ಹಣ ಕೊಟ್ರು ಕೈಗೆ ಸಿಕ್ತಿಲ್ಲ ಅಂಕಪಟ್ಟಿ : ಇದೊಂದು ದೊಡ್ಡ ಗೋಲ್ಮಾಲ್‌!

ಗುರುರಾಜ ದೇಸಾಯಿ

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲಿಕರಣ  ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ.  ಕೊರೊನಾ ಹಾಗೂ ಲಾಕ್ಡೌನ್ ವೇಳೆ ಬಹುತೇಕ ಶಿಕ್ಷಣ ಸಂಸ್ಥೆಗಳು ಡಿಜಿಟಲ್ ವ್ಯವಸ್ಥೆಗೆ ಮೊರೆ ಹೋಗಿದ್ದವು,  ಆ ಸಾಲಿಗೆ ಅಂಕಪಟ್ಟಿ ಕೂಡ ಸೇರ್ಪಡೆಯಾಗಿತ್ತು. ಅಂಕಪಟ್ಟಿಯ ಡಿಜಿಟಲಿಕರಣ ಸಾಕಷ್ಟು ಗೊಂದಲಗಳನ್ನು ತಂದೊಡ್ಡಬಹುದು ಎಂಬ ಅನುಮಾನಗಳು ಆಗಲೇ ವ್ಯಕ್ತವಾಗಿದ್ದವು. ಈಗ ಆ ಅನುಮಾನ ನಿಜವಾಗಿದೆ. ಹಣ ಕೊಟ್ಟರು ವಿದ್ಯಾರ್ಥಿಗಳ ಕೈಗೆ ಅಂಕಪಟ್ಟಿ ಸಿಗುತ್ತಿಲ್ಲ.

ಹೌದು 200ರೂ, 300 ರೂ ಅಂಕಪಟ್ಟಿ ಶುಲ್ಕ ನೀಡಿದರೂ ಈಗ ವಿದ್ಯಾರ್ಥಿಗಳ ಕೈಗೆ ಮಾರ್ಕ್ಸ್‌ಕಾರ್ಡ್‌ ಸಿಗುತ್ತಿಲ್ಲ, ಕಂಪ್ಯೂಟರ್‌ನಲ್ಲಿ ಸಾಫ್ಟ್‌ ಕಾಪಿ ಡೌನ್‌ಲೋಡ್‌ ಮಾಡಿಕೊಳ್ಳಿ ಎಂದು ಶಿಕ್ಷಣ ಇಲಾಖೆ ಈಗ ಕೈ ತೊಳೆದುಕೊಂಡಿದೆ.  ರಾಜ್ಯದಲ್ಲಿ 15 ಲಕ್ಷ ವಿದ್ಯಾರ್ಥಿಗಳು ಪದವಿ ಅಧ್ಯಯನ ಮಾಡುತ್ತಿದ್ದಾರೆ. ಒಂದು ಸೆಮೆಸ್ಟರ್‌ಗೆ ಅಂದಾಜು 45 ಕೋಟಿ ರೂನಷ್ಟು ಹಣ ಸಂಗ್ರಹವಾಗುತ್ತಿದ್ದು. ಮೂರು ವರ್ಷದಲ್ಲಿ 300 ಕೋಟಿ ರೂ ನಷ್ಟ ಹಣ ವಿದ್ಯಾರ್ಥಿಗಳಿಂದ ಸಂಗ್ರಹವಾಗುತ್ತಿದೆ. ಆದರೂ ವಿದ್ಯಾರ್ಥಿಗಳ ಕೈಗೆ ಅಂಕಪಟ್ಟಿ ಸಿಗುತ್ತಿಲ್ಲ. ಸಾಫ್ಟ್‌ಕಾಪಿ ಪಡೆಯುವುದಕ್ಕಾಗಿ ನಾವು ಇಷ್ಟೊಂದು ಹಣ ಕಟ್ಟಬೇಕಾ? ಆ ಸಾಫ್ಟ್‌ಕಾಪಿಗೂ 20 ರೂ ಹಣ ನಾವೇ ಮತ್ತೆ ಕಟ್ಟಬೇಕು. ಹೀಗಿದ್ದಮೇಲೆ ನಮ್ಮಂದ ಅಂಕಪಟ್ಟಿಗಾಗಿ ಪಡೆದ ಹಣ ಎಲ್ಲಿ ಹೋಯಿತು? ಎಂಬುದು 15 ಲಕ್ಷಜನ ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.

ವಿದ್ಯಾರ್ಥಿಗಳಲ್ಲಿ ಈ ರೀತಿಯ ಪ್ರಶ್ನೆ ಮೂಡುವುದು ಸಹಜ. ಹಣ ಕೊಟ್ಟ ಮೇಲೆ ಅಂಕ ಪಟ್ಟಿ, ಕೈಗೆ ಬರಬೇಕು ಎಂಬ ವಿದ್ಯಾರ್ಥಿಗಳ ವಾದದಲ್ಲಿ ಅರ್ಥವಿದೆ. ಆದರೆ ವಿದ್ಯಾರ್ಥಿಗಳಿಗೆ ಇರುವ ಈ ಗೊಂದಲವನ್ನು, ಸಮಸ್ಯೆಯನ್ನು ಬಗೆ ಹರಿಸಲು ಯಾರೂ ಕೂಡಾ ಮುಂದಾಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕೆಲ ವಿಶ್ವವಿದ್ಯಾಲಯಗಳ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮುದ್ರಿತ ಪ್ರತಿಯನ್ನು ನೀಡಬೇಡಿ ಎಂಬ ಸೂಚನೆ ಬಂದಿದೆ ಹಾಗಾಗಿಯೇ ನಿಲ್ಲಿಸಿದ್ದೇವೆ ಎಂಬ ಸಬೂಬು ಹಾಗೂ ಡಿಜಿಟಲ್ ಪ್ರತಿಯನ್ನು ಮಾತ್ರ NAD-Digilocker ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ  ಹಾಗೂ ಇದು ಮಾನ್ಯವಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

 

ಏನಿದು ಡಿಜಿ ಲಾಕರ್‌ : ಅಂಕಪಟ್ಟಿ ಕಳ್ಳತನವನ್ನು ನಿಯಂತ್ರಿಸುವುದಕ್ಕಾಗಿ ಅಂಕಪಟ್ಟಿಯನ್ನು ಬಧ್ರವಾಗಿಸುವ ಕಾರಣದಿಂದ ಡಿಜಿ ಲಾಕರ್‌ ವ್ಯವಸ್ಥೆ ಜಾರಿಗೆ ಬಂದಿದೆ. ಮನೆಯಲ್ಲಿ ಸಾಕಷ್ಟು ಚಿನ್ನ, ವಜ್ರ ಅಥವಾ ಆಭರಣಗಳಿದ್ದರೆ, ಕಳ್ಳತನವಾಗಬಹುದೆಂಬ ಭಯದಲ್ಲಿ ಬ್ಯಾಂಕ್ ಲಾಕರ್ ಗಳ ಮೊರೆ ಹೋಗುವುದು ಸಾಮಾನ್ಯ. ಅನೇಕ ಬ್ಯಾಂಕುಗಳು ಗ್ರಾಹಕರಿಗೆ ವಾರ್ಷಿಕ ಇಂತಿಷ್ಟು ಶುಲ್ಕ ಪಡೆದು ಲಾಕರ್‌ ಸೌಲಭ್ಯ ಒದಗಿಸುತ್ತವೆ. ಗ್ರಾಹಕರು ತಮ್ಮ ಅಮೂಲ್ಯ ವಸ್ತುಗಳನ್ನು ಅಲ್ಲಿ ಇರಿಸಲು ಸುರಕ್ಷತೆಯ ಭರವಸೆ ನೀಡುತ್ತಾರೆ. ಡಿಜಿ ಲಾಕರ್ ಯೋಜನೆಗೆ ಬ್ಯಾಂಕ್‌ ಲಾಕರ್‌ ವ್ಯವಸ್ಥೆಯೇ ಮೂಲ ಪ್ರೇರಣೆ. ಬ್ಯಾಂಕ್‌ ಲಾಕರ್‌ನಲ್ಲಿ ಭೌತಿಕ ವಸ್ತುಗಳನ್ನು ಸರಕ್ಷಿತವಾಗಿ ಇಡಬಹುದು. ಡಿಜಿ ಲಾಕರ್‌ನಲ್ಲಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರಿಸಬಹುದು.

ನಾಗರಿಕರು ಕೇಂದ್ರ ಸರ್ಕಾರ ಒದಗಿಸಿದ ಸಾರ್ವಜನಿಕ ಕ್ಲೌಡ್‌ನಲ್ಲಿ ಲಭ್ಯವಿರುವ ಎಲ್ಲಾ ದಾಖಲೆಗಳು, ಪ್ರಮಾಣಪತ್ರಗಳನ್ನು ಇಟ್ಟುಕೊಳ್ಳಬಹುದು. ಡಿಜಿ ಲಾಕರ್ ಖಾತೆಗೆ ಸೈನ್ ಅಪ್ ಮಾಡುವ ಎಲ್ಲಾ ಭಾರತೀಯ ನಾಗರಿಕರು ಪ್ರತಿಯೊಬ್ಬರಿಗೆ ಮೀಸಲಾದ ಕ್ಲೌಡ್ ಸ್ಟೋರೇಜ್ ಜಾಗ ಪಡೆಯುತ್ತಾರೆ. ಅಲ್ಲಿಂದ ದಾಖಲೆಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಆದರೆ ಕರ್ನಾಟಕದಲ್ಲಿ ಡಿಜಿ ಲಾಕರ್‌ಗೆ ಒಳಪಟ್ಟ ಕಾಲೇಜುಗಳ ಸಂಖ್ಯೆ ಎಷ್ಟು? ಎಂಬ ಮಾಹಿತಿಯನ್ನು ಬೆನ್ನುಹತ್ತಿದಾಗ ಸಿಕ್ಕ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.  ಸೆಪ್ಟೆಂಬರ್ 23 ರ NAD-Digilocker ವರದಿಯ ಪ್ರಕಾರ NAD-Digilocker ಪೋರ್ಟಲ್‌ನಲ್ಲಿ ಕರ್ನಾಟಕದಲ್ಲಿ ಮಾತ್ರ ಪ್ರವೇಶಿಸಬಹುದಾದ ಒಟ್ಟು 904 ಕಾಲೇಜುಗಳಲ್ಲಿ 134 ಕಾಲೇಜುಗಳು ಮಾತ್ರ ತಮ್ಮನ್ನು ನೋಂದಾಯಿಸಿಕೊಂಡಿವೆ ಅದರಲ್ಲಿ 86 ಸಂಸ್ಥೆಗಳು ಮಾತ್ರ ಕೆಲವು ಅಥವಾ ಎಲ್ಲಾ ಡೇಟಾವನ್ನು ಅಪ್‌ಲೋಡ್ ಮಾಡಿವೆ ಮತ್ತು 770 ಸಂಸ್ಥೆಗಳು NAD-ಡಿಜಿಲಾಕರ್ ಪೋರ್ಟಲ್‌ನಲ್ಲಿ ನೋಂದಾಯಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕರ್ನಾಟಕದಲ್ಲಿಯೇ  770 ಸಂಸ್ಥೆಗಳು NAD-Digilocker ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿಲ್ಲ ಎಂಬುದು ಯೋಜನೆಗಳ ಜಾರಿಗೆ ಸರಕಾರ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂಬುದನ್ನು ತೋರಿಸುತ್ತದೆ. ಮತ್ತು ಕರ್ನಾಟಕದಲ್ಲಿ ನೋಂದಾಯಿಸಲಾದ 86 ಸಂಸ್ಥೆಗಳಲ್ಲಿ ಸಿಬ್ಬಂದಿ ಹಾಗೂ ತರಬೇತಿ ಇತ್ಯಾದಿಗಳ ಕೊರತೆಯಿಂದ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

ಇಲ್ಲದರ ನಡುವೆ ಪರದಾಟ : ಇತ್ತ ಮುದ್ರಿತ ಅಂಕಪಟ್ಟಿಯೂ ಇಲ್ಲ, ಅತ್ತ ಸಾಫ್ಟ್‌ ಕಾಪಿಯ ಅಂಕಪಟ್ಟಿಯ ಲಭ್ಯತೆಯೂ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಉಚ್ಚ ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದ್ದರೂ ಸಹ, ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಪ್ರತಿಲೇಖನಗಳನ್ನು ಕೊಡಲು ಮತ್ತು NAD-ಡಿಜಿಲಾಕರ್‌ನಲ್ಲಿ ಅಪ್‌ಲೋಡ್ ಮಾಡಲು UGC ಅವಕಾಶವನ್ನು ನೀಡಿದೆ. ಈಗಾಗಲೇ ರಾಣಿ ಚೆನಮ್ಮ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ ಇತರ ವಿವಿಯ ಹಲವು ಉಪಕುಲಪತಿಗಳು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ನಕಲು ಪತ್ರ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಆದರೆ ಇಲಾಖೆ ಇದನ್ನು ಕೇಳಿಯೂ ಕೇಳಿಸಿಕೊಳ್ಳದಂತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಹೈಕೋರ್ಟ್ ಆದೇಶ, UCGಯ ಸೂಚನೆ ಪ್ರಕಾರ ನಿರ್ಧಾರ ತೆಗೆದುಕೊಳ್ಳುವ ಬದಲು ಮತ್ತೆ ಮತ್ತೆ ಸಾಫ್ಟ್‌ ಕಾಪಿ ನೀಡಲು ಮುಂದಾಗುತ್ತಿದೆ.  ಮುದ್ರಿತ ಪ್ರತಿಗಳನ್ನು ನೀಡಿದರೆ ಅವರ ಆದಾಯವು ಕುಸಿಯುತ್ತದೆ ಎಂಬ ಕಾರಣದಿಂದ ಪಾವತಿ ಗೇಟ್‌ವೇ ಪಾಲುದಾರ NSDL (ಖಾಸಗಿ ಪಾವತಿ ಗೇಟ್‌ವೇ ಪಾಲುದಾರ) ಲಾಭ ಪಡೆಯಲು ಡಿಜಿಟಲ್ ಮಾರ್ಕ್ಸ್ ಕಾರ್ಡ್/ಪ್ರಮಾಣಪತ್ರವನ್ನು ಮಾತ್ರ ಪ್ರಚಾರ ಮಾಡಲು ಉತ್ಸುಕತನ ತೋರುತ್ತಿರುವುದನ್ನು ನೋಡಿದರೆ ಹಗರಣದ ವಾಸನೆ ಖಂಡಿತಾ ಮೂಗಿಗೆ ಬಡಿಯುತ್ತಿದೆ.

ಮುದ್ರಿತ ಅಂಕಪಟ್ಟಿ ನೀಡಿ : ವಿದ್ಯಾರ್ಥಿಗಳು ಹಣ ನೀಡಿದ ಮೇಲೆ ಕೈಗೆ ಮುದ್ರಿತ ಅಂಕಪಟ್ಟಿಯನ್ನು ನೀಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ ಆಗ್ರಹಿಸಿದೆ. ಅಂಕಪಟ್ಟಿ ಪಡೆಯುವುದು ವಿದ್ಯಾರ್ಥಿಗಳ ಮೂಲಭೂತ ಹಕ್ಕಾಗಿದೆ. ಹಣಪಾವತಿ ಮಾಡಿಸಿಕೊಂಡ ಅಂಕಪಟ್ಟಿ ನೀಡದಿರುವುದು ವಿದ್ಯಾರ್ಥಿಗಳಿಗೆ ಮಾಡುತ್ತಿರುವ ವಂಚನೆಯಾಗಿದೆ. ಉದ್ಯೋಗ, ಉನ್ನತ ಶಿಕ್ಷಣ ಇತ್ಯಾದಿಗಾಗಿ ಮೊಬೈಲ್‌ ಹಿಡುದು ಇದು ನನ್ನ ದಾಖಲೆ ಇದು ನನ್ನ ದಾಖಲೆ ಎಂದು ಡಿಜಿ ಲಾಕರ್‌ ನಲ್ಲಿರುವ ಅಂಕಪಟ್ಟಿಯನ್ನು ತೋರಿಸುತ್ತಾ ಕೂಡುವುದು ಸಮಂಜಸವಲ್ಲ. ಹಾಗೂ ಅಂಕಪಟ್ಟಿ ಶುಲ್ಕದ ಹೆಸರಿನಲ್ಲಿ ದೊಡ್ಡಮಟ್ಟದ ಭ್ರಷ್ಟಚಾರ ನಡೆದಿದ್ದು ಇದರ ಸಮಗ್ರ ತನಿಖೆಯನ್ನು ನಡೆಸಬೇಕಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದು ಎಸ್‌ಎಫ್‌ಐ ರಾಜ್ಯಕಾರ್ಯದರ್ಶಿ ವಾಸುದೇವರೆಡ್ಡಿ ತಿಳಿಸಿದ್ದಾರೆ.

ಅಂಕಪಟ್ಟಿಗಾಗಿ ಹಣ ನೀಡಿಯೂ ವಿದ್ಯಾರ್ಥಿಗಳ ಕೈಗೆ ಅಂಕಪಟ್ಟಿ ಸಿಗದಿರುವುದು ಶಿಕ್ಷಣದ ಕ್ರೂರ ವ್ಯವಸ್ಥೆಯನ್ನು ತೆರೆದಿಡುತ್ತಿದೆ.  ಶಿಕ್ಷಣ ಮೂಲ ಆಶಯ, ವಿದ್ಯಾರ್ಥಿಗಳ ಮೂಲಭೂತಹಕ್ಕಿಗೆ ಕೊಡಲಿಪೆಟ್ಟನ್ನು ನೀಡುವ ಸರಕಾರ ತನ್ನ ನಡೆಯಿಂದ ಎಚ್ಚೆತ್ತುಕೊಂಡು ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಹಿತ ಕಾಪಡಬೇಕಿದೆ. ಅಂದ ಹಾಗೇ…?! ವಿದ್ಯಾರ್ಥಿಗಳಿಂದ ಸಂಗ್ರಹವಾದ ಹಣ ಎಲ್ಲಿ ಹೋಗುತ್ತಿದೆ? ಆಯುಕ್ತರ ಜೇಬು ಸೇರಿತಾ?! ಅಥವ ಉನ್ನತ ಶಿಕ್ಷಣ ಸಚಿವರ ಜೇಬು ಸೇರಿತಾ?!! ಉತ್ತರ ಅವರಿಬ್ಬರೇ ಕೊಡಬೇಕು?!!!

 

ಅಂಕಪಟ್ಟಿಗಾಗಿ ವಿದ್ಯಾರ್ಥಿಗಳು ನೀಡಿದ ಶುಲ್ಕದ ವಿವರ
Donate Janashakthi Media

Leave a Reply

Your email address will not be published. Required fields are marked *