ಹಕ್ಕುಗಳಿಗಾಗಿ ಮಹಿಳೆಯರು ಸಂಘಟಿತ ಹೋರಾಟ ಮಾಡಬೇಕು -ದೇವಿ

ಹಾಸನ:ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ (AIDWA) ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಹಾಸನದ ‘ಶ್ರಮ’ದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಶೋಷಣೆಯ ವಿರುದ್ಧ ಹೋರಾಡಲು ಸಂಘಟಿತರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ಮೊದಲು ಮಹಿಳೆಯರು ಹೋರಾಟದ ಮೂಲಕ ಮತದಾನ ಮತ್ತು ಶಿಕ್ಷಣದ ಹಕ್ಕುಗಳನ್ನು ಪಡೆದಿದ್ದಾರೆ. ಸಂಘಟನೆಯಿಲ್ಲದೆ ಯಾವುದೇ ಹಕ್ಕುಗಳೂ ಸಿಗುವುದಿಲ್ಲ ಎಂದರು.

ಮಹಿಳೆಯರ ಆರ್ಥಿಕ ಸಬಲೀಕರಣದ ಹೆಸರಿನಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಹಿಳೆಯರನ್ನು ಸಾಲದ ಬಾಧೆಯಲ್ಲಿ ಮುಳುಗಿಸುತ್ತಿವೆ ಎಂದು ದೇವಿ ಕಿಡಿಕಾರಿದರು. “ಸಾಲದ ಹೊಣೆ ತಾಳಲಾರದೆ ಅನೇಕ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ” ಎಂದು ಅವರು ಹೇಳಿದರು.

ಶಾಸಕರು, ಸಂಸದರ ವೇತನವನ್ನು ಕನಿಷ್ಟ ಸಮಯದಲ್ಲಿ ಲಕ್ಷಾಂತರ ರೂಪಾಯಿಗೆ ಹೆಚ್ಚಿಸುತ್ತಾರೆ. ಆದರೆ ಅಂಗನವಾಡಿ, ಆಶಾ, ಬಿಸಿಯೂಟ ನೌಕರರ ವೇತನ ಹೆಚ್ಚಿಸಲು ಹೋರಾಟ ಮಾಡಿದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳ ವಿಚಾರಕ್ಕೆ ಉಲ್ಲೇಖಿಸಿ, ದೇವಿ ಹೇಳಿದರು, “ಮಹಿಳೆಯರು ಕೇವಲ ಟಿವಿ ಕಾರ್ಯಕ್ರಮಗಳನ್ನು ನೋಡಿ ಕಾಲಹರಣ ಮಾಡಬಾರದು. ದೇವಾಲಯಗಳಿಗೆ ಹೋಗಿ ಪ್ರಾರ್ಥಿಸುವುದರಿಂದ ಜೀವನ ಬದಲಾಗುವುದಿಲ್ಲ. ಹಕ್ಕುಗಳಿಗಾಗಿ ಬೀದಿಗೆ ಹೊರಬಂದು ದನಿ ಎತ್ತಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿ ಮಮತಾ ಶಿವು ಮಾತನಾಡಿ ಮಹಿಳೆಯರು ಜೀವನವನ್ನು ಸಮರ್ಥವಾಗಿ ನಡೆಸಲು ಶಿಕ್ಷಣ ಮುಖ್ಯ. ದೌರ್ಜನ್ಯ ವಿರುದ್ಧ ಜಾಗೃತಿ ಮೂಡಿಸಿ ಸಂಘಟಿತ ಹೋರಾಟ ನಡೆಸಬೇಕು ಎಂದರು.

ಹೊಸ ಜಿಲ್ಲಾ ಸಂಚಾಲನಾ ಸಮಿತಿ

ಸಂಚಾಲಕರಾಗಿ ಮಮತಾ ಶಿವು ಆಯ್ಕೆಯಾಗಿದ್ದಾರೆ.
ಸಹ ಸಂಚಾಲಕರಾಗಿ ಪುಷ್ಪ ಹಾಸನ, ಶೈಲಜಾ ಹೊಳೆನರಸೀಪುರ, ಅರ್ಚನಾ ಸಕಲೇಶಪುರ, ಜ್ಯೋತಿ ಹಾಸನ, ನಂದಿನಿ ಚನ್ನರಾಯಪಟ್ಟಣ, ಮಂಜುಳಾ ಬೇಲೂರು, ಜಯಲಕ್ಷ್ಮಿ ಹಾಸನ, ಸೌಮ್ಯ ಸಕಲೇಶಪುರ ಆಯ್ಕೆಯಾಗಿದ್ದಾರೆ.

ಸಮಾವೇಶದ ನಿರ್ಣಯಗಳು

* ಗ್ರಾಮ ಪಂಚಾಯಿತಿ ಮಟ್ಟದ ಪ್ರತಿಯೊಂದು ಮಹಿಳಾ ಒಕ್ಕೂಟಕ್ಕೆ ಕನಿಷ್ಟ 1 ಕೋಟಿ ರೂ. ಅನುದಾನ.
* ಮಹಿಳೆಯರು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ, ತರಬೇತಿ ಮತ್ತು ಶೆಡ್ ಕಲ್ಪಿಸುವುದು.
* ಶೇ. 4 ಬಡ್ಡಿ ದರದಲ್ಲಿ ಕನಿಷ್ಟ 10 ಲಕ್ಷ ರೂ.ವರೆಗೆ ದೀರ್ಘಾವಧಿ ಸಾಲ.
* ವಿಧವೆಯರು, ಒಂಟಿ ಮಹಿಳೆಯರು, ವಿಕಲಚೇತನರಿಗೆ ನೀಡುವ ಮಾಸಾಶನ ಹೆಚ್ಚಿಸಲು.
* ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಕೆಲಸದ ದಿನಗಳ ವೃದ್ಧಿ ಮತ್ತು ಮಹಿಳೆಯರಿಗೆ ಸಮಾನ ಕೂಲಿ.

Donate Janashakthi Media

Leave a Reply

Your email address will not be published. Required fields are marked *