ವಿ. ಶ್ರೀಧರ್
ಅನುವಾದ: ಶೃಂಶನಾ
ಭಾರೀ ವಿರೋಧದ ನಡುವೆಯೂ ಎಲ್‌ಐಸಿಯ ಶೇರು ಮಾರಾಟದ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕೆ ಭಾರೀ ಸ್ಪಂದನ ಸಿಕ್ಕಿದೆ, ಅತ್ಯಂತ ಯಶಸ್ವಿಯಾಗಿದೆ ಎಂದು ಸರಕಾರೀ ವಕ್ತಾರರು ಹೇಳುತ್ತಿದ್ದಾರೆ. ಇನ್ನೂ ಮುಂದೆ ಹೋಗಿ ಇದನ್ನು ‘ಆತ್ಮನಿರ್ಭರ ಭಾರತ’ದ ಒಂದು ಉದಾಹರಣೆಯಾಗಿ ಪರಿಗಣಿಸಬಹುದು ಎಂದೂ ಹೇಳಿದ್ದಾರೆ. ಆದರೆ ವಾಸ್ತವವಾಗಿ ಇದು ‘ಯಶಸ್ವಿ’ಯಾಗಿರುವುದು ಎಲ್‌ಐಸಿ ಶೇರುಗಳಿಗೆ ಅತೀ ಕಡಿಮೆ ಬೆಲೆ ನಿಗದಿ ಮಾಡಿದ್ದರಿಂದ. ಈ ನಿಗದಿ ಪ್ರಕ್ರಿಯೆಯೇ ಹೇಗೆ ಒಂದು ಬೃಹತ್ ಹಗರಣವಾಗಿ ಕಾಣುತ್ತದೆ ಎಂಬುದನ್ನು ಹಿಂದಿನ ಲೇಖನದಲ್ಲಿ (ಎಲ್‌ಐಸಿಯ ಶೇರು ಮಾರಾಟದ ಆರಂಭ – ಒಂದು ದೈತ್ಯಾಕಾರದ ಹಗರಣದ ಆರಂಭ). ಐಪಿಒನಲ್ಲಿರುವ ಎಲ್‌ಐಸಿ ಶೇರುಗಳ ಸಂಭಾವ್ಯ “ಖರೀದಿದಾರರು”, ಅಂದರೆ ಅಂತರರಾಷ್ಟ್ರೀಯ ‘ಹೂಡಿಕೆದಾರರು’, ವಿಶೇಷವಾಗಿ “ಆಂಕರ್”(ಲಂಗರು) ಹೂಡಿಕೆದಾರರು ಎಂದು ಕರೆಯಲ್ಪಡುವವರು, ಬೆಲೆ ಏನಾಗಿರಬೇಕು ಎಂದು ಸರ್ಕಾರಕ್ಕೆ ಹೇಳುತ್ತಿದ್ದ ಸುದ್ದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು.
ಬಹುಶಃ, ಮೋದಿ ಸರ್ಕಾರವು ಈ ಐಪಿಒದ ಪ್ರಯೋಜನ ಪಡೆದುಕೊಂಡು ನಿರ್ಗಮಿಸುವ ಸಟ್ಟಾಕೋರ ತಿಮಿಂಗಿಲಗಳು ಗಳಿಸುವ ಅಗಾಧ ಲಾಭದ ಲೆಕ್ಕಾಚಾರ ಮಾಡುತ್ತಿದೆಯಷ್ಟೇ, ಅವರ ಈ ಅಗಾಧ ಲಾಭ ಹೇಗೆ ನೇರವಾಗಿ ಸರ್ಕಾರಕ್ಕೆ ಮತ್ತು ಕೋಟ್ಯಂತರ ಪಾಲಿಸಿದಾರರಿಗೆ ನಷ್ಟ ಮಾಡುವ ಮೂಲಕವೇ ಬರುವಂತದ್ದು ಎಂಬುದನ್ನು ಆರ್ಥಿಕ ವಿಚಾರಗಳ ವಿಶ್ಲೇಷಕರಾಗಿರುವ ವಿ.ಶ್ರೀಧರ್ ಮೇಲೆ ಹೇಳಿದ ಲೇಖನದಲ್ಲಿ ವಿವರಿಸಿದ್ದರು.
ಇದನ್ನು ಓದಿ: ಎಲ್‌ಐಸಿಯ ಶೇರು ಮಾರಾಟದ ಆರಂಭ – ಒಂದು ದೈತ್ಯಾಕಾರದ ಹಗರಣದ ಆರಂಭ
ಈ ಸಂದರ್ಭದಲ್ಲಿ ಅವರು ಹೆಚ್ಚಿನವರ ಗಮನಕ್ಕೆ ಬಾರದ ಈ ಕಥನದಲ್ಲಿನ ಒಂದು ದೊಡ್ಡ ಪ್ರಶ್ನೆಯನ್ನು ಬಗ್ಗೆ, ಸರಕಾರ ಯಾವ ನೆಲೆಯಲ್ಲಿ ಈ ಐಪಿಒ ವನ್ನು ಮಾಡಿದೆ, ಎಲ್‌ಐಸಿಯ ನಿಜವಾದ ಒಡೆಯರು ಯಾರು ಎಂಬ ಪ್ರಶ್ನೆಯನ್ನು ಕೂಡ ವಿಶ್ಲೇಷಿಸಿದ್ದಾರೆ. ಆ ವಿಶ್ಲೇಷಣೆಯನ್ನು ಈ ಮುಂದೆ ಕೊಡಲಾಗಿದೆ. ಇದೀಗ ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ಬಂದಿದೆ.
ಎಲ್‌ಐಸಿ ಕಥನದಲ್ಲಿನ ಈ ದೊಡ್ಡ ಪ್ರಶ್ನೆಯನ್ನು ಮಾಧ್ಯಮಗಳಲ್ಲಿನ ಪಂಡಿತರು ಬಲು ಎಚ್ಚರಿಕೆಯಿಂದ ತಪ್ಪಿಸಿದ್ದಾರೆ. ಅಲ್ಲದೆ ಎಲ್‌ಐಸಿಯ ಶೇರುಗಳ ಈ ಕಡಿಮೆ ಮೌಲ್ಯಮಾಪನವು ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣಕ್ಕೆ ಹೊರಗಿರುವ ಅಂಶಗಳ ಪರಿಣಾಮವಾಗಿದೆ ಎಂದು ಅವರು ಸರ್ಕಾರದ ಬಗ್ಗೆ ತುಂಬಾ ಸಹಾನುಭೂತಿ ವ್ಯಕ್ತಪಡಿಸಿ ವಾದಿಸುತ್ತಿದ್ದಾರೆ. ಇದನ್ನು ಜಾಣತನ ಎನ್ನಲೂ ಸಾಧ್ಯವಿಲ್ಲ. ಪಾಲಿಸಿದಾರರು ಐಪಿಒ ನಲ್ಲಿ ಷೇರುಗಳಿಗೆ ಅರ್ಹರು ಎಂಬ ವಾದವು ಸಹ ಜಾಣತನದಲ್ಲ, ಬದಲಾಗಿ ಪಕ್ಕಾ ವಿಕೃತವಾದ.
ಮೊದಲನೆಯದಾಗಿ, ಪಾಲಿಸಿದಾರರನ್ನು ವೈಯಕ್ತಿಕವಾಗಿಯಲ್ಲ, ಬದಲು, ಒಂದು ವರ್ಗವಾಗಿ ಸಾಮೂಹಿಕವಾಗಿ ನಗಣ್ಯಗೊಳಿಸಲಾಗುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.
ಎರಡನೆಯದಾಗಿ, ಐಪಿಒ ದಲ್ಲಿ ಭಾಗವಹಿಸಲು ಔಪಚಾರಿಕವಾಗಿ “ಅವಕಾಶ” ನೀಡುವ ಮೂಲಕ ಇದನ್ನು ಸರಿಪಡಿಸಲಾಗುತ್ತಿದೆ ಎಂಬುದೂ ಸರಿಯಲ್ಲ. ಏಕೆಂದರೆ ಲಕ್ಷ-ಲಕ್ಷ ಪಾಲಿಸಿದಾರರು, ವಿಶೇಷವಾಗಿ ಸಣ್ಣ ಮೊತ್ತದ ಪಾಲಿಸಿಗಳನ್ನು ಹೊಂದಿರುವವರು, ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ಸ್ಥಿತಿಯಲ್ಲಿಲ್ಲದಿರಬಹುದು ಅಥವಾ ಹಾಗೆ ಮಾಡುವ ಬಯಕೆಯನ್ನು ಹೊಂದಿರದಿರಬಹುದು. ಆದ್ದರಿಂದ ಈ ಐಪಿಒ ಲಾಟರಿಯಲ್ಲಿ ಅವರು ಒಂದು ವರ್ಗವಾಗಿ ವಂಚಿತರಾಗುತ್ತಿದ್ದಾರೆ ಎಂಬ ಸಂಗತಿ ಬದಲಾಗುವುದಿಲ್ಲ.
ಮೂರನೆಯದಾಗಿ, ಯಾವುದೇ ಪಾಲಿಸಿದಾರರು ಯಾವುದೇ ಮಾಲೀಕತ್ವದ ಹಕ್ಕುಗಳಿಲ್ಲದ ಎಲ್‌ಐಸಿಯ “ಗ್ರಾಹಕ”ರಷ್ಟೇ ಎಂದು ಸರ್ಕಾರವು ಈಗ ಪರಿಗಣಿಸಿ ಅವರಿಗೆ ಒಂದು ಭಾಗವನ್ನು ಮೀಸಲಿಡುವ ವಿಚಾರದ ಬಗ್ಗೆಯೇ ಮಾಧ್ಯಮಗಳಲ್ಲಿ ಗೊಣಗಾಟದ ದನಿಯಾದರೂ ಏಳಬೇಕಾಗಿತ್ತು. ಹಾಗಾಗಿಲ್ಲ ಎಂಬುದು ಕೂಡ ಗಮನಿಸಬೇಕಾದ ಸಂಗತಿಯಲ್ಲವೇ?
ಇದನ್ನು ಓದಿ: ಒಂದು ಬೃಹತ್ ಕಾರ್ಪೋರೇಟ್ ಶಕ್ತಿಕೇಂದ್ರ–ಎಲ್‌ಐಸಿ
ಭಾರತೀಯ ಬಂಡವಾಳ ಮಾರುಕಟ್ಟೆಗಳ ಇತಿಹಾಸದಲ್ಲಿ ಒಂದು ಕಂಪನಿಯು ತನ್ನ “ಗ್ರಾಹಕರಿಗೆ” ಐಪಿಒ ದಲ್ಲಿ ಷೇರುಗಳನ್ನು ನೀಡಿದ ನಿದರ್ಶನ ಇದೆಯೇ? ಉದಾ: ಪೇಟಿಎಂ ತನ್ನ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರೆ ಪ್ರತಿಕ್ರಿಯೆ ಹೇಗಿರುತ್ತಿತ್ತು?
ಟ್ರಸ್ಟಿಯೇ ಠಕ್ಕನಾಗಿದ್ದಾನೆ
ಎಲ್‌ಐಸಿಯ ಐಪಿಒ ವಿಷಯದಲ್ಲಿ ಮಾತ್ರ ಇದು ನಡೆದಿದ್ದರೆ, ಅದು ಬಹುಶ:, ಕೋಟ್ಯಂತರ ಪಾಲಿಸಿದಾರರು ತಾವು ಎಲ್‌ಐಸಿ ಎಂಬ ಈ ಬೃಹತ್ ಸಹಕಾರೀ ಉದ್ಯಮದ ಒಡೆಯರು ಎಂಬ ಸ್ಥಾನಮಾನವನ್ನು ಈ ಐಪಿಒದ ಮೂಲಕ ಕಳೆದುಕೊಳ್ಳುತ್ತಿರುವುದಕ್ಕೆ ಏಳಬಹುದಾಗಿದ್ದ ವಿರೋಧವನ್ನು ತಣ್ಣಗಾಗಿಸುವ ತಂತ್ರ ಎಂದೇ ಭಾವಿಸಬೇಕಾಗುತ್ತದೆ. ವಾಸ್ತವವಾಗಿ ಎಲ್‌ಐಸಿಯ ನಿರ್ಮಾಣವಾಗಿರುವುದು ಪಾಲಿಸಿದಾರರ ಒಂದು ಬೃಹತ್ ಉದ್ಯಮವಾಗಿ-ಇದರಲ್ಲಿ ಸರ್ಕಾರದ ಪಾತ್ರ ಕೇವಲ ಟ್ರಸ್ಟಿಯಾಗಿಯೇ ಹೊರತು ಸಂಪೂರ್ಣ ಮಾಲೀಕನಾಗಿ ಅಲ್ಲ. ಇಲ್ಲಿ ಟ್ರಸ್ಟಿಯೇ ಠಕ್ಕನಾಗಿದ್ದಾನೆ ಎಂಬುದನ್ನು ಈ ಐಪಿಒ ದೃಢೀಕರಿಸಿದೆ.
ಈ ಐಪಿಒ ಎಲ್‌ಐಸಿಯ ಮೇಲೆ ದೀರ್ಘಾವಧಿ ದುಷ್ಪರಿಣಾಮಗಳ ಬೆದರಿಕೆಯೊಡ್ಡಿದೆ. ಈ ಐಪಿಒ ಗೆ ವಿಧಿಸುವ ನಿಯಮಗಳ ಪ್ರಕಾರ ಎರಡು ವರ್ಷಗಳೊಳಗೆ ಕನಿಷ್ಟ 10% ಮತ್ತು ಐದು ವರ್ಷಗಳೊಳಗೆ ಕನಿಷ್ಟ 25% ಶೇರುಗಳ ಸಾರ್ವಜನಿಕ ಮಾರಾಟ ಮಾಡಬೇಕಾಗುತ್ತದೆ. ಈ ಐಪಿಒನಲ್ಲಿ ಶೇರು ಪಡೆಯುವವರಿಗೆ ಕೊಟ್ಟಿರುವ ಭಾರೀ ರಿಯಾಯಿತಿಯ ಕರಿನೆರಳು ಇನ್ನು ಮುಂದಿನ ಶೇರು ಮಾರಾಟಗಳ ಮೇಲೂ ಬೀರದಿರದು.
ಇದನ್ನು ಓದಿ: ಎಲ್‌ಐಸಿಯನ್ನು ಬುಡಮೇಲು ಮಾಡುವ ಹಾನಿಕಾರಕ ಹೆಜ್ಜೆ
ಬಹುಶಃ ಸರಕಾರ ಭಾರೀ ರಿಯಾಯ್ತಿ ಉಂಟು ಮಾಡುವ ‘ಸದ್ಭಾವನೆ’ಯಿಂದ ತದ ನಂತರ ಶೀಘ್ರದಲ್ಲೇ ಷೇರು ಬೆಲೆಯಲ್ಲಿ “ಜಿಗಿತ” ಉಂಟಾಗಬಹುದು ಎಂದು ನಿರೀಕ್ಷಿಸುತ್ತಿರಬಹುದು. ಆದರೆ 2019 ರಲ್ಲಿ ಐಆರ್‌ಸಿಟಿಸಿ ಐಪಿಒನಲ್ಲಿ ಏನಾಯಿತು ಎಂದು ನೆನಪಿದೆಯೇ? ಅದರಲ್ಲಿ ಷೇರಿನ ನೀಡಿಕೆಯ ಬೆಲೆಯನ್ನು ನಿಗದಿ ಗೊಳಿಸಿದ್ದು ಪ್ರತಿ ಷೇರಿಗೆ ರೂ 315-320 ರಂತೆ. ಆದರೆ ಸೇರು ಮಾರಾಟದ ದಿನ ಇದು ತೆರೆದದ್ದು ರೂ. 644 ರಂತೆ. ಆದರೆ ಇಂತಹ “ಜಿಗಿತ” ದಿಂದ ಸರ್ಕಾರಕ್ಕಾಗಲೀ ಅಥವಾ ಲಕ್ಷಾಂತರ ಎಲ್‌ಐಸಿ ಪಾಲಿಸಿದಾರರಿಗಾಗಲೀ ಚಿಕ್ಕಾಸೂ ಸಿಗುವುದಿಲ್ಲ. ಬದಲಿಗೆ, ಎಲ್ಲ ಗಳಿಕೆಯೂ ಇದು ‘ಜಾಣ’ ಹೂಡಿಕೆದಾರರ ಪಾಲಾಗುತ್ತದೆ.
ಬಹುಶಃ, ಮೋದಿ ಸರ್ಕಾರವು ಈ ಐಪಿಒದ ಪ್ರಯೋಜನ ಪಡೆದುಕೊಂಡು ನಿರ್ಗಮಿಸುವ ಸಟ್ಟಾಕೋರ ತಿಮಿಂಗಿಲಗಳು ಗಳಿಸುವ ಅಗಾಧ ಲಾಭದ ಲೆಕ್ಕಾಚಾರ ಮಾಡುತ್ತಿದೆಯಷ್ಟೇ. ಅವರ ಈ ಅಗಾಧ ಲಾಭ ನೇರವಾಗಿ ಸರ್ಕಾರಕ್ಕೆ ಮತ್ತು ಕೋಟ್ಯಂತರ ಪಾಲಿಸಿದಾರರಿಗೆ ನಷ್ಟ ಮಾಡುವ ಮೂಲಕವೇ ಬರುವಂತದ್ದು ಎಂಬುದರ ಪರಿವೆ ಅದಕ್ಕಿದ್ದಂತಿಲ್ಲ. ಸದಾ ‘ಸದ್ಭಾವನೆ’ ಮೂಡಿಸುವ ಕೆಲಸದಲ್ಲೇ ನಿರತವಾಗಿರುವ ಸರ್ಕಾರದ ಇಂತಹ ನಡೆಯಿಂದ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಇದು ಸಂಪೂರ್ಣವಾಗಿ ಸರಿ ಹೋಗಬಹುದು. ಆದರೆ ಕೋಟ್ಯಂತರ ಭಾರತೀಯರಿಗೆ, ಮೇ 4 ರಂದು ಆರಂಭವಾಗಿರುವ ಐಪಿಒ ಭಾರತದ ಅತ್ಯಂತ ಜನಪ್ರಿಯ ಸಂಸ್ಥೆಗಳಲ್ಲಿ ಒಂದರ ಧ್ವಂಸಕ್ರಿಯೆಯ ಆರಂಭವನ್ನು ಸೂಚಿಸುತ್ತಿದೆ.