ಹೋರಾಟವನ್ನು ಕುಟಿಲದಿಂದ ಹೊಸಕಿಹಾಕಲು ಹವಣಿಸಿದ್ದ ಶಕ್ತಿಗಳು ಎರಡು ದಿನ ಮೇಲುಗೈ ಸಾಧಿಸಿದ್ದಾದರೂ, 29 ರ ಮುಂಜಾನೆ ಹೊಸ ಚೈತನ್ಯ ತುಂಬಿದ ರೈತರು ಹೊಸಹುರುಪಿನಿಂದ ಹೇಳತೊಡಗಿದ್ದರು: “ಅಬ್ ದೇಖೇಂ ಕೌನ್ ಹಠಾ ಸಕ್ತಾ ಹಮೇ ಯಹಾಂ ಸೇ… ಹಂ ಜೀತ್ ಕೇ ಜಾಯೇಂಗೇ ಯಾ ಮರ್ ಕೇ…” (ಗೆದ್ದು ಮರಳುತ್ತೇವೆ ಇಲ್ಲವೇ ಸಾವನಪ್ಪುತ್ತೇವೆ!)
- ಕೇಸರಿ ಹರವೂ
ಜನವರಿ 26 ರಂದು ಕೆಂಪುಕೋಟೆಯಲ್ಲಿ ನಡೆದ ಘಟನೆಯ ನಂತರ ಮೂರೂ ಕೃಷಿ ಕಾಯ್ದೆಗಳ ಪರವಾಗಿರುವವರು ಹೋರಾಟನಿರತ ರೈತರ ಮೇಲೆ ಕಪ್ಪುಚುಕ್ಕೆ ಮೂಡಿಸುವ ಪ್ರಯತ್ನವನ್ನು ದೊಡ್ಡಮಟ್ಟದಲ್ಲಿ ಕೈಗೊಂಡರು. ಸರ್ಕಾರದ ಪರ ಇರುವ ಮಾಧ್ಯಮಗಳು, ಬಿಜೆಪಿಯ ಟ್ರೋಲ್ ಪಡೆ ಈ ಕಾರ್ಯವನ್ನು ರೈತರ ಮೇಲೆ ಯುದ್ಧ ಸಾರುವ ರೀತಿಯಲ್ಲಿ ಕೈಗೊಂಡವು. ಗಣರಾಜ್ಯೋತ್ಸದಂದು ದೇಶದ ಘನತೆಗೆ ಧಕ್ಕೆ ತರುವ ಉದ್ದೇಶದಿಂದಲೇ ಟ್ರ್ಯಾಕ್ಟರ್ ರ್ಯಾಲಿಗೆ ನಿರ್ಣಯಿಸಿದ್ದ ಮಾರ್ಗದಲ್ಲಿ ರೈತರು ಸಾಗದೇ ಬೇರೇ ಹಾದಿಯನ್ನು ಹಿಡಿದರು ಎಂದು ದೂರಿದವು. ಆದರೆ, ಹೋರಾಟದಲ್ಲಿ ತೊಡಗಿದ್ದ ಒಂದು ಸಂಘಟನೆ ‘ನಿರ್ಣಯಿಸಿದ್ದ ಮಾರ್ಗವನ್ನು ತಾನು ಒಪ್ಪಿಲ್ಲ’ ಎಂದು ಮೊದಲೇ ಹೇಳಿದ್ದನ್ನು ದೆಹಲಿ ಪೋಲೀಸರು ಕಡೆಗೆಣಿಸಿದರು, ಮುಂಜಾಗ್ರತೆಯನ್ನು ವಹಿಸಲಿಲ್ಲ ಎಂದು ಕೆಲವು ರೈತ ಸಂಘಟನೆಗಳು ದೂರುತ್ತವೆ. ಕೆಂಪುಕೋಟೆಯಲ್ಲಿ ಹಾರಿಸಿದ ಸಿಖ್ಖರ ಧಾರ್ಮಿಕ ಧ್ವಜವನ್ನು ಖಲಿಸ್ತಾನೀ ಧ್ವಜವೆಂದು ದೇಶದ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕೂಡಾ ಟ್ರೋಲ್ ಪಡೆಯಿಂದ ನಡೆಯಿತು. ಕೆಲವು ಸುದ್ದಿವಾಹಿನಿಗಳಂತೂ ತ್ರಿವರ್ಣ ಧ್ವಜ ಕಾಣಿಸದೇ ಬರಿಯ ಸಿಖ್ಖರ ಧಾರ್ಮಿಕ ಧ್ವಜ ಕಾಣುವ ಚಿತ್ರಿಕೆಗಳನ್ನಷ್ಟೇ ಸತತ ತೋರಿಸುತ್ತಾ ‘ರೈತ ದಂಗೆಕೋರರು’ ರಾಷ್ಟ್ರದ್ರೋಹವೆಸಗಿದ್ದಾರೆ ಎಂದೂ ಮೂದಲಿಸಿದವು. 26ರ ಸಂಜೆಯಿಂದ ಹಿಡಿದು 27ರ ಇಡೀ ದಿನ ನಡೆದ ಈ ಟ್ರೋಲ್ ಪಡೆಗಳ ಮತ್ತು ಪ್ರಭುತ್ವಪರ ಸುದ್ದಿ ವಾಹಿನಿಗಳ ಆರ್ಭಟ ಇಡೀ ದೇಶದಲ್ಲಿ ಹೋರಾಟನಿರತ ರೈತರ ವಿರುದ್ಧ ಅಸಮಾಧಾನ ಹೊಮ್ಮಿಸುವಲ್ಲಿ ಸಾಕಷ್ಟು ಯಶಸ್ವಿಯಾದವು.
ಜನವರಿ 26ರ ಸಂಜೆಯಿಂದಲೇ ಆವರಿಸಿ 28ರ ಸಂಜೆಯವರೆಗೂ ವಿಸ್ತರಿಸಿದ ಈ ವಾತಾವರಣ ರೈತರನ್ನು ಒಂದಷ್ಟು ಧೃತಿಗೆಡಿಸಿದ್ದೂ ಸುಳ್ಳಲ್ಲ. ಸಿಂಘು, ಟಿಕ್ರಿ ಮತ್ತು ಗಾಜೀಪುರ ಗಡಿಗಳಲ್ಲಿ ಕುಳಿತಿದ್ದ ಬಹುತೇಕ ರೈತರಲ್ಲಿ ಒಂದು ಅಸಹನೀಯ ಮೌನ, ದುಗುಡ ಆವರಿಸಿಕೊಂಡಿತ್ತು. ಸಿಂಘು ಗಡಿಯಿಂದ ಆರೇಳು ಕಿಲೋಮೀಟರ್ ನಡೆದುಹೋಗಿದ್ದ ನಾನು ಸಂಜೆ 6ಗಂಟೆಯ ವೇಳೆಗೆ ನಡೆದೇ ಮರಳಿ ಬಂದಾಗ ರೈತರು ಅಲ್ಲಲ್ಲಿ ಮೌನವಾಗಿ ಕುಳಿತಿದ್ದರು. ಗುಂಪಿನಲ್ಲಿದ್ದರೂ ಯಾರೂ ಪರಸ್ಪರ ಮಾತಿನಲ್ಲಿ ತೊಡಗಿರಲಿಲ್ಲ. ಲಂಗರ್ (ಸಿಖ್ ಧಾರ್ಮಿಕ ಸಂಸ್ಥೆಗಳು ನಡೆಸುವ ಪ್ರಸಾದ ವಿನಿಯೋಗ ಕೇಂದ್ರಗಳು) ಗಳಲ್ಲಿ ರೋಟಿ, ಚಹಾ ಸ್ವೀಕರಿಸಲು ಸರತಿಯಲ್ಲಿ ನಿಂತವರಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಲವಲವಿಕೆ ಢಾಳಾಗಿ ಮರೆಯಾಗಿತ್ತು. ರೋಟಿಯನ್ನೋ, ಚಹಾವನ್ನೋ ಪಡೆದವರು ತಮ್ಮಷ್ಟಕ್ಕೆ ತಾವು ಒಂದು ಬದಿಯಲ್ಲಿ ನಿಂತು ಸ್ವೀಕರಿಸುತ್ತಿದ್ದರು. ತಾವ್ಯಾರೂ ಮಾಡದ ತಪ್ಪು ತಮ್ಮನ್ನು ಇಂದು ಬೊಟ್ಟುಮಾಡುತ್ತಿದೆಯಲ್ಲಾ! ಎನ್ನುವ ದುಗುಡ ತುಂಬಿಸಿಕೊಂಡಂತಿತ್ತು ಅವರ ಮುಖಚರ್ಯೆಗಳು. ನಮ್ಮ ಕ್ಯಾಮೆರಾಮನ್ ಪ್ರವೀಣ ಕೂಡಾ ಇನ್ನೂ ಮುಖರ್ಬಾ ಚೌಕದಿಂದ ಹಿಂದಿರುಗಿರಲಿಲ್ಲ. ‘ಅವನ ಪರಿಸ್ಥಿತಿ ಏನೋ? ಫೋನ್ ಕೂಡಾ ಸಂಪರ್ಕಕ್ಕೆ ಸಿಗುತ್ತಿಲ್ಲವಲ್ಲಾ!’ ಎನ್ನುವ ನನ್ನ ಆತಂಕದಲ್ಲಿ ರೋಟಿ ತಿನ್ನಲು ಮನಸ್ಸು ಬಾರದೇ ಬರೀ ಒಂದು ಕಪ್ ಚಾಯ್ ಪಡೆದು ಸ್ವಲ್ಪ ದೂರದಲ್ಲಿ ನಿಂತೆ. ಹಿರಿಯರೊಬ್ಬರು ಚಾಯ್ ಹಿಡಿದು ನನ್ನಿಂದ ಸ್ವಲ್ಪ ದೂರದಲ್ಲಿ ನಿಂತರು. “ಏ ಸಬ್ ಕೈಸೇ ಹುಆ?” ಎಂದು ನಾನು ಅವರನ್ನು ಧೈರ್ಯ ಮಾಡಿ ಕೇಳಿದಾಗ ಅವರು ನನ್ನನ್ನು ಒಂದು ಕ್ಷಣ ನೋಡಿದರು. ನನ್ನ ಕೈಯಲ್ಲಿ ರಿಕಾರ್ಡರ್ ಮತ್ತು ಮೈಕ್ ಇತ್ತು. ಕುತ್ತಿಗೆಯಲ್ಲಿ ನನ್ನ ಐಡಿ ಕಾರ್ಡು ನೇತಾಡುತ್ತಿತ್ತು. ಅವರು, ‘ಆಪ್ ಕ್ಯಾ ಸೋಚ್ತೇ ಹ್ನೈ?’ ಎಂದು ನನ್ನನ್ನೇ ತಿರುಗಿ ಕೇಳಿದರು. ನಾನು ಏನೂ ಹೇಳಲಾಗದೇ ಸಣ್ಣದಾಗಿ ಮುಗುಳುನಕ್ಕೆ. ಅವರು ಮತ್ತೆ, ‘ಸರ್ಕಾರ್ ಸೇ ಕುಛ್ ಸ್ಟೇಟ್ಮೆಂಟ್ ನಿಕಲಾ ಕ್ಯಾ?’ ಎಂದರು. ‘ಇನ್ನೂ ಏನೂ ಇಲ್ಲ’ ಎಂದು ಚುಟುಕಾಗಿ ಉತ್ತರಿಸಿದೆ.
28ರ ಬೆಳಗಿನವರೆಗೂ ಸರ್ಕಾರವಾಗಲೀ, ದೆಹಲಿ ಪೋಲೀಸ್ ಆಗಲೀ ಕೆಂಪುಕೋಟೆಯಲ್ಲಿ ನಡೆದ ಘಟನೆಯ ಕುರಿತಂತೆ ಅಧಿಕೃತವಾಗಿ ಯಾವ ಹೇಳಿಕೆಯನ್ನೂ ಬಿಡುಗಡೆ ಮಾಡಲಿಲ್ಲ. ಆ ಕೆಲಸವನ್ನು ಟ್ರೋಲ್ ಆರ್ಮಿಗಳು ಮತ್ತು ಸುದ್ದಿವಾಹಿನಿಗಳಿಗೆ ವಹಿಸಿಕೊಟ್ಟು, ದೇಶದಾದ್ಯಂತ ತಮ್ಮ ಯಾವುದೇ ಹೇಳಿಕೆಗೆ ಪೂರಕ ವಾತಾವರಣ ತಯಾರಾಗುವುದನ್ನು ಅವು ಕಾಯುತ್ತಿದ್ದವೇನೋ, ನಿಗೂಢವಾಗಿಯೇ ತಂತ್ರ ರೂಪಿಸುತ್ತಿದ್ದವೇನೋ ಎನ್ನುವಂತೆ ಕಾಣುತ್ತಿತ್ತು. ಸರ್ಕಾರದ ಈ ಮೌನ ರೈತರಲ್ಲಿನ ಆತಂಕವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಕೂಡಾ ಮುಖ್ಯ ಪಾತ್ರ ವಹಿಸಿತ್ತು ಎಂದೇ ಅನಿಸುತ್ತದೆ.
28ರ ಬೆಳಿಗ್ಗೆ ಬೇಗನೇ ನಾವು ನರೇಲಾದಿಂದ ಹೊರಟು ಹರ್ಯಾಣಾ ರಾಜ್ಯದ ಗಡಿ ಗ್ರಾಮವಾದ ಪಿಯಾವ್ ಮನವಾರೀ ಮೂಲಕ ಹೆದ್ದಾರಿಯಲ್ಲಿ ಬೀಡುಬಿಟ್ಟಿದ್ದ ರೈತರ ಸ್ಥಳಕ್ಕೆ ಸಾಗಿದೆವು. ಆ ಸ್ಥಳ ರಾ.ಹೆ. 1 ರಲ್ಲಿ ಸಿಂಘು ಗಡಿಯ ಮುಂಭಾಗದಿಂದ ಹಿಂದಕ್ಕೆ ಮೂರು ಕಿಮೀ ದೂರದಲ್ಲಿದೆ. ಅಲ್ಲಿಂದ ಹಿಂದಕ್ಕೆ ಇನ್ನೂ ಮೂರು ನಾಲ್ಕು ಕಿಮೀವರೆಗೂ ಸೋನೀಪತ್ ಕಡೆಗೆ ರೈತರ ಹೆದ್ದಾರೀ-ಬೈಠಕ್ ಹಬ್ಬಿದೆ. ನಾವು ಹೋಗಿ ಸೂರ್ಯೋದಯದ ಹಿನ್ನೆಲೆಯಲ್ಲಿ ದಟ್ಟಮಂಜು ಮುಸುಕಿದ ರೈತರ ಟ್ರೈಲರು, ಟೆಂಟುಗಳನ್ನು ಶೂಟ್ ಮಾಡಲು ಆರಂಭಿಸುತ್ತಿದ್ದಂತೆಯೇ ಹಲವು ರೈತರು ಕ್ಯಾಮೆರಾ ಮುಂದೆ ಬಂದು “ಗೋದೀ ಮೀಡಿಯಾ ಧಿಕ್ಕಾರ್ ಹೋ! ಹಮ್ ತೀನೋ ಕಾನೂನ್ ಹಠಾಕೇ ಹೀ ವಾಪಸ್ ಜಾಯೇಂಗೇ!” ಎಂದು ಘೋಷಣೆ ಕೂಗತೊಡಗಿದರು. ಇನ್ನೂ ಹಲವು ಯುವರೈತರು ನಮ್ಮನ್ನು ತಮ್ಮಲ್ಲಿಗೆ ಬರುವಂತೆ ಆಗ್ರಹಪೂರ್ವಕವಾಗಿಯೇ ಕರೆದರು. ಅವರ ಘೋಷಣೆಗಳು ಮತ್ತು ಕರೆಯೇ ನಮಗೆ ಅವರ ಅಂದಿನ ಕಲಕಿದ ಮನಸ್ಥಿತಿಯನ್ನು ಹೇಳುವಂತಿತ್ತು. ನಮ್ಮ ಗುರುತು ಪರಿಶೀಲಿಸಿದರು. ನಂತರವೇ ನಾವು ಅಲ್ಲಿ ಸ್ವಾಗತಾರ್ಹ. ಮೊನ್ನೆ ಸಂಜೆಯಿಂದಲೂ ತಮ್ಮ ಮೇಲಿನ ದೂಷಣೆಗಳನ್ನು ಸಹಿಸಿ ಸಹಿಸಿ ಬೇಸತ್ತುಹೋಗಿದ್ದ ಅವರೆಲ್ಲ ತಮ್ಮ ದುಗುಡವನ್ನು ತೋಡಿಕೊಳ್ಳುವ ಧಾವಂತದಲ್ಲಿದ್ದರು ಎನ್ನುವುದು ನಿಚ್ಚಳವಾಗಿ ಕಂಡಿತು ನಮಗೆ. ನಾವು ಹತ್ತಿರ ಹೋಗಿ ಕ್ಯಾಮೆರಾಗೆ ಮಾತಾಡಿಸಿದೆವು. ಒಬ್ಬ ರೈತ ನೇರವಾಗಿ, “ನಾವು ನಿರ್ಧರಿಸಿದ ಮಾರ್ಗದಲ್ಲೇ ಸಾಗಿದ್ದೆವು. ಆದರೆ ಇಲ್ಲಿಂದ ಹತ್ತು ಕಿಮೀ ಸಾಗಿದ ಮೇಲೆ ನಾವು ಬಲಕ್ಕೆ ತಿರುಗಬೇಕಿತ್ತು. ಆದರೆ ನಿರ್ಧರಿತ ಮಾರ್ಗದಲ್ಲಿಯೇ ಬ್ಯಾರಿಕೇಡುಗಳನ್ನು ಹಾಕಲಾಗಿತ್ತು. ಅಲ್ಲಿದ್ದ ಪೋಲೀಸರೇ ನಮ್ಮನ್ನು ಬೇರೊಂದು ಮಾರ್ಗಕ್ಕೆ ಕಳಿಸಿದರು. ಹಾಗಾಗಿ ನಾವು ಮಾರ್ಗ ಬದಲಿಸಬೇಕಾಯ್ತು. ಹಾಗಿದ್ದರೂ ಲಾಲ್ ಕಿಲಾದಲ್ಲಿ ಧ್ವಜ ಹಾರಿಸಿದವರು ನಮ್ಮ ರೈತರಲ್ಲ, ಅವರು ಸರ್ಕಾರದ ಜನರಾಗಿದ್ದರು…” ಎಂದು ಹೇಳುತ್ತಲೇ ದೀಪ್ ಸಿಧುವನ್ನು ಇದರ ರೂವಾರಿ ಎನ್ನುವಂತೆಯೂ ದೂರಿದರು.
ಅಂದು ಮದ್ಯಾನ್ಹ ಹನ್ನೆರಡು ಗಂಟೆಯ ಸುಮಾರಿಗೆ ‘ದೇಶದ ಘನತೆಗೆ ಮತ್ತು ರಾಷ್ಟ್ರಧ್ವಜಕ್ಕೆ ಅಪಚಾರ ಮಾಡುವಂತಹ ಯಾವುದೇ ಕೃತ್ಯವನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ’ ಎನ್ನುವ ಅರ್ಥ ಬರುವಂತೆ ಸರ್ಕಾರದಿಂದ ಹೇಳಿಕೆಯೊಂದು ಹೊರಬಂತು. ಅದು ಇಡೀ ಟ್ರೋಲ್ ಆರ್ಮಿ ಮಾಡುತ್ತಿದ್ದ ವಾತಾವರಣ ಸೃಷ್ಟಿಯ ಮುಂದುವರಿಕೆಯ ಭಾಗವಾಗಿ, ಮುಂದಿನ ತಂತ್ರಗಾರಿಕೆಯ ಭಾಗವಾಗಿ ಕಂಡಿದ್ದರೆ ಅದು ಆಕಸ್ಮಿಕವಲ್ಲ. ನಾವು ಸಂಜೆ ಐದು ಗಂಟೆಯ ಹೊತ್ತಿಗೆ ನಮ್ಮ ಶೂಟ್ ಮುಗಿಸಿ ನಮ್ಮ ಗೆಸ್ಟ್ ಹೌಸಿಗೆ ಮರಳುತ್ತಿದ್ದಂತೆಯೇ ಉತ್ತರಪ್ರದೇಶ ಸರ್ಕಾರದಿಂದ ರಾಜ್ಯದಲ್ಲಿ ಮುಷ್ಕರ ನಿರತ ರೈತರ ಎಲ್ಲ ಸ್ಥಳಗಳನ್ನೂ ಅಂದು ರಾತ್ರಿಯೊಳಗೆ ತೆರವುಗೊಳಿಸುವಂತೆ ಆದೇಶ ಹೊರಬಿದ್ದಿತು. ತಕ್ಷಣವೇ ಪಲವಲ್ ಗಡಿಯ ಹೋರಾಟವೂ ಸೇರಿದಂತೆ ಆ ರಾಜ್ಯದ ಹಲವು ಸ್ಥಳಗಳಲ್ಲಿನ ರೈತರ ಧರಣಿಗಳನ್ನು ಅಲ್ಲಿಯ ಪೋಲೀಸರು ತೆರವುಗೊಳಿಸಿದರು.
ಅದೇ ರೀತಿಯಲ್ಲಿ ಗಾಜೀಪುರ ಗಡಿಯಲ್ಲಿನ ಹೋರಾಟವನ್ನೂ ತೆರವುಗೊಳಿಸುವ ಕೆಲಸಕ್ಕೆ ಮುಂದಾಯಿತು ಆ ಸರ್ಕಾರ. ಆ ಗಡಿಯ ಹೋರಾಟದ ಉಸ್ತುವಾರಿಯನ್ನು ಹೊತ್ತಿದ್ದ ರಾಕೇಶ್ ಟಿಕಾಯತ್ ಅವರನ್ನು ವಶಕ್ಕೆ ಪಡೆದು ಗಡಿಯನ್ನು ತೆರವುಗೊಳಿಸುವ ಕಾರ್ಯಕ್ಕೆ ಉ.ಪ್ರ. ಪೋಲೀಸರು ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ, ಇತ್ತ ದೆಹಲಿಯ ಹೆಚ್ಚುವರಿ ಪೋಲೀಸರೂ, ಆರ್‌ಏಎಫ್ ತುಕಡಿಗಳೂ ಅಲ್ಲಿ ಜಮಾಯಿಸಿದ್ದಾರೆ ಎನ್ನುವ ಸುದ್ದಿಯೂ ಹೊರಬಿತ್ತು. ಆದರೆ ಟಿಕಾಯತ್ ಅವರು ಅತ್ಯಂತ ಭಾವುಕರಾಗಿ ‘ತಾವು ಯಾವ ಕಾರಣಕ್ಕೂ ಹೋರಾಟವನ್ನು ಮೊಟಕುಗೊಳಿಸುವುದಿಲ್ಲ. ಬೇಕಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಥವಾ ಪೋಲೀಸರ ಗುಂಡಿಗೆ ಎದೆಯೊಡ್ಡುತ್ತೇನೆಯೇ ಹೊರತು ರೈತರ ಆಶಯಕ್ಕೆ ವಿರುದ್ಧವಾಗಿ ನಡೆಯುವುದಿಲ್ಲ’ ಎಂದು ಅಲ್ಲಿಯ ರೈತರ ವೇದಿಕೆಯಿಂದ ಘೋಷಿಸಿ ಗಳಗಳನೆ ಅತ್ತರು. ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು ಎನ್ನುವಂಥಾ ದೊಡ್ಡ ಮಟ್ಟದ ಉದ್ರೇಕಿತ ವಾತಾವರಣ ಏರ್ಪಟ್ಟುಬಿಟ್ಟಿತು ಆ ಗಡಿಯಲ್ಲಿ.
ನಾವು ತಕ್ಷಣವೇ ಒಂದು ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದೆವು. ನರೇಲಾದಿಂದ ಗಾಜೀಪುರಕ್ಕೆ ಸುಮಾರು ಮೂವತ್ತು ಕಿಮೀ. 780 ರೂ ಬಾಡಿಗೆ ತೋರಿಸಿತು ಒಂದು ಕ್ಯಾಬ್ ಯ್ಯಾಪ್. ಬುಕ್ ಮಾಡಿದೆವು. ಮರುಕ್ಷಣದಲ್ಲಿ ಟ್ರಿಪ್ ಬರಲಾಗುವುದಿಲ್ಲ ಎಂದು ಡ್ರೈವರ್ ಕ್ಯಾನ್ಸೆಲ್ ಮಾಡಿದ. ಮತ್ತೊಂದು ಕ್ಯಾಬ್ ಬುಕ್ ಮಾಡಲು ನೋಡಿದಾಗ ಬಾಡಿಗೆ 960 ರೂ ಎಂದು ಸೂಚಿಸಲಾಯಿತು. ಆದರೆ ಗಾಜೀಪುರದ ಸುತ್ತ ಟ್ರ್ಯಾಫಿಕ್ ಜ್ಯಾಮ್ ಆದ ಕಾರಣ ನಮಗೆ ಆ ಕ್ಯಾಬ್ ಕೂಡಾ ಸಿಗಲಿಲ್ಲ. ಆಗಾಗ ಸುದ್ದಿವಾಹಿನಿಗಳ ಸುದ್ದಿಗಳನ್ನು ನೋಡುತ್ತಲೇ ಇಡೀ ರಾತ್ರಿ ಕಳೆದೆ. ಬೆಳಗಿನ ಜಾವ ಸುಮಾರು ಎರಡೂವರೆಗೆ ದೆಹಲಿಯ ಮತ್ತು ಉತ್ತರಪ್ರದೇಶದ ಪೋಲೀಸು ತುಕಡಿಗಳು ಹಿಂದಿರುಗಿವೆ, ವಾತಾವರಣ ತಿಳಿಯಾವಾಗುವತ್ತ ಮರಳುತ್ತಿದೆ ಎಂದು ಎನ್‌ಡಿಟಿವಿ ಬಿತ್ತರಿಸಿತು. ಆಗಲೇ ಸ್ವಲ್ಪ ಸಮಾಧಾನವಾದದ್ದು.
ಮರುದಿನ ಏಳು ಗಂಟೆಗೇ ನಾವು ಒಂದು ಕ್ಯಾಬ್ ಹಿಡಿದು ಗಾಜೀಪುರಕ್ಕೆ ಹೋದೆವು. ಆ ಗಡಿ ಮಾಮೂಲಿಗಿಂತ ಎರಡು ಪಟ್ಟು ಜನ ಮತ್ತು ವಾಹನಗಳು ತುಂಬಿಹೋಗಿತ್ತು. ಟಿಕಾಯತರ ಹಿಂದಿನ ರಾತ್ರಿಯ ಕಣ್ಣೀರು ಎಷ್ಟರ ಮಟ್ಟಿಗೆ ರೈತರಲ್ಲಿ ಸಂಚಲನ ಮೂಡಿಸಿತ್ತು ಎಂದರೆ ರಾತೋರಾತ್ರಿ ಉತ್ತರಪ್ರದೇಶ ಮತ್ತು ಉತ್ತರಾಖಂಡದಿಂದ ಸಾವಿರಾರು ರೈತರು ಹೊರಟು ಗಾಜೀಪುರ ಗಡಿಯನ್ನು ಸೇರತೊಡಗಿದ್ದರು. ಬೇರೆರಡು ಗಡಿಗಳಲ್ಲೂ ಹೀಗೇ ಆಯಿತು ಎಂದು ನಮಗೆ ಆ ಗಡಿಗಳನ್ನು ಭೇಟಿ ನೀಡಿದಾಗ ತಿಳಿದುಬಂತು. ಹೋರಾಟವನ್ನು ಕುಟಿಲದಿಂದ ಹೊಸಕಿಹಾಕಲು ಹವಣಿಸಿದ್ದ ಶಕ್ತಿಗಳು ಎರಡು ದಿನ ಮೇಲುಗೈ ಸಾಧಿಸಿದ್ದಾದರೂ, 29 ರ ಮುಂಜಾನೆ ಹೊಸ ಚೈತನ್ಯ ತುಂಬಿದ ರೈತರು ಹೊಸಹುರುಪಿನಿಂದ ಹೇಳತೊಡಗಿದ್ದರು: “ಅಬ್ ದೇಖೇಂ ಕೌನ್ ಹಠಾ ಸಕ್ತಾ ಹಮೇ ಯಹಾಂ ಸೇ… ಹಂ ಜೀತ್ ಕೇ ಜಾಯೇಂಗೇ ಯಾ ಮರ್ ಕೇ…”