ಜೆಡಿ(ಎಸ್) ಅಪ್ರಸ್ತುತವಾಗುತ್ತಿದೆಯೆ? ಹಾಗಾಗಬಾರದು, ಜೆಡಿ(ಎಸ್) ಉಳಿಯಬೇಕು. ಅದು ಅಸ್ತಿತ್ವ ಕಳೆದುಕೊಳ್ಳಬಾರದು. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಖಾಲಿ ಜಾಗವನ್ನು ಅದು ತುಂಬಬೇಕು. ಅಂತಹ ಒಂದು ಚಾರಿತ್ರಿಕ ಅವಕಾಶವನ್ನು ಅದು ಗುರುತಿಸಿ ಅದರತ್ತ ಆತ್ಮವಿಶ್ವಾಸದ ಹೆಜ್ಜೆಗಳನ್ನು ಹಾಕದಿರುವುದು ರಾಜ್ಯದಲ್ಲಿ ಪರ್ಯಾಯವನ್ನು ಬಯಸುತ್ತಿರುವ ಜಾತ್ಯಾತೀತ ಮನಸ್ಸುಗಳಿಗೆ ಖೇದದ ವಿಷಯವಾಗಿದೆ.
ಒಂದು ಪ್ರಾದೇಶಿಕ ಪಕ್ಷವಾಗಿ ಜೆಡಿ(ಎಸ್) “ಕಿಂಗ್ ಮೇಕರ್” ಪಕ್ಷವಾಗಿ ಆಟವಾಡಲು ಪ್ರಾವಿಣ್ಯತೆ ಪಡೆದಿದೆ. ಎಂದೂ ಸ್ವತಂತ್ರವಾಗಿ ಬಹುಮತ ಪಡೆಯಲಾಗದೆ ಅದು ಬೇರೆ ಪಕ್ಷಗಳ ಸರಕಾರಗಳನ್ನು ಅಸ್ತಿತ್ವಕ್ಕೆ ತರುವುದರಲ್ಲಿ ಯಶಸ್ಸು ಪಡೆದಿದೆ ಮಾತ್ರವಲ್ಲ ಹಲವು ಬಾರಿ ಅಧಿಕಾರವನ್ನು ಅನುಭವಿಸಿದೆ. 2004ರಲ್ಲಿ ಕಾಂಗ್ರೆಸ್‌ನೊಂದಿಗೆ, 2006ರಲ್ಲಿ ಬಿಜೆಪಿಯೊಂದಿಗೆ ಮತ್ತು 2018ರಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಂಡಿದೆ. ಈಗ ಮತ್ತೆ ಬಿಜೆಪಿಗೆ ಎಚ್.ಡಿ. ಕುಮಾರಸ್ವಾಮಿ ಹತ್ತಿರವಾಗುತ್ತಾರೆ ಎಂಬ ಸುದ್ದಿ ಗಾಳಿಯಲ್ಲಿ ತೇಲಾಡುತ್ತಿದೆ. ಕೆಲವು ಟಿವಿ ಚಾಲನ್‌ಗಳು ಎರಡೂ ಪಕ್ಷಗಳು ವಿಲೀನ ಆಗುತ್ತವೆ ಎಂದು ಭವಿಷ್ಯ ನುಡಿಯ ತೊಡಗಿವೆ. ಆದರೆ ಎರಡು ಪಕ್ಷಗಳು ಇಂತಹ ಸಾಧ್ಯತೆಯನ್ನು ತಳ್ಳಿಹಾಕಿವೆ.
ಆದರೆ, ಒಂದು ತರಹದ ಪುನರ್ ಮೈತ್ರಿಗೆ ಬಿಜೆಪಿ ಗಿಂತಲೂ ಜೆಡಿ(ಎಸ್) ಹೆಚ್ಚು ಆಸಕ್ತಿಯನ್ನು ಹೊಂದಿರುವಂತೆ ಭಾಸವಾಗುತ್ತದೆ. ಇದು ದೇವೇಗೌಡ ಕುಟುಂಬವು ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ತಂತ್ರವಾಗಿದೆ. ಜೆಡಿ(ಎಸ್) ಸ್ಪರ್ಧೆಯಲ್ಲಿ ಇರುವಂತೆ ನೋಡಿಕೊಳ್ಳುವುದೇ ತಂದೆ ಮಕ್ಕಳ ಗುರಿಯಾಗಿದೆ ಎಂದು ಹೇಳಲಾಗುತ್ತದೆ. ಬಿಜೆಪಿ ಮತ್ತು ಜೆಡಿ(ಎಸ್) ನಡುವಿನ ಹೊಂದಾಣಿಕೆ ಬಗ್ಗೆ ಈಗಲೇ ನಿಖರವಾಗಿ ಏನೂ ಹೇಳಲಿಕ್ಕಾಗದು. ಚುನಾವಣೆಗಳು ಇನ್ನೂ ಎರಡು ವರ್ಷ ದೂರವೇ ಇವೆ; ಕೇಸರಿ ಪಕ್ಷ ಮತ್ತು ಜಾತ್ಯಾತೀತ ಎಂದುಕೊಳ್ಳುವ ಜೆಡಿ(ಎಸ್) ಪಕ್ಷಗಳ ನಡುವಿನ ಬೆಳವಣಿಗೆಗಳನ್ನು ಕಾದುನೋಡಬೇಕು. ದೊಡ್ಡ ಗೌಡರ ಪ್ರಕಾರ ಅವರು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವತ್ತ ಕೆಲಸ ಮಾಡುತ್ತಿದ್ದಾರಂತೆ. ಮಾಜಿ ಪ್ರಧಾನಿಗಳು ತಮ್ಮ ಪಕ್ಷವನ್ನು ಇನ್ನೊಂದು ಪಕ್ಷದ ಮನೆಬಾಗಿಲಿಗೆ ಕೊಂಡೊಯ್ಯುವುದನ್ನು ತಳ್ಳಿಹಾಕಿದ್ದಾರೆ. ಆದರೆ ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂದು ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತನಗೆ ಯಾವ ಸಿದ್ಧಾಂತದಲ್ಲೂ ನಂಬಿಕೆ ಇಲ್ಲ ಎಂದು ಆಗಾಗ ಹೇಳುತ್ತಿರುತ್ತಾರೆ.
ರಾಜ್ಯ ವಿಧಾನ ಸಭೆಯಲ್ಲಿ 2004 ರಲ್ಲಿ 58 ಸ್ಥಾನಗಳನ್ನು ಗೆದ್ದ ಜೆಡಿ(ಎಸ್) ನಂತರದ ಚುನಾವಣೆಗಳಲ್ಲಿ ನಿರಂತರವಾಗಿ ಸ್ಥಾನಗಳನ್ನು ಕಳೆದುಕೊಳ್ಳುತ್ತಾ ಈಗ ಕೇವಲ 33 ಸ್ಥಾನಗಳಿಗೆ ಕುಸಿದಿದೆ. ಎಚ್.ಡಿ. ಕುಮಾರಸ್ವಾಮಿಗೆ ಒಂದು ಕಡೆ ಡಿ.ಕೆ. ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ಒಕ್ಕಲಿಗರ ನಡುವೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವುದು ತಲೆನೋವಿನ ವಿಷಯವಾಗಿದೆ ಮಾತ್ರವಲ್ಲ ಇನ್ನೊಂದು ಕಡೆ ಬಿಜೆಪಿಯು ರಾಜ್ಯಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸಲು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವುದು ಜೆಡಿ(ಎಸ್) ನ ಆಘಾತಕ್ಕೆ ಕಾರಣವಾಗಿದೆ. ಬಿಜೆಪಿಗರು ತಮ್ಮ ಮಿತ್ರ ಪಕ್ಷಗಳಿಗೆ ಯಾವುದೇ ರಿಯಾಯ್ತಿ ನೀಡುವ ಜಾಯಮಾನದವರಲ್ಲ. ಜೆಡಿ(ಎಸ್) ಅದ್ದರಿಂದ, ತನ್ನ ಅಸ್ತಿತ್ವಕ್ಕೆ ಬಂದಿರುವ ಬೆದರಿಕೆಯನ್ನು ಎದುರಿಸಲು ಹೆಣಗಾಡುತ್ತಿದೆ. ಜೆಡಿ(ಎಸ್) ಮೂಲಗಳ ಪ್ರಕಾರ, 2023ರ ರಾಜ್ಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕೇಂದ್ರ ನಾಯಕತ್ವ ಮತ್ತು ದೇವೇಗೌಡರ ನಡುವೆ ಮಾತುಕತೆ ನಡೆಯುತ್ತಿದೆ. 2018ರ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಜೆಡಿ(ಎಸ್) ಕಾಂಗ್ರೆಸಿಗೆ ಎರಡನೇ ಸ್ಥಾನ ಪಡೆದಿತ್ತು. ಈ ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಜೆಡಿ(ಎಸ್) ಗುರಿಯಾಗಿದೆ ಎನ್ನಲಾಗುತ್ತದೆ. 2018 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, ಸಿದ್ದರಾಮಯ್ಯ ಸೋಲನ್ನು ಅನುಭವಿಸಿದ ಚಾಮುಂಡೇಶ್ವರಿ ಕ್ಷೇತ್ರವನ್ನು ಒಳಗೊಂಡಂತೆ ಸುಮಾರು ಎರಡು ಡಜನ್ ಕ್ಷೇತ್ರಗಳಲ್ಲಿ ಇಂತಹ ಹೊಂದಾಣಿಕೆ ಮಾಡಿಕೊಳ್ಳಲಾಗಿತಂತೆ. 2023ರ ಚುನಾವಣೆಯಲ್ಲಿ ಅಂತಹ ಹೊಂದಾಣಿಕೆ ಸಾಧ್ಯವಾದರೆ ಎರಡು ಪಕ್ಷಗಳ ಸಾಮಾನ್ಯ ಶತ್ರು ಕಾಂಗ್ರೆಸ್ಸನ್ನು ಸೋಲಿಸಬಹುದೆಂದು ಜೆಡಿ(ಎಸ್) ಲೆಕ್ಕ ಹಾಕುತ್ತಿದೆ.
ಜೆಡಿ(ಎಸ್) ನ ಇಂತಹ ಲೆಕ್ಕಾಚಾರ ಅದಕ್ಕೆ ಲಾಭವನ್ನು ತಂದುಕೊಡಬಹುದು ಎಂಬುದು ಚರ್ಚಾಸ್ಪದ ವಿಷಯ. ಬಿಜೆಪಿಯನ್ನು ಸೋಲಿಸಲೆಂದೇ 1999 ರಲ್ಲಿ ಜೆಡಿ(ಎಸ್) ಸ್ಥಾಪನೆಯಾಗಿತ್ತು. 1996 ರಲ್ಲಿ ಸಿಪಿಎಂನ ಜ್ಯೋತಿಬಸು ಪ್ರಧಾನಿ ಪಟ್ಟವನ್ನು ತಿರಸ್ಕರಿಸಿದಾಗ ದೇವೇಗೌಡರು ಪ್ರಧಾನ ಮಂತ್ರಿಯಾದರು. ಮುಂದೆ ರಾಮಕೃಷ್ಣ ಹೆಗಡೆಯವರು ಲೋಕಶಕ್ತಿ ಪಕ್ಷವನ್ನು ಆರಂಭಿಸಿದಾಗ ಜೆ.ಎಚ್. ಪಾಟೇಲರು ಬಿಜೆಪಿ ಜೊತೆ ಹೋಗಲು ಬಯಸಿದ್ದರು. ಆಗ ಬಿಜೆಪಿಯನ್ನು ತಡೆದು ನಿಲ್ಲಿಸಲು ದೇವೇಗೌಡರು ಮತ್ತು ಸಿದ್ದರಾಮಯ್ಯರವರು ಜಾತ್ಯತೀತ ಜನತಾದಳವನ್ನು ಆರಂಭಿಸಿದರು. ಇಂದು ಜೆಡಿ(ಎಸ್) ಬಿಜೆಪಿ ಜೊತೆ ಹೋಗಲು ಬಯಸುವುದು ಸಮಯಸಾಧಕತನವಲ್ಲವೆ?
ನುರಿತ ರಾಜಕಾರಣಿ ದೇವೇಗೌಡರು ಅಳಿದು ಹೋಗುತ್ತಿರುವ ಜೆಡಿ(ಎಸ್) ಪಕ್ಷವನ್ನು ಉಳಿಸಲು ಜೆಡಿ(ಎಸ್) ಶಾಸಕರಲ್ಲಿ ಗೊಂದಲ ಹುಟ್ಟು ಹಾಕಿ ಕಾಂಗ್ರೆಸ್ ಅಥವ ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತವರನ್ನು ತಡೆಯಲು ಹೂಡಿರುವ ತಂತ್ರ ಇದಾಗಿದೆ. ಜೆಡಿ(ಎಸ್) ಒಳಗಿನ ಈ ಗೊಂದಲವನ್ನು ತನ್ನ ಹಿತಕ್ಕಾಗಿ ಬಳಸಿಕೊಳ್ಳಲು ಯಡಿಯೂರಪ್ಪರವರ ದುರ್ಬುದ್ಧಿ ಕಾರ್ಯೋನ್ಮುಖವಾಗಿದೆ. ತನ್ನನ್ನು ಅವಮಾನ ಮಾಡಿ ಅಧಿಕಾರದಿಂದ ಕೆಳಗಿಳಿಸಲು ಕೇಂದ್ರ ನಾಯಕತ್ವ ಮುಂದಾದರೆ ಅಗತ್ಯ ಸಂಖ್ಯೆಯೊಂದಿಗೆ ರಾಜ್ಯ ಬಿಜೆಪಿಯನ್ನು ಮತ್ತೊಮ್ಮೆ ಒಡೆಯಬಲ್ಲೆ ಎಂಬ ಎಚ್ಚರಿಕೆಯನ್ನು ಯಡಿಯೂರಪ್ಪ ನೀಡುತ್ತಿದ್ದಾರೆ. ಜೆಡಿ(ಎಸ್) ಒಳಗಿನ ಈ ಬೆಳವಣಿಗೆ ಅಂತಿಮವಾಗಿ ಬಿಜೆಪಿಗೆ ಲಾಭದಾಯಕವಾಗಬಹುದು ಎಂದು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಬಿಜೆಪಿ ಸೆಕ್ಯುಲರ್ ಮತಗಳ ವಿಭಜನೆಯನ್ನು ಬಯಸುತ್ತದೆ. ಜೆಡಿ(ಎಸ್) ಕಷ್ಟಪಟ್ಟು ತಳಮಟ್ಟದಿಂದ ಜಾತ್ಯಾತೀತ ತತ್ವದ ಆಧಾರದ ಮೇಲೆ ಪಕ್ಷವನ್ನು ಕಟ್ಟಲು ಮುಂದಾದರೆ ಇನ್ನೂ ಕಾಲ ಮಿಂಚಿಲ್ಲ. ಜನತೆಯ ಸಾಮಾನ್ಯ ಶತ್ರು ಬಿಜೆಪಿಯನ್ನು ಸೋಲಿಸುವುದು ಜೆಡಿ(ಎಸ್) ನ ಗುರಿಯಾಗಬೇಕು. ಬಿಜೆಪಿಗೂ ಕಾಂಗ್ರೆಸಿಗೂ ಪರ್ಯಾಯವನ್ನು ಹುಡುಕುತ್ತಿರುವ ಪ್ರಗತಿಪರ ಜಾತ್ಯಾತೀತ ಜನಸಮೂಹಗಳಿಗೆ ಜೆಡಿ(ಎಸ್) ತುಂಬ ಪ್ರಸ್ತುತವಾಗುವುದು.