ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ಉಪ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆಯು 34 ರಿಂದ 199 ಕ್ಕೆ ಏರಿಕೆಯಾಗಿದೆ. ರೂಪಾಂತರಿ ವೈರಸ್‌ನಿಂದಾಗಿ ರಾಜ್ಯದಲ್ಲಿ ಇದುವರೆಗೆ ಮೂರು ದೃಢೀಕೃತ ಸಾವುಗಳು ವರದಿಯಾಗಿದೆ. ಅದಾಗ್ಯೂ ಮೃತಪಟ್ಟವರಿಗೆ ಇತರ ಖಾಯಿಲೆಯೊಂದಿಗೆ ಉಸಿರಾಟದ ಸೋಂಕಿನ ಸಮಸ್ಯೆಗಳು ಕೂಡಾ ಇದ್ದವು ಎಂಬ ಬಗ್ಗೆ ಕೂಡ ವರದಿಗಳು ಉಲ್ಲೇಖಿಸಿವೆ. ಅದಾಗ್ಯೂ, ಉಪ ರೂಪಾಂತರಿ JN.1 ಅಲೆಯು ಮುಗಿಯುತ್ತಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಹಿಮಾಂಶು ಹೇಳಿದ್ದಾರೆ.
2023 ಡಿಸೆಂಬರ್ 30 ರವರೆಗೆ ರಾಜ್ಯ ಆರೋಗ್ಯ ಇಲಾಖೆಯು ಸಂಪೂರ್ಣ ಜೀನೋಮಿಕ್ ಸೀಕ್ವೆನ್ಸಿಂಗ್ (WGS) ಗಾಗಿ 601 ಮಾದರಿಗಳನ್ನು ಕಳುಹಿಸಿದೆ. ಇದರಲ್ಲಿ 262 ಮಾದರಿಗಳನ್ನು ಬಿಡುಗಡೆ ಮಾಡಲಾಗಿದ್ದು, 199 ಮಾದರಿಗಳು JN.1 ಹೊಸ ರೂಪಾಂತರವನ್ನು ಹೊಂದಿವೆ ಎಂದು ಅದು ಹೇಳಿದೆ. ಸೋಮವಾರದಂದು ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ 296 ಪ್ರಕರಣಗಳು ವರದಿಯಾಗಿದ್ದು, ಒಂದು ಸಾವು ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಬುಲೆಟಿನ್ ತಿಳಿಸಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,245 ಕ್ಕೆ ಏರಿದ್ದು, ಅದರಲ್ಲಿ 1,179 ಮನೆ ಕ್ವಾರಂಟೈನ್ ಆಗಿದ್ದು, 46 ಸಾಮಾನ್ಯ ಹಾಸಿಗೆಯಲ್ಲಿ ಮತ್ತು 20 ಜನರು ಐಸಿಯುನಲ್ಲಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನಿನ ಮೇಲೆ ಸರಕಾರದ ಅಕ್ರಮ ದಾಳಿ
ಕೊರೊನಾದ ಉಪ ರೂಪಾಂತರಿ JN.1 ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಹಿಮಾಂಶು ಅವರು, ಉಪ ರೂಪಾಂತರಿಯ ಅಲೆ ಬಾಗಶಃ ಮುಗಿದೆ ಎಂದೆನಿಸುತ್ತಿದೆ, ಇದು ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. “ಇತ್ತೀಚೆಗೆ ಬಂದಿರುವ ಬೇರೆ ಉಪ ರೂಪಾಂತರಕ್ಕೆ ಹೋಲಿಸಿದರೆ ಇದು ಸ್ವಲ್ಪ ಗಂಭೀರವಾಗಿರುವ ವೈರಸ್. ಇದು ವಯಸ್ಸಾದವರಿಗೆ ಸೋಂಕಿದರೆ ಸಾವಿನ ಪ್ರಮಾಣ ಹೆಚ್ಚಿತ್ತು” ಎಂದು ಅವರು ತಿಳಿಸಿದರು.
ಅದಾಗ್ಯೂ, ಕೊರೊನಾ ಡೆಲ್ಟಾ ರೂಪಾಂತರದಷ್ಟು ಅಪಾಯಕಾರಿ ಏನಲ್ಲ. ಡೆಲ್ಟಾ ರೂಪಾಂತರಕ್ಕೂ ಇದಕ್ಕೂ ಹೋಲಿಕೆ ಮಾಡಲೂ ಸಾಧ್ಯವಿಲ್ಲ. ಆದರೆ ಈ ಉಪ ರೂಪಾಂತರದ ಅಲೆ ಮುಗಿಯುತು ಎಂದೆನಿಸುತ್ತದೆ ಎಂದು ಹಿಮಾಂಶು ಅವರು ತಿಳಿಸಿದರು. “ಈ ವೈರಸ್ ಬಗ್ಗೆ ಈಗಷ್ಟೆ ಪರೀಕ್ಷೆ ನಡೆಸುತ್ತಾ ಇರುವುದರಿಂದ ಕೆಲವೊಂದಿಷ್ಟು ಪ್ರಕರಣಗಳು ವರದಿಯಾಗಿವೆ. ಆದರೆ ಅದರ ಪ್ರಕರಣ ಇಷ್ಟೆ ಎಂದು ಹೇಳಲು ಸಾಧ್ಯವಿಲ್ಲ. ಈಗಾಗಲೆ ಲಕ್ಷಾಂತರ ಮಂದಿಗೆ ಅದು ಬಂದು ಹೋಗಿದೆ. ಈ ವೈರಸ್ ಹೆಚ್ಚಾಗಿ ಇಮ್ಯುನಿಟಿ ಇಲ್ಲದವರು ಮತ್ತು ವಯಸ್ಸಾದವರು ತೊಂದರೆಗೆ ಒಳಗಾಗುತ್ತಾರೆ. ಅದಾಗ್ಯೂ ಈ ವೈರಸ್‌ನ ಅಲೆ ಮುಗಿದಿದೆ ಎಂದೇ ಹೇಳಬಹುದು” ಎಂದು ಡಾ. ಹಿಮಾಂಶು ತಿಳಿಸಿದರು.
“ಕೊರೊನಾದ ಹೊಸ ಹೊಸ ರೂಪಾಂತರಿ ವೈರಸ್‌ಗಳು ಮುಂದೆ ಕೂಡಾ 100% ಬರುತ್ತಲೆ ಇರುತ್ತದೆ. ಆದರೆ ಹೀಗೆ ರೂಪಾಂತರಗೊಳ್ಳುವ ವೈರಸ್‌ಗಳು ಸೌಮ್ಯವಾಗುತ್ತಲೆ ಹೋಗುತ್ತದೆ ಎಂಬುವುದು ನಮ್ಮ ನಿರೀಕ್ಷೆ. ಆದರೆ JN.1 ಈ ಹಿಂದಿನ ರೂಪಾಂತರಕ್ಕಿಂತ ಸ್ವಲ್ಪ ತೀವ್ರವಾಗಿತ್ತು. ಇದು ಮತ್ತೆ ತೀವ್ರಗೊಂಡರೆ ಕಷ್ಟಕರವಾಗುತ್ತದೆಯಾದರೂ, ಅದು ಹೀಗೆಯೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮತ್ತೆ ಹೊಸ ರೂಪಾಂತರ ಬರಬಹುದು, ಸೌಮ್ಯವಾಗಿದ್ದು ಹೊರಟು ಹೋಗಬಹುದು” ಎಂದು ಡಾ. ಹಿಮಾಂಶು ಹೇಳಿದರು.
ವಿಡಿಯೊ ನೋಡಿ: ವೈದ್ಯನನ್ನು ನಂಬಿ, ಗೂಗಲ್ ಡಾಕ್ಟರನ್ನಲ್ಲ! Janashakthi Media