ಬೆಂಗಳೂರು : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಆದ್ರೆ, ಇದಕ್ಕೆ ಉದ್ಯಮದಾರರಿಂದ ವ್ಯಾಪಕ ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿದೆ.
ಖಾಸಗಿ ರಂಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಸರ್ಕಾರದ ನಡೆಗೆ ಉದ್ಯಮಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ, ಮಸೂದೆ ಮಂಡನೆ ನಿರ್ಧಾರದಿಂದ ಹಿಂದೆ ಸರಿದಿದೆ.
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧರಿಸಲಾಗುವುದು ಎಂದು ರಾಜ್ಯ ಸಚಿವಾಲಯ ತಿಳಿಸಿದೆ.
ಇನ್ನು ಈ ಬಗ್ಗೆ ಇದೀಗ ಅಧಿಕೃತವಾಗಿ ಸಿಎಂ ಕಚೇರಿ ಮಾಧ್ಯಮಗ ಪ್ರಕಟಣೆ ಹೊರಡಿಸಿದೆ. ಕನ್ನಡಿಗರ ಮೀಸಲಾತಿ ವಿಧೇಯಕವನ್ನು ಪುನರ್ ಪರಿಶೀಲಿಸುತ್ತೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಸಂತೋಷ್ ಲಾಡ್ ಹಾಗೂ ನಾಲ್ಕೂ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗುತ್ತೆ. ಕ್ಯಾಬಿನೆಟ್‌ನಲ್ಲಿ ಸೂಕ್ತವಾಗಿ ಮಾಹಿತಿ ಹಂಚಿಕೆಯಾಗದೆ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಈ ಅಧಿವೇಶನದಲ್ಲಿ ವಿಧೇಯಕ ಮಂಡಿಸದಿರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು. ಇದರ ಬೆನ್ನಲ್ಲೇ ಈ ಮಸೂದೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಂಪನಿಯವರು ವಿರೋಧ ವ್ಯಕ್ತಪಡಿಸಿದ್ದರು. ಕಿರಣ್ ಮಜುಂದಾರ್, ಮೋಹನ್ ದಾಸ್ ಪೈ ಸೇರಿದಂತೆ ಹಲವು ಉದ್ಯಮಿಗಳು ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ಹೊರಹಾಕಿದ್ದರು.
ಸರ್ಕಾರದ ಮೀಸಲಾತಿ ನೀತಿಗೆ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಪರ ಹಾಗೂ ವಿರೋಧದ ಚರ್ಚೆ ಜೋರಾಗಿಯೇ ನಡೆದಿದ್ದವು. ಸಚಿವ ಸಂಪುಟದ ತೀರ್ಮಾನ ಎಂದು ಸಿಎಂ ಟ್ವೀಟ್ ಮಾಡಿ ನಂತರ ಪೋಸ್ಟ್ ಡಿಲಿಟ್ ಮಾಡಿದ್ದರು. ಈಗ ವಿಧೇಯಕ ಮಂಡನೆ ಮುಂದೂಡಿರುವುದನ್ನು ನೋಡಿದರೆ ಖಾಸಗಿ ಉದ್ಯಮಿಗಳಿಗೆ ಸರ್ಕಾರ ಹೆದರಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.