಇತ್ತು ಎಂಬುದನ್ನು ಸರ್ಕಾರದ್ದೇ PLFS ದತ್ತಾಂಶವು ತೋರಿಸುತ್ತದೆ (ಚಂದ್ರಶೇಖರ್ ಮತ್ತು ಘೋಷ್, ಮ್ಯಾಕ್ರೊಸ್ಕಾನ್). ಇದು ನಿರುದ್ಯೋಗದ ಬಗ್ಗೆ ಸಿಎಂಐಇ ಶೋಧನೆಯನ್ನು ದೃಢಪಡಿಸುತ್ತದೆ.

ಉದಾರೀಕರಣದ ಗೊಂಬೆ

ಭಾರತದ ನಿರುದ್ಯೋಗದ ಅಂಕಿ-ಅಂಶಗಳು ಒಂದು ಮೂಲಭೂತ ಅಂಶವನ್ನು ಸೂಚಿಸುತ್ತವೆ. ಅದೇನೆಂದರೆ, ನವ ಉದಾರವಾದಿ ಬಂಡವಾಳಶಾಹಿಯು ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವ ಸಾಮಾಜಿಕ ವ್ಯವಸ್ಥೆಯಾಗುವುದು ಸಾಧ್ಯವಿಲ್ಲ. “ಆರ್ಥಿಕ ಉದಾರೀಕರಣ”ದ ಪ್ರತಿಪಾದಕರು ಒಂದು ಅಲಂಕಾರದ ಗೊಂಬೆ(ಡಮ್ಮಿ)ಯನ್ನು ಭಾರತದ ಜನರಿಗೆ ಮಾರಾಟ ಮಾಡಿದ್ದರು: ಮೆಟ್ರೋಪಾಲಿಟನ್ ಬಂಡವಾಳಶಾಹಿ ದೇಶಗಳಿಂದ ಪೂರ್ವ ಮತ್ತು ಆಗ್ನೇಯ ಏಷ್ಯಾದ ಕೆಲವು ಸಣ್ಣ ಸಣ್ಣ ದೇಶಗಳಿಗೆ ಒಂದು ನಿರ್ದಿಷ್ಟ ಪ್ರಮಾಣದ ಆರ್ಥಿಕ ಚಟುವಟಿಕೆಗಳು ಹರಿದ ಪರಿಣಾಮವಾಗಿ ಸಾಕಷ್ಟು ಉದ್ಯೋಗಗಳು ಅಲ್ಲಿ ಸೃಷ್ಟಿಯಾದವು. ಆದ್ದರಿಂದ ಈ ಕಾರ್ಯತಂತ್ರವನ್ನು ಎಲ್ಲ ದೇಶಗಳಲ್ಲೂ ಯಶಸ್ವಿಯಾಗಿ ನಕಲು ಮಾಡಬಹುದು ಎಂದು ಅವರು ವಾದಿಸಿದರು. ಅಂದರೆ, ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳ ವಿವೇಚನೆಯನ್ನು “ಮಾರುಕಟ್ಟೆ”ಗೆ ಒಪ್ಪಿಸಿದರೆ, ಮತ್ತು, ದೊಡ್ಡ ಬಂಡವಾಳಗಾರರನ್ನು ಸರ್ಕಾರ ಬೆಂಬಲಿಸುವ ಅಂಶವೊಂದನ್ನು ಬಿಟ್ಟು, ಸರ್ಕಾರವು ಆರ್ಥಿಕ ಚಟುವಟಿಕೆಗಳ ವಿಷಯದಲ್ಲಿ ವಹಿಸುವ ಇತರ ಮಧ್ಯಪ್ರವೇಶ ಪಾತ್ರದಿಂದ ಹಿಂದೆ ಸರಿದರೆ, ಭಾರತವೂ “ಸಂಪೂರ್ಣ ಉದ್ಯೋಗ”ದ ಪರಿಸ್ಥಿತಿಯನ್ನು ಸಾಧಿಸುತ್ತದೆ ಮತ್ತು ಸುಖ ಸಮೃದ್ಧಿಯ ಹಾದಿಯಲ್ಲಿರುತ್ತದೆ ಎಂಬುದಾಗಿ ಹಾಡಿ ಹೊಗಳಿದರು.

ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯು ಎಂದಿಗೂ “ಪೂರ್ಣ ಉದ್ಯೋಗ”ದ ಪರಿಸ್ಥಿತಿಯನ್ನು ಸಾಧಿಸಲಾಗದು. ಏಕೆಂದರೆ, ಅದು ಕಾರ್ಮಿಕರ ಒಂದು ಮೀಸಲು ಪಡೆಯ ಅಸ್ತಿತ್ವವಿಲ್ಲದೇ ಕಾರ್ಯನಿರ್ವಹಿಸುವುದು ಎಂದಿಗೂ ಸಾಧ್ಯವಿಲ್ಲ. ಆದರೆ, ನವ ಉದಾರವಾದದ ಅಡಿಯಲ್ಲಿ ಕಾರ್ಮಿಕ ಮೀಸಲುಗಳನ್ನು (ನಿರುದ್ಯೋಗಿಗಳನ್ನು) ಗಣನೀಯ ಪ್ರಮಾಣದಲ್ಲಿ ಬಳಸಿಕೊಳ್ಳುವ ಭರವಸೆಯನ್ನು ನೀಡಲಾಗಿತ್ತು. ಪ್ರಗತಿಪರರೂ ಸೇರಿದಂತೆ ಅನೇಕ ಮಂದಿ ಈ ಭರವಸೆಯನ್ನು ನಂಬಿ ಮೋಸಹೋದರು. ಮತ್ತು, ವಸಾಹತುಶಾಹಿಯಿಂದ ವಿಮೋಚನೆಗೊಂಡ ನಂತರ ಮೂರನೆಯ ಜಗತ್ತಿನ ದೇಶಗಳಲ್ಲಿ ಅಸ್ತಿತ್ವಕ್ಕೆ ಬಂದ ಪ್ರಭುತ್ವವು ಮೆಟ್ರೋಪಾಲಿಟನ್ ಬಂಡವಾಳ ಮತ್ತು ಸಾಮ್ರಾಜ್ಯಶಾಹಿಗೆ ಎದುರಾಗಿ ಅಳವಡಿಸಿಕೊಂಡಿದ್ದ ತುಲನಾತ್ಮಕ ಸ್ವಾಯತ್ತ ನಿಲುವನ್ನು “ಹಿಮ್ಮೆಟ್ಟಿಸುವಲ್ಲಿ” ಈ ವಾದವು ಯಶಸ್ವಿಯಾಯಿತು.

ಈ ವಾದದಲ್ಲಿ ಎರಡು ತಪ್ಪು ತಿಳುವಳಿಕೆಗಳಿವೆ: ಮೊದಲನೆಯದು, ನವ ಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡ ನಂತರ ಮೂರನೇ ಜಗತ್ತಿನಲ್ಲಿ ಸಂಭವಿಸಿದ ವಿದ್ಯಮಾನಗಳನ್ನು ಒಟ್ಟಾರೆಯಾಗಿ ಗಮನಿಸಿದಾಗ, ಮೆಟ್ರೋಪಾಲಿಟನ್ ಬಂಡವಾಳಶಾಹಿ ದೇಶಗಳಿಂದ ಹರಿದು ಬಂದ ಕೆಲವು ಚಟುವಟಿಕೆಗಳು ಅಲ್ಲಿನ ಅಗಾಧ ಕಾರ್ಮಿಕ ಮೀಸಲುಗಳನ್ನು ಬಳಸಿಕೊಳ್ಳುವುದು ಸಾಧ್ಯವಾಗಲಿಲ್ಲ. ತುಲನಾತ್ಮಕವಾಗಿ, ಅಲ್ಪ ಪ್ರಮಾಣದ ಕಾರ್ಮಿಕ ಮೀಸಲುಗಳನ್ನು ಹೊಂದಿದ್ದ ಕೆಲವು ಸಣ್ಣ ದೇಶಗಳಲ್ಲಿ ಅದು ಸಾಧ್ಯವಾಗಿರಬಹುದು. ಆದರೆ, ಅಗಾಧ ಪ್ರಮಾಣದ ಕಾರ್ಮಿಕ ಮೀಸಲುಗಳನ್ನು ಹೊಂದಿದ ಭಾರತದಂತಹ ದೇಶಗಳಲ್ಲಂತೂ ಸಾಧ್ಯವಾಗಲಿಲ್ಲ. ಎರಡನೆಯದು, ನವ ಉದಾರವಾದಿ ಬಂಡವಾಳಶಾಹಿಯು ಬಿಕ್ಕಟ್ಟಿಗೆ ಸಿಲುಕಿದಾಗ, ಬಂಡವಾಳಶಾಹಿಗೆ ಬಿಕ್ಕಟ್ಟು ಅನಿವಾರ್ಯವೂ ಹೌದು, ಆ ಬಿಕ್ಕಟ್ಟನ್ನು ಕೊನೆಗೊಳಿಸುವ ಯಾವುದೇ ಕಾರ್ಯವಿಧಾನವನ್ನೂ ಅದು ಹೊಂದಿಲ್ಲ, ಆದ್ದರಿಂದ, ನವ ಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡ ಭಾರತದಂತಹ ದೇಶಗಳಲ್ಲಿ ದುಡಿಯುವ ಜನರು ಕೊನೆ ಇಲ್ಲದ ಯಾತನೆಗೆ ಗುರಿಯಾಗುತ್ತಾರೆ. ಈ ಪ್ರತಿಪಾದನೆಯ ಸತ್ಯವನ್ನು ಭಾರತದಲ್ಲಿ ಇಂದು ಕಾಣಬಹುದು.

ನಿರುದ್ಯೋಗ ನಿವಾರಣೆ ಎಂದರೆ ಅದು ನವ ಉದಾರವಾದಿ ಬಂಡವಾಳಶಾಹಿ ಆಳ್ವಿಕೆಯಲ್ಲಿ ಕೆಲವು “ಬದಲಾವಣೆ”ಗಳನ್ನು ಮಾಡುವ ಮೂಲಕ ಸಂಭವಿಸಬಹುದಾದ ವಿಷಯವಲ್ಲ. ನಿರುದ್ಯೋಗ ನಿವಾರಣೆ ಎಂದರೆ ಅದು ನವ ಉದಾರವಾದಿ ಬಂಡವಾಳಶಾಹಿಯಿಂದ ಸಂಪೂರ್ಣವಾಗಿ ವಿಭಿನ್ನವಾದ ಒಂದು ಸಾಮಾಜಿಕ-ಆರ್ಥಿಕ ವ್ಯವಸ್ಥೆಗೆ ಸಾಗುವ ವಿಷಯವಾಗಿದೆ. ಈ ಹೊಸ ವ್ಯವಸ್ಥೆಯು ಕಾರ್ಮಿಕರ ಮೀಸಲು ಪಡೆಯ ಅಸ್ತಿತ್ವಕ್ಕೆ ಅವಕಾಶವಿಲ್ಲದೆ ಕಾರ್ಯನಿರ್ವಹಿಸುವುದು ಮಾತ್ರವಲ್ಲದೆ, ಪ್ರಭುತ್ವವು ದುಡಿಯುವ ಜನರ ಪರವಾಗಿ ಅರ್ಥವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವ ಅವಕಾಶವನ್ನು ಪ್ರಜ್ಞಾಪೂರ್ವಕವಾಗಿ ನೀಡುತ್ತದೆ.

Donate Janashakthi Media

Leave a Reply

Your email address will not be published. Required fields are marked *